ಉತ್ತರಕನ್ನಡ ಜಿಲ್ಲೆಯ ಹೆಸರಾಂತ ಬರಹಗಾರ್ತಿ ಕವಿಯತ್ರಿ ನಾಗರೇಖಾ ಗಾಂವಕರ ಅವರ ‘ಪಾದಕ್ಕೊಂದು ಕಣ್ಣು’ ಅವರ ಕವನ ಸಂಕಲನದ ಕುರಿತು ಹಿರಿಯ ಲೇಖಕರಾದ ವಿಜಯೇಂದ್ರ ಪಾಟೀಲ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಪಾದಕ್ಕೊಂದು ಕಣ್ಣು
ಲೇಖಕರು : ನಾಗರೇಖಾ ಗಾಂವಕರ
ಪ್ರಕಾಶನ : ಸಾಹಿತ್ಯಲೋಕ
ಬೆಲೆ : ೧೩೦.೦೦
ಪ್ರೀತಿಯ ನಾಗರೇಖಾ,
ನೀವು ಓದಲೆಂದು ಕಳಿಸಿದ ‘ಪಾದಕ್ಕೊಂದು ಕಣ್ಣು’ ಕವನ ಸಂಕಲನವನ್ನು ಆಗಲೇ ಓದಿದ್ದೆ. ಸಂತೋಷಕ್ಕೆ ಅಷ್ಟು ಸಾಕಾಗಿತ್ತು.ಆದರೆ ಇದರ ಬಗ್ಗೆ ಬರೆಯ ಹೊರಟೆ ನೋಡಿ,ಆಗಲೆ ಕಷ್ಟದ ಅರಿವಾದದ್ದು! ನಾನು ಕಾವ್ಯದ ಮನೆಗಳ ಎದುರು ಹಲವು ಸಲ ದಾಟಿದ್ದುಂಟಾದರು ಎಂದೂ ದಿಡ್ಡಿ ಪ್ರವೇಶಿಸಿದವನಲ್ಲ. ಕಟ್ಟಡಕ್ಕೆ ಏನು-ಎಷ್ಟು ಬೇಕಾಗುತ್ತದೆ, ಯಾವೆಲ್ಲ ಗೂಢಗಳಿರುತ್ತವೆ, ಎಲ್ಲೆಲ್ಲಿ ಕಿಟಕಿ – ಬಾಗಿಲುಗಳಿರುತ್ತವೆ, ಇರಬೇಕು ; ಹೇಗೆಲ್ಲ ಕಟ್ಟುತ್ತಾರೆ ಎಂದೆಲ್ಲ ತಿಳಿದವನಲ್ಲ. ಆದರೆ ಇಂದು ನಿಮ್ಮ ಪುಸ್ತಕ ಒಳಗೆ ಬರುವಂತೆ ಮಾಡಿಯೇ ಬಿಟ್ಟಿತು ನೋಡಿ.
ಒಳಹೊಕ್ಕರೆ ಎಲ್ಲ ಪ್ರಾಪಂಚಿಕತೆ ಇಲ್ಲಿ ಪಸರಿಸಿಕೊಂಡು ಬಿಟ್ಟಿದೆ.ಆಕಾಶ ನೋಡುವುದಕ್ಕಿಂತ ನೆಲ ನೋಡಿ ಸಹಜ ಬದುಕು ಮಾಡಬೇಕೆಂಬಂತೆ ಕಟ್ಟಿದ ಮನೆಯಲ್ಲಿ ಆಕೆ ಇದ್ದಾಳೆ. ಹಾಗಾಗಿ ಅವಳ ಪಾದಕ್ಕೇ ಕಣ್ಣು ಹುಟ್ಟಿದೆ… ಸೋಹಂ ಎನ್ನುತ್ತ ಹೊರಡ ಬೇಕೆನ್ನುವವನನ್ನು ದಾಸೋಹಂ ತತ್ವ ಸಾರುತ್ತ ಲೌಕಿಕದತ್ತ ಹಿಡಿದೆಳೆಯುತ್ತಿದ್ದಾಳೆ.

ಎಲ್ಲಾ ಮನೆಗಳಂತೆ ಇಲ್ಲಿ ಅವಳು, ಅವನು ಇದ್ದುದು ತಿಳಿಯುತ್ತದೆ. (ಕಾಣದ ಇನ್ನೂ ಒಬ್ಬೊಬ್ಬ ‘ಅವನೂ ಅವಳೂ’ ಇದ್ದಂತೆ ಕೂಡ ಅನಿಸುತ್ತದೆ!) ಅಜ್ಜಿ ಅಮ್ಮ ಇದ್ದು ಹೋದ ಗುರುತು ಕಾಣುತ್ತದೆ.”ಬದುಕು ಮಾಡಿದವರು ಮತ್ತು ಇದೇ ಬದುಕೆಂದು ಸೂಚಿಸಿದವರು” ತಮ್ಮ ಗುರುತಾಗಿ —
” ಸಣಬಿನ ಕೈಚೀಲದಲ್ಲಿ ಸುತ್ತಿ
ಮುರುಕು ಕಪಾಟಿನಲ್ಲೊಂದು ಬುಟ್ಟಿ
ತುಣುಕುಗಳು,ಸೂಜಿದಾರ,ದಬ್ಬಣ
ಸುತಳಿ ಬಳ್ಳಿ,ಕತ್ತದ ಬಳ್ಳಿ,ಅಕ್ಕಿ ಮೂಟೆ
ಕಟ್ಟುವ ಸಣಬಿನ ಬತ್ತಿ..”
ಇತ್ಯಾದಿಗಳನ್ನು ಇರಿಸಿ ಹೋಗಿದ್ದಾರೆ. ಹಳೆಯಕ್ಕಿ ಮೇಲೆ ಹುಳಗಳು ಬೀಳಬಾರದೆಂದು ಬೇವಿನ ಎಲೆ,ಉಕ್ಕಿ ಎಲೆ ಉದುರಿಸಿದ್ದೂ ತಿಳಿಯುತ್ತದೆ. ಆದರೆ ಅಮ್ಮ “ಬಯಸಿದ್ದು ಇರಿಸಿದ್ದು,ಹೊಲಿಸಿದ್ದು,ಹುಡುಕಿದ್ದು ಎಲ್ಲ ಅಯೋಮಯವಿಂದು..” ಎಂಬಲ್ಲಿಗೆ ಈಗಿರುವ ಆಕೆಗೆ ಲಯ ತಪ್ಪಿದ ಅನುಭವವಾಗುತ್ತಿದೆ ಎಂಬುದೂ ತಿಳಿಯುತ್ತದೆ! ಹೌದು. ಬದುಕು ಕೃತ್ರಿಮವಾಗಿದೆ. ಮುಗ್ಧತೆ ಕಳೆದಿದೆ. ಎಲ್ಲರಂತೆ
“ಎರಡಂತಸ್ತಿನ ಬಾಲ್ಕನಿಯಲ್ಲಿ
ಬೊನ್ಸಾಯ್ ಗಳನ್ನು ಬೆಳೆಯುತ್ತ
ಕುಬ್ಜಳಾಗುತ್ತಿದ್ದೇನೆ…”
ಎಂಬ ಹಳಹಳಿಕೆಯಲ್ಲಿ, ಅರಿವಿನಲ್ಲಿ ಬಾಳುತ್ತಿದ್ದಾಳಾಕೆ.ಕಾಲ ಮುನ್ನಿನಂತಿಲ್ಲ. ಅಂದು ‘ಬಣ್ಣದಂಗಿ, ಚಾಕೊಲೇಟ್, ಕೇಕು ಇರದೆ’ ಬೆಳೆದಾಗಲು
” ಗದ್ದೆ ಕೆಲಸದ ಹೆಣ್ಣಾಳು
ಮೇಲುದರಿ ಬಿಚ್ಚಿ ಸೊಂಟಕ್ಕೆ ಸುತ್ತಿ
ಮೀನಖಂಡದವರೆಗು ಸೀರೆ ಎತ್ತಿ ದುಡಿವಾಗ
ಅವಳಂದವ ಯಾರು ಕದ್ದು ನೋಡುತ್ತಿರಲಿಲ್ಲ”
ಎಂಬಂತಹ ಒಳ್ಳೆಯ ಕಾಲವಿತ್ತು.ಈಗ ಅದಿಲ್ಲ.ಇಂದು ಎಲ್ಲಾ ಕಡೆಯೂ ಬೆರ್ಚಪ್ಪಗಳಿವೆ. ಅವು ಹಳ್ಳಿಯಲ್ಲಿ
‘ಬೇಲಿ ಗೂಟಕ್ಕೆ ಜೋತು ಬಿದ್ದರೆ’ ನಗರಗಳಲ್ಲಿ
‘ಇಮಾರತ್ತಿನ ಕೋಲಿಗೆ ತೂಗಾಡುತ್ತಾರೆ’
‘ತಪ್ಪುವ ಹಾದಿಗಳ ಗುಂಟ ಅರಿವಿನ ಸೂಡಿ ಸಿಗಬಹುದೆ’ ಎಂದು ಹೊರಟ ಜನರೇ ‘ ಬೆಳಕನ್ನು ಮುತ್ತಿಕ್ಕುವ ಆಸೆಗೆ ಬಲಿಬಿದ್ದು,ಕೈತಪ್ಪಿ,ಬೆಂಕಿಯನು ಅಪ್ಪಿ..’ ಸಾಗುತ್ತಿದ್ದಾರೆ. ಬೆಳಕು ಬೆಂಕಿಯಾಗುವ ವಿಪರ್ಯಾಸ ಕಾಣುತ್ತಿದೆ.

***
ಕಾವ್ಯದ ಮನೆಯಲ್ಲಿ ಆಕೆ ಇದ್ದಾಳೆ, ಆತನೂ ಇದ್ದಾನೆ. ಅವರ ಸಂಬಂಧ ಸೂಚಿಸಲು ಹಲವು ವಿಷಾದದ ಕವಿತೆಗಳೂ ಜೊತೆಗಿವೆ. ಆತ ಅದೇಕೆ ಹಾಗೆಂದು ಎಷ್ಟು ಚಿಂತಿಸಿದರು ಅವಳಿಗೆ ತಿಳಿಯುತ್ತಿಲ್ಲ..
” ಅವನೊಳಗಿನ ಬೆಂಕಿಗೆ/ತಂಪು ಬಟ್ಟಲಾದವಳು
ಬೆಂಕಿಯ ತಣ್ಣಗಾಗಿಸಿ/ ಉದರದೊಳು ಹೊತ್ತವಳು
ನೋವ ಹಾಸಿಗೆಯಲ್ಲಿ ಮಿಂದು/ ಹೆತ್ತ ಜೀವವ
ಅವನ ಹೆಸರಿಗೆಂದೇ ಬಿಟ್ಟವಳು…”
ತನ್ನನ್ನೇ ಹಿಂಡಿ ಅವನನ್ನು ನಿಲ್ಲಿಸಿದವಳು.ಆದರೆ ಮುಟ್ಟಿನ ಕಾರಣಕ್ಕಾಗಿ ದೂರವಾಗಿಸಿದ್ದಾನೆ…
” ಅವಳಿಲ್ಲದೆ ಜಗದ ಬೆಳಕಿಗೆ
ಕಣ್ಣು ತೆರೆದವನ ಹುಡುಕಿ ಸೋತಿದ್ದೇನೆ
ಹುಡುಕಿ ಕೊಡು,ಹೇ! ಪ್ರಭು..
ಎಂಬ ಅವಳ ಆಹ್ವಾನ/ವಿನಂತಿಯಲ್ಲಿ ರೋಷವಿಲ್ಲ. ಆದರೆ ಹಳಹಳಿಕೆಯಿದೆ,ನೋವಿದೆ…
“ಕುಲಧರ್ಮಪತ್ನಿ”ಯ ನೆಪದಲ್ಲಿ ಆರು ಗುಣವುಳ್ಳವಳ ಹುಡುಕುವವನ ಬಗ್ಗೆ ಕೂಡ ರೋಷವಿಲ್ಲ.
“ಧರ್ಮಕ್ಕೆ ಸಿಕ್ಕಬಹುದಾದ ವಸ್ತುಗಳ ಪಟ್ಟಿಯಲಿ
ಪತ್ನಿಯ ಹೆಸರಿಟ್ಟು ಮೆರೆದವನ
‘ಕೇವಲ’ ಗಂಡನಾದವನ ಬಗ್ಗೆ
ನನಗೆ ಮರುಕವಿದೆ..”
ಎನ್ನುವಲ್ಲಿ ‘ಕೇವಲ ಗಂಡ’ ಎಂಬ ವ್ಯಂಗ್ಯ ಕೂಡ ಸೇರುವಷ್ಟು ಅವಳಿಗೆ ನೋವಾಗಿದೆ.( ಮನಕೆ ಮನೋಹರರಲ್ಲದ ಗಂಡರು ಮನಕೆ ಬಾರರು ಕೇಳವ್ವಾ ಕೆಳದಿ ಎಂಬ ಅಕ್ಕನ ವಚನ ನೆನಪಾಗುತ್ತದೆ!)
” ಪ್ರೀತಿಯ ನೆರಳು ಮಾಸಿದ
ಚಪ್ಪರದಡಿಯಲ್ಲಿ ಬದುಕುವುದು ಹೇಗೆ…?”
ಎಂಬ ನಿರಂತರ ಪ್ರಶ್ನೆಗೆ,
” ನಿನ್ನವರಿಗಾಗಿ,ನಿನ್ನೊಡಲ
ಕುಡಿಗಳಿಗಾಗಿ ಬದುಕಬೇಕಿದೆ ನೀನು
ನಿನಗಾಗಿ ಸತ್ತು ಹೋದರೂ ನೀನು
ಎನ್ನುತ್ತಾನೆ ಅವನು
ಎಲ್ಲವು ಅವ ಹೇಳಿದ ಹಾಗೆ..”
ಎಂಬ ಲೀಲಾಜಾಲ ನಿಲುಗಡೆ. ದಾಂಪತ್ಯ ಹೀಗೇ ಸಾಗುತ್ತಿದೆ.
ಇವಳಿಗೆ,
” ಯಾವಳದೊ ಪುಸ್ತಕಕ್ಕೆ ಇವ ಬರೆದ ಮುನ್ನುಡಿಯ ಬಂಧ” ( ಇದಂತು ನನಗೂ ಅನುಭವ ವಾಕ್ಯವೇ!)
ಎಂಬ ಸ್ತ್ರೀ ಸಹಜ ಶಂಕೆ ಶುರುವಾಗುತ್ತದೆ.
ಅದಕ್ಕೆ ತಕ್ಕಂತೆ ಆತ,
” ನಲವತ್ತಾರು,ಮತ್ತೆರಡು.ಮುಖ ನೋಡಲಾಗುತ್ತಿಲ್ಲ”. ಪಾರ್ಲರಿಗಾದರು ಹೋಗಿ ಬರಲು ನಿನಗೇನು ಕಷ್ಟ? ಎಂದು ಕೇಳುತ್ತಾನೆ. ತಾಳ ತಪ್ಪಿದ ಈ ಬಾಳಿನ, ಬೆನ್ನಿಗಂಟಿದ ‘ಪಾದರಸ ಹೋದ’ —
” ಆ ಕನ್ನಡಿಯಲ್ಲಿಯೇ ಮೂಡುವ
ಮುಖವನ್ನು ದರ್ಶಿಸಿಕೊಳ್ಳುತ್ತ
ಹಣೆ ಬೊಟ್ಟನ್ನು ನಿಧಾನಕ್ಕೆ ಒತ್ತಿ ಲೇಪಿಸಿಕೊಳ್ಳುತ್ತ
ಮುಗುಳ್ನಗುತ್ತಾಳೆ..”
ಹಳೆಯದೆಲ್ಲ ನೆನಪಾಗುತ್ತದೆ;
” ಈ ಬೆನ್ನುಗಳು ಪರಸ್ಪರ ಆತು ಕೊಂಡಿದ್ದೆ
ಹೆಚ್ಚಾಗಿ,ಬೆನ್ನು ಬೆನ್ನು ಮಾತಾಡಿ
ಬೆವರಿನ ವಾಸನೆಯನ್ನು
ಪರಸ್ಪರ ಗುರುತಿಸುವಷ್ಟು ಹತ್ತಿರಕ್ಕೆ
ಬಂದದ್ದು ಗೊತ್ತಾಗಲೇ ಇಲ್ಲ”
ಆದರೀಗ ಬೆನ್ನು ಮೊದಲಿನಂತಿಲ್ಲ.ತಿರುಗಿವೆ!ಈಗವಳು ‘ಹೆಸರಿಲ್ಲದೆ ಬರೆದ ಹಾಳೆ!’
***
ಜೀವನವನ್ನು ಹೀಗೇ ಎಂದುಕೊಳ್ಳಲಾಗದು!ಬದಲಾಗದಿದ್ದರೆ ಬದಲಾಯಿಸಿಕೊಳ್ಳುವುದು…!
“ನಾಯಿಗಳ ಕೂಗು,ನಿಶಾಚರಿಗಳ
ಕುಣಿತ ರಾತ್ರಿಗೆ
ತಂದಿಟ್ಟ ವಿರುದ್ಧ ಉಪಮೆಗಳ
ಬದಿಗಿಟ್ಟು ನೋಡಿ”
ದಾಗ
“ಈ ರಾತ್ರಿಯಲ್ಲಿಯೆ
ಕಣ್ಣುಗಳಲ್ಲಿ ಕಣ್ಣಿಟ್ಟು ಕಾಣದ ಲೋಕವೊಂದು
ಅನಾವರಣಗೊಂಡಿದ್ದ ನೆನಪಿಟ್ಟುಕೊ”
ಎಂಬ ರಾತ್ರಿಗಳ ಪ್ರೀತಿಸುವ ಮಾತಿನಲ್ಲಿ,ಅವನನ್ನು ಬಚ್ಚಿಡುವ ಸೂಚನೆಯಲ್ಲಿ ಕಾವ್ಯದ ಮನೆಯ ಮತ್ತೊಂದು ಲೋಕ ತೆರೆದುಕೊಳ್ಳುತ್ತದೆ.ಆದರೆ ಇಲ್ಲಿ ಏನನ್ನೂ ಬಚ್ಚಿಡುವ ಮನಸ್ಸಿಲ್ಲ.
” ಯಾವ ಅನುಬಂಧದ ಹಂಗಿಲ್ಲದೆ ಒಳಬಂದ ಅವನಿಗೆ
ಪಡಸಾಲೆಯ ಕೂಡ ನಡುಮನೆಯೂ” ದಕ್ಕುತ್ತವೆ!
” ನಿರ್ಲಿಪ್ತತೆಯ ಒಳದನಿಯಲಿ
ನಿಜದ ರಾಗಗಳ ಆಲಾಪ
ಹೊರಡಿಸುವ ಕಷ್ಟ ನೋಡು!!
ಎಂದವ ಮುಗಿದು ಹೋಗುವ ಪ್ರಹರದ
ಲೆಕ್ಕ ಹಾಕಲೇ ಇಲ್ಲ..”
ಹೀಗೆ ಸುಲಭವಾಗಿ ಒಳಬಂದವರಿಗೆ ಹೊರಹೋಗುವ ದಾರಿಗಳು ಕಾಣುವುದಿಲ್ಲವಲ್ಲವೇ?ಅಥವಾ ಕಾಣಬೇಕಾಗಿಲ್ಲವೊ?
ನಾಗರೇಖಾ,
ಪುತಿನ ಅವರ ಕೃಷ್ಣನ ಕೊಳಲಿನ ಕರೆಯಲ್ಲಿ,
‘ತೊಟ್ಟಲಿನ ಹಸುಗೂಸ ಮರೆ,ಪಕ್ಕದ ಗಂಡನ ತೊರೆ..’ ಎಂಬ ಸಾಲುಗಳಿವೆ. ಪುರಂದರ ದಾಸರ ತಾರಮ್ಮಯ್ಯ ಪದದಲ್ಲೂ ಗಂಡನನ್ನು ತೊರೆದೋಡುವ ಸೂಚನೆಗಳಿವೆ. ರಾಧೆ, ಮೀರಾ, ಅಕ್ಕನ ಹುಡುಕಾಟಗಳ ನೆನಪಾಗುವಂತಹ ಕೆಲವು ದನಿಗಳು ನಿಮ್ಮ ಕಾವ್ಯದ ಮನೆಯಲ್ಲಿ ನನಗೆ ಹೀಗೆ ಕೇಳಿಸಿದವು! ಪಿಸುಮಾತಲ್ಲ ಅವು ಎಂಬುದೊಂದು ಮನುಷ್ಯನ ದ್ವಿತೀಯಾವಸ್ಥೆಯ ಸಾಧ್ಯತೆಯಲ್ಲವೇ?
” ಯಾವರಾಗವದು,ಬೆಸೆದದ್ದು
ಒಪ್ಪು ತಪ್ಪುಗಳ ಭಿನ್ನ
ಸಹಮತಗಳ ನಡುವೆ
ಸಂಕಲಿಸಿ ಹೃದಯಗಳ ಬೆಸುಗೆ..”
ಯಮುನೆ ತಟದಲಿ ಕೂತ ಹೂತ ಕಾಲಿನ ಆಕೆಗೆ ಭವದ ನೆರಳಿನ ಹಂಬಲ.
ಪ್ರೀತಿಸುವುದೆಂದರೆ
‘ನಿಲುಕದ ನೆಲೆಯಲ್ಲೂ ಆಲಿಂಗನದ ಕನಸ ಹೊತ್ತು ಸಾಗುವುದು…
ಹೀಗಂದವನ ರಾಧೆಯಾಗುವುದು…’
ನೈಜತೆ,ಪ್ರಾಮಾಣಿಕತೆಗಳಲ್ಲಿ ತೀವ್ರತೆ ಎಂಬುದು ಎಷ್ಟು ಸಹಜವಾಗಿ ಬರುತ್ತದೆ ನೋಡಿ!
“ಹಾಡುವ ನಾದಕ್ಕೆ ಮೆಲ್ಲಗೆ
ಅರಳುತ್ತದೆ ಹೂ
ತೊನೆದಾಡುತ್ತಿವೆ ತರುಲತೆಗಳ
ಕಿರುನಡು”
ಎಂಬಂತೆ ತನ್ನನ್ನು ಅಣಿಗೊಳಿಸುತ್ತ
” ಕಾಯಲಿಡುತ್ತೇನೆ ಪ್ರೀತಿ ಹದವಾಗಿ
ಉಕ್ಕುವ ಕೆನೆಹಾಲಿನ ರುಚಿಗಾಗಿ..”
ಬೇರೆ ಬೇರೆ ಕಡೆಗೂ ಇದು ವ್ಯಕ್ತವಾಗುತ್ತದೆ ಎಂದರೆ ಮನಸ್ಸನ್ನು ಅದು ಆವರಿಸಿದೆ ಎಂದು ತಿಳಿಯಬೇಕು:
” ದಹಿಸಬೇಕು ಒಳಗಿನ ಉರಿ
ಉಕ್ಕಿ ಚಲ್ಲದಂತೆ,
ಸ್ಫೋಟಗೊಳ್ಳದಂತೆ,ಹದವಾಗಿ
ಬೇಯಬೇಕು,ಕೆನೆಗಟ್ಟಬೇಕು ಪ್ರೀತಿ
ಎನ್ನುವವನ ಧಿಕ್ಕರಿಸುವುದಿಲ್ಲ ಅವಳು!”
ಇಂತಹ ಪ್ರೀತಿ ಕೊಡುವ “ಅವನಿಲ್ಲದೆ ಅವಳ ದೇವರು ಇರುವುದಾದರು ಹೇಗೆ?”
‘ಕಾವ್ಯದ ಹಂಗು,ಆತ್ಮದ ಕುರುಡು ಕಳೆದು ಗಮ್ಯದ ನೆರಳು ಪಡೆಯುವುದನ್ನು,ನೀರ ಎದುರು ಈಜುವುದನ್ನು’ ಅವನೇ ಕಲಿಸಿದ.ನೋಡುವುದರಲ್ಲಿ ‘ಕಾಣುವುದನ್ನು’ ಸವಿಯುವುದರ,ಸವಿ ನೀಡುವುದರ ಜೊತೆಯ ಮರೆಯಲ್ಲಿರುವ ಜೀವದೊಂದಿಗೆ ಹೊಂದಬೇಕಾದ ಸಂವಾದವನ್ನು ಕಲಿಸಿದ. ಕಲೆಯಾಗಬೇಕು ಕಲಿಕೆ ಎಂದವನೇ ಪಾದಕ್ಕೊಂದು ಕಣ್ಣು ಮೂಡಿಸಿ ಅದಕ್ಕೆ ದೃಷ್ಟಿ ಬರಿಸಿದ ಈ ‘ಆತ’ ಎಂಬವ ಹೊರಗಿದ್ದು ಒಳಗಾದವನೆ ಅಥವಾ ಮೊದಲಿಂದಲು ಇದ್ದವನೇ? ಆಳಬೇರಿನ “ಸ್ಥಾವರತೆ”ಯನ್ನು ಒಪ್ಪಿಕೊಳ್ಳುವುದು,ಬದಿಗಳನ್ನು ಕೊಚ್ಚಿ ಹಾಕುತ್ತ ಸಾಗುವ ನದಿಯ “ಜಂಗಮತತ್ವ” ವನ್ನು ಮೀರಿ ನಡೆಯುವ ವಿಭಿನ್ನ ಭಾವ ಕೂಡ ಮರಗಳನ್ನು ಮಾತಾಡಿಸುವ ಅವನ ಕ್ರಮದ ಭಾಗವಾಗಿ ದಕ್ಕಿದ ಹೊಳವೇ ಆಗಿರಬೇಕು…
ಸಹಚರ್ಯವನ್ನು ನವೀಕರಿಸುವುದು ಏಕೆ,ಹೇಗೆ ಎಂಬುದನ್ನು ಬೀಗ ಮತ್ತು ಬೀಗದ ಕೈಗಳ ವಾಸ್ತವದ ಸಂಬಂಧದಲ್ಲಿ ಮನಗಾಣಿಸಿದ್ದು ಚೆಂದವೂ ರೋಚಕವೂ ಆಗಿದೆ.ಅದನ್ನು ನಾವೇ ಓದಿಕೊಳ್ಳಬೇಕು! ಸಾಮಾಜಿಕ ಕಾಳಜಿಯ ಕವನಗಳನ್ನೂ ಇಲ್ಲಿ ಉದ್ಧರಿಸುತ್ತಿಲ್ಲ.ಗಾಂಧಿ ಕವನ ಬರೆಯುವಾಗಿನ ಪ್ರಾಮಾಣಿಕತೆಯನ್ನು ಪರೀಕ್ಷಿಸಿಕೊಂಡದ್ದು ಇಷ್ಟವಾಗುತ್ತದೆ. ಒಳ್ಳೆಯವನಿಗಾಗಿ ಒಂದು ಒಳ್ಳೆಯ ಕವಿತೆ ಬರೆಯುವಾಗಿನ ಕಷ್ಟ,ಅಸಹಾಯಕತೆಗಳ ಬಗೆಯನ್ನು ಕವನದ ಮೂಲಕವೆ ನಿರೂಪಿಸಿದ್ದೀರಿ. ಕೊನೆಯದಾಗಿ ನಿಮ್ಮ ಕಾವ್ಯಮನೆಯ ಪ್ರವೇಶದ ನಾಂದಿ ಪದದಂತಿರುವ ಹೂ ಕೊಯ್ಯುವ ಕವನದ ಬಗ್ಗೆ ಎರಡು ಸಾಲು ಹೇಳಬೇಕೆನಿಸಿದೆ.
” ಎಲೆಗಳ ತಲೆಯ ಮೇಲೆ ತೊನೆದಾಡುವ
ಈ ಹೂ ಕೊಯ್ಯುವುದು
ಸುಲಭದ ಮಾತಲ್ಲ
ಬೇಕು ಒಂದಿಷ್ಟು ಕಸರತ್ತು”
” ದಳ ಎನಿತು ನೋಯದಂತೆ
ಅರ್ಧ ತೊಟ್ಟು ಮುರಿಯದಂತೆ
ಕಿತ್ತು ತರುವುದು
ಎದೆ ಗರ್ಭದೊಳಗೆ ಮಾಲೆ ಕಟ್ಟುವುದು
ಸುಲಭವಲ್ಲ..”
ನಿಜ..
ಕಾವ್ಯೋದ್ಯಮ ಸುಲಭವಲ್ಲ.ಬದುಕು ಮಾಡುವುದು ಸುಲಭವಲ್ಲ.ಸಹಚರ್ಯ ಸುಲಭವಲ್ಲ.ತಪ್ಪು ಮಾಡದೆ ಇರುವುದು ಸುಲಭವಲ್ಲ. ಅನುಭವಕ್ಕು, ಅನುಭಾವಕ್ಕು, ಸೃಷ್ಟಿಸುವುದಕ್ಕು, ಅದನ್ನು ಅಭಿವ್ಯಕ್ತಿ ಪಡಿಸುವುದಕ್ಕು, ಬದುಕುವುದಕ್ಕು,ಬದುಕಿಸುವುದಕ್ಕು ತಯಾರಿ ಬೇಕು. ಅರಿವು ಬೇಕು… ಅದು ಸುಲಭವಲ್ಲ. ಈ ಕವನ ಇವುಗಳನ್ನು ಸೂಚಿಸುತ್ತದೆ. ಮತ್ತು ತನ್ನ ಮೂಲಕ ಪ್ರಾರ್ಥಿಸುತ್ತದೆ ಕೂಡ.

***
ನಾನು ಕವನ ರಚನೆಯ ತಾಂತ್ರಿಕತೆಯ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಿಲ್ಲ.ವಸ್ತು,ಆಕೃತಿ,ನಿರ್ವಹಣೆ,ತಂತ್ರಗಳ ಬಗ್ಗೆ ಏನೂ ಹೇಳುವುದಿಲ್ಲ.ಉದ್ದೇಶದ ಬಗ್ಗೆ ಮಾತ್ರ ಹೇಳಿದ್ದೇನೆ.ನನಗದು ಮಾತ್ರ ಮಹತ್ವದ್ದು. ನಾನು ಕವಿತೆ ಬರೆಯುವವನಲ್ಲ ಮತ್ತು ಅದನ್ನು ವಿಶೇಷವಾಗಿ ಅರ್ಥೈಸುವ ಸಾಮರ್ಥ್ಯ ಹೊಂದಿದವನೂ ಅಲ್ಲ.
ಓದುವಾಗ ನಿಮಗೂ ನನ್ನ ಬರೆಹಗಳಲ್ಲಿರುವಂತೆ ಕೆಲವು ಕಡೆ ಪದಗಳ ಮೋಹ,ಚಮತ್ಕಾರ ತೋರುವ ಆಸೆ ಕಾಣುತ್ತದೆ.ಎರಡು ಮೂರು ಕಡೆಗಳಲ್ಲಿ ಒಂದೆ ಕವನವಾಗಬಹುದಾದದ್ದು ಹಂಚಿ ಎರಡೆರಡಾಗಿವೆ. ಕೆಲವು ಕಡೆ ವಾಚ್ಯವಾಗುವುದನ್ನು ತಪ್ಪಿಸಲು ಸಾಧ್ಯವಿತ್ತು ಎಂದೆಲ್ಲ ಹೇಳಲೂಬಹುದು.”ಹುಡುಕಿ ಕೊಡು” ಕವನದ ವಿನೀತ ಭಾವದ ಪ್ರತಿಭಟನೆಯಲ್ಲಿ ಬರುವ ‘ಪೊಗರಿದ’ ಎಂಬ ಪದ ಕವನದ ಸ್ಫೂರ್ತಿಯ ಆಚೆಗಿನದಾಗಿ ತೋರುತ್ತದೆ. ಹೀಗೆ ಕೆಲವು ಅಷ್ಟು ಮಹತ್ವದ್ದಲ್ಲದ ಗುರುತಿಸುವಿಕೆಗಳು…
ಇದರ ಹೊರತಾಗಿ ಹೇಳುವ ಒಂದು ಮಾತಿದೆ.ನನ್ನ ದೃಷ್ಟಿಯಲ್ಲಿ ಅದು ಮಹತ್ವದ್ದು.ಏನೆಂದರೆ ಜನಸಂಖ್ಯೆಯ ಅರ್ಧದಷ್ಟಿರುವ,ಜೊತೆಯಲ್ಲೇ ಇರುವ,ಇದ್ದೂ ಅರ್ಥ ಮಾಡಿಕೊಳ್ಳದ ಗಂಡಸರು ನಿಮ್ಮ ಮತ್ತು ನಿಮ್ಮ ಹಾಗೆ ಬರೆಯುತ್ತಿರುವವರನ್ನು ಓದಬೇಕು.ಪ್ರಾಪಂಚಿಕ ಬದುಕಿನ ವರ್ತುಳದ ಒಳಗಿನದೆಲ್ಲ ಹೆಂಗಸರದು ಮತ್ತು ಅದರ ಸ್ಪರ್ಶರೇಖೆಯ ಪಾತ್ರ ಮಾತ್ರ ತಮ್ಮದು ಎಂಬ ಗಂಡು ಮನೋಭಾವಕ್ಕೆ ಇಲ್ಲಿಯ ಕವಿತೆಗಳು ‘ಹಾಗಲ್ಲ’ ಎಂದು ತಿಳಿ ಹೇಳುತ್ತವೆ…
ಪ್ರೀತಿಯಿಟ್ಟು ಕಳಿಸಿದ್ದೂ ಅಲ್ಲದೆ ಓದಿಸಿದಿರಿ ಕೂಡ. ಆಲಸ್ಯ ಬೇಗ ಬರೆಯಗೊಡುವುದಿಲ್ಲ ನೋಡಿ! ಕ್ಷಮಿಸಿ. ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ,ಗುಣಮಟ್ಟದಲ್ಲಿ ಬರೆಯುವುದು ಸಾಧ್ಯವಾಗಲಿ..!
ಧನ್ಯವಾದ ಮತ್ತು ಅಭಿನಂದನೆಗಳು ನಿಮಗೆ.
- ವಿಜಯೇಂದ್ರ ಪಾಟೀಲ
