ಆರೋಗ್ಯಕರ ವಿಧಾನದಿಂದ ತೂಕ ಇಳಿಸಿ ಅರೆಬರೆ ಜ್ಞಾನದಿಂದ ಖಂಡಿತ ಮಾಡಬೇಡಿ,ಸರಿಯಾದ ರಿಸಲ್ಟ್ ಬರದೇ ಇದ್ದರೇ ಒಂದು ಥರ ಅರ್ಧ ಜೀವ ಇರೋ ಹಾವಿನ ತರಹ ಆಗಬಹುದು ಎಚ್ಚರಿಕೆ. ಆರೋಗ್ಯದ ಬಗ್ಗೆ ಸಮಾಜ ಹಿತ ಚಿಂತಕಿ ಲತಿಕಾ ಭಟ್ ಅವರಿಂದ ಸಲಹಾ ಲೇಖನ , ಮುಂದೆ ಓದಿ…
ಶಾರೀರಿಕವಾಗಿ ತೆಳ್ಳಗಿದ್ದಾಗ “ತುಂಬಾ ತೆಳ್ಗಿದ್ದೀಯಾ” ಅಂತಾರೆ. ಸ್ವಲ್ಪ ತೂಕ ಏರಿದರೆ “ಗುಂಡ್ಗುಂಡ್ಗೆ ಚೆನ್ನಾಗಿ ಕಾಣ್ತಿದೀಯಾ ಕಣೇ” ಅಂತಾರೆ. ಆಗ ಮೈ ಮರೆತೆವೋ ಮುಂದಿನ ವರ್ಷ “ಗಜಗೌರಿ ಆಗಿದೀಯಾ” ಅಂತಾರೆ !!
ಅದೇ ಇಳಿಸಲು ಪ್ರಾರಂಭ ಮಾಡಿದ್ರಾ ? ಅದೆಷ್ಟು ಅತ್ತೆಯರು ಬರ್ತಾರೆ…!!

ಫೋಟೋ ಕೃಪೆ : The Indian Express
“ಯೋಗಾ ಎಲ್ಲಾ ಸರಿಯಾದ ಗುರು ಇಲ್ದೇ ಮಾಡ್ಬಾರ್ದು. ನನ್ನ ಫ್ರೆಂಡ್ ಫ್ರೆಂಡ್ ಅಮ್ಮಂಗೆ ತುಂಬಾ ಪ್ರಾಬ್ಲಮ್ ಆಗಿತ್ತು ಗೊತ್ತಾ?”
“ಓಹ್.. ಜಿಮ್ಗೆ ಹೋಗ್ತೀಯಾ, ಬಿಟ್ರೆ…..
ಇನ್ನೂ ದಪ್ಪ ಆಗ್ತೀಯಾ ನೋಡು. ನನ್ ಕೊಲೀಗ್ ತಾತನ ತಮ್ಮಂಗೆ ಹಾಗೇ ಆಗಿತ್ತಂತೆ”
“ಏನು ? ಏರೋಬಿಕ್ಸ್ ಮಾಡ್ತೀಯಾ? ಕಾಲು ಮೂಳೆ ಸವ್ದೋಗತ್ತೆ ಅಷ್ಟೇ. ನನ್ನ ಪಕ್ಕದ್ ಮನೆ ಆಂಟಿ ಫ್ರೆಂಡೊಬ್ರಿಗೆ ತುಂಬಾ ತೊಂದರೆ ಆಗಿತ್ತಂತೆ”
ನೀವೇನೇ ಮಾಡಿದ್ರೂ ಅದಕ್ಕೊಬ್ಬ ಅತ್ತೇನೋ ಮಾವಾನೋ ಬಂದು ಇಂಥದ್ದೊಂದು ಹೇಳ್ತಿರ್ತಾರೆ. ಸರಿ… ನಾವು ಇಂಥದ್ದನ್ನೇ ಕೇಳ್ಸ್ಕೊಂಡು ಯಾವ್ದನ್ನೂ ಸರ್ಯಾಗಿ ಮಾಡ್ದೇ ವರ್ಷಕ್ಕೆ ಹತ್ಹತ್ತೇ ಕೆಜಿ ಏರ್ಸ್ಕೊಂಡು ಆಮೇಲೆ ಸೆಂಚುರಿ ಹೊಡ್ಕೊಂಡು , ಕೈಕಾಲು ,ಮೈಕೈ ನೋವೋ,ಗಂಟು ನೋವೋ, ಆಲಸ್ಯವೋ , ಬಿಪಿನೋ ಶುಗರ್ರೋ ಮೊದಲಾದ ಆರೋಗ್ಯದ ತೊಂದ್ರೆ ಅನುಭವಿಸ್ತಾ ಇರ್ತೀವಿ.
ಆಗ ಇದೇ ಅತ್ತೆ – ಮಾವಂದ್ರು “ಪಾಪ ಅವಳಿಗೆ ಸಿಕ್ಕಾಪಟ್ಟೆ ಬೊಜ್ಜು ಬಂದು , ಆರೋಗ್ಯ ಹದಗೆಡ್ತಾ ಇದೆ.ನನ್ನ ಮೈದುನನ ಮಾವನ ಅಕ್ಕನಿಗೆ ಹೀಗೇ ಆಗಿ ಹೋಗ್ಬಿಟ್ಳು ” ಅಂತಾರೆ.
ಇದನ್ನೆಲ್ಲಾ ಈಗ ಯಾಕೆ ಬರ್ಯೋಕೆ ಕೂತೆ ಅಂದ್ರೆ ತೂಕ ಇಳಿಸಿಕೊಳ್ಳೋ ವ್ರತ ಹಿಡಿದಾಗಿನಿಂದ ಮತ್ತೆ ಇದೇ ಅತ್ತೆ ಮಾವಂದ್ರ ಸಂತೆ. ಅವರು ಹೇಳುವ ಆ ಫ್ರೆಂಡ್ನ ಫ್ರೆಂಡಿನ ಮುಖ ಅವರೂ ನೋಡಿರಲ್ಲ. ಎಲ್ಲಾ ಅಂತೆ ಕಂತೆಗಳ ಬೊಂತೆಯೇ !!!

ಫೋಟೋ ಕೃಪೆ : The active time
ಅಂತಹ ಅತ್ತೆ ಮಾವಂದ್ರ ಗಮನಕ್ಕೆ :
ನಾನು ಸುಮಾರು ಮೂರು ವರ್ಷಗಳ ಕಾಲ ಸ್ಟಡಿ ಮಾಡಿ ಆರೋಗ್ಯಕರ ವಿಧಾನದ ಮೂಲಕ ತೂಕ ಇಳಿಸಿಕೊಳ್ಳುವ ಕಾರ್ಯಕ್ಕೆ ಕೈ ಹಾಕಿದ್ದೇನೆ. ಅರೆಬರೆ ಜ್ಞಾನದಿಂದ ಖಂಡಿತ ಅಲ್ಲ. ಸರಿಯಾಗಿ ಮಾಡದೇ ಅರ್ಧಂಬರ್ಧ ಮಾಡಿದರೆ ಎಲ್ಲವೂ ಕೆಟ್ಟದ್ದೇ. ಹಣ ಉಳಿಸಲು ಹೋಗಿ ಸರಿಯಾದ ಮಾರ್ಗದರ್ಶನವಿಲ್ಲದೇ ಏನೇ ಮಾಡಿದರೂ ಅದು ಯಾವತ್ತಿಗೂ ಡೇಂಜರೇ.ಆಗ ಸರಿಯಾದ ರಿಸಲ್ಟ್ ಬರದೇ ಇದ್ದವರು ಒಂದು ಥರ ಅರ್ಧ ಜೀವ ಇರೋ ಹಾವಿನ ತರಹ. ಅವರು ಆ ಪದ್ಧತಿಯೇ ಸರಿಯಿಲ್ಲವೆಂಬ ಅಪಪ್ರಚಾರದಲ್ಲಿ ತೊಡಗುತ್ತಾರೆ.
“ನಾನು ಅದನ್ನೇ ಎರಡು ತಿಂಗಳು ಮಾಡಿದ್ದೆ…ಈಗ ನೋಡು , ಮೂರುಪಟ್ಟಾಗಿದ್ದೇನೆ” ಅಂತ ಅಪಪ್ರಚಾರದಲ್ಲಿ ತೊಡಗಿರುತ್ತಾರೆ. ಇಷ್ಟು ಹದಗೆಟ್ಟ ಮೇಲೂ ಮತ್ತೆ ನಾವು ಇಂಥವರನ್ನೇ ಕೇಳಿದರೆ ಅವರು ಹೇಳಿದ ಹಾಗೇ ಪಾಪದ ಪರಿಸ್ಥಿತಿ ಗೆ ತಲುಪಿಸುತ್ತಾರೆ. ಅವರಿಗೆ ಇದೊಂದು ಮಾತನಾಡಲು ವಿಷಯವಷ್ಟೇ. ನಮಗೆ ನಮ್ಮ ಜೀವನ ಎಂಬುದು ನೆನಪಿರಬೇಕು.
ಸರಿಯಾದ ಮಾರ್ಗದರ್ಶನದಲ್ಲಿ ಮಾಡಿದವರು ಅತ್ಯಂತ ಆರೋಗ್ಯಕರವಾಗಿ ತೂಕ ಇಳಿಸಿಕೊಂಡು ಮಸ್ತಾಗಿರ್ತಾರೆ. ಈ ಮಂಕುಗಳಿಗೆ ಅವರು ಕಾಣೋದೇ ಇಲ್ಲ.
“ಓ ಅದಾ? ನಂಗೊತ್ತು… ನನ್ನ ಪಕ್ಕದ್ಮನೆ ಪದ್ಮಜಾ ಫ್ರೆಂಡು…” ಮತ್ತದೇ ರಾಗ.
ಅಂದ ಹಾಗೇ ತಮ್ಮ ಗಮನಕ್ಕೆ … ನಾನು ಯಾವುದೇ ಚೈನ್ ಲಿಂಕ್ ಬ್ಯುಸಿನೆಸ್ ಮಾಡಲು ಹೊರಟಿಲ್ಲ. ನನಗೆ ಒಳ್ಳೆಯದಾದರೆ ನಾನು ಖಂಡಿತ ನನ್ನ ಹಾಗೆ ತೊಂದರೆ ಅನುಭವಿಸುವವರಿಗೆ ಮಾರ್ಗದರ್ಶನ ಮಾಡುತ್ತೇನೆ. ಆದರೆ ಯಾರಿಗೂ ಒತ್ತಾಯ ಮಾಡುವುದಿಲ್ಲ. ಯಾಕೆಂದರೆ ಅವರು ಮಾನಸಿಕವಾಗಿ ಸದೃಢರಲ್ಲದಿದ್ದರೆ ನಾಳೆ ಅವರೇ ಮತ್ಯಾರಿಗೋ ಕಾಡುವ ಅತ್ತೆ ಮಾವ ಆಗುತ್ತಾರೆ. ನನಗೆ ಅತೀತೂಕದ ಕಷ್ಟ ಗೊತ್ತು. ನಾನು ನನ್ನಿಂದ ಒಬ್ಬರಿಗೆ ಆರೋಗ್ಯ ದೊರಕಿದರೂ ಅದು ಪುಣ್ಯದ ಕೆಲಸ ಎಂದುಕೊಳ್ಳುತ್ತೇನಷ್ಟೇ.
ನನ್ನ ಮಾರ್ಗದರ್ಶನವೇನಿದ್ದರೂ ನನಗೆ ಸಂಪೂರ್ಣ ರಿಸಲ್ಟ್ ಬಂದ ನಂತರವೇ. ಅಲ್ಲಿಯವರೆಗೂ ನಾನು ಯಾವುದೇ ಅತ್ತೆಮಾವಂದಿರ ಮಾತುಗಳಿಗೆ ಕಿವುಡಿಯಾಗಿರುತ್ತೇನೆಂದು ಈ ಮೂಲಕ ತಿಳಿಸುತ್ತಿದ್ದೇನೆ.
ಕರ್ನಾಟಕದ ಸಾಧಕಿ ಲತಿಕಾ ಭಟ್ ಅವರ ಬಗ್ಗೆ ಇನ್ನಷ್ಟು ಮಾಹಿತಿ
- ಲತಿಕಾ ಭಟ್ (ಲೇಖಕರು, ಸಮಾಜದ ಹಿತ ಚಿಂತಕರು, ಸುಯೋಗಾಶ್ರಯ ಆಶ್ರಮದ ಸಂಸ್ಥಾಪಕರು) ಶಿರಸಿ
