ಶ್ವೇತ ವಸ್ತ್ರ ತೊಡುತ್ತಿದ್ದ ಹೆಂಗಸರೆಲ್ಲ ಪ್ರತಿನಿತ್ಯ ಕಣ್ಮರೆಯಾಗುತ್ತಿದ್ದದ್ದು, ಆ ದುಷ್ಟರಿಂದ…ಒಂದು ಬಂಗಾಳಿ ಚಿತ್ರದಲ್ಲಿ ಮೂಡಿಬಂದ ಅದ್ಬುತ ಸಮಾಜದ ಪ್ರತಿಬಿಂಬ. ಈ ಚಲನಚಿತ್ರ ನೋಡಿದ ಮೇಲೆ ಕಾಣುವುದು ನನ್ನಂತಹ ಹುಚ್ಚ ಎನ್ನುತ್ತಾ ಒಂದು ಸಿನಿಮಾ ಪರಿಚಯ ಮಾಡಿದ್ದಾರೆ ಪ್ರೊ.ರೂಪೇಶ್ ಪುತ್ತೂರು ಅವರು,ಮುಂದೆ ಓದಿ…
ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಒಂದು ಕಾಲದಲ್ಲಿ ಆಡಾಗಿದ್ದೆ ನಾನು. ಮುಟ್ಟುತ್ತಿದ್ದೆ ಆದರೆ ತಿನ್ನುತ್ತಿರಲಿಲ್ಲ. ಅಂದರೆ…..
ಹಿಂದೆ ನಮ್ಮ ಮನೆಯಲ್ಲಿ ಕರೆಂಟು ಬಂದಿರಲಿಲ್ಲವಾದ (೮-೧೦ನೇ ತರಗತಿಯ ಕಾಲ)ದೂರದರ್ಶನ ಎಂಬ ಏಕೈಕ ಚಾನೆಲ್ ಇದ್ದ ಕಾಲ.. ಅದರಲ್ಲಿ ಭಾನುವಾರ ದಿನದಂದು ಪ್ರಾದೇಶಿಕ ಭಾಷಾ ಚಲನಚಿತ್ರ ಮಧ್ಯಾಹ್ನ 1.30ಗೆ, ಊಟ ಮಾಡಿ, ಟಿವಿ ಇರುವ ಮನೆ ಹುಡುಕಿ ಅಲ್ಲಿ ಹೋಗಿ, ಆ ಮನೆಯವರಲ್ಲಿ ವಿನಯಪೂರ್ವಕವಾಗಿ ಕೇಳಿಕೊಂಡು, ಯಾವುದೇ ಭಾಷೆಯ ಚಲನಚಿತ್ರವಾಗಲೀ ಅರ್ಥವಾಗ (ತಿನ್ನ) ದಿದ್ದರೂ ನೋಡು(ಮುಟ್ಟು)ತ್ತಿದ್ದೆ ಅಷ್ಟೇ….. ಆ ದಿನಗಳ ನನ್ನ ದುಸ್ಸಾಹಸ ಗಳಲ್ಲಿ ಒಂದು.
ನಂತರ ೧೪ವಯಸ್ಸು ದಾಟಿದ ಮೇಲೆ, ಭಾನುವಾರ ಮನೆಯಲ್ಲಿ ಸುಳ್ಳು ಹೇಳಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ಅಪ್ಪಾ ನಾ ಕೇಳಿದ ದುಡ್ಡು ಕೊಡುತ್ತಿದ್ದರು ಆದರೆ, lavish ಆಗಿ ಖರ್ಚು ಮಾಡಲು ಆಗುತ್ತಿರಲಿಲ್ಲ ಕಾರಣ ಒಂದೊಂದು ಪೈಸೆ ಖರ್ಚಾದ ವಿವರಣೆ ಅವರಿಗೆ ಕೊಡುವುದು ನನಗೆ ಅಸಾಧ್ಯ ಕಿರುಕುಳವಾಗಿತ್ತು. ಅದಕ್ಕೆ ೧೦ನೇತರಗತಿಯ ನಂತರ, ೧೪ರ ಹರೆಯದ ನಂತರ, ಕೂಲಿ ಕೆಲಸದ ಕಾಂಚಾಣವೇ ನನ್ನ ಅಹಂಕಾರದ ದರ್ಪದ ಮದವಾಗಿತ್ತು.
ಹೀಗೆ ನೋಡಿದ ಯಾವುದೋ ಉತ್ತರ ಭಾರತದ ಒಡಿಯಾ/ ಬಂಗಾಳಿ ಭಾಷಾ ಚಲನಚಿತ್ರದಲ್ಲಿ…..
ಒಂದು ಊರು ಆ ಊರಿನಲ್ಲಿ ಮೈ ಬಗ್ಗಿಸಿ ಕೆಲಸ ಮಾಡುವ ಗಂಡಸರು. ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರು. ಶಾಲೆಗೆ ಹೋಗದೆ ಆಟವಾಡುವ, ಏನಾದರೂ ಕೆಲಸ ಮಾಡುವ ಮಕ್ಕಳು. ಮನೆಯ ಹೊರಾಂಗಣದಲ್ಲಿ, ಮರದ ನೆರಳಲ್ಲಿ,ಇರುವ ವೃದ್ದರು ಹೀಗೆ ಊರಿಗೆ ಹೊಸದಾಗಿ ಮದುವೆಯಾಗಿ ಬಂದ ಹುಡುಗಿಗೆ ಸೌಂದರ್ಯ ಇದ್ದರೆ ಕೆಲವೇ ದಿನಗಳಲ್ಲಿ ಅವಳ ಗಂಡ ಸಾಯುತ್ತಾನೆ. ನಂತರ ವಿಧವೆಯಾದ ಅವಳು ಬಿಳಿ ವಸ್ತ್ರ ತೊಡುವುದೇ ವಾಡಿಕೆ. ಬಿಳಿ ವಸ್ತ್ರ ತೊಟ್ಟ ಕೆಲ ದಿನದಲ್ಲಿ ಆ ಸೌಂಧರ್ಯಭರಿತ ಹೆಣ್ಣು ಕಾಣೆಯಾಗುವುದು. ಅದೇ ರೀತಿ ಪ್ರಾಯಕ್ಕೆ ಬಂದ ಸೌಂದರ್ಯ ಇರುವ ಹೆಣ್ಣು ಮಕ್ಕಳೂ ಕಾಣೆಯಾಗುತ್ತಿದ್ದರು. ಕೆಲವೊಮ್ಮೆ ಮರಳಿ ಊರಿಗೆ ಬಂದರೂ ಅವಳು ಅಕ್ಕ ಪಕ್ಕದ ಊರಿನ ಶ್ರೀಮಂತ ಯಜಮಾನರ ರಾತ್ರಿ ಸಂಗಾತಿ ಆಗಿರುತ್ತಾಳೆ. ಕೆಲವೊಮ್ಮೆ ಊರಿಗೆ ಮರಳಿ ಬಾರದಿರುವುದು.

ಊರಿನಲ್ಲಿ ಒಬ್ಬ ಹುಚ್ಛ… ಅವನು ಗಂಡ ಮರಣ ಹೊಂದಿದ ಮನೆಯ ಮುಂದೆ ಬಂದು ಕಿರುಚುತ್ತಾನೆ.
” ತಂಗೀ…. ನೀನು ನಾಳೆಯಿಂದ ದಯವಿಟ್ಟು ವಿಧವೆ ಎಂದು ಶ್ವೇತ ವಸ್ತ್ರ ಧರಿಸಬೇಡ. ನಿನ್ನ ದುಷ್ಟರು ಹಾರಿಸಿಕೊಂಡು ಹೋಗುವರು… ನೀನು ಬಣ್ಣದ ಬಟ್ಟೆ ಧರಿಸು, ನಿನ್ನನ್ನು ಕಾಮದ ಹಸಿವಿನ ದುಷ್ಟರಿಂದ ಕಾಪಾಡು..” ಎಂದು ಗೋಗರೆಯುತ್ತಿದ್ದ.
ಅಲ್ಲಿ ಹೆಣ್ಣು ಮಕ್ಕಳು ಪ್ರಾಯಕ್ಕೆ ಬಂದ ನಂತರ ಒಂದು ಪೂಜೆ, ಅದರ ನಂತರ ಅವಳಿಗೆ ತಲೆಗೆ ಒಂದು (single)ಜಡೆ ಹಾಕುವ, ಕಿವಿಗೆ ಪೂರ್ತಿ ಕೆಂಪು ಬಣ್ಣ ಹಾಕಿ ಕೆಲ ದಿನ/ತಿಂಗಳು ಇರುವ ಸಂಪ್ರದಾಯ. ಈ ಪೂಜೆಯ ಸಮಯದಲ್ಲೂ ಹುಚ್ಚ ” ಮಗುವೇ ನೀನು ಇಷ್ಟ ಬಂದಂಗೆ ಜಡೆ ಹಾಕು… ಕಿವಿಗೆ ಕೆಂಪು ಬಣ್ಣ ಹಾಕಬೇಡ, ಈ ಧರ್ಮ ಸಂಪ್ರದಾಯ ಗಂಡು ಮಕ್ಕಳಿಗೆ ಯಾಕಿಲ್ಲಾ… ಅವರೂ ಒಂದು ಜಡೆ ಕಟ್ಟಲಿ ಇಲ್ಲಾ ಕೂದಲು ಬೋಳಿಸಲಿ…” ಎನ್ನುತ್ತಿದ್ದ.
ಆ ಸಮಯದಲ್ಲಿ ಆ ಮನೆಯವರು ಅಕ್ಕ ಪಕ್ಕದ ಮನೆಯವರು ಅವನನ್ನು ಬೈದು ಓಡಿಸುತ್ತಿದ್ದರು ಅಥವಾ ದೊಣ್ಣೆಯಿಂದ ಥಳಿಸಿ ಅಥವಾ ಅವನನ್ನು ಕಲ್ಲು ಎಸೆದು ಓಡಿಸುತ್ತಿದ್ದರು.
ಈ ರೀತಿ ಒಂದು ಜಡೆತೊಟ್ಟು, ಕಿವಿಗೆ ಕೆಂಬಣ್ಣ ಹಚ್ಚಿ ಓಡಾಡುವ ಹೆಣ್ಣುಮಕ್ಕಳಲ್ಲಿ , ಬೀದಿಯಲ್ಲಿ ಓಡಾಡುವಾಗ, ಬದಲಾಗಲು ನಿವೇದನೆ ಮಾಡುವ ಹುಚ್ಚನನ್ನು ಆ ಹೆಣ್ಣು ಮಕ್ಕಳು ಊರಿನವರಿಗೆ ಹೇಳಿ ಶಿಕ್ಷೆ ಕೊಡಿಸುತ್ತಿದ್ದರು.
ಶ್ವೇತ ವಸ್ತ್ರ ತೊಟ್ಟು ನೀರಿಗಾಗಿ ಅಥವಾ ಯಾವುದೋ ಕಾರಣಕ್ಕೆ ಮನೆಯಿಂದ ಹೊರಬರುವ ವಿಧವೆಯಲ್ಲಿ
” ಅಮ್ಮ ನಾನೇ ನಿನಗೆ ನೀರು ತಂದು ಕೊಡುತ್ತೇನೆ. ಬಿಳಿ ವಸ್ತ್ರ ಬೇಡ, ಹೊರಗೆ ಹೋಗಬೇಡ….” ಎಂದಾಗ…
ಒಂದು ದೃಶ್ಯದಲ್ಲಿ ಒಬ್ಬಳು ಶ್ವೇತ ವಸ್ತ್ರ ತೊಟ್ಟವಳು, ಅವನೊಬ್ಬ ಹುಚ್ಚ ಎಂಬ ಕನಿಕರದಿಂದ ನಗುತ್ತಾ ಹೋಗುವುದು.
ಇನ್ನೊಂದು ದೃಶ್ಯದಲ್ಲಿ, ಇನ್ನೊಬ್ಬಳು ಶ್ವೇತ ವಸ್ತ್ರ ತೊಟ್ಟವಳು, “… ಇದು ನಮ್ಮ ಆಚಾರ, ಧರ್ಮ, ನಿನಗೇನು ಗೊತ್ತು ? ಹುಚ್ಚ” ಎಂದೂ
ಮತ್ತೊಂದು ದೃಶ್ಯದಲ್ಲಿ ಮತ್ತೊಬ್ಬಳು ಶ್ವೇತ ವಸ್ತ್ರ ತೊಟ್ಟವಳು, “… ನೋಡು ನೀನು ಒಬ್ಬ ಹುಚ್ಚ, ಸಮಾಜದ ಬಗ್ಗೆ , ಧರ್ಮದ ಬಗ್ಗೆ , ಆಚರಣೆಯ ಮೌಲ್ಯದ ಬಗ್ಗೆ ಅಗೋಚರವಾದ ಲೋಕದ ಮೆದುಳು ನಿನಗೆ… ಹೋಗು ಮಕ್ಕಳ ಜೊತೆ ಆಟವಾಡು” ಎಂದು.
ಅವನು ಏನೇನೋ ಉತ್ತರಿಸುತ್ತಿದ್ದ, ಅವುಗಳಲ್ಲಿ

ಫೋಟೋ ಕೃಪೆ : bhaskar
” ಈ ಬಿಳಿ ವಸ್ತ್ರ ಧರಿಸದೆ , ಬಣ್ಣದ ವಸ್ತ್ರ ಧರಿಸಿ, ಎಲ್ಲಾ ಹೆಂಗಸರಂತೆ ನೀ ಹೊರ ಹೋಗು…. ಬದಲಾಗು. ಬಿಳಿ ವಸ್ತ್ರ ನಿನಗೆ ಗಂಡಸರು ಕಟ್ಟಿದ ಸಮಾಜದಲ್ಲಿ, ಅವರಿಗೆ ಮಾತ್ರ ಸೊಭಗಾಗಿ ಕಾಣಿಸಲು ಸೃಷ್ಟಿಸಿದ ಸಮಾಜದೊಳಗೆ, ನಿನಗೆ ಕೊಟ್ಟ ಮಾನಸಿಕ ಖೈದಿತ್ವ… ಇದರಿಂದ ಹೊರಗೆ ಬಾ…” ಎನ್ನುತ್ತಿದ್ದ.
ಹೀಗೆ ಹೇಳಿದ ಶ್ವೇತ ವಸ್ತ್ರ ತೊಟ್ಟ ಹೆಂಗಸರು ನಂತರದ ದಿನ ಕಣ್ಮರೆ ಆಗುತ್ತಿದ್ದರು.
ವಿಧವೆಯಾದ ನಂತರ ಅವಳಿಗೆ ಸಮಾಜ ಕೊಡುವ ನೀಚ ರೀತಿ-ರಿವಾಜುಗಳು, ನಿಂದನೆ, ಕಡೆಗಣನೆ, ಆಕ್ಷೇಪಣೆ, ಅವಳಿಗೆ ಆ ಶ್ವೇತ ವಸ್ತ್ರದ ಗುರುತಿನಿಂದ ಸಿಗುವಂತದಾಗಿತ್ತು.
ಅಲ್ಲೇ ಊರಪಕ್ಕದ ಪೇಟೆಯಲ್ಲಿ ಒಬ್ಬ ಹೆಣ್ಣು ಮಾರುವ ದಲ್ಲಾಳಿ ಇದ್ದ. ಅವನಿಗೆ ಕೆಲವು ಪುಂಡರು ಇದ್ದರು. ಆ ಪುಂಡರು ಅಲ್ಲೆಲ್ಲಾದರೂ ಮದುವೆ ಸಮಾರಂಭವಿದ್ದರೆ ಅಲ್ಲಿ ಹೋಗಿ, ಮದುಮಗಳು ಸುಂದರಿಯಾಗಿದ್ದರೆ ದಲ್ಲಾಳಿಗೆ ವಿಷಯ ತಿಳಿಸುತ್ತಿದ್ದರು. ದಲ್ಲಾಳಿ ತನ್ನ ದಾಂಡಿಗರಿಗೆ ಹೇಳಿ , ಆ ಮದುಮಗನನ್ನು ಮದುವೆಯಾದ ಕೆಲ ದಿನ/ವಾರದೊಳಗೆ ಕೊಂದು ನೇತಾಡಿಸುತ್ತಿದ್ದರು.
ಅಥವಾ ಪುಂಡರು ಪ್ರಾಯಕ್ಕೆ ಬಂದ ಹೆಣ್ಣು ಮಗುವಿನ ಪೂಜೆಗೆ ಹೋಗಿ, ಗುರುತು ವಿಳಾಸ ದಲ್ಲಾಳಿಗೆ ತಿಳಿಸುತ್ತಿದ್ದರು.

ಫೋಟೋ ಕೃಪೆ : vagabomb
ನಂತರ #ಬಿಳಿ_ಸೀರೆ ಉಟ್ಟ ಆ ಹುಡುಗಿಯನ್ನು / ಒಂದು ಜಡೆ- ಕಿವಿಗೆ ಕೆಂಬಣ್ಣ ಹಾಕಿದ ಹುಡುಗಿಯನ್ನು ಹಿಂಬಾಲಿಸಿ, ಜನವಿರಳ ಪ್ರದೇಶದಲ್ಲಿ ಅವಳನ್ನು ಎತ್ತಿ ಹಾಕಿ, ಕೊಂಡೊಯ್ದು ವೈಶ್ಯಾ ದಂಧೆಗೆ ಮಾರುತ್ತಿದ್ದ.
ಆ ಊರಿಗೆ ಚಂಪಾ (ಹೆಸರು ಬದಲಾಯಿಸಲಾಗಿದೆ) ಎಂಬ #ಹುಡುಗಿ ಮದುವೆಯಾಗಿ ಬರುತ್ತಾಳೆ. ಅವಳು ಬಾಲ್ಯದಲ್ಲಿ ತನ್ನ ತಂದೆ ತಾಯಿ ಕೆಲಸ ಮಾಡುವ ಯಜಮಾನರ ಮಕ್ಕಳಿಗೆ ಮನೆಗೆ , ಶಿಕ್ಷಕರು ಬಂದು ಪಾಠ ಹೇಳಿ ಕೊಡುವಾಗ, ಅಡಗುತ್ತಾ ಕೇಳಿ, ಯಜಮಾನರ ಮಕ್ಕಳು ಅವಳಿಗೆ ಬಿಡುವಿನಲ್ಲಿ ಅಕ್ಷರ ಹೇಳಿಕೊಟ್ಟು ಅಲ್ಪ ಸ್ವಲ್ಪ ಓದಲು ಬರುವ ಹುಡುಗಿ. ಅವಳು ರಾಜಾರಾಂ ಮೋಹನ್ ರಾಯ್ ಹಾಗೂ ದಯಾನಂದ ಸರಸ್ವತಿರವರ ಆರಾಧಕಿ. ಅವಳ ಗಂಡನೂ ಸಾಯುತ್ತಾನೆ. ಅವನ ದೇಹ ಸ್ಮಶಾನಕ್ಕೆ ಹೋಗುವ ಮೊದಲು, ಅವಳ ಬಳೆ ಒಡೆದು ಹಾಕುತ್ತಾರೆ. ಅವಳ ಮಾಲೆ ಕಿತ್ತೆಸೆಯುತ್ತಾರೆ, ಬೊಟ್ಟು ಅಳಿಸುತ್ತಾರೆ…. ಅದೇ ಸಮಯ , ಮನೆ ಬಾಗಿಲು ಮುಂದೆ ಹುಚ್ಚನ ಕಿರುಚಾಟ …. ಚಂಪಾನಿಗೆ ಅವನ ಮಾತಿನೊಳಗೆ ಅದೇನೋ ಅರ್ಥ ಕಂಡಿತು. ಮಾರನೇ ದಿನ ಅವಳು ಹುಚ್ಚನ ಮಾತಿನೊಳಗಿನ ತಿರುಳು ಅರಿಯುತ್ತಾಳೆ. ಹಲವಾರು ವಿಧವೆಯರು ಕಾಣೆಯಾದದ್ದು , ಅವರಿಗಾದ ಗತಿಯನ್ನು ಅರಿಯುತ್ತಾಳೆ. ಮುಂದಿನ ದಿನಗಳಲ್ಲಿ ಅವಳು ಏಕಾಂಗಿಯಾಗಿ ಬಣ್ಣದ ವಸ್ತ್ರ ಧರಿಸಿ ಹೋರಾಡುತ್ತಾಳೆ. ವೈಶ್ಯಯರಾದ ಹೆಂಗಸರೂ ಅವಳ ಜೊತೆ ಸೇರುತ್ತಾರೆ. ಸೇರಿಸಿ ಹೋರಾಡುವ ಒಂದು ಮರೆಯಲಾರದ ಅದ್ಭುತ #ಚಲನ ಚಿತ್ರ.

ಫೋಟೋ ಕೃಪೆ : vagabomb
ಇಂದು ನಾವು ವಿದ್ಯೆ ಪಡೆದ ನಂತರವೂ WhatsApp ವಿಶ್ವಮಧ್ಯಾಲಯದ ಬರಹ, ವಿಡಿಯೋಗಳ ಶ್ವೇತ ವಸ್ತ್ರ ಮೆದುಳಿಗೆ ತೊಟ್ಟಿದ್ದೇವೆ. ಪರಾಂಬರಿಸಿ ನೋಡುವ ತಾಳ್ಮೆ ಕಳೆದುಕೊಂಡಿದ್ದೇವೆ. ಇಂದಿನ ಸಮಾಜವನ್ನು, ಪ್ರಪಂಚ ಸತ್ಯ ಅರಿಯದವನಿಗೆ ಒಳ್ಳೊಳ್ಳೆ ಸಮಾಜ ಸುಧಾರಕರ ಪುಸ್ತಕ ಓದುವುದೇ ಮದ್ದು. ಓದುವುದೂ ಒಂದು ಸಾಧನೆ(effort) ಅದಕ್ಕೂ ತಾಳ್ಮೆ ಬೇಕು. ನಮ್ಮ ಅಮೂಲ್ಯ ಸಮಯ/ವಯಸ್ಸನ್ನು ನಾವರಿಯದೆ ಕ್ಷುಲಕ ವಿಷಯಗಳಿಗೆ ವ್ಯಯ ಮಾಡಬಾರದು. ಯಾವುದೇ ರೋಗಕ್ಕೂ ಚಿಕಿತ್ಸೆಯಿಂದ ಮುಕ್ತಿ, ಯಾವುದೇ ವಿಷಯಕ್ಕೂ ಪರಾಂಬರಿಸುವಿಕೆಯಿಂದ ಮುಕ್ತಿ. ಎಚ್ಚರಿಕೆ consciousness ವಿವೇಕ ಇರಲಿ. ಎಂದೆಂದೂ ನಮ್ಮ ನಿರ್ಧಾರದಲ್ಲಿ, ನಿರ್ಣಯದಲ್ಲಿ, ತೀರ್ಮಾನಗಳಲ್ಲಿ, ಸಂಕಲ್ಪಗಳಲ್ಲಿ ನಮ್ಮ ಹಾಗೂ ಸಮಾಜದ ಸ್ವಾತಂತ್ರ್ಯ ಹುಡುಕುವ ಪ್ರಾಮುಖ್ಯತೆ ಇರಲಿ. ಅವೈಜ್ಞಾನಿಕ ಮೌಢ್ಯತೆ ಜೀವನ ಸಾಗಿಸುವ ಹೆಮ್ಮೆಯ ಅಭಯವಾಗದಿರಲಿ.
ಚಲನ ಚಿತ್ರದ ಹುಚ್ಚನಿಂದ ಹೊರಬಂದು ನಿಮಗೆ ಕಾಣುವುದು- ನನ್ನಂತಹ ಹುಚ್ಚ
ಅಲ್ಲಲ್ಲಿ ಸಮಾಜದಿಂದ ಎದ್ದು ಬರುವ ಕಲ್ಲು, ದೊಣ್ಣೆಗಳ ಥಳಿತವೆಂಬ ಸಮಸ್ಯೆಗೆ ಹೆದರಿ, ಮೌನವಾಗಿ ಸಮಾಜದೊಳಗೆ ಅಡಗಿ
ಅರೆ ಬರೆ ಹುಚ್ಚನಾಗಿ…
ನಿಮ್ಮವ ನಲ್ಲ
*ರೂಪು*
- ಪ್ರೊ.ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)
