ನಮ್ಮ ಹೆಮ್ಮೆಯ ಕನ್ನಡತಿ ಮಾನವ ಕಂಪ್ಯೂಟರ್ ಶಕುಂತಲಾ ದೇವಿ

ಕಂಪ್ಯೂಟರ್ ಗೆ ಸವಾಲಾಗಿದ್ದ ಹಾಗೂ ಮಾನವ ಕಂಪ್ಯೂಟರ್ ಎಂದೇ ಪ್ರಸಿದ್ಧರಾಗಿದ್ದ ವಿಶ್ವವಿಖ್ಯಾತಿ ಪಡೆದ ಕರ್ನಾಟಕದ ಶಕುಂತಲಾ ದೇವಿ ಅವರು ನಮ್ಮ ಹೆಮ್ಮೆಯ ಕನ್ನಡತಿ. ಸಿ.ಬಿ.ಎಸ್ ರಾಜಾರಾವ್ ಹಾಗೂ ಸುಂದರಮ್ಮ ದಂಪತಿಯ ಪುತ್ರಿ. ಶಕುಂತಲಾ ದೇವಿ ಅವರ ಜನ್ಮಸ್ಥಳ ಬೆಂಗಳೂರು. ಆದರೆ ಅವರ ಜನನ ವರ್ಷ ಕೆಲವು ಪತ್ರಿಕೆಗಳಲ್ಲಿ ೧೯೨೯ ಎಂದು, ಇನ್ನು ಕೆಲವು ಪತ್ರಿಕೆಗಳಲ್ಲಿ ೧೯೩೯ ಎಂದು ದಾಖಲಿಸಲಾಗಿದೆ.

ಶಕುಂತಲಾ ದೇವಿಯವರ ತಂದೆ ರಾಜಾರಾವ್ ಅವರ ವಂಶಪಾರಂಪರ್ಯ ವೃತ್ತಿ ಪೌರೋಹಿತ್ಯ. ಅವರು ಪೌರೋಹಿತ್ಯವನ್ನು ನಿರಾಕರಿಸಿ ಸರ್ಕಸ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರುತ್ತಾರೆ. ಪರಿಣಾಮವಾಗಿ ಅಲ್ಲಿ ಮಗಳಿಗೆ ‘ಇಸ್ಪೀಟ್ ಎಲೆ’ ಗಳಲ್ಲಿ ಕೆಲವು ಕೈಚಳಕಗಳ ಬಗ್ಗೆ ತರಬೇತಿ ನೀಡುತ್ತಾರೆ. ತಂದೆಯಿಂದ ಕಲಿತ ಈ ವಿದ್ಯೆ  ಈ ಪುಟ್ಟ ಬಾಲಕಿ ಶಕುಂತಲಾರವರ ಮೇಲೆ ಬಹಳ ಅದ್ಭುತ ಪರಿಣಾಮ ಬೀರಿತು. ಮಗಳ ಪ್ರತಿಭೆಯನ್ನರಿತ ರಾಜಾರಾವ್ ಹೆಚ್ಚು ಸಮಯವನ್ನು ತರಬೇತಿ ನೀಡುವಲ್ಲಿ ಕಳೆದರು. ಐದು ವರ್ಷ ತುಂಬಿದಾಗ ಶಕುಂತಲಾರಿಗೆ ಅಂಕಿ ಸಂಖ್ಯೆಗಳೇ ಆಟದ ಸಾಮಾನುಗಳಾಗಿದ್ದವು. ಮಗಳ ಸಾಮರ್ಥ್ಯವನ್ನರಿತ ರಾಜಾರಾವ್ ಅವರು ಸರ್ಕಸ್ ಕಂಪನಿಯನ್ನು ತೊರೆದು ಮಗಳ ಗಣಿತಜ್ಞಾನ ಪ್ರದರ್ಶನ ಮೇಳವನ್ನು ಏರ್ಪಡಿಸಲು ಆರಂಭಿಸಿದರು.

97071578_1061252307608487_3798392995531718656_o
ಫೋಟೋ ಕೃಪೆ : The Logical Indian

ಅಂಕಗಳೊಂದಿಗೆ ಆಡುವುದೆಂದರೆ ಶಕುಂತಲಾರಿಗೆ ನೀರು ಕುಡಿದಷ್ಟೇ ಸುಲಭವಾಯಿತು. ಕೇವಲ ಆರರ ಹರೆಯದಲ್ಲೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಾಲಕಿ ಶಕುಂತಲಾ ಒಂದು ಚಿಕ್ಕ ಪ್ರದರ್ಶನವನ್ನು ನೀಡುತ್ತಾರೆ. ಅಲ್ಲಿ ಹದಿಮೂರರಿಂದ ಇನ್ನೂರುರವರೆಗಿನ ಸಂಖ್ಯೆಗಳನ್ನಿಟ್ಟುಕೊಂಡು ಗುಣಾಕಾರ, ಭಾಗಾಕಾರ, ವರ್ಗಮೂಲ, ಘನಮೂಲ ಮೊದಲಾದ ಗಣಿತದ ಸಮಸ್ಯೆಗಳನ್ನು ಅತ್ಯಂತ ಸರಳವಾಗಿ ಬಿಡಿಸಿದ್ದು, ಅವರಲ್ಲಿನ ಪ್ರತಿಭೆಯನ್ನು ಎತ್ತಿ ತೋರಿಸಿತು. ಚಿಕ್ಕ ವಯಸ್ಸಿನಲ್ಲಿಯೇ ಅವರಿಗಿದ್ದ ಪಾಂಡಿತ್ಯವನ್ನು ಕಂಡು ಬೆರಗಾಗದ ಜನರಿರಲಿಲ್ಲ. ಅವರು ಬೆಳೆಯುತ್ತಾ ಅವರ ಗಣಿತ ಶಾಸ್ತ್ರದ ಸಾಧನೆಗಳು ಮುಗಿಲೆತ್ತರ ಬೆಳೆಯಲು ಆರಂಭಿಸಿತು.

ಶಕುಂತಲಾರಿಗೆ ಹೇಳಬೇಕೆಂದರೆ ಶಾಲೆಯ ಕಲಿಕೆ ಒಗ್ಗಲಿಲ್ಲ. ಅಂಕಗಳೊಂದಿಗೆ ಸಲ್ಲಾಪವಿದ್ದರಿಂದ ಶಾಲೆ -ಕಾಲೇಜಿಗೆ ಹೋಗುವ ತೀವ್ರತೆ ಅವರಿಗಿರಲಿಲ್ಲ. ಹಲವಾರು ಪದವಿಗಳಿಸಿದ, ಅಂದಿನ ಹಾಗೂ ಇಂದಿನ ಪಂಡಿತರುಗಳು ಶಕುಂತಲಾರವರ ಪಾಂಡಿತ್ಯವನ್ನು ಯಾವುದೇ ಮುಲಾಜಿಲ್ಲದೆ ಸಂತೋಷವಾಗಿ ಮನಸ್ಪೂರ್ವಕ ಹಾಡಿ ಹೊಗಳಿದ್ದಾರೆ .

ಬಾಲ್ಯದಲ್ಲಿ ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯ ಪ್ರದೇಶದಲ್ಲಿದ್ದ ಅವರ ಪರಿವಾರ ಹಲವಾರು ಕಷ್ಟನಷ್ಟಗಳನ್ನು ಅನುಭವಿಸಿತ್ತು. ಹತ್ತನೆಯ ವಯಸ್ಸಿನಲ್ಲಿದ್ದಾಗ ತಂದೆಯವರು ಶಕುಂತಲಾ ದೇವಿಯವರನ್ನು ‘ಸೇಂಟ್ ತೆರೇಸ ಕಾನ್ವೆಂಟ್’ ಗೆ ಹೇಗೋ ಮಾಡಿ ಒಂದನೇಯ ತರಗತಿಗೆ ಸೇರಿಸುತ್ತಾರೆ. ಆದರೆ ಪ್ರತಿ ತಿಂಗಳು ಎರಡು ರೂಪಾಯಿ ಫೀಸ್ ಕಟ್ಟಲು ಸಾಧ್ಯವಾಗದ್ದರಿಂದ ಮೂರು ತಿಂಗಳ ನಂತರ ಶಕುಂತಲಾರನ್ನು  ಶಾಲೆಯಿಂದ ಹೊರಗೆ ಹಾಕಿದ್ದನ್ನು ಸಂದರ್ಶನದೊಂದರಲ್ಲಿ ಶಕುಂತಲಾ ದೇವಿಯವರು ತಮ್ಮ ಬಾಲ್ಯ ಶಿಕ್ಷಣದ ಬಗ್ಗೆ ಮೆಲುಕು ಹಾಕುತ್ತಾ ಹೇಳಿದ ಮಾತಿದು. ಆದರೆ ಅದೇ ಶಕುಂತಲಾರವರು ಎಲ್ಲಾ ತರಹದ  ಗಣಿತದ ಸಮಸ್ಯೆಗಳನ್ನು ಕ್ಷಣ ಮಾತ್ರದಲ್ಲಿ ಕಂಪ್ಯೂಟರ್ ಗಿಂತ ವೇಗವಾಗಿ ಬಿಡಿಸುವ ಅವರ ಕ್ಷಮತೆ  ಕಂಪ್ಯೂಟರ್ ಗೆ ಸವಾಲಾಗಿದ್ದು ಇತಿಹಾಸ.

sha
ಫೋಟೋ ಕೃಪೆ : Medium

ಬಡತನದ ಕಾರಣ ಶಾಲೆಯಿಂದ ದೂರವಾದ  ಶಕುಂತಲಾ ದೇವಿಯವರಿಗೆ ಬಡ ಮಕ್ಕಳ ಬಗ್ಗೆ ವಿಶೇಷ ಅನುಕಂಪವಿತ್ತು ಬಡ ವಿದ್ಯಾವಂತ ಮಕ್ಕಳಿಗೆ ತಮ್ಮ ಕೈಲಾದ ಸಹಾಯ ಮಾಡಲು ಯಾವಾಗಲೂ ಸಿದ್ಧರಿದ್ದರು.

ಶಕುಂತಲಾರವರು ಅವರ ಹದಿನೈದನೇಯ ವಯಸ್ಸಿನಲ್ಲಿ ಲಂಡನ್ ನಗರದಲ್ಲಿ ಒಂದು ಪ್ರದರ್ಶನವನ್ನು ಕೊಟ್ಟು ಅಲ್ಲಿನ ವಿದ್ವಾಂಸರುಗಳಿಂದ ಶಹಬಾಸ್ ಪಡೆಯುತ್ತಾರೆ. ಈ ಪ್ರದರ್ಶನ ಅವರ ಜೀವನದ ಮಹತ್ವದ ಪ್ರದರ್ಶನವಾಗಿದ್ದು ಇದರಿಂದ ಅವರು ವಿಶ್ವವಿಖ್ಯಾತರಾಗುತ್ತಾರೆ.

೧೯೭೭ ರಲ್ಲಿ ವಿಶ್ವದ ಬಹುದೊಡ್ಡ ವೇದಿಕೆಯೊಂದರಲ್ಲಿ ಪ್ರತಿಷ್ಠಿತ ಗಣಿತಜ್ಞರ ಸಮ್ಮುಖದಲ್ಲಿ ಶಕುಂತಲಾರವರು ಒಂದು ಪ್ರದರ್ಶನ ನೀಡುತ್ತಾರೆ ಅದು ಅವರ ಐತಿಹಾಸಿಕ ಪ್ರದರ್ಶನವಾಗಿ ಅವರಿಗೆ ಬಹಳ ಮನ್ನಣೆ ಗೌರವ ದೊರೆಯುವಂತೆ ಮಾಡಿತು. ೨೦೧ ಸಂಖ್ಯೆಗಳ ಅಂಕೆಯೊಂದರ ೨೩ನೇ ವರ್ಗ ಮೂಲವನ್ನು ಚಿಟಿಕೆ ಹೊಡೆಯುವುದರಲ್ಲಿ ಕಂಡು ಹಿಡಿದು ಕಪ್ಪು ಹಲಗೆಯ ಮೇಲೆ ಬರೆದರು ಅದುವೇ ಕೇವಲ ೫೦ ಸೆಕೆಂಡುಗಳಲ್ಲಿ ಆ ಸಮಯದಲ್ಲಿ ಬಳಕೆಯಲ್ಲಿದ್ದ ಪ್ರಬಲ ಕಂಪ್ಯೂಟರ್ (UNIVAC 1108 ಕಂಪ್ಯೂಟರ್) ಇದೆ ಕೆಲಸಕ್ಕೆ ೬೨ ಸೆಕೆಂಡ್ ತೆಗೆದುಕೊಂಡಿತ್ತು. ಅಂದು ಶಕುಂತಲಾ ದೇವಿಯವರನ್ನು ವಿಶ್ವದಲ್ಲಿನ ಮಾನವ ಕಂಪ್ಯೂಟರ್ ಎಂಬ ಬಿರುದು ನೀಡಿ ಗೌರವಿಸಲಾಯಿತು. ಇಂದಿಗೂ ಅದೇ ಹೆಸರಿನಲ್ಲಿಯೇ ಅವರನ್ನು ಸಂಬೋಧಿಸಲಾಗುತ್ತಿದೆ.

ವರ್ಷಾನುಗಟ್ಟಲೆ ಈ ಹವ್ಯಾಸವನ್ನು ಜಾರಿಯಲ್ಲಿಟ್ಟುಕೊಂಡು ತಮ್ಮ ಗಣಿತ ಕೌಶಲ್ಯವನ್ನು ವೃದ್ಧಿಸಿಕೊಂಡು ತಮ್ಮ ಆತ್ಮವಿಶ್ವಾಸವನ್ನು ದೃಢಪಡಿಸಿಕೊಂಡು ಮುನ್ನುಗ್ಗಿದರು. ವಿಶ್ವದ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಅವರನ್ನು ಆಹ್ವಾನಿಸಿತು. ಹಾಗೂ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ತಮ್ಮ ಗಣಿತಕೌಶಲ್ಯವನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.

97071578_1061252307608487_3798392995531718656_o
ಫೋಟೋ ಕೃಪೆ : Los Angeles Times

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿಯೂ ಅವರ ದಾಖಲೆಯೊಂದನ್ನು ನಾವು ಕಾಣಬಹುದಾಗಿದೆ. ( ೧೯೮೦ ರ ಜೂನ್ ೧೮  ರಂದು ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ 7,7,686,369,774,870 ಸಂಖ್ಯೆಯಿಂದ 2,465,099,745, 779 ಸಂಖ್ಯೆಯನ್ನು ಗುಣಿಸುವಂತೆ ಸವಾಲು ಎಸೆಯಲಾಯಿತು. ಇದಕ್ಕೆ ೨೮ ಸೆಕೆಂಡುಗಳಲ್ಲಿ 18,947,668,177,995,426,462,773,730 ಎಂದು ಶಕುಂತಲಾದೇವಿ ಉತ್ತರಿಸಿದ್ದರು. ಈ ಸಂದರ್ಭವನ್ನು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ೧೯೯೫ರಲ್ಲಿ ನಮೂದಿಸಲಾಗಿದೆ).

ಅವರ ಜ್ಞಾನ ಕೇವಲ ಗಣಿತ ಶಾಸ್ತ್ರಕ್ಕೆ ಸೀಮಿತವಾಗಿರಲಿಲ್ಲ ಜ್ಯೋತಿಷ್ಯಶಾಸ್ತ್ರವೆಂದರೆ ಅವರಿಗೆ ಬಹಳ ಪ್ರಿಯವಾದ ಮತ್ತೊಂದು ವಿಷಯ ಹಾಗೂ ಅಡುಗೆಯಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದರು ಅಡುಗೆಗೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ ಜೊತೆಗೆ ಪ್ರಮುಖವಾಗಿ ‘ವ್ಯಕ್ತಿತ್ವ ವಿಕಸನ ಮತ್ತು ಮಕ್ಕಳ ಬುದ್ಧಿ ಬೆಳವಣಿಗೆ’ ಹೀಗೆ ಮೊದಲಾದ ಪ್ರಮುಖ ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ಕೊಟ್ಟಿದ್ದಾರೆ ಮತ್ತು  ಬೆಂಗಳೂರಿನಲ್ಲಿ ಅನೇಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. (ಎಸ್.ಐ.ಐ.ಎಮ್.ಎಸ್ ಅಂಡ್ ಪಿಯು ಕಾಲೇಜ್, ಬೆಂಗಳೂರಿನ ಎಚ್.ಎಸ್.ಆರ್.ಲೇಔಟ್’ನಲ್ಲಿ, ‘ಶಕುಂತಲಾ ದೇವಿ ಇಂಟರ್ನಾಷನಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ ಮತ್ತು ಪಿಯು ಕಾಲೇಜ್’. ಇಲ್ಲಿ ‘ವೇದಿಕ್ ಮ್ಯಾಥೆಮ್ಯಾಟಿಕ್ಸ್’ ಎನ್ನುವ ವಿಷಯದ ಬಗ್ಗೆ ಸಾಕಷ್ಟು ಪ್ರಯೋಗಗಳನ್ನು  ನಡೆಸಿ  ಆ ವಿಷಯದಲ್ಲಿ ಬಹಳ ಮನ್ನಣೆಯನ್ನು ಪಡೆದಿದೆ).

ಶಕುಂತಲಾ ದೇವಿಯವರಿಗೆ ಸಂದ ಪ್ರಮುಖ ಪ್ರಶಸ್ತಿಗಳು :

  • ೧೯೬೯ ರಲ್ಲಿ “೧೯೬೯ರ ಅತಿ ಮಹತ್ವದ ಮಹಿಳೆ” ಎಂಬ ಪ್ರಶಸ್ತಿಯನ್ನು ಬಂಗಾರ ಪದಕದೊಂದಿಗೆ ಫಿಲಿಪೈನ್ಸ್ ವಿಶ್ವವಿದ್ಯಾನಿಲಯ ಪ್ರದಾನ ಮಾಡಿತ್ತು.
  • ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ೧೯೮೮ ರಲ್ಲಿ  ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದವರ ಹಸ್ತದಿಂದ “ರಾಮಾನುಜಂ ಮ್ಯಾಥಮೆಟಿಕಲ್ ಜೀನಿಯಸ್” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಇಂತಹ ಅತ್ಯದ್ಭುತ ಸಾಧನೆಗಳನ್ನು ಮಾಡಿರುವ ನಮ್ಮ ಹೆಮ್ಮೆಯ ಕನ್ನಡತಿ ಶಕುಂತಲಾ ದೇವಿಯವರು  ಏಪ್ರಿಲ್ ೨೧, ೨೦೧೨ ರ ಭಾನುವಾರ ಬೆಳಗ್ಗೆ ಹೃದಯಾಘಾತದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾದರು. ಅವರ ಕುಟುಂಬ ಮತ್ತು ಅವರ ಅಪಾರವಾದ ಬಂಧು-ಮಿತ್ರರು ಹಾಗೂ ಬಹುದೊಡ್ಡ ಸಂಖ್ಯೆಯ ಅಭಿಮಾನಿಗಳಿಗೆ, ಶಿಷ್ಯವೃಂದಕ್ಕೆ ಅಂದು ತುಂಬಲಾರದ ನಷ್ಟವಾಗಿತೆಂದರೆ ಸುಳ್ಳಲ್ಲ.

97071578_1061252307608487_3798392995531718656_o

ನಮ್ಮ ಕರ್ನಾಟಕದ ಹೆಮ್ಮೆಯ ಮಗಳು ಶಕುಂತಲಾ ದೇವಿಯವರ ಮೇಲೆ ಬಾಲಿವುಡ್ ನಿರ್ದೇಶಕರಾದ ಅನು ಮೆನನ್ ಅವರು ಸಿನಿಮಾವನ್ನು ನಿರ್ಮಿಸಿದ್ದಾರೆ. ಶಕುಂತಲಾ ದೇವಿಯವರ ಪಾತ್ರದಲ್ಲಿ ವಿದ್ಯಾ ಬಾಲನ್ ಮಿಂಚಿದ್ದಾರೆ. ಜಿಷುಸೇನ್ ಗುಪ್ತಾ ಮತ್ತು ಸಾನ್ಯಾ ಮಲ್ಹೋತ್ರ ಅವರ ತಾರಾಗಣವೂ ಇದೆ. ಈ ಸಿನಿಮಾ ಇದೇ ತಿಂಗಳ ೩೧ ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ  ತೆರೆ ಕಾಣಲಿದ್ದು, ನಮ್ಮ ಹೆಮ್ಮೆಯ ಕನ್ನಡ ಕುವರಿಯ ಸಾಧನೆಯನ್ನು ತೆರೆ ಮೇಲೆ ವಿಶ್ವದಾದ್ಯಂತ ಎಲ್ಲರೂ  ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.


  • ಕಾವ್ಯ ದೇವರಾಜ್

Screenshot (27)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW