ಧೃವ ತನ್ನ ಆರ್.ಎಕ್ಸ್ 100 ಬೈಕ್ ಹತ್ತಿ ಹುಬ್ಬಳ್ಳಿಯ ಕಡೆ ಹೊರಟನು, ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಅನ್ನೋ ಅನುಮಾನ ಶುರುವಾಯಿತು. ಅದು ಯಾರು ಮತ್ತು ಯಾಕೆ ಅಂತ ವಿಕಾಸ್. ಫ್. ಮಡಿವಾಳರ ಅವರ ಕತೆಯನ್ನು ತಪ್ಪದೆ ಮುಂದೆ ಓದಿ…
ಕೂಡಲೆ ಧೃವ ಜೇಬಲ್ಲಿದ್ದ ಚಾಕುವಿಗೆ ಕೈ ಹಾಕಿದ. ಆಗ ಹಿಂದೆ ನಿಂತಿದ್ದ ವ್ಯಕ್ತಿ ” ನಾನ್ರಿ ಅಣ್ಣ ಸಿದ್ದು.” ಅಂತ ಹೇಳಿದ. “ಸಿದ್ದು” ಎಲ್ಲೊ ಕೇಳಿದ ಹೆಸರು ಆದರೆ ತಕ್ಷಣಕ್ಕೆ ಜ್ಞಾಪಕವಾಗುತ್ತಿಲ್ಲ. ಮುಖಚಹರೆಯನ್ನು ನೋಡಿದ ನೆನಪು ಕೂಡ ಇಲ್ಲ, ಯಾರಿರಬಹುದೆಂದು ಧೃವ ಆತನನ್ನು ದಿಟ್ಟಿಸಿ ನೋಡಿದ. “ನಿಮಗ ನನ್ನ ಪರಿಚಯ ಇರಲಿಕ್ಕಿಲ್ಲ. ಆದರೆ ನಾನು ನಿಮ್ಮನ್ನ ಶಶಿ ಸಾಹೇಬರ ಜೊತೆ ನೋಡಿನ್ರಿ” ಅಂತ ಉತ್ತರಿಸಿದ. ಧೃವನಿಗೆ ಈಗ ಸಮಾಧಾನವಾಯ್ತು. ಬನ್ನಿ ಕೂತ್ಕೊಳ್ಳಿ ಅನ್ನುತ್ತಾ ಹತ್ತಿರವಿದ್ದ ಕುರ್ಚಿಯನ್ನು ಅವನ ಕಡೆ ನೂಕಿದ. “ಹೌದು ನನ್ನಿಂದ ಏನಾಗಬೇಕಿತ್ತು” ಧೃವ ಕೇಳಿದ. “ಅದನ್ನ ಹಿಂಗ ಎಲ್ಲರ ಮುಂದೆ ಹೇಳಾಕ ಆಗಲ್ರಿ. ಸಂಜಿಗೆ ನನ್ನ ಜೊತಿ ಬರ್ರಿ ನಿಮ್ಮನ್ನ ಒಂದು ಕಡೆ ಕರ್ಕೊಂಡು ಹೊಕ್ಕೇನಿ ಅಲ್ಲಿ ಮಾತಾಡೋನಂತ”.
ಅವನ ಮಾತನ್ನು ಕೇಳಿ ಧೃವನಿಗೆ ಮತ್ತೆ ಸಂಶಯವಾಯ್ತು. ಇವನ್ಯಾರೆಂದು ತನಗೆ ಗೊತ್ತಿಲ್ಲ. ಎಲ್ಲಿಗೊ ಕರೆದುಕೊಂಡು ಹೋಗ್ತೇನಿ ಅಂತ ಇದಾನೆ. ಇವನೇನಾದ್ರೂ ದೌಬಲ್ ಗೇಮ್ ಆಡ್ತಾ ಇದ್ದಾನಾ? ಯಾರು ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಏನಾದ್ರು ಮಾಡಿಬಿಟ್ರೆ ಏನು ಮಾಡೋದು?
ಒಂದಿಬ್ಬರು ಮೈಮೇಲೆ ಬಿದ್ದರೆ ಎದುರಿಸಬಹುದು ಆದ್ರೆ ಹತ್ತಿಪತ್ತು ಜನ ಜೀವ ತಗೆಯಲು ಬಂದ್ರೆ ಏನು ಮಾಡ್ಲಿ ಎಂದು ಯೋಚಿಸತೊಡಗಿದ. ಆಗಿದ್ದು ಆಗಲಿ ಮುಂದೆ ನೋಡಿದರಾಯ್ತು ಅಂತ ಧೈರ್ಯ ತಗೆದುಕೊಂಡು “ಎಲ್ಲಿಗೆ ಬರ್ಬೇಕು” ಅಂತ ಕೇಳಿದ. “ಎಲ್ಲಿಗೂ ಇಲ್ರಿ ಅಣ್ಣ. ಸಂಜೆ ಕಡೆ ನಾನು ಒಂದು ಜಾಗಕ್ಕೆ ಕರ್ಕೊಂಡು ಹೊಕ್ಕೇನಿ ಅಲ್ಲಿಗೆ ಬರ್ರಿ. ಅದ್ರ ಫೋನ್ ತರಂಗಿಲ್ಲ ನೋಡ್ರಿ” ಅಂತ ಹೇಳಿದ. ದೃವನಿಗೆ ಗಾಬರಿಯಾಯಿತು ಆದರೂ ಅದನ್ನ ತೋರಿಸಿಕೊಳ್ಳದೆ “ಏನು ನನ್ನ ಕರ್ಕೊಂಡು ಹೋಗಿ ಸಾಯಿಸ್ಬೇಕು ಅಂತ ಪ್ಲಾನ್ ಮಾಡಿರಿ ಏನ್ “ಅಂತ ನಗುತ್ತಾ ಕೇಳಿದ. ಅದಕ್ಕೆ ಸಿದ್ದು ಗಲ್ಲಕ್ಕೆ ಹೊಡೆದುಕೊಳ್ಳುತ್ತಾ “ಹಂಗ ಯಾಕ ನಾವ್ ಮಾಡೋನ್ರಿ. ನಿಮ್ಮನ್ನ ಸಾಯಿಸಿದ್ರ ನಾವು ಉಳಿತೇವೆನು? ನಿಮಗ ನನ್ನ ಮೇಲೆ ನಂಬಿಕೆ ಇದ್ರ ಬರ್ರಿ. ಇಲ್ಲ ಅಂದ್ರೆ ಬ್ಯಾಡ ” ಅಂತ ಉತ್ತರಿಸಿದ್ದ. ಅವನ ಮಾತಲ್ಲಿ ಕಲ್ಮಶವಿರಲಿಲ್ಲವೆಂಬ ಅಂಶವನ್ನು ದೃವ ಗಮನಿಸಿದ.
ಫೋಟೋ ಕೃಪೆ : google
ಸಂಜೆಯಾಗಲು ಇನ್ನು ತುಂಬಾ ಸಮಯವಿತ್ತು. ಸಂಜೆ ಇದೆ ಡಾಭಾಕ್ಕೆ ಬಂದು ಕರೆದುಕೊಂಡು ಹೋಗ್ತೇನಿ ಅಂತ ಸಿದ್ದು ಹೇಳಿ ಹೊರಟು ಹೋದ. ಧೃವನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಕೂಡಲೆ ಪಚ್ಚುವಿಗೆ ಕರೆ ಮಾಡಿ ಎಲ್ಲ ತಿಳಿಸಿದ. ನಂತರ ತನ್ನ ಆರ್.ಎಕ್ಸ್ 100 ಬೈಕ್ ಹತ್ತಿ ಹುಬ್ಬಳ್ಳಿಯ ಕಡೆ ಹೊರಟ.
ಹುಬ್ಬಳ್ಳಿ ಕನಸುಗಾರರ ಊರು. ಅದೆಷ್ಟೊ ಅಲೆಮಾರಿಗಳು ಇಲ್ಲಿ ಬಂದು ಜೀವನ ಕಟ್ಟಿಕೊಂಡಿದ್ದಾರೆ. ಸಾಧು ಸಂತರು ನಡೆದಾಡಿದ ಜಾಗ. ಈಗ ಎಷ್ಟು ಅಭಿವೃದ್ಧಿಯಾಗಿದೆಯೆಂದರೆ ದೇಶದ ದೊಡ್ಡ ದೊಡ್ಡ ಕಂಪನಿಗಳು ಹುಬ್ಬಳ್ಳಿಯಲ್ಲಿ ತಮ್ಮ ಬ್ರಾಂಚಗಳನ್ನ ತೆರೆಯುತ್ತಿವೆ. ಛೋಟಾ ಮುಂಬೈ ಅಂತ ಪ್ರಖ್ಯಾತಿ ಹೊಂದಿದ ಹುಬ್ಬಳ್ಳಿ, ಬೆಳಗ್ಗೆ ಅದೆಷ್ಟು ಸುಂದರವಾಗಿ ಕಾಣುತ್ತದೊ ರಾತ್ರಿ ಅಷ್ಟೆ ಭಯಂಕರವಾಗಿರುತ್ತದೆ. ಹೌದು ರಾತ್ರಿಯಾದರೆ ಸಾಕು ಈ ಮಹಾನಗರಿಯಲ್ಲಿ ಅವ್ಯವಹಾರದ ದಂಧೆಗಳು ಸೆಟ್ಟಲ್ಮೆಂಟ್ ಗಳು ಕಣ್ಣಿಗೆ ಕುಕ್ಕುತ್ತವೆ.
ಫೋಟೋ ಕೃಪೆ : google
ರಾಣಿ ಚೆನ್ನಮ್ಮ ಸರ್ಕಲ್ ಗೆ ಹೋದ ಧೃವ ಹಾಗೆ ಸುಟ್ಟುತ್ತಾ ಮೂರು ಸಾವಿರ ಮಠಕ್ಕೆ ಬಂದ. ಅರ್ಬನ್ ಮಾಲ್, ನ್ಯಾಷನಲ್ ಮಾರ್ಕೆಟ್ ಒಂದು ರೌಂಡು ಹಾಕಿ, ಹರ್ಷ ಕಾಂಪ್ಲೆಕ್ಸ್ ಕಡೆ ಹೋಗುತ್ತಿರುವಾಗ ಆತನಿಗೆ ಕಂಡಿದ್ದು ಶುಭಂ. ಶುಭಂ ಮೂಲತಃ ಹಾನಗೇರಿಯವನು ಧೃವನ ಆತ್ಮೀಯ ಸ್ನೇಹಿತ. ಹುಬ್ಬಳ್ಳಿ ಆತನಿಗೆ ಎಷ್ಟು ಗೊತ್ತಿತ್ತೆಂದರೆ ಹುಬ್ಬಳ್ಳಿಯ ಗಲ್ಲಿ ಗಲ್ಲಿಯಲ್ಲೂ ಆತನಿಗೆ ಪರಿಚಯಸ್ತರಿದ್ದರು. ದೊಡ್ಡ ದೊಡ್ಡ ಡಾನ್ ಗಳಿಂದ ಹಿಡಿದು ದೊಡ್ಡ ದೊಡ್ಡ ಪೊಲೀಸರವರೆಗೂ ನೆಟ್ವರ್ಕ್ ಇತ್ತು. ಆತ ಜನರನ್ನು ಹೇಗೆ ಸಂಪಾದಿಸಿದ್ದಂನೆಂದರೆ ಆತನಿಗಾಗಿ ಪ್ರಾಣ ಕೊಡಲು ತಯಾರಿದ್ದರು. ಇಷ್ಟೆಲ್ಲ ಇದ್ದರೂ ಶುಭಂ ಸಾಮಾನ್ಯನಂತೆ ಇದ್ದ. ಹುಬ್ಬಳ್ಳಿಯ ಹತ್ತಿರದಲ್ಲಿ ಒಂದು ಫ್ಯಾಕ್ಟರಿ ಇಟ್ಟಿದ್ದ.
ಧೃವ ಶುಭಂನಿಗೆ ತಾನು ಬಂದ ಕೆಲಸದ ಬಗ್ಗೆ ಒಂಚೂರು ಬಿಟ್ಟು ಕೊಡಲಿಲ್ಲ. ಆತನ ಜೊತೆ ಸ್ವಲ್ಪ ಹೊತ್ತು ಹರಟೆ ಹೊಡೆದು ನಾನಿನ್ನು ಬರುತ್ತೇನೆಂದು ಹೇಳಿ ಬೈಕು ಹತ್ತಿದ. ಸಂಜೆ 6.30 ಆಗಿತ್ತು. ಜಗದೀಶ್ ಢಾಬಾಕೆ ಹೋಗಲು 15 ನಿಮಿಷದ ದಾರಿ. ಸಿದ್ದು ತನಗಾಗಿ ಕಾಯುತ್ತಿರಬೇಕೆಂದು ಯೋಚಿಸುತ್ತ ಬೈಕ್ ಸ್ಟಾರ್ಟ್ ಮಾಡಿದ. ಆ ಗಲ್ಲಿ ಈ ಗಲ್ಲಿ ದಾಟಿ ಮುಂದೆ ಹೋಗುತ್ತಿರುವಾಗಲೇ ತನ್ನ ಬೈಕನ್ನು ಯಾರೊ ಹಿಂಬಾಲಿಸುತ್ತಾ ಇದ್ದಾರೆ ಎಂದೇನಿಸಿತು. ಮಿರರ್ ನೋಡಿದಾಗ ಯಾರೊ ಇಬ್ಬರು ದಾಂಡಿಗರು ಹೀರೊ ಬೈಕಿನಲ್ಲಿ ಬರುತ್ತಿರುವುದು ಕಾಣಿಸಿತು. ಕೂಡಲೆ ಬೈಕಿನ ಬ್ರೇಕ್ ಹಾಕಿದ. ಅವನು ಬೈಕ್ ನಿಲ್ಲಿಸಿದ್ದನ್ನು ಕಂಡು ಆ ದಾಂಡಿಗರು ತಮ್ಮ ಬೈಕಿನ ವೇಗ ಹೆಚ್ಚಿಸಿ ಮಕಬುಲಿಯ ಗಲ್ಲಿಯಲ್ಲಿ ಮಾಯವಾದರು.
ಫೋಟೋ ಕೃಪೆ : google
ಧೃವ ತನ್ನ ಬೈಕನ್ನು ಯುಟರ್ನ್ ಹೊಡೆದು ಬೇರೆ ದಾರಿಯಿಂದ ಢಾಬಾಕ್ಕೆ ಬಂದ. ಢಾಬಾದಲ್ಲಿ ಕೂತು ಟಿ ಕುಡಿಯುತ್ತ ಯೋಚಿಸತೊಡಗಿದ. ಆತನ ತಲೆಯಲ್ಲಿ ಒಂದೆ ಪ್ರಶ್ನೆ ಓಡುತ್ತಾ ಇತ್ತು.
“ಯಾರವರು ”
ಆಗಲೆ ಸಿದ್ದು ಬಂದು ದೃವನಿಗೆ ಬನ್ನಿ ಹೋಗೋಣ ಅಂತ ಸನ್ನೆ ಮಾಡಿದ.
ಮುಂದುವರೆಯುವುದು…
- ವಿಕಾಸ್. ಫ್. ಮಡಿವಾಳರ