ಒಂದೆ ತಟ್ಟೆಯಲ್ಲಿ ಉಣ್ಣೋರು…ಎಲೆಕ್ಷನ್ ನಿಂದ ದೂರಾ ಆಗ್ಯಾರು…ಒಂದು ಎಲೆಕ್ಷನ್ ಸಂಬಂಧಗಳನ್ನ ಹೇಗೆ ಮುರಿದು ಹಾಕುತ್ತೆ ಅನ್ನೋದನ್ನ ಯುವ ಕವಿ ಜಿ.ಎಸ್.ಶರಣು ಅವರು ಕವನದ ಮೂಲಕ ಸುಂದರವಾಗಿ ವರ್ಣಿಸಿದ್ದಾರೆ, ಮುಂದೆ ಓದಿ…
ನನ್ನೂರ
ನನ್ನ ಓಣಿಯ ಅಣ್ಣಂದಿರು
ಎಲೆಕ್ಷನ್ ಬಂದೈತೆಂತ
ಆ ಪಕ್ಷ ಈ ಪಕ್ಷ
ಆ ನಾಯಕ ಈ ನಾಯಕ ಅಂತ
ಗುದ್ದಾಡ್ಯರ
ಬೆಳ್ ಬೆಳಿಗ್ಗೆ
ಮುಖ ನೋಡೋರು
ಒಂದೆ ತಟ್ಟೆಯಲ್ಲಿ ಉಣ್ಣೋರು
ಬಟ್ಟೆ ಅದಲು-ಬದಲು ಮಾಡಿ ತೊಟ್ಟವರು
ಈಗ ಜಗಳದಿಂದ
ಬ್ಯಾರೆ ಆಗಿ ಕುಂತರ
ನೆಟ್ಗೆ ನಲ್ವತ್ತು ಮನಿ ಇಲ್ಲ
ಎಲ್ರನು ಕೂಡಿಸಿದ್ರ ಎಂಬತ್ತ ಮಂದಿ ಆಗಲ್ಲ
ನಾಕು ಪಕ್ಷ ಮಾಡಿ
ಓಣಿನೆಲ್ಲ ಒಡ್ದು
ನಾಕು ಬಣ ಮಾಡ್ಕ್ಯಂಡರ
ಇನ್ನೇನಿದೆ
ನನಗೇನು ಉಳಿದೈತಿಲ್ಲಿ
ದೋಸ್ತ್ರು ದೂರ ಆದ್ರು
ಆಟ-ಗಿಟ ಆಡಂಗಿಲ್ಲ
ಓಣಿ ಮರ್ತು ದೂರ ಹೊಂಟೀನಿ
ಎಲ್ಲರ ಒಂದಾಗಿಂದ ಮತ್ತೆ ಬರ್ತೀನಿ
- ಜಿ.ಎಸ್.ಶರಣು
