ವಸುಂಧರೆ ತಲ್ಲಣವನ್ನು ಕವನದರೂಪವನ್ನು ಕೊಟ್ಟಿದ್ದಾರೆ ಪ್ರಭಾಕರ್ ತಾಮ್ರಗೌರಿ.ಅವರ ಕವನವನ್ನು ಓದಿ, ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಮೇಘರಾಜನ ಬರುವಿಕೆಗಾಗಿ
ಹಗಲಿರುಳು ಉರಿಯುತಿಹಳು
ವಿರಹ ವೇದನೆಯಲಿ
ಕಳೆದ ಸುಂದರ
ದಿನಗಳ ನೆನೆದು ವಸುಂಧರೆ !
ನಿನ್ನ ನೆನಪಿನಲಿ ಕಾತರಿಸಿ
ಬಳಲಿ ಬೆಂಡಾಗಿಹಳು
ಒಡಲೆಲ್ಲಾ ಬೆಂಕಿಯ ಜ್ವಾಲೆ
ಯಾರ ತಪ್ಪಿಗೆ
ಯಾರಿಗೋ ಶಿಕ್ಷೆ
ಯಾರದೋ ಕ್ರೌರ್ಯಕ್ಕೆ ಬಲಿಯಾಗಿಹಳು
ಈ ವಸುಂಧರೆ ( ಇಳೆ )
ಸದಾ ಹಸಿರುಟ್ಟು
ನಲಿಯುತ್ತಿದ್ದ ವಸುಂಧರೆ
ಇಳೆಯ ಚೆಲುವಿಕೆ ಮಾಯವಾಗಿ
ನೀನು ದೂರ ಸರಿಯುತಿರುವಿಯೇನು ….?
ನಿನ್ನ ಒಂದೊಂದು ಹನಿಯೂ
ವಸುಂಧರೆಗೆ ಅಮೃತ ಸಿಂಚನ
ನಿನ್ನ ಒಲವಿನ ಧಾರೆ
ನೀಡಬಲ್ಲದು ಇಳೆಗೆ
ಹೊಸ ಯೌವನ !
- ಪ್ರಭಾಕರ್ ತಾಮ್ರಗೌರಿ