ಭೂವೈಕುಂಠವೆಂಬ ‘ಪಂಡರಾಪುರ’ – ಸೌಮ್ಯ ಸನತ್

ಕರ್ನಾಟಕದಲ್ಲಿನ ಹಲವಾರು ದಂತಕತೆಗಳ ಪ್ರಕಾರ ಈಗ ಪಂಡರಾಪುರದಲ್ಲಿ ಇರುವಂತಹ ಶ್ರೀವಿಜಯವಿಠ್ಠಲನ ಅಂದು ಹಂಪಿಯಲ್ಲಿ ಇದ್ದಂತಹ ವಿಜಯವಿಠ್ಠಲ. ವಿಜಯನಗರ ಸಾಮ್ರಾಜ್ಯ ಕೊನೆಗೊಂಡಾಗ ಅಲ್ಲಿದ್ದಂತಹ ವಿಠಲ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಪಂಡರಾಪುರದಲ್ಲಿ ಪ್ರತಿಷ್ಠಾಪಿಸಲಾಗಿತ್ತು ಎಂಬ ನಂಬಿಕೆ ಇದೆ.  ಸೌಮ್ಯ ಸನತ್ ಅವರ ಲೇಖನಿಯಲ್ಲಿ ಮೂಡಿ ಬಂದ ಪಂಡರಾಪುರ ದರ್ಶನ…

ಪಂಡರಾಪುರ ಹಿಂದೂ ದೇವರಾದ ವಿಠ್ಠಲನ ಪೂಜಿಸುವ ಶ್ರದ್ಧಾ-ಭಕ್ತಿ ಕೇಂದ್ರ ಹಾಗು ಭಾರತದ ಸುಪ್ರಸಿದ್ಧ ತೀರ್ಥಕ್ಷೇತ್ರ.ಜಗದ್ವಿಖ್ಯಾತಿಯನ್ನು ಹೊಂದಿರುವ ಪಂಡರಾಪುರದ ಈ ದೇವಾಲಯವು ಮಹಾರಾಷ್ಟ್ರದ ಭೀಮಾ ನದಿಯ ಬಲದಂಡೆಯ ಮೇಲಿರುವ ಸೋಲಾಪುರ ಜಿಲ್ಲೆಯ ಪಂಡರಾಪುರದಲ್ಲಿದೆ. ಹಿಂದಿನ ಶಾಸನಗಳ ಪ್ರಕಾರ ಈಗಿನ ಪಂಡರಾಪುರಕ್ಕೆ ಪಂಡರಿಗೆ, ಪಂಡರಂಗೆ, ಪಂಡರಪೂರ, ಫಂಡರಿ, ಪಾಂಡುರಂಗಪುರ,ಪಂಢರೀಪುರ, ಫಾಗನೀಪುರ, ಪಂಡರಗೆ, ಪಾಂಡೊರಂಗಪಲ್ಲಿ,ಪಂಡರಂಗಪಲ್ಲಿ, ಪಂಡರಾದ್ರಿ,ಪಾಂಡರೀಕಕ್ಷೇತ್ರ. ಪಾಂಡುರಂಗ ಕ್ಷೇತ್ರ ಎಂಬ ಹಲವಾರು ಹೆಸರಿಗಳಿವೆ. ಈ ಸ್ಥಳದಲ್ಲಿ ಭೀಮಾನದಿ ಅರ್ಧಚಂದ್ರಾಕೃತಿಯಲ್ಲಿ ಹರಿಯುವುದರಿಂದ ಭೀಮಾ ನದಿಯನ್ನು “ಚಂದ್ರಭಾಗ”ಎಂದು ಕರೆಯಲಾಗುತ್ತದೆ. ಪದ್ಮ ಪುರಾಣದಲ್ಲಿ ಹೇಳಿರುವ ಪ್ರಕಾರ ಚಂದ್ರಭಾಗ ನದಿಯಲ್ಲಿನ ಪವಿತ್ರ ಸ್ನಾನ ಮಾಡಿ ಪಾಂಡುರಂಗನ ಧ್ಯಾನ,ಪಾಂಡುರಂಗನ ದರ್ಶನ ಭಾಗ್ಯದಿಂದ ಭಕ್ತನು ವೈಕುಂಠವನ್ನು ಪಡೆಯುತ್ತಾನೆ.

ಇಲ್ಲಿ ಶ್ರೀ ಕೃಷ್ಣ ಹಾಗು ಆತನ ಪತ್ನಿಯಾದ ರುಕ್ಮಿಣಿ ಶಿಲಾ ರೂಪದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಭಕ್ತ ಸಮೂಹದ್ದು. ಇದು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಪ್ರಮುಖ ದೇವಸ್ಥಾನಗಳಲ್ಲೊಂದು.

ಫೋಟೋ ಕೃಪೆ : google

ಭಕ್ತಾದಿಗಳು ತಮ್ಮ ಮನೆಗಳಿಂದ ಶ್ರದ್ಧಾ-ಭಕ್ತಿ, ಭಾವಶುದ್ಧಿಯ ಪ್ರತೀಕವಾಗಿ, ಸಾಮರಸ್ಯದ ದ್ಯೋತಕವಾಗಿ ‘ವಾರಕರಿ’ ಸಂಪ್ರದಾಯ ಅನುಸರಿಸುತ್ತ
ಗುಂಪು ಗುಂಪಾಗಿ 22 ದಿನಗಳ ಪಾದಯಾತ್ರೆ(ದಿಂಡಿಯಾತ್ರೆ) ಮಾಡಿ ಪಾಂಡುರಂಗನ ದರ್ಶನಕ್ಕಾಗಿ ನಮಗಾಗಿ ”ದರ್ಶನ ನೀಡಲು ವಿಠ್ಠಲ ನಿಂತಿದ್ದಾನೆ, ಬೇಗ ಬೇಗ ಮುಂದೆ ಸಾಗಿ ಎನ್ನುತ್ತ ಭಕ್ತರು ದೇವರ ದರ್ಶನದ ಹಂಬಲದಿಂದ ಓಡೋಡಿ ಆಷಾಢ ಏಕಾದಶಿ ಹಾಗು ಕಾರ್ತಿಕ ಏಕಾದಶಿಗಳಂದು ವಿಶೇಷ ಪೂಜೆಗಳಿಗೆ ಹಾಗು ಹರಕೆಗಳಿಗೆ ಸೇರಿ ವಿಠ್ಠಲನ ದರ್ಶನ ಮಾಡುತ್ತಾರೆ.. ವಿಶೇಷವೇನೆಂದರೆ ಸಾಕ್ಷಾತ್ ಭಗವಂತ ಪುಂಡಲೀಕನ ಕಮಲದಂತಹ ಪಾದ ಚರಣವನ್ನು ಮುಟ್ಟಿ ಭಕ್ತಿಯಿಂದ ನಮಸ್ಕರಿಸಬಹುದು.

ಕರ್ನಾಟಕದಲ್ಲಿನ ಹಲವಾರು ದಂತಕತೆಗಳ ಪ್ರಕಾರ ಈಗ ಪಂಡರಾಪುರದಲ್ಲಿ ಇರುವಂತಹ ಶ್ರೀವಿಜಯವಿಠ್ಠಲನ ಅಂದು ಹಂಪಿಯಲ್ಲಿ ಇದ್ದಂತಹ ವಿಜಯವಿಠ್ಠಲ. ವಿಜಯನಗರ ಸಾಮ್ರಾಜ್ಯ ಕೊನೆಗೊಂಡಾಗ ಅಲ್ಲಿದ್ದಂತಹ ವಿಠಲ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಪಂಡರಾಪುರದಲ್ಲಿ ಪ್ರತಿಷ್ಠಾಪಿಸಲಾಗಿತ್ತು ಎಂಬ ನಂಬಿಕೆ ಇದೆ.

ಮತ್ತೊಂದು ದಂತಕಥೆಯ ಪ್ರಕಾರ ಪುಂಡಲೀಕ ಎಂಬ ಭಕ್ತನೊಬ್ಬ ವಿಷ್ಣುವನ್ನು ಆರಾಧಿಸುತ್ತಿದ್ದನು. ಒಮ್ಮೆ ಆತನ ಭಕ್ತಿಗೆ ಮೆಚ್ಚಿ ಭಗವಾನ್ ವಿಷ್ಣು ದೇವರು ಪ್ರತ್ಯಕ್ಷವಾಗಿ ಆತನ ಮನೆಗೆ ಬಂದಾಗ ಪುಂಡಲೀಕನು ತನ್ನ ತಂದೆ ಮತ್ತು ತಾಯಿಯ ಸೇವೆಯಲ್ಲಿ ನಿರತನಾಗಿದ್ದನು. ಇದನ್ನು ಕಂಡಂತಹ ವಿಷ್ಣುವು ಅಲ್ಲೇ ನಿಂತನು. ಎಷ್ಟು ಸಮಯವಾದರೂ ಪುಂಡಲೀಕ ಎಂಬ ಭಕ್ತನು ವಿಷ್ಣುವಿನ ಕಡೆಗೆ ನೋಡಲೇ ಇಲ್ಲ ಆತನು ತನ್ನ ತಂದೆ ತಾಯಿಯರ ಸೇವೆಯಲ್ಲಿ ಮಗ್ನನಾಗಿದ್ದನು ಇದನ್ನು ಕಂಡ ವಿಷ್ಣುವು ತಾನು ಬಂದಿರುವುದಾಗಿ ಪುಂಡರೀಕನಿಗೆ ಎಚ್ಚರಿಸಲಾಗಿ ಪುಂಡಲೀಕನು ತನ್ನ ತಂದೆ-ತಾಯಿಗಳ ಸೇವೆಯ ತರುವಾಯ ಬರುವುದಾಗಿ ಹೇಳಿದನು.

ಇದನ್ನು ಗಮನಿಸಿದ ವಿಷ್ಣುವು ತಾನು ಇಲ್ಲಿ ನಿಂತು ಏನು ಮಾಡಲಿ ಎಂದು ಕೇಳಿದಾಗ ಆತನು ಒಂದು ಇಟ್ಟಿಗೆಯನ್ನು ವಿಷ್ಣುವಿನ ಕಡೆಗೆ ಎಸೆದು ಇಟ್ಟಿಗೆಯ ಮೇಲೆ ನಿಂತಿರು ಎಂದು ಹೇಳಿದನು ಭಕ್ತ ಪುಂಡಲೀಕನ ಎಷ್ಟು ಸಮಯವಾದರೂ ಬರೆದ ಕಾರಣ ಭಗವಾನ್ ವಿಷ್ಣು ಸೊಂಟದ ಮೇಲೆ ಕೈಯಿಟ್ಟು ಇಟ್ಟಿಗೆಯ ಮೇಲೆ ಅಲ್ಲಿಯೇ ನೆಲೆನಿಂತನು. ಆದಕಾರಣ ಅಲ್ಲಿ ನೆಲೆನಿಂತ ವಿಷ್ಣುವನ್ನು ವಿಠ್ಠಲ ಎಂದು ಕರೆಯಲಾಯಿತು. ವಿಠ್ಠಲ ಎಂದರೆ ಸಂಸ್ಕೃತದಲ್ಲಿ ಇಟ್ಟಿಗೆ ಎಂದರ್ಥ, ಇಟ್ಟಿಗೆಯ ಮೇಲೆ ವಿಷ್ಣುವು ನಿಂತಿದ್ದಕ್ಕೆ ಅವನನ್ನು ವಿಠ್ಠಲ ಎಂದು ಕರೆಯುತ್ತಾರೆ.

ಕ್ಷೇತ್ರ ಪರಿಚಯ :

ಪಂಡರಾಪುರಕ್ಕೆ ನಾಲ್ಕು ದ್ವಾರಗಳು : ಭೀಮಾ ಹಾಗೂ ಶಿಶುಮಾಲಾನದಿಗಳ ಸಂಗಮಸ್ಥಾನದಲ್ಲಿ ಪೂರ್ವದ್ವಾರ; ಅಲ್ಲಿ ಸಂಧ್ಯಾವಳಿ ದೇವಿಯ ಸನ್ನಿಧಿ; ಮಾನಸೂರದಲ್ಲಿ ದಕ್ಷಿಣದ್ವಾರ; ಅಲ್ಲಿ ಸಿದ್ಧೇಶ್ವರನ ದೇವಸ್ಥಾನ. ಭೀಮಾ ಹಾಗೂ ಪುಷ್ಪವತಿ ನದಿಗಳ ಸಂಗಮ ಸ್ಥಾನದಲ್ಲಿ ಪಶ್ಚಿಮದ್ವಾರ; ಅಲ್ಲಿ ಭುವನೇಶ್ವರಿಯ ಅಧಿಷ್ಠಾನ. ಭೀಮಾ ಹಾಗೂ ಭರಣೀ ನದಿಯ ಸಂಗಮಸ್ಥಾನದಲ್ಲಿ ಉತ್ತರದ್ವಾರ; ಅಲ್ಲಿ ದುರ್ಗಾದೇವಿ ನೆಲೆಸಿದ್ದಾಳೆ. ಈ ಊರಿನಲ್ಲಿ ಅನೇಕ ದೇವಾಲಯಗಳಿವೆ.

ಫೋಟೋ ಕೃಪೆ : google

ವಿಠ್ಠಲ ಮಂದಿರ :

ಊರಿನ ಮಧ್ಯದಲ್ಲಿದ್ದು ಇದರ ಮಹಾದ್ವಾರ ಪೂರ್ವಾಭಿಮುಖವಾಗಿದೆ. 350 ಪೂರ್ವಪಶ್ಚಿಮ ಮತ್ತು 170 ದಕ್ಷಿಣೋತ್ತರ ಇದರ ವಿಸ್ತಾರ. ಮಹಾದ್ವಾರವನ್ನು ನಾಮ ದೇವ ದ್ವಾರವೆಂದೂ ಹೇಳಲಾಗುತ್ತದೆ. ನಾಮದೇವ ಇಲ್ಲಿ ಸಮಾಧಿಸ್ಥನಾದುದರಿಂದ ಇದಕ್ಕೆ ಈ ಹೆಸರು. ನಾಮದೇವನ ಪಾದಗಳೂ ಇಲ್ಲಿವೆ. ಸಮಾಧಿಯ ಹತ್ತಿರ ಒಂದು ವಟವೃಕ್ಷ ಅದರ ಪಕ್ಕದಲ್ಲಿ ಮೂವತ್ತುಮೂರು ಕೋಟಿ ದೇವತೆಗಳ ಮಂದಿರ. ಅದಾದ ಮೇಲೆ ಮುಕ್ತಿಮಂಟಪ. ಇದು ಒಂದು ದೊಡ್ಡ ಮಂಟಪ; ಕಮಾನುಗಳಿವೆ. ಮಂಟಪದ ಹತ್ತಿರ ಗಣಪತಿಯ ಮೂರ್ತಿಯಿದೆ. ಕೆಲವರ ಹೇಳಿಕೆಯ ಪ್ರಕಾರ ಪ್ರಾಚೀನ ಕಾಲದಲ್ಲಿ ವಿಟ್ಠಲನ ಮೂರ್ತಿ ಈ ಗಣಪತಿಯ ಹತ್ತಿರವೇ ಇದ್ದಿತಂತೆ. ಸದ್ಯ ಇಲ್ಲಿ ನಗಾರಖಾನೆಯಿದೆ. ಇಲ್ಲಿಂದ ಅನತಿದೂರದಲ್ಲೆ ಒಂದು ಕಲ್ಲುಹಾಸಿಗೆಯ ಮಂಟಪ, ಅದರ ಪಕ್ಕದಲ್ಲೇ ಸಂತ ಪ್ರಹ್ಲಾದಬುವಾ ಬಡವೆ ಹಾಗೂ ಕಾನೋಬಾ ಇವರ ಸಮಾಧಿಗಳಿವೆ. ಇವುಗಳಿಗೆ ಹತ್ತಿರದಲ್ಲಿ ಎರಡು ದೀಪಮಾಲೆ, ಗರುಡ ಮತ್ತು ಸಂತರಾಮದಾಸರು ಸ್ಥಾಪಿಸಿದ ಮಾರುತಿಯ ಮೂರ್ತಿಯಿದೆ. ಇದಾದ ಮೇಲೆ 16 ಕಂಬದ ಮಂಟಪ; ಇದಕ್ಕೆ ಮೂರುಬಾಗಿಲುಗಳು; ಮಧ್ಯದ ಬಾಗಿಲಿಗೆ ಹಿತ್ತಾಳೆಯ ಚೌಕಟ್ಟು. ಈ ಮಂಟಪದಲ್ಲಿನ ಕಂಬಗಳ ಮೇಲೆ ಕೃಷ್ಣಲೀಲೆಯನ್ನೂ ದಶಾವತಾರದ ಚಿತ್ರಗಳನ್ನೂ ಕಮನೀಯವಾಗಿ ಕೊರೆದಿದ್ದಾರೆ. ಈ ಮಂಟಪದಲ್ಲಿ ಬೆಳ್ಳಿಯ ರೇಕನ್ನು ಕುಂದಣಿಸಿದ ಕಂಬವೊಂದಿದೆ. ಇದನ್ನು ಗರುಡಕಂಬವೆಂದೂ ಪುರಂದರದಾಸರ ಕಂಬವೆಂದೂ ಹೇಳುತ್ತಾರೆ. ಈ ಕಂಬವನ್ನು ಆಲಂಗಿಸಿದ ಅನಂತರವೇ ವಿಟ್ಠಲನ ದರ್ಶನ.

ಫೋಟೋ ಕೃಪೆ : google

ರುಕ್ಮಿಣೀ ಮಂದಿರ :

ಗರ್ಭಗೃಹ, ಮಧ್ಯಗೃಹ, ಮುಖ್ಯಮಂಟಪ ಮತ್ತು ಸಭಾಮಂಟಪ — ಎಂದು ನಾಲ್ಕು ಭಾಗಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ರುಕ್ಮಿಣಿಯ ಮೂರ್ತಿ ಪೂರ್ವಾಭಿಮುಖವಾಗಿ ನಿಂತಿದೆ. ಈ ಮಂದಿರದಲ್ಲೆ ಸತ್ಯಭಾಮೆಗೂ ಒಂದು ಸಣ್ಣ ಮಂದಿರವಿದೆ. ಈ ಮಂದಿರದ ಅನಂತರದಲ್ಲಿ ಕಾಶೀ ವಿಶ್ವನಾಥ, ರಾಮಲಕ್ಷ್ಮಣ, ಕಾಲಭೈರವ, ರಾಮೇಶ್ವರಲಿಂಗ, ದತ್ತ ಮತ್ತು ನರಸೋಬಾ ಮಂದಿರಗಳಿವೆ. ಇಲ್ಲಿಂದ 16 ಕಂಬದ ಮಂಟಪಕ್ಕೆ ಹೋಗಲು ಒಂದು ಪ್ರತ್ಯೇಕ ದ್ವಾರವಿದೆ. ಇಲ್ಲಿಯೆ 84 ಲಕ್ಷ ಯೋನಿಗಳಿಂದ ಮುಕ್ತಗೊಳಿಸುವ ಪ್ರಸಿದ್ಧ ಶಿಲಾಲೇಖವಿದೆ. ಜನರ ಹಸ್ತ ಸ್ಪರ್ಶನದಿಂದ ಕಲ್ಲುಸವೆದು ನುಣಪಾಗಿದೆ; ಶಾಸನಸ್ಥ ವಿಷಯ ಅಳಿಸಿ ಮಾಯವಾಗಿಹೋಗಿದೆ.

ವಿಟ್ಠಲ ಹಾಗು ರುಕ್ಮಿಣೀ ಮಂದಿರಗಳಲ್ಲಿ ನಿತ್ಯ ಹಾಗೂ ನೈಮ್ತಿತ್ತಿಕ ಎಂಬ ಎರಡು ಬಗೆಯ ಪೂಜಾವಿಧಾನಗಳಿವೆ. ನವರಾತ್ರಿ, ದೀಪಾವಳಿ, ಯುಗಾದಿಯ ಹಬ್ಬಗಳಲ್ಲಿ ವಿಶೇಷ ಆಭರಣಗಳ ಅಲಂಕಾರವೂ ನಡೆಯುತ್ತದೆ.

 

ಇತರೇ ದೇವಾಲಯಗಳು :

ಪುಂಡಲೀಕ ಮಂದಿರ,ವಿಷ್ಣು ಪದ, ಪದ್ಮತೀರ್ಥದಲ್ಲಿರುವ ಪದ್ಮಾವತಿಯ ದೇವಸ್ಥಾನ, ಪಾಂಡುರಂಗ ಹಾಗೂ ರುಕ್ಮಿಣಿಯರ ಪ್ರೇಮಕಲಹ ಹಾಗೂ ಸಂಗಮಗಳ ಕುರಿತಾದ ಪೌರಾಣಿಕ ಕಥೆಯನ್ನು ಸೂಚಿಸುವ ದಿಂಡೀರವನ ಕ್ಷೇತ್ರ,ದೈತ್ಯರೊಂದಿಗೆ ವಿಷ್ಣು ಯುದ್ಧ ಮಾಡುವ ಪ್ರಸಂಗದಲ್ಲಿ ಇಲ್ಲಿ ತನ್ನ ಕರ್ಣಕುಂಡಲಗಳನ್ನು ಕಳಚಿ ಇಟ್ಟ ಕುಂಡಲತೀರ್ಥ ಮತ್ತು ಇಲ್ಲಿ ನೃಸಿಂಹ ಮಂದಿರವೊಂದಿದೆ.

ಫೋಟೋ ಕೃಪೆ : google

ಪಂಡರಾಪುರ ಯಾತ್ರಾ ಮಹತ್ವ :

ಪಾಂಡುರಂಗ ಅಥವಾ ವಿಠ್ಠಲನ ಅರ್ಥವನ್ನು ಪದ್ಮ ಪುರಾಣದ ವರಾಹ ಸಂಹಿತೆಯಲ್ಲಿ ಪಂಢರಪುರಕ್ಕೆ ಪಾಂಡುರಂಗನ ಆಗಮನದ ಬಗ್ಗೆ ಪಂಢರಾ ಪುರದಲ್ಲಿ ಇರುವ ವಿಠ್ಠಲನ ಇಟ್ಟಿಗೆ ಸ್ಥಳದ ಹಿನ್ನೆಲೆ ಮತ್ತು ಮಹತ್ವ ಭೀಮಾ ನದಿಯ ಮೂಲವನ್ನು ದೇವ ಋಷಿ ನಾರದರು ಆದಿಶೇಶನಿಗೆ ಹೇಳಿರುವುದನ್ನು ವಿವರಿಸಲಾಗಿದೆ ಹಾಗೂ ಪಂಢರಾಪುರದ ವಿವಿಧ ದೇವರುಗಳು ಮತ್ತು ದೇವತೆಗಳ ಮಾಹಿತಿಯನ್ನು ವಿವರಿಸಲಾಗಿದೆಯಂತೆ ನೀರನರಸಿಂಹಪುರವು ಪ್ರಯಾಗದಂತೆ ಪವಿತ್ರವಾಗಿದೆ , ಕೊರ್ತಿ ಅಥವಾ ವಿಷ್ಣುಪಾದವು ಗಯೆಯಂತೆ ಪವಿತ್ರವಾಗಿದೆ ಮತ್ತು ಪಂಢರಾಪುರವು ಕಾಶಿಯಂತೆ ಪವಿತ್ರವಾಗಿದೆ.

ಸ್ಕಂದ ಪುರಾಣದಲ್ಲಿ ಶಿವನು ಪಾರ್ವತಿಗೆ ಹೇಳುತ್ತಾನೆ, “ಈ ಸ್ಥಳವು ಆಧ್ಯಾತ್ಮಿಕವಾಗಿ ಪುಷ್ಕರಕ್ಕಿಂತ ಮೂರು ಪಟ್ಟು ಹೆಚ್ಚು , ಕೇದಾರನಾಥಕ್ಕಿಂತ ಆರು ಪಟ್ಟು ಹೆಚ್ಚು , ವಾರಣಾಸಿಗಿಂತ ಹತ್ತು ಪಟ್ಟು ಹೆಚ್ಚು ಮತ್ತು ಶ್ರೀಶೈಲಕ್ಕಿಂತ ಅನೇಕ ಬಾರಿ ಹೆಚ್ಚು ಫಲ ನೀಡುತ್ತದೆ. ಆದ್ದರಿಂದ ಇಲ್ಲಿ ಯಾತ್ರೆ, ವಾರಿ ಮತ್ತು ದಾನವನ್ನು ಮಾಡುವುದರಿಂದ ಹೆಚ್ಚಿನ ಪುಣ್ಯವಿದೆ.

ಭಕ್ತಿ ಸಂತ, ಚೈತನ್ಯ ಮಹಾಪ್ರಭು , ವಿಠ್ಠಲ ದೇವಸ್ಥಾನದಲ್ಲಿ 7 ದಿನಗಳ ಕಾಲ ನಗರದಲ್ಲಿ ಈ ಮಂದಿರದಲ್ಲಿ ಸೇವೆ ಮಾಡಿದರು ಎಂದು ಹೇಳಲಾಗುತ್ತದೆ. ಸಂತ ಜ್ಞಾನೇಶ್ವರ್ , ಸಂತ ತುಕಾರಾಂ, ಸಂತನಾಮದೇವ್, ಸಂತ ಏಕನಾಥ , ಸಂತನಿವೃತ್ತಿನಾಥ್ , ಸಂತ ಮುಕ್ತಾಬಾಯಿ , ಸಂತ ಚೋಖಾಮೇಲ್ , ಸಂತ ಸವತಾ ಮಾಲಿ, ಸಂತ ನರಹರಿ ಸೋನಾರ್ , ಸಂತ ಗೋರಾಜಾ, ಕುಂಭಾನ್ ಮೇರರಾಜ , ಮೇರರಾಜ , ಕುಂಭಂತರು ಪ್ರತಿಷ್ಠಿತ ಸಂತರು ಮುಂತಾದವರು ವಿಠ್ಠಲ ದೇವರನ್ನು ಮಹಾರಾಷ್ಟ್ರದ ಅನೇಕ ಸಂತರು ಪೂಜಿಸಿದ್ದಾರೆ ಎಂದು ಹೇಳಲಾಗುತ್ತದೆ.

ಫೋಟೋ ಕೃಪೆ : google

ಭೇಟಿ ನೀಡಲು ಅತ್ಯಂತ ಪ್ರಾಶಸ್ತ್ಯ ಕಾಲಾವಧಿ :

ಪಂಡರಾಪುರಕ್ಕೆ ಭೇಟಿ ನೀಡಲು ಅತ್ಯಂತ ಉತ್ತಮ ಕಲಾವಧಿ ಎಂದರೆ ಜುನ್ ಮತ್ತು ಜುಲೈ . ಈ ತಿಂಗಳು ಆಷಾಢ ಮಾಸವಿರುವುದರಿಂದ ವಿಠ್ಠಲನಿಗೆ ವಿಶೇಷ ದಿಂಡಿ ಉತ್ಸವ ನಡೆಸಲಾಗುತ್ತದೆ. ಅಷಾಢ ಏಕಾದಶಿ ಹಾಗೂ ಕಾರ್ತೀಕ ಏಕಾದಶಿ ಯಂದು ವಿಷೇಶ ದಿಂಡಿ ಉತ್ಸವ ನಡೆಸುತ್ತಾರೆ. ಈ ದೇಗುಲವು ಭಕ್ತರ ದರ್ಶನಕ್ಕಾಗಿ ಮುಂಜಾನೆ 4 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ತೆರೆದಿರಲಾಗಿರುತ್ತದೆ.

ಪಂಡರಾಪುರಕ್ಕೆ ತಲುಪುವ ಬಗೆ :

ವಾಯುಮಾರ್ಗದ ಮೂಲಕ: ಅತ್ಯಂತ ಹತ್ತಿರದ ವಿಮಾನ ನಿಲ್ದಾಣವೆಂದರೆ ಪುಣೆ ವಿಮಾಣ ನಿಲ್ದಾಣ. ಬೆಂಗಳೂರಿನಿಂದ ಮಹರಾಷ್ಟ್ರದ ಪುಣೆಗೆ ನೇರ ವಿಮಾನ ಮರ್ಗವಿದ್ದು 574 ಕಿ.ಮೀಯಷ್ಟು ದೂರದಲ್ಲಿದ್ದು 6 ಗಂಟೆ 30 ನಿಮಿಷದಲ್ಲಿ ತೆರಳಬಹುದು. ಪುಣೆಯಿಂದ ಹಲವಾರು ರೈಲುಗಳ ವ್ಯವಸ್ಥೆಗಳಿವೆ.

ರೈಲು ಮಾರ್ಗ :

ಬೆಂಗಳೂರಿನಿಂದ ಪಂಢಾರಪುರಕ್ಕೆ ನೇರ ರೈಲ್ವೆ ವ್ಯವಸ್ಥೆ ಇದ್ದು ಸುಮಾರು 880 ಕಿ.ಮಿ ಯಷ್ಟು ಅಂತರವಿದೆ.

ರಸ್ತೆ ಮಾರ್ಗ:
ನೇರ ಪಂಡರಾಪುರಕ್ಕೆ ಬೆಂಗಳೂರಿನಿಂದ ನೇರ ಬಸ್ ವ್ಯವಸ್ಥೆಗಳಿಲ್ಲ ಆದರೆ ರಸ್ತೆ ಮಾರ್ಗದ ಮೂಲಕ ತೆರಳಲು ಸುಮಾರು 645 ಕಿ.ಮಿ ದೂರವಿದೆ.


  • ಸೌಮ್ಯ ಸನತ್

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW