ಜಾಣರು ಯಾರು?…ಓದಿದವರಾ? ಅಥವಾ ಓದಿಲ್ಲದವರಾ?…ಲಿಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಬೇಕಿದೆ. ಶಾಲಿನಿ ಹೂಲಿ ಪ್ರದೀಪ್ ಅವರ ಒಂದು ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಅಡುಗೆ ಮನೆಯಲ್ಲಿ ಕೆಲಸ ಮಾಡ್ತಿದ್ದೆ. ನನ್ನ ಬಲಗೈ ಬಂಟೆ ಮನೆಗೆ ಬಂದವಳೇ
“ಏನೇ ಹೇಳ್ ಅಕ್ಕಾ…ಓದಿದವರಿಗಿಂತ ನಾನೇ ಜಾಣೆ”… ಅಂದ್ಲು ಲಿಲ್ಲಿ…
ಇದ್ಯಾಕೆ ಹೀಗೆ ಅಂತಿದ್ದಾಳೆ, ರಸ್ತೆಯಲ್ಲಿ ಬರಬೇಕಾದ್ರೆ ಏನಾದ್ರೂ ಕಿರಿಕ್ ಮಾಡ್ಕೊಂಡ್ಲಾ ಏನ್ ಕತೆ, ಮೊದ್ಲೇ ನಮ್ಮ ಲಿಲ್ಲಿ ಬಾಯಿ ಸುಮ್ನೆನೇ ಇರೋಲ್ಲ. “ಯಾಕೆ ಲಿಲ್ಲಿ…ಏನಾಯಿತು. ಯಾರ್ ಜೊತೆಗಾದ್ರೂ ಲಟಾಪಟಿ ಮಾಡ್ಕೊಂಡು ಬಂದ್ಯಾ…” ಎಂದೆ.
“ಅಯ್ಯೋ ಹೋಗಕ್ಕಾ…ಬೆಳಬೆಳಗ್ಗೆ ಎಲ್ಲಿದು ಜಗಳ”…
“ಮನೆಗೆ ಬಂದಾಗಿಂದ ಯಾರನ್ನೋ ಉದ್ದೇಶಿಸಿ ಒಂದೆ ಸಮ ಬೈತಿದ್ದಿ ಅಲ್ಲ, ನಿನ್ನ ಕೋಪಕ್ಕೆ ಕಾರಣರಾದವರು ಯಾರು ಅಂತ ನೇರವಾಗಿ ಹೇಳು ?”…ಅಂದೆ.
ಲಿಲ್ಲಿಗೆ ಅವತ್ತು, ಯಾಕೋ ಕೆಲಸ ಮಾಡೋ ಮೂಡ್ ಕಾಣಲಿಲ್ಲ. ಬದಲಾಗಿ ಅವಳ ಮಾತು ಕೇಳುವವರು ಒಬ್ಬರು ಬೇಕಿತ್ತು. ಅದಕ್ಕೆ ಸರಿಯಾಗಿ ನಾನು ಅವಳ ಕೈಗೆ ಸಿಕ್ಕೆ. ಕೈಯಲ್ಲಿ ಹಿಡಿದ ಕಸಬರಿಗೆಯನ್ನ ಹಾಗೆ ನೆಲಕ್ಕೆ ತಳ್ಳಿ, ಕತೆ ಹೇಳೋಕೆ ಶುರು ಮಾಡಿದ್ಲು. ನನಗೆ ನೋಡಿದರೆ ಅಡುಗೆ ಮನೆಯಲ್ಲಿ ಕೆಲಸ ಬೇರೆ ಒತ್ತುತ್ತಿತ್ತು. ಲಿಲ್ಲಿ ಬೇರೆ ಕತೆ ಹೇಳಿಯೇ ತಿರುತ್ತೇನೆ ಎನ್ನುವ ಹಠದಲ್ಲಿದ್ದಳು. ಇವಳು ಕತೆ ಹೇಳೋವವರೆಗೂ ನನಗೆ ಕೆಲಸ ಮಾಡೋಕoತೂ ಬಿಡೋಲ್ಲ ಎನ್ನುವುದು ಖಾತ್ರಿ ಆಯಿತು. ಬೇಗ ಬೇಗನೇ ಅವಳ ಮಾತನ್ನ ಕೇಳಿ ಕೆಲಸ ಮುಗಿಸ್ಕೊಕೊಳ್ಳೋಣ ಅಂತ ನನ್ನ ಎಲ್ಲ ಕೆಲಸ ಅಲ್ಲೇ ಬಿಟ್ಟು ಅವಳ ಮುಂದೆ ಗಟ್ಟಿಯಾಗಿ ಕೂತೆ.
ಲಿಲ್ಲಿ ಕತೆ ಶುರು ಮಾಡಿದ್ಲು.
“ಅಕ್ಕಾ… ಓದೋದು ಯಾಕ್ ಅಕ್ಕಾ… ಓದೋದ್ರಿಂದ ಏನ್ ಸಿಗತೈತಿ… ಯಾಕ್ ಓದಬೇಕು?”… ಅಂತ ಓದಿನ ಮೇಲೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದ್ಲು.
ಲಿಲ್ಲಿ ಓದಿದ್ದು 2 ತರಗತಿ. ಆದ್ರೆ ಸಂಬಳದಲ್ಲಿ 50 ರೂಪಾಯಿ ಕಮ್ಮಿ ಆದ್ರೂ ಅಕ್ಕಾ 50 ರೂಪಾಯಿ ಕಮ್ಮಿ ಇದೆ ಎಂದು ನನಗೆ ಲೆಕ್ಕ ಹೇಳುತ್ತಿದ್ದಳು. ಅಂತ ಚತುರೆ. 14 ನೆಯ ವಯಸ್ಸಿಗೆ ಮದುವೆಯಾದರೂ ಜೀವನ ಚನ್ನಾಗಿ ಅರಿತಿದ್ದಳು. ಏನೇ ಕಷ್ಟ ಬಂದರೂ ಕುಗ್ಗುತ್ತಿರಲಿಲ್ಲ. ಗಂಡ ಎಷ್ಟೇ ದೊಡ್ಡ ಕುಡುಕನಾದರೂ ಇವಳ ಮುಂದೆ ಅವನ ಆಟ ಏನು ನಡೆಯುತ್ತಿರಲಿಲ್ಲ. ಅವನನ್ನು ಬಗ್ಗಿ ಬಡಿದು ದಾರಿಗೆ ತರುತ್ತಿದ್ದಳು. ಗಂಡ ಕುಡುದ್ರೂ ತನ್ನ ದುಡ್ಡಲ್ಲಿ ಕುಡಿಲಿ, ನನ್ನ ಹತ್ರ ನಯ ಪೈಸೆ ಕೇಳ್ ಕೂಡದು ಎಂದು ತಾಕಿತ್ತು ಮಾಡಿದ್ದಳು. ಗಂಡ ಇವಳ ಬಡಕಲು ದೇಹಕ್ಕೆ ಹೆದರಿ ಹೋಗಿದ್ದ. ಇಂತ ನಮ್ಮ ಲಿಲ್ಲಿಗೆ ಇದ್ದಕ್ಕಿದ್ದಂತೆ ಓದೋ ಹುಚ್ಚು ಏನಾದ್ರೂ ಹಿಡೀತಾ ಅಂತ “ಯಾಕೆ ಲಿಲ್ಲಿ? ಓದಬೇಕು ಅನ್ಕೊಂಡಿದ್ದೀಯಾ ಏನು?”…ಅಂತ ಕೇಳಿದೆ.
“ಅಯ್ಯೋ ದೇವರಾಣೆಗೂ ನೀವು ದುಡ್ಡು ಕೊಟ್ಟು ಫ್ರೀ ಆಗಿ ಓದಸ್ತೀನಿ ಅಂದ್ರು ನಾನು ಓದೋಲ್ಲ ಅಕ್ಕಾ…ಆದರೆ ಓದಿದವರ ಮುಂದೆ ನಾನೇ ಜಾಣೆ ಅಕ್ಕಾ”… ಅಂತ ಎಕ್ಸ್ಟ್ರಾ ಲೈನ್ ಬೇರೆ ಸೇರಸಿದ್ಲು.
“ನೀನೇ ಜಾಣೆ ಅಂತ ಅಷ್ಟೊಂದು ನಂಬಿಕೆಯಿಂದ ಯಾಕೆ ಹೇಳ್ತಿದ್ದೀಯೇ” ಅಂತ ಕುತೂಹಲದಿಂದ ಕೇಳಿದೆ.
ಕೂತವಳು ಎದ್ದು ನನ್ನ ಹತ್ತಿರಕ್ಕೆ ಬಂದು ಪಿಸು ಮಾತಿನಲ್ಲಿ “ಅಕ್ಕಾ….ಪಕ್ಕದ ಅಪಾರ್ಟ್ಮೆಂಟ್ ನಲ್ಲಿ ಅಮ್ಮ ಮತ್ತ್ ಮಗು 14 ನೇ ಮಹಡಿಯಿಂದ ಬಾಲ್ಕನಿಯಿಂದ ನೆಲಕ್ಕ್ ಹಾರಿದ್ರಕ್ಕಾ.”… ಅಂದಾಗ ಲಿಲ್ಲಿ ಕತೆಗೆ ಇನ್ನಷ್ಟು ಕುಮ್ಮಕ್ಕು ಸಿಗುವಂತೆ ಅಯ್ಯೋ ದೇವರೇ…ಅಂತ ನಾನು ಬಾಯಿ ತೆರೆದು “ಆ ಮಗು ಮೇಲಿಂದ ಕೆಳಕ್ಕೆ ಬಿದ್ರೆ ಅದರ ಕತೆ ಏನಾಗಿರಬೇಡಾ “…ಅಂದೆ.
“ಅಯ್ಯೋ… ಓದಿದ್ದೀನಿ ಅಂತೀಯಾ ಅಕ್ಕಾ, ಅಷ್ಟು ಎತ್ತರದಿಂದ ಬಿದ್ರೆ ಮಗು, ಆಕೆ ಉಳಿತಾರೆನ್ ಅಕ್ಕಾ?… ಅಷ್ಟು ತಿಳಿಯಕ್ಕಿಲ್ವಾ .. ಅಮ್ಮ ಮಗು ಇಬ್ಬರೂ ಮ್ಯಾಲೆ ರೈಟ್ ಹೇಳಿದ್ರು
ನೋಡಕ್ಕಾ “….ಅಂತ ವಾಪಾಸ್ ನಂಗೆ ಇಟ್ಲು.
“ಪಾಪ ಆ ಹೆಣ್ಮಗಳಿಗೆ ಏನ್ ಸಮಸ್ಯೆ ಇತ್ತೋ ಏನೋ”…ಎಂದು ಮರಗಿದೆ.
ಲಿಲ್ಲಿ ಮಾತ್ರ ಗರಂ ಆದಳು “ಏನ್ ಪಾಪ ಅಕ್ಕಾ… ಇರೋದು ಒಂದೆ ಜೀವ. ಚಂದಾಗಿ ನೋಡ್ಕೋಕೆ ಆಗೋಲ್ಲ ಅಂದ್ರೆ ಹೆಂಗ್ . ನನ್ನಷ್ಟು ಸಮಸ್ಯೆ ಎನ್ನಿತ್ತು ಆಕೀಗೆ. ನಾನು ಓದಿಲ್ಲದಾಕಿ, ಗುಡಿಸಲದಾಗ್ ಇರೋಕಿ, ನನ್ನ ಗಂಡ ಬೇರೆ ದೊಡ್ಡ ಕುಡುಕ. ಅವ್ ಕುಡ್ಕೊಂಡು ಬಂದ್ರೆ ಮೈಮೇಲೆ ಪ್ರಜ್ಞೆನೆ ಇರೋಲ್ಲ. ಬಂದು ಹೊಡೀತಾನೆ. ದುಡ್ಡು ಬೇರೆ ಕಿತ್ಕೊಕೆ ನೋಡ್ತಾನೆ. ಬಿಟ್ಟು ಬಾಳೋಣ ಅಂದ್ರೆ ಮೂದೇವಿ ನನ್ನ ಬಿಟ್ಟು ಹೋಗೋಲ್ಲ. ಈಗ ನೋಡುವಷ್ಟು ನೋಡಿ ಈಗ ನಾಲ್ಕು ತಟ್ಟಿ ಮೂಲೆಯಲ್ಲಿ ಕೂಡ್ರಸ್ತೀನಿ. ಓದಿಲ್ಲದ ನಾನೇ ಇಷ್ಟು ಧೈರ್ಯವಾಗಿ ಜೀವನ ಮಾಡಬೇಕಾದ್ರೆ, ಓದಿರೋ ಈ ದೊಡ್ಡ ಮನೆ ಹೆಣ್ಮಕ್ಕಳು ಜೀವನ ಮಾಡೋಕೆ ಆಗೋಲ್ವಾ. ಗಂಡನಿಂದ ತ್ರಾಸ ಆತು ಅಂದ್ರೆ ಬಿಟ್ಟು ದೂರ ಹೋಗಿ ದುಡ್ಕೊಂಡು ಜೀವನ ಮಾಡಬೇಕಿತ್ತು. ಅದನ್ನ ಬಿಟ್ಟು ಮ್ಯಾಲಿಂದ ಹಾರೋ ಕರ್ಮ ಯಾಕ ಬೇಕಿತ್ತು ಅಕ್ಕಾ…ಅದಕ್ಕ ಕೇಳಿದೆ, ಎಲ್ಲರೂ ಓದಿ ಏನ್ ದಬ್ಬ ಹಾಕ್ತಾರ ಅಂತ. ಸಾಲಿಯಲ್ಲಿ ಜೀವನ ಎದುರಿಸೋದು ಕಲಿಸೋದು ಬಿಟ್ಟು ಸರ್ಟಿಫಿಕೇಟ್ ಕೊಟ್ಟು ಮನೀಗೆ ಕಳಸಿದ್ರ ಹಿಂಗ್ ಹಾರಾರಿ ಬೀಳ್ತಾರ್ ನೋಡಕ್ಕ”… ಅಂದ್ಲು. ಅವಳ ಮಾತು ನನಗೂ ಸೇರಿಸಿ ಓದಿದ ಹೆಣ್ಮಕ್ಕಳಿಗೆ ತಿವಿದ ಹಂಗೆ ಇತ್ತು.
ಓದಿರದ ಎಷ್ಟೋ ಲಿಲ್ಲಿಯoತವರು ಜೀವನವನ್ನು ಎದುರಿಸಿ ಮುಂದೆ ಸಾಗುತ್ತಿದ್ದರೆ, ದೊಡ್ಡ ದೊಡ್ಡ ಸರ್ಟಿಫಿಕೇಟ್ ಪಡೆದ ಎಷ್ಟೋ ಹೆಣ್ಮಕ್ಕಳು ಜೀವನದಲ್ಲಿನ ಏರು ಪೇರನ್ನು ಎದುರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಖಿನ್ನತೆಗೆ ಒಳಗಾದವರಲ್ಲಿ ಓದಿಲ್ಲದವರಿಗಿಂತ ಓದಿದವರಲ್ಲಿ ಹೆಚ್ಚಾಗಿ ಕಾಣುತ್ತಿದೆ. ಶಿಕ್ಷಣ ಬದಕುವುದನ್ನ ಕಳಿಸ್ತಿಲ್ಲವೇ?… ಲಿಲ್ಲಿ ಹೇಳಿದ ಹಾಗೆ ಓದಿದವರ ಮುಂದೆ ಓದಿಲ್ಲದವರೇ ಜಾಣರೆ?….ಸಾಕಷ್ಟು ಚಂತನೆ ಅಲೆಗಳನ್ನು ಮನಸ್ಸಲ್ಲಿ ಲಿಲ್ಲಿ ಸೃಷ್ಟಿಸಿ ಬಿಟ್ಟಳು.
- ಶಾಲಿನಿ ಹೂಲಿ ಪ್ರದೀಪ್
