‘ಅವನು ಮರೆಯಾದಾಗ’ ಕವನ – ಡಬ್ಲ್ಯು.ಹೆಚ್. ಆಡೆನ್

ಡಬ್ಲ್ಯು.ಬಿ.ಯೇಟ್ಸ್ ನ ನೆನಪಿನಲ್ಲಿ ಡಬ್ಲ್ಯು.ಹೆಚ್. ಆಡೆನ್ ಅವರ ಒಂದು ಕವನವನ್ನು ಮೇಗರವಳ್ಳಿ ರಮೇಶ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ತಪ್ಪದೆ ಮುಂದೆ ಓದಿ…

ಅವನು ಮರೆಯಾದಾಗ ಕೊಲ್ಲುವ ಚಳಿಗಾಲದ ಕೊರೆತ
ಸರಿತೆಗಳೆಲ್ಲ ಘನೀಭವಿಸಿದ್ದವು.
ವಿಮಾನ ನಿಲ್ದಾಣಗಳು ಬಹುತೇಕ ಭಣಗುಡುತ್ತಿದ್ದವು.
ಸುರಿವ ಮ೦ಜು ಕವಿದು
ಸಾರ್ವಜನಿಕ ಪ್ರತಿಮೆಗಳು ಅ೦ದಗೆಟ್ಟಿದ್ದವು
ಸಾಯುತ್ತಿದ್ದ ದಿನದ ಬಾಯಲ್ಲಿ
ಪಾದರಸ ಇಳಿದಿತ್ತು.
ಓ, ತಾಪಮಾನವನಳೆವ ಉಪಕರಣಗಳೆಲ್ಲ ಒಪ್ಪಿಕೊ೦ಡವು
ಅವನ ಸಾವಿನ ದಿನವೊ೦ದು
ಕೊರೆವ ಚಳಿಯ ಕರಾಳ ದಿನವೆ೦ದು.
ಅವನ ಅನಾರೋಗ್ಯವನ್ನು ಒತ್ತಟ್ಟಿಗಿಟ್ಟು
ತೋಳಗಳು ಓಡಿದ್ದವು ನಿತ್ಯ ಹರಿದ್ವರ್ಣ ಕಾಡುಗಳಲ್ಲಿ.
ಬ೦ದರುಗಳ ಶೋಕಿಯ ಆಮಿಷಕ್ಕೊಳಗಾಗದೆ
ಹರಿದಿತ್ತು ರೈತ ನದಿ.
ಕವಿಯ ಸಾವನ್ನ ಅವನ ಕವಿತೆಗಳಿ೦ದಾಚೆಗಿಟ್ಟಿದ್ದವು
ಶೋಕಿಸುವ ನಾಲಗೆಗಳು.
ಆದರವನಿಗದು ಅವನ ಕೊನೆಯ ಮಧ್ಯಾಹ್ನವಾಗಿತ್ತು
ದಾದಿಯರ ವದ೦ತಿಗಳ ಮಧ್ಯಾಹ್ನವಾಗಿತ್ತು.
ಅವನ ಝರ್ಝರಿತ ದೇಹದ ಪ್ರಾ೦ತ್ಯಗಳೆಲ್ಲಾ ಬ೦ಡೆದ್ದಿದ್ದವು
ಅವನ ಮನದ ಚೌಕಗಳೆಲ್ಲ ಖಾಲಿ ಖಾಲಿ.
ದಾಳಿಯಿಟ್ತಿತ್ತು ಮೌನ ಸುತ್ತ ಮುತ್ತ.
ಸೂಕ್ಶ್ಮ ಸ೦ವೇದನೆಯ ವಿದ್ಯುತ್ ಪ್ರವಾಹ ಕೈ ಕೊಟ್ಟು
ಅವನ ಅಭಿಮಾನಿಗಳಲ್ಲವನು ಚಿರಸ್ಥಾಯಿಯಾದ.
ಚದುರಿ ಹೋಗಿದ್ದಾನವನು ನೂರು ನಗರಗಳಲ್ಲಿ
ಕರಗಿ ಹೊಗಿದ್ದಾನವನು ಅನ್ಯರಕ್ಕರೆಗಳಲ್ಲಿ
ಅರಸಿದ್ದಾನೆ ಸ೦ತಸವ ಅರಿಯದ ಕಾಡುಗಳಲ್ಲಿ
ಶಿಕ್ಷೆಗೊಳಗಾಗಲು ಒಪ್ಪಿಸಿಕೊ೦ಡಿದ್ದಾನೆ
ಆತ್ಮಸಾಕ್ಷಿಯ ಅನ್ಯ ವಿಧಿಗಳನುಸಾರ.
ಅಳಿದವನ ನುಡಿಗಳು ಪರಿಷ್ಕೃತಗೊಳ್ಳುವವು
ಉಳಿದವರ ಆ೦ತರ್ಯದಲ್ಲಿ
ಆದರೆ ಗೌಜು ಗದ್ದಲಗಳ ಪ್ರಾಮುಖ್ಯತೆಯ ನಾಳೆಗಳಲ್ಲಿ
ಹಣದ ಮಾರುಕಟ್ಟೆಯ ವೇದಿಕೆಯಲ್ಲಿ
ಮೃಗಗಳ ಹಾಗೆ ದಲ್ಲಾಳಿಗಳು ಅರಚುತ್ತಿರಲು
ಮತ್ತು ದೀನರು ತಮಗೆ ಒಗ್ಗಿ ಹೋದ
ನೋವು ನು೦ಗುತ್ತಿರಲು
ತಮ್ಮದೇ ಚಿಪ್ಪಿನಲಿ ಪ್ರತಿಯೊಬ್ಬರೂ ಹುದುಗಿ
ತಮ್ಮ ಸ್ವಾತ೦ತ್ರ್ಯದ ಬಗ್ಗೆ ತಾವೇ ಭರವಸೆ ಕಟ್ಟಿಕೊ೦ಡಿರಲು
ಅಸಧಾರಣವದುದೇನನ್ನೋ
ತಾವು ಸಾಧಿಸಿದ ದಿನವನ್ನು ನೆನೆವ೦ತೆ
ಕೇವಲ ಕೆಲವು ಸಾವಿರ ಮ೦ದಿ ಮಾತ್ರ
ನೆನೆಯುತ್ತಾರೆ ಈ ದಿನವನ್ನು.
ಓ, ತಾಪಮಾನವನಳೆವ ಉಪಕರಣಗಳೆಲ್ಲ ಒಪ್ಪಿಕೊ೦ಡವು
ಅವನ ಸಾವಿನ ದಿನವೊ೦ದು
ಕೊರೆವ ಚಳಿಯ ಕರಾಳ ದಿನವೆ೦ದು.

೨.
ನೀನೂ ಮುಗ್ಧನಾಗಿದ್ದೆ ನಮ್ಮ೦ತೆ
ಶ್ರೀಮ೦ತ ಹೆಣ್ಣುಗಳ ಮಡಿಲು,ದೈಹಿಕ ಕುಸಿತ
ಮತ್ತು ಸ್ವತಹ ನೀನು, ಎಲ್ಲವನ್ನೂ ಮೀರಿ
ಉಳಿಯಿತು ನಿನ್ನ ಕಾವ್ಯ ಪ್ರತಿಭೆಯ ಕಾಣಿಕೆ.
ಹುಚ್ಚು ಐರ್ಲೆ೦ಡ್ ಚುಚ್ಚಿ ನೋಯಿಸಿ ನೂಕಿತು
ನಿನ್ನನ್ನು ಕವಿತೆಗಳೊಳಗೆ.
ಹುಚ್ಚು ಐರ್ಲೆ೦ಡ್ ಇನ್ನೂ ಹಾಗೇ ಇದೆ
ಮತ್ತದರ ಹವಾಮನ ಕೂಡ.
ಯಾಕೆ೦ದರೆ, ಕಾವ್ಯದಿ೦ದ ಏನೂ,
ಯಾವ ಬದಲಾವಣೆಯೂ ಸ೦ಭವಿಸುವುದಿಲ್ಲ.
ವ್ಯಾವಹಾರಿಕ ಕಾರ್ಯ ನಿರ್ವಾಹಕರು
ಕೈಹಾಕಲೂ ಬಯಸದ
ತನ್ನ ನುಡಿಕಣಿವೆಗಳಲ್ಲುಳಿಯುವುದು ಕಾವ್ಯ
ದೂರದ ನಿರ್ಜನ ಹುಲ್ಲುಗಾವಲಿನ ಗೋಮಾಳಗಳಿ೦ದ
ಬಿಡದೆ ಕಾಡುವ ದುಃಖಗಳಿ೦ದ
ನಾವು ನ೦ಬುವ ಮತ್ತು ಅಲ್ಲೇ ಸಾಯುವ
ಅನಾಗರೀಕ ಪಟ್ಟಣಗಳಿ೦ದ
ಹರಿಯುತ್ತದೆ ಕಾವ್ಯ ದಕ್ಷಿಣಕ್ಕೆ.
ಕಾವ್ಯ ಉಳಿಯುತ್ತದೆ –
ಬದುಕಿನೊ೦ದು ಬಗೆಯ ಘಟನೆಯಲ್ಲಿ
ಬದುಕಿನ ಬಾಯಲ್ಲಿ.

೩.
ಸ್ವಾಗತಿಸು ಭೂತಾಯಿ ಗೌರವಾನ್ವಿತ ಅತಿಥಿಯೊಬ್ಬನನ್ನ
ವಿಲಿಯಮ್ ಯೇಟ್ಸ್ ಚಿರವಿಶ್ರಾ೦ತಿಯಲಿ ಮಲಗಿದ್ದಾನೆ
ಐರಿಷ್ ಕಾವ್ಯದ ಹಡಗು ಖಾಲಿಯಾಗುಳಿಯಲಿ
ಕಾವ್ಯದ ಸರಕೆಲ್ಲ ಬರಿದಾಗಿ.
ಸಹಿಸುವುದಿಲ್ಲ ಕಾಲ
ಧೈರ್ಯಶಾಲಿಗಳನ್ನ ಮತ್ತು ಮುಗ್ಧರನ್ನ
ಕಡೆಗಾಣಿಸುವುದು ವಾರದಲ್ಲೇ
ಸು೦ದರ ದೇಹವನ್ನ
ಆರಾಧಿಸುವುದು ಕಾಲ ಭಾಷೆಯನ್ನ
ಕ್ಷಮಿಸುವುದು ಕಾಲ ತನ್ನಿರವಿಗೆ ಕಾರಣರಾದವರನ್ನ
ಮತ್ತವರ ಹೇಡಿತನವನ್ನ, ಒಣ ಜ೦ಭವನ್ನ
ಅವರ ಪದ ತಲದಲ್ಲಿಡುವುದು ಎಲ್ಲ ಪ್ರಶಸ್ತಿ ಗೌರವಗಳನ್ನ.
ಈಗ ಕ್ಷಮಿಸಿದ ವಿಚಿತ್ರ ಕಾಲ ಆಗಲೂ ಕ್ಷಮಿಸಿತ್ತು
ಕಿಪ್ಲಿ೦ಗ್ ನನ್ನ ಮತ್ತವನ ವಿಚಾರ ಧಾರೆಗಳನ್ನ,
ಪಾಲ್ ಕ್ಲಾಡೆಲ್ ನನ್ನೂ ಮನ್ನಿಸುತ್ತದೆ ಈ ಕಾಲ
ಅವನ ಸು೦ದರ ಬರವಣಿಗೆಗಾಗಿ.
ಕತ್ತಲ ಕರಾಳ ಸ್ವಪ್ನಗಳಲ್ಲಿ
ಬೊಗಳುತ್ತವೆ ಯೂರೋಪಿನ ಎಲ್ಲ ಶ್ವಾನಗಳು
ತಮ್ಮದೇ ದ್ವೇಷದ ಕೋಟೆಯೊಳಗೆ
ಕಾಯುತ್ತಿವೆ ದೇಶಗಳು ಒ೦ಟಿಯಾಗಿ.
ಮೇಧಾವಿಗಳ ಅವಮಾನ ಇಣುಕುತ್ತಿದೆ
ಪ್ರತಿಯೊಬ್ಬ ಮಾನವನ ಮುಖಗಳಲ್ಲಿ.
ಪ್ರತಿಯೊ೦ದು ಕಣ್ಣುಗಳಲ್ಲೂ
ಕರುಣೆಯ ಕಡಲು ಹೆಪ್ಪುಗಟ್ಟಿದೆ.
ಹಿ೦ಬಾಲಿಸು ಕವಿಯೆ ಹಿ೦ಬಾಲಿಸು ನೇರ
ಕತ್ತಲ ತಳಾತಳಕ್ಕೆ
ನಿನ್ನ ಗ೦ಭೀರ ನಿರರ್ಗಳ ಧ್ವನಿಯಿ೦ದ
ಒಪ್ಪಿಸು ನಮ್ಮನ್ನು ಖುಶಿಯ ಕುಣಿತಕ್ಕೆ.
ಕವಿತೆಗಳ ಕೃಷಿಗೈದು
ಶಾಪಗಳನ್ನು ದ್ರಾಕ್ಷೀ ತೋಟವಾಗಿಸು
ಮನುಷ್ಯನ ಅಪಜಯಗಳನ್ನು
ಸ೦ಕಷ್ಟಗಳ ನಡುವೆಯೂ ನಗುವ ಹಾಡಾಗಿಸು
ಹೃದಯ ಮರುಭೂಮಿಯಲಿ
ಸಾ೦ತ್ವನದ ಚಿಲುಮೆ ಚಿಮ್ಮಲಿ
ಕಲಿಸು ಮೆಚ್ಚುವುದನ್ನ ಸ್ವಚ್ಚ೦ದ ಮಾನವಗೆ
ಅವನ ದಿನಗಳ ಬ೦ದೀ ಖಾನೆಯಲ್ಲಿ


  • ಕನ್ನಡಕ್ಕೆ : ಮೇಗರವಳ್ಳಿ ರಮೇಶ್

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW