ಹೃದಯವನು ತಾಕುವ ಮನದಲಿ ಚಿಗರುವ ಗೋಡೆಗಿಡ

ಕವಿಯತ್ರಿ ಕೆ ಎನ್ ಲಾವಣ್ಯಪ್ರಭಾ ಅವರ ‘ಗೋಡೆಗಿಡ’ ಕವನ ಸಂಕಲನದ ಕುರಿತು ನಾರಾಯಣಸ್ವಾಮಿ.ವಿ ಅವರು ಬರೆದ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ….

ಕೃತಿ: ಗೋಡೆಗಿಡ
ಲೇಖಕರು : ಕೆ ಎನ್ ಲಾವಣ್ಯಪ್ರಭಾ
ಪ್ರಕಾಶಕರು : ಭೂಮಿಕಾ ಪ್ರಕಾಶನ ಮೈಸೂರು
ಬೆಲೆ : 50.00

ಬರವಣಿಗೆ ಖಾಸಗೀ ಮನಸ್ಸಿನ ಲೀಲೆಗಳನ್ನು ಸಮಥ೯ ರೂಪಕವಾಗಿಸಿದಾಗ ಕವಿತೆ ಶಕ್ತಿಯುತವಾಗುತ್ತದೆ. ಹಾಗಾಗುವುದಕ್ಕೆ ಭಾಷೆಯನ್ನು ತೀರ ತಮ್ಮದೇ ಅನ್ನುವ ಹಾಗೆ ಬಳಸುವುದು ಅಗತ್ಯ. ತಮ್ಮ ಆಡುಮಾತಿನ ರೀತಿಯಲ್ಲಿ ತಮ್ಮದೆ ಮನಸ್ಸು ಕಂಡ ಲೋಕವನ್ನು, ಸಂಬಂಧಗಳ ಸ್ವರೂಪವನ್ನು, ಆತ್ಮೀಯವಾಗಿ ಚಿತ್ರಿಸುವ ರಚನೆಗಳು ಅವರ ಸಾಮರ್ಥ್ಯದ ದ್ಯೋತಕಗಳಾಗಿವೆ. ಅದರೆ ಮನಸ್ಸಿನ ಭಾವ, ಪ್ರಕ್ರಿಯೆಗಳನ್ನು ನಂಬಿಕೊಂಡು ಕವಿ ಬಹಳ ದೂರ ಸಾಗಲಾಗದು. ಕವಿತೆ ಎಷ್ಟರಮಟ್ಟಿಗೆ ಮನಸ್ಸಿನ ಸೃಷ್ಟಿಯೋ ಅಷ್ಟೇ ಮಟ್ಟಿಗೆ ಕಸುಬುದಾರಿಕೆಯು ಹೌದು. ಕವಿ ಹೇಗೆ ಬರೆಯಬೇಕೆಂದು ಯಾರು ಹೇಳಲಾಗದು ಹೇಳಬಾರದು ಕೂಡ….

ಓ ಎಲ್ ನಾಗಭೂಷಣಸ್ವಾಮಿ ಕನ್ನಡ ಸಾಹಿತ್ಯ ಲೋಕದಲ್ಲಿ ಬಹಳಷ್ಟು ಪರಿಚಿತವಾದ ಹೆಸರು ಕೆ ಎನ್ ಲಾವಣ್ಯಪ್ರಭಾ. ತಮ್ಮ ಬರಹದಿಂದ ಮತ್ತು ಕವಿತೆಗಳನ್ನು ಓದುವ ಮೂಲಕ ಕರುನಾಡಿನ ಸಾಹಿತ್ಯದ ಓದು ಬರಹ ಬಲ್ಲವರ ಎದೆಯೊಳಗೆ ತಮ್ಮ ಗಾಂಭೀರ್ಯದ ನಡೆನುಡಿಯೊಂದಿಗೆ ಹಿರಿಯರನ್ನು ಗೌರವಿಸುತ್ತಾ ಕಿರಿಯರನ್ನು ಪ್ರೋತ್ಸಾಹಿಸುವ ಗುಣವನ್ನು ಮೈಗೂಡಿಕೊಂಡು ತಾವು ಬೆಳೆಯುತ್ತಾ ಇತರರನ್ನು ಬೆಳೆಸುವ ಸಹೃದಯ ಗುಣವನ್ನು ಹೊಂದಿದ್ದಾರೆ.

ಶ್ರೀಮತಿ ಕೆ ಎನ್ ಲಾವಣ್ಯ ಪ್ರಭಾ ರವರು ಬರೆದಿರುವ ‘ಗೋಡೆಗಿಡ’ ಕವನಸಂಕಲನವನ್ನು ಪರಿಚಿಸುವ ಮುನ್ನ ಅವರ ಪರಿಚಯವನ್ನು ತಿಳಿಯೋಣ.

ಶ್ರೀಮತಿ ಕೆ ಎನ್ ಲಾವಣ್ಯ ಪ್ರಭಾ ರವರು ಕನಕಪುರದಲ್ಲಿ ಜನಿಸಿದರು, ಪತಿ ಅರುಣ್ ಕುಮಾರ್ ಮತ್ತು ಮಕ್ಕಳಾದ ಭೂಮಿಕಾ, ಚಿನ್ಮಯಿಯೊಂದಿಗೆ ಹದಿನೈದು ವರುಷಗಳಿಂದ ಮೈಸೂರಿನಲ್ಲಿ ವಾಸವಾಗಿದ್ದಾರೆ. ಪದವಿ ಮುಗಿಸಿ ಹದಿನೈದು ವರುಷಗಳ ನಂತರ ಸ್ನಾತಕೋತ್ತರ ಪದವಿಯನ್ನು ಪಡೆದು ಈಗ ಪಿ. ಎಚ್ .ಡಿ ಪದವಿಯ ಅಧ್ಯಯನದಲ್ಲಿ ನಿರತರಾಗಿದ್ದಾರೆ.

ಶ್ರೀಮತಿ ಕೆ ಎನ್ ಲಾವಣ್ಯ ಪ್ರಭಾ ರವರ ಹುಟ್ಟಲಿರುವ ನಾಳೆಗಾಗಿ ಎಂಬ ಚೊಚ್ಚಲ ಕವನಸಂಕಲನ 2003 ರಲ್ಲಿ ಪ್ರಕಟವಾಗಿದೆ ಮತ್ತು ಸುಮಾರು ಹದಿನೆಂಟು ವರುಷಗಳ ನಂತರ ಇವರ ಗೋಡೆಗಿಡ ಕವನ ಸಂಕಲನ ಪ್ರಕಟವಾಗಿದೆ. ಇವರ ಬಹಳಷ್ಟು ಕವಿತೆಗಳು ರಾಜ್ಯಮಟ್ಟದ ಕವನ ಸ್ವಧೆ೯ಯಲ್ಲಿ ಬಹುಮಾನ ಪಡೆದ ಕವಿತೆಗಳಾಗಿವೆ ಈ ಕವನಸಂಕಲನದ ಬಹುತೇಕ ಕವಿತೆಗಳು ಪ್ರಜಾವಾಣಿ ವಿಜಯಕನಾ೯ಟಕ, ಕನ್ನಡ ಪ್ರಭ ಮಯೂರ ಸುಧಾ ತರಂಗ ಸಂಚಯ ಸಂಕ್ರಮಣ ಪತ್ರಿಕೆಯಲ್ಲಿ ಪ್ರಕಟವಾದ ಕವಿತೆಗಳಾಗಿವೆ.

ಗೋಡೆಗಿಡ ಈ ಕೃತಿಯನ್ನು ಶ್ರೀಮತಿ ಕೆ ಎನ್ ಲಾವಣ್ಯ ಪ್ರಭಾ ರವರು ಕನ್ನಡ ನಾಡಿನ ಪ್ರೀತಿಯ ಕವಿ ಡಾ॥ ಎಚ್ ಎಸ್ ವೆಂಕಟೇಶಮೂರ್ತಿ ರವರಿಗೆ ಅಪಿ೯ಸಿದ್ದಾರೆ.

ಕವಯಿತ್ರಿ ಪುಸ್ತಕ ಮುದ್ರಣದ ವಿಷಯದಲ್ಲಿ ಯಾವುದೇ ರಾಜಿಯಾಗದೇ ತಮ್ಮ ಬರಹವನ್ನು ಉತ್ಕೃಷ್ಟವಾದ ಕಾಗದವನ್ನು ಬಳಸಿ ಅಥ೯ಗಭಿ೯ತವಾದ ಮುಖಪುಟದಿಂದ ಹೊರತಂದ ಈ ಕೃತಿಯು ಸೊಗಸಾದ ಕವನಸಂಕಲನವಾಗಿ ರೂಪಿಸಿದ್ದಾರೆ.

ಈ ಕೃತಿಗೆ ಮುನ್ನುಡಿಯನ್ನು ಬರೆದವರು ಓ ಎಲ್ ನಾಗಭೂಷಣಸ್ವಾಮಿ ರವರು, ಕಥೆ ಕವಿತೆಗಳು ಇರಲಿ ಓದುವ ಅಭ್ಯಾಸವೇ ಕಡಿಮೆಯಾಗುತಿದೆ ಅನ್ನುವ ಆತಂಕ ಬಹಳ ಜನರನ್ನು ಕಾಡುತ್ತಿರುವ ಈ ಹೊತ್ತಿನಲ್ಲಿ ಒಂದು ಸಂಕಲನದಿಂದ ಇನ್ನೊಂದು ಸಂಕಲನಕ್ಕೆ ಐದಾರು ವರುಷಗಳು ಕಾದು ತಮ್ಮಂತಹ ಸಹೃದಯರಿಗೆ ಇವು ತಲುಪಿಯಾವು ಅನ್ನುವ ಭರವಸೆಯಲ್ಲಿ ಬರೆಯುತ್ತಿರುವ ಕವಿಗಳ ಪ್ರತಿನಿಧಿಯಂತಿರುವ ಶ್ರೀಮತಿ ಕೆ ಎನ್ ಲಾವಣ್ಯ ಪ್ರಭಾ ಅವರಿಗೆ ಯಶಸ್ವು ದೊರೆಯಲಿ.ಅವರ ಕಾವ್ಯ ರಚನೆಯ ಬಗ್ಗೆ ಅವರಿಗಿರುವ ಸಂಕೋಚ ಅತೃಪ್ತಿಗಳು ಮತ್ತಷ್ಟು ಒಳ್ಳೆಯ ಕವಿತೆಗಳಿಗೆ ಕಾರಣವಾಗಲಿ ಅಂತ ಹೇಳಿ ಹಾರೈಸಿದ್ದಾರೆ.

ಗೋಡೆಗಿಡ ಈ ಕವನಸಂಕಲನಕ್ಕೆ ಯಾವುದೇ ಬೆನ್ನುಡಿಯನ್ನು ಬಯಸದ ಕವಯಿತ್ರಿ ತನ್ನದೇ ಕವನವನ್ನು ಹಾಕುವುದರ ಮೂಲಕ ಬೆನ್ನುಡಿಯ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಈ ಕವನಸಂಕಲನದಲ್ಲಿ ಸುಮಾರು ನಲವತ್ತು ಕವಿತೆಗಳಿವೆ. ಪ್ರತಿಯೊಂದು ಕವಿತೆಯು ಕೂಡ ವಿಭಿನ್ನವಾದ ನೆಲೆಗಟ್ಟಿನಲ್ಲಿ ರಚನೆಯಾದ ಕವಿತೆಗಳು. ಈ ಕವನಸಂಕಲನದಲ್ಲಿನ ಕೆಲವು ಕವಿತೆಗಳನ್ನು ನಾನು ಪರಿಚಯ ಮಾಡುವೆ.

ಇಲ್ಲಿ ನಾನು, ಅಲ್ಲಿ ಮಲ್ಲಿಗೆ ಎಂಬ ಶೀರ್ಷಿಕೆಯ ಕವನದಲ್ಲಿ

ನನ್ನ ಕಪ್ಪು ಹೆರಳು
ಒಮ್ಮೆಲೇ ಗರಿಗೆದರಿ
ಅಸೆಯಿಂದ ಪಕ್ಕಕ್ಕೆ
ಇವನೆಡೆ ತಿರುಗಿದೆ

ಇವನ ಕಣ್ಣು , ಕಿವಿ, ಹೃದಯ
ತಗುಲಿಕೊಂಡಿದೆ
ಮೊಬೈಲಿಗೆ.
ಹೆಜ್ಜೆ ಸರಿದು ಹೋಗಲಿದೆ
ಅಯ್ಯೋ! ನೋಡಬಾರದೆ ಇವ
ನಗು ಮೊಗದ ಮಲ್ಲಿಗೆ?

ಮಲ್ಲಿಗೆ ತನ್ನನ್ನು ಕಾಡುವ ಪರಿಯನ್ನು ಕವಯಿತ್ರಿ ಧ್ಯಾನಿಸಲು ಹೊರಟಿದ್ದಾರೆ. ಮಳೆಯು ಬಂದು ನಿಂತ ಸಮಯ ಆದೊಂದು ವಿಶಿಷ್ಟವಾದ ರಸಗಳಿಗೆ ಪ್ರಕೃತಿಯಲ್ಲಿ ಮನಸ್ಸಿಗೆ ಎಷ್ಟೋ ಆಹ್ಲಾದಕರ ನೀಡುವ ಸಂಜೆಯ ಸಮಯದಲ್ಲಿ ಸಖನೊಂದಿಗೆ ಸಣ್ಣ ನಡಿಗೆ ಹೊರಟಾಗ ಮನದಲ್ಲಿ ಮೂಡುವ ಭಾವನೆಗಳನ್ನು ಯೋಚಿಸುತ್ತಾ ಆಗ ಅವನ ಜೊತೆಯಲ್ಲಿ ನಡೆದ ಸಪ್ತಪದಿ ಈಗ ಕೋಟಿ ಸಹಸ್ರಪದಿಗಳಾಗುತ್ತಿವೆ. ಹಾಗೆ ನಡೆಯುತ್ತಾ ಸಾಗಿದಾಗ ಮಾರುಕಟ್ಟೆಯಲ್ಲಿ ಗಿಜಗುಟ್ಟುವ ಜನಜಂಗುಳಿ ಆ ಜನಜಂಗುಳಿಯ ಮಧ್ಯೆಯೂ ಮಲ್ಲಿಗೆ ಜಾಜಿ ಸೇವಂತಿಗೆಯ ಬುಟ್ಟಿಯೊಂದಿಗೆ ಮುದುಕಿ ಮುದುರಿಕೊಂಡಿದ್ದರು. ಅವಳ ಮುಂದೆ ಹಾದುಹೋಗುವಾಗ ಮೂಗಿಗೆ ಪರಿಮಳವಾದ ಘಮವು. ತನ್ನ ಮನಸ್ಸನ್ನು ಬರಸೆಳೆಯುತಿದೆ ಬಿಳಿಯ‍ ತಾಜಾ ಮಲ್ಲಿಗೆ ಆ ಸಮಯದಲ್ಲಿ ತಲೆಯ ಕಪ್ಪು ಕೂದಲು ಗರಿಗೆದರಿದಾಗ ಸಖನ ಕಡೆ ನೋಡುತ್ತಾಳೆ. ಅದರೆ ನನ್ನತ್ಮ ಸಖನ ಕಣ್ಣು ಮನಸ್ಸು ಹೃದಯ ಮೊಬೈಲಿಗೆ ಅಂಟಿಕೊಂಡಿದೆ. ಆಕ್ಷಣದಲ್ಲಿ ಒಂದು ಕ್ಷಣ ನಗು ಮೊಗದ ಮಲ್ಲಿಗೆಯನ್ನು ಇವ ನೋಡಬಾರದೇ ಅಂತ ಮನಸ್ಸು ಅಲಾಪಿಸುತ್ತದೆ. ಹೂವು ನಗು ಪರಿಮಳದ ಮೋಹಕ್ಕೆ ಸಿಲುಕಿ ಮತ್ತೆ ಕಾಲೇಳೆಯುತ್ತಾ ಅವನ ಹಿಂದೆ ಹೆಜ್ಜೆ ಹಾಕಿದೆ. ಅದರೆ ನಡೆಯುವ ಆ ಸಂಜೆಯಲಿ ತವಕದಿಂದ ಅರಿಹೋಗುತ್ತದೆ ಸಂಜೆಯ ದೀಪ ನನ್ನ ಕಾಡುವ ಆ ಮಲ್ಲಿಗೆಯ ಬೆಳಕಿಲ್ಲದೆ ಇದೇನು ಧ್ಯಾನ ಮನೆ ಸಿಕ್ಕಿತಲ್ಲ ನಡಿ ಒಳಗೆ ಎಂಬ ಇವನ ಬಿರುಸಾದ ನುಡಿಗೆ ಇಲ್ಲಿ ನಾನು ಅಲ್ಲಿ ಮಲ್ಲಿಗೆ ಇಬ್ಬರೂ ಕೂಡ ಸಪ್ಪಗೆಯಾದಂತೆ ಎಂದು ಕವಯಿತ್ರಿ ಬಹಳಷ್ಟು ಸೊಗಸಾಗಿ ಕವಿತೆಯನ್ನು ಬರೆದಿದ್ದಾರೆ.

ಮುನ್ನುಡಿಕಾರರು ಹೇಳುವಂತೆ ಶ್ರೀಮತಿ ಕೆ ಎನ್ ಲಾವಣ್ಯ ಪ್ರಭಾ ರವರು ಸಂಬಂಧಗಳನ್ನು ಕುರಿತು, ತಾವು ಕಂಡ ದಿನನಿತ್ಯದ ಬದುಕಿನ ಚಿತ್ರಗಳನ್ನು ಕುರಿತು ಮನಸ್ಸಿನ ಭಾವದ ಪ್ರತಿಕ್ರಿಯೆಗಳನ್ನೆ ಕಾವ್ಯದ ವಸ್ತುವಾಗಿ ಮಾಡಿಕೊಂಡಿದ್ದಾರೆ.

ನರೆತು ಬಿಳಿಯಾದ ಕೂದಲೆತ್ತಿ
ಚಂದ ತುರುಬು ಕಟ್ಟುವ ಕೌಶಲ
ಸತ್ತ ನಿರಂಜನನ ಕಥೆ
ಸಾವಿರ ಬಾರಿಯಾದರೂ ಸರೀ
ಅಷ್ಟೇ ರಸವಸತ್ತಾಗಿ ಹೇಳುವ ಹುಮ್ಮಸ್ಸು
ಜಾತಿಯಲ್ಲದವರನ್ನು ಹೊಸ್ತಿಲಲ್ಲೆ
ಅಟ್ಟುವ ಅವಳ ಸಣ್ಣತನ
ಚೀಟಿ ಸೀರೆಯ ಚುಂಗಿನ
ವಾಕರಿಕೆಯ ನಡುವೆಯೂ
ವಾತ್ಸಲ್ಯದ ಹಣಕು….

ಈ ಕವಿತೆಯನ್ನು ಅಜ್ಜಿಯೆಂಬ ಶೀರ್ಷಿಕೆಯಲ್ಲಿ ಬರೆದಿದ್ದು ಕವಯಿತ್ರಿ ತನ್ನ ಅಜ್ಜಿಯ ಜೀವನ ಮನಸ್ಥಿತಿ ಬಗ್ಗೆ ಬರೆದಿದ್ದಾರೆ. ಆಜ್ಜಿಯು ಇಲ್ಲದ ಮನೆಗೆ ಒಲ್ಲದ ಮನಸ್ಸಿನಿಂದಲೇ ಹೋದಾಗ ಅತ್ತೆ ಕೇಳುತ್ತಾಳೆ ಅಜ್ಜಿ ತೀರಿಕೊಂಡ ನಂತರ ನೀನು ಈ ಮನೆಗೆ ಬರಲೇ ಇಲ್ಲ ನಾವು ಇಲ್ಲವೇ ಎಂದು ಆರೋಪಿಸಿದಾಗ ಆಗ ತಾನು ತಪ್ಪೊಪ್ಪಿಕೊಂಡು ಮನೆಯ ಮೂಲೆಯನು ಹುಡುಕಾಡಿದಾಗ ಕಾಡುವುದು ಅಜ್ಜಿಯ ನೆನಪುಗಳು ನೆರತ ಕೂದಲನ್ನು ಎತ್ತಿ ತುರುಬು ಕಟ್ಟುವ ಕಲೆ ಅಜ್ಜಿಗೆ ಮಾತ್ರ ಗೊತ್ತಿತ್ತು ಸತ್ತು ಹೋದ ನಿರಂಜನ ಕಥೆಯನ್ನು ಸಾವಿರ ಬಾರಿ ಹೇಳಿದರು ಅಷ್ಟೇ ರಸವತ್ತಾಗಿ ಹೇಳುವ ಹುಮ್ಮಸ್ಸು ಅಕೆಯಲ್ಲಿ ಆಡಗಿತ್ತು ಮತ್ತು ಅಜ್ಜಿಯಲ್ಲಿ ಒಂದು ಸಣ್ಣತನದ ಬುದ್ದಿಯಿತ್ತು ತನ್ನ ಜಾತಿ ಅಲ್ಲದವರನ್ನು ಮನೆಯೊಳಗೆ ಸೇರಿಸದೆ ಬಾಗಿಲ ಹೊಸ್ತಿಲುನಲ್ಲೆ ನಿಲ್ಲಿಸುತ್ತಿದ್ದಳು. ವಾತ್ಸಲ್ಯದ ಮೂತಿ೯ಯವಳು ಎಂದು ಅಥ೯ಪೂಣ೯ವಾದ ಕವಿತೆಯನ್ನು ಹಣೆಯುವುದರಲ್ಲಿ ಕವಯಿತ್ರಿ ಯಶಸ್ವಿಯಾಗಿದ್ದಾರೆ.

ಒಳಕೊಳದೊಳಗೆ ಭ್ರೂಣ
ಕೈ ಕಾಲಾಡಿಸಿದಂತೆಲ್ಲಾ
ಕಿಬ್ಬೊಟ್ಟೆಯಿಂದ ಎದೆಗೇ
ಲಗ್ಗೆ ಇಟ್ಟ ನೋವು
ಒತ್ತಿಟ್ಟ ಹಾಗೆಲ್ಲಾ ಹೊರಜಿಗಿತ
ಬೆಳಗು ನಾಲ್ಕರ ಜಾವ
ಹೊತ್ತು ಗೊತ್ತಿಲ್ಲ ಇದಕೆ
ನಿಮಿಷ ಒಪ್ಪೊತ್ತಲ್ಲೇ ಪ್ರಸವ
ಎದೆ ನಿರಾಳ
ಹಗೂರ ಮೈಮನಸ್ಸು
ಕಣ್ಬಿಟ್ಟದ್ದು ನನ್ನ ಕೂಸು
ಕವಿತೆ.

ಕವಿತೆಯನ್ನು ಕೂಸು ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ ಒಂದು ಮಗುವಿನಂತೆ ಪರಾಗ ಸ್ವಶ೯ಕೆ ಮಾಸ ಮಾಸವು ಬಿಗಿದಿಟ್ಟ ಋತುಚಕ್ರ ಈ ಸಮಯದ ಹುಳಿ ಒಗರು ತಿನ್ನುವ ಬಯಕೆ ಒಡಲೊಳಗೆ ಪಿಸುಮಾತನಾಡುತಾ ರಕ್ತ ಮಾಂಸಗಳಿಂದ ಮತ್ತೊಂದು ಹೃದಯ ಜೋಡನೆಯಾಗುತ್ತದೆ ಕಾಲಾಡಿಸಲಾಗಲೆಲ್ಲಾ ಕಿಬ್ಬೊಟ್ಟೆಯಲಿ ನೋವು ಪ್ರಸವ ವೇದನೆಗೆ ಸಮಯವೇ ತಿಳಿಯುವುದಿಲ್ಲ ಪ್ರಸವಾದಗ ನಿರಾಳ ಮನಸ್ಸು ಆಗ ಕಣ್ಣು ತೆರೆದಿದ್ದು ನನ್ನ ಕೂಸು ಕವಿತೆ ಅಂತ ಕವಯಿತ್ರಿ ಶ್ರೀಮತಿ ಕೆ ಎನ್ ಲಾವಣ್ಯ ಪ್ರಭಾ ರವರು ಬಹಳಷ್ಟು ಮಾಮಿ೯ಕವಾಗಿ ಕವಿತೆಯನ್ನು ಬರೆದಿದ್ದಾರೆ.

ಅಂಬೆಗಾಲಿಟ್ಟು ಹೊಸ್ತಿಲ ದಾಟಿ ಹೋಗಿ
ಮೈಕೈಯೆಲ್ಲಾ ಹೊಲಸು ಮತ್ತಿಕೊಂಡು
ತುಟಿಯೆಲ್ಲಾ ಮಣ್ಣಾಗಿದ್ದರೂ
ಮಳ್ಳನಂತೆ ನಿಂತು ಬಿಡುತ್ತಾನೆ ನೋಡು ಹೇಗೆ
ಗದರಿಸಿದಾಕ್ಷಣ ಬಾಯಿ ತೆರೆಯುತ್ತಾನೆ
ಸೂರ್ಯ ಚಂದ್ರ ನಕ್ಷತ್ರ ಸಾಗರ
ಭೂಮಂಡಲ ಕಂಡು
ಬಾಯಿ ಬಿಡುವ ಸರದಿ ಈಗ ನನ್ನದು…..

ಈ ಕವಿತೆಯಲ್ಲಿ ಕವಯಿತ್ರಿ ಕೃಷ್ಣ ಲೀಲೆಗಳನ್ನು ಬಹು ಸೊಗಸಾಗಿ ವಣಿ೯ಸಿದ್ದಾರೆ.

‘ಗೋಡೆಗಿಡ’  ಕವಯತ್ರಿ ಕೆ ಎಸ್ ಲಾವಣ್ಯ ಪ್ರಭಾ

ಗೆಳೆಯ ಈ ಕಪ್ಪು ರಾತ್ರಿ
ಯಲ್ಲೊಮ್ಮೆ
ಈ ಕಪ್ಪು ಹೃದಯದೊಳ
ಬಂದು ಧೇನಿಸಬಲ್ಲೆಯಾ
ನನ್ನೊಡನೆ ನೀನು…..

ಇದೊಂದು ಪ್ರೇಮ ಕಾವ್ಯವಾಗಿ ಮೂಡಿಸಿದ್ದಾರೆ ಕಪ್ಪುಚಮ೯ದ ಮೃದು ಸ್ವಶ೯ ಉನ್ಮತ್ತನಾಗುತ್ತಿಯಾ ನೀನು ಗೆಳೆಯ ಕತ್ತಲು ರಾತ್ರಿಯಲ್ಲೊಮ್ಮೆ ಈ ಕಪ್ಪು ಹೃದಯದೊಳಗೆ ಬಂದು ನನ್ನ ಪ್ರೀತಿಯನು ಧ್ಯಾನಿಸುವೆಯಾ ಎಂಬ ಕೋರಿಕೆಯಲ್ಲಿ ಕವಿತೆ ಕೊನೆಗೊಳ್ಳುತ್ತದೆ.

ಈ ಕವನ ಸಂಕಲನದಲ್ಲಿ ಒದ್ದೆ ಮಣ್ಣಿನ ತುಂಬಾ ಚುಕ್ಕಿ ಚಿತ್ತಾರ, ಬೇವು ಬೆಲ್ಲ, ಇಲ್ಲ ಸಾಂತ್ವನ , ಕೊಳಲು , ಚಂದಿರ ಎಲ್ಲಾ ಕವಿತೆಗಳು ಸೊಗಸಾಗಿವೆ. ಓದುಗರ ಮನಸೆಳೆಯಿವ ಸಾಲುಗಳಿವೆ. ಪ್ರೀತಿಯ ಕವಿತೆಗಳಿವೆ ಅಲಾಪನೆಯಿದೆ, ಅನುರಾಗವಿದೆ, ಭಾವನೆಗಳ ಬೆಳಕಿದೆ, ಜೀವನದ ಆಗುಹೋಗುಗಳಿವೆ. ಎಲ್ಲಾ ತರಹ ಭಾವನೆಗಳನ್ನು ಕವಿತೆಗಳಾಗಿ ಮೂಡಿಸಿದ್ದಾರೆ. ಈ ಕವನ ಸಂಕಲನದ ಎಲ್ಲಾ ಕವಿತೆಗಳನ್ನು ವಿವರಿಸುತ್ತಾ ಹೋದರೆ ಓದುಗ ಮನದಲ್ಲಿ ಈ ಕೃತಿಯ ಬಗ್ಗೆ ಕುತೂಹಲ ಕಳೆದು ಹೋಗಬಹುದು ಅದರಿಂದ ಕೆಲವೊಂದು ಕವಿತೆಗಳ ಸಾಲುಗಳನ್ನು ಅಷ್ಟೇ ಪರಿಚಯಿಸಿದೆ.

ದಯವಿಟ್ಟು ಬರಹಗಾರರು ಓದುಗ ಪ್ರಿಯರು ಎಲ್ಲಾರೂ ಗೋಡೆಗಿಡ ಈ ಕವನ ಸಂಕಲನವನ್ನು ಕೊಂಡು ಓದಿ ಕವಯಿತ್ರಿಗೆ ಪ್ರೋತ್ಸಾಹ ಮಾಡುವಿರೆಂದು ಬಯಸುವೆ.

ಆತ್ಮೀಯವಾಗಿ ಪುಸ್ತಕವನ್ನು ಕೊಟ್ಟು, ಕೃತಿಯನ್ನು ಓದುವ ಭಾಗ್ಯ ನನ್ನದಾಗಿಸಿದಕ್ಕೆ ಧನ್ಯವಾದಗಳು. ನಿಮ್ಮಿಂದ ಇನ್ನೂ ಹತ್ತಾರು ಕೃತಿಗಳು ಕನ್ನಡಮ್ಮನ ಮಡಿಲನ್ನು ಸೇರಲಿ. ಈ ಕೃತಿಯು ನಿಮಗೆ ಹೆಸರನ್ನು ತಂದುಕೊಡಲಿ ನಿಮಗೆ ಗೌರವಧಾರಗಳು ಲಭಿಸಲಿ ಎಂದು ಹಾರೈಸುವೆ.


  • ನಾರಾಯಣಸ್ವಾಮಿ.ವಿ (ನಾನಿ) – ಮಾಸ್ತಿ ಕೋಲಾರ ಜಿಲ್ಲೆ

2 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW