ಕೆ.ವಿ. ಎನ್ ಮೇಷ್ಟ್ರು ʼಕನ್ನಡ ನುಡಿ ರಚನೆ -ಕೆಲವು ನೆಲೆಗಳುʼ ಮತ್ತು ʼಹೊಸ ಓದುಗರಿಗೆ ಕುವೆಂಪುʼ ಎಂಬ ತಮ್ಮ ಎರಡು ಪುಸ್ತಕಗಳ ಬಿಡುಗಡೆಯ ಸಂದರ್ಭದಲ್ಲಿ ಪ್ರತಿಕ್ರಿಯಿಸುತ್ತಾ ತಮ್ಮ ಈ ಪುಸ್ತಕಗಳ ಬರಹಗಳಲ್ಲಿರುವ ಎರಡು ರೀತಿ ‘ವಿದ್ರೋಹ’ ಚಿಂತನೆಗಳನ್ನು ಮುಂದಿಟ್ಟಿದ್ದಾರೆ, ಈ ಕೃತಿಗಳ ಕುರಿತು ಡಾ. ಗಿರಿಜಾ ಶಾಸ್ತ್ರಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇದನ್ನು ಆತಂಕದಿಂದಲೇ, ಓದುಗರು ತಗಾದೆ ತೆಗೆಯಬಹುದು ಎನ್ನುವ ಹಿಂಜರಿಕೆಯಿಂದಲೇ (ಭಯದಿಂದಲ್ಲ) ಪ್ರಾರಂಭಿಸಿದರು. ‘ವಿದ್ರೋಹ’ ವಿಪರೀತ ದ್ವೇಷವೆಂದೇನೂ ಆಗ ಬೇಕಿಲ್ಲ. ಹಿಂದಿಯಲ್ಲಿ ನಮ್ಮ ಬಂಡಾಯ ಸಾಹಿತ್ಯಕ್ಕೆ ಸಮಾನವಾದ ಶಬ್ದಕ್ಕೆ ‘ವಿದ್ರೋಹೀ ಸಾಹಿತ್ಯ್ ‘ ಎಂದೇ ಹೆಸರು. ಕೆ.ವಿ.ಎನ್ ಮೇಷ್ಟ್ರದ್ದು ಆ ರೀತಿಯ ಬಂಡಾಯ ಚಿಂತನೆ ಎಂದು ಹೇಳಬಹುದೇನೋ, ಅದೂ ಸೌಮ್ಯ ಬಂಡಾಯ! ಪರಂಪರೆಯ ‘ಚರ್ಮ ಎಬ್ಬುವ’ ದಂಗೆಯ ಸ್ವರೂಪದ್ದಲ್ಲ. (‘ಚರ್ಮ ಎಬ್ಬುವು’ದರ ಚಿಂತನೆಯ ಬಗ್ಗೆ ನನಗೆ ಆಕ್ಷೇಪವೇನಿಲ್ಲ. ಅದು ಒಂದು ಸಾಮಾಜಿಕವಾಗಿ ವಂಚಿತ ಜನಾಂಗವೊಂದರ, ಆ ಕಾಲದ ಅನಿವಾರ್ಯತೆ ಇರಬಹುದು)

ಇರಲಿ, ಕೆ.ವಿ.ಎನ್ ಮೇಷ್ಟ್ರದ್ದು ಪರಂಪರೆಯೊಡನೆ ಸಂವಾದಕ್ಕಿಳಿಯುವ ಸಮಾಹಿತ ಬಂಡಾಯ, ಆವೇಶಪೂರಿತ ವಾಗ್ವಾದಕ್ಕಿಳಿಯುವುದು ಅವರ ನಡೆಯಲ್ಲ. ಕನ್ನಡ ಸಾಹಿತ್ಯದಲ್ಲಿ ʼಬಂಡಾಯʼ ವೇದಿಕೆ ಹತ್ತಿ ಉದಮದದಿಂದ ಘೋಷಿಸುತ್ತಿದ್ದ ಕಾಲದಲ್ಲೂ ಮೇಷ್ಟ್ರು ಒಂದು ರೀತಿ ವಿಭಿನ್ನರಾಗಿಯೇ ಉಳಿದವರು. ವಿಭಾಗದಲ್ಲೇ ಇದ್ದ ನಾವು ಅದನ್ನು ಕಣ್ಣಾರೆ ಕಂಡವರು.
ಅವರು ನಿನ್ನೆ ಆಡಿದ ತಮ್ಮ ಮಾತುಗಳಲ್ಲಿ ‘ಪರಂಪರೆಯ ಚರ್ಮ ಸುಲಿಯುವ’ ವಿದ್ರೋಹವಡಗಿರಲಿಲ್ಲ. ಬದಲಾಗಿ ಪರಂಪರೆಯನ್ನು ಅನಾದಿಕಾಲದಿಂದಲೂ, ಅದು ಕುಟ್ಟೆ ಹಿಡಿದು ಪುಡಿಯಾಗಿ ಉದುರುತ್ತಿರುವಾಗಲೂ, ಅದನ್ನು ಅಪ್ಪಿಕೊಂಡಿರುವ ಚಿಂತನೆಗಳ ಮೋಹ ಧೂಳಿನ ಪದರಗಳನ್ನು ಝಾಡಿಸುವ ಉದ್ದೇಶ ಅವರ ಮಾತುಗಳಲ್ಲಿತ್ತು. ಇದು ಕನ್ನಡ ಸಾಹಿತ್ಯ ಚಿಂತನೆಯ ಚರಿತ್ರೆಯಲ್ಲಿ ಒಂದು paradigm shift ಎಂದೇ ನನಗನ್ನಿಸುತ್ತದೆ. ಇದನ್ನು ಅವರ ಮಾತುಗಳ ಮೂಲಕವೇ ಸ್ಪಷ್ಟ ಪಡಿಸಲು ಇಷ್ಟಪಡುತ್ತೇನೆ.
“ಕುವೆಂಪು ಅವರ ಬಗೆಗೆ ಬಂದಿರತಕ್ಕಂತಹ ಬರಹಗಳು ಮತ್ತು ಅವರನ್ನು ಕನ್ನಡ ಸಂಸ್ಕೃತಿ ರೂಪಿಸಿಕೊಂಡಿರತಕ್ಕಂತಹ ಕ್ರಮ, ಅವರನ್ನು ಹೀಗೇ ಓದಬೇಕು ಎನ್ನುವ ಒತ್ತಾಯಗಳು ಇವುಗಳನ್ನು ಪಲ್ಲಟಗೊಳಿಸಲು ಸಾಧ್ಯವಿದೆಯೇ? ಅಗತ್ಯವಿದೆಯೇ? ಅಗತ್ಯವೆಂದರೆ ಈ ಕಾಲದ ಅಗತ್ಯವನ್ನು ಕುರಿತು ಯೋಚನೆ ಮಾಡುವಂತಹ ಬರಹಗಳು ಇವು, ಆದರೆ ಆ ಉದ್ದೇಶದಿಂದಾಗಿ ಬರೆದ ಬರಹಗಳಲ್ಲ. ಎಲ್ಲ ಬರಹಗಳನ್ನೂ ಬರೆದ ಮೇಲೆ ಅವುಗಳನ್ನು ಕೂಡಿಸುವ ಸೂತ್ರ ಏನಾದರೂ ಇದ್ದರೆ ಅದು ಹೀಗೆ ಇರಬಹುದು. ಎಂದು ನಾನಂದುಕೊಂಡಿದ್ದೀನಿ” ಎಂದು ಸ್ಪಷ್ಟಪಡಿಸಿದರು.

“ಕುವೆಂಪು ಅವರನ್ನು ಅವರ ಬರಹಗಳಿಂದ ಬೇರ್ಪಡಿಸಿ ನೋಡಲು ಸಾಧ್ಯವೇ? ಅದು ಅಗತ್ಯವೇ? ಇದು ಭಯ ಹುಟ್ಟಿಸುತ್ತದೆ. ಯಾಕೆಂದರೆ ಹಾಗೆ ಮಾಡುವುದು ಸರಿಯಲ್ಲ ಎಂಬುದು ಕನ್ನಡ, ಸಂಸ್ಕೃತ ವಿಮರ್ಶೆಯ ನಿಲುವು. ಒಬ್ಬ ಬರಹಗಾರ, ಚಿಂತಕನಿಂದ ಅವನ ಬರಹ ಚಿಂತನೆಗಳನ್ನು ವಿಘಟನೆಗೊಳಿಸಬಾರದು, ಒಟ್ಟಿಗೇ ಓದಬೇಕು ಎನ್ನುವುದು ಕನ್ನಡ ಸಂಸ್ಕೃತಿಯೊಳಗೆ ನೆಲೆಗೊಂಡಿರುವಂತಹ ಒಂದು ಒಪ್ಪಿಗೆ. ಇವು, ಆ ಒಪ್ಪಿಗೆಗೆ ಧಕ್ಕೆಯನ್ನು ಒದಗಿಸುವ ರೀತಿಯ ಬರಹಗಳು ಇರಬಹದೇನೋ? ಆದರೆ ಹಾಗೆ ಹೇಳುತ್ತಿರುವ ನನಗೆ ಹಿಂಜರಿಕೆ ಇರಬಹುದಾರೂ, ಸಂದೇಹವಿಲ್ಲ. ನಾನು ಹೇಳುತ್ತಿರುವುದರ ಬಗ್ಗೆ ನಂಬಿಕೆ ಇದೆ. ಒಪ್ಪಿಗೆ ಇದೆ. ಓದುಗರು ಅದನ್ನು ಹೇಗೆ ಗ್ರಹಿಸುತ್ತಾರೆ ಎನ್ನುವುದರ ಬಗೆಗೆ ಹಿಂಜರಿಕೆ ಇದೆ. ಕೆಲವರು ಇದನ್ನು ತಪ್ಪು ಕಾರಣಗಳಿಗಾಗಿಯೂ ಒಪ್ಪಿಕೊಂಡುಬಿಡಬಹುದು. ಉದಾಹರಣೆಗೆ, ಕುವೆಂಪು ವಿರೋಧಿಗಳು ಇದರಿಂದ ಉತ್ಸಾಹಿತರಾದರೆ ಅದು ತಪ್ಪು. ಇದು ಯಾರ ವಿರೋಧವೂ ಅಲ್ಲ, ಸಮರ್ಥನೆಯೂ ಅಲ್ಲ ಇವು ನನ್ನ ಗ್ರಹಿಕೆ ಮತ್ತು ಈ ಕಾಲದ ಗ್ರಹಿಕೆಯನ್ನು ಮಂಡಿಸುವ ಉದ್ದೇಶ ಮಾತ್ರ. ಇದು ನನ್ನ ಪುಸ್ತಕದ ಬಗ್ಗೆ ಒಂದು ಅಪಾಲಜಿ ಕೂಡ ಇರಬಹುದು ಅಥವಾ ಡಿಫೆನ್ಸ್ ಕೂಡ ಇರಬಹುದು. ಅದನ್ನು (ಡಿಫೆನ್ಸ್) ಕ್ರಿಯೇಟ್ ಮಾಡಿಕೊಳ್ಳುವ ಅಗತ್ಯ ಈ ಬರಹಗಳಿಗೆ ಇರಬಹುದು.
ಕುವೆಂಪು ಅವರ ಬಿಡುಗಡೆ ಮತ್ತು ಸಮಾನತೆಯ ಕಲ್ಪನೆಗಳನ್ನು ತೆಗೆದುಕೊಂಡರೆ, ಅವು ಒಂದನ್ನೊಂದು ಹಿಂಬಾಲಿಸುತ್ತವೆಯಾ? ಅಂದರೆ ಬಿಡುಗಡೆಯಾದ ತಕ್ಷಣವೇ ಸಮಾನತೆ ಸೃಷ್ಟಿಯಾಗಿ ಬಿಡುತ್ತದೆಯೇ? ಸಮಾನತೆ ಸೃಷ್ಟಿಯಾಗದ ಹೊರತು ಬಿಡುಗಡೆ ಸಾಧ್ಯವಿಲ್ಲವಾ? ಈ ಗತಿ ತಾರ್ಕಿಕ ಪ್ರಶ್ನೆ ಕವೆಂಪು ಅವರನ್ನು ಕಾಡಿಸಿದ ಹಾಗಿಲ್ಲ. ಅದು ತಪ್ಪಲ್ಲ ಅವರು ಭಾವನಾವಾದಿ ( idealist). ಆದುದರಿಂದಲೇ ಅಂತಹ ಚಿಂತನೆಗಳು ಅವರಿಗೆ ಸಾಧ್ಯವಾಯಿತು. ಅವರ ಚಿಂತನೆಯ ಈ ಸ್ವರೂಪವನ್ನು ನಾವು ಗುರುತಿಸಬೇಕಾಗುತ್ತದೆ. ಅವರು ಹಾಗಿದ್ದಾರೆ ಎಂಬುದನ್ನು ಗುರುತಿಸದೇ ಹೋದರೆ ಅವರ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಕ್ರಮದಲ್ಲಿ ನಾವು ಸೋಲುತ್ತೇವೆ” ಎಂದು ಹೇಳಿದರು.
ನಾವು ಕನ್ನಡ ಮೇಷ್ಟ್ರುಗಳು ನಲವತ್ತು ವರುಷಗಳ ಹಿಂದೆ ಮಾಡಿಟ್ಟುಕೊಂಡ ನೋಟ್ಸುಗಳನ್ನೇ, ಅವು ಜೀರ್ಣವಾಗಿ ಉದುರುತ್ತಿದ್ದರೂ ಅವನ್ನೇ ತರಗತಿಯ ಮೇಜಿನಮೇಲೆ ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತೇವೆ. ಬೇರೆಯ ವಿಚಾರಗಳನ್ನು ಓದುವುದೂ ಇಲ್ಲ ಇನ್ನು ಸ್ವತಃ ಚಿಂತಿಸುವುದೆಂತು?ಅಪ್ಡೇಟ್ ಆಗುವುದಿಲ್ಲ. ಕೆ.ವಿ.ಎನ್ ಮೇಷ್ಟ್ರಿಗೆ ಇಂತಹ ಅಪ್ಡೇಟ್ ಆಗದ ಚಿಂತನೆಗಳ ಬಗೆಗೆ ವಿರೋಧವಿದೆ. ಕುವೆಂಪು ಸಾಹಿತ್ಯವನ್ನು ಹೀಗೆ ಪ್ರಶ್ನಿಸುವುದರ ಮೂಲಕವೇ ಅನ್ಯತ್ರ ಅವರ ಬರಹಗಳ ಉದ್ದೇಶಗಳನ್ನು ಹಡುಕುವುದರ ಮೂಲಕವೇ ಅವರನ್ನು ಬೆಳೆಸುತ್ತೇವೆ. ಕಾಲದಿಂದ ಕಾಲಕ್ಕೆ ನಮ್ಮ ಗ್ರಹಿಕೆ ಬದಲಾಗುತ್ತಲೇ ಪ್ರಸ್ತುತವಾಗಬೇಕಾಗಿದೆ ಎನ್ನುವ ಅವರು “ನಾನು ನಂಬುವ ಗತಿ ತಾರ್ಕಿಕ ಚಿಂತನಾಕ್ರಮದಲ್ಲಿ theory ಮತ್ತು practice ಗಳನ್ನು ನೀವು ನಿರಂತರವಾಗಿ ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ. ಪ್ರಾಕ್ಟೀಸಿನಿಂದ ಸಿದ್ಧಾಂತವನ್ನು ಪರೀಕ್ಷೆಗೆ ಒಳಪಡಿಸಬೇಕು. ಪ್ರಾಕ್ಟೀಸಿನಿಂದ ಸಿದ್ಧಾಂತವನ್ನು ಪರಿಷ್ಕಾರಗೊಳಿಸಕೊಳ್ಳಬೇಕು, ಮತ್ತೆ ಆ ಪರಿಷ್ಕರಿಸಿದ ಥಿಯರಿಯನ್ನು ಪ್ರಾಕ್ಟೀಸ್ ಮಾಡಬೇಕು. ಪ್ರಾಕ್ಟೀಸಿನಿಂದ ಥಿಯರಿಯನ್ನು ಪರಿಷ್ಕಾರಗೊಳಿಸಬೇಕು. ಹೀಗೆ Theory ಮತ್ತು practice ಗಳ ನಡುವೆ ನಿರಂತರವಾಗಿ ಒಂದು ಪ್ರಕ್ರಿಯಾತ್ಮಕ ಸಂಬಂಧ ಉಂಟಾಗಬೇಕು ಎನ್ನುವ ಮಾರ್ಗದಲ್ಲಿ ನಂಬಿಕೆ ಇರುವಂಥ” ವರು ಅವರು.
ಕೆ.ವಿ.ಎನ್ ಅವರ ವಿದ್ರೋಹ ಚಿಂತನೆಯ ಮೂಲ ಇದುವೇ ಆಗಿದೆ ಎನ್ನುವುದು ನನ್ನ ಗ್ರಹಿಕೆ.

ಇನ್ನು ಕನ್ನಡ ನುಡಿ ರಚನೆʼಯ ಬಗ್ಗೆ ಅವರು ಹಂಚಿಕೊಂಡ ಮಾತುಗಳು ಹೀಗಿವೆ:
ʼಕನ್ನಡ ನುಡಿ ರಚನೆ ʼ ಈ ಪುಸ್ತಕದ ಬಗ್ಗೆ ಅವರಿಗೆ ಇನ್ನೂ ಹೆಚ್ಚಿನ ಆತಂಕವಿದೆ. ೪೦-೫೦ ವರ್ಷಗಳಲ್ಲಿ ಹೆಚ್ಚಿನ ತಿರಸ್ಕಾರಕ್ಕೆ ಒಳಗಾಗಿರುವ ವಲಯವೆಂದರೆ ಅದು ನುಡಿಯ ಅಧ್ಯಯನ ಎನ್ನುತ್ತಾರೆ. “ನುಡಿಯ ಬಗೆಗಿನ ಬರಹಗಳು ಬಂದಿಲ್ಲವೆಂತಲ್ಲ. ಅಗಾಧ ಪ್ರಮಾಣದ ಬರಹಗಳು ಬಂದಿವೆ. ಆದರೆ ನುಡಿಯನ್ನು ಅರ್ಥಮಾಡಿಕೊಳ್ಳುವ ಪರಿಕರಗಳನ್ನು ನಾವು ಸರಿಯಾಗಿ ಬಳಸಿಲ್ಲ. ೭೫ ವರುಷಗಳಲ್ಲಿ ಜಾಗತಿಕವಾಗಿ ನುಡಿಯನ್ನು ವ್ಯಾಖ್ಯಾಸನಿಸುವಂತಹ, ಗ್ರಹಿಸುವಂತಹ, ವಿವರಿಸುವಂತಹ ನೆಲೆಗಳಲ್ಲಿ ಏನೆಲ್ಲ ಬದಲಾವಣೆಗಳಾಗಿವೆ ಅವು ಕನ್ನಡ ಚಿಂತನೆಯೊಳಗೆ ಇಳಿದೇ ಇಲ್ಲ. ಇನ್ನೂ ಕೂಡ ನಾವು ಹಳೆಗಾಲದ ಚಿಂತನೆಗಳಿಗೆ ಕಟ್ಟುಬಿದ್ದಿದ್ದೇವೆ. ಇವತ್ತೂ ಕೂಡ ಕನ್ನಡದಲ್ಲಿ ಬರುತ್ತಿರುವ ವ್ಯಾಕರಣದ ಪುಸ್ತಕಗಳನ್ನು ನೋಡಿದರೆ ನಾವು ಎಲ್ಲಿದ್ದೇವೆ? ಎನಿಸುತ್ತದೆ. ನಾವು ಮತ್ತೆ ಮತ್ತೆ ಶಾಲಾಮಕ್ಕಳಲ್ಲಿ ನುಡಿಯ ಬಗ್ಗೆ ಕೊಡುತ್ತಿರುವ ಚಿಂತನೆಗಳು, ಅವರಲ್ಲಿ ಬೇರೂರಿಸುತ್ತಿರುವ ಚಿಂತನೆಗಳು ಒಂದೋ ತಪ್ಪು, ಇಲ್ಲವೇ ಅಪೂರ್ಣ. ಅವರಲ್ಲಿ ತಪ್ಪು ಕಲ್ಪನೆಗಳನ್ನು, ಅಪೂರ್ಣ ಕಲ್ಪನೆಗಳನ್ನು ಬಿತ್ತುತ್ತಿದ್ದೇವೆ. ಒಂದು ಸಿದ್ಧಾಂತದ ಪರಿಪೂರ್ಣತೆ ಎನ್ನುವುದು ಅದರ ವ್ಯಾಖ್ಯಾನದ ಮೇಲೆ ನಿಂತಿದೆಯೋ ವಿವರಗಳ ಮೇಲೆ ನಿಂತಿದೆಯೋ? ಒಂದು ಸಿದ್ಧಾಂತಕ್ಕೆ ಪರಿಪೂರ್ಣತೆ ಬರುವುದು ಕೇವಲ ವಿವರಣಾತ್ಮಕ (descriptve) ನೆಲೆಯಿಂದ ಮಾತ್ರವಲ್ಲ, ಅದಕ್ಕೆ ವ್ಯಾಖ್ಯಾನನ್ನೂ ನಾವು ಕೊಡಬೇಕು (explainatory). ಉದಾಹರಣೆಗೆ ಮಳೆ+ ಕಾಲ= ಮಳೆಗಾಲವೇ ಏಕಾಗಬೇಕು. ‘ಕ’ ಶಬ್ದಕ್ಕೆ ‘ಗ’ ಶಬ್ದವೇ ಏಕೆ ಆದೇಶವಾಗಿ ಬರಬೇಕು, ಬೇರೆ ಶಬ್ದ ಯಾಕಿಲ್ಲ? ಇಂತಹ ಪ್ರಶ್ನೆಗಳನ್ನು ಮಕ್ಕಳು ಕೇಳುವುದೂ ಇಲ್ಲ, ನಾವು ಹೇಳುವುದೂ ಇಲ್ಲ. ಇದಕ್ಕೆ ಉತ್ತರಗಳು ಇಲ್ಲವೆಂತಲ್ಲ. ಇವೆ, ಆದರೆ ನಾವು ಹುಡುಕ ಬೇಕು!
ಒಂದು ಸಿದ್ಧಾಂತವನ್ನು ವರ್ಣಿಸಿದರೆ ಸಾಲುವುದಿಲ್ಲ, ಅದು ಯಾಕೆ ಹೀಗೆ ಎಂದು ವ್ಯಾಖ್ಯಾನಿಸಬೇಕು. ಸಿದ್ಧಾಂತವೊಂದು ಪರಿಪೂರ್ಣವಾಗುವುದು ಹೀಗೆ. ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದಲ್ಲಿ ಭಾಷೆಯ ಅಧ್ಯಯನವನ್ನು ಒಂದು ಮುಖ್ಯ ವಿಷಯವಾಗಿ ಬೋಧಿಸುವುದಿಲ್ಲ. ಐಚ್ಛಿಕಗಳಾಗಿ ಬೋಧಿಸಬಹುದು. ಆದರೆ ಮೈಸೂರು ಮತ್ತು ಕರ್ನಾಟಕ ವಿ.ವಿ.ಗಳಲ್ಲಿ ಭಾಷಾಶಾಸ್ತ್ರವನ್ನೇ ಒಂದು ವಿಶೇಷ ವಿಷಯವನ್ನಾಗಿ ಅಧ್ಯಯನ ಮಾಡುವ ಶಾಖೆಗಳಿವೆ. ಆದರೆ ಅಲ್ಲಿ ಕೂಡ ವಿದೇಶಿ ವಿದ್ಯಾರ್ಥಿಗಳು ತುಂಬಿಕೊಂಡಿದ್ದಾರೆ. ಅಲ್ಲಿ ಕೂಡ ಕನ್ನಡ ಅಧ್ಯಯನದ ವಿಷಯಗಳ ಬಗ್ಗೆ ಬಹಳ ಕಡಿಮೆ ವಿಚಾರಗಳು ದೊರೆಯುತ್ತವೆ. ಇದು ಕನ್ನಡದ ತಿಳಿವಳಿಕೆಯ ಮಟ್ಟಿಗೆ ದೊಡ್ಡ ಕೊರತೆಯಾಗಿದೆ.
ಭಾಷಾಶಾಸ್ತ್ರ ಒಂದು ಒಣ (dry) ವಿಷಯವೆಂಬ ತಿರಸ್ಕಾರವಿದೆ. ಆದರೆ ನನಗೆ ಹಾಗೆನಿಸಿಲ್ಲ ಅದು most exciting area. ಸರಿಯಾದ ಪರಿಕರಗಳ ಮುಖಾಂತರ ನೀವು ಅದರ ಒಳ ಹೊಕ್ಕರೆ ಮಾತ್ರ ಗೊತ್ತಾಗುತ್ತದೆ. ಭಾಷೆಯ ರಚನೆ ಮತ್ತು ಛಂದಸ್ಸಿನ ಬಗೆಗೆ ಇರುವ ನಂಟನ್ನು ನೀವು ಗುರುತಿಸಿದಾಗ, most exciting part ಅದು ಎಂದು ಹೇಳುತ್ತಲೇ ಕುಮಾರವ್ಯಾಸನ ಭಾಮಿನಿ ಷಟ್ಪದಿ ೩-೪ ಮಾತ್ರೆಯ ಲಯವನ್ನು ಉದಾಹರಿಸುತ್ತಾರೆ. ಅವನ ಏಳು ಸಾವಿರ ಪದ್ಯಗಳಲ್ಲಿರುವ (ಎಲ್ಲಿಯೂ ಒಂದು ಲಘು ಒಂದು ಗುರುವಿನ ರಚನೆ ಇಲ್ಲದಿರುವುದು) ವಿಶೇಷವನ್ನು ವಿವರಿಸುತ್ತಾ ಅದಕ್ಕೆ ಕಾರಣವನ್ನು ಕನ್ನಡ ಭಾಷೆಯ ರಚನೆಯಲ್ಲಿಯೇ ಹುಡುಕುತ್ತಾರೆ. (ನಾನು ಭಾಷಾ ಶಾಸ್ತ್ರದ ವಿದ್ಯಾರ್ಥಿಯಾಗದ ಕಾರಣ ಹೆಚ್ಚಿನ ವಿವರಗಳು ನನಗೆ ಅರ್ಥವಾಗಲಿಲ್ಲ) ಭಾಷೆಯ ರಚನೆ ಎನ್ನುವುದು ಛಂದಸ್ಸಿಗೆ ಹೇಗೆ ಒಂದಕ್ಕೊಂದು ಹೊಂದಿಕೊಂಡಿರುತ್ತದೆ ಎನ್ನುವುದು ಆಶ್ಚರ್ಯಕರವಾದುದು. “ಇದನ್ನು ಅರ್ಥ ಮಾಡಿಕೊಳ್ಳದೇ ನಾವು ಭಾಷೆಯನ್ನು ಬಳಸುತ್ತಿದ್ದೇವೆ, ಬೆಳೆಸುತ್ತಿದ್ದೇವೆ ಎಂಬುದೆಲ್ಲಾ ಮೇಲ್ಪದರದ ಮಾತುಗಳು”. ಎನ್ನುತ್ತಾರೆ.
ಮಕ್ಕಳಿಗೆ ಶಾಲೆಯಲ್ಲಿ ವ್ಯಾಕರಣವನ್ನು ಬೋಧಿಸಬೇಕಾಗಿಲ್ಲ ಎಂಬ ಲೇಖನದ ಬಗೆಗೆ ಅವರಿಗೆ ಆತಂಕವಿದೆ. ಎನ್ನುತ್ತಾರೆ. ಅದು ತಗಾದೆಗೆ ಒಳಗಾಗಬಹುದಾದ ಲೇಖನ. “ಇರಲಿ ತಗಾದೆ ಬರಲಿ ಪರವಾಗಿಲ್ಲ ಎಂದೂ ಹೇಳುತ್ತಾರೆ.
ತಗಾದೆಗೆ ಒಳಪಡುವ ಇನ್ನೊಂದು ವಿಚಾರವೆಂದರೆ “ಕನ್ನಡ ಎನ್ನುವುದು ನಮ್ಮ ಗುರುತೇ? ನಮ್ಮ ದೇಹ, ಬಣ್ಣ, ವಿದ್ಯಾರ್ಹತೆ ಮುಂತಾದ ಅಸ್ಮಿತೆ ಇರುವಹಾಗೆ ಕನ್ನಡವೂ ಒಂದು ಅಸ್ಮಿತೆಯೇ ಅಥವಾ ಆಕಸ್ಮಿಕವೇ” ಎನ್ನುವ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತಾರೆ.
ಕನ್ನಡದ ಅಸ್ಮಿತೆಗಾಗಿ ದಂಗೆಗಳೆದ್ದಿವೆ,ಹೊತ್ತಿ ಉರಿದಿವೆ. ಅಂತಹ ಅನಾಹುತ ಹೇತುಗಳು, ಕನ್ನಡದ ಚುಕ್ಕಾಣಿಯನ್ನು ಹಿಡಿದ್ದೇವೆ ಎಂದು ಭಾವಿಸಿರುವ ವಿದ್ವಾಂಸರು, ಚಳವಳಿಗಾರರು ಕೆ.ವಿ.ಎನ್. ಮೇಷ್ಟ್ರ ಮಾತುಗಳನ್ನು ಕೇಳಬೇಕು! ಕನ್ನಡ ಪ್ರೀತಿಯ ಭ್ರಮೆಯಲ್ಲಿ ಕೊಚ್ಚಿಕೊಂಡು ಹೋಗುವವರ ಭ್ರಮೆ ಹರಿಯಬಹುದು.
ಪ್ರಶ್ನಾತೀತವಾದ ಯಾವ ವಿಚಾರವೂ, ಯಾವ ಲೇಖಕರೂ ಬೆಳೆಯಲು ಸಾಧ್ಯವಿಲ್ಲ. ಪ್ರಶ್ನೆಗಳನ್ನು ಎದುರಿಸುತ್ತಲೇ ಕಾಲದ ಅಗತ್ಯಗಳಿಗನುಣವಾಗಿ ನವೀಕರಿಸಿಕೊಳ್ಳತ್ತಲೇ ವಿಕಾಸಹೊಂದಬೇಕು. ಆಗ ಆ ಪರಂಪರೆ ಅರ್ಥಪೂರ್ಣವಾಗುತ್ತದೆ, ಎಂಬ ಆಶಯ ಕೆ.ವಿ.ಎನ್. ಮೇಷ್ಟ್ರ ʼವಿದ್ರೋಹ ಚಿಂತನೆಯʼ ಆಶಯವಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ನಮ್ಮ ಸಂಸ್ಕೃತಿ ಚಿಂತನೆಗೂ ಅದರಲ್ಲೂ ಮುಖ್ಯವಾಗಿ ಧಾರ್ಮಿಕ ಚಿಂತನೆಗಳಿಗೂ ಬಹಳವೇ ಅನ್ವಯವಾಗುವಂತಹ ಮಾತುಗಳು.
ಈ ಪುಸ್ತಕ ಇನ್ನಷ್ಟೇ ಓದಬೇಕಾಗಿದೆ. ಈ ಪುಸ್ತಕಗಳನ್ನು ನೋಡಿದ ಕೂಡಲೇ “ಓದುಗರು ಪಕ್ಕಕ್ಕೆ ಇಟ್ಟುಬಿಡುತ್ತಾರೆ” ಎಂದು ತಮಗೆ ತಾವೇ ಕುಶಾಲು ಮಾಡಿಕೊಂಡು, ತಮ್ಮ ಪುಸ್ತಕದ ʼಮೌಲ್ಯ ಮಾಪನ ಮಾಡಿಕೊಂಡುʼ ನಗೆಯಾಡಿದ್ದಾರೆ.
ತಮ್ಮ ಪುಸ್ತಕಗಳನ್ನು ಓದಲು ಪ್ರೇರೇಪಿಸುವವರನ್ನು ಕಂಡಿರುವೆ ಆದರೆ ಪುಸ್ತಕದ ಬಿಡುಗಡೆಯ ವೇದಿಕೆಯಲ್ಲೇ ಹೀಗೆ ತಮ್ಮ ಓದುಗರನ್ನು demotivate ಮಾಡುವವರನ್ನು ಕಂಡಿಲ್ಲ. ದಿವ್ಯನಿರ್ಲಕ್ಷ್ಯ ತಾನೇ ವರಕವಿಯ ಪಂಥ? ಪುಸ್ತಕದ ಎತ್ತರಕ್ಕೆ ಓದುಗರೂ ಏರಲು ಪ್ರಯತ್ನಿಸಬೇಕಲ್ಲವೇ ಸರ್? ನಾನೂ ಪ್ರಯತ್ನಿಸುವೆ.
- ಡಾ. ಗಿರಿಜಾ ಶಾಸ್ತ್ರಿ
