ಸೌಟು ಹಿಡಿವ ಕೈ ಕೆಮರಾ ಹಿಡಿದಾಗ…

ಇಂದು ಗೃಹಿಣಿ ಬರೀ ಅಡುಗೆ ಮನೆ ಬಂಧಿಯಲ್ಲ. ಮನೆ ಹೊರಗೂ ಓಡಾಡಿ ತನ್ನ ಕ್ರಿಯಾಶೀಲತೆಯನ್ನು ವಿಸ್ತರಿಸಿಕೊಳ್ಳುತ್ತಿದ್ದಾಳೆ. ಹಾಗಂತ ಆಕೆ ಲೇಡಿಸ್‌ ಕ್ಲಬ್ಬು, ಕಿಟ್ಟಿ ಪಾರ್ಟಿ, ಪ್ರವಾಸ ಇಷ್ಟರಲ್ಲೇ ಸುತ್ತು ಹೊಡೆಯಬೇಕಿಲ್ಲ. ತನ್ನ ಆಸಕ್ತಿಗಳ ಹರವನ್ನು ವಿವಿಧ ಕ್ಷೇತ್ರಗಳಿಗೂ ಚಾಚಿಕೊಂಡು ಗಟ್ಟಿಣಿಗಿತ್ತಿ ಅನ್ನಿಸಿಕೊಳ್ಳಬಲ್ಲಳು ಎಂಬುದಕ್ಕೆ ಕೆಳದಿಯ ಶ್ರೀಮತಿ ರೋಹಿಣಿ ಹಾರೋಗದ್ದೆಯವರೇ ಸಾಕ್ಷಿ. ಇವರ ಪತಿ ಶ್ರೀ ನಾಗರಾಜ ಅವರು ಕರ್ನಾಟಕ ವಿದ್ಯುತ್‌ ನಿಗಮದ ವಾರಾಹಿ ಯೋಜನೆಯಲ್ಲಿ ಉದ್ಯೋಗಿ. ರಂಗಭೂಮಿಯಲ್ಲಿ ಆಸಕ್ತಿ ಇರುವ ಕುಟುಂಬದಿಂದ ಬಂದ ರೋಹಿಣಿ ಅವರೂ ನಾಟಕದ ಸೆಳೆತಕ್ಕೊಳಗಾದವರು. ಕಲೆ ಎಲ್ಲರನ್ನೂ ಕೈಮಾಡಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಅದು ಆಯ್ಕೆ ಮಾಡಿಕೊಳ್ಳುತ್ತದೆ ಎಂಬ ಮಾತು ಅಕ್ಷರಶಃ ನಿಜ. ರೋಹಿಣಿಯವರಿಗೆ ಚಿತ್ರ ಕಲೆಯೂ ಒಲೆದಿದೆ. ಗ್ಲಾಸ್‌ ಪೇಂಟಿಂಗ್‌ ನಲ್ಲೂ ಇವರು ಅಪರೂಪದ ಕೆಲಸ ಮಾಡಿದ್ದಾರೆ. ಫೋಟೋಗ್ರಫಿ ಇವರ ಅತ್ಯಂತ ಆಸಕ್ತಿಯ ಹವ್ಯಾಸ. ಇವರು ಕೆಮರಾ ಕಣ್ಣಿಂದ ಪ್ರಕೃತಿಯನ್ನು ಹೇಗೆ ನೋಡುತ್ತಾರೆ ಎಂಬುದೇ ಆಸಕ್ತಿಯ ವಿಷಯ. ಇಲ್ಲಿ ರೋಹಿಣಿಯವರು ಕ್ಲಿಕ್ಕಿಸಿದ ಒಂದಷ್ಟು ಚಿತ್ರಗಳನ್ನು ನಿಮಗಾಗಿ ಪ್ರಕಟಿಸಿದ್ದೇವೆ. ಇವರದು ಅಂತರ್‌ ರಾಷ್ಟ್ರೀಯ ಗುಣಮಟ್ಟದ ಯಾವ ಪೋಟೋಗ್ರಾಫರ್‌ ಗೂ ಕಡಿಮೆಯಿಲ್ಲದ ಪ್ರತಿಭೆಯೆಂದು ಅರಿವಾಗುತ್ತದೆ. ಈ ಬಗ್ಗೆ ಆಕೃತಿ ಮ್ಯಾಗಝಿನ್‌ ಅವರನ್ನು ಮಾತಾಡಿಸಿದಾಗ ರೋಹಿಣಿ ಹೇಳಿದ್ದಿಷ್ಟು.

ಗೃಹಿಣಿ ರೋಹಿಣಿ ಹಾರೋಗದ್ದೆಯವರು ಹೇಳುತ್ತಾರೆ-

ಸುಮ್ಮನೆ ಪೋಟೋ ಕ್ಲಿಕ್‌ ಮಾಡೋ ಖಯಾಲಿ ಕೆಲ ವರ್ಷಗಳ ಹಿಂದೆ. ನನ್ನವರು ಒಂದು ಸೋನಿ ಸೈಬರ್‌ ಶಾಟ್‌ ಕೊಡಿಸಿದಾಗಿನಿಂದ ಶುರು ಆಯ್ತು. ಆ ಫೋಟೋಗಳಿಗೆ ಒಂದಷ್ಟು ಅಡಿಬರಹ ಕೊಟ್ಟು ಫೇಸ್‌ ಬುಕ್ಕಿಗೆ ಹಾಕೋದು ಶುರು.ಅವನ್ನು ನೋಡಿದ ಮನೆ ಜನ, ಗಂಡ,ಸಂಬಂಧಿಕರು, ಸ್ನೇಹಿತರು ಚನ್ನಾಗಿವೆ ಎಂದು ಹೇಳಿದ್ದೇ ಬಂತು. ಈ ಹವ್ಯಾಸಕ್ಕೆ ಕುಮ್ಮಕ್ಕು ಸಿಕ್ತು. ಸ್ವಲ್ಪ ಫೋಟೋಗ್ರಫಿ ಕಲಿತರೆ ಒಳ್ಳೇದು ನೋಡು, ಚನ್ನಾಗಿರುತ್ತೆ ಅಂತ ಪತಿರಾಯರು, ಮಗ ಹೇಳಿದಾಗ ಹೌದಲ್ಲ ಅನಿಸಿತು. ಸಾಗರದ ಫೋಟೋಗ್ರಾಫಿಕ್‌ ಕಲಾ ಶಿಬಿರಕ್ಕೆ ಕಳಿಸೇಬಿಟ್ಟರು. ಡಿಎಸ್‌ಐಆರ್‌ ಕೆಮರಾ ಕೊಡಿಸಿ, ನನ್ನ ಫೋಟೋ ತಗೆಯುವ ಚಟಕ್ಕೆ ಒಳ್ಳೇ ದಾರಿ ಮಾಡಿಕೊಟ್ರು. ಹಾಗೆಯೇ ಶಿಬಿರದಲ್ಲಿ ಪೋಟೋಗ್ರಫಿಯ ಬಗ್ಗೆ ಒಳ್ಳೆಯ ಪಾಠ, ಕಲಿಕೆ … ನನ್ನ ಗುರುಗಳಾದ ಶ್ರೀ ಕೆ.ಎಸ್‌.ರಾಜಾರಾಮ್‌ ಕಿಲಾರ ಶ್ರೀ ಎ.ಜಿ. ಲಕ್ಷ್ಮೀನಾರಾಯಣ ಅಮಚಿ, ಶ್ರೀ ಗರಣಿ ವೆಂಕಟೇಶ ಎಲ್ಲರಿಂದ ಕಲಿಕೆ. ಅಲ್ಲಿಂದ ಶುರು ಆಯಿತು ಮತ್ತೊಂದು ಮೆಟ್ಟಿಲು. ಫೋಟೋ ಸ್ಪರ್ಧೆಗಳಿಗೆ ಫೋಟೋ ಕಳಿಸು ಎಂದು ಗುರುಗಳು ಹೇಳುತ್ತಿರುವುದು ನನ್ನ ನನ್ನ ಆತ್ಮ ವಿಶ್ವಾಸ ಹೆಚ್ಚಿಸಿದೆ. ಓರ್ವ ಗೃಹಿಣಿಯಾಗಿ ಛಾಯಾಗ್ರಹಣದ ಅಂಗಳ ಕಠಿಮವಾದದ್ದೇ ಸರಿ. ಒಬ್ಬಳೇ ಎಲ್ಲೆಂದರಲ್ಲಿ ತಿರುಗಾಟ ಕಷ್ಟ ಸಾಧ್ಯ. ಇಂಥದ್ದೇ ಒಂದಷ್ಟು ಸೀಮಿತ ವ್ಯಾಪ್ತಿಯಲ್ಲಿ ನನ್ನ ಹವ್ಯಾಸವನ್ನು ಕೊಂಡೊಯ್ಯಬೇಕಾಗಿದೆ. ಛಾಯಾಗ್ರಹಣವಲ್ಲದೆ, ಕತೆ, ಕವನ, ಅಂಕಣ ಬರಹ, ನಿರೂಪಣೆ, ನಾಟಕದಲ್ಲಿ ಅಭಿನಯ, ಗ್ಲಾಸ್‌ ಪೇಂಟಿಂಗ್‌, ಮೊದಲಾದ ಚಟುವಟಿಕೆಗಳನ್ನು ಕೂಡಾ ಮುಂದುವರೆಸಿಕೊಂಡು ಹೋಗಬೇಕಾಗಿದೆ. ಪ್ರೋತ್ಸಾಹಿಸುವ ಮನಸ್ಸುಗಳಿಗೆ, ನನ್ನ ಪತಿ, ಮಗ, ಗುರುಗಳಿಗೆ ನಾನು ಚಿರಋಣಿ.

#ಛಯಚತರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading