ವಿಶ್ವೇಶ್ವರ ಭಟ್ಟರಿಗೆ ಬರ್ತ್ ಡೇ ವಿಶಸ್ ಹೇಳುತ್ತಾ ಗಣೇಶ ಕಾಸರಗೋಡು ಅವರ ವೃತ್ತಿ ಬದುಕನ್ನು ಚಿಗುರಿಸಿದ ‘ಚದುರಿದ ಚಿತ್ರಗಳು’ ಅಂಕಣದತ್ತ ಒಂದು ಓರೆ ನೋಟ , ತಪ್ಪದೆ ಮುಂದೆ ಓದಿ…
ಅಂದಹಾಗೆ, ತಾರಾ ಪರಮೇಶ್ವರ ಮಧ್ಯಸ್ಥ ಎಂಬ ಹೆಸರಿನ ಹೆಣ್ಣು ಮಗಳೊಬ್ಬಳು ನಮ್ಮ ‘ವಿಜಯ ಕರ್ನಾಟಕ’ ಆಫೀಸಿಗೆ ಬಾರದಿರುತ್ತಿದ್ದರೆ ಬಹುಶಃ ‘ಚದುರಿದ ಚಿತ್ರಗಳು’ ಅಂಕಣ ಪ್ರಾರಂಭವಾಗುತ್ತಲೇ ಇರಲಿಲ್ಲ. ಹಾಗೆ ಬಂದ ತಾರಾ ಮಧ್ಯಸ್ಥ ಸುಮ್ಮನಿರಲಿಲ್ಲ. ತಮ್ಮ ಪತಿದೇವರ ದುರಾದೃಷ್ಟವನ್ನು ಹೇಳಿಕೊಂಡು ಅತ್ತರು. ಒಂದು ಕಾಲದಲ್ಲಿ ಹಿಂದಿ ನಟ ದೇವಾನಂದ್ ಅವರ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದುಕೊಂಡು ಮೆರೆದ ಈ ಪರಮೇಶ್ವರ ಮಧ್ಯಸ್ಥ ಈಗ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ದಯನೀಯ ಸ್ಥಿತಿಯನ್ನು ವಿವರಿಸಿದ್ದರು ತಾರಾ ಮೇಡಂ. ಈಯಮ್ಮ ಹೇಳುತ್ತಿರುವ ಪರಮೇಶ್ವರ ಮಧ್ಯಸ್ಥರು ಒಂದು ಕಾಲದಲ್ಲಿ ಸಂಪಾದಕ ವಿಶ್ವೇಶ್ವರ ಭಟ್ಟರ ರೂಮ್ ಮೇಟ್ ಆಗಿದ್ದವರಂತೆ!

ನನ್ನ ಕುತೂಹಲ ಗರಿಗೆದರಿತು. ಚೆಕ್ ಮಾಡಿಯೇ ಬಿಡೋಣ ಅಂತ ಮಾರನೇ ದಿನವೇ ಅವರ ಲೊಟ್ಟಗೊಲ್ಲಹಳ್ಳಿಯ ಗುಡಿಸಲಿನಂತಿರುವ ಮನೆಗೆ ಹೋಗಿ ಪರಮೇಶ್ವರ ಮಧ್ಯಸ್ಥರ ಜತೆ ಮಾತುಕತೆಯಾಡಿದೆ. ಅದು ಹೃದಯವಿದ್ರಾವಕ ವ್ಯಥೆಯ ಕಥೆ. ಈ ಕಥೆಯನ್ನು ಕಥಾಶೈಲಿಯಲ್ಲಿಯೇ ಬರೆಯುವ ಮನಸ್ಸಾಯಿತು. ಮುಂಜಾನೆ ನಾಲ್ಕು ಗಂಟೆಗೆ ಪೆನ್ನು ಹಿಡಿದವನು ಬರೆದು ಮುಗಿಸಿದಾಗ ಬೆಳಗ್ಗಿನ ಏಳು ಗಂಟೆ. ಪೆನ್ನು ಕೆಳಗಿಡುತ್ತಿರುವಂತೆಯೇ ಕಣ್ಣು ತೇವ ತೇವ! ಶುಕ್ರವಾರದ ‘ವಿಜಯ ಕರ್ನಾಟಕ’ದ ಈ ಸಿನಿಮಾ ಪುಟ ‘ಸಿನಿ ವಿಜಯ’ ಮಾರುಕಟ್ಟೆಗೆ ಹೋಗುತ್ತಿರುವಂತೆಯೇ ಏನೋ ಸಂಚಲನ. ಈ ಶೈಲಿಯ ಬರಹ ಎಷ್ಟೊಂದು ಜನಪ್ರಿಯವಾಯಿತೆಂದರೆ ಒಂದು ಹೊಸ ವರ್ಗದ ಸಿನಿಮಾ ಓದುಗರು ಸೃಷ್ಟಿಯಾಗಿ ಬಿಟ್ಟಿದ್ದರು! ನನ್ನ ಮುಂದೆ ಹೊಸದೊಂದು ಲೋಕ ತೆರೆದುಕೊಂಡಿತ್ತು!

ನಿಜ ಹೇಳಬೇಕೆಂದರೆ, ನಾನು ಬರೆದ ಈ ಶೈಲಿಯ ಬರಹಕ್ಕೊಂದು ಅಂಕಣದ ಹೆಸರಿರಲಿಲ್ಲ. ಈ ಹೆಸರನ್ನು ನನಗೆ ಸೂಚಿಸಿದವರು ‘ಶಂಖನಾದ’ ಚಿತ್ರದ ನಿರ್ಮಾಪಕರೂ ಆಗಿರುವ ನಿರ್ದೇಶಕ ಉಮೇಶ್ ಕುಲಕರ್ಣಿ! ಇವರು ದೂರದರ್ಶನದ ಕಾರ್ಯಕ್ರಮವೊಂದನ್ನು ಚಿತ್ರೀಕರಿಸಲೆಂದು ‘ವಿಜಯ ಕರ್ನಾಟಕ’ ಆಫೀಸಿಗೆ ಬಂದು ವ್ಯಂಗ್ಯಚಿತ್ರಕಾರರನ್ನು ಸಂದರ್ಶಿಸುತ್ತಿದ್ದಾಗ ನಾನು ಇವರ ಕಣ್ಣಿಗೆ ಬಿದ್ದೆ. ಹತ್ತಿರ ಬಂದು ನನ್ನ ಬರಹಗಳಿಗಾಗಿ ಅಭಿನಂದಿಸಿದರು ಉಮೇಶ್ ಕುಲಕರ್ಣಿ. ನಂತರ ಹೇಳಿದರು : ‘ಇದು ಮೂಲೆಗೆ ತಳ್ಳುವಂಥಾ ಬರಹಗಳಲ್ಲ. ದಯವಿಟ್ಟು ಈ ಬರಹವನ್ನು ಧಾರಾವಾಹಿಯಾಗಿ ಪ್ರಕಟಿಸಿ ಮತ್ತು ಇದಕ್ಕೆ ‘ಚದುರಿದ ಚಿತ್ರಗಳು’ ಎಂಬ ಹೆಸರನ್ನಿಟ್ಟು ಅಂಕಣ ಮುಂದುವರಿಸಿ…’ – ಇಷ್ಟು ಹೇಳಿ ಹೊರಟು ಹೋದರು ಕುಲಕರ್ಣಿ ಸಾರ್. ಮಾರನೇ ಶುಕ್ರವಾರದಿಂದಲೇ ಆರಂಭವಾಯಿತು ನೋಡಿ : ‘ಚದುರಿದ ಚಿತ್ರಗಳು’ ಅಂಕಣ. ಈ ಅಂಕಣ ಪ್ರಕಟಣೆ ಆರಂಭಿಸಿದ ನಂತರ ನಮ್ಮ ಬಾಸ್ ವಿಜಯ ಸಂಕೇಶ್ವರ ಅವರು ಪತ್ರವೊಂದನ್ನು ಬರೆದು ನನ್ನನ್ನು ಅಭಿನಂದಿಸಿದರು. ಆ ಪತ್ರವನ್ನು ಒಂದು ಅಮೂಲ್ಯ ಸರ್ಟಿಫಿಕೇಟ್’ನಂತೆ ಈಗಲೂ ಜೋಪಾನವಾಗಿಟ್ಟು ಕೊಂಡಿದ್ದೇನೆ…
ಹೀಗೆ ಬರೆದ ಅಂಕಣ ವೈಯಕ್ತಿಕವಾಗಿ ನನಗೆ ಹೆಸರು ತಂದು ಕೊಟ್ಟಂತೆಯೇ ಪತ್ರಿಕೆಗೂ, ಸಂಸ್ಥೆಗೂ ಭರಪೂರ ಹೆಸರು ತಂದುಕೊಟ್ಟಿತು. ಇವುಗಳಲ್ಲಿ ಆಯ್ಕೆ ಮಾಡಿಕೊಂಡ ಕೆಲವು ಲೇಖನಗಳ ಸಂಗ್ರಹವನ್ನು ಇಂದ್ರಜಿತ್ ಲಂಕೇಶ್ ತಮ್ಮ ‘ಲಂಕೇಶ್ ಪತ್ರಿಕೆ ಪ್ರಕಾಶನ’ ಮೂಲಕ ಪುಸ್ತಕ ಪ್ರಿಂಟ್ ಮಾಡಿಸಿ ಉಪಕರಿಸಿದರು. ‘ಚದುರಿದ ಚಿತ್ರಗಳು-ಚಿಗುರಿದ ಕನಸುಗಳು’ ಎಂಬ ಹೆಸರಿನಲ್ಲಿ ಪ್ರಕಟವಾದ ಈ ಪುಸ್ತಕಕ್ಕೆ ಕರ್ನಾಟಕ ಸರ್ಕಾರದ ‘ಸಿನಿಮಾ ಪುಸ್ತಕ ಸಾಹಿತ್ಯ ಪ್ರಶಸ್ತಿ’ ಲಭ್ಯವಾಯಿತು.

ಅಂಥಾ ವಿಶ್ವೇಶ್ವರ ಭಟ್ಟರ ಬರ್ತ್ ಡೇ ಇಂದು. ವಿಜಯ ಕರ್ನಾಟಕ ಪತ್ರಿಕೆಯಲ್ಲಿದ್ದಾಗ ಬೇಡ ಬೇಡವೆಂದರೂ ನೂರಾರು ವಿವಾದಗಳು ನನ್ನ ಸುತ್ತ ಸುತ್ತುಕೊಂಡಿದ್ದವು. ಅವುಗಳಿಗೆಲ್ಲಾ ಗುರಾಣಿ ಹಿಡಿದು ನಿಂತು ನನ್ನನ್ನು ರಕ್ಷಿಸಿದವರು ಇದೇ ವಿಶ್ವೇಶ್ವರ ಭಟ್ಟರು! ಇವರ ಟೈಮ್’ನಲ್ಲೇ ನನ್ನ ವೃತ್ತಿ ಬದುಕು ಕ್ಲೈಮ್ಯಾಕ್ಸ್ ಕಂಡದ್ದು. ಇಲ್ಲಿರುವಾಗ ‘ಚದುರಿದ ಚಿತ್ರಗಳು’ ಅಂಕಣವನ್ನು ಬರೆಯಲು ಸ್ಫೂರ್ತಿ ತುಂಬಿದ್ದು ಕೂಡಾ ವಿಶ್ವೇಶ್ವರ ಭಟ್ಟರು. ಇವತ್ತಿಗೂ ನನ್ನ ಐಡೆಂಟಿಟಿ ಇರುವುದು ಆ ಅಂಕಣದಲ್ಲೇ…ಇಂಥಾದ್ದೊಂದು ಅಂಕಣ ಬರೆಯಲು ಅವಕಾಶ ಮಾಡಿಕೊಟ್ಟ ವಿಶ್ವೇಶ್ವರ ಭಟ್ಟರಿಗೆ ಥಾಂಕ್ಸ್ ಹೇಳುತ್ತಾ ಅವರಿಗೆ ಬರ್ತ್ ಡೇ ವಿಶಸ್ ಹೇಳುತ್ತಿದ್ದೇನೆ : ಹ್ಯಾಪಿ ಬರ್ತ್ ಡೇ ಸರ್…
- ಗಣೇಶ ಕಾಸರಗೋಡು
