ಭಗೀರತ ಪ್ರಯತ್ನ – ಡಾ.ಎನ್.ಬಿ.ಶ್ರೀಧರ

‘ಯಶಸ್ಸು ಎಂಬುದು ರಾತ್ರೋರಾತ್ರಿ ಸಿಗುವುದಿಲ್ಲ. ಪಶು ಚಿಕಿತ್ಸಾಲಯದಲ್ಲಿ ಪಶುಗಳ ಗಾಯ ತೊಳೆಯಲೂ ಸಹ ನೀರೇ ಇಲ್ಲ.ಅದರಲ್ಲೂ ಜುಲಾಬು ಕಾಯಿಲೆಯಿಂದ ಬಳಲುವ ಎಮ್ಮೆಗಳು ಬಂದರಂತೂ ಮುಗಿದೇ ಹೋಯಿತು. ಅವುಗಳು ಜುಳ್ಳೆಂದು ಜುರುಕಿಸುವ ಬೇಧಿ ಸಕಲ ಪರಿಮಳಗಳ ಸಮೇತ ಪಶುಪರೀಕ್ಷಾ ಕಟಾಂಜನಗಳ ಎಲ್ಲೆ ಮೀರಿ ದಶದಿಕ್ಕುಗಳಿಗೂ ಪ್ರಸರಿಸಿ ನಮ್ಮ ಡ ದರ್ಜೆ ನೌಕರನ ಸಮವಸ್ತ್ರಕ್ಕೆಲ್ಲಾ ಪಸರಿಸಿ ಆತನನ್ನು ಪಜೀತಿಗೀಡು ಮಾಡುತ್ತಿತ್ತು’. ಡಾ.ಎನ್.ಬಿ.ಶ್ರೀಧರ ಅವರ ಅನುಭವದ ಲೇಖನ ತಪ್ಪದೆ ಓದಿ…

ಯಾರಾದ್ರೂ ನಿರಂತರವಾಗಿ ಯಾವುದಾದ್ರೂ ಕೆಲಸಕ್ಕೆ ಪ್ರಯತ್ನ ಪಟ್ಟರೆ ಅದು ಭಗೀರಥ ಪ್ರಯತ್ನ ಅಂತಾ ಕೆಲವರು ಹೇಳೋ ವಾಡಿಕೆ ಇಂದಿಗೂ ಇದೆ. ಯಶಸ್ಸು ಎಂಬುದು ರಾತ್ರೋರಾತ್ರಿ ಸಿಗುವುದಿಲ್ಲ. ಅದಕ್ಕೆ ಶ್ರಮ, ಶ್ರದ್ಧೆ ಜೊತೆಗೆ ಪ್ರಯತ್ನವೆಂಬ ಕೀಲಿ ಕೈ ಇರಲೇಬೇಕು. ಹೀಗೆ ಪ್ರಯತ್ನ ಎಂದಾಗ ನೆನಪಿಗೆ ಬರುವ ಹೆಸರೆಂದರೆ ಭಗೀರಥ. ತನ್ನ ಅಚಲ ಪ್ರಯತ್ನದಿಂದ ದೇವಲೋಕದಿಂದ ಗಂಗೆ ಧರೆಗಿಳಿಯುವಂತೆ ಮಾಡಿ, ತನ್ನ ಪೂರ್ವಜರ ಆತ್ಮಗಳಿಗೆ ಶಾಂತಿ ದೊರಕಿಸಿಕೊಟ್ಟವ ಭಗೀರಥ.

ಆ ವರ್ಷ ತಾಳಗುಪ್ಪದಲ್ಲಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಕಡುಬೇಸಿಗೆ. ಪಶು ಚಿಕಿತ್ಸಾಲಯದಲ್ಲಿ ಪಶುಗಳ ಗಾಯ ತೊಳೆಯಲೂ ಸಹ ನೀರೇ ಇಲ್ಲ. ಅದರಲ್ಲೂ ಜುಲಾಬು ಕಾಯಿಲೆಯಿಂದ ಬಳಲುವ ಎಮ್ಮೆಗಳು ಬಂದರಂತೂ ಮುಗಿದೇ ಹೋಯಿತು. ಅವುಗಳು ಜುಳ್ಳೆಂದು ಜುರುಕಿಸುವ ಬೇಧಿ ಸಕಲ ಪರಿಮಳಗಳ ಸಮೇತ ಪಶುಪರೀಕ್ಷಾ ಕಟಾಂಜನಗಳ ಎಲ್ಲೆ ಮೀರಿ ದಶದಿಕ್ಕುಗಳಿಗೂ ಪ್ರಸರಿಸಿ ನಮ್ಮ ಡ ದರ್ಜೆ ನೌಕರನ ಸಮವಸ್ತ್ರಕ್ಕೆಲ್ಲಾ ಪಸರಿಸಿ ಆತನನ್ನು ಪಜೀತಿಗೀಡು ಮಾಡುತ್ತಿತ್ತು. ಕಾಲು ಬಾಯಿ ಜ್ವರದಿಂದ ಸದಾ ಜಂಜಡದಿಂದ ಪುತಗುಡುವ ಹುಳಗಳಿಂದ ತುಂಬಿದ ಗಾಯದ ದನಗಳ ಕಾಲು ತೊಳೆಯಲು ಬಕೇಟು ನೀರೇ ಬೇಕಾಗುತ್ತಿತ್ತು. ಮನುಷ್ಯರಿಗೇ ನೀರಿನ ತತ್ವಾರ, ಇನ್ನೆಲ್ಲಿ ಪಶುಆಸ್ಪತ್ರೆಗೆ ನೀರು?

ಆಗಾಗ ಮಿಂಚುಳ್ಳಿಯ0ತೆ ಕಂಡು ಮಾಯವಾಗುವ ಗ್ರಾಮ ಪಂಚಾಯತ್ ನೀರು ಅಪರೂಪಕ್ಕೆ ಬರುವ ಅತಿಥಿಯ ಹಾಗೆ ವಾರಕ್ಕೊಮ್ಮೆ ಮಾತ್ರ ಬರುತ್ತಿತ್ತು. ಯಾರ್ಯಾರ ಕೈಕಾಲು ಹಿಡಿದು ದೇಣಿಗೆಯ ಹಣದಿಂದ ತೆಗೆಸಿದ ತೋಡು ಬಾವಿಯ ಬುಡದಲ್ಲಿ ಇಣುಕಿ ಹಾಕಿದರೂ ಸಹ ಕಾಣದ ನೀರನ್ನು ಎತ್ತಲು ಹಾಕಿಸಿದ್ದ ಪಂಪು ಹಂಗಿಸಿ ನಗುತ್ತಿತ್ತು. ಇದಕ್ಕೊಂದೇ ಪರಿಹಾರ ಕೊಳವೆ ಬಾವಿ ಕೊರೆಸುವುದು. ಹಣ ಬೇಕಲ್ಲ? ಎಲ್ಲಿದೆ ಹಣ. ಸರಿ ಪುನ: ಕಚೇರಿಗಳಿಗೆ ಎಡತಾಕುವ ಪ್ರಾರಂಭವಾಗಿಯೇ ಹೋಯ್ತು. ಯಾರೋ ಶಿವಮೊಗ್ಗದ ಜಿಲ್ಲಾ ಪಂಚಾಯತ್ತಿಗೆ ಬರಗಾಲ ಪರಿಹಾರದಡಿ ಒಂದಿಷ್ಟು ಬೋರ್ವೆಲ್ಲುಗಳು ಮಂಜೂರಾಗಿವೆನೆಂದೂ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಕಂಡು ವಿನಂತಿಸಿದರೆ ಕೆಲಸವಾಗಬಹುದೆಂದು ಸಲಹೆಯಿನ್ನತ್ತರು. ಒಂದಿಡೀ ದಿನ ಕಾಯಿಸಿದ ಮೇಲೆ ಭೆಟ್ಟಿಯಾಗಗೊಟ್ಟ ಸಿಎಓ ಸಾಹೇಬರು ಹಣ ಬಂದಿದ್ದು ಖಾಲಿಯಾಗಿದೆಯೆಂದೂ ಪುನ: ಇನ್ನೊಂದು ಕಂತು ಬರುವ ನಿರೀಕ್ಷೆಯಿದೆಯೆಂದೂ ಬಂದರೆ ಪಶುಗಳಿಗೋಸ್ಕರ ಕುಡಿಯುವ ನೀರನ್ನು ಪ್ರಥಮ ಆಧ್ಯತೆಯ ಮೇರೆಗೆ ಕೊಡುವುದಾಗಿ ಭರವಸೆ ಇತ್ತರು. ಬಿರು ಬೇಸಿಗೆ. ನೀರಿನ ತತ್ವಾರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇತ್ತು. ನೀರಿನ ಬವಣೆ ಮತ್ತೆ ಕಚೇರಿಗಳಿಗೆ ಎಡತಾಕುವಂತೆ ಮಾಡಿತು. ಮತ್ತೊಮ್ಮೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಭೆಟ್ಟಿ. ಆದಷ್ಟು ಬೇಗ ಪಶುಗಳಿಗೆ ನೀರು ಒದಗಿಸಬೇಕೆಂದು ಮೊರೆ. ಮೇಲಿಂದ ಮೇಲೆ ಬಂದು ಗೋಳು ಕೊಟ್ಟಿದ್ದರೆಂದೇನೋ ಅಥವಾ ಅವರೂ ಸಹ ಐಎಎಸ್ ಗತ್ತಿನ ಅಧಿಕಾರಿಯಾದ್ದುದರಿಂದಲೋ ಗೊತ್ತಿಲ್ಲ ಸರ‍್ರನೇ ಸಿಡುಕಿ ಬಿಡಬೇಕೆ?

“ರೀ ಡಾಕ್ಟ್ರೇ.. ಇಡೀ ರಾಜ್ಯದಲ್ಲೇ ನೀರಿಗೆ ಬರಗಾಲ. ಜಿಲ್ಲೆಗೆ ಬಂದ ಅನುದಾನ ಖಾಲಿಯಾಗಿದೆ. ಜನಕ್ಕೇ ಕುಡಿಲಿಕ್ಕೆ ನೀರಿಲ್ಲ. ದನಕ್ಕೆ ಎಲ್ಲಿಂದ ಕೊಡೋಣ? ಹ್ಯಾಗೋ ಮೋರಿ ನೀರು ಕುಡಿದಾದ್ರೂ ಬದಕ್ತಾವೆ ಬಿಡಿ. ಅದು ಹೋಗ್ಲಿ, ನಿಮ್ ತಾಳಗುಪ್ಪ ಬರಪೀಡಿತ ಅಂದೇ ಘೋಷಣೆಯಾಗಿಲ್ರೀ. ಇದೆಲ್ಲಾ ಆಡಳಿತ ಸಮಸ್ಯೆ ಕಣ್ರೀ. ಅಲ್ಲಿಯೂ ನೀರಿಗೆ ತೊಂದರೆ ಇದೆ ಅಂತ ವರದಿ ಕಳ್ಸೀದೀವಿ. ಅದು ಬರಪೀಡಿತ ಗ್ರಾಮ ಎಂದು ಸರ್ಕಾರದಿಂದ ಘೋಷಣೆಯಾಗದೆ ನಿಮಗೆ ಬೋರ್ವೆಲ್ ಕೊಡಕಾಗಲ್ಲ. ಅಷ್ಟಕ್ಕೂ ನಿಮ್ಮಸ್ಪತ್ರೆಗೆ ಎಷ್ಟು ದನ ಬರ್ತವೆ? ಇಂಜೆಕ್ಷನ್ ಸೂಜಿ ಬಿಸಿ ಮಾಡಕ್ಕೆ ನೀರಿದ್ರೆ ಸಾಕಲ್ಲ? ಮತ್ಯಾಕೆ ಬೋರ್ವೆಲ್ಲು? ಅಷ್ಟಕ್ಕೂ ದನದ ಆಸ್ಪತ್ರೆಗೆ ನೀರು ಕೊಡಬೇಕೆಂದು ಆಧ್ಯತೆಯೇ ನಮಗಿಲ್ಲ. ಇನ್ಮೇಲೆ ಬರ್ಬೇಡಿ. ಮತ್ತೆ ಬಂದ್ರೆ ನಿಮ್ ಡಿಡಿಗೆ ಹೇಳ್ತಿನಿ. ಅವರ ಪರ್ಮಿಶನ್ ತಗೊಂಡು ಬಂದಿದ್ದೀರಾ? ಸುಮ್ಮ ಸುಮ್ಮನೇ ಬರ್ಬೇಡಿ. ನಿಮ್ಮ ಇಲಾಖೆಯ ಕ್ರಿಯಾಯೋಜನೆಯಡಿ ಸೇರಿಸಲು ನಿಮ್ಮ ಡಿಡಿಗೆ ಹೇಳಿ” ಎಂದೆಲ್ಲಾ ಪಕ್ಕಾ ಐಎಎಸ್ ಶೈಲಿಯಲ್ಲಿ ವಿಚಾರಣೆ ಮುಗಿಸಿ ಕೈಚೆಲ್ಲಿ ಬಾಗಿಲಿನ ಕಡೆ ಕೈ ತೋರಿಸಿ “ ನೆಕ್ಸ್ಟ್” ಎಂದರು. ಇದನ್ನು ನಿರೀಕ್ಷಿಸದ ನಾನು ಒಂದು ಕ್ಷಣ ಅವಾಕ್ಕಾದೆ. ದನಗಳ ಆಸ್ಪತ್ರೆಗೆ ಬೋರ್ವೆಲ್ಲು ಹೊಡೆಸಿಕೊಡಿ ಎಂದು ಜಿಲ್ಲಾ ದೊರೆಯನ್ನು ವಿನಂತಿಸುವುದು ಯಾವ ರೀತಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಕೊನೆಗೂ ಹೊಳೆಯದೇ ದಿಗ್ಮೂಢನಾದೆ.

ಆದರೆ ಅವರ ಕಚೇರಿಯ ಪಕ್ಕದಲ್ಲೇ ಅಧ್ಯಕ್ಷರು, ಜಿಲ್ಲಾ ಪರಿಷತ್ ಶಿವಮೊಗ್ಗ ಎಂಬ ನಾಮಫಲಕ ನೋಡಿದೆ. ಅವರ ಬಗ್ಗೆ ಅನೇಕ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇತ್ತು. ಸರಿ ಒಂದು ಸಲ ವಿನಂತಿ ಮಾಡಿ ಬಿಡೋಣ ಎಂದು ಜಿಲ್ಲಾ ಪರಿಷತ್ತಿನ ಅಧ್ಯಕ್ಷರ ಭೆಟ್ಟಿ ಮಾಡಿ ಏನಾದರೂ ಮಾಡಿ ಪಶುಚಿಕಿತ್ಸಾಲಯಕ್ಕೆ ಬೋರು ತೆಗೆಸಿ ಕೊಡಬೇಕೆಂದೂ ಹಾಗೂ ಪಶುಗಳಿಗೆ ನೀರೊದಿಗಿಸಿದ ಪುಣ್ಯ ಬರುತ್ತದೆಂದೂ ವಿನಂತಿಸಿದೆ. ಅವರೂ ಮಹಿಳೆ ಮತ್ತು ನಮ್ಮ ಭಾಗದ ಜಿಲ್ಲಾ ಪರಿಷತ್ ಸದಸ್ಯರೂ ಸಹ ಮಹಿಳೆಯಾಗಿದ್ದು ಬೇರೆ ಬೇರೆ ಪಕ್ಷಗಳಿಗೆ ಸೇರಿದರೂ ಸಹ ಉತ್ತಮ ಬಾಂಧವ್ಯ ಹೊಂದಿದ್ದರಿಂದ ಖಂಡಿತಾ ಅವಕಾಶ ಸಿಕ್ಕರೆ ಸಹಾಯ ಮಾಡುವುದಾಗಿ ಭರವಸೆ ದೊರಕಿತು. ಆದರೆ ಈ ಕುರಿತು ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಪರಿಷತ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕರಿಂದ ನೀರಿನ ತತ್ವಾರವಾಗಿರುವ ಬಗ್ಗೆ ಪತ್ರ ತರಲು ಕಿವಿ ಮಾತು ಹೇಳಿದರು. ಬೋರುವೆಲ್ಲಿನ ಅವಶ್ಯಕತೆಯ ಬಗ್ಗೆ ಸಹಾಯಕ ಕಾರ್ಯ ಪಾಲಕ ಇಂಜಿನಿಯರುಗಳ ಕಚೇರಿಗೆ ಅನೇಕ ಬಾರಿ ಅಲೆದಾಡಿದ ಮೇಲೆ ಸರಿ ಸುಮಾರು ಒಂದು ತಿಂಗಳ ಬಳಿಕ ಅವರ ಅಂದಾಜುಪಟ್ಟಿ ಹಾಗೂ ಅವಶ್ಯಕತೆಯ ಬಗ್ಗೆ ಟಿಪ್ಪಣಿ ಕೈಸೇರಿತು. ಇದನ್ನು ಸಹಾಯಕ ನಿರ್ದೇಶಕರು, ಉಪನಿರ್ದೇಶಕರುಗಳ ಮುಖಾಂತರ ಜಿಲ್ಲಾ ಪರಿಷತ್ತು ತಲುಪುವಂತೆ ಮಾಡಲಾಯಿತು.

ಆದರೆ ಶಾಸಕರ ಪತ್ರ? ಶಾಸಕರು ಶೀಘ್ರಕೋಪಿಗಳು ಮತ್ತು ದೂರ್ವಾಸಮುನಿಗಳ ಅಪರಾವತಾರ, ಆದರೆ ಮನಸ್ಸಿಗೆ ಬಂದರೆ ಹಿಂದೆಯೇ ಬಿದ್ದು ಹಟ ಬಿಡದ ತ್ರಿವಿಕ್ರಮನ ತರ ಕೆಲಸ ಮಾಡಿಸಿಯೇ ತೀರುತ್ತಾರೆಂಬ ಪ್ರತೀತಿ ಇತ್ತು. ಆದರೂ ಸಹ ಅವರಲ್ಲಿ ಹೋಗಿ ನನ್ನ ಬೇಡಿಕೆಯ ಬಗ್ಗೆ ಈ ವರೆಗೆ ಆದ ಕೆಲಸ ಬಗ್ಗೆ ಹೇಳಿದೆ. ಆಗಿದ್ದು ಒಂದೇ ಒಂದು ಎಡವಟ್ಟು. ಜಿಲ್ಲಾ ಪರಿಷತ್ತ್ ಅಧ್ಯಕ್ಷರಿಗೆ ನಿಮ್ಮ ಪತ್ರ ಬೇಕಂತೆ ಸಾರ್ ಎಂದದ್ದೇ ತಡ “ ಆಯಮ್ಮ ಎಂತ ಕೋಲನಾ.. ಏಯ್ ತಮಾ ಆರ್ ಡಿ ಪಿ ಆರ್ ಮಿನಿಸ್ತ್ರೀಗೆ ಬರಿಯೋ ಎಂದು ಅವರ ಆಪ್ತ ಕಾರ್ಯದರ್ಶಿಗೆ ಸೂಚಿಸಿಬಿಟ್ಟರು. ನನಗೋ ಜಿಲ್ಲಾ ಪರಿಷತ್ ಅಧ್ಯಕ್ಷರಿಗೆ ಬರೆದರೆ ಮಾತ್ರ ಕೆಲಸವಾಗುತ್ತದೆಂಬ ನಂಬಿಕೆ. ಅವರ ಆಪ್ತಸಹಾಯಕ “ ಸಾರ್.. ಸಾಹೇಬರು ಹಾಗೆಲ್ಲಾ ಸಣ್ಣಪುಟ್ಟವರಿಗೆಲ್ಲಾ ಲೆಟರ್ ಬರೆಯಲ್ಲ. ಅವರದೇನಿದ್ರೂ ಮಿನಿಸ್ಟ ಲೆವೆಲ್ಲು. ಆಯಮ್ಮ ಬೇರೆ ಬೇರೆ ಪಕ್ಷ. ಬರಿತಾರಾ? ಅವರು ಬರೆಯುವುದೇನಿದ್ರೂ ಮಿನಿಸ್ಟಿಗೆ ಮಾತ್ರ ಎಂದರು. ಸರಿ ಸರ್. ಆದರೆ ಪ್ರತಿಯನ್ನು ಅಧ್ಯಕ್ಷರಿಗೆ ಎಂದು ನಮೂದಿಸಬಹುದಲ್ಲ ಎಂದು ಸಲಹೆ ಇತ್ತೆ. ಇದಾದ ಒಂದು ವಾರದ ನಿರಂತರ ಅನುಸರಣೆಯ ನಂತರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಬರೆದ ಪತ್ರ ಕೈಗಿತ್ತರು. ಅದರ ಮೂಲಪ್ರತಿಯನ್ನು ಬೆಂಗಳೂರಿಗೆ ಅಂಚೆ ಮೂಲಕ ಕಳಿಸಿ ಮತ್ತೊಂದು ಪ್ರತಿಯನ್ನು ಅಧ್ಯಕ್ಷರ ಕೈಗಿತ್ತೆ. ಒಂದು ಹಂತದ ಕಾರ್ಯ ಮುಗಿಯಿತು.

ಇದಾದ ಒಂದು ತಿಂಗಳ ನಂತರ ಉಪನಿರ್ದೇಶಕರು ಜೋಗಕ್ಕೆ ಅವರ ಕುಟುಂಬದ ಸ್ನೇಹಿತರ ಜೊತೆ ಹೊರಟವರು ಪಶುಚಿಕಿತ್ಸಾಲಯಕ್ಕೆ ಭೆಟ್ಟಿ ನೀಡಿ “ ಡಾಕ್ಟೆ. ಮೊನ್ನೆ ಜಿಲ್ಲಾ ಪರಿಷತ್ ಮೀಟಿಂಗ್ ಇತ್ತು. ನಿಮ್ಮ ಆಸ್ಪತ್ರೆ ಬೋರ್ವೆಲ್ ವಿಷಯ ಚರ್ಚೆಯಾಗಿ ನಿಮ್ಮ ಆಸ್ಪತ್ರೆಗೂ ಸಹ ಒಂದು ಕೊಡಬೇಕೆಂದು ಆಗಿದೆ ಕಣ್ರಿ” ಎಂದರು. ಸರಿ ಸರ್. ಆ ಸಭೆಯ ನಡಾವಳಿ ಇದ್ರೆ ಕಳಿಸಿ ಸಾರ್ ಎಂದೆ. ನನ್ನ ಆದರಾತಿಥ್ಯಕ್ಕೋ ಅಥವಾ ಅವರ ಮನೆಯವರಲ್ಲಿ ಸಾಹೇಬರಿಗೆ “ ನೆನಪು ಮಾಡಿ ಮೇಡಮ್ ಎಂಬುದಕ್ಕೋ ಗೊತ್ತಿಲ್ಲ ಉಪನಿರ್ದೇಶಕರ ಕಚೇರಿಯಿಂದ ಪಶುಚಿಕಿತ್ಸಾಲಯ ತಾಳಗುಪ್ಪಕ್ಕೆ ಬೋರ್ವೆಲ್ಲು ಬೇಕೆಂಬ ಇಲಾಖೆಯ ಪ್ರಸ್ತಾವನೆ, ಇದಕ್ಕೆ ಸ್ಥಳೀಯ ಜಿಲ್ಲಾ ಪರಿಷತ್ ಸದಸ್ಯರ ಸಹಮತ, ಮಾನ್ಯ ಶಾಸಕರ ಟಿಪ್ಪಣಿ ಇವೆಲ್ಲವುಗಳನ್ನು ಆಧರಿಸಿ ಬೋರ್ವೆಲ್ಲು ಮಂಜೂರಾಗಿದೆಯೆಂದು ನಮೂದಿಸಿದ ನಡಾವಳಿ ಕೈಸೇರಿತು.ಇನ್ನೇನು. ಬೋರ್ವೆಲ್ಲು ಆದ ಹಾಗೆಯೇ ಅಲ್ಲ ಎಂದು ನಿರಾಳವಾದೆ.

ಆದರೆ ಬೋರ್ವೆಲ್ಲು ಕೊರೆಯಲು ಈವತ್ತು ಬರುತ್ತಾರೆ ನಾಳೆ ಬರುತ್ತಾರೆ ಎಂದು ಕಾದಿದ್ದು, ಮುಖ್ಯ ರಸ್ತೆಯಲ್ಲಿ ಓಡಾಡುವ ಬೋರ್ವೆಲ್ಲು ಕೊರೆಯುವ ಬೃಹದಾಕಾರದ ಲಾರಿಗಳನ್ನೆಲ್ಲಾ ಆಸೆಗಣ್ಣಿನಿಂದ ನೋಡಿದ್ದೇ ಬಂತು. ನಮ್ಮ ಜವಾನನಿಗೂ ಸಹ ಏನೋ ಒಂದು ಆಸೆ. ಬೋರ್ವೆಲ್ಲಿನ ನೀರನ್ನು ಎದುರಿನ ಅಂಗಡಿಯವರಿಗೆಲ್ಲಾ ನೀಡಬೇಕೆಂಬ ಒಡಂಬಡಿಕೆಯೂ ಸಹ ಆಗಿ ಹೋಯ್ತು.

ಆ ದಿನ ರಾತ್ರಿ ಎಲ್ಲಿಯೋ ತುಮರಿ ಬ್ಯಾಕೋಡುಗಳ ಕಡೆ ತುಂಬಾ ದೂರ ಹೋಗಿ ಬಂದಿದ್ದರಿಂದ ತುಂಬಾ ಸುಸ್ತಾಗಿತ್ತು. ಮನೆಗೆ ಬರುವುದೇ ತಡ. ಊಟ ಮಾಡಿ ಇನ್ನೇನು ಮಲಗಲು ಸಿದ್ಧತೆ ನಡೆಸಿದ್ದೆ. ಅಷ್ಟರಲ್ಲೇ ನನ್ನ ಜವಾನ ಬಾಗಿಲು ತಟ್ಟತೊಡಗಿದ. “ಸಾರ್.. ಸಾರ್. ಏಳಿ. ಬೋರ್ವೆಲ್ ಲಾರಿ ಬಂದಿದೆ. ಆದ್ರೆ ಪಕ್ಕದಾಸ್ಪತ್ರೆ ಜಾಗದಲ್ಲಿ ಕೊರಿತೀದಾರಂತೆ. ಬೇಗ ಹೋಗ್ಬೇಕು ಸಾರ್” ಎಂದು ಗಡಿಬಿಡಿ ಮಾಡಿದ. “ಅದ್ಯಾಂಗೋ ಬ್ಯಾರೆ ಕಡೆ ಕೊರೀತಾರೆ? ನಮ್ಗಲ್ವೇ ಬೋರ್ವೆಲ್ಲು ಮಂಜೂರಾಗಿದ್ದು? ಅಷ್ಟಕ್ಕೂ ರಾತ್ರಿ ಯಾಕೆ ಕೊರಿತಾರೆ? ನಾಳೆ ಬೆಳಿಗ್ಗೆ ಕೊರೆಯೋಕೆ ಹೇಳೋ!” ಎಂದೆ. ಸಾರ್. ಅದ್ಯಾವುದೋ ಸುಡುಗಾಡು ಭಾಷೆ ಮಾತಾಡ್ತಿದಾರೆ. ನನಗೇನೂ ಅರ್ಥವಾಗಿಲ್ಲ. ನೀವೇ ಬನ್ನಿ ಸಾರ್” ಎಂದ. ಕೂಡಲೇ ಹೋದೆ. ನಿಜ. ಪಕ್ಕದ ಮನುಷ್ಯರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬಾವಿ ಕೊರೀತಿದಾರೆ. ಭೀಕರ ಶಬ್ಧದೊಂದಿಗೆ ಭೂಮಿಯನ್ನು ಕೊರೆಯುತ್ತಿತ್ತು ಬೋರ್ವೆಲ್ ಮಷೀನ್. “ರೀ.. ನಿಲ್ಸಿ… ಅದು ನಮ್ಮ ಜಾಗದಾಗೆ ಬೋರು ಕೊರೀಬೇಕು. ಬೋರು ನಮಗೆ ಮಂಜೂರಾಗಿದ್ದು” ಎಂದು ಬೊಬ್ಬಿರಿದೆ. ಭಯಂಕರ ಶಬ್ಧದಲ್ಲಿ ಯಾರಿಗೂ ಯಾರ ಧ್ವನಿಯೂ ಕೇಳಿಸುತ್ತಿರಲಿಲ್ಲ. ಬೋರೆ ಕೊರೆಯುವವ ಯಾವುದೋ ಭಾಷೆಯಲ್ಲಿ ಮಾತನಾಡಿದ. ಬಹುಷ ತಮಿಳು ಅನಿಸುತ್ತೆ. ಲಾರಿಗೂ ಸಹ ತಮಿಳುನಾಡಿದದೇ ನೋಂದಣಿ ಇತ್ತು. ಅಂತೂ ಇಂತೂ ನನ್ನ ಒತ್ತಾಯಕ್ಕೆ ಆತ ಬೋರುಯಂತ್ರದ ಮೊರೆತದ ಶಬ್ಧ ಕಡಿಮೆ ಮಾಡಿದ. ನಾನು ಕೈಸನ್ನೆ ಬಾಯಿ ಸನ್ನೆಗಳ ಮೂಲಕ ಬಾವಿ ಮಂಜೂರಾಗಿದ್ದು ಪಶುಚಿಕಿತ್ಸಾಲಯಕ್ಕೆಂದೂ ಆದರೆ ನೀವು ಬಾವಿ ಕೊರೆಯುವುದು ಮನುಷ್ಯರ ಆಸ್ಪತ್ರೆಯ ಜಾಗದಲ್ಲೆಂದೂ ಹೇಳಲು ಪ್ರಯತ್ನಿಸಿದ್ದು ಆತನಿಗೆ ಅರ್ಥವಾಯಿತು ಅನಿಸುತ್ತೆ. ಎಡವಟ್ಟಾಗಿದ್ದು ಮನವರಿಕೆಯಾದ ಆತ ಅವನ ಯಜಮಾನನಿಗೆ ನಮ್ಮ ಆಸ್ಪತ್ರೆಯ ದೂರವಾಣಿಯಿಂದ ಕರೆ ಮಾಡಿ ವಿಷಯ ತಿಳಿಸಿದ. ಕಂಟ್ರಾಕ್ಟರುದಾರ ಚಿತ್ರದುರ್ಗದ ಕಡೆಯವ ಅನಿಸುತ್ತೆ. ಆತ “ ಸಾರ್, ತಾಳಗುಪ್ಪದ ಆಸ್ಪತ್ರೆಗೆ ಬಾವಿ ತೆಗೆದು ಬಾ ಅಂದಿದ್ದರೆ. ಆದರೆ ಅಲ್ಲಿ ಪಶು ಆಸ್ಪತ್ರೆನಾ ಅಥವಾ ಮನುಷ್ಯರ ಆಸ್ಪತ್ರೆನಾ ಹೇಳಲೇ ಇಲ್ಲ” ಅಂದ. ಅಲ್ರೀ.. ಅಷ್ಟೂ ತಿಳಿದೆ ಬೋರ್ ಕೊರಿತೀರಲ್ಲ. ಇದಕ್ಕೆಲ್ಲಾ ಭೂಗರ್ಭಶಾಸ್ತçಜ್ಞರು ಬರೋದು, ಸ್ಥಳ ಪರಿಶೀಲನೆ ಮಣ್ಣು ಮಸಿ ಎಂತದೂ ಇಲ್ವಾ? ಹೋಗ್ಲಿ ಎಲ್ಲಿ ಬೋರು ಕೊರಿತೀರಿ ಅನ್ನೋದಾದ್ರೂ ಗೊತ್ತಿರಬೇಕಲ್ವಾ? ಇಡೀ ವರ್ಷ ಕಷ್ಟ ಪಟ್ಟಿರೋದು ನಾವು. ಪಶು ಆಸ್ಪತ್ರೆಗೆ ಬೋರು ಕೊರೀ ಬೇಕು ಹೋಗಿ ಹೋಗಿ ಮನುಷ್ಯರ ಆಸ್ಪತ್ರೆಗೆ ಬೋರು ಕೊರಿತಿದಿರಲ್ವಾ? ಎಂತಹ ವ್ಯವಸ್ಥೆನೋ ಇದು? ಎಂದು ರೇಗಿದೆ. ಈ ಯಜಮಾನ ಮನುಷ್ಯನಿಗೇನೂ ಗೊತ್ತು ಎಲ್ಲಿ ಕೊರೀಬೇಕೂಂತ. ಅವನಿಗೆ ಇಂತಲ್ಲೆಲ್ಲಾ ಬೋರು ಕೊರಿಬೇಕು ಅಂತ ಚೀಟಿಯಲ್ಲಿ ಬರೆದು ಕೊಟ್ಟೀದ್ದಾರೆ, ಆತನಿಗೆ ಸಂಖ್ಯೆ ಅಷ್ಟೇ ಮುಖ್ಯ, ಎಲ್ಲಿ ಯಾರದು ಇತ್ಯಾದಿ ತೆಗೆದುಕೊಂಡು ಅವನಿಗೇನಾಬೇಕಾಗಿದೆ? ಹೋಗ್ಲಿ ಬಿಡ್ರಿ.. ಅಲ್ಲೊಂದು ಇಲ್ಲೊಂದು ಎರಡೂ ಕಡೆ ಬಾವಿ ಕೊರ್ದು ಬಿಡಪ್ಪಾ. ಹೇಗೂ ಗೊಂದಲ ಇದೆ ಅಂದೆ. ನನ್ನ ದುರಾದೃಷ್ಟಕ್ಕೆ ಬೆಳಗಾದರೆ ಮರುದಿನ ರಜಾ ದಿನ. ಎಲ್ಲಿ ದೂರವಾಣಿ ಮಾಡಿದರೂ ಸಹ ರಿಂಗಾಗುತ್ತಿತ್ತೇ ಹೊರ್ತು ಯಾರೂ ಫೋನೇ ತೆಗೆಯುತ್ತಿರಲಿಲ್ಲ. ಇದೆಲ್ಲಾ ನಿರ್ವಹಿಸುವ ಜಿಲ್ಲಾ ಪರಿಷತ್ ಇಂಜಿನಿಯರಿಂಗ ವಿಭಾಗದವರಿಂದ ಒಂದು ಮಾತು ಹೇಳಿಸಿಬಿಡೋಣ ಎಂದು ಕೈಗೆ ಸಿಗಬೇಕಲ್ಲ ಭೂಪರು!.

ಇದು ಗೊತ್ತಾಗಿಯೋ ಏನೋ ಬೋರು ಕೊರೆಸುವ ಯಜಮಾನ ಪುನ: ಯಂತ್ರವನ್ನು ಮೊರೆಸಲು ಶುರು ಮಾಡಿದ. ನಾನು ಪರಿಪರಿಯಾಗಿ ತಮಿಳು ಮಾತನಾಡುವವನಿಗೆ ವಿನಂತಿಸಿದರೂ ಆತ ಕೆಲಸ ನಿಲ್ಲಿಸಲು ಸಿದ್ಧವೇ ಇರಲಿಲ್ಲ. “ಆರ್ಡರ್ ಆಗಿದೆ. ಕೊರೆದೇ ಹೋಗುವೆವು” ಇದು ಆತನ ತೀರ್ಮಾನ. ನಾನೂ ಅಸಹಾಯಕನಾಗಿ ಸುಮ್ಮನೇ ನಿಂತುಕೊAಡೆ. ಭೋರ್ಗೆರೆಯುವ ಯಂತ್ರದ ಶಬ್ಧದಲ್ಲಿ ನನ್ನ ಧ್ವನಿ ಉಡುಗಿ ಹೋಯಿತು. ಕೂಗಿ ಕೂಗಿ ಗಂಟಲು ಬಿದ್ದು ಹೋಗಿತ್ತು. ಬೋರು ಭೂಮಿಯ ಒಡಲನ್ನು ಭೇಧಿಸಿ ಭೋರ್ಗೆರೆಯುತ್ತಾ ಧೂಳಿನ ಪುಡಿಗಳನ್ನು ರಾಚುತ್ತಿತ್ತು. ಸ್ವಲ್ಪಹೊತ್ತಿಗೇ ಒಂದಿಷ್ಟು ಒದ್ದೆ ಪಸೆ ಬಂದಿತು. ಎಲ್ಲರೂ ಖುಷಿ ಪಟ್ಟರು. ನಾನು ಖುಷಿ ಅನುಭವಿಸುವ ಸ್ಥಿತಿಯಲ್ಲಿರಲಿಲ್ಲ. ಅಸಹಾಯಕತೆಯ ಪರಮಾವಧಿ ತಲುಪಿದ ನಾನು ಎಲ್ಲಿ ಸೋತೆ ಎಂದು ನನ್ನನ್ನು ನಾನೇ ಪ್ರಶ್ನಿಸುತ್ತಿದ್ದೆ. ಇವರಿಗೆ ಆಸ್ಪತ್ರೆ ಅಂದರೆ ಮನುಷ್ಯರ ಆಸ್ಪತ್ರೆ ಮಾತ್ರ. ದನದ ಆಸ್ಪತ್ರೆ ಎಂದರೆ ಲೆಕ್ಕವೆ ಇಲ್ಲ. ಪಶು ಆಸ್ಪತ್ರೆಯ ಆವರಣದಲ್ಲಿಯೇ ಬೋರು ಮಂಜೂರಾಗಿದ್ದು ಎಂದು ಹೇಗೆ ಸಾಬೀತು ಮಾಡುವುದು? ಮಾಡಿದರೂ ಏನು ಪ್ರಯೋಜನ? ಮನುಷ್ಯರ ಜೀವ ಮುಖ್ಯ. ದನದ್ದಾದ್ರೆ ಉಡಾಫೆ. ನನ್ನ ಇಲಾಖೆಯ ಹಿರಿಯ ಅಧಿಕಾರಿಗಳ ಮೇಲೆ, ನನಗೆ ಹಿಗ್ಗಾ ಮುಗ್ಗಾ ಬಯ್ದ ಜಿಲ್ಲಾ ಪರಿಷತ್ತಿನ ಐಎಎಸ್ ಆಡಳಿತದಾರನ ಮೇಲೆ, ವ್ಯವಸ್ಥೆಯ ಮೇಲೆಯೇ ಜಿಗುಪ್ಸೆ ಬಂದಿತು. ಅಷ್ಟೊತ್ತಿಗೆ ನನ್ನ ಜವಾನ “ ನೀರು ಬಂತು ಸಾರ್, 3 ಇಂಚು ನೀರು. ಇಡೀ ತಾಳಗುಪ್ಪಕ್ಕೆ ಕೊಡಬಹುದಂತೆ” ಎಂದು ಸಂಭ್ರಮದೊAದಿಗೆ ಹೇಳುತ್ತಿರುವುದು ಕೇಳಿದಾಗ ಆಗ ಬೆಳಿಗ್ಗೆ 6 ಗಂಟೆಯಾಗಿರುವುದು, ನಾನು ಪಶುಚಿಕಿತ್ಸಾಲಯದ ಮೇಜಿನ ಮೇಲೆ ಕೈಯೂರಿ ಅದರ ಮೇಲೆಯೇ ತಲೆಯೂರಿ ಮಲಗಿ ನಿದ್ರಿಸಿದ್ದು ಗಮನಕ್ಕೆ ಬಂತು.

ಕೂಡಲೇ ಹೊರಗೆ ಓಡಿದೆ. ಬೋರಿನ ಮೊರೆತ ಕಡಿಮೆಯಾಗಿ ಸಣ್ಣ ಶಬ್ಧದಲ್ಲಿ “ಟುಸ್.. ಶ್.. ಪುಸ್” ಎಂದೆಲ್ಲಾ ಮದುವೆ ಮನೆಯ ಹಳಸಿದ್ದನ್ನು ತಿಂದ ಹಸುವಿನಂತೆ ವಿವಿಧ ರಂದ್ರಗಳಿಂದ ಶಬ್ಧ ಹೊರಡಿಸುತ್ತಿತ್ತು. ತೂತು ಕೊರೆಯುತ್ತಿರುವ ಕಬ್ಬಿಣದ ಸಲಾಕೆಯ ಪಕ್ಕದಿಂದ ಜಲರಾಶಿ ನಭಕ್ಕೆ ಚಿಮ್ಮುತ್ತಿರುವುದು ನಯನ ಮನೋಹರವಾಗಿತ್ತು. ಆದರೆ ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ ಎಂಬುದು ಇದೇ ಇರಬೇಕು ಅಂದುಕೊ0ಡೆ. ಎಷ್ಟು ನೀರು ಬಂದ್ರೆ ನಮ್ಮದಲ್ಲವಲ್ಲ. ಮನುಷ್ಯರ ಆಸ್ಪತ್ರೆಯವರು ಚಾನ್ಸ್ ಹೊಡೆದ್ರು” ಎಂದು ಕರುಬಿದೆ. ಬೋರಿನ ಕೆಲಸ ಬಹುತೇಕ ಮುಗಿದಿತ್ತು ಅನಿಸುತ್ತೆ. ಅರೆ.. ಬೋರು ಕೊರೆಯುವವರ ಪರಿವಾರವೆಲ್ಲಾ ಅಲ್ಲಿಯೇ ಟಿಕಾಣಿ ಹೂಡಿ, ಚಾ ಕಾಸುತ್ತಿದ್ದರು. ಆತನದು ಇಡೀ ಸಂಸಾರದವರೆಲ್ಲಾ ಅಲ್ಲಿಯೇ ಇದ್ದರು. ಸಿಂಬಳ ಸುರಿಸುವ ಚಿಕ್ಕ ಮಗು, ಅವರಮ್ಮ, ಕೋಳಿ, ಎರಡು ಕುರಿ ಎಲ್ಲಾ ಬಿಡಾರವೇ ಅಲ್ಲಿತ್ತು. ಬೆಳಗಿನ ತಿಂಡಿ ಅವಲಕ್ಕಿ ಮಾಡುವ ಸಲುವಾಗಿ ಸಕಲ ಸಿದ್ಧತೆಗಳೂ ನಡೆದಿದ್ದವು. ಅವಲಕ್ಕಿಯ ಒಗ್ಗರಣೆಯ ಪರಿಮಳ ನನ್ನನ್ನು ಮನೆಯೆಡೆ ತೆರಳುವಂತೆ ಮಾಡಿತು. ಸಿಕ್ಕಾ ಪಟ್ಟೆ ಅನ್ಯಮನಸ್ಕನಾಗಿ ಸ್ನಾನ, ತಿಂಡಿ ಮುಗಿಸಿ ಪುನ: ಆಸ್ಪತ್ರೆಗೆ ಹಾಜರಾದೆ.

ಅಷ್ಟು ಹೊತ್ತಿಗೆಲ್ಲಾ ಬೋರು ಯಂತ್ರದ ತರಹೇವಾರು ಶಬ್ಧವಡಗಿ ಬೋರಿನ ಕಿಂಡಿಗೆ ಒಂದು ಮುಚ್ಚಳ ಕೂರಿಸಿ ಲಾರಿ ಅಲ್ಲಿಂದ ಕಾಲ್ಕಿತ್ತಿತ್ತು. ಪಕ್ಕದ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಅವರ ಸಿಬ್ಬಂದಿ ವರ್ಗವೆಲ್ಲಾ ಬೋರಿನ ಸುತ್ತಲೇ ನಿಂತು ಮಾತನಾಡುತ್ತಿರುವುದು ಗಮನಕ್ಕೆ ಬಂದಿತು. ಬಯಸದೇ ಬಂದ ಭಾಗ್ಯ ಯಾರಿಗೆ ಬೇಡ? ನಾನು ಐದಾರು ಕಾರ್ಬನ್ ಕಾಗದಗಳನ್ನು ಹಾಕಿಕೊಂಡು ಪತ್ರ ಕುಟ್ಟತೊಡಗಿದೆ. ಹೇಗೆ ನಮಗೆ ಮಂಜೂರಾದ ಬೋರುವೆಲ್ಲು ಪಕ್ಕದ ಆಸ್ಪತ್ರೆಯ ಆವರಣಕ್ಕೆ ಹೋಯಿತು ಎಂದು ಮತ್ತು ನಮ್ಮ ಆಸ್ಪತ್ರೆಗೆ ಆದಷ್ಟು ಶೀಘ್ರ ಹೊಸಬೋರು ಹಾಕಿಸಿಕೊಡಬೇಕೆಂದು ಬರೆದೆ. ಏಕೋ ಮೊದಲಿನ ಉತ್ಸಾಹವೇ ಹೊರಟು ಹೋಗಿತ್ತು. ರಜೆಯ ಮರುದಿನವೇ ಜಿಲ್ಲಾ ಪರಿಷತ್ ಇಂಜಿನಿಯರಿAಗ್ ವಿಭಾಗಕ್ಕೆ ಹೋಗಿ ನನ್ನ ದೂರು ಧುಮ್ಮಾನ ಹೇಳಿಕೊಂಡೆ. ಅವರು ಎಂದಿನಂತೆಯೇ “ ಆದದ್ದು ಆಗಿ ಹೋಯ್ತು. ಅದೂ ಸಾರ್ವಜನಿಕ ಆಸ್ಪತ್ರೆಯಲ್ಲವೇ? ತಗೊಳ್ಳಲಿ ಬಿಡಿ. ಈ ವರ್ಷದ ಅನುದಾನವೆಲ್ಲಾ ಖಾಲಿ. ತಾಳಗುಪ್ಪದ ಕೋಟಾ ಮುಗಿದಾಯ್ತು. ಮುಂದಿನ ವರ್ಷ ನಿಮ್ಮ ಆವರಣಕ್ಕೂ ಹಾಕಿದರಾಯ್ತು ಎಂದು ಕೈತೊಳೆದುಕೊಂಡು ಬಿಟ್ಟರು. ನಾನೂ ಛಲಬಿಡದ ತ್ರಿವಿಕ್ರಮನಂತೆ ಜಿಲ್ಲಾ ಪರಿಷತ್ತಿನ ಅಧ್ಯಕ್ಷರ ಹೋಗಿ ನನ್ನ ಅಳಲು ತೋಡಿ ಕೊಂಡೆ. ಅವರೂ ಸಹ ಸಂತಾಪ ವ್ಯಕ್ತಪಡಿಸುತ್ತಾ “ ಡಾಕ್ಟೆç.. ಬೇಸರ ಪಡಬೇಡಿ. ನಮ್ಮ ವ್ಯವಸ್ಥೆಯೇ ಹಾಗೆ. ಯಾರಿಗೋ ಟೆಂಡರ್ ಆಗುತ್ತೆ. ಅವರಿಗೆ ನಮ್ಮ ಭಾಗದ ಪರಿಚಯವೇ ಇರುವುದಿಲ್ಲ. ಆದದ್ದು ಆಗಿ ಹೋಗಿದೆ. ಮುಂದೆ ನೋಡೋಣ:” ಎಂದು ಮತ್ತೊಬ್ಬರ ಕಡೆ ತಿರುಗಿದರು. “ ಮೇಡಂ. ಆದದ್ದು ಆಗಿ ಹೋಗಿದೆ. ಇನ್ನೊಂದು ಬಾವಿ ತೆಗೆಸುವ ವರೆಗೂ ಇದಕ್ಕೆ ಪಂಪು ಅಳವಡಿಸಿ ನೀರನ್ನು ನಮಗೇ ಬಿಡಬಹುದಲ್ಲ ಎಂದು ಹೊಸ ಸೂತ್ರ ಮಂಡಿಸಿದೆ. ಅವರಿಗೂ ನನ್ನ ಸೂಚನೆ ಅಪ್ಯಾಯಮಾನವಾಗಿ ಕಂಡಿತು ಅನಿಸುತ್ತದೆ. ನೋಡೋಣ..ಪಂಪು ಅಳ್ವಡಿಸುವಾಗ ಏನಾದರೂ ಮಾಡಬಹುದು, ಆದರೆ ನಿಮ್ಮ ಶಾಸಕರು ಮತ್ತು ಮಂತ್ರಿಗಳಿಗೆ ನೀವೇ ಹೇಳಿಕೊಳ್ಳಬೇಕು ಎಂದರು. ” ಎಂದರು.

ಆಗ ಶ್ರೀ ಕಾಗೋಡು ತಿಮ್ಮಪ್ಪನವರು ಸಮಾಜ ಕಲ್ಯಾಣ ಸಚಿವರು. ಪ್ರವಾಸಿ ಮಂದಿರದಲ್ಲಿ ನಿರಂತರ ಕಾರ್ಯಗಳಲ್ಲಿ ಮಗ್ನರಾಗಿದ್ದ ಅವರನ್ನು ಕಂಡು ಸವಿವರ ಹೊಂದಿದ ಮನವಿ ಸಲ್ಲಿಸಿದೆ. ಅವರಿಗೆ ಏನನಿಸಿತೋ ಏನೋ? ಅಲ್ಲಿಯೇ ಇದ್ದ ಇಂಜಿನಿರ‍್ರನ್ನು ಕರೆದು “ ರೀ ತಾಳಗುಪ್ಪದಲ್ಲಿನ ಬೋರಿಗೆ ಪಂಪು ಹಾಕಿಸಿ ಎರಡೂ ಮನ್ಸ್ç ಮತ್ತು ದನೀನ ಆಸ್ಪತ್ರೆಯವರು ಬಳಸುವಂತೆ ಮಾಡ್ರೀ” ಎಂದರು. ಅವರ ಆದೇಶದ ಪರಿಣಾಮವೋ ಏನೋ ಬಾವಿಗೆ ಪಂಪು ಹಾಕಿ ಅದರಿಂದ ಮನುಷ್ಯರ ಆಸ್ಪತ್ರೆಯ ಮತ್ತು ಪಶು ಆಸ್ಪತ್ರೆಯ ಕಡೆ ಪೈಪೆಳೆದು ಶೆಡ್ಡಿನ ಎರಡು ಬೀಗದ ಕೈ ಮಾಡಿಸಿ ಮನುಷ್ಯರ ಆಸ್ಪತ್ರೆಗೊಂದು ನಮಗೊಂದು ಕೀಲಿ ಮಾಡಿಸಿಕೊಟ್ಟರು. ಸರಿ. ನೀರಿನ ಬವಣೆ ನೀಗಿ ನಾವು ಸಮೃದ್ಧರಾದೆವು ಎಂದು ಬೀಗುವಷ್ಟರಲ್ಲಿ ಮತ್ತೊಂದು ಸಮಸ್ಯೆ ಬಂದು ನುಗ್ಗಿತು. ಈ ಪಂಪಿನ ಬಿಲ್ಲು ಕಟ್ಟಬೇಕಲ್ಲ? ತಿಂಗಳಿಗೆ 2-3 ಸಾವಿರ ಬಿಲ್ಲು ಬಂದರೆ ಯಾರು ಕಟ್ಟುವುದು? ಎಲ್ಲರೂ ಪಂಪಿನ ಕೀಲಿ ತೆಗೆದು ನೀರು ಹಾಯಿಸಿಕೊಳ್ಳುವವರೆ. ಆದರೆ ಯಾರದೆಷ್ಟು ಬಿಲ್ಲು? ಒಂದು ಪಂಪಿಗೆ ಎರಡು ಮೀಟರು ಅಳವಡಿಸಲು ಕಾನೂನಿನಲ್ಲಿ ಎಲ್ಲಿದೆ ಅವಕಾಶ? ಸರಿ ಅರ್ಧ, ಅರ್ಧ ಮಾಡಿಕೊಳ್ಳೋಣ ಎಂದು ಅಭಿಪ್ರಾಯ ಪಟ್ಟು ನಮ್ಮ ಉಪನಿರ್ದೇಶಕರಿಗೆ ಬರೆದು ಹಾಕಿದೆ. ಆದರೆ ವಿದ್ಯುತ್ ಮೀಟರು ವೈದ್ಯಾಧಿಕಾರಿಗಳ ಹೆಸರಿನಲ್ಲಿರುವುದರಿಂದ ಅದು ಸಾಧ್ಯವಿಲ್ಲ ಎಂದು ಉತ್ತರ ಬಂದಿತು. ಮತ್ತೆ ಸಹಾಯಕ್ಕೆ ಬಂದಿದ್ದು ಮಾನ್ಯ ಮಂತ್ರಿಗಳೇ. ಯಾರು ಏನೇ ಉಪಯೋಗಿಸಿದರೂ ಸಹ ಅದರ ಖರ್ಚು ಬೀಳುವುದು ಸರ್ಕಾರಕ್ಕೇ ಅಲ್ಲವೇ? ವೈದ್ಯಕೀಯ ಇಲಾಖೆಯೇ ಕಟ್ಟಲಿ, ಆದರೆ ಪಶುಪಾಲನೆ ಇಲಾಖೆಗೂ ಸಹ ನೀರು ಕೊಡಲಿ ಎಂದು ಅವರೇ ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಸಹ ಆಗಿರುವುದರಿಂದ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿ ಬಿಟ್ಟರು. ಇದಕ್ಕೆ ಉಭಯತರೂ ಒಪ್ಪಿದೆವು. ಆಗ ಇದ್ದ ಸಹೃದಯಿ ವೈದ್ಯಾಧಿಕಾರಿಗಳು ಡಾ: ದಿನೇಶ್. ಅ ವರು ಈಗ ಎಲ್ಲಿದ್ದರೂ ಸಹ ಕೃತಜ್ಞತೆಗಳು. ಪಶು ಆಸ್ಪತ್ರೆಯೆಂದು ತಕರಾರು ಮಾಡದೇ ನೀರು ಬಿಟ್ಟಿರುವುದಕ್ಕೆ.


  • ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW