ಇಂದು ವಿಶ್ವ ಹೃದಯ ದಿನ. ವಿಶ್ವ ಹೃದಯದ ದಿನವನ್ನು ಜಾಗತಿಕವಾಗಿ ಸೆಪ್ಟೆಂಬರ್ 29 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ವಿಶ್ವ ಹೃದಯ ದಿನವನ್ನು ಮೊದಲ ಬಾರಿಗೆ 2000ರಲ್ಲಿ ಆಚರಿಸಲಾಯಿತು. ವಿಶ್ವ ಹೃದಯ ದಿನದಂದು ಗೀತಾಂಜಲಿ ಎನ್ ಎಮ್ ಅವರ ವಿಶೇಷ ಲೇಖನವನ್ನು ತಪ್ಪದೆ ಮುಂದೆ ಓದಿ…
“ಹೃದಯ” ನಮ್ಮ ದೇಹದ ಆರೋಗ್ಯ ನಿರ್ಧರಿಸುವ ಅತ್ಯಂತ ಮಹತ್ವದ ಅಂಗ. ಇದು ಕೇವಲ ರಕ್ತ ಪಂಪ್ ಮಾಡುವ ಯಂತ್ರ ಮಾತ್ರವಲ್ಲ ಇದು ನಮ್ಮ ಜೀವದ ಶಕ್ತಿ ಉಸಿರು ಮತ್ತು ಆರೋಗ್ಯದ ಮೂಲ. ಹೃದಯವೇ ಜೀವದ ಕೇಂದ್ರ ಬಿಂದು ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹೃದಯದ ಮಹತ್ವವನ್ನು, ಹೃದಯದ ಆರೋಗ್ಯವನ್ನು ಅರಿತುಕೊಳ್ಳ ಬೇಕಾಗಿರುವುದು ಅತ್ಯವಶ್ಯಕ.
- ಇಂದು ವಿಶ್ವ ಹೃದಯ ದಿನ. ವಿಶ್ವ ಹೃದಯದ ದಿನವನ್ನು ಜಾಗತಿಕವಾಗಿ ಸೆಪ್ಟೆಂಬರ್ 29 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದರ ಉದ್ದೇಶ, ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಹಾಗೂ ಹೃದಯಾಘಾತ ದಿಂದ ಹೆಚ್ಚುತ್ತಿರುವ ಸಾವಿನ ಸಂಖ್ಯೆಯನ್ನು ತಡೆಯುವುದು ಹಾಗೂ ಹೃದಯ ರಕ್ತನಾಳದ ಕಾಯಿಲೆಯ ಬಗ್ಗೆ ಜನಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ, ಹೃದಯ ಸ್ತಂಭನ ಇತ್ಯಾದಿಗಳಿಂದ ಜೀವ ಕಳೆದುಕೊಳ್ಳುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು. ಪ್ರತಿವರ್ಷ ಪ್ರಪಂಚದಾದ್ಯಂತ ಹದಿನೇಳು ದಶಲಕ್ಷಕ್ಕಿಂತಲೂ ಅಧಿಕ ಜನರು ಹೃದಯ ಸಮಸ್ಯೆಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಅಂಕಿ ಅಂಶ ಹೇಳುತ್ತಿದೆ.
- ಈ ವಿಶ್ವ ಹೃದಯ ದಿನವನ್ನು ಮೊದಲ ಬಾರಿಗೆ 2000ರಲ್ಲಿ ಆಚರಿಸಲಾಯಿತು. ವರ್ಲ್ಡ್ ಹಾರ್ಟ್ ಫೆಡರೇಶನ್ ಮಾಜಿ ಅಧ್ಯಕ್ಷ ಆಂಟೋನಿಬೇಯೆಸ್ ಡಿ. ಲೂನಾ ಅವರು ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗ ದೊಂದಿಗೆ ವಿಶ್ವಹೃದಯ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದರು ಅಲ್ಲಿಂದ ಪ್ರತೀ ವರ್ಷ ಒಂದೊಂದು ಥೀಮ್ ಇಟ್ಟುಕೊಂಡು ಹೃದಯದ ದಿನವನ್ನು ಆಚರಿಸಲಾಗುತ್ತದೆ. ಹೃದಯ ಮಾನವನ ದೇಹದ ಪ್ರಮುಖ ಅಂಗ. ಮಾನವನ ದೇಹದಲ್ಲಿ ದೈಹಿಕ ಕ್ರಿಯೆಗಳನ್ನು ಸಂಘಟಿಸುವ ನಿರ್ಣಾಯಕ ಅಂಗವಾಗಿರುವ ಹೃದಯದ ಕಾರ್ಯನಿ ರ್ವಹಣೆಯಲ್ಲಿ ಸ್ವಲ್ಪ ಅಡಚಣೆಯಾದರೂ ಅದರಿಂದ ವ್ಯಕ್ತಿಯ ಜೀವಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ. ಹೃದಯ ಒಂದು ವ್ಯಕ್ತಿಯ ಜೀವವನ್ನು ನಡೆಸುವ ಯಂತ್ರದಂತಿದ್ದು ಆ ವ್ಯಕ್ತಿ ಜೀವಂತ ಇರುವವರೆಗೆ ಪ್ರತೀ ಸೆಕೆಂಡ್ ದೇಹದ ಎಲ್ಲ ಜೀವಕೋಶಗಳಿಗೆ ನಿರಂತರವಾಗಿ ರಕ್ತವನ್ನು ಪಂಪ್ ಮಾಡಿ ಆಮ್ಲಜನಕ ಮತ್ತು ಪೋಷಕಾಂಶವನ್ನು ಸರಬರಾಜು ಮಾಡುವುದ ರೊಟ್ಟಿಗೆ ದೇಹದಲ್ಲಿನ ರಕ್ತ ಶುದ್ಧೀಕರಣವನ್ನೂ ಮಾಡುತ್ತಿರುತ್ತದೆ. ಹೃದಯವೆಂಬ ಈ ಯಂತ್ರವು ಪ್ರತೀ ನಿಮಿಷಕ್ಕೆ ಐದು ಲೀಟರ್‌ನಂತೆ ದಿನವೊಂದಕ್ಕೆ ಸರಿಸುಮಾರು 7-8 ಸಾವಿರ ಲೀಟರ್‌ಗಳಷ್ಟು ರಕ್ತವನ್ನು ಪಂಪ್ ಮಾಡುತ್ತಿರುತ್ತದೆ.ಹಾಗಾಗಿ ಹೃದಯ ಆರೋಗ್ಯ ಬಹಳ ಮುಖ್ಯವೆಂದು ವ್ಯೆದ್ಯರು ಹೇಳುತ್ತಾರೆ.

ಫೋಟೋ ಕೃಪೆ : ಅಂತರ್ಜಾಲ
ಈ ಹೃದಯ ಸಂಬಂಧಿ ಕಾಯಿಲೆಗಳಿಗೆ ಮುಖ್ಯ ಕಾರಣ ಬದಲಾದ ಜೀವನಶೈಲಿ, ಒತ್ತಡದ ಬದುಕು, ವಾತಾವರಣದಲ್ಲಿನ ಮಾಲಿನ್ಯತೆ ಧೂಮಪಾನ,ತಂಬಾಕು ಮತ್ತು ಮಾದಕ ವಸ್ತುಗಳ ಸೇವನೆಯಂತಹ ದುಶ್ಚಟಗಳಿಗೆ ದಿನದಿಂದ ದಿನಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಆಹಾರ ಪದಾರ್ಥಗಳಲ್ಲಿನ ಕಲಬೆರೆಕೆ ಜಂಕ್ಫುಡ್ಗಳ ಅತಿಯಾದ ಸೇವನೆ ಇವೆಲ್ಲವೂ ಬಹುಮುಖ್ಯವಾದ ಕಾರಣಗಳಾಗಿವೆ. ಒಟ್ಟಾರೆ ಇಂದಿನ ಯಾಂತ್ರಿಕ ಬದುಕಿನಲ್ಲಿ ಸಹಜತೆ ದೂರ ಸರಿಯುತ್ತಿರುವುದರಿಂದ ಜನರನ್ನು ಹತ್ತು ಹಲವು ಕಾಯಿಲೆಗಳು ಕಾಡುತ್ತಿವೆ ಇಷ್ಟಲ್ಲದೆ ಕೆಲವರು ತಮ್ಮ ಫಿಟನೆಸ್ ಕಾಯ್ದುಕೊಳ್ಳುವ ಅತಿಯಾದ ಹುಚ್ಚಿನಿಂದ ವಿಪರೀತ ದೇಹದಂಡನೆ ಮಾಡುವುದರಿಂದಲೂ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಎಂದು ವ್ಯೆದ್ಯರುಗಳು ಹೇಳುತ್ತಾರೆ.ಈ ಎಲ್ಲಾ ಹಿನ್ನೆಲೆಯಲ್ಲಿ ಇವೆಲ್ಲದರ ಬಗ್ಗೆ ವಿಶ್ವ ಹೃದಯ ದಿನದಂದು ಜನರಿಗೆ ಅರಿವು ಮೂಡಿಸಲು ಈ ದಿನವನ್ನು ಮಿಸಲಿಡಲಾಗಿದೆ. ನಾವು ಸೇವಿಸುವ ಆಹಾರವು ಹೃದಯದ ಯೋಗಕ್ಷೇಮವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಸಮತೋಲಿತ ಆಹಾರವು ಕಾರ್ಬೋಹೈಡ್ರೇಟ್‌ಗಳು ಉತ್ತಮ ಕೊಬ್ಬುಗಳು, ವಿಟಮಿನ್‌ಗಳು, ಪ್ರೊಟೀನ್‌ಗಳಂತಹ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ,ಅವು ನಮ್ಮ ದೇಹದ ಪ್ರತಿಯೊಂದು ಕೋಶಕ್ಕೆ ಅವುಗಳ ಕಾರ್ಯವನ್ನು ನಿರ್ವಹಿಸಲು ಅಗತ್ಯವಾದ ಪ್ರಮುಖ ಪದಾರ್ಥಗಳಾಗಿವೆ. ಹಾಗಾಗಿ ನಮ್ಮ ಊಟ ಹೃದಯದ ಮೇಲೆ ನೇರವಾದ ಪರಿಣಾಮ ಬೀರುವುದರಿಂದ ನಮ್ಮ ಊಟವು ಉತ್ತಮ ಸಮತೋಲಿತ ಮತ್ತು ಆರೋಗ್ಯಕರವಾಗಿರುವುದು ಮುಖ್ಯ. ಎಣ್ಣೆಯುಕ್ತ ಆಹಾರ, ಕೆಟ್ಟ ಕೊಬ್ಬು, ಉಪ್ಪು ಮತ್ತು ಮಸಾಲೆಯುಕ್ತ ಆಹಾರವು ಹೃದಯದ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಕೊಬ್ಬಿನ ಪದಾರ್ಥ ರಕ್ತನಾಳಗಳ ರೇಖೆಗಳ ಉದ್ದಕ್ಕೂ ಸಂಗ್ರಹಗೊಂಡು ರಕ್ತದ ಹರಿವಿನ ಅಡಚಣೆಗೆ ಕಾರಣವಾಗುತ್ತದೆ. ಇದು ಅಂತಿಮವಾಗಿ ಪಾರ್ಶ್ವವಾಯು ಅಥವಾ ಹೃದಯಾಘಾತಕ್ಕೆ ಬಹು ಮುಖ್ಯ ಕಾರಣವಾಗುತ್ತದೆ ಎಂಬುದು ಹೃದಯ ತಜ್ಞರ ಅಭಿಪ್ರಾಯ.
- ಮನುಷ್ಯ ಇಂದು ಆಡಂಬರದ ಬದುಕಿಗಾಗಿ ಏನು ಬೇಕಾದರೂ ಮಾಡುವ ಹಂತಕ್ಕೆ ತಲುಪಿದ್ದಾನೆ. ಇದಕ್ಕೆ ಸಾಕ್ಷಿ ಎಂದರೆ ಯಾವ ಬದುಕನ್ನು ಬದುಕಲು ಇಷ್ಟೆಲ್ಲಾ ಹೊರಾಡುತ್ತಾನೋ ಅದೇ ಬದುಕಿಗೆ ತಾನೇ ನಿತ್ಯವೂ ತೊಟ್ಟು ತೊಟ್ಟು ವಿಷಪ್ರಾಶನ ಮಾಡಿಕೊಳ್ಳುತ್ತಿದ್ದಾನೆ. ಹೇಗೆ ಎನ್ನುವಿರಾ?ಮನುಷ್ಯ ದುಡ್ಡಿನ ದುರಾಸೆಗಾಗಿ ಬಹು ಬೇಗ ಶ್ರೀಮಂತನಗಬೇಕೆಂಬ ವ್ಯಾದಿಗೆ ಸಿಲುಕಿ ತಾನೇ ತಿನ್ನುವ ಆಹಾರಕ್ಕೆ ಕಲಬೆರಕೆಯೆಂಬ ವಿಷ ಹಾಕಿಕೊಳ್ಳುತ್ತಿರುವ ಪರಿಣಾಮ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ಜಾಣ ಕುರುಡುತನ ತೋರಿಸುತ್ತ ತನಗೆ ತಾನೇ ಮೋಸ ಮಾಡಿಕೊಳ್ಳುತ್ತಿದ್ದಾನೆ. ನಾವು ಮಾಡುವ ಮೋಸ ಮತ್ತೊಬ್ಬರಿಗೆ ಗೊತ್ತಾಗುವುದಿಲ್ಲವೆಂಬ ಕೆಟ್ಟ ಭ್ರಮೆಯಿಂದ ತಯಾರಿಸುವ ಪ್ರತಿ ಆಹಾರೋತ್ಪನ್ನಗಳಿಗೆ ಕಲಬೆರಕೆ ಹಾಕುವ ಮೂಲಕ ಒಬ್ಬರಿಗೊಬ್ಬರು ಮೋಸ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ದುರ್ದೈವ. ಇನ್ನು ಇಂದಿನ ತಾಂತ್ರಿಕತೆಯ ಆಧುನಿಕ ಜೀವನಕ್ಕೆ ಹೊಂದಿಕೊಂಡ ಮಾನವ ಸಮಯದ ಅಭಾವದಿಂದ ಸದಾ ಅವಸರದಲ್ಲೇ ಇರುತ್ತಾನೆ,ಇದೆಲ್ಲದರ ಪರಿಣಾಮ ಮಾರುಕಟ್ಟೆಗೆ ದಿನಕ್ಕೆ ಒಂದೊಂದು ರೂಪದ ಇಂಸ್ಟೆಂಟ್ ಪ್ಯಾಕೆಟ್ ಫುಡ್ಗಳು ಬರುತ್ತಿರುವ ಪರಿಣಾಮ ಇಂದಿನ ಜನತೆ ಸಮಯ ಉಳಿತಾಯಕ್ಕಾಗಿ ಇನ್ಸ್ಟಂಟ್ ಆಹಾರಗಳ ಮೊರೆ ಹೋಗುತ್ತಿರುವುದು ಬುದ್ದಿವಂತ ಮನುಜನ ದಡ್ಡತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಈ ಇನ್ಸ್ಟಂಟ್ ಫುಡ್ಗಳಲ್ಲಿ ದೀರ್ಘ ಬಾಳಿಕೆಗಾಗಿ ಪ್ರಿಸರ್ವೆಟಿವ್ ಹಾಗೂ ಆಕರ್ಷಣೆಗಾಗಿ ಬಣ್ಣಗಳು ಹಾಗೂ ಆಕರ್ಷಕ ಪ್ಲಾಸ್ಟಿಕ್ ಬಳಸಿ ಪ್ಯಾಕೆಟ್ನಲ್ಲಿ ತುಂಬುತ್ತಿರುವುದರಿಂದ ಅದರಲ್ಲಿರುವ ವಿಷಯುಕ್ತ ಪದಾರ್ಥಗಳ ಜೊತೆ ಅಡುಗೆಯಲ್ಲಿ ನಿತ್ಯ ಬಳಸುವ ಕಲಬೆರಿಕೆ ಎಣ್ಣೆಯಲ್ಲರುವ ವಿಷ ಯುಕ್ತ ಅಂಶಗಳು ಎಲ್ಲಾ ಸೇರಿ ಮಾನವನ ಹೃದಯದ ಆರೋಗ್ಯದ ಮೇಲೆ ನೇರ ದುಷ್ಪರಿಣಾಮ ಬೀರುತ್ತಿವೆ.ಹಾಗಾಗಿ ಮನುಷ್ಯಇಂದು ಯಾವ ಕ್ಷಣ ಎಲ್ಲಿ ಹೇಗೆ ಸಾಯುತ್ತಾನೆ ಎಂಬುದೇ ಗೊತ್ತಿಲ್ಲ ಇದಕ್ಕೆ ನಾವು ಸಾಕಷ್ಟು ಸಂಗತಿಗಳನ್ನು ಪ್ರತ್ಯಕ್ಷವಾಗಿ ನೋಡುತ್ತಿದ್ದೇವೆ. ಇವುಗಳೆಲ್ಲದರ ದುಷ್ಫಲ ದಿನಕ್ಕೊಂದು ಹೊಸ ಹೊಸ ಖಾಯಿಲೆಗಳು ಹುಟ್ಟುತ್ತಿವೆ ಇದರ ಪರಿಣಾಮ ಮನುಷ್ಯನ ದೇಹ ರೋಗಗಳ ಗೂಡಾಗುತ್ತಿದೆ. ಅಂದು ಶುದ್ಧ ಆಹಾರ ತಿಂದು ಬದುಕುತ್ತಿದ್ದ ಮಾನವ ಇಂದು ಔಷಧಿ ತಿಂದು ಬದುಕುವಂತಾಗಿದೆ.
- ಪ್ರತಿಯೊಬ್ಬರೂ ತಮ್ಮ ಹೃದಯದ ಬಗ್ಗೆ ತುಂಬಾ ಕಾಳಜಿ ವಹಿಸಬೇಕು,ಹೃದಯ ಸದಾ ಆರೋಗ್ಯದಿಂದ ನಗುತ್ತಿದ್ದರೆ ಜೀವನವೂ ಆರೋಗ್ಯವಾಗಿರುತ್ತದೆ. ಖ್ಯಾತ ಹೃದ್ರೋಗ ತಜ್ಞರಾದ ಡಾ. ಮಂಜುನಾಥ್ ರವರು ಹೃದಯರೋಗ ಅಥವಾ ಹೃದಯಾಘಾತ ಬರದಂತೆ ತಡೆಯುವ ವಿಧಾನಗಳಲ್ಲಿ ಅತ್ಯಂತ ಸುಲಭ ಮತ್ತು ಸರಳ ಮಾರ್ಗವನ್ನು ಹೇಳಿದ್ದಾರೆ,ನಿತ್ಯ ವ್ಯಾಯಾಮ ಮಾಡಬೇಕು ಹಾಗೂ ಪ್ರತಿನಿತ್ಯ ಒಂದು ಗಂಟೆ ವಾಕಿಂಗ್ ಅಥವಾ ಜಾಗಿಂಗ್ ಮಾಡಿ ಸಾಕು ಎಂದಿದ್ದಾರೆ.ದಿನಕ್ಕೆ ಒಂದು ಗಂಟೆ ಹೃದಯಕ್ಕಾಗಿ ನೀವು ನಡೆದರೆ, ಜೀವನ ಪೂರ್ತಿ ನೀವು ನಡೆದಾಡುವಂತೆ ಹೃದಯ ಮಾಡುತ್ತದೆ ಎಂಬ ಬಹು ಅಮೂಲ್ಯವಾದ ಸಲಹೆಯನ್ನು ನೀಡಿದ್ದಾರೆ.
- ಗೀತಾಂಜಲಿ ಎನ್ ಎಮ್ – ಕೊಡಗು
