ಹಾಲು ಕಾಯಿಸಿ ಅಪ್ಪನ ಬಳಿ ಹೋದೆ. ಅಪ್ಪ ಮಲಗಿದ್ದ .ಬೇಗನೆ ಏಳುವ ಅಪ್ಪ ಇನ್ನೂ ಎದ್ದಿಲ್ಲವಲ್ಲ ಎಂದು ಕೂಗಿದೆ.ಏಳ ಲಿಲ್ಲ.ಕಣ್ಣುಗಳನ್ನು ತೆರೆಯಲಿಲ್ಲ. ಅಪ್ಪ ಹೋಗಿ ಬಿಟ್ಟಿದ್ದರು. ಅಮ್ಮನ ನೆನಪುಗಳು ಕಾಡಿದವು,ಅಪ್ಪ ಇಷ್ಟ ಆಗಲಿಲ್ಲ. ತಪ್ಪದೆ ಓದಿ ಗುರು ಮೂರ್ತಿ ಅವರ ವರ್ಣಿಕಾ ಸಣ್ಣಕತೆ.
ಅಮ್ಮ ಸತ್ತ ದಿನವೇ ಅಪ್ಪಗೆ ಪಾರ್ಶ್ವ ಹೊಡೆದಿದ್ದು. ಇದು ಅಮ್ಮನಿಗೆ ಸಾಯುವ ಮುಂಚೆ ಗೊತ್ತಿತ್ತೊ ಏನೊ ನಂಗೆ ಗೊತ್ತಿಲ್ಲ. ಕಡೆಗಾಣಿಸಿದ ಗಂಡನ ಸೇವೆ ಮಾಡಬೇಕು,ಬದುಕಿದ್ದಾಗ ಯಾವ ಸಂತೋಷವನ್ನು ನೀಡದ ಗಂಡನ ಸೇವೆ ಮಾಡುವುದು ಬೇಡವೆಂದೆನಿಸಿ ಸತ್ತು ಹೋದಳೇನೊ? ಅಪ್ಪನಿಗೆ ಎಡಗೈ,ಎಡಗಾಲು ಸ್ವಾಧೀನ ಇರಲಿಲ್ಲ, ಬಾಯಿ ಕೂಡ ಸೊಟ್ಟಗೆ ಆಗಿತ್ತು, ಮಾತಿನಲ್ಲಿ ಸ್ವಷ್ಟತೆ ಇರಲಿಲ್ಲ. ಮಲಗಿದವರು ಕದಲಲಿಲ್ಲ. ಸ್ವಲ್ಪ ಎದೆಯುಸಿರು ಬಿಡುತ್ತಿದ್ದರು.
ಡಾಕ್ಟರ್ ಮನೆಗೆ ಬಂದರು, ಆಸ್ಪತ್ರೆಗೆ ಅಡ್ಮೀಟ್ ಮಾಡಿ ಎಂದು ಹೇಳಿದರು. ಒಂದು ವಾರ ಕಾಲ ಆಸ್ಪತ್ರೆಯಲ್ಲಿಟ್ಟುಕೊಂಡು ಮನೆಗೆ ಕಳುಹಿಸಿದರು. ಅಮ್ಮನ ಶವ ಸಂಸ್ಕಾರಕ್ಕೆ ಅಪ್ಪ ಇರಲಿಲ್ಲ. ಕೊನೆಗೆ ಅಮ್ಮನ ಬಾಯಿಗೆ ಅಕ್ಕಿ ಎಳ್ಳನ್ನು ಅಪ್ಪ ಹಾಕಲಿಲ್ಲ. ಅಪ್ಪ ಇದ್ದರು ಇಲ್ಲದಂತೆ ಶವ ಸಂಸ್ಕಾರ ಆಗಿ ಹೋಯಿತು.
ಅಮ್ಮನ ಹದಿಮೂರು ದಿನಗಳ ಕಾಲದ ಶ್ರದ್ದಾಕ್ರಿಯೆಗಳನ್ನು ನಾನೆ ಮಾಡಿದೆ. ಹದಿಮೂರನೇಯ ದಿನ ಮನೆಗೆ ಬಂದವರೆಲ್ಲ ಹೊರಟು ಹೋದರು. ಅಪ್ಪ ನಾನು ಇಬ್ಬರೆ ಮನೆಯಲ್ಲಿ.
ಮುಖವನ್ನು ಸೊಟ್ಟಕ್ಕೆ ಮಾಡಿಕೊಂಡು ಮಲಗಿದ್ದ ಅಪ್ಪನನ್ನೆ ನೋಡುತ್ತಾ ನಿಂತೆ. ಅಪ್ಪ , ಅಮ್ಮನ ಮದುವೆಯಾದ ಒಂದು ವರ್ಷದಲ್ಲಿ ನಾನು ಹುಟ್ಟಿದ್ದೆ. ನಾನು ಹುಟ್ಟಿದ ಮೇಲೆ, ಅಪ್ಪ ಮನೆಗೆ ಸರಿಯಾಗಿ ಬರುತ್ತಾ ಇರಲಿಲ್ಲವಂತೆ. ವಾರಕ್ಕೆ ನಾಲ್ಕಾರು ಬಾರಿ ಬರೊದು,ಅಮ್ಮನ ಮಾತನಾಡಿಸದೆ ರೂಮಿನಲ್ಲಿ ಒಬ್ಬರೆ ಕುಳಿತು ಕೊಳ್ಳೊದು,ಅಮ್ಮ ಊಟಕ್ಕೆ ಕರೆದಾಗ ಎಲೆ ಮುಂದೆ ಕುಳಿತು, ಮೌನವಾಗಿ ಊಟ ಮಾಡಿ ಎದ್ದು ಹೋಗುತ್ತಿದ್ದರಂತೆ.
ಅಪ್ಪ ನನ್ನ ಬಗ್ಗೆ ಹೆಚ್ಚು ತಲೆಗೆಡಿಸಿಕೊಂಡವರಲ್ಲ.ನನಗೆ ಅಮ್ಮನೇ ಎಲ್ಲಾ ಆಗಿದ್ದರು. ನನ್ನ ಪುಸ್ತಕ, ಬಟ್ಟೆ, ಆಟಿಕೆ ಎಲ್ಲಾವನ್ನು ಅಮ್ಮನೇ ಕೊಡಿಸುತ್ತಿದ್ದರು. ಅಮ್ಮ ಯಾವಾಗಲಾದರು ಅಪ್ಪನ ಮುಖವನ್ನು ದಿಟ್ಟಿಸಿ ನೋಡಿದಾಗ ಅಪ್ಪನಿಗೆ ಅರ್ಥವಾಗುತಿತ್ತು ಅಮ್ಮನಿಗೆ ದುಡ್ಡು ಬೇಕಾಗಿದೆ ಎಂದು ಜೇಬಿನಿಂದ ದುಡ್ಡು ತೆಗೆದು ಕೊಡ್ತ ಇದ್ದರು. ಅಪ್ಪ ಅಮ್ಮನ ಸಂಬಂಧ ಹೀಗೆ ನಾನು ಪಿಯುಸಿ ಸೇರೊ ತನಕ ಇತ್ತು. ಅಮ್ಮನ ಬಿಟ್ಟು ಅಪ್ಪ ಎಲ್ಲಿ ಹೋಗ್ತ ಇದ್ದರು, ಯಾರ ಜೊತೆ ಇರ್ತಾ ಇದ್ದರು ಎಂಬ ಕುತೂಹಲ ನನ್ನಲ್ಲಿತ್ತು. ಅದು ಗೊತ್ತಾಗಿದ್ದೆ ನಾನು ಎಂಟನೇ ಕ್ಲಾಸ್ ನಲ್ಲಿದ್ದಾಗ. ಅವಳು ವರ್ಣಿಕಾ, ತಮಿಳು ನಾಡಿನವಳು. ಸುನಾಮಿ ತಮಿಳುನಾಡಿನಲ್ಲಿ ಅಬ್ಬರಿಸಿದಾಗ, ಅಲ್ಲಿಂದ ಗಂಡನೊಂದಿಗೆ ನಮ್ಮೂರಿಗೆ ಬಂದು ಸಣ್ಣದೊಂದು ಅಂಗಡಿ ತೆಗೆದು ವ್ಯಾಪಾರ ಪ್ರಾರಂಭಿಸಿದಳು. ಊರಿಗೆ ಕಾಲಿಟ್ಟ ಒಂದು ವರ್ಷದಲ್ಲಿ ಗಂಡನನ್ನು ಕಳೆದುಕೊಂಡು, ಮಗಳೊಡನೆ ಒಂಟಿ ಜೀವನ ಶುರುವಿಟ್ಟವಳು. ಗಂಡ ಕಳೆದುಕೊಂಡು ವರ್ಣಿಕಾ ಹತ್ತಾರು ಗಂಡುಗಳ ಸಹವಾಸ ಇಟ್ಟುಕೊಂಡಿದ್ದಳು, ಅದರಲ್ಲಿ ಅಪ್ಪ ಕೂಡ ಒಬ್ಬರು. ಹೆಚ್ಚಾಗಿ ಅಪ್ಪ ಅವಳ ಮನೇಲಿ ಇರ್ತಾ ಇದ್ದ. ಅವರಿಗೆ ಎಲ್ಲವೂ ಅವಳೇ ಆಗಿದ್ದಳು.ಅವಳ ಮಗಳನ್ನು ತಮ್ಮ ಮಗಳಂತೆ ಸಾಕುತ್ತಿದ್ದರು.
ಊರಿನ ಜನರಿಗೆ ಅಪ್ಪನನ್ನೆ ಗಂಡ ಅಂತ ಹೇಳಿಕೊಳ್ಳೊತ್ತಾ ಇದ್ದಳು.ತಾಳಿ ಕಟ್ಟುದಿದ್ದರು ಅಪ್ಪ ಅವಳಿಗೆ ಗಂಡನಂತೆ ಇದ್ದರು. ಅಪ್ಪನ ಕೂಗು ರೂಮಿನಿಂದ ಕೇಳಿತು. ಒಳಗಡೆ ಹೋದೆ. ಹಾಸಿಗೆಯಲ್ಲೆ ಮಲ ಮೂತ್ರ ಮಾಡಿಕೊಂಡಿದ್ದರು. ಕೆಟ್ಟ ವಾಸನೆ ರೂಮಿನ ತುಂಬ ಹರಡಿತ್ತು. ಒಳಗಡೆ ಕಾಲಿಟ್ಟೆ, ವಾಂತಿ ಬಂದ ಹಾಗೆ ಆಯಿತು. ತಲೆ ದಿಮ್ಮ್ ಎಂದಿತು. ಮೂಗಿಗೆ ಬಾಯಿಗೆ ಬಟ್ಟೆಯನ್ನು ಸುತ್ತಿಕೊಂಡು ಮಲ ಮೂತ್ರ ಎತ್ತಿ ಹಾಕಿದೆ. ಬಟ್ಟೆ ಬದಲಿಸಿದೆ, ರೂಮಿನ ಸುತ್ತುವರೆದ ಕೆಟ್ಟ ವಾಸನೆ ಸ್ವಲ್ಪ ಕಡಿಮೆ ಎನಿಸಿತು. ಹಾಲು ಬೇಕು ಎಂದು ಕೈ ಸನ್ನೆ ಮಾಡಿ ಕೇಳಿದ ಅಪ್ಪ , ಹಾಲನ್ನು ಕುಡಿಯಲು ಕೊಟ್ಟೆ. ಮಂಚದ ಪಕ್ಕ ನಿಂತ ನನಗೆ ಸನ್ನೆ ಮಾಡಿದ ಅರ್ಥವಾಗಲಿಲ್ಲ.
ಕಷ್ಟಪಟ್ಟು ಬಹಳ ಹೊತ್ತಿನ ನಂತರ ಅರ್ಥ ಮಾಡಿಕೊಂಡೆ ಅವರಿಗೆ ವರ್ಣಿಕಾ ಬೇಕಾಗಿದ್ದಳು. ತಾಳಿ ಕಟ್ಟಿದ ಹೆಂಡತಿಯನ್ನು ಕೇಳದೆ ಎಲ್ಲಿಂದಲೊ ಬಂದ ವರ್ಣಿಕಾಳನ್ನು ಕೇಳುತ್ತಾ ಇದ್ದರಲ್ಲ ಎಂದು ಬೇಸರವಾಯಿತು. ಕಟ್ಟಿಕೊಂಡವಳಕ್ಕಿಂತ ಇಟ್ಟುಕೊಂಡವಳ ಮೇಲೆ ಮಮಕಾರ ಹೆಚ್ಚಂತೆ. ಕೈ ಕಾಲು ಬಾಯಿ ಸ್ವಾಧೀನ ಇಲ್ಲದಿದ್ದರು ವರ್ಣಿಕಾಳನ್ನು ಬಯಸಿತು ಆ ದೇಹ.ಸಾಯುವ ಕಾಲದಲ್ಲೂ ಅವಳು ಬೇಕು ಎಂದು ಕೇಳುತಿದ್ದರಲ್ಲ, ಎಂದು ಬೇಸರವಾಯಿತು. ಅಪ್ಪ ನಿಮ್ಮನ್ನು ನೋಡಬೇಕಂತೆ ,ಮನೆಗೆ ಬನ್ನಿ ಅವಳ ಅಂಗಳದಲ್ಲಿ ನಿಂತು ವರ್ಣಿಕಾಳನ್ನು ಕರೆದೆ. ಯಾವ ಅಪ್ಪ, ಯಾರ ಅಪ್ಪ ಬಾಯಲ್ಲಿನ ಎಲೆ ಅಡಿಕೆ ಉಗಿದು ಕೇಳಿದಳು ವರ್ಣಿಕಾ.
ಅಪ್ಪನ ಬಗ್ಗೆ ಹೇಳಿದೆ. ಹತ್ತಾರು ವರ್ಷ ಅಪ್ಪನ ಜೊತೆ ಇದ್ದವಳಿಗೆ ಅಪ್ಪನ ಯಾರು ಅಂತ ಕೇಳಿದಾಗ ಬೇಸರವಾಯಿತು. ಈಗ ಬರೋಕೆ ಆಗೊದಿಲ್ಲ ಸಾಯಂಕಾಲ ಬರ್ತಿನಿ ಎಂದು ಹೇಳಿ ಕಳುಹಿಸಿದಳು. ಸಾಯಂಕಾಲ ವರ್ಣಿಕಾ ಮನೆಗೆ ಬಂದಾಗ ಮನೆಯಲ್ಲಿ ಕತ್ತಲು ಆವರಿಸಿತ್ತು. ಸಣ್ಣನೇಯ ದೀಪ ರೂಮಿನಲ್ಲಿ ಉರಿತಾ ಇತ್ತು. ಆ ಕತ್ತಲಲ್ಲೆ ರೂಮಿನಲ್ಲಿ ಕಾಲಿಟ್ಟಳು ವರ್ಣಿಕಾ. ಮತ್ತೆ ಮಲ ಮೂತ್ರದ ವಾಸನೆ ಹರಡಿತ್ತು. ಅವಳು ಮುಡಿದ ದುಂಡು ಮಲ್ಲಿಗೆಯ ಘಮ ಘಮ ಆ ವಾಸನೆಯಲ್ಲಿ ಮರೆಯಾಗಿತ್ತು. ಮಂಚದ ಪಕ್ಕ ನಿಂತು ಅಪ್ಪನನ್ನು ಕಣ್ಣರಳಿಸಿ ನೋಡಿದಳು. ಸೀರೆಯ ಸೆರಗನ್ನು ಟೊಂಕಕ್ಕೆ ಕಟ್ಟಿ,ಆ ಮಲ ಮೂತ್ರವನ್ನು ತೆಗೆದು ಹಾಕಿದಳು.
ತನ್ನ ಬ್ಯಾಗ್ ನಲ್ಲಿದ್ಗ ಸ್ಪ್ರೇ ತೆಗೆದು, ರೂಮಿನ ಸುತ್ತಲು ಸಿಂಪಡಿಸಿದಳು. ರೂಮಿನ ವಾಸನೆ ಬದಲಾಯಿತು. ಹೋದ ಕರೆಂಟ್ ಬಂತು. ರೂಮಿನಲ್ಲಿ ಬೆಳಕು ಚೆಲ್ಲಿತು. ಆ ಬೆಳಕಿನಲ್ಲಿ ಅಪ್ಪ ಅವಳನ್ನು ಕಣ್ಣು ಬಿಟ್ಟು ನೋಡಿದ. ಅಪ್ಪನ ನೋಡಿ ನಕ್ಕಳು ವರ್ಣಿಕಾ. ಹತ್ತಿರ ಬಂದು ಅಪ್ಪನ ಕೈಹಿಡಿದಳು. ಭಾರವಾದ ಎಡಗೈಯನ್ನು ಎರಡು ಕೈಗಳಿಂದ ಎತ್ತಿ ಹಿಡಿದಳು.
ಅಪ್ಪ ಏನ್ನನ್ನೊ ಹೇಳ ಹೊರಟರು. ಅರ್ಥವಾಗಲಿಲ್ಲ. ವರ್ಣಿಕಾ ಅಪ್ಪನ ಕೈಹಿಡಿದಳು. ಅವಳ ಕಣ್ಣುಗಳಲ್ಲಿ ಕಂಬನಿಗಳ ಕಂಡೆ. ಅಪ್ಪನ ಕಣ್ಣುಗಳಲ್ಲಿ ಕಣ್ಣೀರು ಉಕ್ಕಿ ಹರಿದವು. ಅಪ್ಪನ ಕೈಗಳನ್ನು ಬಿಟ್ಟು ರೂಮಿನಿಂದ ಹೊರ ಬಂದಳು ವರ್ಣಿಕಾ. ಅವಳನ್ನೆ ನೋಡುತ್ತಾ ತಮ್ಮೆರಡು ಕಣ್ಣುಗಳನ್ನು ಮೆಲ್ಲಗೆ ಮುಚ್ಚಿದರು ಅಪ್ಪ.
ರೂಮಿನಿಂದ ಹೊರ ಬಂದ ವರ್ಣಿಕಾ, ನನ್ನ ಮುಂದೆ ಹಾದು ಹೋದಳು.ಅವಳು ನನ್ನ ಮುಂದೆ ಹಾದು ಹೋದಾಗ ಅವಳು ಮುಡಿದ ಮಲ್ಲಿಗೆ ವಾಸನೆ ಘಮ್ ಎಂದು ಹೊಡೆಯಿತು,ಅದರ ಹಿಂದೆಯೇ ಅವಳ ಸೀರೆ ಸೆರಿಗೆಗೆ ಅಂಟಿದ ಅಪ್ಪನ ಮಲದ ವಾಸನೆ ಗಬ್ಬೆಂದು ಹೊಡೆಯಿತು. ಬೆಳಿಗ್ಗೆ ಅಪ್ಪನಿಗೆ ಹಾಲು ಕೊಡಲು, ಹಾಲು ಕಾಯಿಸಿ ಅಪ್ಪನ ಬಳಿ ಹೋದೆ. ಅಪ್ಪ ಮಲಗಿದ್ದ .ಬೇಗನೆ ಏಳುವ ಅಪ್ಪ ಇನ್ನೂ ಎದ್ದಿಲ್ಲವಲ್ಲ ಎಂದು ಕೂಗಿದೆ.ಏಳ ಲಿಲ್ಲ.ಕಣ್ಣುಗಳನ್ನು ತೆರೆಯಲಿಲ್ಲ. ಅಪ್ಪ ಹೋಗಿ ಬಿಟ್ಟಿದ್ದರು. ಸಾಯುವ ಮುಂಚೆ ಅಮ್ಮನ ಬಯಸದೆ ಎಲ್ಲಿಂದಲೊ ಬಂದ ಆ ವರ್ಣಿಕಾಳನ್ನು ಬಯಸಿದನಲ್ಲ ಎಂದು ಹೃದಯ ಕಿತ್ತಿ ಬಂತು. ಸಾಯುವ ಹೊತ್ತಿನಲ್ಲಿ ಮಗನಿಗೆ ಏನೂ ಹೇಳಲಿಲ್ಲ. ಮುಖವಿಟ್ಟು ನೋಡಲಿಲ್ಲ. ಕೈಹಿಡಿಯಲಿಲ್ಲ. ಇದೆಲ್ಲವನ್ನು ವರ್ಣಿಕಾಳ ಜೊತೆ ಕಣ್ಣಾರೆ ಕಂಡಿದ್ದೆ. ಸ್ವಂತ ಹೆಂಡತಿ, ಮಗನಲ್ಲಿ ಇಲ್ಲದ ಅನುಬಂಧ, ಪ್ರೀತಿ ಆ ವರ್ಣಿಕಾಳ ಮೇಲೆ. ಅಪ್ಪನ ಮೇಲೆ ಸಿಟ್ಟು,ಬೇಸರ,ತಾತ್ಸರ ಎಲ್ಲವೂ ಒಮ್ಮೆಗೆ ಮನೆ ಮಾಡಿತು. ಅಮ್ಮನ ನೆನಪುಗಳು ಕಾಡಿದವು,ಅಪ್ಪ ಇಷ್ಟ ಆಗಲಿಲ್ಲ.
– ಪ್ರೀತಿಯಿಂದ
- ಗುರು ಮೂರ್ತಿ
