ಪ್ರತಿ ವರ್ಷ ಫೆಬ್ರವರಿ 13 ರಂದು ಪ್ರಪಂಚದದ್ಯಾಂತ ವಿಶ್ವ ರೇಡಿಯೋ ದಿನವೆಂದು ಆಚರಿಸಲಾಗುತ್ತದೆ. ಫೆಬ್ರವರಿ 13,1946 ರಂದು ವಿಶ್ವಸಂಸ್ಥೆಯ ರೇಡಿಯೊ ಸ್ಥಾಪನೆಯ ಸ್ಮರಣಾರ್ಥ ಈ ದಿನಾಂಕವನ್ನು ಆಯ್ಕೆ ಮಾಡಲಾಗಿದೆ. ಲೇಖಕಿ ಗೀತಾಂಜಲಿ ಎನ್ ಎಮ್ ಅವರು ವಿಶ್ವ ರೇಡಿಯೋ ದಿನದ ವಿಶೇಷತೆಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
- ಇಂದು ಜಗತ್ತು ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ ಸಾಕಷ್ಟು ಆದುನಿಕ ಸಂವಹನ ಮಾಧ್ಯಮಗಳಿದ್ದರೂ ಹಳೆಯದಾದ ರೇಡಿಯೋಗಿರುವ ಜನಪ್ರಿಯತೆ ಮಾತ್ರ ಕಡಿಮೆ ಆಗಿಲ್ಲ ಹಾಗೂ ಮುಂದೆ ಎಂದಿಗೂ ಕಡಿಮೆಯೂ ಆಗುವುದಿಲ್ಲವೆಂದೇ ಹೇಳಬಹುದು. ಈ ಡಿಜಿಟಲ್ನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಹತ್ತು ಹಲವು ಮಾಧ್ಯಮಗಳ ನಡುವೆ ತನ್ನ ವಿಶೇಷತೆಯಿಂದ ಉತ್ತಮ ಸ್ಥಾನದೊಂದಿಗೆ ತನ್ನದೇ ಛಾಪನ್ನು ಉಳಿಸಿಕೊಂಡ ರೇಡಿಯೋ ಅತ್ಯುತ್ತಮ ಸಂವಹನ ಮಾಧ್ಯಮವಾಗಿ ವ್ಯಾಪಕವಾಗಿ ಇಂದಿಗೂ ಚಾಲ್ತಿಯಲ್ಲಿದೆ. ಅಲ್ಲದೆ ಮಾಹಿತಿಗಳನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿ ಅತ್ಯಂತ ಹಳೆಯ ಹಾಗೂ ಜನಪ್ರಿಯ ಸಂವಹನ ಮಾಧ್ಯಮವಾಗಿದೆ.
- ಸಂವಹನವು ಮಾನವನ ಜೀವನದ ಅವಿಭಾಜ್ಯ ಅಂಗ. ಕಾಲ ಬದಲಾಗುತ್ತಾ ಬಂದಂತೆ ಸಂವಹನ ಮಾಧ್ಯಮಗಳೂ ಅಭಿವೃದ್ಧಿಯಾಗಿವೆ. ಪತ್ರಿಕೆ, ದೂರದರ್ಶನ, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು ಇತ್ಯಾದಿ. ಆದರೂ ಇವೆಲ್ಲದರ ಮಧ್ಯೆಯೂ ತನ್ನ ವಿಶಿಷ್ಟ ಸ್ಥಾನವನ್ನು ಉಳಿಸಿಕೊಂಡಿರುವ ಮಾಧ್ಯಮವೆಂದರೆ ರೇಡಿಯೋ ಸರಳತೆ, ಸುಲಭತೆ ಮತ್ತುಎಲ್ಲರಿಗೂ ತಲುಪುವ ಸಾಮರ್ಥ್ಯದಿಂದ ರೇಡಿಯೋ ಇಂದಿಗೂ ಅತ್ಯುತ್ತಮ ಸಂವಹನ ಸಾಧನವಾಗಿಯೇ ಉಳಿದಿದೆ.
- ಇಂದು ವಿಶ್ವ ರೇಡಿಯೋ ದಿನ. ಪ್ರತಿ ವರ್ಷ ಫೆಬ್ರವರಿ 13 ರಂದು ಪ್ರಪಂಚದದ್ಯಾಂತ ಈ ದಿನವನ್ನು ಆಚರಿಸಲಾಗುತ್ತದೆ ಇದರ ಉದ್ದೇಶ ರೇಡಿಯೋ ಬಳಕೆಯನ್ನು ಪ್ರೋತ್ಸಾಹಿಸುವುದು ಮತ್ತು ಉತ್ತೇಜಿಸುವುದು ಈ ದಿನದ ಗುರಿಯಾಗಿದೆ.ಅಲ್ಲದೆ ಜಾಗತಿಕ ಸಂವಹನವನ್ನು ಬೆಳೆಸುವಲ್ಲಿ ವೈವಿಧ್ಯತೆಯನ್ನು ಉತ್ತೇಜಿಸುವಲ್ಲಿ ಮತ್ತು ಪ್ರಪಂಚದಾದ್ಯಂತ ಸಮುದಾಯ ಗಳನ್ನು ಸಂಪರ್ಕಿಸುವಲ್ಲಿ ರೇಡಿಯೊದ ನಿರ್ಣಾಯಕ ಪಾತ್ರದ ಮಹತ್ವವನ್ನು ಈ ದಿನ ಹೇಳುತ್ತದೆ. ಪ್ರಪಂಚದಾದ್ಯಂತದ ಅಸಂಖ್ಯಾತ ಪ್ರೇಕ್ಷಕರನ್ನು ತಲುಪಲು ಸರಳ ಮತ್ತು ಶಕ್ತಿಶಾಲಿ ಸಾಧನವಾಗಿ ರೇಡಿಯೋ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇದು ಕಡಿಮೆ ವೆಚ್ಚದ ಮಾಧ್ಯಮ ವಾಗಿದ್ದು ದೂರದ ಸಮುದಾಯಗಳು ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಇತರ ರೀತಿಯ ಮಾಧ್ಯಮಗಳು ಸೀಮಿತವಾಗಿರಬಹುದಾದ ಪ್ರದೇಶಗಳಲ್ಲಿ ತನ್ನ ಇರುವಿಕೆಯ ಮೂಲಕ ರೇಡಿಯೋ ಸುದ್ದಿ, ಮಾಹಿತಿ, ಮತ್ತು ಶಿಕ್ಷಣಕ್ಕೆ ನಿರ್ಣಾಯಕ ಮೂಲವಾಗಿ ಕಾರ್ಯವನ್ನು ನಿರ್ವಹಿಸುತ್ತದೆ ಮತ್ತು ಮನರಂಜನೆಗೆ ವೇದಿಕೆಯಾಗಿದೆ.
- ವಿಶ್ವ ರೇಡಿಯೋ ದಿನದ ಇತಿಹಾಸವನ್ನು ನೋಡುವುದಾದರೆ ವೈವಿಧ್ಯಮಯ ಸಮುದಾಯಗಳನ್ನು ಬೆಸೆಯುವಲ್ಲಿ ಮತ್ತು ಮಾಹಿತಿಯ ಮುಕ್ತಹರಿವನ್ನು ಉತ್ತೇಜಿಸುವಲ್ಲಿ ರೇಡಿಯೊದ ಮಹತ್ವವನ್ನು ಗುರುತಿಸಿ ಯುನೆಸ್ಕೋ 2011 ರಲ್ಲಿ ಫೆಬ್ರವರಿ 13 ಅನ್ನು ವಿಶ್ವ ರೇಡಿಯೋ ದಿನವೆಂದು ಘೋಷಿಸಿತು. ಫೆಬ್ರವರಿ 13,1946 ರಂದು ವಿಶ್ವಸಂಸ್ಥೆಯ ರೇಡಿಯೊ ಸ್ಥಾಪನೆಯ ಸ್ಮರಣಾರ್ಥ ಈ ದಿನಾಂಕವನ್ನು ಆಯ್ಕೆ ಮಾಡಲಾಗಿದೆ. ವಿಶ್ವ ರೇಡಿಯೋ ದಿನವು ರೇಡಿಯೊದ ನಿರಂತರ ಪ್ರಭಾವವನ್ನು ಆಚರಿಸುವ ಗುರಿಯನ್ನು ಹೊಂದಿದೆ, 1895: ಇಟಾಲಿಯನ್ ಸಂಶೋಧಕ ಗುಗ್ಲಿಯೆಲ್ಮೊ ಮಾರ್ಕೋನಿ ತನ್ನ ಮೊದಲ ರೇಡಿಯೋ ಸಿಗ್ನಲ್ ನ್ನು ಕಳುಹಿಸಿದರು ಮತ್ತು ಅದನ್ನು ಸ್ವೀಕರಿಸಿದರು. ವೈರ್‌ಲೆಸ್ ಟೆಲಿಗ್ರಾಫಿ ಕ್ಷೇತ್ರದಲ್ಲಿ ಅವರ ಈ ಕೆಲಸವು ದೂರದ ರೇಡಿಯೋದಲ್ಲಿನ ಸಂವಹನಕ್ಕೆ ಅಡಿಪಾಯವನ್ನು ಹಾಕಿತು, ನಂತರ 1901ರಲ್ಲಿ ಮಾರ್ಕೋನಿ ಮೊದಲ ಟ್ರಾನ್ಸ್ ಅಟ್ಲಾಂಟಿಕ್ ರೇಡಿಯೋ ಸಂದೇಶವನ್ನು ಯಶಸ್ವಿಯಾಗಿ ರವಾನಿಸಿದರು, ಇದು ದೂರದವರೆಗೆ ವೈರ್‌ಲೆಸ್ ಸಂವಹನದ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು. ನಂತರ 1906ರಲ್ಲಿ ರೆಜಿನಾಲ್ಡ್ ಫೆಸ್ಸೆಂಡೆನ್ ಎಂಬುವವರು ಮೊದಲ ದ್ವಿಮುಖ ಸಾಗರದಾಚೆಯ ರೇಡಿಯೋ ಸಂವಹನವನ್ನು ಸಾಧಿಸಿದರು ಮತ್ತು ಅದೇ ವರ್ಷದ ನಂತರ ಸಂಗೀತ ಮತ್ತು ಧ್ವನಿಯ ಮೊದಲ ರೇಡಿಯೋ ಪ್ರಸಾರವನ್ನು ನಡೆಸಿದರು. ತದನಂತರ 1920ರಲ್ಲಿ ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ನಲ್ಲಿರುವ KDKA ಸ್ಟೇಷನ್, ನಿಯಮಿತವಾಗಿ ನಿಗದಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ವಿಶ್ವದ ಮೊದಲ ಸ್ಟೇಷನ್‌ಗಳಲ್ಲಿ ಒಂದಾಯಿತು, ನಂತರ 1922ರಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಂಪನಿ (ಬಿಬಿಸಿ) ಸ್ಥಾಪನೆಯಾಯಿತು. ಇದು ಸಾರ್ವಜನಿಕ ಸೇವಾ ಪ್ರಸಾರದ ಹೊಸ ಯುಗಕ್ಕೆ ನಾಂದಿ ಹಾಡಿತು.
- 1930 ರಿಂದ 1940 ನ್ನು ರೇಡಿಯೋದ ಸುವರ್ಣಯುಗ ಎಂದೇ ಕರೆಯಲಾಗುತ್ತದೆ 1930 ರಲ್ಲಿ ರೇಡಿಯೋ ಪ್ರಪಂಚದಾದ್ಯಂತ ಮನೆಗಳಲ್ಲಿ ಪ್ರಧಾನವಾಯಿತು,ಸುದ್ದಿ ನಾಟಕಗಳು,ಸಂಗೀತ ಮತ್ತು ಹಾಸ್ಯ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಿತು. 1938 ರಲ್ಲಿ ಆರ್ಸನ್ ವೆಲ್ಲೆಸ್ ಅವರ “ದಿ ವಾರ್ ಆಫ್ ದಿ ವರ್ಲ್ಡ್ಸ್” ಪ್ರಸಾರವು ಸಾರ್ವಜನಿಕ ಗ್ರಹಿಕೆಯನ್ನು ಆಕರ್ಷಿಸುವ ಮತ್ತು ಪ್ರಭಾವಿಸುವ ರೇಡಿಯೊದ ಶಕ್ತಿಯನ್ನು ಪ್ರದರ್ಶಿಸಿತು ಮುಖ್ಯವಾಗಿ 1940 2ನೇ ಮಹಾಯುದ್ಧದ ಸಮಯದಲ್ಲಿ ರೇಡಿಯೋ ಸುದ್ದಿ ಮತ್ತು ಪ್ರಚಾರಕ್ಕಾಗಿ ನಿರ್ಣಾಯಕ ಮಾಧ್ಯಮವಾಗಿ ಕಾರ್ಯನಿರ್ವಹಿಸಿತು, ಇನ್ನೂ ಭಾರತದ ರೇಡಿಯೋ ಇತಿಹಾಸವನ್ನು ನೂಡುವುದಾದರೆ ಭಾರತದಲ್ಲಿ ರೇಡಿಯೋ ಪ್ರಸಾರವು 1920 ರ ದಶಕದ ಆರಂಭದಲ್ಲಿ ಪ್ರಾರಂಭವಾಯಿತು. ಭಾರತದಲ್ಲಿ ಮೊದಲ ರೇಡಿಯೋ ಪ್ರಸಾರವನ್ನು ಜೂನ್ 1923 ರಲ್ಲಿ ಬಾಂಬೆ ರೇಡಿಯೋ ಕ್ಲಬ್ ಪ್ರಾರಂಭಿಸಿತು. 1930 ರಲ್ಲಿ ಭಾರತ ಸರ್ಕಾರವು ತನ್ನದೇ ಆದ ರೇಡಿಯೋ ಸೇವೆಯನ್ನು ಪ್ರಾರಂಭಿಸಿತು, ಇದನ್ನು ಇಂಡಿಯನ್ ಸ್ಟೇಟ್ ಬ್ರಾಡ್‌ಕಾಸ್ಟಿಂಗ್ ಸರ್ವಿಸ್ (ISBS) ಎಂದು ಕರೆಯಲಾಯಿತು, ನಂತರ ಅದು 1936 ರಲ್ಲಿ ಆಲ್ ಇಂಡಿಯಾ ರೇಡಿಯೋ (AIR) ಆಯಿತು.ಆಲ್ ಇಂಡಿಯಾ ರೇಡಿಯೋ (AIR) ಈಗ ಆಕಾಶವಾಣಿ ಎಂದು ಕರೆಯಲ್ಪಡುವ AIR ಭಾರತದ ರಾಷ್ಟ್ರೀಯ ಸಾರ್ವಜನಿಕ ರೇಡಿಯೋ ಪ್ರಸಾರಕ ಮತ್ತು ಭಾರತದ ಅತಿದೊಡ್ಡ ಸಾರ್ವಜನಿಕ ಪ್ರಸಾರ ಸಂಸ್ಥೆಯಾದ ಪ್ರಸಾರ ಭಾರತಿಯ ಒಂದು ವಿಭಾಗವಾಗಿದೆ. ದೇಶಾದ್ಯಂತ, ವಿಶೇಷವಾಗಿ ದೂರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುದ್ದಿ, ಮಾಹಿತಿ ಮತ್ತು ಮನರಂಜನೆಯನ್ನು ಒದಗಿಸುವಲ್ಲಿ ಆಕಾಶವಾಣಿ ನಿರ್ಣಾಯಕ ಪಾತ್ರ ವಹಿಸುತ್ತಿದೆ.ಅಲ್ಲದೆ ಭಾರತದಲ್ಲಿ, ವಿಶೇಷವಾಗಿ ದೂರದರ್ಶನ ಮತ್ತು ಇಂಟರ್ನೆಟ್ ಸೌಲಭ್ಯ ಕಡಿಮೆ ಇರುವ ಹಾಗೂ ಸೌಲಭ್ಯ ವಂಚಿತ ಹಳ್ಳಿಗಾಡಿನ ಪ್ರದೇಶಗಳಲ್ಲಿ ರೇಡಿಯೋ ಮಾಹಿತಿ ಮತ್ತು ಮನರಂಜನೆಗೆ ಪ್ರಮುಖ ಮಾಧ್ಯಮವಾಗಿ ಮುಂದುವರೆದಿದೆ. ತುರ್ತು ಪರಿಸ್ಥಿತಿಗಳು ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ನಿರ್ಣಾಯಕ ಮಾಹಿತಿಯನ್ನು ಪ್ರಸಾರ ಮಾಡುವಲ್ಲಿ ಇದು ಇಂದೂ ಸಹ ಪ್ರಮುಖ ಪಾತ್ರ ವಹಿಸುತ್ತಿದೆ.
- ದೂರದರ್ಶನ ಮತ್ತು ಇಂಟರ್ನೆಟ್ ಆಗಮನಕ್ಕೂ ಬಹಳ ಹಿಂದೆಯೇ ರೇಡಿಯೋ ಸಂವಹನದ ಪ್ರಮುಖ ಮಾಧ್ಯಮವಾಗಿದ್ದು ಪ್ರಪಂಚದಾದ್ಯಂತ ಜನರನ್ನು ಸಂಪರ್ಕಿಸುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ತಲುಪುವಲ್ಲಿ, ಸುದ್ದಿ, ಮನರಂಜನೆ ಮತ್ತು ಶಿಕ್ಷಣವನ್ನು ತಲುಪಿಸುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸಿದೆ.ಜನ ಜಾಗೃತಿ ಮೂಡಿಸಲು, ಸಮುದಾಯವನ್ನು ಬೆಳೆಸಲು ಮತ್ತು ಸಮಾಜಗಳನ್ನು ಮಾಹಿತಿಯುಕ್ತವಾಗಿ ಡಲು ಮತ್ತು ಸಂಪರ್ಕದಲ್ಲಿಡಲು ರೇಡಿಯೋ ಪ್ರಬಲ ಸಾಧನವಾಗಿ ಉಳಿದಿದೆ.ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳು ಸೇರಿದಂತೆ ವಿವಿಧ ದೂರದ ಪ್ರದೇಶಗಳ ಜನರನ್ನು ಸಂಪರ್ಕಿಸಿದೆ. ಜಾಗೃತಿ ಮೂಡಿಸಲು, ಶಿಕ್ಷಣ ನೀಡಲು ಮತ್ತು ಒಂದೇ ಸಾಧನದ ಮೂಲಕ ಪ್ರತೀ ಜನಸಾಮಾನ್ಯರನ್ನು ಸಂಪರ್ಕಿಸಲು ಸಹಾಯ ಮಾಡಿದೆ. ಹಾಗಾಗಿ ಜಾಗತಿಕ ಮಟ್ಟದಲ್ಲಿ ರೇಡಿಯೋ ಇಂದಿಗೂ ಪ್ರಚಲಿತದಲ್ಲಿದೆ.
- ಇಂದಿನ ಡಿಜಿಟಲ್ ಯುಗದಲ್ಲೂ ರೇಡಿಯೋ ತನ್ನನ್ನು ತಾನು ಹೊಸ ರೂಪದಲ್ಲಿ ಹೊಂದಿಸಿಕೊಂಡಿದೆ. ಎಫ್‌ಎಂ ಚಾನಲ್‌ಗಳು, ಆನ್‌ಲೈನ್ ರೇಡಿಯೋ, ಮೊಬೈಲ್ ಆ್ಯಪ್‌ಗಳ ಮೂಲಕ ರೇಡಿಯೋ ಮತ್ತಷ್ಟು ಜನಪ್ರಿಯವಾಗಿದೆ. ಯುವಜನತೆಯನ್ನೂ ಆಕರ್ಷಿಸುವ ರೀತಿಯಲ್ಲಿ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ಇದರಿಂದ ರೇಡಿಯೋ ಹಳೆಯ ಮಾಧ್ಯಮವಲ್ಲ, ಬದಲಿಗೆ ಸದಾ ನವೀನವಾಗಿರುವ ಸಂವಹನ ಸಾಧನವೆಂದು ಸಾಬೀತಾಗಿದೆ.
- ಹಿಂದೆ ಈಗಿನಂತೆ ಯಾವುದೇ ಟಿವಿ ಇಂಟರ್ನೆಟ್ ಹಾಗೂ ಸಾಮಾಜಿಕ ಮಾಧ್ಯಮಗಳು ಇರಲಿಲ್ಲ ಆಗ ದೇಶ ವಿದೇಶ ಸೇರಿ ನಮ್ಮ ಸುತ್ತಮುತ್ತಲಿ ಆಗುಹೋಗುಗಳನ್ನು ದೇಶದ ಆಡಳಿತದ ವ್ಯಖರಿ ಕುಂದು ಕೊರತೆಗಳನ್ನು ತಿಳಿಯಲು ದಿನಪತ್ರಿಕೆಗಳ ಜೊತೆ ಜನರಿಗಿದ್ದ ಮತ್ತೊಂದು ಉತ್ತಮ ಮಾದ್ಯಮವೆಂದರೆ ಅದು ರೇಡಿಯೋ, ಪ್ರಜಾಪ್ರಭುತ್ವದಲ್ಲಿ ಜನರು ಮತ್ತು ಸರ್ಕಾರದ ಕೊಂಡಿಯಾಗಿ ಸಾರ್ವಜನಿಕರಿಗೆ ಮಾಹಿತಿಯನ್ನು ತಲುಪಿಸಲು ರೇಡಿಯೋ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿ ಇಂದೂ ಪ್ರಜಾಪ್ರಭುತ್ವದ ವೇದಿಕೆಯಾಗಿ ವಿಶ್ವಾಸಾರ್ಹವಾಗಿದೆ. ಹಾಗೂ ವಿಶಾಲವಾದ ವ್ಯಾಪ್ತಿಯನ್ನು ಹೊಂದಿದ್ದು ಇಂಟರ್‌ನೆಟ್, ಟಿವಿ, ಸಾಕಷ್ಟು ಪತ್ರಿಕೆಗಳಿದ್ದರೂ ಇಂದೂ ಸಹ ರೇಡಿಯೋ ಕೇಳುಗರ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳದೆ ರಾಜಕೀಯ ಆರೋಗ್ಯ ಕೃಷಿ, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಕ್ಕೂ ಬೆಳಕು ಚೆಲ್ಲುತ್ತಾ ಜನಪ್ರಿಯ ಹಾಗೂ ಜನಪರ ಕಾರ್ಯಕ್ರಮಗಳ ಜೊತೆ ಮನೋರಂಜನೆಯನ್ನು ನೀಡುತ್ತಾ ಹೆಚ್ಚಿನ ಮಟ್ಟದ ಪ್ರೇಕ್ಷಕರನ್ನು ಇನ್ನೂ ಸಹ ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿದೆ.
- ಗೀತಾಂಜಲಿ ಎನ್ ಎಮ್ – ಕೊಡಗು.
