ಉದ್ಯೋಗಸ್ಥ ಮಹಿಳೆ ಸಮಾನಳೇ?

ಮನೆಯ ನಿರ್ವಹಣೆ, ಅಡುಗೆ ಮಾಡುವುದು ಹೆಣ್ಣುಮಕ್ಕಳ ಕೆಲಸ ಎಂಬಂತಾಗಿದೆ.  ಮನೆ ಮತ್ತು ಹೊರಗೆ ಎರಡೂ ಕಡೆ ಆಕೆ ದುಡಿಯುತ್ತಾಳೆ. ಕಷ್ಟಪಟ್ಟು ಸಂಪಾದಿಸಿದ ಹಣದ ಮೇಲೆ ಅವಳಿಗೆ ಪೂರ್ತಿ ಹಕ್ಕಾದರೂ ಇರುತ್ತದೆಯೇ ಎಂದರೆ ಖಂಡಿತಾ ಇಲ್ಲ . ಹೆಣ್ಣಿನ ಬವಣೆಯನ್ನು ಸುಜಾತಾ ರವೀಶ್ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಇಪ್ಪತ್ತು ಇಪ್ಪತ್ತೊಂದನೆಯ ಶತಮಾನಗಳು ಹೆಣ್ಣು ಹೊರಗೆ ಹೋಗಿ ದುಡಿಯುವ ದೃಶ್ಯಕ್ಕೆ ಸಾಕ್ಷಿಯಾಗಿವೆ. ಅದಕ್ಕೆ ಮುಂಚೆಯೂ ಕುಟುಂಬದ ವ್ಯಾಪಾರ ವ್ಯವಹಾರಗಳಲ್ಲಿ ವ್ಯವಸಾಯ ವಿಧಿವಿಧಾನಗಳಲ್ಲಿ ಅವಳ ಕೊಡುಗೆ ಇದ್ದಿತಾದರೂ ಅದಕ್ಕೆ ಸಂಭಾವನೆಯ ಮೌಲ್ಯ ನಿಗದಿಯಾಗಿರುತ್ತಿರಲಿಲ್ಲ. ಸ್ವತಂತ್ರವಾಗಿ ಬೇರೆಡೆ ದುಡಿದು ಹಣ ಸಂಪಾದಿಸುವ ಈ ಪ್ರಕ್ರಿಯೆ ಹೆಣ್ಣಿನ ಸ್ವಾತಂತ್ರ್ಯಕ್ಕೆ ಒಂದು ಹೊಸ ಆಯಾಮ ತಂದಿತಾದರೂ ಅದರ ಉಪಭೋಗಕ್ಕೆ ಅವಳು ಪೂರ್ಣ ಅರ್ಹಳಾಗಿದ್ದಾಳೆಯೇ ಎಂಬುದು ಇಂದಿಗೂ ಸಂದೇಹಾರ್ಹ.

ಇಪ್ಪತ್ತನೆಯ ಶತಮಾನದ ಕೊನೆಕೊನೆಗೆ ಹೆಣ್ಣು ಹೊರಗೆ ದುಡಿಯುವುದು ಮದುವೆಯ ಮಾರುಕಟ್ಟೆಯಲ್ಲಿ ಅವಳ ಅರ್ಹತೆಗೆ ಮತ್ತೊಂದು ಧನಾತ್ಮಕ ಅಂಶವಾಗಿ ಬಿಟ್ಟಿತ್ತು . ಒಂದು ರೀತಿಯಲ್ಲಿ ಕಂತುಗಳಲ್ಲಿ ವರದಕ್ಷಿಣೆ ಎಂಬಂತೆ. ಆದರೆ ಒಳಗೂ ಹೊರಗೂ ದುಡಿಯುವ ಹೆಣ್ಣಿನ ತೊಳಲಾಟ ಕಷ್ಟಸುಖಗಳನ್ನು ಸಮಾಜ ಅರ್ಥ ಮಾಡಿಕೊಂಡು ಸಹಾನುಭೂತಿಯಿಂದ ವರ್ತಿಸಿದೆಯೇ ಎಂಬುದನ್ನು ಅಷ್ಟೇ ಖಡಕ್ಕಾಗಿ ನಿರ್ಧರಿಸಲಾಗದು.

ಫೋಟೋ ಕೃಪೆ : google

ಸಾಮಾಜಿಕವಾಗಿ ನೋಡಿದರೆ ಹೊರಹೋಗಿ ಅವಳು ದುಡಿಯುತ್ತಾಳೆ ಎಂಬ ಅನುಭೂತಿ ಖಂಡಿತ ತಾಯಿಯ ಮನೆಯಲ್ಲಿ ಇರಬಹುದಾದರೂ ಅತ್ತೆಯ ಮನೆಯಲ್ಲಿ ಇರುವುದಿಲ್ಲ . ತಂದ ಹಣವನ್ನೆಲ್ಲಾ ಇಲ್ಲಿಗೇ ಸುರಿದರೂ ಶೋಕಿಗಾಗಿ ಹೊರಗೆ ಹೋಗುವುದು ಎನ್ನುವಂತಹ ಮನೋಭಾವ . “ಎಷ್ಟು ಹೊತ್ತು ಮನೆಯ ಹೊರಗೇ ಇದ್ದು ಕೆಲಸ ತಪ್ಪಿಸಿಕೊಳ್ಳುತ್ತಾಳೆ” ಎಂದು ಹೇಳಿ ಮನೆಯಲ್ಲಿರುವ ಸಮಯವೆಲ್ಲ ಗಾಣದೆತ್ತಿನಂತೆ ದುಡಿತಕ್ಕೆ ಹಚ್ಚುವ ಮನೆಗಳೂ ಇರುತ್ತವೆ . ಹೊರಗೂ ದುಡಿಯುತ್ತಾಳೆ ಮನೆಯಲ್ಲಿ ಅವಳಿಗೆ ಸ್ವಲ್ಪಮಟ್ಟಿನ ವಿಶ್ರಾಂತಿ ಬೇಕು ಎಂಬುದು ಖಂಡಿತ ಯಾರೊಬ್ಬರಿಗೂ ಅರಿವಾಗುವುದಿಲ್ಲ . ಅಲ್ಲದೆ ಆ ನಿಟ್ಟಿನಲ್ಲಿ ಸಹಕಾರ ನೀಡುವ ಮನೋಭಾವವು ಇರುವುದಿಲ್ಲ . ಇವರಿಗೆ ಬೇಕಾದಾಗ ಚಿಕ್ಕಪುಟ್ಟ ಕಾರಣಗಳಿಗೆ ರಜಾ ಹಾಕದಿದ್ದಾಗ ಭರ್ತ್ಸನೆ ಬೇರೆ. ಇರುವ ಊರಿನಲ್ಲಿ ಕೆಲಸವಾದರೆ ಎಷ್ಟೋ ಪರವಾಗಿಲ್ಲ ಪರಸ್ಥಳಕ್ಕೆ ಓಡಿಯಾಡಿಕೊಂಡು ಬರುವ ಹೆಣ್ಣುಮಕ್ಕಳಿಗಂತೂ ಜೀವನವೆಂದರೆ ಸತತ ಸುತ್ತುವ ಗಾಣ ತಾನು ಅದನೆಳೆಯಲು ಎತ್ತು ಎಂಬ ಭಾವನೆ.

ಫೋಟೋ ಕೃಪೆ : google

ಎರಡೂ ಕಡೆ ದುಡಿದು ಕಷ್ಟಪಟ್ಟು ಸಂಪಾದಿಸಿದ ಹಣದ ಮೇಲೆ ಅವಳಿಗೆ ಪೂರ್ತಿ ಹಕ್ಕಾದರೂ ಇರುತ್ತದೆಯೇ ಎಂದರೆ ಖಂಡಿತಾ ಇಲ್ಲ . ಕೆಲವು ಮನೆಗಳಲ್ಲಂತೂ ಚಿಕ್ಕ ಮಕ್ಕಳಿಗೆ ಪಾಕೆಟ್ ಮನಿ ಕೊಡುವ ಹಾಗೆ ಅವರು ಸಂಪಾದಿಸಿದ ಹಣವನ್ನೆಲ್ಲಾ ಪತಿಯ ಕೈಯಲ್ಲಿಟ್ಟು ತಮಗೆ ಬೇಕಾದದ್ದನ್ನು ಬೇಡಿ ತೆಗೆದುಕೊಳ್ಳುವ ಪರಿಸ್ಥಿತಿ . ಇನ್ನು ತನಗೆ ತನ್ನ ತವರಿಗೆ ಅಥವಾ ಬೇಕಾದುದಕ್ಕೆ ಖರ್ಚು ಮಾಡುವ ಸ್ವಾತಂತ್ರ್ಯವಂತೂ ಕನಸೇ.. ಓದಿಸಿ ಬೆಳಸಿ ಕೆಲಸ ಸಿಗುವಲ್ಲಿ ಸಹಕಾರಿಯಾದ ತವರುಮನೆ ಕಷ್ಟದಲ್ಲಿ ಅನ್ನಕ್ಕೆ ಪರದಾಡುತ್ತಿದ್ದರು ಸಹ 1 ಕಾಸು ನೀಡಲೂ ಬಿಡದ ಕಟುಕ ಸೇರಿದ ಮನೆಗಳು ಇರುತ್ತವೆ. ಅಂದ ಮೇಲೆ ತವರಿನ ಸಂಕಟ ಕಷ್ಟಗಳಿಗೆ ಅನುವು ಆಪತ್ತುಗಳಿಗೆ ಸಹಾಯ ಮಾಡುವುದಂತೂ ಗಗನ ಕುಸುಮವೇ . ಎಷ್ಟೋ ವೇಳೆ ಅವಳು ದುಡಿದ ಹಣ ಗಂಡನ ಅಥವಾ ಅತ್ತೆ ಮನೆಯವರ ಶೋಕಿಗೆ ಖರ್ಚಾದರೂ ಮೂಕಪಶುವಿನಂತೆ ಇರುವ ಎಷ್ಟೋ ಹೆಣ್ಣು ಮಕ್ಕಳನ್ನು ಕಂಡಿದ್ದೇನೆ. ಸಮಾಜದ ಬೇಲಿ ಮುರಿದು ಹೊರಬರುವ ಧೈರ್ಯವಿರದ ಹೆಣ್ಣು ಮಕ್ಕಳು ಹೀಗೆ ದಿನ ನಿತ್ಯವೂ ನಲುಗುವ ಪರಿಪಾಠ . ಬರೀ ಮನೆಯೊಳಗಿನ ಶೋಷಣೆಯಲ್ಲದೆ ದುಡಿದ ಹಣದ ಮೇಲಿನ ಹಿಡಿತವು ಸೇರಿ 2 ಕಡೆ ದುಡಿಯುವ ಆಳು ಎಂಬಂತೆ ಅವಳನ್ನು ನೋಡಲಾಗುತ್ತದೆ. ಈ ಅಂದಕ್ಕೆ ಹೊರಗೆ ದುಡಿಯುವ ಕಷ್ಟವೂ ಬೇಕಿತ್ತೇ ಎಂದು ಅನಿಸದೆ ಇರುವುದಿಲ್ಲ .

ಇಲ್ಲಿಯವರೆಗೆ ಮನೆಯ ನಿರ್ವಹಣೆ ಅಡುಗೆ ಬರಿಯ ಹೆಂಡತಿಯ ಕೆಲಸ ಮಾತ್ರ ಎಂಬಂತಾಗಿದೆ. ಹೊರಗೆ ಹೋಗಿ ಅವಳು ದುಡಿಯುವಾಗ ಮನೆಯ ಕೆಲಸದಲ್ಲಿ ಗಂಡನೂ ಸಮಭಾಗಿಯಾಗಬೇಕು ಎನ್ನುವ ಅರಿವು ಮೂಡುವ ತನಕ ದುಡಿಯುವ ಹೆಣ್ಣುಮಕ್ಕಳ ಶಾಪ ಬಗೆಹರಿಯುವುದಿಲ್ಲ.


  • ಸುಜಾತಾ ರವೀಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW