ಹೆಣ್ಣು ಎಲ್ಲ ಕ್ಷೇತ್ರಗಳಲ್ಲೂ ಸಮರ್ಥವಾಗಿ ದುಡಿಯಬಲ್ಲಳು. ಅಷ್ಟೇ ಸಮರ್ಥವಾಗಿ ಮನೆಯನ್ನು ಕೂಡ ನಡೆಸಬಳ್ಳಲು.ಆದರೆ ಆ ಹೆಂಗಸರನ್ನು ಹಾಸ್ಯಾಸ್ಪದವಾಗಿ ಚಿತ್ರಿಸುವ ಸಾವಿರಾರು ಟ್ರೊಲ್ ಗಳು ಮಾಡುವುದರ ಕುರಿತು ಲೇಖಕಿ ವಸಂತ ಗಣೇಶ ಅವರು ಬರೆದ ಚಿಂತನ ಲೇಖನ, ತಪ್ಪದೆ ಓದಿ…
ಮೊನ್ನೆ ಮೊಬೈಲ್ ನೋಡುತ್ತಾ ಇರುವಾಗ ಹೀಗೊಂದು ಟ್ರೋಲ್ ಕಣ್ಣಿಗೆ ಬಿತ್ತು. ಅದು ಹೀಗಿತ್ತು “ನಾನು ಕಟ್ಟಿದ್ದು ಒಂದೇ ತಾಳಿ, ಅದಕ್ಕಾಗಿ ಈಗ ಮನೆ ಬಾಡಿಗೆ ಕಟ್ಟಬೇಕು, ಲೈಟ್ ಬಿಲ್ ಕಟ್ಟಬೇಕು, ಸ್ಕೂಲ್ ಫೀಸ್ ಕಟ್ಟಬೇಕು, ಹೋಟೆಲ್ ಬಿಲ್ ಕಟ್ಟಬೇಕು, ಕೇಬಲ್ ಬಿಲ್ ಕಟ್ಟಬೇಕು, ತರಕಾರಿ ಬಿಲ್ ಕಟ್ಟಬೇಕು, ಗಾಡಿ ಲೋನ್ ಕಟ್ಟಬೇಕು ಕೊನೆಗೆ ಸಂಜೆ ಸ್ನಾಕ್ಸ್ ಬಿಲ್ ಕಟ್ಟಬೇಕು. ಕಟ್ಟಬೇಕು ಕಟ್ಟಬೇಕು ಕಟ್ಟಬೇಕು ಕಟ್ಟಿದ ಒಂದೇ ತಾಳಿಗೆ ಇಷ್ಟೆಲ್ಲ ಕಟ್ಟಬೇಕು” ಹೀಗಿತ್ತು.
ಈಗ ಹೇಳಿ, ಹೆಂಗಸರು ಕಟ್ಟಿಸಿಕೊಂಡದ್ದು ಒಂದೇ ತಾಳಿ ತಾನೆ. ಅದಕ್ಕಾಗಿ ಅವರು ಎಷ್ಟೆಲ್ಲ ತಾಳಿ ಬಾಳಬೇಕು. ಗಂಡ ಮನೆಗೆ ಬರುವುದು ತಡವಾದರೆ ನಿದ್ದೆಗೆಟ್ಟು ತಾಳ್ಮೆಯಿಂದ ಕಾಯಬೇಕು, ಅತ್ತೆ ಮಾವ ಏನೇ ಅಂದರೂ, ಎಷ್ಟೇ ಹಂಗಿಸಿದರೂ ತಾಳ್ಮೆಯಿಂದ ತಾಳಿಕೊಂಡು ಇರಬೇಕು. ಭಾವ ,ಮೈದುವ, ಅತ್ತಿಗೆ ನಾದಿನಿಯರು ಇದ್ದರೆ, ಅವರು ಆಡುವ/ ಕೊಡುವ ಹಿಂಸೆಯನ್ನು ತಾಳಿ ಬಾಳಬೇಕು, ಮಕ್ಕಳು ಆಗುವುದು ಸ್ವಲ್ಪ ತಡವಾದರೆ ಎಲ್ಲರೂ ಆಡುವ ಮಾತುಗಳನ್ನು ತಾಳ್ಮೆಯಿಂದ ಕೇಳಿಕೊಂಡು ತಾಳಿ ಬದುಕು ನಡೆಸಬೇಕು, ಮನೆಯ ಒಳಗೆ , ಮನೆಯ ಹೊರಗೆ ಎಷ್ಟೇ ಕೆಲಸ ಕಾರ್ಯಗಳು ಇದ್ದರೂ ಎಲ್ಲವನ್ನೂ ತಾಳ್ಮೆಯಿಂದ ಸರಿಯಾಗಿ ಮಾಡಬೇಕು, ಗಂಡ ಕುಡುಕನೋ, ಕೆಡುಕನೋ ಆದರೆ ಅದನ್ನೂ ತಾಳಿಕೊಂಡು ಬಾಳಬೇಕು. ತಮ್ಮ ಮನಸ್ಸಿನ ಸಂತೋಷಕ್ಕಾಗಿ ಸ್ವಲ್ಪ ಸಮಯ ಬೇಕು ಎಂದರೂ ಎಲ್ಲರ ಅವಶ್ಯಕತೆಗಳನ್ನು ಪೂರೈಸಿ ಬಿಡುವಿನ ಸಮಯಕ್ಕಾಗಿ ಕಾಯಬೇಕು, ಗೃಹಿಣಿ ಆದರೆ ಒಂದೊಂದು ಕಾಸನ್ನು ಗಂಡನ್ನ ಕೇಳಿ, ಅವನು ಕೊಡುವವರೆಗೂ ಮತ್ತೊಂದು ಮಾತು ಆಡದಂತೆ ತಾಳಿಕೊಂಡು ಇರಬೇಕು. ಮಕ್ಕಳು ಗಂಡನ ಮಧ್ಯೆ ಸಿಕ್ಕಿ ನರಳುವಾಗ ಕೂಡ ತಾಳ್ಮೆ ಸಹನೆ ತಂದುಕೊಂಡು ತಾಳಿಕೊಂಡು ಇರಬೇಕು. ಒಟ್ಟಿನಲ್ಲಿ ಪ್ರತಿ ಕ್ಷಣವೂ ತಾಳ್ಮೆಯಿಂದ ತಾಳಿಕೊಂಡು ಬಾಳಬೇಕು. ಇಷ್ಟೆಲ್ಲ ತಾಳಿ ಕೊನೆಗೊಂದು ದಿನ ಇನ್ನು ತಾಳಲು ಸಾಧ್ಯವೇ ಇಲ್ಲ ಎಂದು ಯಮದೂತರನ್ನು ಕರೆದರೂ ಅವರು ಬೇಕೆಂದಾಗ ಖಂಡಿತಾ ಬಾರರು, ಅವರಿಗೂ ತಾಳ್ಮೆಯಿಂದ ತಾಳಿಕೊಂಡು ಕಾಯಬೇಕು.

ಹಾ… ಈಗ ಮೇಲಿನ ಟ್ರೊಲ್ ಗೆ ಬರೋಣ. ಬರೆದವರು ಯಾರೇ ಆಗಿರಲಿ, ಅವರು ಮದುವೆಗೆ ಮುನ್ನ ಒಬ್ಬರೇ ಇದ್ದಾಗ ಮನೆಗೆ ಬಾಡಿಗೆ ಕಟ್ಟುತ್ತಾ ಇರಲಿಲ್ಲವೇ? ರಸ್ತೆಯಲ್ಲೇ ಸ್ನಾನ, ಊಟ ತಿಂಡಿ ಮಾಡಿ ಅಲ್ಲಿಯೇ ಮಲಗುತ್ತಿದ್ದರೇ? ಲೈಟ್ ಬಿಲ್ಲು ಕಟ್ಟದೆ ಕತ್ತಲೆಯಲ್ಲೇ ವಾಸ ಮಾಡುತ್ತಾ ಇದ್ದರೆ? Tv ಕೂಡ ನೋಡ್ತಾ ಇರಲಿಲ್ಲವೇನೋ? ತರಕಾರಿ ರೇಶನ್ ಬಿಲ್ ಕಟ್ಟದೇ ಹುಟ್ಟಿದಾಗಿನಿಂದ ಉಪವಾಸವೇ ಇದ್ದರೇನೋ ಪಾಪ ಅವರು. ಹೋಟೆಲ್ ಗೆ ಹೋಗಿ ತಿಂದಾಗ ಬಿಲ್ ಕಟ್ಟದೆ ಇರಲು ಅದು ಅವರ ಚಿಕ್ಕಪ್ಪ , ಮಾವ ಅಥವಾ ಇನ್ಯಾರೋ ಪರಿಚಯದವರ (ಬಿಲ್ ತೆಗೆದುಕೊಳ್ಳದಷ್ಟು ಹತ್ತಿರದವರ) ಹೋಟೆಲ್ ಆಗಿತ್ತೇನೋ.? ಊಟ ತಿಂಡಿಯನ್ನೇ ಮಾಡ್ತಾ ಇರಲಿಲ್ಲ ಅಂದ ಮೇಲೆ ಇನ್ನು ಸಂಜೆ ಸ್ನಾಕ್ಸ್ ಇನ್ನೆಲ್ಲಿ ತಿನ್ನುತ್ತಾ ಇದ್ದರು ಅಲ್ವಾ? ಸ್ಕೂಲ್ ಫೀಸ್ ಕೂಡಾ ಅಷ್ಟೇ, ಅವರ ಅಪ್ಪ ಅಮ್ಮ ಕಟ್ಟಿ ಓದಿಸುವ ಹೊತ್ತಿಗೆ ಇಂದು ಅವರು ಈ ಟ್ರೊಲ್ ಬರೆಯಲು ಸಾಧ್ಯ ಆಗಿದ್ದು. ಇಷ್ಟರ ಮೇಲೆ ಇವರ ಮಕ್ಕಳನ್ನು ಸ್ಕೂಲ್ ಗೆ ಸೇರಿಸಿ ಓದಿಸದೇ ಹಾಗೇ ಮನೆಯಲ್ಲೇ ಕೂರಿಸಿಕೊಂಡಿರಬಹುದು ಅಲ್ಲವೇ?. ಓದಿ ದೊಡ್ಡ ಹುದ್ದೆಗೆ ತಲುಪಿದಾಗ ತಮ್ಮ ಮಕ್ಕಳು ಎಂದು ಹೆಮ್ಮೆಯಿಂದ ಎದೆ ಉಬ್ಬಿಸಿ ಹೇಳಿಕೊಳ್ಳಬೇಕು ಎಂದರೆ ಫೀಸ್ ಕಟ್ಟಲೇಬೇಕು.
ಈಗಂತೂ ಹೆಚ್ಚು ಕಡಿಮೆ ಎಲ್ಲ ಹೆಣ್ಣು ಮಕ್ಕಳೂ ಓದಿ ಕೆಲಸ ಮಾಡುತ್ತಾ ಇರುತ್ತಾರೆ, ಗಂಡಸರಿಗೆ ಸಮನಾಗಿ ಕೆಲವೊಮ್ಮೆ ಅವರಿಗಿಂತ ಹೆಚ್ಚೇ ದುಡಿಯುತ್ತಾ ಇರುತ್ತಾರೆ. ಹಾಗಿದ್ದೂ ಇಂತಹ ಭಾವನೆಗಳು ಯಾಕೆ ಉದಯಿಸುತ್ತದೆಯೋ ಕೆಲವರ ಮನಗಳಲ್ಲಿ ಗೊತ್ತಿಲ್ಲ.
ಇದೊಂದೇ ಅಲ್ಲ, ಹೆಂಗಸರನ್ನು ಹಾಸ್ಯಾಸ್ಪದವಾಗಿ ಚಿತ್ರಿಸುವ ಇಂತಹ ಸಾವಿರಾರು ಟ್ರೊಲ್ ಗಳು ದಿನವೂ ಎಲ್ಲೆಡೆ ಹರಿದಾಡುತ್ತಿರುತ್ತವೆ. ಎಂದೋ ಎಲ್ಲಿಯೋ ಒಂದು ಆದರೆ ಸರಿ, ದಿನವೂ ಇಂತಹದೇ ನೋಡುವಾಗ ಬೇಸರ ಆಗುವುದು ಸಹಜ. ಅವುಗಳನ್ನು ಓದಿದವರು ಎಲ್ಲರೂ ಅದಕ್ಕಿಂತ ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡುವುದನ್ನು ನೋಡಿರುತ್ತೇವೆ.
ಹೆಚ್ಚಾಗಿ ಇಂತಹ ಟ್ರೊಲ್ ಗಳಲ್ಲಿ ದಡೂತಿ ಹೆಂಡತಿ, ಸ್ಮಾರ್ಟ್ ಆಗಿ ಕಾಣುವ ಗಂಡಸರ ಚಿತ್ರ ಇರುತ್ತದೆ. ಒಂದೇ ಒಂದು ಕ್ಷಣ ಯೋಚಿಸಿ, ಮದುವೆಗೆ ಮೊದಲು ಹೆಚ್ಚಿನ ಹೆಣ್ಣು ಮಕ್ಕಳು ಅಷ್ಟು ದಪ್ಪ ಇರುವುದೇ ಇಲ್ಲ(ದಪ್ಪ ಇದ್ದ ಹುಡುಗಿಯರನ್ನು ಹುಡುಗರು ಒಪ್ಪುವುದು ಇಲ್ಲ). ಮದುವೆ ಆದ ಮೇಲೆ ಬಸಿರು, ಬಾಣಂತನ ಮಗುವಿನ ಲಾಲನೆ ಪಾಲನೆಯಲ್ಲಿ ತನ್ನನ್ನು ತಾನು ಸರಿಯಾಗಿ ಗಮನಿಸಿಕೊಳ್ಳಲು ಆಗುವುದಿಲ್ಲ. ಆಗಲೇ ಮೈ ಅಳತೆ ಮೀರಿ ಬೆಳೆಯಲು ಆರಂಭಿಸುತ್ತದೆ. ನಂತರವೂ ಅಷ್ಟೇ, ಮನೆಯಲ್ಲಿ ಇರುವ ಹಿರಿಯರ ಆರೋಗ್ಯ, ಕಿರಿಯರ ಯೋಗಕ್ಷೇಮ, ಹೊರಗೆ ಹೋಗುವವರ ಬೇಕು ಬೇಡಗಳನ್ನು ಗಮನಿಸಿ ಎಲ್ಲರ ಊಟ ತಿಂಡಿ ಆಗುವವರೆಗೂ ಕಾದು ಮನೆಯ ಹೆಂಗಸರು ತಿನ್ನುವ ವೇಳೆಗೆ ಊಟ ತಿಂಡಿ ಸಮಯ ಮೀರಿ ಯಾವುದೋ ಕಾಲ ಆಗಿರುತ್ತದೆ. ಹೊತ್ತಲ್ಲದ ಹೊತ್ತಿನಲ್ಲಿ ತಿನ್ನುವುದು, ಪೌಷ್ಟಿಕವೋ, ಅಪೌಷ್ಠಿಕವೋ ಎನ್ನುವುದನ್ನು ನೋಡದೇ ಉಳಿದದ್ದನ್ನು ಹಸಿದ ಹೊಟ್ಟೆಗೆ ತುಂಬಿ ಮತ್ತೆ ಕೆಲಸ. ಸರಿಯಾದ ವಿಶ್ರಾಂತಿ ಕೂಡ ಸಿಗುವುದಿಲ್ಲ ಕೆಲವರಿಗೆ. ಇನ್ನು ಹೊರಗೂ ದುಡಿಯುವ ಹೆಂಗಸರಾದರಂತೂ ಕೇಳುವುದೇ ಬೇಡ. ಬೆಳಗಿನ ತಿಂಡಿ ಸ್ಕಿಪ್ ಮಾಡಿ ಒಂದೇ ಬಾರಿ ಮಧ್ಯಾನ್ಹ ಡಬ್ಬಿಯಲ್ಲಿ ತಂದದ್ದನ್ನು ತಿನ್ನುವವರೇ ಹೆಚ್ಚು. ಇದೆಲ್ಲದರ ಪರಿಣಾಮ ದೇಹದ ಮೇಲೆ ಆಗಿ ದಪ್ಪ ಆಗಿರುತ್ತಾರೆ. ಹೊತ್ತು ಹೆರದ, ಹೊತ್ತು ಹೊತ್ತಿಗೆ ಸರಿಯಾಗಿ ತಾಯಿ/ಹೆಂಡತಿ ಮಾಡಿ ಹಾಕಿದ್ದು ತಿನ್ನುತ್ತಾ, ಆಫೀಸ್ ಕೆಲಸ, ವಾಕಿಂಗ್, ಜಿಮ್ ಎಂದೆಲ್ಲ ಆರಾಮಾಗಿ ಇರುವ ಗಂಡಸರು ಸಹಜವಾಗಿಯೇ ಫಿಟ್ ಆಗಿ ಇರುತ್ತಾರೆ.

ಇನ್ನು ಕೆಲವು ಟ್ರೊಲ್ ಗಳಲ್ಲಿ ಹೆಂಗಸರ ಕೈಯಲ್ಲಿ ಪೊರಕೆ ಅಥವಾ ಲಟ್ಟಣಿಗೆ ಕೊಟ್ಟು ಗಂಡನನ್ನು ಪಾಪದ ಪ್ರಾಣಿಯಾಗಿ ಚಿತ್ರಿಸಿರುತ್ತಾರೆ. ಒಂದು ನಿಮಿಷ ಕಣ್ಣು ಮುಚ್ಚಿ ಯೋಚಿಸಿ, ನೀವು ಗಂಡನಿಗೆ ಹೊಡೆಯುವ ಎಷ್ಟು ಜನ ಹೆಂಗಸರನ್ನು ನೋಡಿದ್ದೀರಿ? ಹಾಗೆ ಹೆಂಗಸರನ್ನು ಹೊಡೆಯುವ ಎಷ್ಟು ಜನ ಗಂಡಸರನ್ನು ನೋಡಿದ್ದೀರಿ ಎಂದು. ಅಪರೂಪಕ್ಕೆ ಒಂದೆರಡು ಸಂಸಾರಗಳಲ್ಲಿ ಹೆಂಡತಿ ಗಂಡನ ಮೇಲೆ ದಬ್ಬಾಳಿಕೆ ಮಾಡಬಹುದೇ ಹೊರತು , ಹೊಡೆಯುವ ವಿಷಯ ಬಂದಾಗ ಗಂಡಸರೇ ಹೆಚ್ಚು ಕೈ ಎತ್ತುವುದು ಅನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಹೆಣ್ಣು ತೀರಾ ನೊಂದಾಗ ಒಂದಿಷ್ಟು ಮಾತು ಆಡಬಹುದು ಇಲ್ಲವೇ ಅಳುವಿನ ಮೊರೆ ಹೋಗಬಹುದು. ಆದರೆ ಗಂಡಸರು ಸಿಟ್ಟು ಬಂದಾಗ, ಹೆಂಡತಿ ಸರಿ ತಪ್ಪು ಕೇಳಿದಾಗ, ಸರಿಯಾಗಿ ಉತ್ತರಿಸಲು ಸಾಧ್ಯವಾಗದ ಸಮಯದಲ್ಲಿ ಕೊನೆಯ ಅಸ್ತ್ರವಾಗಿ ಹೆಂಗಸರ ಮೇಲೆ ಕೈ ಎತ್ತುವುದು ಜಾಸ್ತಿ. ಇದು ಅನಕ್ಷರಸ್ಥರು ಕುಡುಕರಲ್ಲಿ ವಿಪರೀತ ಆದರೂ, ವಿದ್ಯಾವಂತರು, ಮಧ್ಯಮ ವರ್ಗ, ಮೇಲ್ವರ್ಗದವರಲ್ಲೂ ತೀರಾ ಅಪರೂಪ ಏನಲ್ಲ.
ಹೆಂಗಸರು ಅಲಂಕಾರ ಪ್ರಿಯರು ಎನ್ನುವುದು ನಿಜವೇ. ಅದರ ಬಗ್ಗೆ ಅಂತೂ ಇನ್ನಿಲ್ಲದ ಟ್ರೋಲ್ ಗಳು. ಗಂಡಸರ ಜೇಬು ಹೆಂಡತಿಯ ಅಲಂಕಾರಕ್ಕೆ, ಬಟ್ಟೆಗಳನ್ನು ಕೊಳ್ಳುವುದಕ್ಕೆ ಖಾಲಿಯಾಗುತ್ತದೆ ಎಂದು. ಎಷ್ಟು ಜನ ಗಂಡಸರು ಧೂಮಪಾನ ಮದ್ಯಪಾನ ದಂತಹ ಚಟಗಳಿಗೆ ಅಧೀನರಾಗಿಲ್ಲ ಹೇಳಿ? ಮನೆಯಲ್ಲಿ ತಿನ್ನಲು ತುತ್ತು ಅನ್ನ ಇಲ್ಲವಾದರೂ ತಮ್ಮ ಚಟಗಳಿಗೆ ಹಣ ಒದಗಿಸಿಕೊಳ್ಳುವ ಪುರುಷರು ಸಾಕಷ್ಟು ಮಂದಿ ಇದ್ದಾರೆ. ಧೂಮಪಾನ, ಮಧ್ಯಪಾನ ಗಳಿಗೆ ಖರ್ಚು ಮಾಡುವ ಹಣ ಲೆಕ್ಕಕ್ಕೆ ಇಲ್ಲವೇ ಹಾಗಿದ್ದರೆ. ಅಲಂಕಾರದಿಂದ ಅಂತಹ ತೊಂದರೆ ಏನಿಲ್ಲವಾದರೂ ಧೂಮಪಾನ, ಮಧ್ಯಪಾನಗಳಿಂದ ಮುಂದೆ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ. ಅದಕ್ಕಾಗಿ ಖರ್ಚಾಗುವ ಹಣಕ್ಕೆ ಲೆಕ್ಕ ಇಲ್ಲವೇ? ಹಾಗೆ ಹೆಣ್ಣು ಆಭರಣ ಪ್ರಿಯಳು, ಆಗಾಗ ಆಭರಣ ಕೊಳ್ಳುತ್ತಾಳೆ ಅನ್ನುವ ಟ್ರೊಲ್ ಗಳು. ಹೆಣ್ಣು ಆಭರಣ ಕೊಂಡು, ಧರಿಸಿ ಖುಷಿ ಪಡುತ್ತಾಳೆ ಅನ್ನುವುದು ನಿಜ. ಆದರೆ ಸಂಸಾರದಲ್ಲಿ ಹಣ ಕಾಸಿನ ಕೊರತೆ ಆದಾಗ ಅದೇ ಆಭರಣಗಳು ಉಪಯೋಗಕ್ಕೆ ಬರುತ್ತದೆ ಎನ್ನುವುದು ಆಷ್ಟೇ ಸತ್ಯ ಅಲ್ಲವೇ. ಇಂದು ಕೊಂಡ ಆಭರಣದ ಬೆಲೆ ಇನ್ನೆರಡು ವರ್ಷಕ್ಕೆ ದುಪ್ಪಟ್ಟು ಆಗಿರುತ್ತದೆ. ಅದರಿಂದ ಲಾಭವೇ ಹೊರತು ನಷ್ಟ ಏನಿಲ್ಲ . ಅದೇ ಗಂಡಸರು ಆಸೆ ಪಟ್ಟು ಕೊಳ್ಳುವ ವಾಹನಗಳು, ಎಲೆಕ್ಟ್ರಾನಿಕ್ ಉಪಕರಣಗಳು ಇಂದು ಕೊಂಡು ನಾಳೆ ಮಾರಲು ಹೋದರೂ ಅರ್ಧ ಬೆಲೆಯೇ ಸಿಕ್ಕುವುದು ಎನ್ನುವುದು ಎಲ್ಲರಿಗೂ ತಿಳಿದದಿರುವ ಸತ್ಯ ತಾನೇ.

ಫೋಟೋ ಕೃಪೆ : istock
ಹಾಗೆ ನೋಡಿದರೆ ಈಗ ಹೆಣ್ಣು ಎಲ್ಲ ಕ್ಷೇತ್ರಗಳಲ್ಲೂ ಸಮರ್ಥವಾಗಿ ದುಡಿಯಬಲ್ಲಳು. ಅಷ್ಟೇ ಸಮರ್ಥವಾಗಿ ಮನೆಯನ್ನು ಕೂಡ ನಡೆಸಬಳ್ಳಲು. ಗಂಡಸಿನ ಸಹಾಯ ಇಲ್ಲದೆ (ವಿಧವೆ, ವಿಚ್ಛೇದಿತ) ಹೆಣ್ಣು ಮಕ್ಕಳು ತಮ್ಮ ಮಕ್ಕಳನ್ನು ಬೆಳೆಸುತ್ತಾ, ತಂದೆ ತಾಯಿ/ಅತ್ತೆ ಮಾವ ಅವರುಗಳನ್ನು ನೋಡಿಕೊಳ್ಳುತ್ತಾ ಸಂಸಾರ ನಿಭಾಯಿಸುವಷ್ಟು ಸಮರ್ಥವಾಗಿ ಒಂದು ಗಂಡು ಇದೆಲ್ಲವನ್ನೂ ನಿಭಾಯಿಸುವುದು ಅಷ್ಟು ಸುಲಭವೇನಲ್ಲ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ.(ಕೆಲವೊಂದು ಅಪವಾದಗಳು ಇರಬಹುದು)
ಇದೆಲ್ಲವೂ ಸತ್ಯ ಹೌದೋ ಅಲ್ಲವೋ ನೀವೇ ಹೇಳಿ. ನಾನೇನೂ ಪುರುಷ ದ್ವೇಷಿ ಅಲ್ಲ. ಆದರೆ ಯಾವಾಗಲೂ ಹೆಂಗಸರ ಕುರಿತಾಗಿ ಇಂತಹ ಟ್ರೊಲ್ ಗಳನ್ನ ನೋಡುವಾಗ ಬೇಸರ ಆಗುತ್ತದೆ. ಎಷ್ಟೆಲ್ಲ ಸಹನೆ, ತಾಳ್ಮೆಯಿಂದ ಜಾಣತನದಿಂದ ಸಂಸಾರ ನಿಭಾಯಿಸುವ ಹೆಣ್ಣನ್ನು ಚಿತ್ರ ವಿಚಿತ್ರವಾಗಿ ಟ್ರೊಲ್ ಗಳಲ್ಲಿ ಬಳಸಿಕೊಳ್ಳುವುದು ನೋಡುವಾಗ ಇದೆಲ್ಲ ಹೇಳಬೇಕು ಅನ್ನಿಸಿತು. ಒಂದು ಮಟ್ಟದವರೆಗೆ ಎಲ್ಲವೂ ಚೆಂದ, ಅದು ವಿಪರೀತ ಆದಾಗ ಮಾತ್ರ ಬೇಸರ. ಹೆಣ್ಣು ಎಂದ ಕೂಡಲೇ ಹಾಸಿಗೆ ಅಥವಾ ಹಾಸ್ಯದ ವಸ್ತು ಅಲ್ಲ. ಅವಳಿಗೂ ಒಂದು ಮನಸ್ಸಿದೆ, ಅದಕ್ಕೂ ಒಂದು ನೋವಿದೆ. ತನ್ನಂತೆ ಅವಳಲ್ಲೂ ಆಸೆ ಆಕಾಂಕ್ಷೆಗಳಿವೆ ಎನ್ನುವುದನ್ನು ಹೀಗೆಲ್ಲ ಆಡುವವರು ಇನ್ನು ಮುಂದಾದರೂ ತಿಳಿದರೆ ಒಳಿತು.
ಗಂಡಸರೇ ಇರಲಿ, ಹೆಂಗಸರೇ ಇರಲಿ ಎಲ್ಲರೂ ಮನುಷ್ಯರೇ. ತಪ್ಪು ಒಪ್ಪು ಇಬ್ಬರಲ್ಲೂ ಇರುತ್ತದೆ.
ವಿಶೇಷ ಸೂಚನೆ: ಇದು ಯಾರನ್ನೋ ಗುರಿಯಾಗಿಸಿ ಬರೆದ ಬರಹ ಅಲ್ಲ.
- ವಸಂತ ಗಣೇಶ (ಸಾಹಿತಿಗಳು, ಲೇಖಕರು,ಕವಿಯತ್ರಿ)
