ಫೆಡ್ರಿಕನ ಮನೆಯ ಪಾರ್ಟಿ ನಂತರ ಮರುದಿನ ಬೆಳಿಗ್ಗೆ ಯಾರೂ ಬೇಗ ಎದ್ದಿರಲಿಲ್ಲ. ಬೆಳಿಗ್ಗೆ ನನಗೆ ಬೇಗ ಎಚ್ಚರವಾಯಿತು. ಕ್ಯಾಸಲ್ ರಾಕನಲ್ಲಿ ಪೋರ್ತುಗೀಜರ ವಾಸದ ಮನೆಗಳು, ಅವರ ಕಚೇರಿ ಕಟ್ಟಡಗಳು ಇನ್ನೂ ಸುಸ್ಥಿತಿಯಲ್ಲಿವೆ ಎಂದು ಕೇಳಿದ್ದೆ. ಅವನ್ನು ಒಮ್ಮೆ ನೋಡುವ ಆತುರ ನನಗೆ. ಒಬ್ಬನೇ ಹೊರ ಬಂದು ಗುಡ್ಡದ ಮೆಟ್ಟಿಲು ಹತ್ತಿದೆ. ಅಲ್ಲಿಯ ಬೆಟ್ಟ-ಗುಡ್ಡಗಳು, ಪೋರ್ತುಗಲ್ ಶೈಲಿಯ ಕಟ್ಟಡಗಳನ್ನು ನೋಡಿ ನಾನು ಬೆರಗಾದೆ.
ಕ್ಯಾಸಲ್‌ರಾಕ್ ಅಂದರೆ ಬಂಡೆಗಲ್ಲಿನ ಕೋಟೆ’ ನಿಜ ಅನಿಸಿತು. ಮತ್ತು ಅಲ್ಲಿಯ ರಮಣೀಯ ಸೌಂದರ್ಯ ಕಂಡು ಇದು ‘ದಕ್ಷಿಣದ ದಾರ್ಜಲಿಂಗ’ ಎಂದೂ ಉದ್ಘರಿಸಿದೆ. ಮುಂದಕ್ಕೆ ನಮ್ಮ ಸರ್ವೇ ಕ್ಯಾಂಪನ್ನು ಇಲ್ಲಿಗೇ ಬದಲಾಯಿಸಲು ಪ್ರಯತ್ನಿಸಬೇಕು ಅಂದುಕೊಂಡೆ. ಆದರೆ ಆದದ್ದೇ ಬೇರೆ. ಹಾಗನ್ನುವಾಗಲೇ ನನಗೆ ಸರ್ವೇ ತಂಡದಿಂದ ಎತ್ತಂಗಡಿಯಾಗಿತ್ತು.
ಯೋಜಿತ ಸೂಪಾ ಆಣೆಕಟ್ಟಿನ ತಳಪಾಯದ ರೇಖೆಯನ್ನು ಗುರುತಿಸಲು ಕೇಂದ್ರ ಸರಕಾರದ ಭೂಗರ್ಭ ಸಂಶೋಧನಾ ತಂಡ ಹೈದರಾಬಾದಿನಿಂದ ಬರುವುದಿತ್ತು. ನನಗೆ ಆ ತಂಡದ ಸಹಾಯಕ್ಕೆಂದು ಹೊಸ ಕೆಲಸಕ್ಕೆ ನೇಮಿಸಿದರು. ನಾನು ಒಲ್ಲದ ಮನಸ್ಸಿನಿಂದಲೇ ಕ್ಯಾಸಲ್ ರಾಕ ಕಾಡಿನಿಂದ ಸೂಪಾಕ್ಕೆ ಗಂಟು ಮೂಟೆಯೊಂದಿಗೆ ಹೊರಟು ಬಂದೆ. ಇಲ್ಲಿಂದ ಇನ್ನಷ್ಟು ರೋಚಕ ಸಂಗತಿಗಳು ಘಟಿಸುತ್ತ ಹೋದವು
ಇಲ್ಲಿವರೆಗೆ…
ಕ್ಯಾಸಲ್‌ರಾಕನಲ್ಲಿ ತನ್ನ ಮನೆಯಲ್ಲಿದ್ದ ಪಾರ್ಟಿಗೆ ಫೆಡ್ರಿಕ್ ನಮ್ಮನ್ನು ಆವ್ಹಾಣಿಸಿದ. ನಾವು ಮೂರು ಜನ ಅವನು ತಂದಿದ್ದ ಟ್ರಾಕ್ಟರಿನಲ್ಲಿ ಕ್ಯಾಸಲ್ ರಾಕಗೆಹೋದೆವು. ಅಲ್ಲಿ ಫೆಡ್ರಿಕ್ ನಮ್ಮನ್ನು ಮನೆಯವರಿಗೆಲ್ಲ ಇವತ್ತಿನ ನಮ್ಮ ಅತಿಥಿಗಳು ಎಂದು ಪರಿಚಯಿಸಿದ. ಅದು ಕ್ರಿಸ್ತರ ಮನೆಯಾದ್ದರಿಂದ ಅಲ್ಲಿಯ ವಾತಾವರಣವೇ ಬೇರೆಯಾಗಿತ್ತು.
ಶಿರೋಡ್ಕರರು ಕೊಂಕಣಸ್ಥರು. ಅವರು ಆ ಮನೆಯವರಿಗೆ ಬೇಗ ಹೊಂದಿಕೊಂಡರು. ಆದರೆ ನನಗೆ ಮಾತ್ರ ತುಂಬ ಮುಜುಗುರವಾಯಿತು. ಹೊತ್ತು ಮುಳುಗುತ್ತಿದ್ದಂತೆ ಪಾರ್ಟಿ ಆರಂಭವಾಯಿತು. ಗೋವಾ ಶೈಲಿಯ ಪಾರ್ಟಿ. ಅವತ್ತಿನ ಪಾರ್ಟಿಗೆಂದು ಮನೆಯ ಹತ್ತಲಿನಲ್ಲಿ ಸಾಕಿದ್ದ ದೊಡ್ಡ ಹಂದಿಯನ್ನು ಹೊಡೆದಿದ್ದರು. ಶಾಖಾಹಾರಿಯಾದ ನನಗೆ ಇಲ್ಲಿ ನೀರು ಕುಡಿಯಲೂ ಮುಜುಗುರವಾಯಿತು. ಲೂಸಿಯೇ ಬಂದು ಮಾಡ್ ವೈನು ಕೊಟ್ಟು ಕುಡೀರಿ ಅಂದಳು. ನಾನು ಅಂಜೂರು ಜ್ಯೂಸು ಕುಡಿದು ಹೊಟ್ಟೆ ತುಂಬಿಸಿಕೊಂಡೆ. ನನ್ನ ಜತೆ ಬಂದವರು ಮಾತ್ರ ಗೋವಾದಲ್ಲಿಯೇ ತಯಾರಾಗಿದ್ದ ಫೆನ್ನಿ ವಿಸ್ಕಿ, ಕಾಜೂ ಬ್ರಾಂದಿ ಎಗ್ಗಿಲ್ಲದೇ ಕುಡಿದರು. ಪಾರ್ಟಿ ಆರಂಭವಾದಾಗ ಲೂಸಿ, ಮಾರಿಯಾ, ರಾಧಾ ಸೇರಿ ಎಲ್ಲರೂ ಗೋವಾ ಶೈಲಿಯ ನೃತ್ಯ ಮಾಡತೊಡಗಿದರು. ನಾನು ಮೆಲ್ಲಗೆ ಶಿರೋಡ್ಕರ ಮತ್ತು ಹನುಮಂತ್ಯಾನನ್ನು ಕೋಣೆಗೆ ಕರೆತಂದು ಮಲಗಿಸಿದೆ. ಬೆಳಿಗ್ಗೆ ಅವರೆಲ್ಲ ಏಳುವ ಮುಂಚೆಯೇ ನಾನು ಪೋರ್ತುಗೀಜರ ಕಟ್ಟಡಗಳನ್ನು ನೋಡಲು ಮನೆಯಿಂದ ಹೊರಬಿದ್ದೆ. ಅಲ್ಲಿ ದಾರಿಯಲ್ಲಿ ಜಾನ್ ಬಂದು ನನ್ನನ್ನು ಸೇರಿಕೊಂಡ. ಅಲ್ಲಿನ ಬೆಟ್ಟದ ಮಡಿಲಲ್ಲಿಎದ್ದು ಕಾಣುವ ಕಟ್ಟಡಗಳನ್ನು ನೋಡಿ ನಾನು ಇಡೀ ಕ್ಯಾಸಲ್ ರಾಕಗೆ ದಕ್ಷಿಣದ ದಾರ್ಜಲಿಂಗ್ ಎಂದು ಉದ್ಘರಿಸಿದೆ.
ಮುಂದೆ ಓದಿ….
ಉಸ್ತಾದನ ಟೀ ಶಾಪಿನಲ್ಲಿ …
ಅಬ್ಬಾ ! ನಿಸರ್ಗವೆ. ಎನಿತೆನಿತಿದು ನಿನ್ನ ಸೌಂದರ್ಯ….!
‘ಬನ್ನಿ…! ಸಾಹೇಬ್ರೇ… ಉಸ್ತಾದನ ಟೀ ಶಾಪ್‌ನಲ್ಲಿ ಹತ್ತು ಪೈಸೆಗೆಲ್ಲ ಖಡಕ್ ಚಾಯ್ ಸಿಗ್ತದೆ. ಒಮ್ಮೆ ಕುಡುದ್ರೆ ಸಾಕು. ತಲಿಯೊಳಗಿನ ಮಡ್ಡು ಕಿತ್‌ಗೊಂಡು ಹೋಗ್ತದೆ’
ಎಂದು ಹೇಳುತ್ತಲೇ ಜಾನ್ ತನ್ನ ಮೊಟಕು ಮೀಸೆಯ ಮೇಲೆ ಒಮ್ಮೆ ಕೈ ಎಳೆದುಕೊಂಡ. ನಂತರ ಮುಂದೆ ನಡೆಯುತ್ತ ಎದುರಿನ ಗುಡ್ಡದ ಮೆಟ್ಟಿಲು ಹತ್ತು ಬನ್ನಿ ಅಂದ. ಬೆಳಗಿನ ಸಮಯವಾದ್ದರಿಂದ ಗುಡ್ಡ ಏರುವುದು ನನಗೇನೂ ತೊಂದರೆ ಅನಿಸಲಿಲ್ಲ. ಗುಡ್ಡದ ಮೇಲಿನ ಪುಟ್ಟ ಬೀದಿಯಲ್ಲಿ ತೆಂಗಿನ ತಡಿಕೆಯ ‘ಟೀ ಶಾಪ್’ ಅದು. ಅದರ ಮುಂದೆ ಹೋಗಿ ನಿಂತಾಗ ಆಗಲೇ ಒಂದಷ್ಟು ಗಂಡಸರ ಗುಂಪು ಅಲ್ಲಿ ಕೂತು ಟೀ ಕುಡಿಯುತ್ತಿತ್ತು. ಇನ್ನು ಕೆಲವರು ಗಣೇಶ್ ಬೀಡಿಯ ಜುರುಕು ಎಳೆಯುತ್ತಿದ್ದರು. ಮಧ್ಯ ಪ್ರಾಯದ ಗಟ್ಟಿ ಹೆಂಗಸೊಬ್ಬಳು ಟೊಂಕಕ್ಕೆ ಸೀರೆ ಎತ್ತಿ ಕಟ್ಟಿಕೊಂಡು ಎಲ್ಲರಿಗೂ ‘ಟೀ’ ಸರಬರಾಜು ಮಾಡುತ್ತಿದ್ದಳು. ಅವಳು ಕೊಡುತ್ತಿದ್ದ ಕೇಟೀ ಅಮೃತ ಸಮಾನ ಹಲವರಿಗೆ.
‘ಮಧ್ಯಾನ್ಹದ ತನಕ ಇಲ್ಲಿ ಟೀ ಸಿಗ್ತದೆ ಅಷ್ಟೇ. ಆಮೇಲೆ ಸುರುವಾಗ್ತದೆ ನೋಡಿ. ಬರೀ ಡ್ರಿಂಕ್ಸು ಹುರಿಗಡ್ಲೆ ವ್ಯಾಪಾರ ಅಷ್ಟೇ. ಆವಾಗ ಅಂಗಡೀ ಮುಂದೆ ನಿಂತು ಬೊಂಬ್ಡೀ ಹೊಡೆದ್ರೂ ಟೀ ಸಿಗೂದಿಲ್ಲ’ ಜಾನ್ ಹೆಮ್ಮೆಯಿಂದ ಹೇಳಿದ. ಅಷ್ಟರಲ್ಲಿ ಉಸ್ತಾದ ಇವನನ್ನು ಗುರುತಿಸಿ- ‘ಅದೇನೂ … ಜಾನ್. ಪೋಂಡಾದಿಂದ ಯಾವಾಗ್ ಬಂದೆ? ಮಧ್ಯಾನದ ಮೇಲೆ ಈ ಕಡೆ ಬರೋನು ಈಗ್ಲೇ ಬಂದೆಲ್ಲ ಮಾರಾಯಾ’ ಅಂದ.
‘ಪಾವಣ್ಯಾ’ ರು ಬಂದಿದ್ರು
‘ಹೋಯ್…! ಉಸ್ತಾದಣ್ಣ. ಚಂಜೀ ಕಡೆ ಪಾವಣ್ಯಾರು ಬಂದಿದ್ರು. ಗೋರ್ಮೆಂಟು ಕೆಲ್ಸದೋರು. ರಾತ್ರಿ ಮನೇಲಿ ಜಬರದಸ್ತು ಪಾರ್ಟಿ ಇತ್ತು. ಒಂದ್ ‘ಡುಕ್ರೂ’ ಕೆಡವಿದ್ರು ಅನ್ನು. ಯಾಕ್ ಕೇಳ್ತಿ ಉಸ್ತಾದಣ್ಣ. ನಾಲ್ಕು ಕೇಜೀ ಕಾಣೇ ಮೀನು ಸಾಕಾಗ್ಲಿಲ್ಲ. ಮೂರು ಫುಲ್ ಬಾಟ್ಲು ಫೆನ್ನೀ ಖಾಲೀ ಆತೂ. ಹೆಂಗಸ್ರೂ ಅದ್ನೇ ಎತ್ತಿದ್ರೂ ಅನ್ನು’ ‘ಈಗ್ ಮೊದ್ಲು ಕೇಟೀ ಕುಡೀಬಾರಣ್ಣೋ… ಇಲ್ಲಿ ಅದೆಲ್ಲ ಮದ್ಯಾನದ್ ಮ್ಯಾಲೆ’ ಟೀ ಕೊಡುತ್ತಿದ್ದ ಹೆಂಗಸು ತನ್ನ ತನ್ನ ಮುಂಗುರುಳು ಹಾರಿಸುತ್ತ ನಗುತ್ತ ಕರೆದಳು.
‘ಅಯ್ತಕ್ಕ. ಪೋರ್ತುಗೀಜ್ರು ಇದ್ದು ಹ್ವಾದ್ ಮನೆ ಉಂಟಲ್ಲ ಗುಡ್ಡದ್ ಮ್ಯಾಲೆ. ಹೋಗಿ ಇವ್ರಿಗೆ ಬಂಗ್ಲೇ ತೋರಿಸ್ಕೊಂಡು ಬರ್ತೀನಿ. ಬಿಲ್ಡಿಂಗ್ ಗಾರ್ಡು ಮಾಂಜ್ರೇಕರನೂ ಅಲ್ಲೇ ಇರಬೇಕು ಈಗ’
‘ಹೌದೌದು… ಅವ್ನು ಈಽಗ್ ಟೀ ಕುಡ್ದು ಹ್ವಾದ. ಈಗ್ ನಿನಗೇನು? ದೋ ಕೇಟೀನಾ?’
ಜಾನ್ ಹೇಳುವ ಮೊದಲೇ ಎರಡು ಗ್ಲಾಸಿನಲ್ಲಿ ಟೀ ತಂದಿಟ್ಟಳು ಆಕೆ.
‘ಬರೀ ಟೀ ಕುಡುದ್ರೆ ಮೈಗೆ ಒಳ್ಳೇದಲ್ಲ. ಬಿಸೀ ಮಂಗ್ಳೂರು ಬನ್ನು ಅದೆ. ಈಗ್ ಹಾಕಿದ್ದು. ಎರಡು ತಿಂದು ಕೇಟೀ ಕುಡೀ’ ಜಾನ್ ಯೋಚನೆ ಮಾಡುವ ಮೊದಲೇ ಹೆಂಗಸು ಬನ್ನೂ ತಂದಿಟ್ಟು ಹಲ್ಲು ತೋರಿಸಿ ಹೋದಳು. ಜೊತೆಗೆ ಕೋಟೀ ಕುಡಿಯಲು ಇಷ್ಟೊಂದು ಗಂಡಸರು ಯಾಕೆ ಸೇರುತ್ತಾರೆ ಎಂಬುದರ ಗುಟ್ಟೂ ತಿಳಿಯಿತು. ನನಗೆ ನಿಜವಾಗಲೂ ಹಸಿವಾಗಿತ್ತು. ಮಂಗಳೂರ್ ಬನ್ನು. ಕಾಯಿ ಚಟ್ನಿ ಚನ್ನಾಗಿತ್ತು. ತಿಂದ ಮೇಲೆ ಸಮಾಧಾನವಾಯಿತು. ಟೀ ಕುಡಿದ ನಂತರ ಜಾನ್ ಜೇಬಿನಲ್ಲಿ ಏನೋ ತಡಕಾಡುತ್ತ ನಿಂತ. ಕೊನೆಗೆ ಮೆಲ್ಲಗೆ ನನ್ನ ಕಿವಿಯಲ್ಲಿ ಉಸುರಿದ. ‘ಸಾಹೇಬರ… ನಂದು ರೊಕ್ಕದ ಪೋಚು ಮನೇಲೇ ಬಿಟ್ಟು ಬಂದಿ ನೋಡ್. ಉಸ್ತಾದಗೆ ನಾನ್ಯಾವತ್ತೂ ಉದ್ರಿ ಹೇಳಿಲ್ಲ. ಈಗ ನಿಮ್ಮ ಹತ್ರ ಎಷ್ಟೈತೋ ಕೊಡಿ. ಮನೇಗೆ ಹೋಗಿ ಕೊಡ್ತೀನಿ ಅಂದ. ನನಗೆ ಅವನ ಕೈಲಿ ಟೀ ಬಿಲ್ಲು ಕೊಡಿಸುವ ಮನಸ್ಸಿರಲಿಲ್ಲ. ಪರವಾಗಿಲ್ಲ. ನಾನೇ ಕೊಡ್ತೀನಿ. ಎಂದು ಉಸ್ತಾದನ ಕೈಗೆ ಹಣ ಹಾಕಿದೆ. ಹತ್ತು ಪೈಸೆಗೆ ಟೀ. ಹದಿನೈದು ಪೈಸೆಗೆ ಬನ್ನು ಎಂದು ಲೆಕ್ಕ ಹಾಕಿ.ಜಾನ್ ಗುಡ್ಡ ಹತ್ತುತ್ತ ಹೇಳುತ್ತಲೇ ಇದ್ದ.
‘ನಮ್ಮ ಅಜ್ಜನ ಕಾಲದಿಂದ ಮಾತ್ರ ನಾವು ಕ್ರಿಸ್ತರು. ನಮ್ಮ ಪೂರ್ವಿಕರು ಹಿಂದುಗಳಾಗಿದ್ರಂತೆ ಪೋರ್ತುಗೀಜ್ರು.
ನಮ್ಮ ಜನಕ್ಕೆ ಅವರ ಮಿಲ್ಟ್ರಿ-ಪೋಲೀಸನಲ್ಲಿ ಕೆಲಸ ಕೊಟ್ರು. ಗಂಡಸ್ರು- ಹೆಂಗಸ್ರು ಅನ್ನದೆ ಕೆಲವರಿಗೆ ಬಂಗ್ಲೇಲೂ ಕೆಲಸ. ಅವರ ಕಾಜೂ ಗಿಡಗಳ ತೋಟದಲ್ಲೂ ಕೆಲಸ ಕೊಟ್ರು. ಇನ್ನು ಕೆಲವರಿಗೆ ದುಡ್ಡೂ ಕೊಟ್ಟು ಅವ್ರನ್ನೂ ಕ್ರಿಸ್ತರಾಗಿಸಿದ್ರು. ಮತ್ತೆ ಕೆಲವರಿಗೆ ಗುಡ್ಡ- ಸರಕಾರಿ ಭೂಮೀನು ಕೊಟ್ರು. ನಮ್ದೇ ತಗೊಂಡು ನಮಗೇ ದಾನ ಮಾಡಿದ್ರು ಅಂತಾರಲ್ಲ ಹಂಗೆ. ಹಾಂ… ಅಲ್ಲಿ ಗುಡ್ಡದ್ ಮೇಲೆ ಕಾಣ್ತದಲ್ಲ ಚರ್ಚು. ಅದನ್ನ ಪೋರ್ತುಗೀಜರೇ ಕಟ್ಟಿಸಿದ್ದು. ಅವರ ದೇಶದಲ್ಲಿ ಚರ್ಚುಗೂಳು ಹಿಂಗೇ ಇರೂದಂತೆ. ಅಲ್ನೋಡಿ… ಇವೆಲ್ಲಾ ಬಂಗ್ಲೇಗೂಳು ಪೋರ್ತುಗೀಜರವು. ಹೆಂಗಸ್ರು-ಮಕ್ಕಳ ಜೊತೆ ವಾಸಾ ಮಾಡೂದಕ್ಕೆ ಅಂತ ಕಟ್ಟಿಸಿದ್ದು. ಈಗ ಈ ಬಂಗ್ಲೇಗಳನ್ನು ಫಾರೆಸ್ಟಿನೋರು ಉಸ್ತುವಾರಿ ಮಾಡ್ತಾ ಉಂಟು. ಅದೇ ಹೇಳಿದ್ನೆಲ್ಲ ಮಾಂಜ್ರಕರ್ ಅನ್ನೋ ಗಾರ್ಡು ಈಗ ಇಲ್ಲೀರೂ ದಿವಾನ. ಬನ್ನಿ… ಬಂಗ್ಲೇ ಮುಂದೆ ನಿಂತು ನೋಡಿದ್ರೆ ಸುತ್ತ ಹರದಾರಿ ದೂರಕ್ಕೆ ಚಾಚಿರೂ ಕಾಡು ಹೆಂಗ್ ಕಾಣ್ತದೆ ನೋಡ್ ಬನ್ನಿ’ – ಅಂದ.
ಬೆಟ್ಟದ ಇಳಿಜಾರನ್ನು ಹತ್ತಿ –ಇಳಿದು ಹೋಗುವ ಚುಕುಬುಕು ಮೀಟರ್ ಗೇಜು ರೈಲು
ನಾನು ಕುತೂಹಲದಿಂದ ನೋಡಿದೆ. ಊರ ಬದಿ ಎತ್ತರವಾದ ಗುಡ್ಡದಲ್ಲಿ ಈ ಬಂಗ್ಲೆಗಳನ್ನು ಕಟ್ಟಿದ್ದು ಪೋರ್ತುಗೀಜರ ದೂರ ದೃಷ್ಟಿಯೇ ಕಾರಣ. ಪೂರ್ವಕ್ಕೆ ನೋಡಿದರೆ ‘ತಿನೈಘಾಟ್ ನ ಚೂಪಾದ ಬೆಟ್ಟ’ ಅದರಾಚೆ ಬ್ರಿಟಿಷರ ಲೋಂಡಾ ರೈಲು ಜಂಕ್ಶನ್ ಇದೆ. ರೈಲು ಟ್ರಾಕು ಬೆಟ್ಟಗಳ ಸಂದಿನಲ್ಲಿ ಮರೆಯಾಗಿದೆ. ಆಗ ಈಗಿನಂತೆ ಬ್ರಾಡಗೇಜ್ ಇರಲಿಲ್ಲ. ಮೀಟರ್ ಗೇಜ್ ಟ್ರಾಕ್ ಇತ್ತು. ಇಲ್ಲಿ ರೈಲು ಕಡಿದಾದ ಘಟ್ಟ ಹತ್ತಿ ಇಇಯಬೇಕು. ಅದಕ್ಕಾಗಿ ಮುಂಜಾಗ್ರತೆ ಎಂದು ಇಡೀ ರೈಲನ್ನು ಗೋಡೌನ್ನಿನಲ್ಲಿ ನಿಲ್ಲಿಸಿ ಜಂಟೀ ತಪಾಸಣೆ ರೈಲಿನ ಮುಂದೆ ಒಂದು ಎಂಜಿನ್ನು, ಮತ್ತು ರೈಲಿನ ಕೊನೆಗೆ ಇನ್ನೊಂದು ಎಂಜಿನ್ನನ್ನು ಕೊಕ್ಕೆ ಹಾಕಿರುತ್ತಾರೆ. ಒಂದು ಎಳೆಯುತ್ತಿದ್ದರೆ ಇನ್ನೊಂದು ನಿಧಾನವಾಗಿ ಬ್ರೇಕು ಹಿಡಿದಿರುತ್ತದೆ. ಇದರಲ್ಲಿ ಪ್ರಯಾಣಿಸುವುದೇ ಒಂದು ರೋಚಕ ಅನುಭವ.
ಫೋಟೋ ಕೃಪೆ : ScoopWhoop
ಬ್ರಿಟಿಷರು ಮತ್ತು ಪೋರ್ತುಗೀಜರು ಖರ್ಚು ಹಂಚಿಕೊಂಡು ಈ ರೈಲು ಮಾರ್ಗ ನಿರ್ಮಿಸಿದ್ದರಂತೆ. ಕ್ಯಾಸಲ್ ರಾಕಿನಿಂದ ಪಶ್ಚಿಮದತ್ತ ಮಡಗಾಂವ ಕಡೆ ಸಾಗಿದರೆ ಮತ್ತೊಂದು ಬೆಟ್ಟದಲ್ಲಿ ರೈಲು ಸಂಚರಿಸುತ್ತದೆ. ಇಲ್ಲಿಯೇ ದೂಧಸಾಗರ ಎಂಬ ಮನಮೋಹಕ ಜಲಪಾತ ಇರುವುದು. ಇದು ರೋಚಕ ಸ್ನಾನ ಘಟ್ಟವೂ ಹೌದು. ಇಲ್ಲಿ ಸ್ನಾನ ಮಾಡಲೆಂದೇ ಜನರು ಇಲ್ಲಿಗೆ ಬಂದು ಹೋಗುತ್ತಾರೆ. ಇಲ್ಲಿಂದ ಪಶ್ಚಿಮಕ್ಕೆ ಹೊರಟರೆ ಮಂಡಗಾವ, ಕೊಲವಾ ಬೀಚ್ ಗೆ ಹೋಗಬಹುದು. ಅಲ್ಲಿಂದ ಅರಬೀ ಸಮುದ್ರದ ತನಕ ಪೂರ್ತಿ ಗೋವಾ ಪೋರ್ತುಗೀಜರ ಆಳ್ವಿಕೆಯಲ್ಲಿತ್ತು.
ಗುಡ್ಡದ ಕೆಳಗೆ ಕಾಣುವ ರೈಲು ನಿಲ್ದಾಣದಲ್ಲಿ ಬ್ರಿಟಿಷರೂ, ಪೋರ್ತುಗೀಜರೂ ಮಾಡಿಕೊಂಡ ಒಪ್ಪಂದದಂತೆ ಬಂದು ಹೋಗುವ ರೈಲುಗಳನ್ನು ಜಂಟಿಯಾಗಿ ತಪಾಸಿಸಿ ಆ ಕಡೆ-ಈ ಕಡೆಗೆ ಬಿಡುತ್ತಿದ್ದರಂತೆ. ಕ್ಯಾಸಲ್‌ರಾಕ ಸ್ಟೇಶನ್ನು ಆಗ ಎರಡೂ ದೇಶಗಳ ಖಾಯಂ ಗಡಿಯಾಗಿತ್ತು. ಸಮುದ್ರದ ಮಾರ್ಗವಾಗಿ ಯುರೋಪಿನಿಂದ ಮತ್ತು ಮಧ್ಯ ಪ್ರಾಚ್ಯ ದೇಶಗಳಿಂದ ಗೋವಾಕ್ಕೆ ಬರುತ್ತಿದ್ದ ಕುದುರೆಗಳು, ಮದ್ದು-ಗುಂಡುಗಳು, ವ್ಯಾಪಾರೀ ವಸ್ತುಗಳು ಇಲ್ಲಿನ ವಾಸ್ಕೋ-ಪಣಜಿ ಬಂದರುಗಳಿಗೆ ಬಂದು ತಲುಪುತ್ತಿದ್ದವು. ಮತ್ತು ಅವುಗಳನ್ನು ಲೋಂಡಾ ಮೂಲಕ ಬ್ರಿಟಿಷ್ ಇಂಡಿಯಾ ಕಡೆಗೆ ಸಾಗಿಸಲು ಈ ರೈಲು ಮಾರ್ಗ ಪ್ರಮುಖ ರಹದಾರಿಯೂ ಆಗಿತ್ತು.
ಲೋಂಡಾದಿಂದ ಉತ್ತರಕ್ಕೆ ಮುಂಬೈಯವರೆಗೆ, ದಕ್ಷಿಣಕ್ಕೆ ಬೆಂಗಳೂರು ಮದರಾಸು ತನಕ ಮೀಟರ್ ಗೇಜಿನ ಉಗಿಬಂಡಿಗಳು ಚುಕುಬುಕು ಅನ್ನುತ್ತ ಹೋಗಿ ಬರುತ್ತಿದ್ದವು. ಆಗೆಲ್ಲ ಕಲ್ಲಿದ್ದಲು- ಬೆಂಕಿ-ಉಗಿಯಿಂದಲೇ ರೈಲುಗಳನ್ನು ಓಡಿಸಲಾಗುತ್ತಿತ್ತು. ಬ್ರಿಟಿಷರಿಗಂತೂ ಈ ರೈಲು ಮಾರ್ಗ ವರದಾನವಾಗಿತ್ತು. ಹಾಗಾಗಿ ಇಂಗ್ಲಿಷರು ಈ ಮಾರ್ಗಕ್ಕೆ ಹೆಚ್ಚು ಪ್ರಾಶಸ್ಯ ಕೊಟ್ಟಿದ್ದರು.
‘ಜಾನ್… ನೀವು ಮೊದಲಿನಿಂದ್ಲೂ ಕ್ರಿಸ್ತರಾ?’
ನನ್ನ ಈ ಪ್ರಶ್ನೆ ಅವನಿಗೆ ಅನಿರೀಕ್ಷಿತ ಅನಿಸಿರಲಿಲ್ಲ. ಸುಮ್ನೆ ನಕ್ಕುಬಿಟ್ಟ ಜಾನ್. ‘ನಮ್ಮ ಮುತ್ತಜ್ಜನ ಕಾಲದಲ್ಲಿ ಪೋರ್ತುಗೀಜರು ಒಂದಷ್ಟು ಗೋವಾ ನಿವಾಸಿಗಳನ್ನು ಹಡಗಿನಲ್ಲಿ ತುಂಬಿಸಿಕೊಂಡು ಪೋರ್ತುಗಾಲಕ್ಕೆ ಒಯ್ದರಂತೆ. ಅಲ್ಲಿ ಅವರು ಗುಲಾಮರಾಗೇ ಬದುಕಿದರಂತೆ. ಅಲ್ಲಿ ಹೋದವರು ಮತ್ತೆ ವಾಪಸು ಬಂದದ್ದಿಲ್ಲ. ಅಲ್ಲಿ ಅವರು ಏನಾದರು ಎಂಬ ಸುದ್ದಿಯೂ ಬರಲಿಲ್ಲ. ಇದು ಆಗ ಗೋಮಾಂತಕರಿಗೆ ಭಯ ಹುಟ್ಟಿಸಿತು.
ಫೋಟೋ ಕೃಪೆ : Flickr
ಅವರು ಹೇಳಿದಂತೆ ಕೇಳದಿದ್ದರೆ ತಮ್ಮನ್ನೂ ಹಡಗಿನಲ್ಲಿ ತುಂಬಿಸಿಕೊಂಡು ಹೋಗುವುದು ನಿಜ. ಆ ಹೆದರಿಕೆಯೂ ಇಲ್ಲಿತ್ತು. ಆ ಕಾರಣದಿಂದಲೂ ಹಲವರು ಕ್ರಿಸ್ತರಾದರಂತೆ. ಗೋವಾದಲ್ಲಿದ್ದರೂ ಅನೇಕರು ಖಾನಾಪುರ ಬೆಳಗಾಂವಗಳನ್ನೂ ಸರಿಯಾಗಿ ನೋಡಿರಲಿಲ್ಲ. ಅವರು ಲೋಂಡಾ, ಸೂಪಾ, ಕುಂಬಾರ ವಾಡಾ, ಜೋಯಿಡಾ ಕಡೆಗೆ ಹೆಚ್ಚಾಗಿ ಹೋಗುತ್ತಿದ್ದರು. ಮಡಗಾಂವ್, ಪೋಂಡಾ, ವಾಸ್ಕೋ ಕಡೆಯಿಂದ ತಂದ ಮದ್ಯವನ್ನು ಕಳ್ಳ ದಾರಿಯಲ್ಲಿ ಸಾಗಿಸುವ ದಂಧೆಯೂ ಕೆಲವರದಾಗಿತ್ತು. ಗೋವಾ ಮದ್ಯ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾದದ್ದೂ ಅದಕ್ಕೆ ಕಾರಣವಾಗಿತ್ತು’ ಜಾನ್ ವಿವರಿಸುತ್ತ ಹೋದಂತೆ ನನಗೆ ಆಸಕ್ತಿ ಹೆಚ್ಚಾಯಿತು. ಇದರ ಬಗ್ಗೆ ಅಷ್ಟಿಟ್ಟು ಮಾಹಿತಿನ್ನು ಹನುಮಂತ್ಯಾ ನನಗೆ ಮೊದಲೇ ಹೇಳಿದ್ದ.
ಬಾಯಿ ಚುಟು ಚುಟು ಅಂತದೆ. ಬೀಡೀ ಕೊಡ್ಸಿ ಸಾರ್
ಲಂಡ ಖಾಕೀ ಚೊಣ್ಣ, ಮೇಲೆ ಲಟಪಟ ಮೋಟು ಅಂಗಿ ತೊಟ್ಟಿದ್ದ ಕುರುಚಲು ಗಡ್ಡದ ನಲವತೈದರ ಪ್ರಾಯದ ವ್ಯಕ್ತಿಯೊಬ್ಬ ಎದುರು ಬಂದ. ಒಮ್ಮೆ ನನ್ನನ್ನು ನೋಡಿ ಜಾನ್‌ನತ್ತ ಹೊರಳಿದ. ‘ಏನ್ ದಾದಾ… ಟೂರಿಸ್ಟನವ್ರಾ… ಏನ್ ಬೇಕಂತೆ? ಇರೋದೆಲ್ಲಾ ಮನೇಲಿ ಮಾಡಿದ್ದೇ ಅಂತ ಹೇಳು’ ಅಂದ. ಇವನು ಕೊಂಕಣಿಯಲ್ಲಿ ಅದೇನೋ ಹೇಳಿದ. ಆಗಾಗ ಅವನ ಕೈ ಹೆಗಲಲ್ಲಿ ನೇತಾಡುತ್ತಿದ್ದ ಕೈಚೀಲವನ್ನು ಸವರುತ್ತಿತ್ತು. ಅದರಲ್ಲಿ ಬೀಡೀ ಕಟ್ಟುಗಳು, ತಂಬಾಕು ಚೀಟುಗಳು, ಒಂದೆರಡು ಬಾಟ್ಲಿಗಳು ಇದ್ದವು. ಟೂರಿಸ್ಟು ಅಂತ ಯಾರಾದರೂ ಬಂದರೆ ಈ ಮಾಂಜ್ರೇಕರನ ಈ ಕೈಚೀಲವನ್ನು ಸವರುತ್ತಿತ್ತು. ಸದರ ನೋಡಿ ಒಂದೊಂದಾಗಿ ಹೊರ ತಗೆದು ಮೆಲ್ಲಗೆ ಮಾರುತ್ತಾನಂತೆ. ಈ ಕೈಚೀಲೇ ಅವನ ಗೂಡಂಗಡಿ ಎಂದೂ ಹೇಳಿದ.
‘ಯಾಕೋ… ಬೆಳಗಿನಿಂದ ತಲಬು ಮಾಡಿಲ್ಲ. ಬಾಯಿ ಚುಟು ಚುಟು ಅಂತದೆ. ಒಂದ್ ಕಟ್ಟು ಬೀಡೀ ಕೊಡ್ಸಿ ಸಾರ್’ ಜಾನ್ ಹಲ್ಲು ಗಿಂಜಿದ. ಹದಿನೈದು ಪೈಸೆ ತೆತ್ತು ಅವನಿಗೆ ಒಂದು ಬೀಡೀ ಕಟ್ಟು ಕೊಡಿಸಿದೆ. ಕೊನೆಗೆ ಅಲ್ಲಿಯ ಎಲ್ಲಾ ಬಂಗ್ಲೆಗಳನ್ನು ನೋಡಿ ಖುಶಿಯಿಂದ ಈಚೆ ಬಂದು ಬಂಡೆಗಲ್ಲೊಂದರ ಮೇಲೆ ಕೂತೆ.
ನಿಜಕ್ಕೂ ಇಲ್ಲಿಯ ಸೃಷ್ಟಿ ಸೌಂದರ್ಯ ಅದ್ಭುತವೆ. ಇದರ ಬಗ್ಗೆ ಒಂದು ಲೇಖನ ಬರೆಯಬೇಕು ಅನಿಸಿತು. ಇಡೀ ನಿಸರ್ಗದ ಮಧ್ಯದಲ್ಲಿರುವ ಈ ಐತಿಹಾಸಿಕ ಊರಿಗೆ ನಾನು ಅವತ್ತು ಕರೆದದ್ದು ದಕ್ಷಿಣದ ದಾರ್ಜಲಿಂಗ ಎಂದು. ಮುಂದೆ ಇದೇ ಶೀರ್ಷಿಕೆಯಲ್ಲಿ ನಾನು ಬರೆದ ಪ್ರವಾಸಿ ಲೇಖನವು ಬೆಂಗಳೂರಿನ ಯಾತ್ರಿಕ ಮಾಸ ಪತ್ರಿಕೆಯಲ್ಲಿ [೧೯೭೦ ನವಂಬರ್] ಅದು ಪ್ರಕಟವಾಯಿತು.
ಮನಸ್ಸು ಮತ್ತೆ ಟೆಂಟ್ ಕಡೆಗೆ
ಬಿಸಿಲು ಏರುತ್ತಿತ್ತು. ಮನಸ್ಸು ಮತ್ತೆ ನಮ್ಮ ಸರ್ವೇ ಕ್ಯಾಂಪಿನತ್ತ ಓಡಿತು. ಅರೇ! ಇವತ್ತು ರವಿವಾರ. ನಮ್ಮ ತಂಡ ಈದಿನ ಸರ್ವೇ ಕೆಲಸಕ್ಕೆ ಕಾಡಿನತ್ತ ಹೋಗುವುದಿಲ್ಲ. ರಜೆ ಮಾಡುತ್ತದೆ. ಎಲ್ಲರೂ ಟೆಂಟಿನಲ್ಲೇ ಇದ್ದು ವಿಶೇಷ ಅಡುಗೆ ಮಾಡಿಕೊಂಡು ತಿನ್ನುವುದು. ಹಾಸಿಗೆ, ಬಟ್ಟೆ ಬರೆಗಳನ್ನು ನೀರಿನ ತೊರೆಯ ಬಳಿ ಒಯ್ದು ತೋಯಿಸಿ ಒಣಗಿಸಿಕೊಂಡು ಬರುವುದು, ಒಟ್ಟಿಗೇ ಕೂತು ಪಾತ್ರೆ ತೊಳೆಯುವುದು ಮಾಡುತ್ತದೆ. ನಂತರ ಓದುವುದು, ಕೈ ರೇಡಿಯೋದಿಂದ ಹಾಡು ಕೇಳುತ್ತ ಮಲಗುವುದು, ಇಲ್ಲ ತಾವೇ ಹಾಡಿಕೊಳ್ಳುವುದು ಮಾಡುತ್ತೇವೆ. ಅದೂ ಇಲ್ಲವೆಂದರೆ ಕಾಡಿನಲ್ಲಿ ನಡೆದು ಕೊಂಡೇ ಹತ್ತಿರದ ಹಳ್ಳಿಗಳಿಗೆ ಇಲ್ಲಾ ಜಗಲಪೇಟೆಗೆ ಹೋಗಿ ತಿರುಗಾಡಿಕೊಂಡು ಬರುವುದು. ಹಾಗೆ ಬರುವಾಗ ಒಂದಷ್ಟು ಟೊಮ್ಯಾಟೋ, ಸೊಪ್ಪು-ತರಕಾರಿ,ಅಪ್ಪು ಕುಟ್ಟಿಗೆ ಮತ್ತು ಶಿರೋಡ್ಕರರಿಗೆ ಒಣ ಮೀನು ಕೊಂಡು ಮತ್ತೆ ನಡೆದುಕೊಂಡೇ ಬಂದು ಗೂಡು ಸೇರುತ್ತಿದ್ದೆವು.
ಮುಂದಿನ ವಾರವೇ ಧಾರವಾಡ ಆಫೀಸಿನಿಂದ ಜೀಪು ಬರುತ್ತದೆ. ಅದರಲ್ಲಿ ನಮ್ಮ ಸೆಕ್ಶನ್ ಆಫೀಸರ ಶ್ರೀ ವಿ.ವಾಯ್. ನಾಯಕ್ ಅವರು ಬರುತ್ತಾರೆ. ನಮಗೆಲ್ಲ ದಿನಗೂಲಿ ಸಂಬಳ ಹಂಚುವವರು ಅವರೇ. ಅವರು ಲೋಕೋಉಯೋಗಿ ಇಲಾಖೆಯಲ್ಲಿ ಖಾಯಂ ನೌಕರರಾಗಿದ್ದು ಹೆಚ್.ಇ.ಸಿ.ಪಿ. ಇಲಾಖೆಗೆ ವರ್ಗವಾಗಿ ಬಂದವರು. ಅವರೂ ಕಾರವಾರದವರೇ. ಬರುವಾಗ ನಮಗೆ ಎರಡು ವಾರದ ರೇಶನ್ನೂ ತಂದು ಕೊಡುತ್ತಾರೆ. ಅದೇ ಸೂಪಾದ ವಸಂತ ಸುಂಠಣಕರ ಅವರ ಅಂಗಡಿಯಿಂದ.
ಕುಸುಬಲಕ್ಕಿಯ ದೋಸೆ, ಮೊಟ್ಟೆ ಸಾರು
ನಾನು,ಮತ್ತು ಜಾನ್ ಗುಡ್ಡದ ಇಳಿಜಾರಿನಿಂದ ಕೆಳಗಿಳಿದು ಮನೆಯ ಕಡೆಗೆ ಹೊರಟೆವು. ಅಷ್ಟರಲ್ಲಿ ಫೆಡ್ರಿಕನ ಟ್ರಾಕ್ಟರು ಸದ್ದು ಮಾಡುತ್ತ ನಮ್ಮತ್ತಲೇ ಬಂದಿತು. ನೋಡಿದರೆ ಶಿರೋಡ್ಕರರು, ಚಂದಾವರ್ಕರ, ಪರಸ್ಯಾ ಅದರಲ್ಲಿದ್ದರು.
ಫೋಟೋ ಕೃಪೆ : You Tube
‘ಶೇಖರ್… ತಡವಾಯ್ತು. ನಡೀರಿ ಕ್ಯಾಂಪ್ ಕಡೆ ಹೋಗುವ. ಇವತ್ತು ಸಂಡೇ. ಧಾರವಾಡ ಆಫೀಸೀನಿಂದ ಜೀಪು ಬರತ್ತದಲ್ಲ’ ಎಂದು ಶಿರೋಡ್ಕರ ಹೇಳಿದರು. ನನ್ನದು ಸರಿಯಾಗಿ ತಿಂಡಿಯೂ ಆಗಿರಲಿಲ್ಲ. ಅವರೂ ಏನಾದರೂ ತಿಂದು ಬಂದಿದ್ದರೋ ಇಲ್ಲವೋ. ಹನುಮಂತ್ಯಾ ಕೂಡಲೇ ಹೇಳಿದ – ‘ಸಾರ್ ಇಲ್ಲೇ ಏನಾದ್ರೂ ತಿಂದು ಹೋಗೋನ್ರಿ. ಅಲ್ಲಿ ಅಪ್ಪು ಕುಟ್ಟಿ ಮಾಡಿದ ತಿಂಡಿ ಉಳಿದಿರ್ತದೋ ಇಲ್ಲೋ’
ಅವನು ಹಾಗಂದದ್ದೇ ತಡ. ಜಾನ್ ಕೂಡಲೇ- ‘ಸಾಹೇಬರ… ಇಲ್ಲೇ ತಿಂದ್ಕೊಂಡು ಹೋಗಿ. ಅಲ್ಲಿ ಕಾಡಿನಲ್ಲಿ ಬೇರೇನೂ ಸಿಗೋದಿಲ್ಲ. ಹಾಂ…! ಇಲ್ಲೊಂದು ಕಡೆ ದೋಸೆ ಮತ್ತು ಮೊಟ್ಟೇ ಸಾರು ಬಲೇ ಪಸಂದಾಗಿರ್ತದೆ. ಒಮ್ಮೆ ತಿಂದು ನೋಡಿ’ ಎಂದು ದುಂಬಾಲು ಬಿದ್ದ. ನನ್ನತ್ತ ನೋಡಿ ನಕ್ಕು ಹೇಳಿದ.
‘ನಿಮಗೆ ಬೇಕಾದ್ರೆ ಪುಠಾಣಿ… ನೀರ್ ಚಟ್ನಿ ಇರ್ತದೆ ಬನ್ನಿ ಸಾಹೇಬರೆ’ ಅಂದ. ಅವನ ಈ ಕಳಕಳಿ ಯಾಕೆಂದು ನನಗೆ ಗೊತ್ತಾಯಿತು. ಇಂಥ ಕಾಡಿನಲ್ಲೂ ಕುಸುಬಲಕ್ಕೀ ದೋಸೆ ಸಿಗುತ್ತದಲ್ಲ. ಅದೇ ದೊಡ್ಡ ಸಂಗತಿ. ಸರಿ… ಎಲ್ಲ ಟ್ರಾಕ್ಟರ ಏರಿ ಅತ್ತ ಹೋದೆವು.
ಜಾನ್ ಹೇಳಿದಂತೆ ದೋಸೆ ಪಸಂದಾಗಿತ್ತು. ಎಲ್ಲರೂ ಹೊಟ್ಟೆತುಂಬ ತಿಂದದ್ದೂ ಆಯಿತು. ಎರಡು ರೂಪಾಯಿ ಹನ್ನೆರಡಾಣೆ ಬಿಲ್ಲೂ ಆಯಿತು. ಈ ಸಲ ಬಿಲ್ಲು ಕೊಟ್ಟವರು ಶಿರೋಡ್ಕರರು. ಮತ್ತೆ ಎಲ್ಲೂ ನಿಲ್ಲದೆ ಕಾಡು ಪ್ರವೇಶಿಸಿದೆವು.ಮತ್ತು ನಮ್ಮ ಕ್ಯಾಂಪಿನ ದಾರಿ ಹಿಡಿದೆವು.
ಬಂದಿತ್ತು ಧಾರವಾಡದ ಜೀಪು
ಫೋಟೋ ಕೃಪೆ : wordpress.com
ಟೆಂಟು ಹತ್ತಿರ ಬರುತ್ತಿದ್ದಂತೆ ಆಫೀಸಿನ ಜೀಪು ಬಂದು ನಿಂತದ್ದು ಕಂಡು ತಕ್ಷಣ ಕೆಳಗಿಳಿದೆವು. ನಮ್ಮನ್ನು ಇಳಿಸಿದ ಫೆಡ್ರಿಕ ತನಗೆ ದೂಧಸಾಗರ್‌ದಲ್ಲಿ ತುರ್ತು ಕೆಲಸ ಇದೆ ಮತ್ತೆ ಇನ್ನೊಂದು ದಿನ ಸೇರುವಾ ಅನ್ನುತ್ತ ಕ್ಯಾಸಲ್‌ರಾಕ ಕಡೆಗೆ ಗಾಡಿ ತಿರುಗಿಸಿಯೇ ಬಿಟ್ಟ. ನಾವು ಅವನಿಗೆ ಕೃತಜ್ಞತೆ ಹೇಳಿ ಹೊರಳಿದರೆ ಟೆಂಟಿನ ಮುಂದೆ ಗಿಡದ ನೆರಳಲ್ಲಿ ಸೂಪಾದಿಂದ ಬಂದಿದ್ದ ಶ್ರೀ ವಿ.ವೈ.ನಾಯಕ ಅವರು ಕಂಡರು. ಅಲ್ಲಿದ್ದ ಗಿಡದ ನೆರಳಲ್ಲಿ ಒಂದು ಖುರ್ಚಿ ಹಾಕಿಕೊಂಡು ಕೂತಿದ್ದರು. ತಕ್ಷಣ ನಾವು ಮೂರೂ ಜನ ಅವರಿಗೆ ನಮಸ್ಕರಿಸಿ ಹತ್ತಿರ ಹೋಗಿ ನಿಂತೆವು.
ಹೆಂಗಿತ್ತೂ…? ಜಂಗಲ್ ಮೆ ಮಂಗಲ್ ?
‘ಕ್ಯಾಸಲ್‌ರಾಕ್ ಹೆಂಗಿತ್ತೂ…? ಸುರಾಪಾನ ಇತ್ತೇನು ಅಲ್ಲಿ? ಜಂಗಲ್ ಮೆ ಮಂಗಲ್ ಹುವಾ ಕ್ಯಾ?’ ಅಂದರು ನಗುತ್ತ. ಶಿರೋಡ್ಕರ ಸುಮ್ಮನೇ ನಕ್ಕರು. ನನಗೆ ಈಗಲೇ ಇವರ ಹತ್ತಿರ ನಮ್ಮ ಮುಂದಿನ ಕ್ಯಾಂಪ್‌ನ್ನು ಕ್ಯಾಸಲ್ ರಾಕ್ ನಲ್ಲೇ ಹಾಕಲು ಕೇಳಬೇಕು ಅನಿಸಿತಾದರೂ ಕೇಳಲಿಲ್ಲ.
‘ಮೊದ್ಲು ನಿಮ್ಮ ಪಗಾರ ತಗೊಳ್ರಿ. ಮಸ್ಟರ್ ರೋಲ್ ಗೆ ಸಹಿ ಹಾಕಿ ಇಲ್ಲಿ’ ಎಂದು ಪಗಾರ ಪುಸ್ತಕ ಮುಂದೆ ಸರಿಸಿದರು. ನನಗೆ ಹದಿನೈದು ದಿನದ ಪಗಾರ ಮೂವತೈದು ರೂಪಾಯಿ ಬಂದಿತ್ತು. ನೋಟು ನೋಡುತ್ತಲೂ ನನ್ನ ದುಡಿಕೆ… ನನ್ನ ಹೆಮ್ಮೆ ಎಂದು ಮನಸ್ಸು ಬೀಗಿತು. ಆಫೀಸೀನಿಂದ ಸಾಹೇಬರು ಬಂದಿದ್ದರಿಂದ ಇವತ್ತು ವಿಶೇಷ ಅಡುಗೆ ಆಗಬೇಕೆಂದು ಅಪ್ಪು ಕುಟ್ಟಿ ಓಡಾಡುತ್ತಿದ್ದ. ಕ್ಯಾಂಪಿನಲ್ಲಿ ಯಾರಾದರೂ ತಿನ್ನುವವರು ಇದ್ದರೆ ಇರಲಿ ಎಂದು ನಾಯಕ್ ಸಾಹೇಬರು ಬರೂವಾಗ ಸೂಪಾದಿಂದ ಒಂದಷ್ಟು ಬಂಗಡಾ ಮೀನು ತಂದಿದ್ದರು. ಅಪ್ಪು ಕುಟ್ಟಿ ಮತ್ತುಶಿರೋಡ್ಕರರಿಗೆ ಅವತ್ತು ದೊಡ್ಡ ಹಬ್ಬವೆ. ನಾನು ಪರಸ್ಯಾನ ಸಹಾಯದಿಂದ ಬದನೇಕಾಯಿ ಎಣ್ಣಿಗಾಯಿ ಪಲ್ಯ ಮಾಡುತ್ತೇನೆ ಎಂದು ಹೇಳಿದೆ. ಎಲ್ಲರಿಗೂ ಅದೂ ಪ್ರಿಯವೆ. ನಂತರ ಇಂಜನಿಯರರು ಮುಂದಿನ ಸರ್ವೇ ಕಾರ್ಯಗಳ ಬಗ್ಗೆ ಮಾತಾಡುತ್ತ ಕುಳಿತರು.
ಚೀಫ್ ಇಂಜನಿಯರ ಶ್ರೀ ಎನ್.ಜಿ.ಜೋಶಿ ಅವರೂ,
ಇ.ಇ. ಶ್ರೀ ಹೆಚ್.ಅರ್.ಎನ್.ಮೂರ್ತಿಯವರೂ, ಎ.ಇ.ಇ. ಶ್ರೀ ಸಿ.ಎಸ್. ಹೆಬ್ಲಿ ಅವರೂ… ನಮಗೆಲ್ಲ ಆಗ ದೊಡ್ಡ ಬಾಸ್ ಆಗಿದ್ದ ಮತ್ತು ಧಾರವಾಡ ಆಫೀಸಿನಲ್ಲಿದ್ದ ಚೀಫ್ ಇಂಜನಿಯರ ಶ್ರೀ ಎನ್.ಜಿ.ಜೋಶಿ ಕಾರ್ಯಪಾಲಕ ಇಂಜನಿಯರ [ಇ.ಇ.] ಶ್ರೀ ಹೆಚ್.ಎನ್.ಆರ್.ಮೂರ್ತಿಯವರು, ಸಹಾಯ ಕಾರ್ಯಪಾಲಕ ಇಂಜನಿಯರ್ [ಎ.ಇ.ಇ.] ಶ್ರೀ ಸಿ.ಎಸ್. ಹೆಬ್ಳಿಯವರ ಕುರಿತೂ ನಂತರ ಧಾರವಾಡದಲ್ಲಿಯೇ ಇದ್ದ ಮುಖ್ಯ ಇಂಜನಿಯರ ಶ್ರೀ ಎನ್.ಜಿ.ಜೋಶಿ ಯವರ ಕುರಿತೂ ಮಾತುಗಳು ಬಂದವು. ಆದಷ್ಟು ಬೇಗ ಸೂಪಾ ಆಣೆಕಟ್ಟು ನಿರ್ಮಾಣ ಕಾರ್ಯ ಸುರು ಮಾಡಲು ಸರಕಾರ ನಿರ್ಧರಿಸಿದೆ. ಮುಖ್ಯಮಂತ್ರಿಗಳಾದ ಶ್ರೀ ವೀರೇಂದ್ರ ಪಾಟೀಲರು ಕಾಳೀ ಜಲ ವಿದ್ಯುತ್ ಯೋಜನೆಗೆ ಬೇಕಾದ ಕೇಂದ್ರ ಸರಕಾರದ ಒಪ್ಪಿಗೆಯನ್ನೂ ತಂದಿದ್ದಾರೆ. ಅದರೊಟ್ಟಿಗೆ ನಾಗಝರಿ ಜಲವಿದ್ಯುತ್ ಯೋಜನೆಯ ಕೆಲಸಗಳು ಆರಂಭಿಸಲು ಸರಕಾರದ ಒತ್ತಡವಿದೆ ಎಂದು ಗೊತ್ತಾಯಿತು.
ಈಗ ಸೂಪಾ ಆಣೆಕಟ್ಟು ಮತ್ತು ವಿದ್ಯುದ್ದಾಗಾರದ [ಡ್ಯಾಮ್ ಅಂಡ್ ಪವರ್ ಹೌಸ್] ಕಾರ್ಯಗಳು ತೀವ್ರವಾಗುತ್ತವೆ ಎಂದೂ ನಾಯಕ್ ಸಾಹೇಬರು ಹೇಳಿದರು. ಟೆಂಟು ಹೊರಗೆ ಸೌದೆ ಒಲೆಯ ಮೇಲೆ ಅಡುಗೆ ಮಾಡುತ್ತ ಅದನ್ನು ಕೇಳುತ್ತಿದ್ದ ನಮಗೆ ಸಂತೋಷವಾಗುತ್ತಿತ್ತು. ಒಮ್ಮೆ ಸರಕಾರದ ಕೆಲಸಗಳು ತೀವ್ರಗೊಂಡರೆ ನಮಗೆಲ್ಲ ದಿನಗೂಲಿ ಕೆಲಸದಿಂದ ಭಡ್ತಿ ಸಿಕ್ಕು ನಾವೂ ತಿಂಗಳ ಸಂಬಳದ ಸರಕಾರೀ ನೌಕರರಾಗುತ್ತೇವೆ. ಆಗ ಸಂಬಳ-ಸವಲತ್ತುಗಳೂ ಹೆಚ್ಚಾಗುತ್ತವೆ ಎಂದು ಎಲ್ಲರೂ ಅಂದುಕೊಂಡಿದ್ದೆವು.
ಹೊರಟೆ ಕಾಡಿನಿಂದ ಪಟ್ಟಣಕ್ಕೆ
ನನ್ನ ಎಣ್ಣಿಗಾಯಿ ಪಲ್ಯ ಅರ್ಧ ಮುಗಿದಿತ್ತು. ಅಪ್ಪೂ ಕುಟ್ಟಿ ಎಲ್ಲರಿಗೂ ಎರಡೆರೆಡು ಚಪಾತಿ ಮಾಡಲು ಹಿಟ್ಟು ಕಲಸುತ್ತಿದ್ದ. ಆಗಲೇ ಇನ್ನೊಂದು ಒಲೆಯ ಮೇಲೆ ಬೇರೆ ಪಾತ್ರೆಯಲ್ಲಿ ಮೀನು ಸಾರು ಮಾಡಿ ಮುಗಿಸಿದ್ದ. ಅಷ್ಟರಲ್ಲಿ ಒಲೆಯ ಹತ್ತಿರವೇ ಬಂದ ನಾಯಕ ಸಾಹೇಬರು ಇದ್ದಕ್ಕಿದ್ದಂತೆ ಒಂದು ಸುದ್ದಿಯನ್ನು ಸ್ಫೋಟ ಮಾಡಿದರು.
ಇವತ್ತೇ ನಮ್ಮ ಸಂಗಡ ಶೇಖರ್ ಸೂಪಾಕ್ಕೆ ಬರಬೇಕು. ಹೈದರಾಬಾದಿನಿಂದ ಕೇಂದ್ರ ಸರಕಾರದ ಜಿಯಾಲಾಜಿ ತಜ್ಞರು ಬಂದು ಒಂದು ತಿಂಗಳು ಇರುತ್ತಾರೆ. ಸೂಪಾದಲ್ಲಿ ಕಟ್ಟಲಿರುವ ಆಣೆಕಟ್ಟಿನ ಅಡಿಪಾಯ ಗುರುತಿಸಿ ಅಲ್ಲಿ ಆಣೆಕಟ್ಟಿನ ಉದ್ದ, ತಳಪಾಯದ ಅಗಲ, ಮತ್ತು ಎತ್ತರದ ಅಗಲಗಳ ಗುರುತು (center line) ಜಾಗದ ಸರ್ವೇ ಕಾರ್ಯ ಮಾಡಲು ಬರ್ತಾ ಇದಾರೆ. ಅದು ಕೇಂದ್ರ ಸರಕಾರದ ಸರ್ವೇ ಆಫ್ ಇಂಡಿಯಾ ದ ಟೀಮು. ನಿಯಮಗಳ ಪ್ರಕಾರ ಮೈಸೂರು ಸರಕಾರವೇ ಅವರನ್ನು ಕರೆಸ್ತಾ ಇದೆ. ನಾವಿಲ್ಲಿ ಅವರ ಸಹಾಯಕ್ಕೆ ಜನ ಮತ್ತು ಓಡಾಟಕ್ಕೆ ಜೀಪು ಕೊಡಬೇಕು. ಅವರು ಉಳಿಯೋದಕ್ಕೆ ಸೂಪಾ ಬ್ರಿಟಿಷ್ ಬಂಗ್ಲೇಲಿ ಸೂಟ್ ರಿಜರ್ವ್ ಆಗಿದೆ. ನಾಳೆಯಿಂದ ಅವರ ಸಹಾಯಕ್ಕೆ ಅಂತ ಶೇಖರ್ ನಿಮ್ಮನ್ನು ಎಂಗೇಜ್ ಮಾಡ್ತಾ ಅದೀವಿ. ಈಗ ಊಟ ಆದ ಕೂಡ್ಲೇ ನೀವು ನಿಮ್ಮ ಹಾಸಿಗೆ ಬಟ್ಟೆ ಎತ್ತಿಕೊಳ್ಳಿ. ನಿಮಗೆ ಸೂಪಾದಲ್ಲಿ ಉಳಿಯೋದಕ್ಕೆ ಮೂರು ದಿನದ ತನಕ ಒಂದು ವ್ಯವಸ್ಥೆ ಮಾಡ್ತೀವಿ. ನಂತರ ಅಲ್ಲೇ ಒಂದು ಬಾಡಿಗೆ ಮನೆ ನೋಡ್ಕೊಳ್ಳಿ. ನೋ ಪ್ರಾಬ್ಲಂ ದೇರ್ ಆರ್ ಅಂದರು.
ನನ್ನ ಜಂಘಾ ಬಲವೇ ಉಡುಗಿಹೋಯಿತು ಅವರ ಅಷ್ಟೂ ಮಾತಿನಿಂದ. ಇಲ್ಲಿ ಕಾಡಿನಲ್ಲಿ ಎಂಟು ಜನರ ತಂಡದೊಂದಿಗಿದ್ದು ಸರ್ವೇ ಕಾರ್ಯದಲ್ಲಿದ್ದ ನನಗೆ ಒಂದು ರೀತಿಯ ಧೈರ್ಯವಿತ್ತು. ಇನ್ನು ಸೂಪಾದಲ್ಲಿ ಬಾಡಿಗೆ ಮನೆ ಹಿಡಿದು ಕೆಲಸ ಮಾಡುವುದು ಹೇಗೆ? ಬೇರೆ ಯಾವ ಸವಲತ್ತೂ ನನಗಿಲ್ಲ. ಅವತ್ತಿನ ಸಂತೋಷ ನನ್ನ ಪಾಲಿಗಂತೂ ಟುಸ್ ಆಗಿ ಹೋಯಿತು. ನಾನು ನನ್ನ ಹಾಸಿಗೆ ಬಟ್ಟೆಗಳನ್ನು ನನ್ನ ಹಳೆಯಟ್ರಂಕಿನಲ್ಲಿ ತುಂಬಿಕೊಂಡಾಗ ಕಣ್ಣಿಂದ ಒಂದು ಹನಿ ನೀರೂ ಉದುರಿತು. ಕಣ್ಣೆದುರು ಚಾಂದೇವಾಡಿ, ಕ್ಯಾಸಲ್ ರಾಕ, ಪೋರ್ತುಗೀಜರ ಬಂಗ್ಲೆಗಳು, ನಾನು ಕಂಡ ಕಾಡು ಪ್ರಾಣಿಗಳು, ಫೆಡ್ರಿಕ್, ಲೂಸಿ, ಮಾರಿಯಾ, ಜಾನ್, ಮೀನು ರಾಧಾ, ಗೌಳಿ ಎಲ್ಲ ನೆನಪಾದರು. ಬೆಳಗಿನ ತನಕ ಕಾಡಿನ ಮೋಹದಲ್ಲಿಯೇ ಇದ್ದ ನಾನು ಇವೆಲ್ಲವನ್ನು ತೊರೆದು ಇಂದೇ ಸೂಪಾ ಎಂಬ ಕಾಡು ಪಟ್ಟಣಕ್ಕೆ ಹೊರಡಬೇಕಾಯಿತಲ್ಲ ಎಂದು ಮನಸ್ಸು ಖಿನ್ನವಾಯಿತು.
ಮುಂದೆ ಓದಿರಿ –
ದಟ್ಟ ಕಾಡಿನಿಂದ ಸೂಪಾ ಪಟ್ಟಣಕ್ಕೆ ಬದಲಾಯಿತು ಜೀವನ. ಶ್ರೀ ವಿ.ವೈ.ನಾಯಕ್ ಅವರು ಸಹಾಯಕ ಕಾರ್ಯಪಾಲಕ ಇಂಜನಿಯರ್ ಶ್ರೀ ಸಿ. ಎಸ್.ಹೆಬ್ಲಿ ಸಾಹೇಬರು ನನಗೆ ನೈತಿಕ ಧೈರ್ಯ ತುಂಬಿದರು. ಹೈದರಾಬಾದಿನಿಂದ ಕೇಂದ್ರ ಸರಕಾರದ ಸರ್ವೇ ತಂಡ ಸೂಪಾಕ್ಕೆ ಬಂತು. ನಾನು ಆ ತಂಡದ ಮುಖ್ಯ ಆಫೀಸರ ಮತ್ತು ಕೇಂದ್ರ ಸರಕಾರದ ಭೂಗರ್ಭ ಶಾಸ್ತ್ರಜ್ಞ ಶ್ರೀ ಶೇಷಗಿರಿ ರಾವ್ ಹಾಗೂ ಸಹಾಯಕ ಜಿಯಾಲಾಜಿ ತಜ್ಞ ಅವರ ಸಹಾಯಕನಾದೆ. ಸ್ವಲ್ಪು ದಿನ ನನಗೆ ಸೂಪಾದಲ್ಲಿರಲು ಹೆಡ್ ಕ್ಲಾರ್ಕ ಶ್ರೀ ಭೈರಾಚಾರಿಯವರು ಮತ್ತು ಗೇಜ್ ರೀಡರ್ ಶ್ರೀ ಚಾಂದಗೋಡಿಯವರು ನೆರವಾದರು. – ಮುಂದೆ ಓದಿರಿ. ಯೋಜಿತ ಸೂಪಾ ಡ್ಯಾಮ್ ಸೈಟ್‌ನಲ್ಲಿ ರೋಚಕ ಕತೆಗಳು
- ಹೂಲಿಶೇಖರ್
(ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)