ಕತೆಗಾರ ಗೋಪಾಲಕೃಷ್ಣ ಕುಂಟಿನಿ ಅವರ ‘ವಿಲೇಜ್ ವರ್ಲ್ಡು’ ಪುಸ್ತಕದ ಕುರಿತು ಹಿರಿಯ ಪತ್ರಕರ್ತ ಶ್ಯಾಮ್ ಸುಂದರ್ ಅವರು ಬರೆದ ಮುನ್ನುಡಿ ಇಲ್ಲಿದೆ ತಪ್ಪದೆ ಮುಂದೆ ಓದಿ…
ಪುಸ್ತಕ : ವಿಲೇಜ್ ವರ್ಲ್ಡು
ಲೇಖಕರು : ಗೋಪಾಲಕೃಷ್ಣ ಕುಂಟಿನಿ
ಪ್ರಕಾಶನ : ಸ್ವಪ್ನ ಪ್ರಕಾಶನ
ಬೆಲೆ : ೧೦೮ ರೂಪಾಯಿ
ಬಹಳ ವರ್ಷಗಳ ಹಿಂದಿನ ವಿಷಯ. ಶ್ಯಾಮ್ ಆಗ ದಟ್ಸ್ ಕನ್ನಡದ ಎಡಿಟರ್. ಆಗಷ್ಟೇ ಡಿಜಿಟಲ್ ಪತ್ರಿಕಾರಂಗ ಮೂಡುತ್ತಿದ್ದ ಹೊತ್ತು. ಶ್ಯಾಮ್ ನನಗೆ ಇನ್ನಷ್ಟೇ ಪರಿಚಿತರಾಗಬೇಕು. ಯಾವುದೋ ಒಂದು ಭೇಟಿಯಲ್ಲಿ ಜೋಗಿ ಶ್ಯಾಮ್ ಗೆ ನನ್ನ ನಾಲ್ಕು ಸಾಲು ಪದ್ಯಗಳನ್ನು ಓದಿಸಿದ್ದ. ಶ್ಯಾಮ್ ಮರುದಿನವೇ ನನ್ನ ಪದ್ಯಗಳನ್ನೆಲ್ಲಾ ಪ್ರಕಟಿಸಿದರು. ಆಮೇಲೆ ನಾನೂ ಅವರು ಭೇಟಿಯಾಗಲು ಆರು ವರ್ಷ ಬೇಕಾಯಿತು. ಅಲ್ಲಿಂದ ನಮ್ಮ ಸ್ನೇಹದ ದೋಣಿ ಶುರುವಾಯಿತು.
ನೋಡ್ತಾ ನೋಡ್ತಾ ಶ್ಯಾಮ್ ನಮ್ಮ ಕುಟುಂಬದ ಸದಸ್ಯರೇ ಆದರು. ‘ನಾನು ಶ್ಯಾಮ್ ನೀನು ಶ್ಯಾಮ್ಲಾ ಇಬ್ರಲ್ಲೂ ಶ್ಯಾಮ್ ಇದೆ’ ಎಂದು ಶ್ಯಾಮಲಾಗೆ ಹೇಳೋರು. ಒಮ್ಮೆ ನನ್ನ ಮಗ ಉಪ್ಪಿನಂಗಡಿಯಿಂದ ಬೆಂಗಳೂರಿಗೆ ನಾಲ್ಕೂವರೆ ಗಂಟೆಯಲ್ಲಿ ಬಂದೆ ಎಂದಾಗ, ಶ್ಯಾಮಲಾಗೆ ಫೋನ್ ಮಾಡಿ, ‘ಶ್ಯಾಮ್ಲಾ, ಶೌರಿಗೆ ಹೇಳು, ಅಷ್ಟೊಂದು ತುರ್ತು ಏನಿರುತ್ತೆ? ನಿಧಾನವಾಗಿ ಕಾರು ಓಡಿಸಬೇಕು. ಓಡ್ಸಕ್ಕಾಗಲ್ಲ ಅಂದರೆ ಬಸ್ ಹತ್ತಲಿ’ ಎಂದಿದ್ದರು.
ವಿದ್ಯಾಪೀಠದದ ಬಳಿ ಇರುವ ಅವರ ಮನೆಗೆ ಹೋದಾಗಲೆಲ್ಲಾ ‘ಶ್ಯಾಮ್ಲಾ, ಟೀ ಮಾಡು, ಶ್ಯಾಮ್ಲಾ ಬಜ್ಜಿ ಮಾಡು” ಎಂದು ಅವರು ಕಿಚನ್ ನ ಶ್ಯಾಮಲಾಗೆ ಬಿಟ್ಟುಕೊಡುತ್ತಿದ್ದರು. ನಾವೆಲ್ಲರೂ ಜೊತೆಯಾಗಿ ಫಳಾರ ಮಾಡುತ್ತಿದ್ದೆವು. ನನ್ನ ಮಗಳಿಗೆ ಇಷ್ಟ ಎಂದು ಪ್ರತಿಸಾರೆಯೂ ಅವರು ಕೇಕ್ ಐಸ್ಕ್ರಿಂ ತರುತ್ತಿದ್ದರು. ಅವರ ಮನೆ ಮತ್ತು ಜೀವನದ ವೈಭವ ನೋಡಿ ಆಗಷ್ಟೇ ಬೆಂಗಳೂರಿಗೆ ಬಂದಿದ್ದ ನನ್ನ ಮಗ ತಾನೂ ಒಂದು ಮನೆ ಮಾಡಿಕೊಂಡ.
ಜೀವನದಲ್ಲಿ ಕೆಲವೊಂದನ್ನು ಮಾಡಬೇಕು, ನೋಡಬೇಕು ಎಂಬುದು ಅವರ ದಿವ್ಯಮಂತ್ರ. ಶ್ಯಾಮ್ ಈಗ ನಮ್ಮನ್ನು ಬಿಟ್ಟುಹೋಗಿದ್ದಾರೆ. ಅವರ ನಿರ್ಯಾಣ ನಮ್ಮನ್ನು ಬಹುಕಾಲ ಕಾಡಲಿದೆ. ಅತ್ಯಂತ ಮನೋಹರ ವ್ಯಕ್ತಿತ್ವದ ಶ್ಯಾಮ್ ಗೆ ತುಂಬುವಿದಾಯ. ಹೋಗುತ್ತೇನೆ ಎಂದು ಹೊರಟವರನ್ನು ತಡೆಯಬಾರದು. ಹೋಗಿ ಎನ್ನಬೇಕು, ಬನ್ನಿ ಎಂದು ಹೇಳಬಾರದು, ಹೇಳುವುದಿಲ್ಲ.
ನಿಮ್ಮ ಪ್ರಯಾಣ ಸುಖಕರವಾಗಿರಲಿ.
By the way ನನ್ನ ವಿಲೇಜ್ ವರ್ಲ್ಡು ಪುಸ್ತಕಕ್ಕೆ ಅವರು ಬರೆದ ಮುನ್ನುಡಿ ಇಲ್ಲಿದೆ.ಅವರ ಬರಹದ ಸರಸಕ್ಕೆ ಇದು ಉದಾಹರಣೆ ಅಂತ ನಿಮಗೆ ಓದಿಸುತ್ತಿದ್ದೇನೆ.

ಚಿತ್ರದುರ್ಗಕ್ಕೂ ಉಪ್ಪಿನಂಗಡಿಗೂ ಮನೋಮಾರ್ಗದಲ್ಲಿ ಮೈನಸ್ ಎಂಟು ನಿಮಿಷ. ನಮ್ಮೂರು ದುರ್ಗದಲ್ಲಿ ದಾಳಿಂಬೆ, ಕಡ್ಲೇಕಾಯಿ, ಜೋಳ, ಉಪ್ಪಿನಂಗಡಿಯಲ್ಲಿ ವ್ಯಾಪಕವಾಗಿ ಅಡಕೆ, ತೆಂಗು, ಬತ್ತ, ಬಿತ್ತಿದರೆ ಬದನೆಕಾಯಿ. ದುರ್ಗದ ಹಾಗೆಯೇ ಉಪ್ಪಿನಂಗಡಿಯೂ ಚಿತ್ರವತ್ತು. ಉಪ್ಪಿನ ಹಾಗೆಯೇ ದುರ್ಗವೂ ಶ್ರಮಿಕರ ಸ್ವರ್ಗ, ಸೋಮಾರಿಗಳ ಪರಮಸ್ವರ್ಗ.
ಹೀಗಿರುವಾಗ ಗೋಪಾಲಕೃಷ್ಣ ಎಂಬ ಉಪ್ಪಿನಂಗಡಿಯ ಸುರಸುಂದರ ಬರೆದಿರುವ ಪರಮ ಸುಂದರ ಕತೆಗಳನ್ನು ಓದಿ ನಾನು ಬೆರಗಾಗದೇ ಹೇಗಿರಲಿ. ಕುಂಟಿನಿ ಹೇಗೆ ಬರೆಯುತ್ತಾರೆ ಅಂದರೆ ನನಗೆ ನನ್ನ ಬಾಲ್ಯ ನೆನಪಾಗುವಂತೆ, ನನ್ನ ಯೌವನ ಮರುಕಳಿಸುವಂತೆ ಮತ್ತು ವರ್ತಮಾನದ ಕೊರಡು ಕೊನರುವಂತೆ.
ಹಂಸಲೇಖಾ ಬರೆದ ಒಂದು ಹಾಡು ನೆನಪಾಗುವುದು. ನಿಮ್ಮೂರ ಚಂದಿರನೇ ನಮ್ಮೂರಲಿ, ನಮ್ಮೂರ ಮನ್ಮಥನೇ ನಿಮ್ಮೂರಲಿ ಅಂತ ಬೇರೆ ಬೇರೆ ಊರಿನಿಂದ ಬಂದ ಇಬ್ಬರು ಮಿತ್ರರು ಹಾಡುತ್ತಾರೆ. ಕುಂಟಿನಿಯ ವಿಲೇಜಿನ ಕತೆಗಳಲ್ಲಿ ಬರುವ ಅಪ್ಝಲ್ ಖಾನ್ ನಮ್ಮೂರಿನ ರೆಹಮಾನ್. ಅವರಿಗೆ ಕತೆ ಹೇಳುವ ಪುರುಷೋತ್ತಮ ಮೇಷ್ಟರು ನಮ್ಮ ಪಕ್ಕದಮನೆಯ ಸೋಮಶೇಖರ. ಶಿವಾನಂದರ ಪೌಳಿ ಮನೆಗೆ ಬಂದ ಚಿರತೆ ನಮ್ಮೂರಿಗೆ ತಪ್ಪಿ ಬಂದ ಹುಲಿ.
ಹಾಗನ್ನಿಸುವಂತೆ ಕುಂಟಿನಿ ಬರೆಯುತ್ತಾರೆ. ಇವು ನಿಮ್ಮೂರಿನ ಕತೆಗಳೂ ಆಗಬಹುದು ಅಥವಾ ಈ ಕತೆ ನಡೆದ ಜಾಗವೇ ನಿಮ್ಮೂರು ಆಗಿಬಿಡಬಹುದು. ಅಪರಿಚಿತವಾದದ್ದನ್ನು ಪರಿಚಿತವಾಗಿಸುವುದು, ಪರಿಚಿತವಾದದ್ದನ್ನು ಆತ್ಮೀಯವಾಗಿಸುವುದು, ಆತ್ಮೀಯವಾಗಿದ್ದನ್ನು ಸುಂದರ ಮೌನವಾಗಿಸುವುದು, ಮೌನವನ್ನು ಮೂರ್ತರೂಪದಲ್ಲಿ ಮುಂದಿಡುವುದು ಕಥೆಯ ಕೆಲಸ ಎಂದು ನೀವೂ ನಂಬುತ್ತೀರಾದರೆ ನಾನು ಕುಂಟಿನಿಯ ಕತೆಗಳನ್ನು ನಿಮಗೆ ಶಿಫಾರಸು ಮಾಡುತ್ತೇನೆ; ದಿನಾ ಮಲಗುವ ಮುನ್ನ ಎರಡು ಚಮಚ. ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಚಿಟಿಕೆ. ನೀರು ಎಷ್ಟು ಬೇಕೋ ಅಷ್ಟು ಬೆರೆಸಿಕೊಳ್ಳಿ. ಅದು ಉಪ್ಪಿನಂಗಡಿಯ ಸಿಹಿನೀರಾದರೆ ಒಳ್ಳೆಯದು.
ಜೇನು ಶಿಕಾರಿಗೆ ಹೋದ ಗಂಗಯ್ಯನ ಕತೆಯನ್ನು ಮತ್ತೊಮ್ಮೆ ತಿರುವಿ ಹಾಕಿದೆ. ನಮ್ಮೂರಿನ ಬೆಟ್ಟದ ಕಲ್ಲುಕಲ್ಲುಗಳಲ್ಲಿ ಜೇನುಗೂಡು ಕಟ್ಟುತ್ತಿತ್ತು. ಅದನ್ನು ಸವಿಯಲು ಮನಸ್ಸು ಹಾತೊರೆಯುತ್ತಿತ್ತು. ಮಕ್ಕಳು ಕಲ್ಲೆಸೆದರೆ ಜೇನು ಸಿಗುತ್ತಿರಲಿಲ್ಲ, ಜೇನು ನೊಣ ಕುಟುಕುತ್ತಿತ್ತು. ಗಂಗಯ್ಯ ಮರಕ್ಕೆ ಹತ್ತಿ ಜೇನು ತೆಗೆದರೆ, ಅವನಿಗೆ ಕುಮ್ಮಕ್ಕು ಕೊಟ್ಟ ತಪ್ಪಿಗೆ ನಿರೂಪಕನಿಗೂ ಸಣ್ಣ ಶಿಕ್ಷೆಯಾಗುವುದಿದೆಯಲ್ಲ, ಅಲ್ಲಿ ಕುಂಟಿನಿ ಸಿಗುತ್ತಾರೆ. ಅಂಥ ಸೂಕ್ಷ್ಮ ಒಳನೋಟಗಳೇ ಇಲ್ಲಿಯ ಸುಖ.

ದುಂಬಿ ಕೂರದ ಹೂವು ರೈತನ ಕಷ್ಟಗಳನ್ನೂ ಆಸೆಗಳನ್ನೂ ಹೇಳಿತು. ಗಿಂಡಿ ಆಮೆ ಮತ್ತೊಂದು ವಿಸ್ಮಯವನ್ನು ತೆರೆದಿಟ್ಟಿತು. ಪೆಟ್ಟಿಸ್ಟ್ ಸಂತು ಕಳ್ಳನೂ ಹೌದು ಸಂತನೂ ಹೌದು. ಕಪಣೂರರಂಥ ಸಜ್ಜನರಿಗೂ ಹಾವು ಕಡಿಯುತ್ತದೆ, ಕೋತಿಗಳು ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡುವುದಿಲ್ಲ, ಹುಲಿ ಗುರಾಯಿಸಿಯೇ ಕೋತಿಗಳನ್ನು ವಶಪಡಿಸಿಕೊಳ್ಳುತ್ತದೆ- ಹೀಗೆ ನಮಗೆ ಗೊತ್ತಿಲ್ಲದ ಎಷ್ಟೊಂದು ಸಂಗತಿಗಳನ್ನು ಈ ಕತೆಗಳು ಅನಾವರಣಗೊಳಿಸುತ್ತವೆ ಎಂದು ನೋಡಿದೆ. ಎರಡು ಡಜನ್ನು ಅಚ್ಚರಿಗಳು ನನ್ನ ಮುಂದೆ ಮೆರವಣಿಗೆ ಹೊರಟವು.
ಕುಂಟಿನಿ ನನಗೆ ನಿರಂತರ ಅಚ್ಚರಿ. ಅವರು ಬರೆಯುವ ಕತೆಗಳು ಅವರಾಡುವ ಮಾತುಗಳ ಹಾಗೆ ಬಿಡುಬೀಸು. ಗ್ರಾಂಥಿಕ ಎಂಬ ಪದಕ್ಕೆ ಅವರ ಪದಕೋಶದಲ್ಲಿ ತಾವಿಲ್ಲ. ಹೇಳುತ್ತೇನೆ ಕೇಳು ಎಂಬ ಧಾಟಿ, ಹೇಳದೇ ಇದ್ದದ್ದನ್ನೂ ಕೇಳು ಎಂಬ ವಿನಯ ಯಾವುದೇ ಲೇಖಕನಿಗೆ ಭೂಷಣ. ಕುಂಟಿನಿಯ ಕತೆಗಳಲ್ಲಿ ಅವೆರಡೂ ಸ್ಥಾಯಿ.
ಈ ಕತೆಗಳು ನನ್ನನ್ನು ಅರಳಿಸಿದ ಹಾಗೆ, ನೆನಪುಗಳ ಕೆರಳಿಸಿದ ಹಾಗೆ ನಿಮ್ಮೂರಿನ ರಂಗಪ್ಪ, ಬೂಬಣ್ಣ, ಸುಬ್ರಾಯ, ಶಿವಾನಂದರನ್ನು ನಿಮಗೆ ತೋರಿಸಿಕೊಡುತ್ತಾವೆ ಎಂದು ನಂಬಿ ಇವುಗಳನ್ನು ನಿಮ್ಮ ಕೈಗೆ ದಾಟಿಸುತ್ತಿದ್ದೇನೆ. ನಾನಿಲ್ಲಿ ನೆಪ ಪಾತ್ರ. ಗೋಪಾಲಕೃಷ್ಣ ಕುಂಟಿನಿ ಎಂಬ ಕಥೆಕೂಟ ಕಟ್ಟಿದ ಉಲ್ಲಾಸದ ಹುಡುಗ ಎಷ್ಟೊಂದು ಚೆಂದದ ಕತೆಗಳನ್ನು ಬರೆದಿದ್ದಾನೆ ನೋಡಿ ಅಂತ ಕೂಗಿ ಹೇಳುವುದು ನನ್ನ ಕೆಲಸ. ಮುಂದೆ ನೀವುಂಟು, ಅವನುಂಟು, ಆಫ್ ಕೋರ್ಸ್ ನಡುವೆ ಈ ಕತೆಗಳ ಇಡುಗಂಟು.
ನಿಮ್ಮ ಪ್ರಯಾಣ ಸುಖಕರವಾಗಿರಲಿ.
ಎಸ್ಕೆ ಶಾಮಸುಂದರ
- ಗೋಪಾಲಕೃಷ್ಣ ಕುಂಟಿನಿ
