‘ಹೆಂಡದ ಮಡಕೆಯ ಹೊರಗೆ ತೊಳೆದರೆ ಸಾಕೆ?…ಒಳಗಿನ ದುರ್ಗುಣಗಳ ತೊಳೆದಿರುವಿಯಾ ಸೊಕ್ಕೆ?’… ಇಂದಿನ ವ್ಯವಸ್ಥೆಯ ಕುರಿತು ಕವಿ ಸಿದ್ಧರಾಮ ಕೂಡ್ಲಿಗಿ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ…
ಸಭೆ ಸೇರಿದವು
ನಾಯಿ ಬೆಕ್ಕುಗಳೊಮ್ಮೆ
ತಮ್ಮ ಹಿರಿಮೆಯ ಹೇಳಿಕೊಳಲೆಂದೆ
–
ಬೆಕ್ಕು ನಾಯಿನ ಜರೆಯಿತು:
ಎಂಜಲು ತಿನ್ನುವ ಕೊಳಕ
ಮಾಡಿರುವೆಯಾ ಒಮ್ಮೆಯಾದರೂ ಜಳಕ?
ನಮ್ಮ ಮೈಬಣ್ಣ ನೋಡು ಎಷ್ಟು ಬಿಳಿ!
ದೇಶದ ನೇತಾರರೆಲ್ಲ ನನ್ನಂತೆಯೇ ತಿಳಿ!
–
ನಾಯಿ ನಗುತ್ತ ಹೇಳಿತು:
ಹೆಂಡದ ಮಡಕೆಯ ಹೊರಗೆ ತೊಳೆದರೆ ಸಾಕೆ?
ಒಳಗಿನ ದುರ್ಗುಣಗಳ ತೊಳೆದಿರುವಿಯಾ ಸೊಕ್ಕೆ?
ಮೈಬಣ್ಣ ನೋಡಿ ಮಣೆ ಹಾಕುವುದರಿಂದಲೆ
ಹಾಲು ಮೊಸರು ಬೆಣ್ಣೆಗಳ ಕಳವು ಹಗಲಿನಲ್ಲೆ
–
ಮೈ ಸೆಟೆಸಿದ ಬೆಕ್ಕು ಅರಚಿತು:
ನಾನಿದ್ದ ಮನೆಗಳಲಿ ಇಲಿಗಳಿಲ್ಲ
ನನಗೆ ಕೈಯೆತ್ತಲು ಬ್ರಹ್ಮನಿಗೂ ಸಾಧ್ಯವಿಲ್ಲ
ನನ್ನ ಮೈತುಂಬ ದೇವತೆಗಳಂತೆ
ಕೊಂದರೆ ರೌರವ ನರಕ ತಪ್ಪದಂತೆ
–
ಕಿವಿ ಜಾಡಿಸಿ ನಾಯಿ ಉತ್ತರಿಸಿತು:
ಕುರಿ ಕಾಯಲು ತೋಳವ ಬಿಟ್ಟಿಹರು
ಕಡಿಮೆಯಾಗುವ ಕುರಿಗಳ ಲೆಕ್ಕವಿಡುವವರಾರು?
ದಿನಪೂರ್ತಿ ಮೈಮುರಿವ ದುಡಿತ
ಕರುಣೆ, ಪ್ರಾಮಾಣಿಕತೆ ಪ್ರೀತಿಯ ತುಡಿತವಿರಲು
ಮೈತುಂಬ ದೇವತೆಗಳೇಕೆ ಬೇಕು?
ಉಂಡ ಅನ್ನಕೆ ದ್ರೋಹ ಬಗೆಯದಿದ್ದರಷ್ಟೆ ಸಾಕು
–
ಬೆಕ್ಕೇ, ಬೆಕ್ಕೆ ಕಂಡವರ ಕಾಲು ಸುತ್ತುತ್ತಾ
ಕದಿಯುವುದ ಬಿಡು
ಆಗ ಆಗುವುದು ಈ ಮನೆಯ ಏಳ್ಗೆ
ಸುಖ ಹೊಮ್ಮುವುದು ಒಡೆಯನ ಬಾಳ್ಗೆ
–
ನಾಯಿಯ ನುಡಿಯಿಂದ ಒಳಗೊಳಗೆ ನಕ್ಕ
ಬೆಕ್ಕು ಮೆಲ್ಲನೆ ಜಾರಿ
ಒಡೆಯನ ಕಾಲ ಬಳಿ ಹೊಕ್ಕು
ಹುಯಿಲೆಬ್ಬಿಸಲು
ಒಡೆಯ ನಾಯಿಯ ಒದೆಯಲು
ಕುಂಯ್ಗುಡುತ ನಾಯಿ
ಬಾಗಿಲ ಬಳಿ ಕಾವಲು ಬಿತ್ತು
ಅಡಿಗೆ ಮನೆಯಲಿ ಬೆಕ್ಕು
ಮೊಸರಿನ ಬಟ್ಟಲಲಿ ಮುಖ ಹುದುಗಿಸಿತ್ತು
ಒಳಗೊಳಗೇ ಮೀಸೆಯ ತಿರುವಿತ್ತು!
- ಸಿದ್ಧರಾಮ ಕೂಡ್ಲಿಗಿ – ಹವ್ಯಾಸಿ ಛಾಯಾಗ್ರಾಹಕರು, ಲೇಖಕರು.
