ಮನುಷ್ಯ ಸಿಕ್ಕ ಸಿಕ್ಕಲ್ಲಿ ಕಸ, ಪ್ಯಾಸ್ಟಿಕ್, ದಾರಗಳನ್ನು ಬಿಸಾಡುವುದರಿಂದ ಎಷ್ಟೋ ಮೂಕಜೀವಿಗಳ ಪ್ರಾಣ ಕಳೆದುಕೊಳ್ಳುತ್ತಿವೆ, ಎಲ್ಲೆಂದರಲ್ಲಿ ಕಸ ಬಿಸಾಡುವ ಮೊದಲು ಮೂಕಜೀವಿಗಳ ಬಗ್ಗೆ ಚಿಂತಿಸಿ…
ಕಾಲಿಗೆ ನೂಲು ಸಿಲುಕಿ ಮರದಲ್ಲಿ ನರಳಾಡಿ ಪ್ರಾಣ ಬಿಡುತ್ತಿದ್ದ ಕೊಕ್ಕರೆಗಳನ್ನು ಯುವ ಸಂಚಲನ ತಂಡದಿಂದ ರಕ್ಷಣೆ ಮಾಡಲಾಯಿತು.
ದೊಡ್ಡಬಳ್ಳಾಪುರದ ನ್ಯಾಯಾಲಯದ ಆವರಣದಲ್ಲಿ ಮೊದಲು ನಾಲ್ಕು ಕೊಕ್ಕರೆಗಳು ಮರದಲ್ಲಿ ನೇತಾಡುತ್ತಾ ಪ್ರಾಣ ಬಿಟ್ಟಿದ್ದು, ಕೂಲಂಕುಶವಾಗಿ ಪರೀಕ್ಷಿಸಿದಾಗ ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿದವು. ಇದೇ ರೀತಿಯಲ್ಲಿ ತಾಲೂಕಿನ ಮೆಣಸಿ ಕೆರೆಯ ಆವರಣದಲ್ಲಿ ನಲವತ್ತಕ್ಕೂ ಹೆಚ್ಚು ಕೊಕ್ಕರೆಗಳು ಸತ್ತಿರುವುದು ಕಂಡುಬಂದಿತ್ತು. ಇದಕ್ಕೆ ಮುಖ್ಯ ಕಾರಣ ನಾವು ಬೇಡ ಎಂದು ಬಿಸಾಡುವ ದಾರದ ತುಂಡುಗಳು.
(ಚಿದು ವಾರನ್ ಅವರು ಕ್ಲಿಕ್ಕಿಸಿದ ಚಿತ್ರಗಳಿವು)
ಮನುಷ್ಯನಿಗೆ ಉಪಯೋಗಕ್ಕೆ ಬಾರದ ಎಲ್ಲವನ್ನು ವ್ಯರ್ಥವೆಂದು ನಿರ್ಧರಿಸುವುದರಿಂದ, ಹಾಗೂ ಕೆರೆಯ ಆವರಣವನ್ನು ಕಸದ ಗುಂಡಿ ಎಂದು ಪರಿಗಣಿಸಿರುವುದರಿಂದ. ಆಹಾರಕ್ಕಾಗಿ ಅಲೆದಾಡುವ ಕೊಕ್ಕರೆ ಗಳಿಗೆ ಬಾಯಿಗೆ ಆಹಾರ ಸಿಗುವಂತೆ ಕಾಲಿಗೆ ದಾರವು ಸಹ ಸಿಕ್ಕಿಕೊಳ್ಳುತ್ತದೆ, ಅದನ್ನು ಬಿಡಿಸಿಕೊಳ್ಳಲಾಗದ ಈ ಮೂಕ ಪಕ್ಷಿಗಳು ಮರದಲ್ಲಿ ಕೂತಾಗ ಕೊಂಬೆಗಳಿಗೆ ಸಿಲುಕಿ ನರಳಾಡಿ ಪ್ರಾಣ ಬಿಡುತ್ತಿವೆ.
ಯುವ ಸಂಚಲನ ತಂಡದ ವತಿಯಿಂದ ಕ್ಷೇತ್ರ ವೀಕ್ಷಣೆ ಮಾಡುತ್ತಿದ್ದಾಗ ಜೀವಂತವಾಗಿದ್ದ ಕೊಕ್ಕರೆಗಳು ಕೆರೆಯ ಆವರಣದಲ್ಲಿರುವ ಜಾಲಿ ಮರದಲ್ಲಿ ಸಿಲುಕಿ ನರಳಾಡುತ್ತಿರುವುದು ಕಂಡುಬಂದಿತ್ತು, ಅವುಗಳನ್ನು ರಕ್ಷಿಸಿ ಪಶುವೈದ್ಯರಿಂದ ಚಿಕಿತ್ಸೆಯನ್ನು ನೀಡಿ ಮನೆಯಲ್ಲಿ ಎರಡು ದಿನದ ಉಪಚಾರವನ್ನು ನೀಡಿ ಆಯಾಸ ಗುಣಮುಖವಾದ ನಂತರ ಮತ್ತೆ ಕೆರೆಗೆ ಬಿಡಲಾಯಿತು. ತದನಂತರ ವಾರಕ್ಕೆರಡು ಬಾರಿ ಕ್ಷೇತ್ರ ವೀಕ್ಷಣೆ ಮಾಡುವ ಮೂಲಕ ಸಿಲುಕುವ ಕೊಕ್ಕರೆಗಳನ್ನು ರಕ್ಷಿಸುವ ಪ್ರಯತ್ನ ಲಾಕ್ ಡೌನ್ ಸಮಯದಲ್ಲಿ ಯುವ ಸಂಚಲನ ತಂಡದ ವತಿಯಿಂದ ನಡೆಯಿತು.
ಸಾರ್ವಜನಿಕರಲ್ಲಿ ಮನವಿ :
ದಯಮಾಡಿ ದಾರದ ತುಂಡುಗಳನ್ನು ಜೊತೆಗೆ ಕಸವನ್ನು ಎಲ್ಲೆಂದರಲ್ಲಿ, ಮುಖ್ಯವಾಗಿ ಕೆರೆಯ ಆವರಣಗಳಲ್ಲಿ ಬಿಸಾಡಬೇಡಿ, ಇದರಿಂದ ಪ್ರಾಣಿ-ಪಕ್ಷಿಗಳಿಗೆ ತೊಂದರೆಯಾಗುತ್ತದೆ.
- ಚಿದು ವಾರನ್ (ಯುವ ಸಂಚಲನ).
