ಹಬ್ಬಗಳು ಕಾಲಕಾಲಕ್ಕೆ ಬದಲಾದರೂ ಕೆಲವು ಮನೆಗಳಲ್ಲಿ ಇಂದಿಗೂ ಹಿಂದಿನ ಪರಂಪರೆ ಮುಂದುವರೆದಿದೆ.ನಮ್ಮ ಅಜ್ಜಿ ಮನೆಯಲ್ಲಿ ನವರಾತ್ರಿ ಆರಂಭವಾಗುವ ಮೊದಲು ಅಟ್ಟದಿಂದ ಎರೆಯಪ್ಪದ ಬಾಣಲಿ ಕೆಳಗೆ ಇಳಿಸಿ ಅದರಲ್ಲಿ ಸಿಹಿಯನ್ನು ತಯಾರಿಸುತ್ತಿದ್ದರು, ಅದರ ಸವಿ ನೆನಪನ್ನು ಆತ್ಮ ಜಿ ಎಸ್ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನವರಾತ್ರಿಯ ರಂಗು ಇಂದು ನಾರಿಯರ ನವ ನವೀನ ವಿನ್ಯಾಸದ ಸೀರೆಯಿಂದ ಕಂಗೊಳಿಸಿದರೆ ಮೊದಲೆಲ್ಲ ನವರಾತ್ರಿ ಹಬ್ಬದ ಭಕ್ಷಗಳಿಗೂ ಅದರದ್ದೇ ಆದ ವಿಶೇಷತೆ. ಪರಂಪರೆಯಿಂದ ಕೆಲವರ ಮನೆಯಲ್ಲಿ ನವರಾತ್ರಿಯ ಒಂಬತ್ತು ದಿನ ದೇವಿ ಪಾರಾಯಣ ಮಾಡಿ ಮುತ್ತೈದೆಯರನ್ನು ಆಹ್ವಾನಿಸಿ ಅರಿಶಿನ ಕುಂಕುಮ ನೀಡಿದರೆ, ಕೆಲವರ ಮನೆಯಲ್ಲಿ 3 ದಿನದ ಪೂಜೆ , ಇನ್ನು ಕೆಲವು ಮನೆಗಳಲ್ಲಿ ಒಂದೇ ದಿನ ಪಾರಾಯಣ ಮಾಡಿಸುವ ಕ್ರಮವಿದೆ., ಊರಿನ ಒಂದೆರೆಡು ಮನೆಗಳಲ್ಲಿ ರಾತ್ರಿಯ ನವರಾತ್ರಿ ಪೂಜೆ ನೋಡುವುದೆಂದರೆ ಅದೊಂದು ರೀತಿಯ ಭಿನ್ನ ಅನುಭವ. ಮಲೆನಾಡಿನ ದೂರ ದೂರದ ಮನೆಗಳಲ್ಲಿ ನೆನಪಾದಾಗ ಮಳೆ ಹನಿ ಹಾಕುವುದರಿಂದ ಒಂದು ಕೈಯಲ್ಲಿ ಕೊಡೆ ಹಿಡಿದು, ಮತ್ತೊಂದೆಡೆ ಅಂಗಳದಲ್ಲಿ ಅರಳಿದ ತರೇವಾರಿ ಹೂವುಗಳ ಮಾಲೆ ಹಿಡಿದು ಹೊರಟ ಹೆಂಗಸರ ಸಾಲು ಕಂಡಿತೆಂದರೆ ಯಾರದ್ದೋ ಮನೆಯ ರಾತ್ರಿಯ ನವರಾತ್ರಿ ಪೂಜೆಗೆಂದು ಹೊರಟಿದ್ದಾರೆ ಎಂದೇ ಅರ್ಥ.
ಶಾಲೆಗೆ ಹೋಗುವ ಸಮಯಕ್ಕೆ ಒಂದೊಂದು ಹಬ್ಬವೂ ಒಂದೊಂದು ಸಂಭ್ರಮ ತರುತ್ತಿತ್ತು, ಚೌತಿ, ಚಕ್ಕುಲಿ ಪಂಚಕಜ್ಜಾಯಕ್ಕೇ ನೆನಪಾದರೆ, ದಸರಾ ಎಂದರೆ ದಿನಕ್ಕೊಂದು ರೀತಿಯ ನೈವೇದ್ಯದ ಭಕ್ಷಗಳ ನೆನಪು, ಅದರಲ್ಲಿಯೂ ಸರಸ್ವತಿ ಪೂಜೆಯ ದಿನದಂದು ಮಾಡುವ ಎರೆಯಪ್ಪ ನೆನಪಾದರೆ ಈಗಲೂ ಅದಕ್ಕೆಂದೇ ವಿಶೇಷವಾದ ಬಾಣಲಿಯ ವಿನ್ಯಾಸ ಸದಾ ಕುತೂಹಲ. ದೋಸೆಯ ಕಾವಲಿಯಂತಿರದೆ ಮದ್ಯದಲ್ಲಿ ಗುಂಡಿಯಾಕಾರದಲ್ಲಿ ಒಂದು ಲೋಟದಷ್ಟು ಎಣ್ಣೆ ಹಿಡಿಯುವ ಬಟ್ಟಲು ಗಾತ್ರದ ಬಾಣಲಿಯನ್ನ ನೋಡುವುದೇ ಕೌತುಕ ಆಗ. ಸರಸ್ವತಿ ಪೂಜೆಯ ದಿನದ ನೈವೇದ್ಯಕ್ಕೆ ನೆನೆಸಿಟ್ಟ ಅಕ್ಕಿಯನ್ನು ಗಟ್ಟಿಯಾಗಿ ರುಬ್ಬಿ ಅದಕ್ಕೆ ಬೆಲ್ಲವನ್ನು ಹಾಕಿ ಅದರ ಮಿಶ್ರಣದಲ್ಲಿ ಎರೆಯಪ್ಪ ಮಾಡುತ್ತಿದ್ದರು. ಸರಸ್ವತಿ ಪೂಜೆಯೆಂದರೆ ತಲೆತಲಾಂತರದಿಂದ ಮನೆಯಲ್ಲಿ ಪೂಜೆ ಮಾಡುತ್ತಿದ್ದ ರಾಮಾಯಣ, ಜೈಮಿನಿ ಭಾರತ, ಶ್ರೀಧರ ಸ್ವಾಮಿಗಳ ಚರಿತ್ರೆ, ಮನೆಯಲ್ಲಿ ಲೆಕ್ಕ ಪತ್ರ ಬರೆದಿಡುತ್ತಿದ್ದ ಪುಸ್ತಕದ ಜೊತೆಯಲ್ಲಿಯೇ ಮನೆಯ ಮಕ್ಕಳ ಪುಸ್ತಕಗಳು ಜೊತೆ ಇರುತ್ತಿತ್ತು, ಪೂಜೆ ಮುಗಿಸಿ ಅಜ್ಜ ಒಂದೆರೆಡು ಸಾಲು ಸರಸ್ವತಿ ದೇವಿ,ಗಣಪತಿ ಸ್ತುತಿ ಬರೆದು, ಎಲ್ಲರಿಗೂ ಬರೆದು ನಮಸ್ಕಾರ ಮಾಡಲು ಹೇಳಿದರೆ, ನಮಗೆಲ್ಲ ಪೂಜೆಗಿಂತ ಹೆಚ್ಚು ಆಸಕ್ತಿ ಎರೆಯಪ್ಪ ತಿನ್ನುವುದರಲ್ಲಿ.

ಅಜ್ಜಿ ನವರಾತ್ರಿ ಆರಂಭವಾಗುವ ಮೊದಲು ಅಟ್ಟದಿಂದ ಎರೆಯಪ್ಪದ ಬಾಣಲಿ ಕೆಳಗೆ ಇಳಿಸಿ, ಅದಕ್ಕೆ ಷೋಡಶೋಪಚಾರ ಮಾಡಿ ಎರೆಯಪ್ಪ ಮಾಡಲು ಅಣಿಗೊಳಿಸುತ್ತಿದ್ದರು. ಅದರ ಆಕಾರ ನೋಡಿಯೇ ನಾವೆಲ್ಲ ಅದರ ಸುತ್ತ ಕುಳಿತು, ಮುಟ್ಟಿ ನೋಡಿ ಸಂಭ್ರಮಿಸುತ್ತಿದ್ದೆವು. ನನ್ನ ಅಜ್ಜನ ಮನೆಯಲ್ಲಿ ಇರುವ ತಾಮ್ರದ ಈ ಬಾಣಲಿ ಮುತ್ತಜ್ಜನ ಕಾಲದಾಗಿದ್ದು, ಈಗಲೂ ಅದನ್ನು ಜತನದಿಂದ ಇಟ್ಟಿದ್ದಾರೆ. ಮೊನ್ನೆ ಸರಸ್ವತಿ ಪೂಜೆಯ ದಿನದಂದು ಅತ್ತೆ ನೈವೇದ್ಯಕ್ಕೆಂದು ಮಾಡಿದ ಎರೆಯಪ್ಪದ ಫೋಟೋ ನೋಡಿ ಇವೆಲ್ಲವೂ ನೆನಪಿಗೆ ಬಂತು.
ಮದುವೆಯ ನಂತರ ನಮ್ಮ ಮನೆಯಲ್ಲಿಯೇ ನವರಾತ್ರಿ ಇರುವುದರಿಂದ ಹಬ್ಬಕ್ಕೆಂದು ಅಜ್ಜನ ಮನೆಗೆ ಹೋಗುವ ಪರಿಪಾಠ ಬಿಟ್ಟೇ ಹೋಯಿತು. ಅಲ್ಲಿಯ ಪದ್ಧತಿಗೂ ಸಾಗರದ ಕಡೆಯ ಪದ್ಧತಿಗೂ ವ್ಯತ್ಯಾಸ ಇರುವುದರಿಂದ ಕೆಲವೊಂದು ಸಣ್ಣ ಪುಟ್ಟ ಸಂಭ್ರಮಗಳಲ್ಲಿ ಭಾಗಿಯಾಗುವುದು ಕಳೆದುಕೊಂಡಂತೆ ಭಾಸವಾದರೂ, ನವರಾತ್ರಿ ಕಳೆದು ವಾರದ ಒಳಗೆ ತವರು ಮನೆಗೆ ಹೋದರೆ, ಅತ್ತೆ ಅಟ್ಟಕ್ಕೆ ಕಾವಲಿಯನ್ನು ಸೇರಿಸುವ ಮುನ್ನ ಮತ್ತೆ ಎರೆಯಪ್ಪ ಮಾಡಿಕೊಟ್ಟು ಅದರ ಸಿಹಿಯನ್ನು ಈಗಲೂ ಸಂಭ್ರಮಿಸುವಂತೆ ಮಾಡುವುದು ಕುಶಿಯ ಸಂಗತಿಯೇ ಸರಿ.
ಹಬ್ಬಗಳು ಕಾಲಕಾಲಕ್ಕೆ ಬದಲಾದರೂ ಕೆಲವು ಮನೆಗಳಲ್ಲಿ ಇಂದಿಗೂ ಹಿಂದಿನ ಪರಂಪರೆ ಮುಂದುವರೆದಿದೆ. ನನ್ನ ಮಕ್ಕಳೂ ಸೇರಿದಂತೆ ಈಗಿನ ಹೆಚ್ಚಿನ ಮಕ್ಕಳು ಸಾಂಪ್ರದಾಯಿಕ ತಿನಿಸುಗಳಿಗೆ ಹೆಚ್ಚು ಆಸಕ್ತಿ ತೋರದೆ ಸಿಹಿಯೆಂದರೆ ಮೂಗು ಮುರಿಯುವುದೇ ಹೆಚ್ಚು. ಹೊಸತನ್ನು ಅಳವಡಿಸಿಕೊಳ್ಳುವ ಜೊತೆಯಲ್ಲಿಯೇ ಹಳೆಯದರ ಕೊಂಡಿ ಕಳಚದಂತೆ ನೋಡಿ ಕೊಳ್ಳುವ ಜವಾಬ್ದಾರಿ ಈಗಿನ ತಲೆಮಾರಿಗೆ ಬಂದಲ್ಲಿ ಪರಂಪರೆ, ಸಂಸ್ಕೃತಿ ಮುಂದುವರೆಯುತ್ತದೆ. ಇದು ಆಚಾರ ವಿಚಾರಕ್ಕೂ, ಆಹಾರ ವಿಹಾರಕ್ಕೂ ಸೈ.
- ಆತ್ಮ ಜಿ ಎಸ್
