ಯಕ್ಷಗಾನ ಹಾಸ್ಯಗಾರರು ಮತ್ತು ಕಾಸರಕೋಡರು



ಯಕ್ಷಗಾನ ಪ್ರಿಯರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವಲ್ಲಿ ಹಾಸ್ಯಗಾರರ ಪಾತ್ರ ದೊಡ್ಡದಿದೆ, ಅದರಲ್ಲೂ ಶ್ರೀ ಕಾಸರಕೋಡು ಶ್ರೀಧರ ಭಟ್ಟರು ಯಕ್ಷಗಾನದಲ್ಲಿ ಹೊಸತನದ ಹಾಸ್ಯಗಾರಿಕೆಯನ್ನು ತರುವಲ್ಲಿ ಸದಾ ಯಶಸ್ವಿಯಾಗಿದ್ದಾರೆ. ಯಕ್ಷಗಾನ ಹಾಸ್ಯಗಾರರು ಮತ್ತು ಕಾಸರಕೋಡರ ಕುರಿತು ಒಂದಷ್ಟು ವಿಷಯಗಳನ್ನು ಲೇಖಕರಾದ ಗಣಪತಿ ಹೆಗಡೆ ಕಪ್ಪೆಕೆರೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ…

ಯಕ್ಷಗಾನ ಕಲಾವಿದರ ಬಗ್ಗೆ ಬರೆಯುವುದೆಂದರೆ ಕಷ್ಟದಾಯಕ ಕೆಲಸ. ಎರಡು ಮಾತು ಆಡಿದರೆ ಹೆಚ್ಚಾಯಿತು ಎನ್ನುತ್ತಾರೆ. ಒಂದು ಮಾತು ಆಡಿದರೆ ಕಡಿಮೆಯಾಯಿತು ಎಂಬ ಆರೋಪ. ಹಾಗಾಗಿ ಬಹಳ ಕಷ್ಟದ ಕೆಲಸ. ಕೇವಲ ಪರಿಚಯಾತ್ಮಕ ಲೇಖನ ಬರೆದರೆ ನನಗೇ ಸಮಾಧಾನವಿರುವುದಿಲ್ಲ. ಆದರೆ ಕೆಲವು ದಿನದಿಂದ ನಮ್ಮ #ಯಕ್ಷಗಾನ ಹಾಸ್ಯಗಾರರ ಬಗೆಗೆ ಸ್ವಲ್ಪ ಹೇಳಬೇಕು ಅನ್ನಿಸುತ್ತಲೇ ಇತ್ತು.

(ಹಾಸ್ಯದ ಪಾತ್ರದಲ್ಲಿ ಕಾಸರಕೋಡು ಶ್ರೀಧರ ಭಟ್ಟರು)

ಯಕ್ಷಗಾನದಲ್ಲಿ ಹಾಸ್ಯಗಾರರಿಗೆ ಒಂದು ಪರಂಪರೆಯಿದೆ. ನಮ್ಮಲ್ಲಿ(ಉತ್ತರ ಕನ್ನಡ ಮತ್ತು ಡೇರೆ ಮೇಳ) ಕುಂಜಾಲು ರಾಮಕೃಷ್ಣ ನಾಯಕ್ ಮತ್ತು ಸಾಲ್ಕೋಡ್ ಗಣಪತಿ ಹೆಗಡೆಯವರು(ಗಪ್ಪಣ್ಣಿ) ತಾರಾಮೌಲ್ಯದಿಂದ ಮೆರೆದವರು. ಸಾಲ್ಕೋಡ್ ರ ಹಾಸ್ಯವನ್ನು ನಾನು ನೋಡಿಲ್ಲ. ಆದರೆ ಕುಂಜಾಲರ ಹೊಸ ಪ್ರಸಂಗದ ಮತ್ತು ಹಳೆಯ ಪ್ರಸಂಗಗಳ ಹಾಸ್ಯವೆರಡನ್ನೂ ನೋಡಿದವನು. ಕೆಲವು ವರ್ಷಗಳವರೆಗೆ ಕುಂಜಾಲು ಎಂಬುದೊಂದು ಊರಿನ ಹೆಸರೆಂಬುದೇ ನನಗೆ ತಿಳಿದಿರಲಿಲ್ಲ. ಯಕ್ಷಗಾನದಲ್ಲಿ ಕುಶಾಲು(ತಮಾಷೆ) ಮಾಡುವವರನ್ನು ಕುಂಜಾಲು ಎಂದು ಕರೆಯುತ್ತಾರೆ ಎಂದೇ ತಿಳಿದಿದ್ದೆ.

ಯಕ್ಷಗಾನದಲ್ಲಿ ಹಾಸ್ಯಗಾರನಿಗೆ ವಿಶಿಷ್ಟವಾದ ಸ್ವರ ಬೇಕು, ಆಂಗಿಕ ಬೇಕು. Time sense ಬೇಕು. ಪ್ರತ್ಯುತ್ಪನ್ನಮತಿತ್ವ ಬೇಕು. ಹೊಸ ವಿಚಾರಗಳಿದ್ದರೆ ಉತ್ತಮ. ಎಷ್ಟೋ ಹಾಸ್ಯದ ಮಾತುಗಳು ಎಷ್ಟೋ ವರ್ಷಗಳಿಂದ ಚಲಾವಣೆಯಲ್ಲಿದೆ. ಆದರೆ ನಮ್ಮ ಹಾಸ್ಯಗಾರರ ಅಭಿವ್ಯಕ್ತಿಯಿಂದಲೋ, ಸ್ವರ ಸಮ್ಮೋಹನದಿಂದಲೋ ನಾವಿಂದಿಗೂ ನಗುತ್ತಲೇ ಇದ್ದೇವೆ. ಬಹಳಷ್ಟು ಹಾಸ್ಯಗಳು ನಿತ್ಯ ನೂತನ. ಉದಾಹರಣೆಗೆ ದಕ್ಷ ಯಜ್ಞ ದ ಬ್ರಾಹ್ಮಣನ ಜೀವನ ದೃಷ್ಟಾಂತ. ಎರಡು ಮದುವೆಯ ನಂತರ ಗಂಡ ಹೆಂಡತಿಯ ಜಾತಕ ಜಾತಕ ಹೊಡೆದುಕೊಳ್ಳುತ್ತಾ ಉಂಟು ಎನ್ನುವುದು. ಕಲೆ ಜೀವನದ ಬಗ್ಗೆ, ದೇವರ ಬಗ್ಗೆ, ನಮ್ಮ ನಂಬಿಕೆಯ ಬಗ್ಗೆ ಮಾತಾಡಿದರೆ ಮಾತ್ರ ಆಪ್ತವಾಗುತ್ತದೆ. ಪರಂಪರೆಯ ಎಲ್ಲಾ ಹಾಸ್ಯದ ಮಾತುಗಳೂ ಸಹ ನಿತ್ಯ ನೂತನ ಅಲ್ಲದೇ ಇರಬಹುದು. ಆದರೆ ಯಕ್ಷಗಾನದಲ್ಲಿ ಅದೆಷ್ಟೋ wonderful ಹಾಸ್ಯವಿದೆ.

ಯಕ್ಷಗಾನ ಹಾಸ್ಯಗಾರರು ಕಾಸರಕೋಡು ಶ್ರೀಧರ ಭಟ್ಟರು

ಕೃಷ್ಣಾರ್ಜುನದ ದಾರುಕನ ಪಾತ್ರವನ್ನು ಒಂದು ಉದಾಹರಣೆಯಾಗಿ ತೆಗೆದುಕೊಳ್ಳಿ. ಹಳ್ಳಾಡಿ ಜಯರಾಮ ಶೆಟ್ಟಿ, ಮೂರೂರು ರಮೇಶ್ ಭಂಡಾರಿ, ಚಪ್ಪರಮನೆ ಶ್ರೀಧರ್ ಹೆಗಡೆ ಮತ್ತು ಕಾಸರ್ಕೋಡ್ ಶ್ರೀಧರ್ ಭಟ್ಟ ಈ ನಾಲ್ವರ ಒಂದೆರಡು ಹಾಸ್ಯದ ಮಾತುಗಳು ಸಾಮಾನ್ಯ(common)ವಾದರೂ ಸಹ ಬಹುತೇಕ ಮಾತುಗಳು ಮತ್ತು ಪಾತ್ರಚಿತ್ರಣ ಅವರವರದೇ ಸೃಷ್ಟಿ. ಒಬ್ಬರಿಗಿಂತ ಇನ್ನೊಬ್ಬರು ಭಿನ್ನ. (ಕಟೀಲ್ ಸೀತಾರಾಮ್ ಕುಮಾರರ ದಾರುಕ ನೋಡಿದ ನೆನಪಿಲ್ಲ).

ಒಂದೊಳ್ಳೆ ಅಂಶವನ್ನು ನಾವು ಗುರುತಿಸದೇ ಹೋದಲ್ಲಿ, ನೆಗೆಟಿವ್ ಅಂಶ ಹೇಳುವ ಅಧಿಕಾರ ಇರುವುದಿಲ್ಲ ಎಂದು ನಂಬಿದವ ನಾನು.

( ಹಾಸ್ಯದ ಪಾತ್ರದಲ್ಲಿ ಕಾಸರಕೋಡು ಶ್ರೀಧರ ಭಟ್ಟರು)

ಕೆಲವು ವರ್ಷಗಳ ಹಿಂದೆ ಡೇರೆ ಮೇಳಗಳ ಪ್ರಮುಖ ಆಕರ್ಷಣೆಯೇ ಹಾಸ್ಯಗಾರರು ಎಂಬ ಸ್ಥಿತಿ ಇತ್ತು. ಕೆಲವು ಸಂದರ್ಭದಲ್ಲಿ ಹಾಸ್ಯಗಾರರಿದು ಅತಿಯಾಯ್ತು ಎನ್ನುವ ಮಾತೂ ಸಹ ಇತ್ತು. ಈಗಲೂ ಇದೆ. ಆದರೆ ನಾನು positiveನ್ನೇ ಹೇಳಲಿಚ್ಛಿಸುತ್ತೇನೆ.

ನಾನು ಇತ್ತೀಚಿನ ಹಾಸ್ಯಗಾರರನ್ನೂ ಸಹ ನೋಡಿ ಮೆಚ್ಚಿದವನು. ಆದರೆ ನಾನೀಗ ಕಾಸರಕೋಡ್ ಶ್ರೀಧರ ಭಟ್ಟರ ಬಗ್ಗೆ ಹೇಳಲಿಚ್ಛಿಸುತ್ತೇನೆ.

ಶ್ರೀಧರ್ ಭಟ್ಟರು ಕೇರಳದ ಕಾಸರಗೋಡು ಜಿಲ್ಲೆಯವರಲ್ಲ. ಹೊನ್ನಾವರ ತಾಲ್ಲೂಕಿನ #ಕಾಸರಕೋಡು ಊರಿನವರು. ಶರಾವತಿ ನದಿಯ ಬಲದಂಡೆ ಹೊನ್ನಾವರವಾದರೆ, ಎಡದಂಡೆ ಕಾಸರಕೋಡು. ಕಾಸರಕೋಡರು ನನಗೆ ನಾನು ಚಿಕ್ಕವನಿರುವಾಗಿನಿಂದ ಪರಿಚಯ. ಆಗ ಮೂರೂರು ರಮೇಶ್ ಭಂಡಾರಿಯವರು ಮಾಸ್ ಪ್ರೇಕ್ಷಕರಿಗೆಂತಲೂ, ಚಪ್ಪರಮನೆಯವರು ಕ್ಲಾಸ್ ಪ್ರೇಕ್ಷಕರಿಗೆಂತಲೂ, ಹಳ್ಳಾಡಿಯವರು ರಾಜ ಹಾಸ್ಯದವರೆಂತಲೂ, ಕಟೀಲ್ ಸೀತಾರಾಮ್ ಕುಮಾರ್ ಉಭಯ ತಿಟ್ಟಿನ ಹಾಸ್ಯಗಾರರೆಂತಲೂ ಮನ್ನಣೆ ಪಡೆದ ದಿನಗಳಾಗಿತ್ತು. ಕಾಸರಕೋಡರು ನನಗೆ ಆಗ ಅಷ್ಟೇನು ಭರವಸೆ ಮೂಡಿಸಿರಲಿಲ್ಲ. ಆದರೆ ಆಮೇಲೆ ಅವರು ಬೆಳೆದ ಪರಿಯೇ ವಿಶೇಷ.



ಪ್ರತಿಯೊಂದು ಪಾತ್ರಕ್ಕೂ ಸಹ ತನ್ನದೇ ಆದ ಕೃಷಿ ಮಾಡುವ ಗುಣ ಬಹಳ ವಿಶೇಷ. ಪ್ರತಿಸಲವೂ ನೂರಕ್ಕೆ ನೂರರಷ್ಟು ಯಶಸ್ವಿಯಾಗದಿದ್ದರೂ ಸಹ ನಿರಂತರವಾಗಿ ಹೊಸ ವಿಚಾರಗಳನ್ನು ಹುಡುಕುತ್ತಲೇ ಇರುತ್ತಾರೆ ಮತ್ತು ಅಳವಡಿಸುತ್ತಲೇ ಇರುತ್ತಾರೆ. ವೈಯಕ್ತಿಕ ವಿಚಾರಗಳನ್ನು ಹೇಳುವುದೇ ಚಮತ್ಕಾರ ಎನ್ನುವ ಈ ಕಾಲದಲ್ಲಿ ಕಾಸರಕೋಡರು ಆ ರೀತಿ ಮಾತನಾಡಿ ಗೆಲ್ಲುವುದು ವಿಶೇಷ. ಗಂಭೀರ ದೃಷ್ಟಾಂತಗಳನ್ನೇ ಚಮತ್ಕಾರವಾಗಿ, ಹಾಸ್ಯದಲ್ಲಿ ತರುವ ಬಹುಶಃ ಇಂದಿನ ಏಕೈಕ ಹಾಸ್ಯಗಾರರು ಶ್ರೀ ಕಾಸರಕೋಡು ಶ್ರೀಧರ ಭಟ್ಟರು. ಅವರು ಯಾವಾಗಲೂ relevant ಎನ್ನಿಸುವುದೇ ನಿತ್ಯ ನಿರಂತರ ಹುಡುಕಾಟದಿಂದ. ಇಂಥವರ ಸಂಖ್ಯೆ ವೃದ್ಧಿಸಲಿ.


  • ಗಣಪತಿ ಹೆಗಡೆ ಕಪ್ಪೆಕೆರೆ ( ವೃತ್ತಿಯಲ್ಲಿ ಸಾಫ್ಟ್ ವೆರ್ ಇಂಜೀನಿಯರ್ ,ಹವ್ಯಾಸಿ ಬರಹಗಾರರು), ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW