ಅತಿಯಾದ ಕಾಮ ಅವನತಿಗೆ ಸಾಕ್ಷಿಯಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಲೇಖಕ ಭಾರತೀಸುತ ಅವರು ತಮ್ಮ ‘ಎಡಕಲ್ಲು ಗುಡ್ಡದ ಮೇಲೆ’ ಕೃತಿಯಲ್ಲಿ ಪಾತ್ರಗಳ ನಿರೂಪಣೆಯಲ್ಲಿ ನಿರೂಪಿಸಿದ್ದಾರೆ. ಆದರೆ ಕೆಲವೊಂದು ಗೊಂದಲಗಳು ಕಥೆ ಓದಿ ಮುಗಿಸಿದಾಗಲೂ ಕಾಡುತ್ತದೆ ಎಂದು ಲೇಖಕಿ ಸುಮಾ ಭಟ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಎಡಕಲ್ಲು ಗುಡ್ಡದ ಮೇಲೆ
ಲೇಖಕರು : ಭಾರತೀಸುತ
ಪ್ರಥಮ ಮುದ್ರಣ: ೧೯೬೭
ಪ್ರಸ್ತುತ ಮುದ್ರಣ:೨೦೨೦(ನನ್ನ ಓದು)
ಪ್ರಕಾಶಕರು: ರವೀಂದ್ರ ಪುಸ್ತಕಾಲಯ
ಪುಟಗಳು: ೧೪೪
ಬೆಲೆ: ೧೨೫
ಲೇಖಕರೇ ಪ್ರಥಮ ಮುದ್ರಣದ ಅರಿಕೆಯಲ್ಲಿ ಹೇಳುವಂತೆ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಓದುಗರಿಂದ ಸೈ ಎನಿಸಿಕೊಂಡ ಈ ಕಾದಂಬರಿ ಈಗ ಪುಸ್ತಕದ ರೂಪದಲ್ಲಿ ಓದುಗರನ್ನು ತಲುಪಿದೆ. ಡಿ. ಎಚ್ ಲಾರೆನ್ಸ್ ಎಂಬ ಆಂಗ್ಲ ಲೇಖಕನ ‘ಲೇಡಿ ಚಟರ್ಲೆಸ್ ಲವರ್’ ಕಾದಂಬರಿಯ ರೂಪಾಂತರ ಈ ಎಡಕಲ್ಲು ಗುಡ್ಡದ ಮೇಲೆ ಎಂಬ ಅಭಿಪ್ರಾಯ ಹೇಳುವ ಮಂದಿಗೆ ಲೇಖಕ ಆ ಕಾದಂಬರಿ ಈ ಕಾದಂಬರಿಯ ರಚನೆಗೆ ಪ್ರಚೋದನೆ ನೀಡಿದೆಯಷ್ಪೇ ಎಂದು ಉತ್ತರಿಸುತ್ತಾರೆ. ಅರವತ್ತರ ದಶಕದಲ್ಲಿ ಮಡಿವಂತ ಸಮಾಜ ಅಷ್ಟೇನೂ ಮುಕ್ತವಾಗಿ ಒಪ್ಪಿಕೊಳ್ಳದೇ ಹೋದಂತಹ ವಿವಾಹೇತರ ಸಂಬಂಧದ ಕಾಮದ ವಿರಾಟ ಸ್ವರೂಪದ ಕಥಾ ವಸ್ತುವನ್ನು ಲೇಖಕರು ಆಯ್ದುಕೊಂಡು ದಿಟ್ಟತನ ಮೆರೆದಿದ್ದಾರೆ ಎಂಬ ಭಾವನೆ ಮೂಡುತ್ತದೆ. ಅತಿಯಾದ ಕಾಮ ಅವನತಿಗೆ ಸಾಕ್ಷಿಯಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಲೇಖಕರು ಪಾತ್ರಗಳ ನಿರೂಪಣೆಯಲ್ಲಿ ನಿರೂಪಿಸಿದ್ದರೂ ಸಹಾ ಕೆಲವೊಂದು ಗೊಂದಲಗಳು ಕಥೆ ಓದಿ ಮುಗಿಸಿದಾಗಲೂ ಕಾಡುತ್ತದೆ.

ಜಗತ್ತಿನಲ್ಲಿ ಮೀನಿನ ಹೆಜ್ಜೆ ಹೆಣ್ಣಿನ ಮನಸ್ಸು ಯಾರಿಗೂ ಅರಿಯಲಾಗಿಲ್ಲಾ ಇಲ್ಲೂ ಸಹಾ ಅಂತಹ ಹೆಣ್ಣೊಬ್ಬಳನ್ನು ಲೇಖಕರು ಓದುಗರ ಮುಂದಿಟ್ಟಿದ್ದಾರಾ ಎಂಬ ಆಲೋಚನೆ ಕಾಡುತ್ತದೆ…ಅರಿಯಲಾಗದ ಹೆಣ್ಣಿನ ಮನದಾಳದ ತಳಮಳದೊಂದಿಗೆ ಕಾಮದ ರುಚಿಗೆ ಸುಲಭವಾಗಿ ಜಾರಿದಂತಹ ವಿವಾಹಿತ ಹೆಣ್ಣಿನ ಚಿತ್ರಣ, ವಿವಾಹೇತರ ಅನೈತಿಕ ಸಂಬಂಧಗಳು ಅರವತ್ತರ ದಶಕದಲ್ಲಿ ಅಷ್ಟು ಮುಕ್ತವಾಗಿ ಜಗತ್ತಿಗೆ ತಿಳಿಯದಿದ್ದರೂ ನೇಪಥ್ಯದಲ್ಲಿ ಇಂತಹ ಸಂಬಂಧಗಳು ಅದೆಷ್ಟು ಕಡೆ ನಡೆದಿರಬಹುದೋ ಎನೋ?? ಎಂಬ ಗೊಂದಲದೊಂದಿಗೆ ಕಥೆ ಸಾಗುತ್ತದೆ. ಇಲ್ಲಿ ಲೇಖಕರು ಮುಕ್ತ ಕಾಮಕ್ಕೆ ತನ್ನನ್ನು ಒಡ್ಡಿಕೊಂಡ ವಿವಾಹಿತ ಹೆಣ್ಣು ಪರಪುರುಷನೊಬ್ಬನೊಂದಿಗೆ ನಡೆಸಿದ ಅನೈತಿಕ ಸಂಬಂಧದ ಕಥಾ ವಸ್ತುವನಿಟ್ಟುಕೊಂಡು ಅದರ ಪರ, ವಿರೋಧ ಎರಡು ಚಿತ್ರಣವನ್ನು ನೀಡಿ, ಇಂತಹ ಸಂಬಂಧಗಳ ಅಂತಿಮ ಪರಿಣಾಮ ಯಾವ ರೀತಿ ಇರಬಹುದೆಂಬ ಸ್ಪಷ್ಟ, ಸೂಕ್ಷ್ಮ ಚಿತ್ರಣವನ್ನು ಓದುಗರಿಗೆ ತೆರೆದಿಟ್ಟಿದ್ದಾರೆ.
ಸೇನೆಯಲ್ಲಿ ಕಾರ್ಯನಿರತ ಕುಮಾರ ಮೆನನ್ ಕೌಲಾಲಂಪುರಕ್ಕೆ ಯುದ್ಧಕ್ಕೆ ತೆರಳುವ ಮೊದಲು ಬಟ್ಟಪಾಲದ ಮಾಧವಿಯೊಂದಿಗೆ ಮದುವೆಯಾಗಿ ಒಂದೆರಡು ತಿಂಗಳಿದ್ದು, ಜಪಾನಿನಲ್ಲಿ ನಡೆಯುವ ಯುಧ್ಧಕ್ಕೆ ತೆರಳಿದ್ದ. ಯುದ್ಧಕ್ಕೆ ತೆರಳಿದ್ದ ಮೆನನ್ ಯುದ್ಧದಲ್ಲಿ ಕಾಲನ್ನು ಕಳೆದುಕೊಂಡಿದ್ದ ಕಾರಣಕ್ಕೆ ಅವನ ಸೇವೆ ಮುಂದೆ ದೇಶಕ್ಕೆ ಸೈನ್ಯದಲ್ಲಿ ಸಲ್ಲಿಸಲು ಸಾಧ್ಯವಾಗದ ಕಾರಣ ಸರ್ಕಾರದಿಂದ ಪರಿಹಾರ ಧನ ದೊರೆತಿತ್ತು . ಮೆನನ್ ಪರಿಹಾರ ಧನದಲ್ಲಿ ತನ್ನ ಹುಟ್ಟೂರಾದ ವೈನಾಡಲ್ಲಿ ಭೂಮಿ ಖರೀದಿಸಿ ಅದನ್ನು ಒಂದು ಸುಂದರ ತೋಟ ಮಾಡುವಲ್ಲಿ ಯಶಸ್ವಿಯಾಗಿದ್ದ. ಜವಾಬ್ದಾರಿಯುತ ಪತಿಯಾಗಿ ಮಾಧವಿಯನ್ನು ತವರಿನಿಂದ ಕರೆತಂದು ತಾನು ಯುದ್ಧದಲ್ಲಿ ಕಳೆದುಕೊಂಡಿದ್ದು ಕಾಲನ್ನು ಮಾತ್ರವಲ್ಲಾ… ಪುರುಷತ್ವವನ್ನು ಎಂಬ ಸತ್ಯವನ್ನು ತಿಳಿಸಿ ಅವಳು ಬೇರೆ ಮದುವೆಯಾಗಲು ಮೆನನ್ ಒತ್ತಾಯಿಸಿದ್ದ. ಆದರೆ ಅಷ್ಟೇನೂ ಸಿತ್ಥಿವಂತ ಕುಟುಂಬದವಳಲ್ಲದ ಮಾಧವಿ ತನಗೆ ಇನ್ನೊಂದು ಮದುವೆ ಆಗುವ ಕಷ್ಟದ ಬಗ್ಗೆ ಅರಿವಿದ್ದು, ಅಲ್ಲದೇ ಮೆನನ್ನಿಂದ ಸಿಗುವ ಐಷಾರಾಮಿ ಜೀವನವನ್ನು ಬಿಟ್ಟುಕೊಡಲಾಗದೆ ಗಂಡನ ಮುಂದೆ ಅವನ ಸೇವೆ ಮಾಡಿಕೊಂಡು ಜೀವನ ಕಳೆಯುವೆ ಎಂದು ಆಶ್ವಾಸನೆ ನೀಡಿರುತ್ತಾಳೆ.
ತಾನೊಂದು ಬಗೆದರೆ ದೈವವೊಂದು ಬಗೆವಂತೆ ವಿಧಿಯ ಸಂಕಲ್ಪ ಮಾಧವಿಯನ್ನು ಪರೀಕ್ಷಿಸಲು ಬೇರೆಯದೇ ಮಾರ್ಗ ಹುಡುಕಿತ್ತು. ಅದೊಂದು ದಿನ ಮೆನನ್ ಮತ್ತು ಮಾಧವಿ ಮೂಪ್ಪೆನಾಡು ಚಹಾ ತೋಟದಿಂದ ವಾಪಸ್ ಆಗಬೇಕಾದರೆ ನಿರ್ಜನ ಪ್ರದೇಶದಲ್ಲಿ ಅವರ ಜೀಪ್ ಕೆಟ್ಟು ನಿಲ್ಲುತ್ತದೆ. ಆ ಕತ್ತಲೆ ಸಮಯದಲ್ಲಿ ಪಕ್ಕದ ತೋಟದ ನಂಜುಂಡನ ಪರಿಚಯವಾಗಿ ಅವರ ಮನೆಗೆ ಅವನು ಆಹ್ವಾನಿಸುತ್ತಾನೆ. ಪರಿಚಯ ಬೆಳೆದ ನಂತರ ಒಬ್ಬರ ಮನೆಗೆ ಒಬ್ಬರು ಹೋಗುವುದು ಸಾಮಾನ್ಯವಾಗಿ ಆತ್ಮೀಯತೆ ಬೆಳೆದಾಗ ನಂಜುಂಡನೊಂದಿಗೆ ವೈನಾಡಿನ ಸುಂದರ ತಾಣವಾದ ಎಡಕಲ್ಲು ಗುಡ್ಡಕ್ಕೆ ಹೊರಡುವ ಯೋಜನೆ ಮೆನನ್ ರೂಪಿಸುತ್ತಾರೆ. ಎಡಕಲ್ಲು ಗುಡ್ಡಕ್ಕೆ ಹೋಗಬೇಕೆಂಬ ದಿನ ತನಗೆ ಯಾವುದೋ ಪ್ರಕರಣವನ್ನು ಇತ್ಯರ್ಥತಗೊಳಿಸಲು ವಕೀಲರನ್ನು ಭೇಟಿ ಮಾಡಬೇಕಾಗಿ ಬಂದಾಗ ಮೆನನ್ ನಂಜುಂಡ ಬಂದಾಗ ಇನ್ನೊಂದು ದಿವಸ ಹೋಗುವಾ ಎಂದು ಹೇಳಲು ಮಡದಿ ಮಾಧವಿಗೆ ಹೇಳುತ್ತಾರೆ. ಗಂಡ ಕಲ್ಲಿಕೋಟೆಗೆ ತೆರಳಿದ್ದ ಕಾರಣ ಎಡಕಲ್ಲು ಗುಡ್ಡಕ್ಕೆ ಹೋಗಲು ಬಂದ ನಂಜುಂಡನಿಗೆ ಗಂಡ ಕೆಲಸದ ಮೇಲೆ ತೆರಳಿದ ವಿಷಯ ಮಾಧವಿ ತಿಳಿಸುತ್ತಾಳೆ. ನಂತರ ತಾನು ಅವನ ಮೊದಲಿನ ಯೋಜನೆಯಂತೆ ಎಡಕಲ್ಲು ಗುಡ್ಡಕ್ಕೆ ಹೋಗಲು ಪ್ರೇರೇಪಿಸಿದಾಗ, ನಂಜುಂಡ ಮತ್ತು ಮಾಧವಿ ಅಲ್ಲಿಗೆ ಹೋಗುವಂತಾಗುತ್ತದೆ. ಏರುಯೌವ್ವನದಲ್ಲಿ ಗಂಡನಿಂದ ದೈಹಿಕ ಸುಖದಿಂದ ವಂಚಿತಳಾಗಿದ್ದ ಮಾಧವಿ ಎಡಕಲ್ಲು ಗುಡ್ಡದಲ್ಲಿನ ಏಕಾಂತ ಸಮಯದಲ್ಲಿ ನಂಜುಂಡನೊಂದಿಗೆ ತಪ್ಪು ಹೆಜ್ಜೆ ಇಡುತ್ತಾಳೆ. ಆ ಸಂದರ್ಭದಲ್ಲಿ ಮಾಧವಿ ಒಬ್ಬಳೇ ಹಾದಿ ತಪ್ಪಿರುವಂತೆ ಕಾಣದೇ ಅದೇ ಸಂದರ್ಭಕ್ಕಾಗಿ ನಂಜುಂಡ ಕಾದಿದ್ದನಾ ಎಂಬ ಪ್ರಶ್ನೆ ಮೂಡುತ್ತದೆ.
ಎಡಕಲ್ಲು ಗುಡ್ಡದಲ್ಲಿ ತಪ್ಪು ಹಾದಿ ತುಳಿದ ನಂಜುಂಡ ಮತ್ತು ಮಾಧವಿಯರ ಈ ಅನೈತಿಕ ದೈಹಿಕ ಸಂಬಂಧ ಮೆನನ್ ಅರಿವಿಗೆ ಬರದಂತೆ ಅವ್ಯಾಹತವಾಗಿ ನಡೆಯುತ್ತಿರುತ್ತದೆ. ಬಟ್ಟಪಾಲದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಯಲ್ಲಿದ್ದ ಮಾಧವಿಯ ತಂದೆ ಮಡಿದ ಕಾರಣ, ಅವಳ ಸೋದರ ವಿಮಾನ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದರಿಂದ ತಂಗಿ ದೇವಕಿ ಅಲ್ಲಿ ಒಂಟಿಯಾದಳು. ಆಗ ಒಂಟಿಯಾದ ತಂಗಿ ದೇವಕಿ ಅಕ್ಕ ಭಾವನ ಆಶ್ರಯಕ್ಕೆ ಬಂದು ನಿಲ್ಲುವಂತಾಗುತ್ತದೆ. ಅಕ್ಕ ಮಾಧವಿ ಮಧ್ಯಾಹ್ನದ ಉರಿಯುವ ಸೂರ್ಯನಂತಿದ್ದರೆ…ತಂಗಿ ದೇವಕಿ ತಂಪಾದ ಚಂದ್ರನ ಶೀತಲಕಾಂತಿಯ ಸ್ವಭಾವದವಳು. ನಂಜುಂಡನಿಗೆ ದೇವಕಿಯ ಪರಿಚಯವಾಗಿ, ಒಡನಾಟದಲ್ಲಿರುವಂತಾದಾಗ ಕ್ರಮೇಣ ಸಂಯಮದ, ಸಜ್ಜನಿಕೆಯ ಗುಣಲಕ್ಷಣದ ದೇವಕಿಯ ಆಕರ್ಷಣೆಗೆ ಒಳಗಾಗುತ್ತಾನೆ. ನಂಜುಂಡನಿಗೆ ದೇವಕಿಯೊಂದಿಗೆ ಮೂಡಿದ ಸಲಿಗೆ ಮಾಧವಿಗೆ ಒಲ್ಲದ ವಿಷಯವಾಗಿ, ಅವಳು ತಂಗಿಯನ್ನೇ ಮತ್ಸರಿಸುತ್ತಿದ್ದಳು. ನಂಜುಂಡ ದೇವಕಿಯ ವ್ಯಕ್ತಿತ್ವಕ್ಕೆ ಆಕರ್ಷಿತನಾಗಿದ್ದಾನೆಂಬ ವಿಷಯವರಿತ ಮಾಧವಿ ದೇವಕಿಗೆ ಅವನಿಂದ ದೂರವಿರಲು ಆದೇಶಿಸುತ್ತಾಳೆ… ಕೆಲವೊಮ್ಮೆ ಕೆಲ ಸಂದರ್ಭದಲ್ಲಿ ವಿಚಿತ್ರವಾಗಿ ಅಕ್ಕ ವರ್ತಿಸುತ್ತಿರುವುದನ್ನು ದೇವಕಿ ಗಮನಿಸಿರುತ್ತಾಳೆ ಅಲ್ಲದೇ ಒಂದು ಬಾರಿ ಅಕ್ಕನಿಂದ ಏಟು ಸಹಾ ತಿನ್ನುತ್ತಾಳೆ.
ನಂಜುಂಡನಿಗೆ ಇತ್ತೀಚೆಗೆ ಮಾಧವಿಯ ಕಾಮದ ತೀವ್ರತೆ ಕೊಂಚ ಉಸಿರುಗಟ್ಟಿಸುವಂತಾಗುತ್ತಿದ್ದ ಕಾರಣದಿಂದ ನಂಜುಂಡ ಮಾಧವಿಯ ಬಂಧನದಿಂದ ಕಳಚಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾನೆ . ಅಂತಹ ಒಂದು ಪ್ರಯತ್ನದಲ್ಲಿ ಅವಳಿಂದ ದೂರವಾಗಲು ಬೇಟೆಗೆ ಹೋದಾಗ ಹಂದಿಯ ದಾಳಿಯಿಂದ ಗಾಯಕ್ಕೀಡಾಗಿ ಬಿಡುತ್ತಾನೆ. ನಂಜುಂಡನಿಗೆ ಆದ ಗಾಯದ ವಿಷಯವರಿತ ಮೆನನ್ ನಂಜುಂಡನಿಗೆ ಹಂದಿ ದಾಳಿಯಿಂದಾದ ಗಾಯ ವಾಸಿ ಮಾಡಿಸಲು ತನ್ನ ಮನೆಗೆ ಕರೆತಂದು, ನರ್ಸ್ ಕೆಲಸದ ಅನುಭವವಿದ್ದ ದೇವಕಿಗೆ ಅವನ ಶುಶ್ರೂಷೆ ಮಾಡಲು ಹೇಳುತ್ತಾನೆ. ದೇವಕಿಯ ಆರೈಕೆಯಲ್ಲಿ ನಂಜುಂಡ ಚೇತರಿಸಿಕೊಳ್ಳತ್ತಾ ಅವಳಿಂದ ಹೆಚ್ಚೆಚ್ಚು ಆಕರ್ಷಿತನಾಗುತ್ತಾನೆ. ಅದೊಂದು ಬಾರಿ ಅಕ್ಕ ಭಾವ ಕಲ್ಪೆಟ್ಟಕ್ಕೆ ಹೋದ ಸಂದರ್ಭದಲ್ಲಿ ಮನೆಗೆ ಬಂದ ನಂಜುಂಡ ದೇವಕಿಯ ಬಳಿ ಅನುಚಿತವಾಗಿ ವರ್ತಿಸಲು ಹೊರಟಾಗ ಅವಳು ಸಿಡಿದೇಳುತ್ತಾಳೆ. ಮಾಧವಿಯ ಅತಿಯಾದ ನಿಕಟತೆ, ದೇವಕಿಯ ವಿಮುಖತೆ ಇವೂಗಳಿಂದ ನಂಜುಂಡನಿಗೆ ತಲೆಕೆಡುವಂತಾಗುತ್ತದೆ. ಈ ಸಮಯದಲ್ಲಿ ಮುಖ್ಯ ಪಾತ್ರಗಳೊಂದಿಗೆ ಶ್ರೀಧರನ್ ನಾಯರ್ ಎಂಬ ಹೊಸ ಪಾತ್ರದ ಪ್ರವೇಶ ಲೇಖಕರು ಮಾಡುತ್ತಾರೆ. ಶ್ರೀಧರನ್ ನಾಯರ್ ಕುಮಾರ್ ಮೆನನ್ ಅವರಿಗೆ ದೂರದ ಸಂಬಂಧಿಯಾಗಿರುತ್ತಾರೆ. ವಿವಾಹವಾಗದ ನಾಯರ್ ತಾಯಿ ಕುಂಞ ಲಕ್ಷ್ಮಿ ಅವರೊಂದಿಗೆ ಮೆನನ್ ತೋಟದ ಬಳಿಯೇ ಸಣ್ಣ ತೋಟ ಒಂದರಲ್ಲಿ ಕೃಷಿ ಮಾಡಿಕೊಂಡು ನೆಲೆಸಿದ ಕುಟುಂಬವಾಗಿತ್ತು.
ಅದೊಂದು ಬಾರಿ ಕುಮಾರ್ ಮೆನನ್ ಪತ್ನಿ ಮತ್ತು ನಾದಿನಿಯೊಂದಿಗೆ ಶ್ರೀಧರ ನಾಯರ್ ಮನೆಗೆ ಭೇಟಿ ನೀಡುತ್ತಾರೆ. ಆ ಸಮಯದಲ್ಲಿ ಶ್ರೀಧರನ್ ನಾಯರ್ ವಿಚಾರಧಾರೆಗಳನ್ನು ಲೇಖಕರು ವಿಶಿಷ್ಟವಾಗಿ ವಿವರಿಸುತ್ತಾರೆ. ದೇವಕಿ ಮತ್ತು ನಂಜುಂಡರಲ್ಲಿ ನಡೆದ ಆ ಪ್ರಕರಣದಿಂದಾಗಿ ನಂಜುಂಡ ಮೆನನ್ ಮನೆಗೆ ಬರುವುದು ತಪ್ಪಿಸುತ್ತಿರುತ್ತಾನೆ . ಇದರಿಂದ ಮಾಧವಿಗೆ ನಂಜುಂಡನ ಸಾಂಗತ್ಯ ದೊರೆಯದೆ ಹೆಚ್ಚು ಚಡಪಡಿಕೆ ಆಗಿರುತ್ತದೆ. ತಂಗಿ ದೇವಕಿ ಅಕ್ಕ ಪ್ರಶ್ನಿಸಿದಾಗ, ನಂಜುಂಡನ ಕೃತ್ಯದ ಬಗ್ಗೆ ಹೇಳದಿದ್ದರೂ ಅವನ ಸಲಿಗೆ, ಅತಿರೇಕದ ಬಗ್ಗೆ ಅಕ್ಕ ವಿಚಾರಿಸಿದಾಗ ಹೇಳುತ್ತಾಳೆ. ತಂಗಿಯಿಂದ ಆದ ಅಚಾತುರ್ಯದಿಂದ ನಂಜುಂಡ ಬರುತ್ತಿಲ್ಲವೆಂದರಿತ ಮಾಧವಿ ನಂಜುಂಡನಿಗೆ ಗೌರವ ನೀಡಬೇಕು ಎಂದು ತಂಗಿಗೆ ತಾಕೀತು ಮಾಡಿರುತ್ತಾಳೆ. ಸರಳತೆಯನ್ನು ಮೈಗೂಡಿಸಿಕೊಂಡ ಶ್ರೀಧರನ್ ನಾಲ್ಕೈದು ಎಕರೆ ಕಾಫಿ ಮೆಣಸು ಹಾಕಿದ ತನ್ನದೇ ಆದ ತೋಟ ಮಾಡಿಕೊಂಡು ಕೆಲವೊಂದು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಂತಹ ವಿಚಾರಶೀಲ ವ್ಯಕ್ತಿತ್ವದವ. ಈ ಕುಟುಂಬ ಅವರ ಮನೆಗೆ ತೆರಳಿದಾಗ ಸಮಾಜವಾದ, ಭಾರತೀಯ ಸಂಸ್ಕೃತಿಯ ವೈವಿಧ್ಯತೆಗಳು, ಬೇರೆ ಬೇರೆ ಧರ್ಮ ಗ್ರಂಥಗಳು, ಆಧ್ಯಾತ್ಮಿಕತೆಯ ಹಲವು ಮಜಲುಗಳು ಇಂಥಹಾ ಸತ್ವಪೂರ್ಣ ವಿಷಯದಲ್ಲಿ ಚರ್ಚೆಯಾಗುತ್ತದೆ. ಇಂತಹ ವಿಚಾರಶೀಲ ಅಧ್ಯಯನ ಯೋಗ್ಯ ವಿಷಯಗಳು ಮಾಧವಿಗೆ ಅಷ್ಟೇನೂ ಹಿತವಾಗುವುದಿಲ್ಲಾ. ಅವಳ ಮನಸ್ಸು ಸದಾ ನಂಜುಂಡನ ಸಾಮೀಪ್ಯದಲ್ಲಿರುವ ಕನಸು ಕಾಣುತ್ತಿರುತ್ತದೆ. ಮೆನನ್ ಮತ್ತು ದೇವಕಿ ಶ್ರೀಧರನ್ ನಾಯರ್ ಮತ್ತು ಅವನ ತಾಯಿ ಲಕ್ಷ್ಮಿಯನ್ನು ತಮ್ಮ ಮನೆಗೆ ಆಹ್ವಾನಿಸುತ್ತಾರೆ.
ಕೆಲ ದಿನಗಳಾದರೂ ನಂಜುಂಡ ಇತ್ತೀಚೆಗೆ ಬರದಿರುವ ವಿಷಯವನ್ನು ಯೋಚಿಸಿದ ಮೆನನ್ ಮಡದಿ ಮತ್ತು ನಾದಿನಿಯ ಬಳಿ ನಂಜುಂಡರ ಮನೆಗೆ ತೆರಳುವ ವಿಷಯವನ್ನು ಪ್ರಸ್ತಾಪಿಸಿದಾಗ, ಮಾಧವಿ ಸಂತಸದಿಂದ ಒಪ್ಪಿಕೊಳ್ಳುತ್ತಾಳೆ. ಮಾಧವಿಯ ನಂಜುಂಡನ ಬಗೆಗಿನ ವಿಚಿತ್ರ ಆಸಕ್ತಿ, ಅವನ ಒಡನಾಟಕ್ಕೆ ವಿಚಿತ್ರ ವರ್ತನೆಗಳಿಂದ ಸ್ಪಂದಿಸುವ ಅಕ್ಕ ತಂಗಿ ದೇವಕಿಗೆ ಒಗಟಿನಂತೆ ಭಾಸವಾಗುತ್ತಾಳೆ. ಕುಟುಂಬ ಸಮೇತನಾಗಿ ನಂಜುಂಡರ ಮನೆಗೆ ಭೇಟಿ ನೀಡಿ ಅವನ ಆರೋಗ್ಯ ವಿಚಾರಿಸಿ ಮತ್ತೆ ತಮ್ಮ ಮನೆಗೆ ಆಗಾಗ ಬಂದು ಹೋಗಲು ಮೆನನ್ ಒತ್ತಾಯಿಸುತ್ತಾನೆ. ಮಾಧವಿ ಎಲ್ಲರೆದುರು ಶ್ರೀಧರನ್ ನಾಯರ್ ಬಗ್ಗೆ ಕೊಂಕಿನ ಮಾತಾಡಿದರೆ ನಂಜುಂಡ ಅವನ ಬಗ್ಗೆ ಅರಿಯದ ಮತ್ತೊಂದು ವಿಷಯ ಹೇಳುತ್ತಾನೆ. ಮೆನನ್ ನಂಜುಂಡನೊಂದಿಗೆ ಯೋಜನೆ ಹಾಕಿ ಹೋಗಲಾಗದ ಎಡಕಲ್ಲು ಗುಡ್ಡದ ಪ್ರವಾಸಕ್ಕೆ ಮಡದಿ ಮತ್ತು ನಾದಿನಿಯೊಂದಿಗೆ ಹೊರಡುವ ಯೋಜನೆ ರೂಪಿಸುತ್ತಾರೆ. ಎಡಕಲ್ಲು ಗುಡ್ಡಕ್ಕೆ ಹೋದಾಗ ನಡೆಯುವ ಘಟನೆಗಳಾದರೂ ಏನು??? ಎಡಕಲ್ಲು ಗುಡ್ಡ ಯಾವೆಲ್ಲಾ ರೀತಿಯ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ??? ಆ ನಂತರ ಕಥೆ ಯಾವ ರೀತಿ ಊಹಿಸಲಾಗದ ತಿರುವುಗಳನ್ನು ಪಡೆದುಕೊಳ್ಳುತ್ತದೆ, ಅರಿಯಲು ಭಾರತೀಸುತ ಅವರ “ಎಡಕಲ್ಲು ಗುಡ್ಡದ ಮೇಲೆ” ಕಾದಂಬರಿ ಒಂದು ಬಾರಿ ಓದಿ ನೋಡಿ…

ಮಾಧವಿ ಗಂಡ ಕುಮಾರ್ ಮೆನನನ್ನು ತೊರೆದು ಹೋಗದಿರಲು ಮುಖ್ಯ ಕಾರಣವಾದರೂ ಏನು??? ಮಾಧವಿಯ ಮೋಹದ ಪಾಶದಲ್ಲಿ ಸಿಲುಕಿದ ನಂಜುಂಡ ಅದರಿಂದ ಹೊರಬರಲಾಗದೆ ಹೋಗಿದ್ದೇಕೆ??? ದೇವಕಿಯ ಗುಣಗಳಿಂದ ಆಕರ್ಷಿತನಾಗುವ ನಂಜುಂಡ ಮಾಧವಿಯ ಅಧಿಕಾರಯುತ ಗುಣ, ಅತಿಕಾಮುಕತೆಯಿಂದ ವಿಮುಖನಾಗಲು ಬಯಸಿದನೆ??? ನಂಜುಂಡನ ಅಕ್ಕನ ಸರದಿ ಮುಗಿಸಿ ತಂಗಿಯ ಬಳಿ ಹೊರಟದ್ದು ಎಷ್ಟರ ಮಟ್ಟಿಗೆ ಸಮಂಜಸವಾದ ನಡೆ ಎನ್ನಬಹುದು???
ಅಕ್ಕ ಮಾಧವಿ ಮತ್ತು ನಂಜುಂಡನಿಗಿದ್ದ ಸಂಬಂಧದ ಬಗ್ಗೆ ತಿಳಿದಾಗ ದೇವಕಿ ನಂಜುಂಡನ ಮುಂದೆ ಇಟ್ಟ ಪ್ರಶ್ನೆ ಏನು??? ಶ್ರೀಧರ ನಾಯರ್ ವಿಚಾರಧಾರೆಗಳು ಮಾಧವಿಗೆ ಇಷ್ಟ ಆಗದಿರಲು ವಿಶೇಷ ಕಾರಣವೇನಾದರೂ ಇತ್ತಾ?? ಮಾಧವಿ ಶ್ರೀಧರನ್ ಬಗ್ಗೆ ಆಡಿದ ಕೊಂಕಿನ ಮಾತಿಗೆ ಅವನ ಬಗ್ಗೆ ನಂಜುಂಡ ಹೇಳಿದ ಹೊಸ ವಿಷಯವೇನು?? ಅದರ ಬಗ್ಗೆ ದೇವಕಿ ಶ್ರೀಧರನ್ ಬಳಿ ಚರ್ಚಿಸಿದಾಗ ಎನು ತಿಳಿದು ದೇವಕಿಗೆ ಶ್ರೀಧರನ್ ಮೇಲಿನ ಗೌರವ ಹೆಚ್ಚಾಗುತ್ತದೆ?? ಕಥೆ ಅಂತ್ಯದಲ್ಲಿ ಬರುವ ಮೇಕೆ ಮತ್ತು ಚಿರತೆಯ ದೃಶ್ಯವನ್ನು ಲೇಖಕರು ಹೇಗೆ ವಿಭಿನ್ನವಾಗಿ ಓದುಗರಿಗೆ ಕಟ್ಟಿಕೊಟ್ಟಾದ್ದಾರೆ?? ಕಥೆ ಓದುವಾಗ ಅಲ್ಲಿ ಮೇಕೆ ಯಾರು ಚಿರತೆ ಯಾರು ಎಂಬ ಪ್ರಶ್ನೆ ನಂಜುಂಡ ಮತ್ತು ಮಾಧವಿಯ ಪಾತ್ರಗಳ ಹೋಲಿಕೆಗೆ ಲೇಖಕ ಯಾವ ರೀತಿ ನಿರ್ಧಾರ ತಳೆಯಲು ಓದುಗರನ್ನು ಪ್ರೇರೆಪಿಸುತ್ತಾರೆ?? ಈ ಕುತೂಹಲಗಳಿಗೆಲ್ಲಾ ಕಾದಂಬರಿಯ ಸಂಪೂರ್ಣ ಓದು ನೆರವಾಗುತ್ತದೆ.
ಇಲ್ಲಿ ಲೇಖಕರು ಕಾಮದ ತೀವ್ರತೆ ಅದರಿಂದಾಗುವ ವಿಚಿತ್ರ ಪರಿಣಾಮಗಳು ಇವೆಲ್ಲವನ್ನು ಮುಕ್ತವಾಗಿ ತೆರೆದಿಟ್ಟಿದ್ದಾರೆ. ಒಂದು ಬಾರಿ ಯೋಚಿಸಿದಾಗ ಅತಿಕಾಮನೆಯ ವಿಜೃಂಭಣೆಯ ಇಂತಹ ಚಿತ್ರಣ ಅಗತ್ಯವಿತ್ತಾ? ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಇಂತಹಾ ಅತಿಕಾಮನೆ ಪರಿಣಾಮ ಎನೆಂಬುದರ ಚಿತ್ರಣವನ್ನು ಕಥೆಯ ಅಂತ್ಯದಲ್ಲಿ ನಿರೂಪಿಸಿದ ಪರಿ ಲೇಖಕರು ಅದಕ್ಕೊಂದು ಸೂಕ್ತ ಉತ್ತರ ನೀಡಿ ನ್ಯಾಯಯುತ ಅಂತ್ಯ ತಂದಿದ್ದಾರೆ ಎಂಬ ಭಾವ ನನ್ನಲ್ಲಿ ಮೂಡಿತು. ಅಲ್ಲದೆ ಲೇಖಕರು ಹೇಳಿರುವಂತೆ ಕಥೆಯನ್ನು ಯಾವ ರೀತಿ ಸ್ವೀಕರಿಸಬೇಕೆಂಬುದನ್ನು ಓದುಗರ ಆಲೋಚನೆಗೆ ಬಿಟ್ಟದ್ದು, ಕಥೆಯ ಬಗ್ಗೆ ಮೆಚ್ಚುಗೆ ಟೀಕೆ ಎಲ್ಲವೂ ಓದುಗರ ಮನೋಧರ್ಮವನ್ನು ಅವಲಂಬಿಸಿರುತ್ತದೆ ಎಂಬುದು ಸ್ವೀಕರಿಸಲು ಅರ್ಹವಾದ ಸತ್ಯವಾಗಿದೆ. ಇಲ್ಲಿ ಮಾಧವಿಯ ಚಂಚಲತೆ, ದೇವಕಿಯ ಧೃಢತೆ, ನಂಜುಂಡನ ಎರಡು ದೋಣಿಯ ಮೇಲೆ ಮುಂದಿನ ಪಯಣ, ಮೆನನ್ ನಿಸ್ವಾರ್ಥತೆ ಹೀಗೆ ಪ್ರತಿಯೊಂದು ಪಾತ್ರಗಳಲ್ಲೂ ಒಂದೊಂದು ವಿಷಯ ವಸ್ತುಗಳು ಚೆನ್ನಾಗಿ ನಿರೂಪಿತವಾಗಿದ್ದು ಲೇಖಕರು ಪ್ರತಿಯೊಂದು ಪಾತ್ರಕ್ಕೂ ತಮ್ಮದೇ ಆದ ದೃಷ್ಟಿಕೋನದಲ್ಲಿ ಅದೊಂದು ಬಗೆಯ ನ್ಯಾಯ ಒದಗಿಸಿದ್ದಾರೆ ಎಂಬ ಭಾವನೆ ಮೂಡುತ್ತದೆ. ಇನ್ನು ಇಲ್ಲಿ ತಪ್ಪಿನ ಪ್ರಶ್ನೆ ವಿಶ್ಲೇಷಿಸಲು ಹೋದರೆ ಮಾಧವಿ ಅಷ್ಟೇ ನಂಜುಂಡನ ತಪ್ಪು ಕಾಣುತ್ತದೆ. ಅತಿಯಾದ ಕಾಮ ಪವಿತ್ರವಲ್ಲದ ವಿವಾಹೇತರ ಸಂಬಂಧದ ನಡುವೆ ನಡೆಯುವ ಕಾಮ ಇಂತಹ ಅನೈತಿಕ ಸಂಬಂಧದ ಚಿತ್ರಣವನ್ನು ನೀಡುತ್ತಾ ಫಲಿತಾಂಶ ಏನಾಗಬಹುದೆಂಬ ಚಿತ್ರಣವನ್ನು ಲೇಖಕರು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ ಎನಿಸಿತು.
ಶ್ರೀಧರ ನಾಯರ್ ಮೂಲಕ ಲೇಖಕರು ಮಂಡಿಸುವ ಭಾರತೀಯ ತತ್ವಗಳು, ಸಿದ್ದಾಂತ ಅವನ ಉನ್ನತ ಮಟ್ಟದ ಆಲೋಚನೆಗಳು ಇವೆಲ್ಲವೂ ಕಾದಂಬರಿಯ ಪಾತ್ರಗಳ ಆಲೋಚನೆಗಳನ್ನು ಪಾತ್ರಗಳ ಮೂಲಕ ಇಂದಿನ ಪೀಳಿಗೆಗೆ ಹಂಚುವ ಲೇಖಕರ ತುಡಿತ ಹೆಚ್ಚು ಆಪ್ತವೆನಿಸುತ್ತದೆ. ಹಲವಾರು ವಿಚಾರವಾದಿಗಳ ವಿಷಯವನ್ನು ಇಲ್ಲಿ ಚರ್ಚೆಗೆ ಲೇಖಕರು ಕಥೆಗೆ ಓಘಕ್ಕೆ ತಕ್ಕಂತೆ ಹೇಳಿದ್ದಾರಾ ಎಂಬ ಜಿಜ್ಞಾಸೆ ಹುಟ್ಟಿಕೊಳ್ಳುತ್ತದೆ. “ರೂಢಿಯ ಕಟ್ಟುಪಾಡುಗಳು ಮಿತಿಮೀರಿದಾಗ ಅವು ಸಮಾಜದ ಉಸಿರು ಕಟ್ಟುವಿಕೆಗೆ ಕಾರಣವಾಗುತ್ತದೆ….ರಾಜ ಪುರುಷನು ಸತ್ವಶಾಲಿಯಾಗ ಬೇಕಾದರೆ ಹಳೆ ಪರಂಪರೆಯ ಸತ್ವ ಇರಬೇಕು… ಅಂಧ ಶ್ರದ್ಧೆಯಿಂದ ಪರಂಪರೆಯನ್ನು ಅನುಸರಿಸಿದರೆ ಅದು ಕಟ್ಟಿ ನಿಂತ ಕೆರೆಯ ಹೊಲಸು ನೀರು ಬಳಸಿದಂತೆ…ಪರಂಪರೆಯ ಅನುಸರಣೆ ಅತಿಯಾಗಬಾರದು” ಇಂತಹ ಶ್ರೀಧರನ್ ನಾಯರ್ ಅವರ ವಿಚಾರಧಾರೆಗಳು ಕಾದಂಬರಿಯಲ್ಲಿ ಹೆಚ್ಚು ಸೆಳೆಯುತ್ತದೆ. ಭಾರತೀಯ ತತ್ವ ಸಿದ್ಧಾಂತಗಳು, ಜೀವನದ ಮೌಲ್ಯಗಳು, ವ್ಯವಸಾಯ, ಸಮಾಜಮುಖಿ ಕಾರ್ಯದಲ್ಲಿ ತೊಡಗುವಂತಹ ಶ್ರೀಧರನ್ ನಾಯರ್ ಪರಿಚಯದೊಂದಿಗೆ ನಂಜುಂಡನಂತಹಾ ಹೂವಿಂದ ಹೂವಿಗೆ ಹಾರುವಂಥ ದುಂಬಿಯ ವ್ಯಕ್ತಿತ್ವದ ಪಾತ್ರದ ಮೂಲಕ ಬೇಟೆಯ ಕೆಲವು ವಿಚಾರಗಳನ್ನು ಲೇಖಕರು ಚೆನ್ನಾಗಿ ನಿರೂಪಿಸಿದ್ದಾರೆ.
ಇನ್ನು ಎಡಕಲ್ಲು ಗುಡ್ಡದ ಒಳಗಿರುವ ಕೆತ್ತನೆಗಳು ಅದರ ಇತಿಹಾಸ ಅದರ ಭೀಕರತೆ, ರುದ್ರರಮಣೀಯತೆ, ನಿಸರ್ಗ ಸೌಂದರ್ಯ ಇವುಗಳನ್ನು ಸಹ ಅಚ್ಚುಕಟ್ಟಾಗಿ ಲೇಖಕರು ಓದುಗರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಒಂದೆಡೆ ಕೊಡಗಿನ ಸಾಂಪ್ರದಾಯಿಕತೆ, ಮತ್ತೊಂದೆಡೆ ವೈನಾಡಿನ ಸಾಂಪ್ರದಾಯಿಕತೆ ಎರಡನ್ನು ಮೇಳೖಸಿದ ಚಿತ್ರಣ ಇಲ್ಲಿ ಕಾಣಸಿಗುತ್ತದೆ. ಸ್ಥಳೀಯ ಖಾದ್ಯಗಳ ವಿವರಣೆ, ಕೇರಳದ ಎಡಕಲ್ಲು ಗುಡ್ಡ, ಅರಾಟಪಾರು ಗುಡ್ಡ,ಮುಪ್ಪೇನಾಡು ಚಹಾ ತೋಟ ಮುಂತಾದ ವೈವಿಧ್ಯಮಯ ಚಹಾತೋಟಗಳ ಸುಂದರ ಚಿತ್ರಣ ಇಂತಹ ಹತ್ತು ಹಲವು ವೈಶಿಷ್ಟ್ಯತೆಗಳನ್ನು ಈ ಕಥೆಯಲ್ಲಿ ಸಂದರ್ಭಕ್ಕೆ ತಕ್ಕಂತೆ ಲೇಖಕರು ಸೇರಿಸಿರುವುದು ಈ ಕಥೆಯ ಓದಿಗೆ ಮತ್ತಷ್ಟು ಸರಕನ್ನು ಓದಗಿಸಿ ಮನರಂಜನೆಯ ಸಾಧನವಾಗುತ್ತದೆ ಎಂದರೆ ತಪ್ಪಾಗಲಾರದು.
- ಸುಮಾ ಭಟ್
