ಕವಿ ಮನೋಹರ ಮಲ್ಮನೆ ಅವರ ‘ಹೃದಯಗಾನ’ ಕವನ ಸಂಕಲನದ ಕುರಿತು ಲೇಖಕಿ ದೀಪಾಲಿ ಸಾಮಂತ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಹೃದಯಗಾನ (ಕವನ ಸಂಕಲನ)
ಲೇಖಕರು : ಮನೋಹರ ಮಲ್ಮನೆ
ಪ್ರಕಾಶನ : ಬಕುಲ ಸಾಹಿತ್ಯ ಪ್ರತಿಷ್ಠಾನ ಶಿರಸಿ
ದರ : 50.00
ಕಾಲಚಕ್ರ ಉರುಳಿದಂತೆ ಕರೋನಾ ಮಹಾಮಾರಿಯ ಹಿಡಿತದಿಂದ ಹೊರಬಂದು ಎಲ್ಲವೂ ಮೊದಲಿನಂತೆ ಆಗಿ ಜನಜೀವನ ಒಂದು ಉತ್ತಮ ಹಂತದಲ್ಲಿ ಸಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಎಲ್ಲೆಡೆ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದು ಬರುತ್ತಿವೆ. ಆಗಾಗ ಕಾರ್ಯಕ್ರಮದ ನಿಮಿತ್ತ ಶಿರಸಿಗೆ ಹೋಗಿ ಬರುತ್ತಿದ್ದ ಕಾರಣ ಆ ಭಾಗದ ಬಹುತೇಕ ಸಾಹಿತಿ ಮಿತ್ರರ, ಹಿರಿಯ ಸಾಹಿತಿಗಳ ಒಡನಾಟ ದಕ್ಕಿದ್ದು ನನ್ನ ಸಾಹಿತ್ಯ ಕೃಷಿಗೂ ಸಹಕಾರ ದೊರಕಿದಂತಾಯಿತು. ವಯಸ್ಸಿನಲ್ಲೂ, ಸಾಹಿತ್ಯಿಕ ಸಾಧನೆಯಲ್ಲೂ ನಮಗಿಂತ ಎಷ್ಟೋ ಪಟ್ಟು ಹಿರಿಯರಾದರೂ ಕಿಂಚಿತ್ತೂ ಅಹಂ ತೋರದ ತುಂಬಾ ಆತ್ಮೀಯವಾಗಿ ಮಾತನಾಡಿಸುವ, ಪ್ರೋತ್ಸಾಹಿಸುವ ಗುಣದಿಂದ ಭಾವನಾತ್ಮಕವಾಗಿ ಹತ್ತಿರವಾದವರು ಹಲವರು ಇದ್ದಾರೆ. ಅಂತವರಲ್ಲಿ ಹಿರಿಯರಾದ ಮನೋಹರ ಮಲ್ಮನೆಯವರು ಒಬ್ಬರು. ಹೀಗೆ ಒಮ್ಮೆ ಶಿರಸಿಯಲ್ಲಿ ನಡೆದ ‘ಮುಕ್ತಕ ಸಿರಿ’ ಮುಕ್ತಕ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಭೇಟಿಯಾದವರು ತಮ್ಮ ದ್ವಿತೀಯ ಕವನ ಸಂಕಲನ ಹೃದಯಗಾನ ನನ್ನ ಕೈಗಿತ್ತರು. ಇತ್ತೀಚೆಗೆ ಕಣ್ಣಾಡಿಸಿ ಒಂದು ಚಿಕ್ಕ ಪ್ರತಿಕ್ರಿಯೆ ಬರೆಯುವ ಪ್ರಯತ್ನ ಮಾಡಿದ್ದೇನೆ.

ಸಾಹಿತ್ಯ ಕ್ಷೇತ್ರದಲ್ಲಿ ಉದಯೋನ್ಮುಖ ಬರಹಗಾರರಿಗೆ ಸದಾ ಪ್ರೋತ್ಸಾಹಿಸುವ ಗುರುಗಳಾದ ಶಿರಸಿಯ ಗಣಪತಿ ಹೆಗಡೆ ವರ್ಗಾಸರರವರ ಬೆನ್ನುಡಿ ಹಾಗೂ ಹಿರಿಯರಾದ ಶ್ರೀ ಗೋಪಾಲಕೃಷ್ಣ ಕೇರಿಮನೆಯವರು ಬರೆದ ವಿಮರ್ಶಾತ್ಮಕ ಮುನ್ನುಡಿಯೊಂದಿಗೆ ಸೊಗಸಾದ ಮುಖಪುಟ ಹೊಂದಿರುವ ಹೃದಯಗಾನ ಕವನ ಸಂಕಲನವು ೩೧ ಕವನಗಳಿವೆ. ಈ ಎಲ್ಲ ಕವನಗಳು ಮನೋಹರ ಮಲ್ಮನೆಯವರ ಅನುಭವದ ನುಡಿಯಾಗಿ ಹೊರಹೊಮ್ಮಿವೆ. ಶಿರಸಿ ಮಾರಿಕಾಂಬೆಯ ಭಕ್ತರಾದ ಇವರು ಮಾರಿಯಮ್ಮ, ಶಿರಸಿಯಮ್ಮ , ತಾಯಿ ಮಾರಿಕಾಂಬೆ ಕವನಗಳಲ್ಲಿ ಬಹು ವಿಧವಾಗಿ ಸ್ಮರಿಸುವ ಭಕ್ತಿರಸದ ಹೊನಲು ಹರಿಸಿದ್ದಾರೆ.
ಆತ್ಮಬಲ ಕುಂದಿಹುದು, ಮನಸೊಕ್ಕು ಮೆರೆದಿಹುದು, ತನುವ ಮಂದಿರದಲ್ಲಿ ದೆವ್ವ ಹೊಕ್ಕಿಹುದು, ಗೆದ್ದಲಿನ ಹುತ್ತದಲಿ ಊರಿಗೆ ಹೊಕ್ಕಂತೆ/ ಎಂಬ ಸಾಲು ಸೊಕ್ಕೆಂಬ ದೆವ್ವ ಮನದಲ್ಲಿ , ತನುವಿನಲ್ಲಿ ಸೇರಿಕೊಂಡರೆ ಆತ್ಮಬಲ ಕುಂದಿ ಹೋಗುತ್ತದೆ ಎಂಬ ಸ್ಪಷ್ಟ ಸಂದೇಶ ತಮ್ಮ’ಹೃದಯಗಾನ’ ಕವಿತೆಯಲ್ಲಿ ನೀಡಿದ್ದಾರೆ.
ಇನ್ನು ‘ಕಾಲ ಚಕ್ರ ‘ ಕವನದಲ್ಲಿ ಬರಡು ಮಾಯೆಯೋ ಕುರುಡು ಛಾಯೆಯೋ, ಎನ್ನುತ ಹುಡುಕುತ ಕಣ್ಣೀರಿಡಲು, ತಡಕುತ ಕಲುಕುತ ನಗುವನು ಸೂಸಲು, ನೋಡುವ ಕಣ್ಗಿದು ಮಾಟದ ನೋಟ, ಕಾಣುವ ಮನಕಿದು ಸತ್ -ಚಿತ್ ದಾಟ / ಈ ಸಾಲುಗಳು ತುಂಬಾ ಅರ್ಥಗರ್ಭಿತವಾಗಿವೆ. ಎಲ್ಲವೂ ಇದೆ ಎಂದು ತೋರುವ ಮಾಯೆಯಲ್ಲಿ ಏನೂ ಇರದ ಬರಡುತನವಿರಲು ಸಾಧ್ಯ ಹಾಗೆಯೇ ಏನೇನು ಇರದಿದ್ದರೂ ಇದ್ದಂತೆ ಕಾಣುವ ಕುರುಡುತನ ನಮ್ಮ ದೃಷ್ಟಿಗೆ ಬಂದಿರಲೂ ಬಹುದು. ದುಡುಕಿ ಹುಡುಕಲು ಏನೂ ಸಿಕ್ಕದೇ ಕಣ್ಣೀರು ಸುರಿಸಿ ಕೃತಕ ನಗು ಬೀರಿ ನೋಡುಗರಿಗೆ ಮಾಟ ಮಾಡಿದಂತೆ ಭಾಸವಾಗುವುದು ಹಾಗೂ ಇದನೆಲ್ಲ ಗ್ರಹಿಸುವ ಒಳಮನಕ್ಕೆ ಸತ್ಯದ ಅರಿವು ಮೂಡುವುದು ಎಂಬ ಭಾವ ಮೂಡಿ ಬಂದಿದೆ.
ಗಿಡ ಮರ ಹೂ ಬಳ್ಳಿ ಚಿಗಿತು ನಿಂತು,ವಸಂತೋತ್ಸವದ ಹರುಷದಲಿ ಜಲಚರ ಪ್ರಾಣಿಗಳೆಲ್ಲಾ ಒಂದೆಡೆ ಸೇರಿ ಶ್ರಾವಣ ಹಬ್ಬವು ಆಚರಿಸಿದವು/ ಎಂದು ತಮ್ಮ ‘ಶ್ರಾವಣ ಮಾಸ’ ಕವಿತೆಯಲ್ಲಿ ಲೇಖಕರು ಪ್ರಕೃತಿ ಪ್ರೇಮವನ್ನು ಮೆರೆದಿದ್ದಾರೆ. ಪ್ರಾಣಿ ಪಕ್ಷಿಗಳು ಹಾಗೂ ರೈತರಿಗೆ ಹರುಷ ತರುವ ಶ್ರಾವಣ ಮಾಸದ ಸಂಭ್ರಮವನ್ನು ಸೊಗಸಾಗಿ ಕಟ್ಟಿ ಕೊಟ್ಟಿದ್ದಾರೆ.

ಈ ಸಂಕಲನದಲ್ಲಿರುವ ‘ಮುಗ್ಧತೆ’ ಎಂಬ ಕವನವು ಮನಕ್ಕೆ ನಾಟುವಂತಿದೆ. ಮುಗ್ಧ ಬಾಲೆಯ ಗೋಳಾಟವನ್ನು, ಅವಳ ಮನದ ತುಮುಲವನ್ನು ಅರಿಯದ ಸಮಾಜಕ್ಕೆ ಧಿಕ್ಕಾರ ಕೂಗುವ ಧಾರ್ಡ್ಯ ತೋರಿದ್ದಾರೆ. ಸಾಮಾಜಿಕ ಧರ್ಮವೆಂಬ ಮುಖವಾಡದ ಹಿಂದೆ ಮೌಢ್ಯಕ್ಕೆ ಬಲಿಯಾಗಿ ಮುಗ್ಧ ಮನವನ್ನು ನೋಯಿಸುವದು ಸರಿಯಲ್ಲ ಎಂದು ಸಮಾಜದ ಹುಳುಕನ್ನು ಎತ್ತಿ ಹಿಡಿಯುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
ಗಾಳಿಯ ರಭಸಕೆ ಸರಿದೊರೆಯಾಗಿ, ಓಡುವ ಅಣು ವಿಕಿರಣದ ಪರಿ ಪರಿ, ಕೈಗಾದಿಂದಾಗುವ ದುರ್ಬಲ ಕಿರಿಕಿರಿ, ಉತ್ತರ ಕನ್ನಡ ಅಚ್ಚರಿ ಪಡುವಲಿ, ಕಾದಿದೆ ಅನಾಹುತ ಎಚ್ಚರ ನಿಮಗಿದೋ ಎಚ್ಚರ ಎಂಬ ಈ ಸಾಲುಗಳು ‘ಕೈಗಾ ಅಣು’ ಕವನದಲ್ಲಿ ಕೈಗಾ ಅಣು ಸ್ಥಾವರ ಯೋಜನೆಯನ್ನು ಖಂಡಿಸಿ ಇದರಿಂದಾಗುವ ಅನಾನುಕೂಲ ಹಾಗೂ ಆಪತ್ತನ್ನು ಗ್ರಹಿಸಿ ಎಚ್ಚರಿಕೆಯ ಸಂದೇಶವನ್ನು ಸಾರಿದ್ದು ಇವರ ಹೋರಾಟ ಮನೋಭಾವಕ್ಕೆ ಹಿಡಿದ ಕನ್ನಡಿಯಂತಿದೆ.
ಕನ್ನಡ ಪ್ರೀತಿ, ಬಯಕೆ, ಚಿತ್ತ ಚಾಂಚಲ್ಯ , ಮದುವೆ, ತಿರಸ್ಕಾರ ಹೀಗೆ ಹಲವು ಕವನಗಳು ವಿಭಿನ್ನ ವಿಷಯಗಳನ್ನು ಕವನದ ವಸ್ತುವಾಗಿಸಿಕೊಂಡ ‘ಹೃದಯಗಾನ’ ಒಂದು ಉತ್ತಮ ಕವನ ಸಂಕಲನವೆನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಶ್ರೀಯುತ ಮನೋಹರ ಮಲ್ಮನೆಯವರ ಸಾಹಿತ್ಯ ಕೃಷಿ ಹೀಗೆಯೇ ಸದಾ ಸಾಗುತಿರಲಿ. ಇವರಿಂದ ಇನ್ನಷ್ಟು ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಸೇರಲಿ ಎಂದು ಆಶಿಸುತ್ತೇನೆ.
- ದೀಪಾಲಿ ಸಾಮಂತ – ದಾಂಡೇಲಿ.
