ದಿವ್ಯ ಭಾರತಕ್ಕೆ ಬಂದು ನಾಲ್ಕೈದು ದಿನಗಳಾಗಿದ್ದವು. ಆಕೆ ಅಮೇರಿಕದಿಂದ ಭಾರತದ ತನ್ನ ಹಳ್ಳಿಗೆ ಆಕೆ ಅಂಕಲ್ ಎಂದು ಕರೆಯುತ್ತಿದ್ದ, ಆ ಗ್ರಾಮದ ಗ್ರಾಮ ಪಂಚಾಯತಿ ಬಿಲ್ ಕ್ಲಾರ್ಕ ಶಿವಪ್ಪ ಹೇಳಿದಂತೆ ತನ್ನ ಅಪ್ಪನ ಹೆಸರಿನಲ್ಲಿರುವ ಆಸ್ತಿಯನ್ನು ತನ್ನ ಹೆಸರಿಗೆ ದಾಖಲು ಮಾಡಿಕೊಳ್ಳಲು ಬಂದಿದ್ದಳು. ಮುಂದೇನಾಯಿತು ಓದಿ …ಖ್ಯಾತ ಕತೆಗಾರ್ತಿ ಪಾರ್ವತಿ ಪಿಟಗಿ ಅವರು ಬರೆದ ಕತೆ.
** ** **
ದಿವ್ಯಳಿಗೆ ತಿಳುವಳಿಕೆ ಬಂದಾದ ಮೇಲೆ, ಆಕೆಯನ್ನು ಅಪ್ಪ ಎರಡು ಮೂರು ಬಾರಿ ಆ ಚೆಂದಳ್ಳಿಗೆ ಕರೆದೊಯ್ದ ನೆನಪಿದೆ. ಅಜ್ಜ ಅಜ್ಜಿಯರು ಇದ್ದಾಗ ಆ ಮನೆ ಬಹಳ ಚೆಂದವಾಗಿತ್ತು. ಅವಳು ಬಹಳ ಚಿಕ್ಕವಳಿದ್ದಾಗ ಬಂದಾಗ, ಆಕೆಯ ಅಜ್ಜ ಅಜ್ಜಿ ಆಕೆಯನ್ನು ಹೊತ್ತುಕೊಂಡೇ ತಿರುಗಿದ್ದರು. ಊರಿಗೆಲ್ಲ ತಮ್ಮ ಬಂಗಾರದಂತಹ ಪುತ್ಥಳಿಯನ್ನು ತೋರಿಸಿ ಹೆಮ್ಮೆಪಟ್ಟಿದ್ದರು.
ದಿವ್ಯ ಹದಿನಾಲ್ಕು ವರ್ಷದವಳಾದಾಗ, ಆಕೆಯ ಅಜ್ಜಿ ಇದ್ದಕ್ಕಿದ್ದಂತೇ ಹಾರ್ಟ ಅಟ್ಯಾಕ್ ಆಗಿ ತೀರಿಹೋಗಿದ್ದರು. ಆಗ ಅವರೆಲ್ಲ ಬೇಗ ತಿಂಗಳೊಳಗೆ ಭಾರತಕ್ಕೆ ಬಂದು ತಿಂಗಳ ಪೂಜೆ ತಿಥಿ ಎಂದೆಲ್ಲ ಮಾಡಿಮುಗಿಸಿದರು. ವಾಸು ಒಬ್ಬಳು ಕೆಲಸದಾಕೆಯನ್ನು ಗುರುತಿಸಿ ಅಪ್ಪನಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿ, ಹಾಗೇ ತನ್ನ ಚಿಕ್ಕಪ್ಪನ ಮಗ ಗಿರೀಶ ಹಾಗೂ ಆತನ ಹೆಂಡತಿ ದಾಕ್ಷಾಯಿಣಿಗೆ ತಂದೆಯನ್ನು ನೋಡಿಕೊಳ್ಳುವಂತೆ ತಿಳಿಸಿದಾಗ, ಗಿರೀಶ “ಅಯ್ಯ ವಾಸು, ದೊಡ್ಡಪ್ಪ ನಿನಗ ಅಷ್ಟ ಅಪ್ಪ ಅಲ್ಲಪಾ. ನನಗೂ ಅಪ್ಪಾನ. ಅಂವಾ ಒಬ್ಬನ ಏನ ಈ ಮನ್ಯಾಗ ಇರೂದು ಬ್ಯಾಡಾ. ಅಲ್ಲೆ ನಮ್ಮ ಮನ್ಯಾಗ ಇರಲಿ ಬೇಕಾರ ಮಕ್ಕೊಳಾಕ ಅಷ್ಟ ಇಲ್ಲಿಗೆ ಬರಲಿ.” ಎಂದಾಗ, ವಾಸುಗೆ ಆತ ಒಬ್ಬನೇ ಇರುವ ಬದಲಿಗೆ ಅಲ್ಲಿಯೇ ಇರಲಿ ಎನ್ನಿಸಿ, “ಆತು ನಾ ನಿಮಗ ಖರ್ಚು ಕಳಸ್ತೀನಿ” ಎಂದು ಒಪ್ಪಿ ಅಮೇರಿಕೆಗೆ ಮರಳಿದ್ದ.

ಫೋಟೋ ಕೃಪೆ : The Econimics Times
ವಾರಕ್ಕೊಮ್ಮೆ ಕರೆ ಮಾಡಿ ವಾಸು ತಂದೆಯನ್ನು ವಿಚಾರಿಸಿಕೊಳ್ಳುತ್ತಲೇ ಇದ್ದ. ಆದರೆ ಹೆಂಡತಿ ಸತ್ತ ಕೊರಗೋ ಏನೋ ವರುಷದಲ್ಲಿ ಆತನೂ ತೀರಿಹೋದಾಗ, ಕುಟುಂಬ ಸಮೇತ ಭಾರತಕ್ಕೆ ಬಂದಿದ್ದ. ಮುಂದೆ ಮನೆಯನ್ನು ಬಾಡಿಗೆಗೆ ಕೊಟ್ಟು ಹೋಗಿದ್ದ. ವರ್ಷಕ್ಕೊ ಎರಡು ವರ್ಷಕ್ಕೊಮ್ಮೆ ಬಂದಾಗ ಗ್ರಾಮ ಪಂಚಾಯತಿಗೆ ತೆರಿಗೆ ಹಾಗೇ ಮನೆ ಬಾಡಿಗೆಯನ್ನೂ ಪಡೆದು ತೆರಳುತ್ತಿದ್ದ. ವಾಸು ಗ್ರಾಮ ಪಂಚಾಯತಿಗೆ ತೆರಿಗೆ ಕಟ್ಟಲು ಬಂದರೆ, ಪಂಚಾಯತಿಯ ತೆರಿಗೆ ವಸೂಲಿಗಾರ ಶಿವಪ್ಪನಿಗೆ ಇನ್ನಿಲ್ಲದ ಖುಷಿ. ಆತ ಬರುತ್ತಲೇ “ಬರ್ರಿ ಸಾಹೇಬ್ರ ಬರಿ ಬರ್ರಿ” ಎನ್ನುತ್ತ ಆತನನ್ನು ಒಳ್ಳೆಯ ಆದರದಿಂದ ಬರಮಾಡಿಕೊಂಡು “ಅಲ್ಲಿ ಈಗ ಮಳಿಗಾಲರಿ ಇಲ್ಲಾ ಬ್ಯಾಸಗಿರಿ? ಊಟಕ್ಕ ಇಲ್ಲಿಹಂಗ ಅಕ್ಕಿ ಜ್ವಾಳಾ ಸಿಗತಾವರಿ? ಇಲ್ಲರೊ? ………?. ……….?“ ಎಂದು ಎಡೆಬಿಡದೇ ಕೌತುಕದಿಂದ ಪ್ರಶ್ನೆ ಕೇಳುತ್ತಲೇ ಇರುತ್ತಿದ್ದ. ಆತನ ಪ್ರಶ್ನೆಗಳಿಗೆ ವಾಸು ನಗುತ್ತಲೇ ಉತ್ತರಿಸುತ್ತಿದ್ದ. ಹಾಗೇ ಶಿವಪ್ಪ ಪ್ರೀತಿಯಿಂದ ತರಿಸುತ್ತಿದ್ದ ಚುರುಮರಿ, ಸೇವು, ಬಜ್ಜಿ ಜೊತೆಗೆ ಚಹಾವನ್ನು ಖುಷಿಯಿಂದ ಕುಡಿಯುತ್ತಿದ್ದ. ಹಾಗೇ ಆ ಗ್ರಾಮದಲ್ಲಿ ಮತ್ತೆ ಇನ್ನೆಲ್ಲಿಗಾದರೂ ಹೋಗುವುದಿದ್ದರೆ ತಾನು ಬೆಳಗಾವಿಯಿಂದ ಬಾಡಿಗೆಗೆ ತೆಗೆದುಕೊಂಡು ಬಂದ ಕಾರಿನಲ್ಲಿಯೇ ಶಿವಪ್ಪನನ್ನು ಹತ್ತಿಸಿಕೊಂಡು ಹೋಗುತ್ತಿದ್ದ. ಊರಿನ ಪ್ರಮುಖ ಸುದ್ದಿಗಳು ಶಿವಪ್ಪನಿಂದಲೇ ತಿಳಿಯುತ್ತಿದ್ದವು. ಒಟ್ಟಿನಲ್ಲಿ ಚಿಕ್ಕಪ್ಪನ ಮಗ ತಮ್ಮ ಗಿರೀಶನಿಗಿಂತ ಶಿವಪ್ಪನೇ ಹತ್ತಿರವಾದಂತಾಗಿದ್ದ.
ವಾಸು ಭಾರತಕ್ಕೆ ಬಂದಾಗಲೊಮ್ಮೆ ತನ್ನ ಊರು ಚೆಂದಳ್ಳಿಗೆ ಒಂದು ದಿನ ಮೀಸಲಿಡುತ್ತಿದ್ದ. ಅದರಲ್ಲಿಯೂ ಹೆಚ್ಚಿನ ಸಮಯವನ್ನು ಶಿವಪ್ಪನೊಂದಿಗೆ ಕಳೆಯುತ್ತಿದ್ದ. ಶಿವಪ್ಪನಿಗಂತೂ ವಾಸು ಬಂದರೆ ಹಬ್ಬ ಬಂದಂತೆಯೇ ಸಂಭ್ರಮಪಡುತ್ತಿದ್ದ.
ಶಿವಪ್ಪ ಸಣ್ಣ ಪ್ರಮಾಣದಲ್ಲಿ ರೀಯಲ್ ಎಸ್ಟೇಟ್ ಬಿಸಿನೆಸ್ ಮಾಡುತ್ತಿದ್ದ. ವಾಸು ಬಂದಾಗಲೊಮ್ಮೆ “ಸಾಹೇಬ್ರ ಅಲ್ಲೊಂದ ಸೈಟ್ ಐತ್ರಿ ತುಗೊಂತೀರಿ? ನಿಮಗೇನರಿ ರಗಡ ರೊಕ್ಕಾ ಇರತೈತಿ. ತುಗೊಂಡ್ರ ನಿಮಗ ಆಸ್ತಿ ಆಕೈತಿ ಒಂದ ನಾಲ್ಕೈದ ವರ್ಷಕ್ಕ ಡಬಲ್ ಆಕೈತಿ” ಎಂದು ಗಂಟು ಬೀಳುತ್ತಿದ್ದ. ಆಗೆಲ್ಲ ವಾಸು “ಏ ಮಾರಾಯಾ ಈಗ ಇದ್ದದ್ದ ಒಂದ ಮೆಂಟೇನ್ ಮಾಡಾಕ ಆಗವಲ್ಲತು ಇನ್ನ ಮತ್ತೊಂದು ತುಗೊಂಡ ಏನ್ ಮಾಡ್ಲಿ? ಸಾಕು ಈಗ ನಾವು ಅರಾಮ ಅದೀವೆಲ್ಲಾ? ನಾವಾದ್ರೂ ಇನ್ನೆಷ್ಟ ವರ್ಷ ಬದಕಬೇಕು? ಅಷ್ಟಕ್ಕೂ ಎಲ್ಲಾ ನಮಗ ಇರ್ಲಿ ಅಂದ್ರ ಹ್ಯಾಂಗ? ಒಬ್ಬ ಮನಷ್ಯಾಗ ಬದಕಾಕ ಜಾಗಾ ಅಥವಾ ಮನಿ ಎಷ್ಟ ಬೇಕು? ಇಲ್ಲಿ ಮಂದಿ ಅಂತೂ ಬರೇ ಆಸ್ತಿ ಅಂತತಿ. ಬರೇ ಗಳಿಸಿ ಗಳಿಸಿ ಅನುಭವಿಸದ ಸಾಯು ಮಂದಿನ ಭಾಳ. ಗಳಿಸಿದ್ದಷ್ಟು ಮೊದಲ ಅನುಭವಿಸಬೇಕ ಸಾಧ್ಯ ಆದಷ್ಟು ನಿರ್ಗತಿಕರಿಗೆ ಸಹಾಯಾ ಮಾಡಬೇಕ. ಮುಂದ ಉಳದದ್ದು ಆಸ್ತಿ ಆಗಬೇಕು ಅದು ಬಿಟ್ಟ ಮದಲ ಉಣ್ಣಲದ, ಉಡಲ್ಲದ ಆಸ್ತಿ ಮಾಡಿ ಸಾಯತಾರ” ಎಂದೆಲ್ಲ ಹೇಳುತ್ತಿದ್ದ. ಆದರೂ ಶಿವಪ್ಪ ಮತ್ತೊಮ್ಮೆ ಬಂದಾಗ, ಈ ವಿಷಯವನ್ನು ಎತ್ತದೇ ಇರುತ್ತಿರಲಿಲ್ಲ.

ಫೋಟೋ ಕೃಪೆ : The week
ವರುಷಗಳು ಉರುಳುತ್ತಲೇ ವಾಸುವಿಗೆ ಯಾಕೋ ಆ ತನ್ನ ಮನೆಯ ಉಸ್ತುವಾರಿ ಸಾಕಾಗಿ ಅದನ್ನು ಮಾರುವ ಬಗ್ಗೆ ವಿಚಾರ ಮಾಡಿದ. ಅದಕ್ಕೆ ತಕ್ಕುದಾದ ಮನುಷ್ಯ ಶಿವಪ್ಪನೇ ಎನ್ನಿಸಿ ಆತನ ಮುಂದೆ ವಿಷಯವನ್ನು ಅರುಹಿದಾಗ, “ಏ ಬ್ಯಾಡ್ರಿ ಸಾಹೇಬ್ರ ಈಗ ನೀವು ಅದನ್ನ ಮಾರಿದ್ರ ಇಲ್ಲೆ ಮತ್ತ ಬರೂದ ಇಲ್ಲಾ. ಆಮ್ಯಾಲೆ ಯಾಕ ಬರಾಕ ಹೋದಿರಿ ನೀವು ಇಲ್ಲಿಗೆ? ಭಾರತಕ್ಕ ಬಂದ್ರೂ ಈ ಹಳ್ಳಿಗೆ ಬರಾಕ ಆಕೈತಿ? ಬ್ಯಾಡ್ರಿ ಸರ ಮಾರೂದು ಬ್ಯಾಡ ಬ್ಯಾಡಾ. ಬೇಕಾದ್ರ ಮತ್ತೊಂದ ಆಸ್ತಿ ಖರೀದಿ ಮಾಡ್ರಿ ಆಗ ಇದನ್ನ ಮಾರೂಣ” ಎಂದಿದ್ದ. ಸಾಲದ್ದಕ್ಕೆ ವಾಸೂನ ಹೆಂಡತಿ ಮಾಲತಿ ಹಾಗೂ ಭಾರತವನ್ನು ಬಹಳಷ್ಟು ಪ್ರೀತಿಸುತ್ತಿದ್ದ ದಿವ್ಯ ಭಾರತದಲ್ಲಿರುವ ಒಂದೇ ಒಂದು ಆಸ್ತಿಯನ್ನು ಮಾರಿದರೆ ಭಾರತದ ಸಂಪರ್ಕವನ್ನೇ ಕಳೆದುಕೊಂಡಂತಾಗುತ್ತದೆ ಎಂದರು. ಹಾಗಾಗಿ ಆತ ಆ ವಿಷಯವನ್ನು ಅಲ್ಲಿಗೇ ಬಿಟ್ಟುಬಿಟ್ಟಿದ್ದ.
ದಿವ್ಯ ದೊಡ್ಡವಳಾದ ಮೇಲೆ ಅಪ್ಪ ಅಮ್ಮನೊಂದಿಗೆ ಭಾರತಕ್ಕೆ ಬಂದಾಗ, ಶಿವಪ್ಪ “ಸಾಹೇಬ್ರ ಮೇಡಮ್ಮಾರು ದೊಡ್ಡಾರ ಆಗ್ಯಾರಲ್ರಿ? ಮದವಿ ಯಾವಾಗ ಮಾಡತೀರಿ? ಅಲ್ಲೇ ಮಾಡೀರು ಚಿಂತಿ ಇಲ್ಲಾ ನಮ್ಮನ್ನೂ ಕರೀರಿ ನಾವೂ ಸಾಲಾ ಮಾಡಿ ಆದ್ರೂ ಬರತೀವಿ. ಜೀವನದಾಗ ನಾವೂ ಒಮ್ಮೆರ ಅಮೇರಿಕಾ ನೋಡತೀವಿರಿ” ಎಂದದ್ದಕ್ಕೆ “ಅಯ್ಯೊ ಶಿವಪ್ಪಾ ಆಕಿನ್ನ ಮದವಿಗೆ ಒಪ್ಪಸೂದ ಕಷ್ಟ ಆಗೇತಿ. ಆಕಿ ಒಪ್ಪಿದ್ರೂ ಇಲ್ಲಿ ಹಂಗ ಅಲ್ಲೆ ಮದವಿ ಮಾಡೂದಿಲ್ಲೊ. ಅಲ್ಲಿದು ಹೆಂತಾ ಸಂಭ್ರಮಾ? ಆಕಿ ಮದುವಿಗೆ ಮೊದಲ ಒಪ್ಪಬೇಕು” ಎಂದಿದ್ದ.
ಶಿವಪ್ಪ “ಯಾಕ್ರಿ ಮೇಡಮ್ ಮದವಿ ಮಾಡಕೋದಿಲ್ಲಾ? ಎಷ್ಟ ಚೆಂದ ಗೊಂಬಿ ಹಂಗ ಅದೀರಿ. ನಿಮ್ಮನ್ನ ಕೈ ತೊಳಕೊಂಡ ಮುಟ್ಟಬೇಕ ಹಂಗ ಅದೀರಿ. ನೀವು ಹುಂ ಅಂತ ಅನ್ರಿ ಹೆಂತಾ ಬೇಕಾದಂತಾ ರಾಜಕುಮಾರಾ ಸಿಗತಾನಾ.” ಎಂದಾಗ ಎಲ್ಲರೂ ಜೋರಾಗಿ ನಕ್ಕಿದ್ದರು. ಕನ್ನಡ ಅರ್ಧ ಮರ್ಧ ತಿಳಿದುಕೊಂಡ ಡಾಲಿ ಮಾತ್ರ ಗಲಿಬಿಲಿಯಿಂದ “ಏನು ಏನ್ ಮದುವೆ?” ಎಂದಾಗ ಅದಕ್ಕೂ ಮತ್ತಷ್ಟು ನಗೆ ಹರಿದು ಬಂದಿತ್ತು.
ವಾಸು ಸಂಸಾರ ಸಮೇತ ಭಾರತಕ್ಕೆ ಬಂದದ್ದು ಅದೇ ಕೊನೆಯಾಯಿತು. ಮುಂದೆ ನಾಲ್ಕು ವರ್ಷಕ್ಕೆ ಆಕ್ಸಿಡೆಂಟ್ ನಲ್ಲಿ ದಂಪತಿಗಳಿಬ್ಬರೂ ತೀರಿಹೋದರು. ಕಳೆದ ನಾಲ್ಕು ವರ್ಷಗಳಲ್ಲಿ ಹತ್ತಾರು ಬಾರಿ ಅಂದರೆ ಆರು ತಿಂಗಳಿಗೊಮ್ಮೆಯಾದರೂ ಶಿವಪ್ಪನಿಗೆ ಕರೆ ಮಾಡುತ್ತಿದ್ದ ಮತ್ತು ಆಕ್ಸಿಡೆಂಟ್ ಆಗುವ ಒಂದು ತಿಂಗಳ ಹಿಂದೆ ಎರಡು ತಿಂಗಳೊಳಗೆ ತಾನು ಭಾರತಕ್ಕೆ ಬರುವುದಾಗಿ ತಿಳಿಸಿದ್ದ. ಎರಡು ತಿಂಗಳಲ್ಲ ನಾಲ್ಕೈದು ತಿಂಗಳು ಕಳೆದರೂ ವಾಸುವಿನಿಂದ ಯಾವ ಕರೆಯೂ ಬಾರದೇ ಇದ್ದುದರಿಂದ ಬೇಸತ್ತ ಶಿವಪ್ಪ ತನ್ನ ಮಗನಿಂದ ವಾಟ್ಸಾಪ್ ಕಾಲ್ ಕಾಲ್ ಮಾಡಿಸಿ ಅದು ಆ ನಂಬರಿಗೆ ಕರೆ ಹೋಗದೇ ಚಿಂತಿತನಾದ.

ಶಿವಪ್ಪ ಮತ್ತೆ ಮತ್ತೆ ಪ್ರಯತ್ನಿಸಿ ಸೋತುಹೋದ. ಕೊನೆಗೆ ವಾಸುನ ಸಹೋದರ ಗಿರೀಶನನ್ನು ಕೇಳಿ, ಸ್ವತ: ಗಿರೀಶನೇ ಆ ಅಪಘಾತದ ಸುದ್ದಿ ಹೇಳಿದಾಗ, ಶಿವಪ್ಪ ನಂಬದಾದ. ಅವರ ಸಾವಿನಿಂದ ಸಾಕಷ್ಟು ಕೊರಗಿದ ಮರುಗಿದ. ಮುಂದೆ ಶಿವಪ್ಪ ಗ್ರಾಮದ ಕರ ವಸೂಲಿ ಮಾಡಲು ಹೋದಾಗ, ವಾಸುನ ಮನೆಗೆ ಬೇರೆ ಮತ್ತಿನ್ಯಾರೋ ಬಾಡಿಗೆಗೆ ಬಂದದ್ದು ತಿಳಿಯಿತು. ಅವರ ಹತ್ತಿರದ ಮನೆಯವರಿಂದ ಗಿರೀಶನೇ ಆ ಮನೆಯನ್ನು ಬೇರೆಯವರಿಗೆ ಬಾಡಿಗೆಗೆ ಕೊಟ್ಟಿದ್ದು ತಿಳಿದು ಬಂತು. ಶಿವಪ್ಪನೇನು ಗಿರೀಶನ ದುಷ್ಟ ಬುದ್ದಿಯನ್ನು ಅರಿಯದವನಲ್ಲ. ಹಾಗಾಗಿ ಗಿರೀಶ ಆ ಮನೆಯನ್ನು ತನ್ನದಾಗಿಸಿಕೊಳ್ಳಲು ಹಿಂದೆ ಸರಿಯಲಾರ ಎನ್ನಿಸಿತು. ಆ ಆಸ್ತಿ ವಾಸುನ ಮಗಳು ದಿವ್ಯಳಿಗೆ ಸಲ್ಲಬೇಕು. ಇನ್ನು ಆಕೆಗೆ ಬಾಡಿಗೆ ವಿಷಯ ಗೊತ್ತಿದೆಯೇ? ಗಿರೀಶ ಗುರುತು ಮಾಡುವವನಲ್ಲ ಎಂಬ ಸಂಶಯ ಹುಟ್ಟಿತು. ನೇರವಾಗಿ ಕೇಳಲೂ ಆಗದೇ ಬಿಡಲೂ ಆಗದೇ ಒದ್ದಾಡಿದ. ಕೊನೆಗೆ ಉಪಾಯ ಮಾಡಿ “ಮತ್ತ ಸಾಹೇಬ್ರ ಮನಿ ಟ್ಯಾಕ್ಸ ಕಟ್ಟಬೇಕಿತ್ತಲ? ನೀವ ಕಟ್ಟುವಾರೋ ಇರಲೀಕ ಅವರ ಮಗಳು?” ಪ್ರಶ್ನೆ ಒಡ್ಡಿದಾಗ, ಅವರ ಮಗಳು ಎಂಬ ಶಬ್ದ ಗಿರೀಶನಿಗೆ ಚುರುಕು ನೀಡಿತ್ತು. ಅದನ್ನು ಮರೆಸಲೆಂಬಂತೆ “ಹೆ… ಹೇ.. ಕಟ್ಟತೀವಿ ನಾವ ಕಟ್ಟತೀವಿ ಪಾಪ ಆಕಿ ಏನು ಇಲ್ಲಿ ಬರೂವಂಗಿಲ್ಲಾ”
“ಏನರ ಆಗಲಿ ಅವರ ನಂಬರ್ ಆದ್ರೂ..? ಒಮ್ಮೆಲೇ ಗಾಬರಿಯಾದ ಗಿರೀಶ ಹೌಹಾರಿದವನಂತೆ “ಏ ಆಕಿ ನಮಗ ಮಾತಾಡಾಕ ಸಿಗೂದಿಲ್ಲಾ. ನಮಗ ಹಗಲ ಇದ್ದಾಗ, ಅವರಿಗೆ ರಾತ್ರಿ ಇರತೈತಿ, ನಮಗ ರಾತ್ರಿ ಇದ್ದಾಗ ಅವರಿಗೆ ಹಗಲ ಇರತೈತಿ. ಆಕಿ ಕಾಲ್ ಮಾಡಿದಾಗನ ನಾವೂ ಮಾತಾಡತೀವಿ. ಇನ್ನ ನೀ ಹ್ಯಾಂಗ ಮಾತಾಡತೀಪಾ? ಆಕಿ ನಂಬರ ಆದ್ರೂ ತುಗೊಂಡ ನೀ ಏನ ಮಾಡತಿ? ನಿನಗ ಟ್ಯಾಕ್ಸ ತುಂಬೂದು ಇಲ್ಲೋ ನಾವ ತುಂಬತೀವಿ ಆತಿಲ್ಲೋ?” ಮುಂದೆ ಶಿವಪ್ಪ ಮತ್ತೇನನ್ನೂ ಮಾತಾಡದಂತೆ ಗಿರೀಶ ಮಾಡಿಬಿಟ್ಟ.
ದಿನಗಳೆದಂತೆ ಶಿವಪ್ಪ ವಾಸುನನ್ನು ಮರೆತರೂ ಅವರ ಮನೆ ನೋಡಿದಾಗ, ವಾಸುನಂತಹ ಟಿಪ್ ಟಾಪ್ ಆದ ಸಾಹೇಬರಂತಹವರು ಕಂಡಾಗಲೆಲ್ಲ ವಾಸುನ ನೆನಪಾಗಿ ನೋವು ಹುಟ್ಟುತ್ತಿತ್ತು. ಅದೇ ವೇಳೆ ವಾಸುನ ಮಗಳು ದಿವ್ಯಳ ನೆನಪಾಗಿ ಆ ಹುಡುಗಿ ಏನಾಯಿತೋ ಎಂದು ಮಮ್ಮಲ ಮರುಗುತ್ತಿದ್ದ.
** ** **
ವರ್ಷದ ನಂತರ ಗಿರೀಶ, ವಾಸುನ ಮನೆಯನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸತೊಡಗಿದ. ಅದಕ್ಕಾಗಿ ದಿವ್ಯಳಿಂದ ಅಣ್ಣ ಅತ್ತಿಗೆಯ ಡೆತ್ ಸರ್ಟಿಫಿಕೇಟ್ ತರಿಸಿಕೊಂಡ. ಆದರೆ ಸಬ್ ರಜಿಸ್ಟ್ರೇಶನ್ ಮಾಡಿಸುವಲ್ಲಿ ವಾರಸಾದವರ ಸಹಿ ಬೇಕಾಗಿ ವಿಫಲನಾದ. ಆದರೆ ಸುಲಭವಾಗಿ ದಕ್ಕುವ ಆ ದೊಡ್ಡ ಮನೆಯನ್ನು ಅಷ್ಟು ಸರಳವಾಗಿ ಬಿಡುವನೇ?

ಫೋಟೋ ಕೃಪೆ : vpcasarvarnem
ಸಧ್ಯಕ್ಕೆ ಪಂಚಾಯತಿಯಲ್ಲೆ ಬಾಂಡ ಮೇಲೆ ದಾಖಲಿಸಿಕೊಂಡು ಕಂಪ್ಯೂಟರ್ ಉತಾರ ತೆಗೆದುಕೊಂಡರಾಯಿತೆಂದುಕೊಂಡ. ಅದಕ್ಕಾಗಿ ಕಸರತ್ತೂ ನಡೆಸಿದ. ದುಡ್ಡು ಸಿಕ್ಕರೆ ಸಾಕು ಏನು ಬೇಕಾದ್ರೂ ಮಾಡುವೆವು ಎನ್ನುವಂತಹ ಉಂಡಾಡಿ ಗುಂಡರಂತಹ ಇಬ್ಬರು ಮೂವರು ಸದಸ್ಯರ ತಲೆ ತುಂಬಿದ. ಅವರು “ಹೇ ಅವರು ಇಲ್ಲಾ ಅಂದ್ರ ಆ ಆಸ್ತಿ ನಿಮಗ ಬರತೈತಿ. ನೀವೇನ ಚಿಂತಿ ಮಾಡಬ್ಯಾಡ್ರಿ. ಇನ್ನ ಅವರ ಅಪ್ಪನ್ನ ಸಾಯೂತನಕಾ ನೀವ ನೋಡಕೊಂಡಿರಲ್ಲನ? ಇನ್ನ ಆ ಹುಡುಗಿ ಇಲ್ಲಿಗೆ ಬರೂದೇ ಇಲ್ಲಾ ಅಂದಾಗ, ಅದು ನಿಮ್ಮ ಹೆಸರಿಲೇ ದಾಖಲ ಆಗಲೀಕೂ ಅದು ನಿಮ್ಮದ” ಗಿರೀಶನ ಆಶೆಗೆ ಪುಷ್ಠಿ ನೀಡಿದ್ದರು. “ಹೇ ಆದ್ರೂ ದಾಖಲ ಮಾಡೂದ ಚೊಲೊ. ದಾಖಲ ಮಾಡೇ ಬಿಡ್ರಿ”
“ಆತು, ಈ ತಿಂಗಳ ಮೀಟಿಂಗನ್ಯಾಗ ಅದನ್ನ ಪಾಸ್ ಮಾಡಸ್ತೀವಿ” ಅಂದಾಗ, ಹೆದರಿದ ಗಿರೀಶ, “ಏ ಹಂಗ ಮಾಡಬ್ಯಾಡ್ರೆಪಾ ಮೀಟಿಂಗನ್ಯಾಗ ಇಡಾಕ ಹೋಗಬ್ಯಾಡ್ರಿ ದಾಖಲ ಆದಮ್ಯಾಲೆ ಅದ ಮೀಟಿಂಗ್ ಡೇಟಿಗೆ ಠರಾವು ಪಾಸ್ ಮಾಡ್ರಿ ಅಷ್ಟ ಸಾಕ” ಎಂದ.
ಅಧ್ಯಕ್ಷ ಅಭಿವೃದ್ಧಿ ಅಧಿಕಾರಿ ಮನಸ್ಸು ಮಾಡಿದರೆ, ಆ ಕೆಲಸ ಖಂಡಿತ ನೆರವೇರುವುದೆಂಬ ನಂಬಿಕೆ ಇತ್ತು ಗಿರೀಶನಿಗೆ. ಆದರೆ ಆ ಪಂಚಾಯತಿಯಲ್ಲೇ ದೊಡ್ಡ ಮುಳ್ಳಾಗಿ ಶಿವಪ್ಪ ಕಾಡತೊಡಗಿದ್ದ. ಈ ಹಿಂದೆ ಆತ ದಿವ್ಯಳ ನಂಬರ್ ಕೇಳಿದ್ದ ವಿಷಯ ನೆನಪಾಗಿ ಮತ್ತಷ್ಟು ಅಧೀರತೆ ಹುಟ್ಟಿಕೊಂಡಿತು. ಹಾಗಾಗಿ ಆದಷ್ಟು ಜಾಗರೂಕತೆಯಿಂದ ಈ ಕೆಲಸ ಮಾಡಿಮುಗಿಸಲು ಆತ ಪ್ರಯತ್ನಿಸಿದ.
ಶಿವಪ್ಪ ಕರ ವಸೂಲಿ ಮಾಡುವ ಸಲುವಾಗಿ ಊರಲ್ಲಿ ಹೋದಾಗ, ಆತನಿಗೆ ತಿಳಿಯದಂತೇ ಆ ಸದಸ್ಯರನ್ನು ಪಂಚಾಯತಿಗೆ ಕರೆದುಕೊಂಡು ಹೋಗಿ, ಆ ಸದಸ್ಯರಿಂದಲೇ ಅರ್ಧಮರ್ಧ ಸತ್ಯ ಹೇಳಿಸಿ ಮನೆ ದಾಖಲಾತಿಯ ಬಗ್ಗೆ ಚರ್ಚಿಸಿದ್ದ. ಜೊತೆಗೆ ಡೆತ್ ಸರ್ಟಿಫಿಕೇಟ್ ಕೂಡ ತೋರಿಸಿದ್ದ. ಆದರೆ ಅಭಿವೃದ್ಧಿ ಅಧಿಕಾರಿ “ಹಂಗ ಹೆಂಗ ದಾಖಲ ಮಾಡಾಕ ಬರತೈತಿ? ಈಗಂತೂ ಬಾಂಡ್ ಪೇಪರ್ ಮ್ಯಾಲೆ ದಾಖಲ ಮಾಡಿದ್ದು ನಡಿಯೂದಿಲ್ಲ. ಮೊದಲ ಸಬ್ ರಜಿಸ್ಟ್ರೇಶನ್ ಆಗಬೇಕು” ಸ್ಪಷ್ಟವಾಗಿ ನುಡಿದಾಗ, ಅದರಲ್ಲೊಬ್ಬ ಸದಸ್ಯ “ಹಂಗ ಅನ್ನಬ್ಯಾಡ್ರಿ ಸಾಹೇಬ್ರ ಅವರು ನಿಮಗ ಏನು ಕೊಡೂದು ಕೊಡತಾರ”
“ಯಾಕ್ರೆಪಾ ಏನ ಮಾತಾಡತೀರಿ?”
“ಅಲ್ರಿ ಸರ್ ನಾ ಹೇಳಿದ್ದು ದಾಖಲ ಫೀಜು” ಎಂದು ಮಾತನ್ನು ಸರಿಗೊಳಿಸಿದ್ದ.
ಆ ದಿನ ಮೊದಲ ಪ್ರಯತ್ನವಾಗಿ ಅಭಿವೃದ್ಧಿ ಅಧಿಕಾರಿಗಳ ಮುಂದೆ ವಿಷಯವನ್ನು ಪ್ರಸ್ತಾಪಿಸಿದ್ದಾಯಿತು. ಇನ್ನು ಬೇರೆ ದಾರಿಯ ಮುಖಾಂತರ ಪ್ರಯತ್ನಪಟ್ಟರಾಯಿತೆಂದು ಗಿರಿಶ ಮರಳಿ ಬಂದಿದ್ದ.
ಅಷ್ಟರಲ್ಲಾಗಲೇ ಗಿರೀಶನ ಹುಣ್ಣಾರದ ಸುಳಿವು ಶಿವಪ್ಪನಿಗೆ ತಿಳಿದು ಕೋಪಗೊಂಡ. ಮುಂದೆ ಮತ್ತೇನು ಮಾಡುವನೊ ಎಂದು ಹೆದರಿ ಆ ಕತೆಯನ್ನು ಅಭಿವೃದ್ಧಿ ಅಧಿಕಾರಿಗಳಿಗೆ ಹೇಳಿದ. ಇದರಿಂದ ಅಧಿಕಾರಿ ಎಚ್ಚೆತ್ತುಕೊಂಡು, ಬೇರೆಯವರಿಂದ ಆ ವಿಷಯ ಅವರ ಮುಂದೆ ಪ್ರಸ್ತಾಪವಾದರೂ ಅದು ಬಿಲ್ಕುಲ್ ಸಾಧ್ಯವಿಲ್ಲಾ ಎಂದಾಗ, ಗಿರೀಶ ಆ ಅಧಿಕಾರಿಯನ್ನೇ ಬೇರೆ ಪಂಚಾಯತಿಗೆ ಟ್ರಾನ್ಸಫರ್ ಮಾಡಲು ಪ್ರಯತ್ನಿಸಿದ.
ಶಿವಪ್ಪನಂತೂ ದಿವ್ಯಳನ್ನು ಹೇಗೆ ಸಂಪರ್ಕಿಸಬೇಕು ಎಂಬುದನ್ನೇ ಚಿಂತಿಸತೊಡಗಿದ. ಆತ ಅದೇ ವಿಚಾರದಲ್ಲಿರುವಾಗಲೇ ಹುಡುಕುವ ಬಳ್ಳಿ ಕಾಲಿಗೆ ಎಟುಕಿದಂತೆ ಆ ಹುಡುಗಿ ದಿವ್ಯಳಿಂದಲೇ ಕರೆ ಬಂದಾಗ ಖುಷಿಯಿಂದ ಕುಣಿದಾಡುವಂತಾಯಿತು.
ದಿವ್ಯಳಿಗೆ ತಂದೆ ತಾಯಿಯರ ಭಾರತ ನೆನಪಾಗಿ ಕಾಡಿದಾಗ, ಹಾಗೇ ತನ್ನ ಮನೆಯೂ ನೆನಪಾಗಿ ಚಿಕ್ಕಪ್ಪ ಗಿರೀಶನನ್ನು ಆ ಕುರಿತಾಗಿ ಕೇಳಿದಳು. ಆದರೆ, ಆತ ಆ ಕುರಿತಾಗಿ ಸರಿಯಾಗಿ ತಿಳಿಸದೇ ಹೋದಾಗ, ಆಕೆ ಅಂಕಲ್ ಎಂದು ಕರೆಯುತ್ತಿದ್ದ ಶಿವಪ್ಪ ನೆನಪಾದ. ತಂದೆಯ ಡೈರಿಯಿಂದ ಆತನ ನಂಬರ್ ಎತ್ತಿಕೊಂಡು ಕರೆ ಮಾಡಿದ್ದಳು. ಆಗ ಆತ ತನ್ನ ಮಗನ ಕಡೆಯಿಂದ ಇಂಗ್ಲೀಷನಲ್ಲಿಯೇ ಮಾತನಾಡಿಸಿ ಆಕೆಯ ಚಿಕ್ಕಪ್ಪನ ಹುನ್ನಾರವನ್ನು ತಿಳಿಸಿ ಹೇಳಿ ಆಕೆ ಮೊದಲು ಅಲ್ಲಿಗೆ ಬರುವಂತೆ ತಿಳಿಸಿದ್ದ.
ಆ ದಿನ ರಾತ್ರಿ ಶಿವಪ್ಪ ಹೇಳಿದ ಮಾತುಗಳು ನೆನಪಾಗತೊಡಗಿದವು. ಚಿಕ್ಕಪ್ಪನ ವಿಷಯ ಬೇಸರ ಹುಟ್ಟಿಸಿತು. ಮನೆಯ ಹಕ್ಕುದಾರಳಾಗಿ ತಾನು ಇದ್ದಾಗಲೂ ತನ್ನ ಹೆಸರಿಗೆ ಮನೆ ಮಾಡಿಕೊಳ್ಳುವ ಅನ್ಯಾಯದಿಂದ ರೋಷಿಹೋದಳು. ಆದಷ್ಟು ಬೇಗ ಭಾರತಕ್ಕೆ ಹೋಗಿ ಮನೆಯನ್ನು ತನ್ನ ಹೆಸರಿಗೆ ದಾಖಲಿಸಿಕೊಂಡು ಬರುವುದೆಂದು ನಿರ್ಧರಿಸಿದಳು.
** ** **
ಮೊದಲ ಬಾರಿಗೆ ದಿವ್ಯ ಒಬ್ಬಳೇ ಭಾರತಕ್ಕೆ ಬಂದು, ಈ ಹಿಂದೆ ತಂದೆ ತಾಯಿಯರೊಂದಿಗೆ ಬಂದಿಳಿದ ಹೊಟೇಲಿನಲ್ಲಿಯೇ ಇಳಿದಳು. ಹಾಗೇ ತಾನು ಬಂದ ವಿಷಯವನ್ನು ಶಿವಪ್ಪನಿಗೂ ತಿಳಿಸಿದ್ದಳು. ಹೊಟೇಲಿನಲ್ಲಿ ಸುಧಾರಿಸಿಕೊಂಡು ಕಾರ್ ಮಾಡಿಕೊಂಡು ಚೆಂದಳ್ಳಿಗೆ ಬಂದಳು. ಶಿವಪ್ಪ ಆಕೆಯನ್ನು ತನ್ನ ಮನೆಗೇ ಕರೆದೊಯ್ದ. ಅವನ ಮನೆಯಲ್ಲಿ ಒಳ್ಳೆಯ ಆತಿಥ್ಯ ದೊರೆಯಿತು. ಶಿವಪ್ಪನ ಹೆಂಡತಿಯಂತೂ ತಂದೆ ತಾಯಿಯರನ್ನು ಕಳೆದುಕೊಂಡ ಅನಾಥೆ ಎಂದು ತಬ್ಬಿಕೊಂಡಳು. ಶಿವಪ್ಪ ಆಕೆಗೆ ಮನೆ ಆಕೆಯ ಹೆಸರಿಗೆ ದಾಖಲಾದ ನಂತರ ಮಾರಾಟ ಮಾಡಿಬಿಡುವಂತೆ ತಿಳಿಹೇಳಿದ. ಮುಂದೆ ದಿವ್ಯ ತನ್ನ ಮನೆಗೆ ಹೋಗುವ ಆಶೆ ವ್ಯಕ್ತಪಡಿಸಿದಳು.
ಅಣ್ಣನ ಮಗಳು ದಿವ್ಯ ಇದ್ದಕ್ಕಿದ್ದಂತೇ ಬಂದದ್ದನ್ನು ಕಂಡು ಗಿರೀಶ ಗಾಬರಿಯಾದ. ತೋರಿಕೆಯ ಪ್ರೀತಿ ತೋರಿದ. ಸಾಯಂಕಾಲದವರೆಗೂ ತನ್ನ ಮನೆ ಊರು ಸುತ್ತಿ ಅಪ್ಪ ಅಮ್ಮನನ್ನು ನೆನಪಿಸಿಕೊಳ್ಳುತ್ತಾ ಮತ್ತೆ ಬೆಳಗಾವಿಯ ಹೋಟೆಲ್ ಗೆ ತೆರಳಿ, ಶಿವಪ್ಪ ಹೇಳಿದಂತೆ ಮನೆಯನ್ನು ಮಾರಿಬಿಡುವುದಾ? ಮಾರಿದರೆ ತನ್ನ ಮತ್ತು ಭಾರತದ ಸಂಪರ್ಕವೇ ತಪ್ಪಿಹೋಗುತ್ತದೆ. ಇನ್ನು ಹಾಗೇಬಿಟ್ಟರೆ, ಮೋಸಗಾರ ಚಿಕ್ಕಪ್ಪ ಮತ್ತಿನ್ನೇನಾದರೂ ಮಾಡಬಹುದು. ಎಂದೆಲ್ಲ ಮನೆಯ ಕುರಿತಾಗಿಯೇ ಚಿಂತಿಸತೊಡಗಿದಳು.
ಶಿವಪ್ಪ, ದಿವ್ಯಳ ತಂದೆ ತಾಯಿಯ ಡೆತ್ ಸರ್ಟಿಫಿಕೇಟಿನೊಂದಿಗೆ ವಾರಸಾ ದಾಖಲಾತಿಯನ್ನು ಗ್ರಾಮ ಲೆಕ್ಕಿಗರ ಹತ್ತಿರ ಈ ಮೊದಲೇ ತೆಗೆಸಿಕೊಂಡು ಬಂದಿದ್ದ. ಜೊತೆಗೆ ಈ ಮೊದಲೇ ಅಧಿಕಾರಿಗಳಿಗೆ ಆ ವಿಚಾರ ಕುರಿತು ಹೇಳಿದ್ದ. ಹಾಗಾಗಿ ಗ್ರಾಮ ಪಂಚಾಯತಿಯಲ್ಲಿ ಆಕೆಯ ಹೆಸರಿಗೆ ಮನೆ ದಾಖಲಾಗುವುದು ಕಷ್ಟವೇನಾಗಲಿಲ್ಲ. ಆದರೆ ಸಬ್ ರಜಿಸ್ಟ್ರೇಶನ್ ನಲ್ಲಿ ದಾಖಲಾಗಬೇಕಾದಲ್ಲಿ ಸ್ವಲ್ಪ ಸಮಯ ತಗುಲಿತು.
ಮನೆ ಏನೋ ತನ್ನ ಹೆಸರಿಗೆ ದಾಖಲಾಯಿತು. ಶಿವಪ್ಪನಂತೂ ಆ ಮನೆಯನ್ನು ಮಾರಾಟ ಮಾಡಿಯೇ ತೆರಳುವಂತೆ ಒತ್ತಾಯಿಸುತ್ತಿದ್ದಾನೆ. ಅದನ್ನು ಮಾರಾಟ ಮಾಡಿ ತಂದೆತಾಯಿಯರ ನೆನಪಿನ ಮನೆಯನ್ನು ಮಾರಿ ಭಾರತದ ಸಂಬಂಧವನ್ನು ಕಳಚಿಕೊಳ್ಳುವುದಾ? ಎನ್ನಿಸಿತು. ಮಾರದೇ ಇದ್ದಲ್ಲಿ ನೀಚ ಚಿಕ್ಕಪ್ಪನ ಪಾಲು. ಏನು ಮಾಡುವುದೆಂದು ಯೋಚಿಸುತ್ತಿರುವಾಗಲೇ, ದಾನ ಮಾಡಿದರೆ ಎಂದುಕೊಳ್ಳುವಾಗಲೇ ಆಕೆ ಒಂದು ವಾರದ ಕಾಲ ಆ ಚೆಂದಳ್ಳಿಯಲ್ಲಿ ಓಡಾಡಿ ಅಂಗನವಾಡಿ ಶಾಲೆಗೆ ಜಾಗವಿಲ್ಲದೇ ದೇವಸ್ಥಾನದಲ್ಲಿ ಕುಳಿತುಕೊಳ್ಳುತ್ತಿದ್ದ ಮಕ್ಕಳ ನೆನಪಾಗಿ ತಾನು ತನ್ನ ಮನೆಯನ್ನು ಕೊಟ್ಟಲ್ಲಿ ಮೂರ್ನಾಲ್ಕು ಅಂಗನವಾಡಿಗಳು ತನ್ನ ದೊಡ್ಡದಾದ ಮನೆಯಲ್ಲಿಯೇ ನಡೆಯಬಹುದಲ್ಲ ಎಂದೆನ್ನಿಸಿದ್ದೇ ತಡ ಮರುದಿನವೇ ಶಿವಪ್ಪನೊಂದಿಗೆ ಮಾತನಾಡಿದ್ದಳು.

ಫೋಟೋ ಕೃಪೆ : web.iitd.
ದಿವ್ಯಳ ಮನೆಯಲ್ಲಿ ಎರಡು ಅಂಗನವಾಡಿಗಳು ಹುಟ್ಟಿಕೊಂಡವು. ಮುಂದೆ ಎರಡು ವರ್ಷಗಳ ನಂತರ ಸರಕಾರಿ ಅನುದಾನದಲ್ಲಿ ಮೂರು ಒಳ್ಳೊಳ್ಳೆಯ ಅಂಗನವಾಡಿಗಳು ನಿರ್ಮಾಣಗೊಂಡಿದ್ದವು. ಆ ಹೊಸ ಅಂಗನವಾಡಿಗಳ ಉದ್ಘಾಟನೆ
ದಿವ್ಯಳಿಂದಲೇ ನೆರವೇರಲಿತ್ತು. #ಉದ್ಘಾಟನೆ ಇನ್ನೂ ಒಂದು ವಾರವಿರುವಾಗಲೇ ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ದಿವ್ಯಳ ಸಾರ್ಥಕ ಕಾರ್ಯದ ಬಗ್ಗೆ ಪ್ರಕಟಗೊಂಡಿತ್ತು.
ದಿವ್ಯ ಉದ್ಘಾಟನೆಗೋಸ್ಕರ ಮತ್ತೆ ಭಾರತಕ್ಕೆ ಬಂದಾಗ, ಆಕೆಗೆ ಇಡೀ ಊರಿಗೆ ಊರೇ ಮರ್ಯಾದೆ ತೋರಿತು. ಶಿವಪ್ಪನಂತೂ ಕಾರ್ಯಕ್ರಮದ ಪ್ರಮುಖನಾಗಿ ಓಡಾಡತೊಡಗಿದ್ದ. ಆ ಅಂಗನವಾಡಿಗಳ ಉದ್ಘಾಟನಾ ಸಮಾರಂಭ ಮುಗಿದು, ಇನ್ನು ಮುಂದೆ ತನ್ನ ಮನೆ ನೂರಾರು ಮಕ್ಕಳ ಭವ್ಯ ಭವಿತವ್ಯಕ್ಕೆ ನಾಂದಿಹಾಡಲಿದೆ ಎಂಬುದನ್ನು ನೆನಪಿಸಿಕೊಂಡಾಗ, ಬದುಕು ಸಾರ್ಥಕವೆನ್ನಿಸಿತ್ತು.
- ಪಾರ್ವತಿ ಪಿಟಗಿ ( ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು, ಖ್ಯಾತ ಕತೆಗಾರ್ತಿ)
