ಕಾವ್ಯದ ಮೂರು ಧ್ವನಿಗಳಲ್ಲಿ ಒಂದು ಕವಿಯದು, ಅದರಲ್ಲಿ ಮೊದಲನೆಯದು ಓದುಗನದು ಮತ್ತು ಎರಡನೆಯದು ವಿಮರ್ಶಕನದು. ಕಾವ್ಯವನ್ನು ಸಂಪೂರ್ಣವಾಗಿ ಒಂದು ಪ್ರಜ್ಞಾಪೂರ್ವಕವಾದ ಕ್ರಿಯೆ ಎಂದು ಪರಿಭಾವಿಸುವ ನನ್ನಂತಹವರಿಗೆ ಕವಿಗಿರುವುದು ವ್ಯಕ್ತಿತ್ವಲ್ಲ, ಒಂದು ಮಾಧ್ಯಮ – ಭಿನ್ನ ಭಿನ್ನ ಅಭಿಪ್ರಾಯಗಳನ್ನು ಮತ್ತು ಅನುಭವಗಳನ್ನು ನೂತನ ರೀತಿಗಳಲ್ಲಿ ಸಂಯೋಜಿಸುವ ಮಾಧ್ಯಮ ಮಾತ್ರ ಅಂಬಾ ಸತ್ಯದ ಅರಿವಿರಲೇಬೇಕಾಗುತ್ತದೆ. – ರಾಜ್ ಆಚಾರ್ಯ, ತಪ್ಪದೆ ಮುಂದೆ ಓದಿ..
ಜಗತ್ತಿನ ಜಂಜಡಗಳಿಂದ ಪಾರಾಗುವ ಏಕೈಕ ಮಾರ್ಗವೆಂದರೆ ಅದು ನನ್ನ ಪಾಲಿಗೆ ಕವಿತೆ ಮಾತ್ರ. ಹಾಗೆ ಪಾರಾಗದೇ ಹೋದರೆ ನಾನು ಜಡ್ಡುಗಟ್ಟುತ್ತಾ ಹೋಗುತ್ತೇನೆ ಎಂಬ ಸ್ಥೂಲ-ಸೂಕ್ಷ್ಮ ಅರಿವನ್ನು ಇಟ್ಟುಕೊಂಡೆ ನಾನು ಬರೆಯುತ್ತೇನೆ. ಹಾಗೆ ಭಾವಿಸಿ ಬರೆದಾಗ ಕವಿತೆ ಒಮ್ಮೊಮ್ಮೆ ಪವಾಡಸದೃಶವೆಂಬಂತೆ ಘಟಿಸಿಬಿಡುತ್ತದೆ.
ನನಗೆ ಜಗತ್ತು ಅಸ್ಪಷ್ಟವಾಗಿ ಕಾಣಿಸುತ್ತಿದೆ. ಅದನ್ನು ಸ್ಪಷ್ಟಪಡಿಸಿಕೊಳ್ಳಲಿಕ್ಕೆ ನಾನು ಬರೆಯುತ್ತೇನೆ, ಕಾವ್ಯದ ಕನ್ನಡಿಯಲಿ ನನ್ನನೇ ನಾನು ಕಾಣುವ ವ್ಯಕ್ತಿ ಕೇಂದ್ರಿತ ವಿಮರ್ಶೆಗೆ ಕಾವ್ಯದ ಬಳಕೆ ಉನ್ನತವಾದುದು ಎಂಬ ಭಾವದಿಂದ ಮೊದಲ್ಗೊಂಡು ಮತ್ತೊಮ್ಮೆ ಬರೆಯದೇ ಹೋದರೆ ಬದುಕಿರಲಾರೆ ಎಂಬ ಸತ್ಯಕೆ ತಲೆಬಾಗಿ ಬರೆಯುತ್ತೇನೆ.ಒಟ್ಟಿನಲ್ಲಿ ಬರೆಯುತ್ತೇನೆ ಬದುಕುತ್ತೇನೆ, ಬದುಕುತ್ತಲೆ ಬರೆಯುತ್ತೇನೆ, ಬರೆಯುತ್ತಲೇ ಬದುಕುತ್ತೇನೆ ಅಷ್ಟೇ.
ನನ್ನ ಮಟ್ಟಿಗೆ ನನ್ನೊಳಗಿನ ಉತ್ತರಿಸಲಾಗದ ಪ್ರಶ್ನೆಗಳಿಗೆ, ಪ್ರಶ್ನಿಸಲಾಗದ ಉತ್ತರಗಳಿಗೆ ನೆಲೆ ಹುಡುಕುವ ಒಂದು ಪುಟ್ಟ ಪ್ರಯತ್ನ. ಬರವಣಿಗೆಯ ವಿಷಯದಲ್ಲಿ ನಾನು ಶುದ್ಧ ತಾರಾಡಿ. ಅಂಡಲೆತದ ಮನಸು ಶುದ್ಧ ಭೈರಾಗಿಯಂತೆಯೋ ಜಂಗಮನಂತೆಯೋ ಭಾವಗಮನ ಮಾಡುವಾಗಿನ ಅನುಭವಗಳನ್ನೇ ಅನುಸಂಧಾನಿಸುತ್ತೇನೆ. ದಿನನಿತ್ಯದ ಕಂಪ್ಯೂಟರಿನ ಸ್ವಿಚ್ಚು ತಂತಿಗಳೊಂದಿಗೆ ಭಾವತಂತುಗಳನ್ನು ಮೀಟುವವುದರಿಂದ ಒಂದಷ್ಟು ಕವಿತೆ ನನ್ನಲ್ಲೂ ಹುಟ್ಟುತ್ತದೆ.
ಬರೆದುದೆಲ್ಲವು ಕಾವ್ಯವಾಗುವುದಿಲ್ಲ ನಿಜ ಆದರೆ ಕಾವ್ಯವಾಗಲು ಏನಾದರು ಬರೆಯಲೇಬೇಕಲ್ಲ ಎಂಬಂತ ಅತಾರ್ಕಿಕ ವಾದವನ್ನು ಮುಂದಿಟ್ಟುಕೊಂಡು ನನಗೆ ತೋಚಿದಂತೆ ಗೀಚಿದ್ದೆಲ್ಲವನ್ನು ನೀವೆಲ್ಲ ಕವಿತೆ ಎಂದು ಒಪ್ಪಿಕೊಂಡು ಅಪ್ಪಿಕೊಂಡು ಆದರಿಸಿದವರು. ನನ್ನ ನಿರಂತರವಾಗಿ ನಿಮ್ಮ ಪ್ರೋತ್ಸಾಹದ ಪನ್ನೀರೆರೆದು ಪೋಷಿಸಿದವರು ನೀವೆಲ್ಲರೂ. ಕವಿ ಕಾವ್ಯ ವತ್ಸಲರಾದ ನಿಮಗೆಲ್ಲ ಮೊದಲಿಗೆ ಆಪಾದಮಸ್ತಕ ನಮನಗಳು.
ಕಾವ್ಯದ ಮೂರು ಧ್ವನಿಗಳಲ್ಲಿ ಒಂದು ಕವಿಯದು, ಅದರಲ್ಲಿ ಮೊದಲನೆಯದು ಓದುಗನದು ಮತ್ತು ಎರಡನೆಯದು ವಿಮರ್ಶಕನದು. ಕಾವ್ಯವನ್ನು ಸಂಪೂರ್ಣವಾಗಿ ಒಂದು ಪ್ರಜ್ಞಾಪೂರ್ವಕವಾದ ಕ್ರಿಯೆ ಎಂದು ಪರಿಭಾವಿಸುವ ನನ್ನಂತಹವರಿಗೆ ಕವಿಗಿರುವುದು ವ್ಯಕ್ತಿತ್ವಲ್ಲ, ಒಂದು ಮಾಧ್ಯಮ – ಭಿನ್ನ ಭಿನ್ನ ಅಭಿಪ್ರಾಯಗಳನ್ನು ಮತ್ತು ಅನುಭವಗಳನ್ನು ನೂತನ ರೀತಿಗಳಲ್ಲಿ ಸಂಯೋಜಿಸುವ ಮಾಧ್ಯಮ ಮಾತ್ರ ಅಂಬಾ ಸತ್ಯದ ಅರಿವಿರಲೇಬೇಕಾಗುತ್ತದೆ.
ನನ್ನ ಪಾಲಿಗೆ ವಿಮರ್ಶೆ ಎಂದರೆ ಅದು ಕಾವ್ಯಾನುಸಂಧಾನ, ಕಾವ್ಯದ ಆತ್ಮಜ್ಞಾನ.

ಕನ್ನಡದ ವಿಮರ್ಶಾ ಪರಂಪರೆ : ಟೀಕೆ, ಭಾಷ್ಯಗಳಿಂದ, ತಾತ್ವಿಕ ಒಳನೋಟಗಳ ಶೋಧದಿಂದ, ತಿಕ್ಕಿ ನೋಡುವ ‘ ಮೃಶ್’ ಧಾತುವಿನಿಂದ, ಕೃತಿ ನಿಷ್ಠತೆಯಿಂದ ತನ್ನ ಸಾಂದರ್ಭಿಕ ಗ್ರಹಿಕೆಗಳನ್ನು ಸ್ಪುಟಗೊಳಿಸುತ್ತಲೇ‘ ಕಾಲಾಂತರ’ ಕಾಲಗಳನ್ನು ಸಾಗಿ ಬಂದಿದೆ. ನಮ್ಮ ಮೀಮಾಂಸಕಾರರು ಹೇಳುವ : ಅಲಂಕಾರ, ವ್ಯಾಖ್ಯಾನ, ವಿವೇಚನೆ, ಔಚಿತ್ಯ, ವಕ್ರೋಕ್ತಿ, ಭವ್ಯತೆ, ಶೋಧನೆ, ಅನುಕರಣೆ ಮೊದಲಾದ ಪರಿಕರಗಳ ನೆರವು ಪಡೆಯುತ್ತಲೇ– ಆಧುನಿಕ ಸಂದರ್ಭದ ಹಲವು ಓದಿನ ದಾರಿಗಳ ಮೂಲಕ ಸಾಹಿತ್ಯ ಕೃತಿಯನ್ನು, ವರ್ತಮಾನದ ಪಠ್ಯವನ್ನು ವಿಮರ್ಶಿಸುತ್ತಲೇ – ನಿರ್ವಚನಗೊಂಡಿದೆ.
ನೆನ್ನೆ ಮೊನ್ನೆಯಷ್ಟೇ ‘ವಿಮರ್ಶೆಗಳು ಸತ್ತು ಹೋದ ಕಾಲಕ್ಕೆ’ ಎಲ್ಲೋ ಒಂದು ಕಡೆ ಬರೆದುಕೊಂಡಿದ್ದೆ, ಕಾಕತಾಳೀಯವೋ ಎಂಬಂತೆ ಡಾ ಎಚ್ ಎಸ್ ಸತ್ಯನಾರಾಯಣ ಅವರು ನನ್ನ ಕವಿತೆಯನ್ನು ವಯಕ್ತಿಕ ಮತ್ತು ತಾತ್ವಿಕ ನೆಲಗಟ್ಟಿನಲ್ಲಿ ವಿಮರ್ಶಿಸಿ ವಿಶದೀಕರಿಸಿದ್ದು ನನ್ನ ಸೌಭಾಗ್ಯವೆಂದೇ ಅತ್ಯಂತ ವಿಧೇಯತೆಯಿಂದ ನಾನು ಭಾವಿಸುತ್ತೇನೆ.
ತಮ್ಮ ವಿಮರ್ಶಾ ಕಾರ್ಯದಲ್ಲಿ ನಿಷ್ಠುರತೆ ಮತ್ತು ವಿನಯತೆಗಳನ್ನು ಮೈಗೂಡಿಸಿಕೊಂಡು ಕೃತಿಯೊಂದಕ್ಕೆ ತೀವ್ರವಾಗಿ ಪ್ರತಿಸ್ಪಂದನ ಮಾಡಬಲ್ಲ ಕೆಲವೇ ಕೆಲವು ನವ್ಯ ವಿಮರ್ಶಕರಲ್ಲಿ ನಾರಾಯಣ ಅವರು ಒಬ್ಬರು.ಕಾವ್ಯದ ಸಮಕಾಲೀನತೆಯನ್ನು ಪ್ರಚುರಪಡಿಸುವ ಎಲೆಮರೆಯ ಕಾಯಿಯಂತಿರುವ ಹಲವು ಕವಿಗಳನ್ನಷ್ಟೇ ಅಲ್ಲದ ಖ್ಯಾತನಾಮರ ಕಾವ್ಯದ ರುಚಿಯನ್ನು ಓದುಗರಿಗೆ ಕಾವ್ಯ ಜಿಜ್ಞಾಸುಗಳಿಗೆ ಉಣಬಡಿಸುವ ಬಾಣಸಿಗರಂತೆ ಅವರು ನನಗೆ ಕಂಡಿದ್ದಾರೆ
‘ಭ್ರಮರಕೀಟಾನ್ಯಾಯ’ ದಂತೆ ಒಬ್ಬ ಸಮರ್ಥ ವಿಮರ್ಶಕ ಕಾವ್ಯದ ಬಗ್ಗೆ ಚಿಂತಿಸುತ್ತ ಕೊನೆಗೆ ಕಾವ್ಯವೇ ಆಗಿಹೋಗುವ ರೂಪಾಂತರ ಪ್ರಕ್ರಿಯೆ ಸತ್ಯನಾರಾಯಣರಿಗೆ ದಕ್ಕಿದೆ. ಸ್ವತಃ ಸಾಹಿತ್ಯರಚನೆಯಲ್ಲಿ ತೊಡಗಿಕೊಂಡು, ವಿಮರ್ಶೆಯನ್ನು ಹವ್ಯಾಸವಾಗಿ ಇಟ್ಟುಕೊಂಡವರು ಕನ್ನಡ ಕಾವ್ಯ ಪರಂಪರೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅವರಲ್ಲಿ ಸತ್ಯನಾರಾಯಣರು ಒಬ್ಬರು ಎಂದು ಹೇಳಲಡ್ಡಿಯಿಲ್ಲ.

ಕಾವ್ಯ ಅಭಿಜಾತ ಮಾರ್ಗಿಯಾದ ಸತ್ಯನಾರಾಯಣರು ಕಾವ್ಯದ ಭಾಷೆ ಮತ್ತು ತಂತ್ರದ ನಾನಾ ಸಾಧ್ಯತೆಗಳನ್ನು ಸಮರ್ಥವಾಗಿ ಓದುಗರ ಮುಂದೆ ತೆರೆದಿಡಬಲ್ಲ ಸಿದ್ಧಹಸ್ತರು. ಕವಿ ಕೇಂದ್ರಿತ ವಿಮರ್ಶೆ, ಕೃತಿ ಕೇಂದ್ರಿತ ವಿಮರ್ಶೆ, ಮತ್ತು ಪ್ರಕಾರ ಕೇಂದ್ರಿತ ವಿಮರ್ಶೆಗಳ ನಡುವಿನ ಅನ್ಯೋನ್ಯವಾದ ಅಂತಃಸಂಬಂಧ ವನ್ನು ಇಷ್ಟು ಪರಿಣಾಮಕಾರಿಯಾಗಿ ತೆರೆದಿಡುವ ಅವರ ಕಾವ್ಯ ಬೌದ್ಧಿಕತೆಗೆ ತಲೆಬಾಗಲೇಬೇಕು. ಒಬ್ಬ ನಿಷ್ಠ ವಿಮರ್ಶಕನಿಗೆ ಇರಬೇಕಾದ ಕಲ್ಪನಾ ಶಕ್ತಿ, ಪ್ರತಿಭೆ, ಸಹಾನುಭೂತಿ, ತಾಳ್ಮೆ ಮತ್ತು ಔದಾರ್ಯ ಈ ಎಲ್ಲ ಗುಣಗಳನ್ನು ಶ್ರೀಯುತ ಸತ್ಯನಾರಾಯಣ ಸರ್ ಅವರಲ್ಲಿ ಕಂಡವನು ನಾನು.
ಓದುಗ ಸಂಸ್ಕೃತಿ ಮತ್ತು ಓದಿನ ಅನುಭವಕ್ಕೇ ಪ್ರಾಮುಖ್ಯತೆ ಕೊಟ್ಟು ವಿಮರ್ಶೆಯನ್ನು ಮಂಡಿಸಬಲ್ಲ ಅತ್ಯಂತ ಪ್ರತಿಭಾಸಂಪನ್ನರು.ಅವರ ಕಾವ್ಯ ಮೌಲ್ಯಪನ ಕ್ರಿಯೆ ಕಾಲಘಟ್ಟದ ವಿಭಜನಾ ಕ್ರಮವನ್ನು ಮೀರಿ ಅನನ್ಯವಾದದ್ದು ಮತ್ತು ಅಪರೂಪವಾದದ್ದು. ವಿಮರ್ಶೆಯ ನೆಲೆಯಲ್ಲಿ ನಿಂತು ವರ್ತಮಾನವನ್ನು ಗ್ರಹಿಸುವುದಾದರೆ – ಸಾಹಿತ್ಯ ತನ್ನ ವಿರಾಟ್ ವಿಶ್ವರೂಪ ತೋರಿಸಿದಂತೆ ಬೆರಗು, ಬೆಡಗು ಎರಡೂ ಅವಿರ್ಭವಿಸುತ್ತವೆ.
ಕಾವ್ಯದ ಶರೀರವನ್ನು ಕಟ್ಟಿಕೊಡುವ ಇಂತಹ ವಿಮರ್ಶೆಗಳ ಅಗತ್ಯ ಈ ಕಾಲಕ್ಕೆ ಬಹಳವಿದೆ. ಹಾಗೆ ಓದುವವರ, ಬರೆಯುವವರ ಅಭಿರುಚಿಗಳನ್ನು ತಿದ್ದುವ ತೀಡುವ ಕೆಲಸವನ್ನು ನಿರ್ವಚನೆಯಿಂದ ಮಾಡುತ್ತಿರುವ ಸತ್ಯನಾರಾಯಣ ಸರ್ ಅವರಂತಹವರ ಸಂಖ್ಯೆ ಹೆಚ್ಚಲಿ. ಕಾವ್ಯ ಪರಂಪರೆಯ ಹೊಸ ಕುಯಿಲು ನಿಮ್ಮಿಂದ ಇನ್ನಷ್ಟು ಹದಗೊಳ್ಳಲಿ, ಜೊಳ್ಳುಗಳು ಹರಿ ಗಟ್ಟಿ ಕಾಲುಗಳು ಉಳಿಯಲಿ. ಅವರ ವಿಮರ್ಶೆ ವಿಮರ್ಶೆ ಕೇವಲ ‘ರಿವ್ಯೂ’ ಆಗದೆ, ಅದೊಂದು ಸಾಂಸ್ಕೃತಿಕ, ಸಾಹಿತ್ಯಿಕ ವಾಗ್ವಾದಗಳಿಗೆ, ಹೊಸ ಬಗೆಯ ಆಲೋಚನೆ, ಚಿಂತನೆಗಳಿಗೆ ಪ್ರಚೋದಕ ಶಕ್ತಿಯಾಗಿ ಹೊಮ್ಮಲಿ ಎಂಬ ಸದಾಶಯ ನನ್ನದು ಹಾಗೆ ನಿಮ್ಮೆಲ್ಲರದ್ದು ಎಂದು ನಾನಿಲ್ಲಿ ವಿನಮ್ರನಾಗಿ ಭಾವಿಸುತ್ತೇನೆ.

ಮೇಲೋಗರ : ಕನ್ನಡದ ಖ್ಯಾತ ಪತ್ರಕರ್ತರಲ್ಲಿ ಒಬ್ಬರಾಗಿದ್ದ ವೈಎನ್ ಕೆ ಬಹಳ ಕಟ್ಟುನಿಟ್ಟಿನ ಮನುಷ್ಯ ಎಂದೇ ಹೆಸರಾದವರು. ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ಎಂದೂ ಸುಳ್ಳು ಹೇಳದ ವೈಎನ್ ಕೆ, ಅದೊಮ್ಮೆ ಅಂಬರೀಷ್ ನಟಿಸಿದ್ದ ಚಿತ್ರವೊಂದನ್ನು ನೋಡಲು ಹೋದರು. ಚಿತ್ರ ಮುಗಿಯಿತು. ಅವತ್ತು ಚಿತ್ರದ ನಾಯಕ ನಟ ಅಂಬರೀಷ್ ಕೂಡ ಅಲ್ಲಿದ್ದರು. ಚಿತ್ರ ಮುಗಿದ ಕೂಡಲೆ ವೈಎನ್ ಕೆ ಅವರ ಬಳಿ ಬಂದ ಅಂಬರೀಷ್ ಫಿಲಂ ಹೇಗಿತ್ತು ಸಾರ್? ಎಂದು ಕೇಳಿದರು. ಅವರಿಗೋ ಇಂತಹ ಹಿರಿಯ ಪತ್ರಕರ್ತರಿಂದ ಪ್ರಶಂಸೆ ಸಿಗುತ್ತದೆ ಎಂಬ ನಿರೀಕ್ಷೆ! ಅಂಬರೀಷ್ ಅವರ ನಿರೀಕ್ಷೆಯನ್ನು ಒಂದೇ ಏಟಿಗೆ ವೈಎನ್ ಕೆ ಹುಸಿಗೊಳಿದ್ದರು.
ವೈಎನ್ ಕೆ ಹೇಳಿದ್ದಿಷ್ಟು: ಚಿತ್ರ ತುಂಬ ಚೆನ್ನಾಗಿತ್ತು. ಆದರೆ ನಾನು ಮಲಗಿಬಿಟ್ಟಿದ್ದೆ ಎಂದು ಬಿಟ್ಟರು. ವೈಎನ್ ಕೆ ಪ್ರತಿಕ್ರಿಯೆ ಕೇಳಿ ಅಂಬರೀಷ್ ಸುಸ್ತೋ ಸುಸ್ತು!
- ರಾಜ್ ಆಚಾರ್ಯ
