ಹುಟ್ಟುಹಬ್ಬದ ಶುಭಾಶಯಗಳು : ವೀಣಾ ನಾಯಕ್

ಸಾಹಿತ್ಯ ಬೆಳೆಸಬೇಕು ಎಂದರೆ ಓದುಗರನ್ನು ಹುಟ್ಟುಹಾಕಬೇಕು, ಅನಂತರ ಲೇಖಕರಿಗೆ ಬರೆಯುವಂತೆ ಪ್ರೋತ್ಸಾಹಿಸಬೇಕು ಮತ್ತು ಲೇಖಕರು ಬರೆದ ಕೃತಿಗಳನ್ನು ಓದುಗರಿಗೆ ಮುಟ್ಟುವಂತೆ ಮಾಡಬೇಕು ಈ ಎಲ್ಲ ಸೇತುವೆಯಂತೆ ನಿಸ್ವಾರ್ಥವಾಗಿ ಸಾಹಿತ್ಯ ಸೇವೆ ಮಾಡುತ್ತಿರುವ ವೀಣಾ ನಾಯಕ್ ಅವರಿಗೆ ಆಕೃತಿಕನ್ನಡದಿಂದ ಹುಟ್ಟುಹಬ್ಬದ ಶುಭಾಶಯಗಳು…ಅವರ ಸಾಹಿತ್ಯ ಸೇವೆಯ ಕುರಿತು ಲೇಖಕಿ ಸವಿತಾ ರಮೇಶ ಅವರು ಸಂದರ್ಶನವನ್ನು ಮಾಡಿದ್ದಾರೆ, ತಪ್ಪದೆ ಮುಂದೆ ಓದಿ…

 

ಶ್ರೀಮತಿ ವೀಣಾ ನಾಯಕ್ ಮೇಡಂ ಸಾಹಿತ್ಯಾರಾಧನೆ, ಸಾಹಿತ್ಯದ ಬಗ್ಗೆ ಪ್ರೀತಿ, ಸಾಹಿತ್ಯ ಬೆಳೆಸುವುದು ಅಂದಾಗ ತಕ್ಷಣ ನೆನಪಾಗುವುದು ಶ್ರೀಮತಿ ವೀಣಾ ನಾಯಕ್ ಮೇಡಂ ಅವರು, ಇವರು ಮಂಗಳೂರಿನವರು, ಕಾರ್ಪೊರೇಷನ್ ಬ್ಯಾಂಕಿನಲ್ಲಿ ಚೀಫ್ ಮ್ಯಾನೇಜರ್ ಆಗಿ ಕೆಲಸ ಮಾಡಿ ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ‌.

ಇವರ ಪತಿ ಎಂ.ಜಯರಾಮ ನಾಯಕ್, ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರಿಬ್ಬರೂ ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಇಬ್ಬರು ಮಕ್ಕಳು, ಮಗಳು ಇಂಜಿನಿಯರ್, ಅಳಿಯ ಸೈಂಟಿಸ್ಟ್. ಅವರಿಗೆ ಇಬ್ಬರು ಮಕ್ಕಳು, ಬೆಂಗಳೂರಿನಲ್ಲಿದ್ದಾರೆ.

ಮಗ ಸೊಸೆ ಡಾಕ್ಟರ್ಸ್, ಮಣಿಪಾಲದಲ್ಲಿದ್ದಾರೆ. ಅವರಿಗೆ ಒಬ್ಬ ಮಗ ಇದು ಅವರ ಪುಟ್ಟ ಸಂಸಾರದ ವಿವರ.

ಇನ್ನು ಭಾಷೆಗಳ ಬಗ್ಗೆ ತುಂಬಾ ಒಲವು ಇವರಿಗೆ, ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಮೂರು ಭಾಷೆಗಳಲ್ಲಿ ಪ್ರಾವೀಣ್ಯತೆ ಸಾಧಿಸಿದ್ದಾರೆ. ನಾನಂತೂ ಪುಸ್ತಕ ಮಾತೆ, ಪುಸ್ತಕ ಸರಸ್ವತಿಯಾಗಿ ಇವರನ್ನು ನೋಡುತ್ತಿದ್ದೇನೆ. ಇವರಿಗಿರುವ ಪುಸ್ತಕ ಪ್ರೀತಿ, ಸಾಹಿತ್ಯದ ಬಗ್ಗೆ ಒಲವು ಇನ್ನೆಲ್ಲಿಯೂ ಕಂಡಿಲ್ಲ.

ಇವರು ಹೆಚ್ಚು ಕಡಿಮೆ ಕನ್ನಡ ಲೇಖಕರ ಎಲ್ಲಾ ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಹಾಗೆ ಎಲ್ಲವನ್ನೂ ಓದಿಯೂ ಇದ್ದಾರೆ.ಹಾಗೆ ಇಂಗ್ಲಿಷ್ ಸಾಹಿತ್ಯದಲ್ಲೂ ಇವರಿಗೆ ಒಲವಿದೆ. ಅನುಕೂಲ ಇದೆ,ಹಣ ಇದೆ, ಎಲ್ಲವನ್ನೂ ಕೊಂಡುಕೊಂಡಿದ್ದಾರೆ. ಇದರಲ್ಲಿ ಏನೂ ಹೆಚ್ಚುಗಾರಿಕೆ ಎನ್ನಬಹುದು.. ಆದರೆ ಹಣವಿದ್ದರೆ ಸಾಲದು ಪುಸ್ತಕ ಓದುವ ಒಲವಿರಬೇಕು, ಕೊಳ್ಳುವ ಮನಸ್ಸಿರಬೇಕು ಅಲ್ಲವೇ…?

ಈ ವಿಷಯದ ಬಗ್ಗೆ ಅವರ ಮಾತಿನಲ್ಲೇ ಕೇಳೋಣ…ಬನ್ನಿ

ಪ್ರಶ್ನೆ: ಮೇಡಂ ನಿಮಗೆ ಪುಸ್ತಕ ಓದುವ ಆಸಕ್ತಿ ಯಾವಾಗ ಶುರು ಆಯಿತು..?. ಮತ್ತೆ ಪುಸ್ತಕ ಸಂಗ್ರಹಣೆ ಮಾಡುವ ಯೋಚನೆ ಹೇಗೆ ಶುರುವಾಯಿತು…?.
ಉತ್ತರ: ನನಗೆ ಪುಸ್ತಕಗಳನ್ನು ಓದುವ ಹವ್ಯಾಸವು ಎಳೆಯ ವಯಸ್ಸಿನಲ್ಲಿಯೇ ಇತ್ತು. ಶಾಲೆಯಲ್ಲಿ, ಕಾಲೇಜಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಅದ್ಯಾಪಕರಿಂದ/ಉಪನ್ಯಾಸಕರಿಂದ ಬಹಳ ಪ್ರಭಾವಿತಳಾಗಿದ್ದೆ. ಇದರಿಂದ ಭಾಷೆಗಳ ಮೇಲೆ ಆಸಕ್ತಿ ಹೆಚ್ಚಾಯಿತು.

ಪದವೀಧರೆಯಾದ ಕೂಡಲೆ ಉದ್ಯೋಗ ಸಿಕ್ಕಿತು. ಮುಂದೆ ವೃತ್ತಿ ಮತ್ತು ಸಾಂಸಾರಿಕ ಜವಾಬ್ದಾರಿಗಳ ನಡುವೆ ಹೆಚ್ಚಿನ ಓದು ಕಷ್ಟಸಾಧ್ಯವೆನಿಸಿದ ಕಾರಣ ಭಾಷಾ ಸಂಬಂಧಿ ಪರೀಕ್ಷೆಗಳಿಗೆ ಪ್ರವೇಶ ಪಡೆದುಕೊಂಡೆ. ಇದರಿಂದ ಕಡ್ಡಾಯವಾಗಿ ಓದಲೇಬೇಕಾದ ಸಂದರ್ಭ ಬಂತು. ಆಗ ಸಾಹಿತ್ಯದ ಹಲವು ಪ್ರಕಾರಗಳ ಅಧ್ಯಯನ ಸಾಧ್ಯವಾಯಿತು ಮತ್ತು ಈ ಕೆಳಗಿನ
ಪರೀಕ್ಷೆಗಳಲ್ಲಿ ಉತ್ತೀರ್ಣಳಾದೆ.

ಎಂ.ಎ.(ಇಂಗ್ಲಿಷ್) – ರತ್ನ (ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಪರೀಕ್ಷೆ)
ಪ್ರವೀಣ್ – (ದಕ್ಷಿಣ ಭಾರತ ಹಿಂದಿ ಪ್ರಚಾರ ಸಮಿತಿ, ಚೆನ್ನೈ)

ಬ್ಯಾಂಕಿನ ವೃತ್ತಿಯಲ್ಲಿ ಉನ್ನತ ಪದವಿಗೇರಲು ಅಗತ್ಯವಾದ ಪರೀಕ್ಷೆಗಳಲ್ಲಿ ಉತ್ತೀರ್ಣಳಾದರೂ ಮಹಿಳೆಯಾದ ಕಾರಣಕ್ಕೆ ಪ್ರತಿಕೂಲ ಪರಿಸ್ಥಿತಿಯನ್ನು ಕೆಲವೊಮ್ಮೆಎದುರಿಸಬೇಕಾಯಿತು. ಆದರೆ ಕಷ್ಟಪಟ್ಟು ದುಡಿದು ಮುಖ್ಯ ಪ್ರಬಂಧಕ ಹುದ್ದೆಯನ್ನು ಗಳಿಸಿದ್ದು ನನ್ನ ಮಟ್ಟಿಗೆ ದೊಡ್ಡ ಸಾಧನೆಯೇ ಸರಿ.

ಮುಂದೆ ಓದಲು ಸಮಯ ಸಿಗಬಹುದೆಂಬ ನಿರೀಕ್ಷೆಯಲ್ಲಿ ಪುಸ್ತಕಗಳ ಖರೀದಿ ಮಾಡುತ್ತಾ ಬಂದೆ. ಈಗ ನನ್ನ ಪುಸ್ತಕ ಸಂಗ್ರಹದಲ್ಲಿ 5000 ಕ್ಕೂ ಹೆಚ್ಚು ಕನ್ನಡ ಪುಸ್ತಕಗಳಿವೆ. ಸುಮಾರು 1000 ಕ್ಕೂ ಹೆಚ್ಚು ಇಂಗ್ಲಿಷ್ ಪುಸ್ತಕಗಳೂ ಇವೆ. ಪುಸ್ತಕದಲ್ಲಿ ಕಥೆ ಮಾತ್ರ ಓದದೇ ಒಂದೊಂದು ಪದ, ವಾಕ್ಯಗಳನ್ನು ಎಂಜಾಯ್ ಮಾಡಿ ಓದುತ್ತಿದ್ದೆ. ಓದಿದ್ದನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಿದ್ದೆ. ವಾಚನಾಲಯದಿಂದ ತಂದು ಓದಿದರೆ ಓಮ್ಮೆ ಓದಿ ಪುಸ್ತಕ ವಾಪಸ್ ಕೊಡುತ್ತೇವೆ. ಅದೇ ನಮ್ಮ ಬಳಿ ಪುಸ್ತಕ ಇದ್ದರೆ ನೆನಪಾದಾಗ, ತಕ್ಷಣ ಓದಬಹುದು ಎಂದು ನಾನೇ ಪುಸ್ತಕ ಕೊಂಡುಕೊಳ್ಳಲು ಶುರು ಮಾಡಿದೆ.

ಇಷ್ಟೇ ಅಲ್ಲದೆ, ಮುಖಪುಟದಲ್ಲಿ ‌ಕೆಲವು ಸಾಹಿತ್ಯದ ಬಳಗಗಳಿವೆ, ಅಲ್ಲಿಯ ಸದಸ್ಯರುಗಳಿಗೆ ಕೆಲವು ಸ್ಪರ್ಧೆ ಏರ್ಪಡಿಸುತ್ತಾರೆ. ನೂರಾರು ಉದಯೋನ್ಮುಖ ಬರಹಗಾರರು ಇನ್ನೂ ಅ,ಆ ಈ ಹಂತದಲ್ಲಿರುವಂತಹರೆ ಜಾಸ್ತಿ ಇದ್ದಾರೆ. ವೀಣಾ ಮೇಡಂರವರು ಇಂತಹವರ ಬರಹಗಳನ್ನು ಓದಿ ಅದರಲ್ಲಿ ಉತ್ತಮವಾದ ಬರಹಗಳಿಗೆ ಪುಸ್ತಕ ಬಹುಮಾನವನ್ನು ನೀಡುತ್ತಾ ಬಂದಿದ್ದಾರೆ.

ಪತಿ ಹಾಗೂ ಮೊಮ್ಮಗಳೊಂದಿಗೆ ವೀಣಾ ಮೇಡಂ

ಈಗ ಮೂರು ವರ್ಷಗಳಿಂದ ಅವರದೇ “ಪುಸ್ತಕ ಅವಲೋಕನದ ಸುತ್ತಮುತ್ತ” ಎಂಬ ಬಳಗ ಕಟ್ಟಿ ಬೇರೆ ಬೇರೆ ಸಾಹಿತಿಗಳ ಪುಸ್ತಕಗಳ ವಿಮರ್ಶೆ, ಪುಸ್ತಕ ಪರಿಚಯ, ಸ್ಪರ್ಧೆ ಏರ್ಪಡಿಸಿ ಆ ಸ್ಪರ್ಧೆಯಲ್ಲಿ ಭಾಗವಹಿಸಿದ ಸದಸ್ಯರೆಲ್ಲರಿಗೂ ಪುಸ್ತಕ ಬಹುಮಾನವನ್ನು ಮನೆಗೆ ಕಳುಹಿಸಿ ಕೊಡುತ್ತಾರೆ. ಹಾಗೆಯೇ ಶ್ರೀಮತಿ ಎಚ್‌‌. ಜಿ. ರಾಧಾ ದೇವಿ ಮೇಡಂ ಅವರ ಬಳಗದಲ್ಲೂ ಸಹ ಸ್ಪರ್ಧೆ ಏರ್ಪಡಿಸಿ ಅಲ್ಲಿಯೂ ಬರೆದವರಿಗೆ ಪುಸ್ತಕ ಬಹುಮಾನಗಳನ್ನು ನೀಡುತ್ತಾರೆ.

ಇದನ್ನೇ ಸಾಹಿತ್ಯದ ಆರಾಧನೆ ಎನ್ನುವುದು…ಇದು ಸುಲಭವಲ್ಲ. ಪುಸ್ತಕದ ಅಂಗಡಿಗೆ ಹೋಗಿ ಪರ್ಚೇಸ್ ಮಾಡಿ ಅದನ್ನು ಸದಸ್ಯರುಗಳ ವಿಳಾಸಕ್ಕೆ ಪೋಸ್ಟ್ ಮಾಡಲು ಎಷ್ಟೊಂದು ಶ್ರಮ ಇರುತ್ತದೆ. ಬರಿ ಹಣವಿದ್ದು, ಕೊಡುವ ಮನಸ್ಸಿದ್ದರೆ ಸಾಲದು. ಅಚ್ಚುಕಟ್ಟಾಗಿ ಈ ಕೆಲಸ ಮಾಡಲು ತುಂಬಾ ಪರಿಶ್ರಮ, ತಾಳ್ಮೆ ಬೇಕು. ಸಾಹಿತ್ಯದ ಬಗ್ಗೆ ಅವರಿಗಿರುವ ಪ್ರೀತಿ ಈ ಕೆಲಸವನ್ನು ಮಾಡಿಸುತ್ತದೆ.

ನೂರಾರು ಜನ ಬರೆಯುತ್ತಿರುವ ಗುಂಪಿನಲ್ಲಿ ಪ್ರತಿಯೊಬ್ಬರ ಲೇಖನ ಓದಿ ಅವರ ಮನಸ್ಥಿತಿ ತಿಳಿದು ಅವರುಗಳಿಗೆ ಇಷ್ಟವಾಗುವ ಪುಸ್ತಕಗಳನ್ನು ಕಳುಹಿಸುತ್ತಾರೆ. ಹೊಸಬರ ಬರಹವನ್ನು ಓದಲು ಹಿಂದೇಟು ಹಾಕುವವರೇ ಇರುವ ಕಾಲದಲ್ಲಿ ಇವರು ಎಲ್ಲರ ಬರಹಗಳನ್ನು ಓದಿ ಕಾಮೆಂಟ್ ಮಾಡುತ್ತಾರೆ. ತಿಂಗಳಲ್ಲಿ ಎರಡರಿಂದ ಮೂರು ಸಲ ಒಂದಲ್ಲ ಒಂದು ಸ್ಪರ್ಧೆ ಆಯೋಜಿಸಿ ಬರೆಯಲು ಪ್ರೋತ್ಸಾಹ ನೀಡಿ, ಪುಸ್ತಕ ಬಹುಮಾನ ನೀಡುವ ಮೂಲಕ ಸಾಹಿತ್ಯವನ್ನು ಬೆಳೆಸುತ್ತಿದ್ದಾರೆ.

ಯಾವ ಪ್ರತಿಫಲಾಪೇಕ್ಷೆಯಿಲ್ಲದೆ, ತಮ್ಮ ಕೈಯಿಂದ ಹಣ ಹಾಕಿ, ಸಾಹಿತಿಗಳಲ್ಲಿ ಬೇಧ ಭಾವ ತೋರದೆ ಹಿರಿಯ, ಕಿರಿಯ ಸಾಹಿತಿಗಳ ಪುಸ್ತಕಗಳನ್ನು ಎಲ್ಲರೂ ಓದುವಂತೆ ಮಾಡುತ್ತಾರೆ. ನಾನು ನೋಡಿದಂತೆ ಎರಡು ವರ್ಷದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಬಹುಮಾನವಾಗಿ ನೀಡಿದ್ದಾರೆ.

ಎಲ್ಲರಿಗೂ ಅವರ ವಿಳಾಸಕ್ಕೆ ಅಂಚೆ ಇಲಾಖೆಯಿಂದ ಕಳುಹಿಸುತ್ತಾರೆ. ಇಲ್ಲಿಯ ತನಕ ಇವರು ಕಟ್ಟಿದ ಪೋಸ್ಟಲ್ ಚಾರ್ಜೇ ಒಂದು ಲಕ್ಷಕ್ಕಿಂತ ಜಾಸ್ತಿಯಾಗಿದೆ. ಅಂದರೆ ಎಷ್ಟು ಪುಸ್ತಕ ಬಹುಮಾನ ಕೊಟ್ಟಿರಬಹುದು…ಯೋಚಿಸಿ. ಅದರಲ್ಲೂ ಒಂದು ಎರಡು ಪುಸ್ತಕ ಪ್ರಕಟಣೆ ಮಾಡಿದ ಹೊಸ ಬರಹಗಾರರಿಂದಲೂ ಪುಸ್ತಕಗಳನ್ನು ಕೊಂಡು ಅದನ್ನು ಬಹುಮಾನ ರೂಪದಲ್ಲಿ ಕೊಟ್ಟು ಹೊಸ ಬರಹಗಾರರನ್ನು ಎಲ್ಲರಿಗೂ ಪರಿಚಯಿಸಿ ಪ್ರೋತ್ಸಾಹಿಸುತ್ತಾರೆ.

ನನಗೊಬ್ಬಳಿಗೆ ಇವರಿಂದ ಬಹುಮಾನ ರೂಪದಲ್ಲಿ ನಲವತ್ತರ ಮೇಲೆ ಪುಸ್ತಕಗಳು ಬಂದಿದೆ. ಆದರೆ ಯಾವ ಪುಸ್ತಕವು ರಿಪೀಟ್ ಆಗಿಲ್ಲ. ಬಹುಶಃ ಬಳಗದ ನೂರಾರು ಜನರಿಗೆ ಕಳುಹಿಸಿರುತ್ತಾರೆ. ಎಲ್ಲರಿಗೂ ಹೀಗೇ ಅವರುಗಳಿಗೆ ಹಿಂದೆ ಕಳುಹಿಸಿರದ ಪುಸ್ತಕಗಳನ್ನೇ ಕಳುಹಿಸಿರುತ್ತಾರೆ.

ಈ ವಿಷಯದ ಬಗ್ಗೆ ಅವರನ್ನು ಕೇಳಿದಾಗ,

ಪ್ರಶ್ನೆ : ಮೇಡಂ ಈ ಬಳಗ ನಡೆಸುವ ಹಾಗೂ ಎಲ್ಲರಿಂದ ಬರೆಯಿಸಿ ಅವರುಗಳಿಗೆ ಬಹುಮಾನ ಕೊಡುವ ಯೋಚನೆ ನಿಮ್ಮಲ್ಲಿ ಮೂಡಿದ್ದು ಹೇಗೆ..?.

ಉತ್ತರ : ನಾನು ಪುಸ್ತಕ ಪ್ರೇಮಿಗಳು ಎನ್ನುವ ಬಳಗದಲ್ಲಿ ನಾನು ಓದಿದ ಪುಸ್ತಕಗಳ ಬಗ್ಗೆ ವಿಮರ್ಶೆ ಬರೆಯುತ್ತಿದ್ದೆ. ತುಂಬಾ ಜನ ಓದಿ ಲೈಕ್, ಕಾಮೆಂಟ್ ಮಾಡುತ್ತಿದ್ದರು.ಆಗ ಅನಿಸಿತು, ನಾನು ಬರೆಯುವಂತೆ ಇನ್ನಷ್ಟು ಜನರಲ್ಲೂ ಓದುವ, ಓದಿದ್ದನ್ನು ಬರೆಯುವ ಆಸಕ್ತಿ ಮೂಡಿಸೋಣ ಅಂತ. ಇದರಿಂದ ಈಗ ನಾನು ನಮ್ಮ ಸದಸ್ಯರಲ್ಲಿ ಓದುವ ಮತ್ತು ಓದಿದನ್ನು ಅರ್ಥಮಾಡಿಕೊಂಡು ಬರೆಯುವ ಹವ್ಯಾಸವನ್ನು ಬೆಳೆಸುವುದರಲ್ಲಿ ವ್ಯಸ್ತಳಾಗಿದ್ದೇನೆ. ಹಲವಾರು ಸದಸ್ಯರು ತಮ್ಮ ಬರವಣಿಗೆಯಲ್ಲಿ ಹಿಡಿತ ಸಾಧಿಸಿದ್ದಾರೆ. ಇದರಿಂದ ಕನ್ನಡಕ್ಕೆ ಇನ್ನಷ್ಟು ಉತ್ತಮ ಲೇಖಕರ ಉದಯವಾಗುತ್ತದೆ.

ಹೊಸದಾಗಿ ಬರೆಯಲು ಪ್ರಯತ್ನಿಸುವ ಸದಸ್ಯರಲ್ಲಿ ಹಿಂಜರಿಕೆ ಇರುವುದು ಸ್ವಾಭಾವಿಕ. ಅವರಿಗಾಗಿ ಲೇಖನ ಸ್ಪರ್ಧೆಗಳನ್ನು ಏರ್ಪಡಿಸಿ, ಪುಸ್ತಕ ಬಹುಮಾನಗಳನ್ನು ನೀಡುವ ಮೂಲಕ ಪ್ರೋತ್ಸಾಹ ಕೊಡಲಾಗುತ್ತದೆ. ವಿಶೇಷವಾಗಿ, ಹಣ ಕೊಟ್ಟು ಪುಸ್ತಕ ಕೊಳ್ಳಲು ಆಗದವರಿಗೆ ಇಂತಹ ಬಹುಮಾನಗಳಿಂದ ತುಂಬಾ ಉತ್ತೇಜನ ಸಿಗುತ್ತದೆ. ಅಲ್ಲದೆ ಹಳೆಯ,ಹೊಸ ಲೇಖಕರ ಪುಸ್ತಕಗಳ ಪರಿಚಯವಾಗುತ್ತದೆ.ಈ ಬಳಗದಿಂದ ಕೆಲವಷ್ಟು ಜನರಿಗೆ ಪುಸ್ತಕದಲ್ಲಿ ಆಸಕ್ತಿ ಉಂಟಾಗಿ ಪುಸ್ತಕ ಕೊಂಡು ಓದುವ ಸಂಸ್ಕೃತಿ ಜಾಸ್ತಿ ಆಗುತ್ತಿದೆ. ಇದರಿಂದ ಪುಸ್ತಕೋದ್ಯಮವೂ ಬೆಳೆಯುತ್ತದೆ ಹಾಗೂ ಸ್ವಲ್ಪ ಮಟ್ಟಿಗೆ ಲಾಭ ಪಡೆಯುತ್ತದೆ.

ಕನ್ನಡ ಸಾಹಿತ್ಯವನ್ನು ಹೆಚ್ಚು ಹೆಚ್ಚಾಗಿ ಓದುವ ಅಭಿರುಚಿಯನ್ನು ಬೆಳೆಸಲು ಮಾಡುತ್ತಿರುವ ಈ ಪ್ರಯತ್ನದಲ್ಲಿ ತೃಪ್ತಿ ಮತ್ತು ಗೆಲುವು ಸಿಗುತ್ತಿದೆ. ಕನ್ನಡಕ್ಕಾಗಿ ಯಾರೂ ಏನೂ ಮಾಡುತ್ತಿಲ್ಲವೆಂದು ಟೀಕೆ ಟಿಪ್ಪಣಿ ಮಾಡಿ ನಿಷ್ಕ್ರಿಯರಾಗಿ ಉಳಿಯುವುದಕ್ಕಿಂತ ನಮಗೆ ಸಾಧ್ಯವಿರುವ ಕೆಲಸವನ್ನು ಮಾಡುವುದೇ ಒಂದು ಸಾಧನೆ, ಎಂಬುದು ನನ್ನ ಅನುಭವದ ಮಾತು.

ಇವರ ಮಾತು ನಿಜ ಅಲ್ಲವಾ…? ಸ್ನೇಹಿತರೇ…!! ಇವರಷ್ಟು ಸಾಹಿತ್ಯ ಪ್ರೀತಿಸುವ, ಆರಾಧಿಸುವವರನ್ನು ನೋಡಿದ್ದೀರಾ…??. ಆರು,‌ಏಳು ಪುಸ್ತಕಗಳನ್ನು ಬರೆದು ಸಾಹಿತ್ಯದಲ್ಲಿ ಸಾಧನೆ ಮಾಡಿದೆ ಎನ್ನುವವರನ್ನು ನೋಡಿದ್ದೇನೆ. ಆದರೆ ಪುಸ್ತಕ ಬರೆಯುವುದು ಮಾತ್ರ ಹೆಚ್ಚುಗಾರಿಕೆಯಲ್ಲ.‌.. ಬೇರೆಯವರಲ್ಲಿ ಓದಲು, ಬರೆಯಲು ಆಸಕ್ತಿ ಮೂಡಿಸುವುದೇ ದೊಡ್ಡ ಸಾಧನೆ. ಈ ತರಹ ಸಾಹಿತ್ಯ ಸೇವೆ ಮಾಡುವವರನ್ನು ಎಲ್ಲೂ ಕಂಡಿಲ್ಲ, ಕಾಣುವುದು ಇಲ್ಲಾ.

ಸಾಹಿತ್ಯ ಆರಾಧನೆ ಮಾಡುವುದನ್ನು ಇವರನ್ನು ನೋಡಿ ಕಲಿಯಬೇಕು… ದೇವರು ಇವರಿಗೆ ಹೆಚ್ಚು ಹೆಚ್ಚು ಆಯುಸ್ಸು, ಆರೋಗ್ಯವನ್ನು ಕೊಡಲಿ, ಇವರ ಈ ಸಾಹಿತ್ಯ ಪ್ರೀ‌ತಿ, ಸಾಹಿತ್ಯ ಸೇವೆ ಅನವರತ ನಡೆಯಲಿ ಎಂದು ಹಾರೈಸೋಣ…..


  • ಸವಿತಾ ರಮೇಶ – ಬೆಂಗಳೂರು

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW