2021 ಎಂಬ ಕೆಟ್ಟ ವರ್ಷದ ಪುಟ್ಟ ಹಿನ್ನೋಟ….




ಹಳೆವರ್ಷದ ಕಹಿ ಅನುಭವದ ಜೊತೆಗೆ ಹೊಸ ಭರವಸೆ ಹೊತ್ತು ೨೦೨೨ ಕ್ಕೆ ಕಾಲಿಟ್ಟಿದ್ದೇವೆ. ಲೇಖಕರಾದ ಹಿರಿಯೂರು ಪ್ರಕಾಶ ಅವರು ಹಳೆಯ ವರ್ಷದ ಒಂದು ಹಿನ್ನೋಟವನ್ನು ಲೇಖನದಲ್ಲಿ ಹಿಡಿದಿಟ್ಟಿದ್ದಾರೆ.ಮುಂದೆ ಓದಿ..

ಪ್ರತೀ ಬಾರಿ ಡಿಸೆಂಬರ್ ಮುವ್ವತ್ತೊಂದು ಕಳೆದು #ಜನವರಿ ಒಂದು ಬಂತೆಂದರೆ ಸಾಕು ! ಹ್ಯಾಪ್ಪಿ ನ್ಯೂ ಇಯರ್ ಎಂಬ ಯಾಂತ್ರಿಕ ಶಬ್ದ ಹಾಗೂ ಅದರೊಟ್ಟಿಗಿನ ತಾಂತ್ರಿಕ ಗದ್ದಲದೊಂದಿಗೇ ಫ಼ಾರ್ಮಲ್ ಆದ ಶುಭಾಶಯಗಳ ಮಹಾಪೂರವೇ ನಿರಂತರವಾಗಿ ಪ್ರವಹಿಸುತ್ತಲೇ ಇರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಂತೂ, ಮೂರು ಹೊಟ್ಟೆಗಾಗುವಷ್ಟು ಒಂದೇ ಹೊಟ್ಟೆಯಲ್ಲಿ ತುಂಬಿಸಿ ಅದು ಜೀರ್ಣವಾಗದೇ ಒಮ್ಮೆಲೇ ವಕ್ ಎಂದು ಕಕ್ಕಿ ಹೊರಹಾಕುವ ಸೀನ್ ಗಳಂತೆ ಸಂ”ವೇಷ” ದ ಸಂದೇಶಗಳ ಕ್ರಸ್ಟ್ ಗೇಟು ಕಿತ್ತರಿದು ಒತ್ತರಿಸುತ್ತಾ ನುಗ್ಗುತ್ತವೆ. ಎಲ್ಲಿ‌ ನೋಡಿದರೂ ಹೊಸ ವರ್ಷದ ಶುಭಾಶಯಗಳ ಮೆಸೇಜ್ ಗಳು, ಬಣ್ಣಬಣ್ಣದ‌ ಗ್ರೀಟಿಂಗ್ ಗಳು, ಆ ಗ್ರೀಟಿಂಗ್ಸ್ ನಲ್ಲಿ ಬದುಕಿನ ಪ್ರೀತಿಯ, ಪ್ರೇಮದ, ‌ಭರವಸೆಯ ನಾಳಿನ‌ ಭವಿಷ್ಯದ ಕುರಿತಾದ ಸುಂದರ ಪದಗಳ ಗ್ರೀಟಿಂಗುಗಳೂ ರಾರಾಜಿಸುತ್ತಿರುತ್ತವೆ.

ಫೋಟೋ ಕೃಪೆ : lokmat

ಇಷ್ಟೆಲ್ಲಾ ರಂಗುರಂಗಿನ ರಂಗೋಲಿಯ‌ ಹಿನ್ನೆಲೆಯಲ್ಲಿ #ಹೊಸವರ್ಷದ ಚಂದದ ಗಂಭೀರವಾದ ಅರ್ಥವನ್ನು ಹುಡುಕಲು‌ ಹೊರಟರೆ ವಾಸ್ತವದಲ್ಲಿ ಅದರಿಂದ ನಿರಾಶೆಯೇ ಹೆಚ್ಚು ! ಹತ್ತಾದ ಮೇಲೆ ಹನ್ನೊಂದು ಎಂಬಂತೆ, ಇದೂ ಒಂದು ದಿನವಷ್ಟೇ ಎಂಬ ಸತ್ಯ ನಿಧಾನಕ್ಕೆ ಅನಾವರಣವಾಗಿ ಬಿಡುತ್ತದೆಯೆನ್ನುವುದು ಸಿನಿಕತನವೋ ,ಕಹಿಸತ್ಯವೋ ಅಥವಾ ನಿರಾಶವಾದವೋ….. ಅದನ್ನು ಸಮಯವೇ ಹೇಳಬೇಕು. ಇಷ್ಟೆಲ್ಲಾ ಕಹಿಸತ್ಯ- ಸಿಹಿಮಿಥ್ಯಗಳ ನಡುವೆ ಜನವರಿ ಒಂದರ ಔಪಚಾರಿಕ ಶುಭಾಶಯ ವಿನಿಮಯ ತಪ್ಪಲ್ಲ- ತಪ್ಪಿಯೂ ಇಲ್ಲOfcourse….ತಪ್ಪೂ ಅಲ್ಲ..!
ಬಹುತೇಕರು ಹೊಸವರ್ಷದ ಶುಭಾಶಯಗಳನ್ನು‌ ” #ಹ್ಯಾಪ್ಪಿ‌_ನ್ಯೂ_ಇಯರ್ ” ಎಂದು ಹೇಳಿ ಮುಗುಳು ನಕ್ಕರೆ ಅಥವಾ ಆ ತರಹದ ಎಮೋಜಿಯನ್ನು ವಾಟ್ಸಪ್ ನಲ್ಲಿ ಒಂದೇ ಸಮನೆ ಒಗಾಯಿಸಿದರೆ ಹಾಗೂ ಆ ಮೆಸೇಜಿಗೆ ಅತ್ತ ಕಡೆಯಿಂದ ಒಂದು ಥಂಸಪ್ ಎಮೋಜಿ ರಿಟರ್ನ್ ಬಂದಲ್ಲಿ ಮುಗೀತು… ಹೊಸ ವರ್ಷದ ಶುಭಾಶಯ ವಿನಿಮಯವಾದಂತೆ ! ಇತ್ತೀಚಿನ ಟ್ರೆಂಡ್ ಎಂದರೆ ಇಂತಹಾ ವಿಶೇಷ ದಿನದಲ್ಲೂ ಬಿಗುಮಾನದಿಂದ ವಿಭಿನ್ನವಾಗಿ ಶುಭಾಶಯ ಹೇಳುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿರುವುದು ! ಅಂದರೆ ಎಲ್ಲರೂ ಹೊಸ ವರ್ಷದ ಶುಭಾಶಯ ಗಳು ಎಂದರೆ ಕೆಲವರು ” ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು ” ಎಂದು ಕೊಂಕು ತೆಗೆದು ತಮ್ಮದೇ ಆದ ನಿಲುವನ್ನು ಎತ್ತಿ ಹಿಡಿಯುತ್ತಾರೆ. ಜನವರಿ ಒಂದರಂದು ಹೊಸವರ್ಷ ಆಚರಿಸುವುದು ಪಾಶ್ಚಾತ್ಯರ ಸಂಸ್ಕೃತಿ ಎಂಬುದು ಇಂಥವರ ವಾದ. ಇರ್ಲಿ ಬಿಡಿ ! ಇದೆಲ್ಲಾ ಸಾರ್ವತ್ರಿಕ .

ಈಗ ಈ ಎಲ್ಲಾ ಅಭಿವ್ಯಕ್ತಿಗಳನ್ನು ಅದರ ಪಾಡಿಗೆ ಬಿಟ್ಟು ವೈಯುಕ್ತಿಕವಾಗಿ ಕಳೆದ ವರ್ಷದತ್ತ ಸ್ವಲ್ಪ ಹಿನ್ನೋಟ ಹರಿಸುತ್ತಾ ಒಂದೇ ಸಾಲಿನಲ್ಲಿ ಹೇಳುವುದಾದರೆ 2021 ನನ್ನ ಪಾಲಿಗೆ ಅಂತಹಾ ಸಂತಸದಾಯಕ ವರ್ಷವಂತೂ ಅಲ್ಲ. ಬಹುತೇಕ ಹಿಂದಿನ ಎಲ್ಲಾ ವರ್ಷಗಳಲ್ಲೂ ನೋವು- ನಲಿವು, ಸುಖ- ದುಃಖ ಹಾಗೂ ಕಳೆದದ್ದು ಗಳಿಸಿದ್ದು ಸರಿಸಮಾನವಾಗಿಯೇ ಇರುತ್ತಿತ್ತು. ಆದರೆ ಕಳೆದ ವರ್ಷ ನನ್ನ ಪಾಲಿಗೆ ಕೆಲವು ಘಟನೆಗಳಿಂದಾಗಿ ಕರಾಳ ವರ್ಷವಾಗಿಯೇ ಉಳಿಯಿತು ! ಅಲ್ಲಿ ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು .

2021 ರಲ್ಲಿ ಯಥಾ ಪ್ರಕಾರ ಯಾವೊಂದು ಪ್ರಮುಖವಾದ ಬದಲಾವಣೆ ನನ್ನಲ್ಲಿ ಆಗಲೇ ಇಲ್ಲ. ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಆಯಿತೇ ಹೊರತು ನಾನಂದುಕೊಂಡ ಹಾಗೆ ಏನೂ ನೆಡೆಯಲಿಲ್ಲ ಅಥವಾ ನೆಡೆಯುವ ಹಾಗೆ ನಾನಂದುಕೊಳ್ಳಲೇ ಇಲ್ಲ.!

ಫೋಟೋ ಕೃಪೆ : google

ಜೀವನದಲ್ಲಿ ಒಮ್ಮೆ ಮನೆ ಕಟ್ಟಬೇಕೆಂಬ ಕನಸು ಕಳೆದವರ್ಷವೂ ಹಾಗೆಯೇ ಉಳಿಯಿತು. ಅಲ್ಲಲ್ಲಿ ಗಂಭೀರವಾದ ಪ್ರಯತ್ನಗಳಾದರೂ ಪ್ರಪಂಚದಲ್ಲಿ ನಾವು ವ್ಯವಹರಿಸುವ ವ್ಯಕ್ತಿಗಳೂ ಸಹ ನಮ್ಮಂತೆ ಹಣಕ್ಕಿಂತ ಸ್ನೇಹ ಸಂಬಂಧಗಳಿಗೆ ಬೆಲೆ ಕೊಡುತ್ತಾರೆಂಬ ನನ್ನ ಮುಠಾಳತನದ ತರ್ಕದಿಂದಾಗಿ ನಾನು ನಂಬಿಕೆಯಿಟ್ಟು ವ್ಯವಹರಿಸಿದ ಪ್ರಯತ್ನವೊಂದು ಕೊನೇ ಕ್ಷಣದಲ್ಲಿ ಹಣದ ಲಾಲಸೆಯವರ ಕೃತ್ಯದಿಂದಾಗಿ ವ್ಯರ್ಥವಾಗಿ ಮನೆ ಕಟ್ಟುವ ಕನಸು ಕನಸಾಗಿಯೇ ಉಳಿಯಿತು ! ಹಣದ ಮುಂದೆ ನಂಬಿಕೆ, ಮಾತು, ಪರಿಚಯ….ಇವೆಲ್ಲವೂ ಜಸ್ಟ್ ವೇಸ್ಟ್ ಎಂಬುದು ವೈಯುಕ್ತಿಕವಾಗಿ ಅನೇಕಬಾರಿ ಸಾಬೀತಾದ ವರ್ಷವಿದು.

ಕೊರೋನಾ ವೈರಸ್ ನ ಭಯಾನಕ ಕರಾಳತೆಯಿಂದಾಗಿ ಎಲ್ಲರ ಬಾಳಲ್ಲಿ ಆದ ಸಂಕಟ ನನ್ನನ್ನೂ ತಟ್ಟಿತು. ಇದು ಮಕ್ಕಳ ಉನ್ನತ ವಿಧ್ಯಾಭ್ಯಾಸದ ಅಮೂಲ್ಯ ಸಮಯವನ್ನು ಅನಾಮತ್ತಾಗಿ ಆಪೋಷನ ಮಾಡಿ ಅವರ ಯೋಜನೆಗಳನ್ನೇ ತಲೆಕೆಳಗು ಮಾಡಿಬಿಟ್ಟಿತು. ಇದು ಎಲ್ಲರಿಗೂ ಅನ್ವಯಿಸಿದರೂ ಬದುಕಿನ ಭವಿಷ್ಯ ಹೆಣೆಯುವ ಸೂಕ್ಷ್ಮ ಹಂತದಲ್ಲಿ ಹೀಗಾಗಿದ್ದು ಅವರಿಗೆ ನಿರಾಶೆಯನ್ನೇ ಹೊತ್ತು ತಂದಿತ್ತು.

ನನ್ನ ಅನೇಕ ಬರಹಗಳಲ್ಲಿ ಸ್ನೇಹ ಸಂಬಂಧಗಳ ಕುರಿತಾಗಿ ಬರೆದುಕೊಂಡಿದ್ದನ್ನು ತಾವೆಲ್ಲಾ ಗಮನಿಸಿದ್ದಿರಬಹುದು. ಮತ್ತೊಬ್ಬರ ಕಷ್ಟಕ್ಕಾಗುವ ಸ್ನೇಹಧರ್ಮದಂತೆ ಎಲ್ಲವನ್ನೂ ಒಳ್ಳೆಯದನ್ನಾಗಿ ನೋಡುವ ಎಲ್ಲರಲ್ಲೂ ಒಳ್ಳೆಯದನ್ನೇ ಕಾಣುವ ನನ್ನ ಪಾಲಿಸಿ ಕಳೆದ ವರ್ಷ ನನಗೇ ತಿರುಮಂತ್ರ ಹಾಕಿದ್ದು ಮಾತ್ರ ಮರೆಯಲಾಗದ ಘಟನೆ ! ಅತೀವ ಕಷ್ಟದಲ್ಲಿದ್ದು ದೇಹೀ ಎಂದು ಸಹಾಯ ಯಾಚಿಸಿದ ವ್ಯಕ್ತಿಗೆ ನನ್ನ‌ ಮಿತಿಯನ್ನೂ ಮೀರಿ ನಂಬಿಕೆಯಿಂದ ಸಹಾಯ ಮಾಡಿದ್ದರ ದುಷ್ಫಲ ಇಂದಿಗೂ ಅನುಭವಿಸುತ್ತಿದ್ದೇನೆ ! ಹಣದ ಸಹಾಯಕ್ಕೆ ಮುನ್ನ ನಿತ್ಯ ನೂರು ಬಾರಿ ಬರುತ್ತಿದ್ದ ಮೊಬೈಲ್ ಕರೆ ಹಣದೊಂದಿಗೆ ಇತರೆ ಸಹಾಯ ಪಡೆದ ನಂತರ ಆರು ತಿಂಗಳಿನಿಂದ ಬಂದ್ ! ಇತ್ತ ಹಣವೂ ಇಲ್ಲ, ಅತ್ತ ವಿಶ್ವಾಸವೂ ಇಲ್ಲ ! ನಂಬಿಕೆ ದ್ರೋಹದ ಸ್ವಯಂ ಅನುಭವ ಚೆನ್ನಾಗಿಯೇ ಆಯಿತು.

ದೇವರು ಅಂಥವರನ್ನು ಚೆನ್ನಾಗಿಟ್ಟಿರಲಿ.



ಇನ್ನು ಮಾಮೂಲಿನಂತೆ ಹೊಸವರ್ಷದಂದು ಹಾಕಿಕೊಂಡ ಅನೇಕ ಅಜೆಂಡಾಗಳ ಝಂಡಾಗಳು ಅಲ್ಲಲ್ಲಿ ಸ್ವಲ್ಪಕಾಲ ಅಲುಗಾಡಿದಂತೆ ತೋರಿದರೂ ಮೇಲೇರಲೇ ಇಲ್ಲ! ಹೀಗಾಗಿಯೇ ಯಾವ ಅಜೆಂಡಾಗಳನ್ನು ನಾನು ಈ ಬಾರಿ ಹೇರಿಕೊಂಡಿಲ್ಲ. ಆದರೆ ಏನನ್ನೂ ಅಂದುಕೊಳ್ಳದೇ ಹೇಳಿಕೊಳ್ಳದೇ ಕೆಲವೊಂದನ್ನು ಮಾಡಿತೋರಿಸುವ ಛಲವಂತೂ ಬಿಡೋಲ್ಲ. ಈ‌ ಮಧ್ಯೆ ನಾನೇ ರೂಢಿಸಿಕೊಂಡು ಬಂದ ಕೆಲವು ಧನಾತ್ಮಕ ಕ್ವಾಲಿಟಿಗಳಿಗೆ ಈ ವರ್ಷದ ಸೇರ್ಪಡೆಯೆಂದರೆ ಎಲ್ಲವನ್ನೂ “ಮುಂದೂಡುವಿಕೆ” (Procrastination) ಎಂಬ ನನ್ನ ಮೋಸ್ಟ್ ಡಾಮಿನೇಟಿಂಗ್ ಮತ್ತು ಡೆವಾಸ್ಟೇಟಿಂಗ್ ದುರ್ಬುದ್ದಿಯನ್ನು ಅರ್ಧದಷ್ಟಾದರೂ ಕಡಿಮೆ ಮಾಡಿಕೊಳ್ಳ ಬೇಕೆಂಬುದು ! ಈ ಗುಣದಿಂದಾಗಿ ನನ್ನ‌ ಬದುಕಿನ, ವಿವಿಧ ಹಂತಗಳಲ್ಲಿ ಅನೇಕ ಸುವರ್ಣ ಅವಕಾಶಗಳನ್ನು‌ ನಾನೇ ಕೈ ಚೆಲ್ಲಿ ಬಿಟ್ಟಿದ್ದೆ. ಇನ್ಮುಂದೆಯಾದರೂ ಮೈಗಂಟಿದ ಸೋಂಬೇರಿತನದಿಂದ ಮೈಕೊಡವಿ ಎದ್ದು ವೈಯಕ್ತಿಕ ಜೀವನದ ಬಹುತೇಕ ನಾಳೆ ಮಾಡುವ ಕೆಲಸಗಳನ್ನೂ ಇಂದೇ ಮಾಡುವ ರೂಢಿ ಬೆಳೆಸಿಕೊಳ್ಳುವ ಸಂಕಲ್ಪ ಮಾಡಲೇಬೇಕಿದೆ, ಮಾಡಿಯಾಗಿದೆ.

ಇನ್ನು…‌ಸಹಾಯ ಮಾಡಿಯೂ ನಿಷ್ಠುರ ಹೊತ್ತುಕೊಳ್ಳುವ ನನ್ನ ಅಪರೂಪದ ” #ಅಶ್ವಿನಿ_ನಕ್ಷತ್ರ ” ಯಥಾಪ್ರಕಾರ ಕಳೆದ ವರ್ಷವೂ ಉನ್ನತ ಸ್ಥಾನದಲ್ಲಿಯೇ ಇತ್ತು ! ಅನೇಕ ಸ್ನೇಹಿತರು, ಸಹೋದ್ಯೋಗಿಗಳು, ಬಂಧುಗಳು ಸುಮ್ಮನೆ ಯಾದರೂ ತಲೆ ಮೇಲೆ ಗೂಬೆ ಕೂರಿಸಲಿಲ್ಲವೆಂದರೆ ಅವರಿಗೆ ಸಮಾಧಾನವೇ ಇರೋಲ್ಲ. ಹೀಗಾಗಿ ನನ್ನ ಈ ಬೇರ್ಪಡಿಸಲಾಗದ ಅದೃಷ್ಟಕ್ಕೆ ವರ್ಷಗಳ ಹಂಗು ಉಂಟೇ…?

** ಮರೆಯುವ ಮುನ್ನ **

ಬಹುಶಃ ಕಳೆದ ವರ್ಷದ ಅಕ್ಟೋಬರ್ ಇಪ್ಪತ್ತೊಂಭತ್ತನೇ ತಾರೀಕು ಶುಕ್ರವಾರ ನನ್ನ ಪಾಲಿನ ಅತ್ಯಂತ ದುಃಖದ ದಿನ. ಸದಾ ನಗುಮೊಗದ ಮಾನವೀಯ ಮೌಲ್ಯಗಳ ರಾಯಭಾರಿಯಾಗಿದ್ದ ಅಣ್ಣಾವ್ರ ಕೊನೆಯ ಮಗ ಪವರ್ ಸ್ಟಾರ್ #ಪುನೀತ್_ರಾಜ್‍ಕುಮಾರ್ ನಮ್ಮನ್ನಗಲಿದ ದಿನವದು ! ಕನ್ನಡ ಚಿತ್ರರಂಗದ ಒಬ್ಬ #ಸೂಪರ್_ಸ್ಟಾರ್ ಆಗಿದ್ದೂ ಎಷ್ಟು ಸರಳತೆಯಿಂದ, ವಿನಯದಿಂದ ಬದುಕಿ ಮಾನವೀಯ ವ್ಯಕ್ತಿತ್ವವನ್ನು ರೂಢಿಸಿಕೊಳ್ಳ ಬಹುದೆಂಬುದಕ್ಕೆ ಶ್ರೇಷ್ಠ ಉದಾಹರಣೆಯಾಗಿದ್ದ ಅಪ್ಪು ಭೌತಿಕವಾಗಿ ನಮ್ಮೊಂದಿಗಿಲ್ಲವಾಗಿದ್ದು ದುರದೃಷ್ಟಕರ ಹಾಗೂ ಇಂದಿಗೂ ಅದನ್ನು ನಾನು ನಂಬಿಲ್ಲ . ಅಪ್ಪು ಸಾವಿನ ನಂತರವಷ್ಟೆ ಬೆಳಕಿಗೆ ಬಂದ ಅವರ ಅನೇಕ ಸಮಾಜಮುಖಿ ಕಾರ್ಯಗಳು ಇಡೀ‌ ವಿಶ್ವದ ಗಮನವನ್ನೇ ಸೆಳೆದಿದ್ದವು. ಇನ್ನೂ‌ ನಲವತ್ತಾರರ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನಗಲಿದ ಪುನೀತ್ ತಮ್ಮ ಸಾವಿನ ನಂತರವೂ ನಮ್ಮೆಲ್ಲರ‌ ಹೃನ್ಮನಗಳಲ್ಲಿ ಚಿರಸ್ಥಾಯಿಯಾಗಿದ್ದಾರೆಂಬುದಕ್ಕೆ ಅನೇಕ ನಿತ್ಯ ನಿರಂತರ ಘಟನೆಗಳು ಸಾಕ್ಷಿಯಾಗುತ್ತಿವೆ.

ಅಪ್ಪು ನಿರ್ಗಮನದ 2021 ನನ್ನ ಪಾಲಿಗೆ ಅತ್ಯಂತ ಕೆಟ್ಟ ವರ್ಷ.

ಫೋಟೋ ಕೃಪೆ : vijaya karnataka

ಇದರ ಜೊತೆ ಜೊತೆಗೇ ಇದೇ ವರ್ಷ ನನ್ನ ಹತ್ತಿರದ ಕೆಲವಾರು ಮಂದಿ ಬಂಧುಗಳನ್ನು, ಸ್ನೇಹಿತರನ್ನೂ ಕಳೆದುಕೊಂಡದ್ದು ಸಹ ದುಃಖಕರವಾದ ಸಂಗತಿಯಾಗಿತ್ತು.

ಅನೇಕಾನೇಕ ನಿರಾಶೆಯ ಕಾರ್ಮೋಡದಲ್ಲೂ ಕೆಲವೊಂದು ಸಣ್ಣ ಸಣ್ಣ ಖುಷಿಯ ಬೆಳ್ಳಿಗೆರೆಗಳು ಮೂಡಿದ್ದೂ ಸುಳ್ಳಲ್ಲ. ಬಹುಶಃ ಕಳೆದ ವರ್ಷ ಅತಿಹೆಚ್ಚು ಬರಹಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದು ಅದರಲ್ಲಿ ಒಂದು ! ಕೊರೋನಾ ಕಾಲಘಟ್ಟದಲ್ಲಿಯೂ ಬಹುತೇಕ ಹೊರಗಡೆಯೇ ತಿಂದುಂಡರೂ ಕೂಡ ನನ್ನ ಆರೋಗ್ಯವನ್ನು ಹಾಗೆಯೇ ಕಾಪಾಡಿಕೊಂಡು ಬಂದಿದ್ದು ಸಮಾಧಾನ ತಂದ ವಿಷಯ.

ಒಟ್ಟಾರೆ….. 2021 ನನ್ನ ಪಾಲಿಗಂತೂ ಖುಷಿ ಕೊಟ್ಟ ವರ್ಷವಂತೂ ಅಲ್ಲ.! Ofcourse…..ಅದು ಕಾಲದ ತಪ್ಪಲ್ಲ… ಏಕೆಂದರೆ….

ಯೋಗಿ ಪಡೆದದ್ದು ಯೋಗಿಗೆ…
ಜೋಗಿ ಪಡೆದದ್ದು ಜೋಗಿಗೆ….

ಪ್ರೀತಿಯಿಂದ….


  • ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW