ಗಿರಿಜಾ ಶಾಸ್ತ್ರಿಯವರ ‘ಸಂಗೀತದ ಒಸಗೆ’ ಪುಸ್ತಕದ ಕುರಿತು ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಸಂಗೀತದ ಒಸಗೆ
ಲೇಖಕರು : ಗಿರಿಜಾ ಶಾಸ್ತ್ರಿ
ಪ್ರಕಾಶಕರು :ಶ್ರೀ ಹರ್ಷ ಡಂಬಳ
ಬೆಲೆ :೨೦೦/
ಪುಟಗಳು : ೧೪೭
ನಿಮ್ಮ “ಸಂಗೀತದ ಒಸಗೆ”ಯನ್ನು ಸ್ವಲ್ಪ ಸ್ವಲ್ಪವೇ ಓದಿ ಮುಗಿಸಿದೆ.ಒಂದೇ ಉಸುರಿಗೆ ಓದಿ ಮುಗಿಸಬಹುದಾದ ಕೃತಿ ಇದಲ್ಲ. ಅಲ್ಲದೆ ಇದು ಸಂಗೀತದ ನೇರ ವಿವರಗಳ ಬರೆಹಗಳೂ ಅಲ್ಲ. ಸಂಗೀತವನ್ನು ಆಸ್ವಾದಿಸಿದಾಗಿನ ಮನಸ್ಸಲ್ಲಿ ಮೂಡುವ ಭಾವಗಳ,ಪ್ರತಿಕ್ರಿಯೆಗಳ ಅಕ್ಷರ ರೂಪಗಳಿವು.ಒಂದೊಂದು ಬರೆಹವೂ ಒಂದೊಂದು ಭಾವಗೀತೆಯನ್ನು ಕೇಳಿದ ಹಾಗೆ,ಅನುಭವಿಸಿದ ಹಾಗೆ.
ಸಾಹಿತ್ಯದ ನಂತರದ ನನ್ನ ಆಸಕ್ತಿಯೆಂದರೆ ಸಂಗೀತವೇ.ಅದು ಕರ್ನಾಟಕಿ ಇರಬಹುದು, ಹಿಂದೂಸ್ಥಾನಿ ಇರಬಹುದು,ಅಥವಾ ಈಸ್ಟರ್ನ್, ವೆಸ್ಟರ್ನ್, ಜಾನಪದ,ಸಿನೆಮಾ..ಹೀಗೆ ಯಾವುದೇ ಪ್ರಕಾರದ ಸಂಗೀತ ಇರಬಹುದು.ಮೂಲತಃ ಅದು ಸಪ್ತಸ್ವರಗಳ ವಿವಿಧ ವಿನ್ಯಾಸಗಳ ಮೇಳವೇ ಅಲ್ಲವೇ?ನಾನು ಯಕ್ಷಗಾನದ ಕುಟುಂಬಕ್ಕೆ ಸೇರಿದವನಾದ ಕಾರಣ ಚಿಕ್ಕಂದಿನಿಂದಲೇ ವೈವಿಧ್ಯಪೂರ್ಣ ಸಂಗೀತ ಕೇಳುತ್ತಾ ಬೆಳೆದವನು.ಸಿಂಧುಭೈರವಿ,ಮಧ್ಯಮಾವತಿ(ನನ್ನ ಜನಪ್ರಿಯ ಹಾಡು ಮುನಿಸು ತರವೇ..ಇದೇ ರಾಗದ ಬೇಸ್ ಇರುವಂಥದ್ದಲ್ಲವೇ),ಅಠಾಣ, ಬೇಗಡೆ, ಬೇಹಾಗ್, ಹಿಂದೋಳ, ವಾಸಂತಿ, ಪೀಲು, ಶಿವ ರಂಜನಿ,ಹಂಸಧ್ವನಿ,ಸಲ್ಲಾಪ, ತೋಡಿ,ಖಮಾಚ್,..ಮೊದಲಾದ ರಾಗಗಳು ನನಗೆ ಸದಾ ಪ್ರಿಯವಾದವುಗಳೇ…
ನಿಮ್ಮ ಬರೆಹಗಳನ್ನು ಓದುತ್ತಾ ಹೋದಂತೆ ಈ ರಾಗಗಳೆಲ್ಲ ತಕ್ಕ ವೈಯಾರದೊಂದಿಗೆ ನನ್ನೆದುರು ಪ್ರತ್ಯಕ್ಷವಾಗುತ್ತಾ ಹೋದವು.ಅನೇಕ ಹಳೆಯ ಜನಪ್ರಿಯ ಹಿಂದೀ ಸಿನೆಮಾ ಹಾಡುಗಳು ಮತ್ತೆ ಕೇಳಿಸಿದಂತಾಗಿ ಮುದ ನೀಡಿದವು.ನಾನು ಹಿಂದೆ ಕೇಳಿ, ಮರೆತಿದ್ದ ಹಾಡುಗಳನ್ನು ನೀವು ಈ ಬರೆಹಗಳ ಮುಖೇನ ಮತ್ತೆ ನೆನಪಿಸಿದಿರಿ.ಅದೇ ಜಿಂದಗೀ ಭರ್ ನಹೀ ,ಚಲೋ ಇಕ್ ಬಾರ್ ಫಿರ್ ಸೇ, ಕಭೀ ಕಭೀ ಮೇರೇ ದಿಲ್ ಮೇ..,.ಸಕಲಕೆಲ್ಲಕೆ ನೀನೆ.. ಮಾನಸ ಸಂಚರರೇ… ಓಹ್ ! ಇವುಗಳ ಹಿಂದೆ ಸಾಲುಗಟ್ಟಿ ಬರುವ ನೂರಾರು ಹಾಡುಗಳು ; ನನ್ನ ಕಡೆ ಗಮನಕೊಡು ಎನ್ನುವ ಹಾಡುಗಳು…
ಪುಸ್ತಕಗಳಂತೆ ಸಂಗೀತವೂ ನಮ್ಮ ಏಕಾಂತದ ಸ್ನೇಹಿತ,ಸಾಂತ್ವನಕಾರ,ದುಗುಡವನ್ನು ದೂಡಿ ಆಹ್ಲಾದದ ವಾತಾವರಣವನ್ನು ನಿರ್ಮಿಸಬಲ್ಲ ಮಹಾನ್ ಶಕ್ತಿ.
ನೀವು ಹಾಡು ಹಾಗೂ ಹಾಡಿನ ಹಿಂದಿನ ಅನೇಕ ಮಾಹಿತಿಗಳನ್ನು,ಭಾವಲಹರಿಗಳನ್ನು ಈ ಬರೆಹಗಳಲ್ಲಿ ನೀಡಿದ್ದೀರಿ. ನನ್ನ ಮನಸ್ಸು ಹಾಗೂ ಮಿದುಳು ಎರಡಕ್ಕೂ ಸೊಗಸಾದ ಆಹಾರವನ್ನು ಒದಗಿಸಿದ್ದೀರಿ.ಅದಕ್ಕಾಗಿ ನಿಮಗೆ ಪ್ರೀತಿಯ ಅಭಿನಂದನೆಗಳು.
- ಸುಬ್ರಾಯ ಚೊಕ್ಕಾಡಿ