ಡಾ.ಶ್ರುತಿ ಬಿ.ಆರ್. ಅವರ ಕವನ ಸಂಕಲನ ಜೀರೋ ಬ್ಯಾಲೆನ್ಸ್ 2024 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದಿದ್ದು, ಒಟ್ಟು ಮೂವತ್ತೇಳು ಕವಿತೆಗಳಿವೆ. ಪುಸ್ತಕದ ಕುರಿತು ಭವ್ಯ ಟಿ.ಎಸ್ ಅವರು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕದ ಹೆಸರು : ಜೀರೋ ಬ್ಯಾಲೆನ್ಸ್
ಕವಯಿತ್ರಿ : ಶ್ರುತಿ ಬಿ.ಆರ್.
ಪ್ರಕಾರ : ಕವಿತೆ
ಪ್ರಕಾಶನ : ಅರ್ನವ ಸೂರ್ಯ ಪ್ರಕಾಶನ
ಡಾ.ಶ್ರುತಿ ಬಿ.ಆರ್. ಅವರ ಕವನ ಸಂಕಲನ ಜೀರೋ ಬ್ಯಾಲೆನ್ಸ್ 2024 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದಿದೆ. ಶ್ರುತಿ ಅವರಿಗೆ ಅಭಿನಂದನೆಗಳು. ಪುಸ್ತಕ ಕೇಳಿದಾಗ ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಒಟ್ಟು ಮೂವತ್ತೇಳು ಕವಿತೆಗಳ ಈ ಸಂಕಲನದ ಮೊದಲ ಕವಿತೆಯ ಸಾಲುಗಳೇ ಶ್ರುತಿಯವರ ಕಾವ್ಯದ ಗಟ್ಟಿತನ ಎಂತಹುದು ಎಂಬುದನ್ನು ಮನವರಿಕೆ ಮಾಡಿಸುತ್ತವೆ.
ಅಹಲ್ಯೆಯನುದ್ಧರಿಸುವ ರಾಮ ಲಕ್ಷ್ಮಣರೆಲ್ಲ ಊರು ಬಿಟ್ಟಿರಬೇಕು! ಮಾಯಾ ಜಿಂಕೆಗಳ ಬೆನ್ನತ್ತಿ ಮಹಾ ಸಾಗರಗಳ ಲಂಘಿಸುತ್ತಾ ಡಾಲರುಗಳ ಬೇಟೆಗಾಗಿ! ಕಳೆದ ಸೀತೆಯನುಡುಕಲು
ಸಮಯವಿಲ್ಲ! ಹಣದ ಹಿಂದೆ ಓಡುತ್ತಿರುವ ಪ್ರಸ್ತುತ ಜಗತ್ತಿನಲ್ಲಿ ಭಾವನಾತ್ಮಕ ಬಂಧಗಳು ಕಣ್ಮರೆಯಾಗುತ್ತಿರುವುದರ ಕುರಿತು ಈ ಕವಿತೆ ತರ್ಕಿಸುತ್ತದೆ. ಇನ್ನೊಂದು ಕಟುವಾಸ್ತವ ಸಾರುವ ಕವಿತೆ ಅಂತರ. ಸಾನಿಧ್ಯ, ಸಾಂತ್ವನ,ಸಂತಸ, ಸಂಗಾತಗಳೆಲ್ಲ ಮರೆತು ಮೇರೆಯಿಲ್ಲದ ಮೌನದಲ್ಲಿ ನಾವಿಂದು ಸಾಧಿಸಿದ್ದೇವೆ. ಜೊತೆಯಲ್ಲೇ ಇರುವ ಎರಡು ಜೀವಗಳು
ತಲುಪಬಹುದಾದ ಗರಿಷ್ಠ ಅಂತರ ಒಂದೇ ಸೂರಿನಡಿಯಲ್ಲಿದ್ದರೂ ಮಧ್ಯದಲ್ಲಿ ಎದ್ದು ನಿಲ್ಲುವ ಅಹಂನ ಗೋಡೆ ದಾಂಪತ್ಯದ ನವಿರು ಭಾವಗಳನ್ನೆಲ್ಲಾ ಹೊಸಕಿ ಮನಗಳ ನಡುವೆ ಹೇಗೆ ಅಂತರ ಸೃಷ್ಟಿಸುತ್ತಿದೆ ಎಂಬ ಸತ್ಯ ಇಲ್ಲಿದೆ.

ಹೀಗೊಂದು ಪ್ರೇಮ ಕವನ ಕವಿತೆಯಲ್ಲಿ ಪ್ರೀತಿ, ಪ್ರೇಮದ ಕಲ್ಪನೆಯ ಸುಂದರ ಜಗತ್ತು ವಾಸ್ತವದಲ್ಲಿ ಇರುವುದಿಲ್ಲ. ಪ್ರೀತಿ ಬಯಸುವ ಮುಗ್ಧ ಮನಸ್ಸನ್ನು ಹೇಗೆ ನಿರ್ಬಂಧಿಸಲಾಗುತ್ತದೆ ಎಂಬುದನ್ನು ಮನೋಜ್ಞ ಸಾಲುಗಳಲ್ಲಿ ಚಿತ್ರಿಸಿದ್ದಾರೆ. ಹದಿಹರೆಯದಲಿ ಬರೆಯಬಹುದು ಪ್ರೀತಿ ಪ್ರೇಮ ಕುರಿತು ಕಲ್ಪನೆಯ ಕವಿತೆ ಇಪ್ಪತ್ತರಂಚಿನಲಿ ಸಿಕ್ಕಾಗ ಕನಸಿನ ಹುಡುಗ
ಊರ ತುಂಬೆಲ್ಲಾ ಗುಡುಗು!
ಬೆಲೆಯೇರಿಕೆಯ ಬಿಸಿ ಜನಸಾಮಾನ್ಯರ ಬದುಕಿನ ಬೇಗೆಯಾಗಿ ಕಾಡುವ ಬಗೆಯನ್ನು ಜೀರೋ ಬ್ಯಾಲೆನ್ಸ್ ಕವಿತೆ ತಿಳಿಸುತ್ತದೆ. ಏರುತ್ತಿರುವ ದರಗಳೊಂದಿಗೆ ಸೆಣೆಸಿ ಸೋತು
ಏರಿದ್ದು ಇಳಿದೀತೆಂದು ನಿರೀಕ್ಷಿಸುತ್ತೇನೆ!! ಸಾಲಕೊಟ್ಟ ಸ್ನೇಹಿತರು ರಸ್ತೆಯಲ್ಲಿ ಕಂಡಾಗ ಅಪ್ರಯತ್ನವಾಗಿ ಮುಖಮರೆಸಿ ಅಡಗುತ್ತೇನೆ… ಹೆಣ್ಣೊಬ್ಬಳು ವೇಶ್ಯೆಯಾದಾಗ ಅವಳ ಇತಿಹಾಸವನ್ನೇ ಜಗಿ ಜಗಿದು ಅವಳತ್ತಲೇ ಉಗಿಯುವ ಜನರು ಮಗು ಸಮೇತಳಾಗಿ ಅನಾಥ ಸ್ಥಿತಿಯಲ್ಲಿ ಹಸಿವು,ಕಾಯಿಲೆಗಳಿಂದ ಬಳಲುತ್ತಿರುವುದನ್ನು ಕಂಡು ಕಾಣದಂತೆ ಜಾಣ ಕುರುಡು, ಜಾಣ ಮೌನ ಧರಿಸಿರುತ್ತಾರೆ ಎಂಬ ಕಹಿ ವಾಸ್ತವದ ಕವಿತೆ ಜನ ಮಾತನಾಡಲಿಲ್ಲ.
ರಾತ್ರಿಯಿಡೀ ಸುರಿದ ಮಳೆ ಶೀತದಿಂದ, ಹಸಿವಿನಿಂದ ಅವಳು, ಅವಳ ಮಗು ಬೀದಿ ಹೆಣವಾದರು! ಕಾರ್ಪೋರೇಷನ್ ಶವದ ಗಾಡಿ ಕೃಶ ದೇಹಗಳ ಹೊತ್ತೊಯ್ದಿತ್ತು. ಆಗಲೂ ಜನ ಒಂದೂ ಮಾತನಾಡಲಿಲ್ಲ!!
ಹೆಣ್ಣಿನ ಮಂದಹಾಸ ತುಂಬಿದ ಮೊಗದ ಹಿಂದಿರುವ ನೂರು ನೋವಿನ ಕತೆಗಳು ಯಾರ ಅರಿವಿಗೂ ನಿಲುಕಲಾರವು ಎಂಬುದು ಒಳ ಹೊರಗು ಕವಿತೆಯಲ್ಲಿ ಅಡಕವಾಗಿದೆ. ಶಾಂತವಾಗಿ ಕಾಣುವ ಮೊಗಕ್ಕೆ ಮರುಳಾದಿರೇನು? ಅಂತರಂಗದ ಅಗ್ನಿ ಪರ್ವತದ ಜ್ವಾಲೆಯಲ್ಲಿ ಬೆಂದುಹೋದ ನಲ್ಮೆಯ ಕನಸುಗಳ ಕಥೆಗಳೆಷ್ಟೋ!
ನೀವೊಂದಿಷ್ಟು ದೂರವೇ ನಿಲ್ಲಿ ಕಿಡಿಹಾರಿ ಸುಟ್ಟೀತು ನಿಮ್ಮನ್ನೂ!! ಹೀಗೆ ಶ್ರುತಿಯವರ ಬಹುತೇಕ ಕವಿತೆಗಳು ಹೆಣ್ಮನದ ತಾಕಲಾಟಗಳು, ಸಮಾಜದ ಮಧ್ಯಮ ಮತ್ತು ಕೆಳವರ್ಗದ
ಜನರ ದುಃಖ ದುಮ್ಮಾನಗಳನ್ನು ಪ್ರತಿಬಿಂಬಿಸುತ್ತವೆ.ಬದುಕಿಗೆ ಬಹಳ ಹತ್ತಿರವೆನಿಸುವ ಕವಿತೆಗಳಿಂದ ಆಪ್ತರಾಗುತ್ತಾರೆ.
ತವರಿನಲ್ಲಿ ಹೆಣ್ಣೊಬ್ಬಳು ತಾನು ಬೆಳೆದ ಮನೆಯಲ್ಲಿ ತನ್ನ ನೆನಪಿನ ಕುರುಹುಗಳನ್ನು ಹೇಗೆಲ್ಲಾ ಉಳಿಸಿ ಬಂದಿರುತ್ತಾಳೆ.ಅವಳು ಮದುವೆಯಾಗಿ ಹೋಗಿ ಮರಳಿ ತವರಿಗೆ ಬಂದಾಗ ತಮ್ಮ ಗುರುತನುಳಿಸದ ಆ ನೆಲದ ನಿರ್ಲಕ್ಷ್ಯದ ನಡುವೆಯೂ ಆ ಮನೆಗಾಗಿ ತಮ್ಮ ರಾಶಿ ಪ್ರೀತಿ ಸುರಿದು ಬರುತ್ತಾರೆ ಎಂಬ ಭಾವವಿರುವ ಗುರುತುಗಳು ಉಳಿದಿಲ್ಲ ಎಂಬ ಕವಿತೆ ಗೊತ್ತೇ ಆಗದಂತೆ ಮನದೊಳಗೆ ಆವರಿಸಿ ಕೂರುತ್ತದೆ. ಶ್ರುತಿಯವರ ಕವಿತೆಗಳಲ್ಲಿ ಪದಗಳ ಆಡಂಬರವಿಲ್ಲ.

ದೀರ್ಘತೆಯೂ ಇಲ್ಲ.ಪುಟ್ಟ ಪುಟ್ಟ ಕವನಗಳು ಸರಳ ಸಾರ್ಥಕ ಪದಗಳಿಂದ ಜೀವನದ ಹಲವು ಮುಖಗಳನ್ನು ಅನಾವರಣಗೊಳಿಸುತ್ತಾ ಸಾಗುತ್ತವೆ. ಅಲ್ಲಲ್ಲಿ ಒಲವ ಕವಿತೆಗಳಾದ ಸವಿಭಾವಗಳ ಸೋನೆ,ಕಡಲ ಹುಡುಗನಿಗೊಂದು ಸುನೀತಾ, ಮೊದಲು ಮತ್ತು ನಂತರ ಮನಕೆ ಕಚಗುಳಿ ನೀಡುತ್ತವೆ.
ಕ್ಷಮಿಸಿ ನಾನು ಅಂತವಳಲ್ಲ, ಅಕ್ಕನ ಮೊಹೆಂಜೊದಾರೊ, ನಾವೆ ತಲುಪದ ತೀರ, ಅವಳ ವಿಳಾಸವಿಲ್ಲ ಮೊದಲಾದ ಕವಿತೆಗಳು ಅವಳ ಬದುಕಿಗಂಟಿದ ಜಡತನ ಮತ್ತು ಅದರಿಂದ ಹೊರಬಂದು ಅವಳು ಬದಲಾವಣೆಗಳಿಗೆ ತೆರೆದುಕೊಳ್ಳಬೇಕು ಎಂಬ ಸಂದೇಶ ನೀಡುವಲ್ಲಿ ಸಫಲವಾಗಿವೆ.
ಶ್ರುತಿಯವರು ಜೀರೋ ಬ್ಯಾಲೆನ್ಸ್ ಮೂಲಕ ಕನ್ನಡದ ಸಹೃದಯರ ಹೃದಯದ ಬಾಗಿಲು ತಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ಅವರಿಂದ ಇನ್ನಷ್ಟು ಉತ್ಕೃಷ್ಟ ಕೃತಿಗಳನ್ನು ಖಂಡಿತ ನಿರೀಕ್ಷಿಸಬಹುದು. ಸಾಹಿತ್ಯ ಲೋಕದ ಪಯಣದಲ್ಲಿ ಮತ್ತಷ್ಟು ಪ್ರಶಸ್ತಿಗಳು ಶ್ರುತಿಯವರ ಮುಡಿಗೇರಲಿ ಎಂದು ಶುಭ ಹಾರೈಸುತ್ತೇನೆ.
- ಭವ್ಯ ಟಿ.ಎಸ್ – ಶಿಕ್ಷಕರು, ಹೊಸನಗರ
