‘ಲಂಡನ್ ಹಳ್ಳ’ವೆಂಬ ಅದ್ಭುತ ಜಗತ್ತು..

‘ಛಲೋತಂಗ ದನಾ ಕಾಯಾಕ ಬರಾಂಗಿಲ್ಲ, ಅದೆಂಗ ಸಾಲಿ ಕಲಿತಿರೋ ಅದೆಂಗ ಮಾಸ್ತರು ಹೇಳ್ತಾರೋ ಆ ಇಂಡೇಶಪ್ಪಗ ಗೊತ್ತ” ಎಂದು ನಮ್ಮ ತಪ್ಪಿಗೆ ನಮಗೆ ಕಲಿಸುವ ಗುರುಗಳೂ ಅನ್ನಿಸಿಕೊಳ್ಳಬೇಕಾಗುತ್ತಿತ್ತು. ಎಮ್ಮೆ ಕಾಯುವದನ್ನು ಗುರುಗಳು ಶಾಲೆಯಲ್ಲಿ ಕಲಿಸಿ ಕೊಡಬೇಕೆ..? – ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ನೆನಪಿನಂಗಳದಲ್ಲಿ ಮೂಡಿ ಬಂದ ಲಂಡನ್ ಹಳ್ಳವನ್ನು ತಪ್ಪದೆ ಮುಂದೆ ಓದಿ …..

ಲಂಡನ್ ಹಳ್ಳ ಎಂಬ ವಿಲಕ್ಷಣ ಹೆಸರಿನ ನಮ್ಮೂರಿನ ಈ ಹಳ್ಳ ನಾವು ಚಿಕ್ಕವರಾಗಿದ್ದಾಗ ಬಹಳ ಸೋಜಿಗದ ಹಾಗೂ ಕುತೂಹಲದ ತಾಣವಾಗಿತ್ತು. ಈ ಹಳ್ಳಕ್ಕೆ ಆ ಸ್ವಾರಸ್ಯಕರ ಹೆಸರು ಬಂದ ಬಗೆಯನ್ನು ಊರಿನ ಹಿರಿಯರನ್ನು ಕೇಳಿದಾಗ ಒಬ್ಬೊಬ್ಬರದು ಒಂದೊಂದು ಬಗೆಯ ವಿಶ್ಲೇಷಣೆ. ಸಾವಿರಾರು ಮೈಲುಗಳಾಚೆಯ ಲಂಡನ್ ಎಲ್ಲಿ…? ಬಯಲು ಸೀಮೆ ಜಿಲ್ಲೆಯ ನಮ್ಮ ಚಿಕ್ಕ ಗ್ರಾಮದ ಈ ಹಳ್ಳವೆಲ್ಲಿ..? ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಿಂದೆತ್ತ ಸಂಬಂಧವಯ್ಯ ಎಂಬ ಅಲ್ಲಮ ಪ್ರಭುವಿನ ವಚನದಂತೆ ಪ್ರಶ್ನಾರ್ಥಕವಾಗಿಯೇ ಉಳಿದಿತ್ತು. ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ ಆಳ್ವಿಕೆಯಲ್ಲಿ ಯಾರಾದರೂ ಲಂಡನ್‍ದಿಂದ ಬಂದ ವ್ಯಕ್ತಿಯು ತನ್ನೂರಿನ ಹೆಸರನ್ನೆ ಈ ಹಳ್ಳಕ್ಕೆ ಇಟ್ಟನೋ ಎಂಬ ಅನುಮಾನಕ್ಕೆ ತೆರೆಯಂತೂ ಬೀಳಲಿಲ್ಲ. ಮುಂದೆ ಕಾಲೇಜು ದಿನಗಳಲ್ಲಿ ಜಿಲ್ಲೆಯ ಗೆಜೆಟಿಯರ್ ನೋಡಿದರೆ ಏನಾದರೂ ಮಾಹಿತಿ ಸಿಗಬಹುದೇನೋ ಎಂಬ ಆಸೆಯಿಂದ ಅದನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿದಾಗಲೂ ಹೆಸರಿನ ಬಗ್ಗೆ ಮಾಹಿತಿ ದೊರೆಯಲಿಲ್ಲ. ಬದಲಾಗಿ ಈಗಾಗಲೇ ಎಲ್ಲರಿಗೂ ಗೊತ್ತಿದ್ದ ಆ ಹಳ್ಳಕ್ಕೆ ಅಡ್ಡವಾಗಿ ಎರಡು ಗುಡ್ಡಗಳ ನಡುವೆ ಚಿಕ್ಕ ಪಿಚ್ಚಂಗಿ(ಚಿಕ್ಕ ಆಣೆಕಟ್ಟು) ಕಟ್ಟಿರುವ ವಿಷಯ ಮಾತ್ರ ಅದರಿಂದ ತಿಳಿಯಿತು. ಅಲ್ಲದೆ ಆ ಕಟ್ಟೆಯ ನಿರ್ಮಾಣ ಅರವತ್ತರ ದಶಕದಲ್ಲಿ ಆಗಿ ಕಟ್ಟೆಯ ಎತ್ತರ ಐವತ್ತೆರೆಡು ಅಡಿ ಇರುವುದು ಹಾಗೂ ಕಟ್ಟೆ ಕಟ್ಟುವ ಪೂರ್ವದಲ್ಲಿ ಈ ನದಿಯು ಘಟಪ್ರಭೆಯನ್ನು ಸೇರುತಿತ್ತೆಂಬ ಮಾಹಿತಿ ಮಾತ್ರ ದೊರೆಯಿತು. ಆದರೆ, ಈ ವಿಶಿಷ್ಠ ಹೆಸರು ಹೇಗೆ ಬಂದಿತೆಂದು ಎಲ್ಲಿಯೂ ಹಾಗೂ ಯಾರೂ ಒಪ್ಪುವಂತಹ ಅಥವಾ ಸೂಕ್ತವೆನ್ನುವಂತಹ ಕಾರಣ ನೀಡಲಿಲ್ಲವಾದ್ದರಿಂದ ಹೆಸರಿನ ಬಗ್ಗೆ ಕೌತುಕ ಮಾತ್ರ ಹಾಗೆ ಉಳಿಯಿತು.

ಘಟಪ್ರಭಾ ನದಿ (ಫೋಟೋ ಕೃಪೆ :google ) ಸಾಂದರ್ಭಿಕ ಚಿತ್ರ

ಶೇಕ್ಸಪಿಯರ್ ಮಹಾಶಯ ತನ್ನ ರೋಮಿಯೋ ಮತ್ತು ಜೂಲಿಯೆಟ್ ನಾಟಕದ ಪಾತ್ರಧಾರಿ ಜೂಲಿಯೆಟಳು ಹೆಸರಿನಲ್ಲೇನಿದೆ ಎಂದು ಕೇಳುತ್ತಾ ಹೇಳುವ “ಗುಲಾಬಿಗೆ ಯಾವ ಬದಲಿ ಹೆಸರಿನಿಂದ ಕರೆದರೂ ಅದರ ಮೂಲ ಸುವಾಸನೆ ಮಧುರತೆ ಬದಲಾಗಬಹುದೇ” ಎನ್ನುವ ಮಾತಿನಂತೆ ಈ ಹಳ್ಳಕ್ಕೆ ಯಾವ ಹೆಸರಿದ್ದರೇನಾಯಿತು ಅದರ ವಿಲಕ್ಷಣತೆ, ಸೊಬಗು, ಅಲ್ಲಿ ಸಿಗುವ ಅದ್ಭುತ ವಸ್ತುಗಳು ಬದಲಾಗಬಹುದೆ ಎಂದು ಸಮಾಧಾನಿಸಿಕೊಂಡು ಸುಮ್ಮನಾಗ ಬೇಕಾಯಿತು.

ನಾವು ಚಿಕ್ಕವರಿದ್ದಾಗ ಹಳ್ಳದ ಪ್ರವಾಹ ಮತ್ತು ಅದು ಅಂತಿಮವಾಗಿ ಸೇರುವ ಕಳಸಕೊಪ್ಪ ಪಿಚ್ಚಂಗಿ ಕುರಿತು ಹಲವು ಕತೆಗಳನ್ನು ಬಹು ವರ್ಣನೆಯಿಂದ ಹಲವರು ಹೇಳುತ್ತಿದ್ದ ರೀತಿಯಿಂದ ಅದರ ಬಗ್ಗೆ ಕುತೂಹಲ ಹೆಚ್ಚುತ್ತಾ ಹೋಯಿತೆ ಹೊರತು ಕಡಿಮೆಯಂತೂ ಆಗಲಿಲ್ಲ. ಆದರೆ ನಮಗೆ ಅದಕ್ಕಿಂತ ಹೆಚ್ಚಾಗಿ ಹಳ್ಳದಲ್ಲಿ, ಅದರ ಎರಡು ದಂಡೆಯ ಮೇಲೆ ಸಿಗುತ್ತಿದ್ದ ವಿವಿಧ ತರಹದ ಮತ್ತು ಬಗೆ ಬಗೆ ವಸ್ತುಗಳಿಂದ ಲಂಡನ್ ಹಳ್ಳವು ಅದ್ಭುತ ಪ್ರಪಂಚವಾಗಿ ತೋರುತ್ತಿತ್ತು. ಹಳ್ಳದಲ್ಲಿ ಹೆಚ್ಚು ನೀರಿದ್ದಾಗ ಈಜುವುದು, ಬರೆಯಲು ಬಳಸುವ ಬಳಪದ ವಿವಿಧ ಆಕಾರದ ಚಿಕ್ಕ ಚಿಕ್ಕ ಮೃದುವಾದ ಶಿಲೆಗಳು, ಹಳ್ಳದ ಎರಡು ದಂಡೆಗಳ ಮೇಲೆ ದಂಡಿಯಾಗಿ ಬೆಳೆಯುತ್ತಿದ್ದ ವೈವಿಧ್ಯಮಯ ಗಿಡ ಗಂಟಿಗಳಲ್ಲಿನ ಜೇನು, ಹೆಚ್ಚಾಗಿ ಅವರೆ ಗಿಡಗಳ ಮೇಲೆ ಸಿಗುತ್ತಿದ್ದ ನಗಾರಿ ಹಾಗೂ ಹಸಿರು ಭೋರಂಗಿಗಳು, ಋತುಮಾನಕ್ಕನುಸಾರವಾಗಿ ಆ ಗಿಡಗಳಲ್ಲಿ ಅರಳಿ ನಗುತ್ತಿದ್ದ ಹಚ್ಚ ಹಳದಿಯ ಹೂವುಗಳು,ಇತರೆ ಕಾಡು ಹೂವುಗಳ ವಿಶಿಷ್ಟ ಘಮ, ಹಳ್ಳದ ಇಕ್ಕೆಲಗಳಲ್ಲಿನ ಹುಣಸೆ ಮರದಲ್ಲಿನ ಹುಣಸೆ ಚಿಗುರು, ಹೂವು, ಅಲ್ಲಿ ಸಿಗುವ ವಿವಿಧ ರೀತಿಯ ಚಿಪ್ಪುಗಳು ಹೀಗೆ ಒಂದೇ ಎರಡೆ ವಿವಿಧ ತರಹದ ವಸ್ತುಗಳಿಂದ ಅದು ನಮಗೆ ಅಚ್ಚರಿಯ ರತ್ನ ಭಂಡಾರದ ಲೋಕವಾಗಿ ಗೋಚರಿಸುತ್ತಿತ್ತು. ಮನೆಯಲ್ಲಿ ಏನೇ ಹೇಳಿದರೂ ಆಗಿನ ವೇಳೆಗೆ ಹೋಗುವದಿಲ್ಲವೆಂದು ಹೇಳಿ ಆ ನಂತರ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಗೆ ಹೋಗಿ ಆಟ ಆಡಿ ಅಲ್ಲಿ ಸಿಗುವ ವಸ್ತುಗಳನ್ನು ತೆಗೆದುಕೊಂಡು ಬಂದಾಗಲೇ ಮನಸಿಗೆ ಏನೋ ಒಂದು ರೀತಿಯ ಸಮಾಧಾನ ಹಾಗೂ ಖುಷಿ.

(ಫೋಟೋ ಕೃಪೆ :google ) ಸಾಂದರ್ಭಿಕ ಚಿತ್ರ

ಮೂರು ನಾಲ್ಕು ದಶಕಗಳ ಹಿಂದೆ ಲಂಡನ್ ಹಳ್ಳವು ತನ್ನ ಉಗಮದ ಸ್ಥಳದಲ್ಲಿ ಚಿಕ್ಕ ಪಾತ್ರ ಹೊಂದಿ ಅಂಕು ಡೊಂಕಾಗಿ ಹರಿಯುತ್ತಾ ನವ ಜವ್ವನೆಯು ನಡು ಬಳುಕಿಸುವಂತೆ ಹರಿಯುತ್ತ ಮುಂದೆ ಸಾಗಿದಂತೆ ತನ್ನ ಪಾತ್ರವನ್ನು ಹಿಗ್ಗಿಸಿಕೊಂಡು ಎಲ್ಲವ್ವನ ಗುಡ್ಡದ ಪಕ್ಕದಲ್ಲಿ ಪ್ರವಹಿಸುತಾ ಕಳಸಕೊಪ್ಪ ಜಲಾಶಯಕ್ಕೆ ಮುತ್ತಿಡುವ ಆ ಸಂಭ್ರಮ ನೋಡುವುದೆ ನೋಡುಗರ ಎರಡು ಕಣ್ಣುಗಳಿಗೆ ಹಬ್ಬವಾಗಿತ್ತು.

ಮಳೆಗಾಲದಲ್ಲಂತೂ ಮೈ ದುಂಬಿಕೊಂಡು ಸಾಗುವ ಆ ಪರಿಯ ಸೊಬಗನ್ನು ಹೇಳಲು ಪದಗಳೆ ಸಾಲದು. ಅಷ್ಟೊಂದು ವೈಭವದ ಐಸಿರಿ ಅದರದು. ಮಳೆಗಾಲದಲ್ಲಿ ಭರಪೂರ ನೀರಿನಿಂದ ಹರಿಯುತ್ತಿದ್ದ ಕಾರಣ ನೀರಿನ ಸೆಳುವು ಮತ್ತು ಪ್ರವಾಹದ ಕಾರಣ ಅತ್ತ ಹೋಗಬೇಡಿರೆಂದು ಮನೆಯಲ್ಲಿ ಹೇಳಿದಾಗಲೂ ಹೇಗೋ ಅವರ ಕಣ್ಣು ತಪ್ಪಿಸಿ ಆ ನೀರಿನ ಭರಾಟೆಯನ್ನು ನೋಡಲು ಶಾಲಾ ಗೆಳೆಯರೊಂದಿಗೆ ಹೋಗುತ್ತಿದ್ದದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಶಾಲಾ ದಿನಗಳಲ್ಲಿ ವಾರಾಂತ್ಯದ ಹಾಗೂ ಬೇಸಿಗೆಯ ಸೂಟಿ ಬಂದಿತೆಂದರೆ ಸಾಕು ಗೆಳೆಯರೆಲ್ಲರೂ ಎಮ್ಮೆಗಳನ್ನು ಹೊಡೆದುಕೊಂಡು ಅತ್ತಲೇ ಹೋಗುತ್ತಿದ್ದೆವು.

(ಫೋಟೋ ಕೃಪೆ :google ) ಸಾಂದರ್ಭಿಕ ಚಿತ್ರ

ಹಳ್ಳದತ್ತ ಹೋದ ನಂತರ ಎಮ್ಮೆಗಳನ್ನು ದಂಡೆಯ ಮೇಲೆ ಮೇಯಿಸಲಿಕ್ಕೆ ಬಿಟ್ಟು ಹಳ್ಳದ ಆ ತಂಪನೆಯ ವಾತಾವರಣದಲ್ಲಿ ಉಸುಕಿನಲ್ಲಿ ಮನೆ ಕಟ್ಟುವುದು, ಪಿಂಗಿ ಮನೆ ಆಟ ಆಡುವ ಗಮನದಲ್ಲಿ ನಾವಿರುತ್ತಿದ್ದೆವು. ಆಗ ಎಮ್ಮೆಗಳು ಹಳ್ಳದ ದಂಡೆಯ ಮೇವನ್ನು ಬಿಟ್ಟು ಪಕ್ಕದ ಹೊಲಗಳಲ್ಲಿ ಹುಲುಸಾಗಿ ಬೆಳೆದ ಹಸಿರು ಬೆಳೆಗಳನ್ನು ನೋಡಿ ತಿನ್ನಲು ನುಗ್ಗುತ್ತಿದ್ದವು. ಆರಂಭದಲ್ಲಿ ಏನೋ ಚಿಕ್ಕ ಮಕ್ಕಳು ಎಂದು ಸುಮ್ಮನಿರುತ್ತಿದ್ದ ಹೊಲದ ಮಾಲಿಕರು ಪದೇ ಪದೇ ಇದೇ ರೀತಿ ಮುಂದುವರಿದಾಗ ತಮ್ಮ ಹೊಲಗಳಲ್ಲಿನ ಬೆಳೆಯನ್ನು ನಾಶ ಮಾಡಿದಕ್ಕೆ ಅವುಗಳನ್ನು ಕೊಂಡವಾಡಕ್ಕೆ ಹಾಕಿದಾಗ, ಎಮ್ಮೆ ಕಾಯಲು ಕಳಿಸಿದ ತಪ್ಪಿಗಾಗಿ ಪಾಲಕರು ದಂಡ ಕೊಟ್ಟು ಬಿಡಿಸಿಕೊಂಡು ಬರಬೇಕಾಗುತ್ತಿತ್ತು. ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ಕಥೆಯೇ. ಒಬ್ಬ ಗೆಳೆಯನಿಗೆ ಮನೆಯಲ್ಲಿ ಹೊಡೆತಗಳು ಬಿದ್ದರೆ, ಇನ್ನೊಬ್ಬ ಗೆಳೆಯನ ಮನೆಯಲ್ಲಿ ಎಮ್ಮೆಗಳನ್ನು ಕೊಂಡವಾಡಕೆ ಹಾಕಿಸಿದ ತಪ್ಪಿಗೆ ಒಂದು ಊಟವೇ ಬಂದ್. ಇನ್ನೂ ಕೆಲವರ ಮನೆಯಲ್ಲಿ “ಇನ್ನೊಮ್ಮಿ ಹಿಂಗಾದ್ರ ನೋಡ್ರಿ ನಿಮ್ಮನ…” ಎನ್ನುವ ಎಚ್ಚರಿಕೆಯೊಂದಿಗೆ “ಛಲೋತಂಗ ದನಾ ಕಾಯಾಕ ಬರಾಂಗಿಲ್ಲ, ಅದೆಂಗ ಸಾಲಿ ಕಲಿತಿರೋ ಅದೆಂಗ ಮಾಸ್ತರು ಹೇಳ್ತಾರೋ ಆ ಇಂಡೇಶಪ್ಪಗ ಗೊತ್ತ” ಎಂದು ನಮ್ಮ ತಪ್ಪಿಗೆ ನಮಗೆ ಕಲಿಸುವ ಗುರುಗಳೂ ಅನ್ನಿಸಿಕೊಳ್ಳಬೇಕಾಗುತ್ತಿತ್ತು. ಎಮ್ಮೆ ಕಾಯುವದನ್ನು ಗುರುಗಳು ಶಾಲೆಯಲ್ಲಿ ಕಲಿಸಿ ಕೊಡಬೇಕೆ..?

ಇಂತಹ ಘಟನೆ ಆದ ಕೆಲವು ದಿನ ನಾವು ಗೆಳೆಯರೆಲ್ಲರೂ ತುಂಬಾ ಹುಷಾರದಿಂದ ಎಮ್ಮೆಗಳು ಹಳ್ಳದ ದಂಡೆಯ ಹೊಲಗಳಿಗೆ ನುಗ್ಗದಂತೆ ಹಾಗೂ ಬೆಳೆಗಳನ್ನು ನಾಶ ಮಾಡದಂತೆ ಕಾಳಜಿ ವಹಿಸುತ್ತಿದ್ದೆವು. ಆದರೆ ಹೊಡೆತಗಳು ಮತ್ತು ಬೈಗುಳಗಳು ಮರೆತು ಹೋದ ನಂತರ ಮತ್ತೇ ಅದೇ ರಾಗ ಅದೇ ಹಾಡು. ಇದರಿಂದ ಬರು ಬರುತ್ತಾ ಮನೆಯಲ್ಲಿ ಪಾಲಕರು ಎಮ್ಮೆ ಮೇಯಿಸಿಕೊಂಡು ಬರುವ ಕೆಲಸಕ್ಕೆ ಕಳಿಸುವುದೆ ಕಡಿಮೆಯಾಗುತ್ತಾ ಹೋಯಿತು. ಸುಮ್ಮನೆ ಇವರನ್ನು ಎಮ್ಮೆ ಮೇಯಿಸಲಿಕ್ಕೆ ಕಳಿಸಿ ಕೊಂಡವಾಡಕ್ಕೆ ದಂಡ ಕೊಡುವದರ ಬದಲು ತಾವೇ ಅವುಗಳನ್ನು ಹೊಡೆದುಕೊಂಡು ಹೋಗುವುದು ಸರಿಯೆಂದು ತೋರಿರಬಹುದು. ಅದರ ಜೊತೆಗೆನೆ ಶಾಲೆಯಲ್ಲಿ ಚೆನ್ನಾಗಿ ಅಂಕ ಪಡೆಯುತ್ತಿದ್ದರಿಂದ “ನೀನು ಸಾಲಿಗೆ ಲಾಯಕು, ಎಮ್ಮಿ ಕಾಯಾಕ ಲಾಯಕ್ಕಲ್ಲ” ಎನ್ನುವ ಪಟ್ಟ ಬಂದಿತು.

ಎಮ್ಮೆ ಕಾಯುವದರಿಂದ ಎಷ್ಟೆಲ್ಲಾ ಜೀವನಾನುಭವ ಪಡೆಯಬಹುದು ಎಂಬುವದಕ್ಕೆ ಎಮ್ಮೆ ಕಾಯುವವರೇ ಸಾಕ್ಷಿ. ಯಾಕೆಂದರೆ, ಎಮ್ಮೆಗಳನ್ನು ಹಳ್ಳದ ನೀರಲ್ಲಿ ಬಿಟ್ಟು ಆಳದ ನೀರಲ್ಲಿ ಎಮ್ಮೆಯ ಬಾಲ ಹಿಡಿದು ಎಷ್ಟೋ ಗೆಳೆಯರು ಈಜು ಕಲಿತಿದ್ದು ಇನ್ನೂ ಹಸಿ ಹಸಿ ನೆನಪು. ಕೆಲವೊಮ್ಮೆ ಎಮ್ಮೆಗಳನ್ನು ಸಂಜೆವರೆಗೂ ಕಾಯಬೇಕಾದ್ದರಿಂದ ಮಧ್ಯಾಹ್ನದ ಬುತ್ತಿಯನ್ನು ಕಟ್ಟಿಕೊಂಡು ಹೋಗಿ, ಮಧ್ಯಾಹ್ನದ ಸುಡು ಬಿಸಿಲಲ್ಲಿ ಎಮ್ಮೆಗಳು ಮರಗಳ ಕೆಳಗೆ ಮಲಗುತ್ತಿದ್ದರೆ, ಗೆಳೆಯರೆಲ್ಲಾ ನಾವು ಹಳ್ಳದ ದಂಡೆಯ ತಂಪನೆಯ ನೆರಳಲ್ಲಿ ಎಲ್ಲರೂ ತಮ್ಮ ತಮ್ಮ ಬುತ್ತಿ ಬಿಚ್ಚಿಕೊಂಡು ಊಟಕ್ಕೆ ಕುಳಿತರೆ ಅದೆಂತಹ ದಿವ್ಯ ಅನುಭವ. ಜಾತಿ ಭೇದವಿಲ್ಲದೆ ಯಾರ ಯಾರ ಬುತ್ತಿಯಲ್ಲಿ ಯಾರಾರಿಗೆ ಇಷ್ಟವಾಗುವ ಪಲ್ಲೆ ಇರುತ್ತದೆಯೋ ಆ ಬುತ್ತ್ತಿಯಿಂದ ತೆಗೆದುಕೊಂಡು ತಿನ್ನುವ ಆ ಸುಖ ಅದನ್ನು ಸವಿದವರಿಗೆ ಮಾತ್ರ ಗೊತ್ತು. ಊಟ ಮಾಡುತ್ತಿರುವಾಗಲೇ ಇನ್ನೊಬ್ರ ತಾಟಿನಲ್ಲಿನ ಪಲ್ಲೆಯನ್ನೋ ಅಥವಾ ರೊಟ್ಟಿಯನ್ನೋ ತೆಗೆದುಕೊಂಡು ಎಂಜಲೆನಿಸದೆ ತಿನ್ನುವ ಆ ದಿನಗಳು ಇಂದಿನ ದಿನಗಳಿಗೆ ಪಾಠವೆನ್ನಬಹುದು. ಯಾಕೆಂದರೆ, ಇಸಿದುಕೊಂಡು ತಿನ್ನುವಾಗ ಪಿಂಜಾರ ಹುಸೇನ, ಬಡಿಗೇರ ಮೌನೇಶ, ಶೆಟ್ರ ಶಿವನಿಂಗ, ಕುರುಬರ ಮಾನಿಂಗ, ಗೌಡರ ಸುಭಾಷ ಇನ್ನು ಅನೇಕರು ಇದ್ದೂ ಎಂಜಲು ಊಟವನ್ನು ತಿನ್ನುವಾಗ ಅವೆಲ್ಲಾ ನಗಣ್ಯ. ಏನೂ ಗೊತ್ತಿಲ್ಲದ ಶುದ್ಧ ಸ್ನೇಹವದು.

(ಫೋಟೋ ಕೃಪೆ :google ) ಸಾಂದರ್ಭಿಕ ಚಿತ್ರ

ಇನ್ನೂ ಲಂಡನ್ ಹಳ್ಳದಲ್ಲಿ ಸಿಗುತ್ತಿದ್ದ ಬಳಪದ ಕಲ್ಲುಗಳದ್ದೇ ಒಂದು ವೈಶಿಷ್ಟ್ಯ. ಅವುಗಳನ್ನು ಆಯ್ದುಕೊಂಡು ಬರುವುದೆ ನಮಗೆಲ್ಲರಿಗೂ ಒಂದು ಸಂಭ್ರಮದ ಕೆಲಸ. ಬೇಸಿಗೆಯ ರಜೆಯ ನಂತರ ಶಾಲೆಯ ಆರಂಭಕ್ಕೆ ಗೆಳೆಯರೆಲ್ಲರೂ ಆರು ತಿಂಗಳಿಗೋ ಅಥವಾ ವರ್ಷದುದ್ದಕ್ಕೂ ಬರೆಯಲು ಎಷ್ಟು ಬಳಪಗಳು ಬೇಕಾಗಬಹುದೆಂದು ಅಂದಾಜಿಸಿ ಈ ಹಳ್ಳದಲ್ಲಿ ಅಡ್ಡಾಡುತ್ತಾ ಬಳಪ(ಪೇನೆ) ಮಾಡಲು ಸೂಕ್ತವಾದಂತಹ ಕಲ್ಲುಗಳನ್ನು ಆರಿಸಿ ಚೀಲದಲ್ಲಿ ತುಂಬಿಕೊಂಡು ಬರುತ್ತಿದ್ದೆವು. ಆಗಿನ್ನೂ ಪ್ರಾಥಮಿಕ ಶಾಲೆಯಲ್ಲಿ ಪಾಟಿ(ಸ್ಲೇಟ್)ಯಲ್ಲಿಯೇ ಬರೆಯುತ್ತಿದ್ದರಿಂದ ಇಂತಹ ಬಳಪದ ಕಲ್ಲುಗಳನ್ನು ಆಯ್ದುಕೊಂಡು ಬರುವುದು ಅನಿವಾರ್ಯದ ಕೆಲಸವೂ ಕೂಡಾ ಆಗಿತ್ತೂ ನಮಗೆ. ಯಾಕೆಂದರೆ ಅಂಗಡಿಗಳಲ್ಲಿ ಬಳಪಗಳು ಸಿಗುತ್ತಿದ್ದರೂ ಅವುಗಳಿಗಿಂತ ಚೆನ್ನಾಗಿ ಬರೆಯಬಲ್ಲ ಹಾಗೂ ಅಕ್ಷರಗಳು ತುಂಬಾ ದುಂಡಾಗಿ ಕಾಣುತ್ತಿದ್ದರಿಂದ ಈ ಹಳ್ಳದ ಬಳಪದ ಕಲ್ಲುಗಳೇ ಉತ್ತಮವೆಂದು ನಮಗೆ ಅಚ್ಚುಮೆಚ್ಚಿನದಾಗಿತ್ತು. ಜೊತೆಗೆ ಅಂಗಡಿಯಲ್ಲಿ ಸಿಗುತ್ತಿದ್ದ ಬಳಪಕ್ಕೆ ಯಾಕೆ ವೃಥಾ ಖರ್ಚು ಮಾಡಬೇಕೆಂಬ ಹಿರಿಯರ ಯೋಚನೆಯೂ ಅದರಲ್ಲಿ ಅಡಗಿತ್ತೆನ್ನಬಹುದು. ಆ ಕಾರಣದಿಂದಲೇ ಬಳಪದ ಕಲ್ಲುಗಳನ್ನು ಹಳ್ಳದಿಂದ ತರುವುದು ನಮಗೆಲ್ಲರಿಗೂ ಸಂತೋಷದ ಕೆಲಸವಾಗಿತ್ತು. ಆದರೆ, ಅವುಗಳನ್ನು ಬರೆಯಲು ಯೋಗ್ಯವಾಗುವಂತೆ ಮಾಡುವುದು ಮಾತ್ರ ಒಂದು ಸ್ವಲ್ಪು ಕಷ್ಟದ ಕೆಲಸ. ಯಾಕೆಂದರೆ ವಿವಿಧ ಆಕಾರದ ಆ ಬಳಪದ ಕಲ್ಲುಗಳನ್ನು ಉದ್ದವಾಗಿ ಚೆನ್ನಾಗಿ ಬರೆಯುವಂತೆ ಬಳಪದ ರೂಪಕ್ಕೆ ಮಾರ್ಪಡಿಸುವುದೇ ನಮಗೆ ಆಗ ಸವಾಲಿನ ಕೆಲಸ. ಆದರೆ ಅದಕ್ಕೂ ಕೂಡಾ ನಾವೆಲ್ಲರೂ ಒಂದು ದಾರಿಯನ್ನು ಕಂಡುಕೊಂಡಿದ್ದೆವು.

ಅದೆಂದರೆ, ಯಾರು ಇತ್ತೀಚೆಗೆ ಮಣ್ಣಿನ ಗೋಡೆಗಳ ಬದಲಾಗಿ ಸಿಮೆಂಟಿನಿಂದ ಗೋಡೆಯನ್ನು ಕಟ್ಟಿದ್ದಾರೋ ಅಥವಾ ಹೊಸದಾಗಿ ಮನೆಯನ್ನು ಸಿಮೆಂಟ್‍ನಿಂದಲೆ ಕಟ್ಟಿಸಿ ಅದಕ್ಕೆ ಇನ್ನು ಬಣ್ಣ ಹಚ್ಚದೇ ಉರುಪು ಉರುಪಾದ ಗೋಡೆಯನ್ನು ಹಾಗೆಯೇ ಬಿಟ್ಟಿದ್ದಾರೆ ಎಂದು ಗಮನಿಸಿ ಅಂತಹ ಮನೆಗಳ ಮೇಲೆಯೇ ನಮ್ಮ ದಾಳಿ. ಗೆಳೆಯರೆಲ್ಲಾ ಸೇರಿ ಉರುಪಾದ ಆ ಗೋಡೆಯ ಮೇಲೆ ಹಳ್ಳದಿಂದ ತಂದಂತಹ ಬಳಪದ ಕಲ್ಲುಗಳನ್ನು ಗೋಡೆಗೆ ಮಸೆದು ಉದ್ದವಾದ ಆಕಾರ ಬಂದ ನಂತರ ಒಂದು ತುದಿಯಲ್ಲಿ ದಪ್ಪಗೆ ಹಾಗೂ ಇನ್ನೊಂದು ತುದಿಗೆ ಚೂಪಾಗಿ ಬರೆಯಲು ಅನುಕೂಲವಾಗುವಂತೆ ಮಸೆದು ಚೀಲಕ್ಕೆ ತುಂಬುತಿದ್ದೆವು. ಈ ಎಲ್ಲ ಕೆಲಸ ಆ ಮನೆಯವರು ಇಲ್ಲದ ವೇಳೆ ಆಗಬೇಕು. ಅಂತಹ ಸಂದರ್ಭಗಳನ್ನೆ ನೋಡಿಕೊಂಡೆ ನಾವು ಈ ಕೆಲಸಕ್ಕೆ ತೊಡಗುತ್ತಿದ್ದೆವು. ಯಾಕೆಂದರೆ ಎಲ್ಲರೂ ಆ ಗೋಡೆಯ ಬಳಪದ ಕಲ್ಲುಗಳನ್ನು ಮಸೆದ ಪರಿಣಾಮ ಹೊಸ ಗೋಡೆಯು ಅಲ್ಲಲ್ಲಿ ನಸುಗೆಂಪು ಬಳಪದ ಕಲ್ಲಿನಿಂದ ಕೆಂಪು, ನಸು ಹಳದಿ ಬಳಪದ ಕಲ್ಲಿನಿಂದ ಹಳದಿ, ಇನ್ನೂ ಕೆಲವು ಕಡೆ ಬಿಳಿ ಬಳಪದ ಕಲ್ಲಿನಿಂದ ಬಿಳಿ ಬಣ್ಣದಿಂದ ಆ ಗೋಡೆಗಳು ನೋಡಲು ಅಕರಾಳ ವಿಕರಾಳವಾಗಿ ಕಾಣುತ್ತಿದ್ದವು. ಹೀಗಾದರೆ ಮನೆ ಮಾಲಿಕರು ಬಿಟ್ಟಾರೆಯೇ. ಅವರಿಗೆ ಹೊಸದಾಗಿ ಕಟ್ಟಿಸಿದ ಗೋಡೆ ಚೆನ್ನಾಗಿ ಕಾಣಬೇಕು ಎಂಬ ಆಸೆ. ನಮಗೋ ಬಳಪದ ಕಲ್ಲನ್ನು ಚೆನ್ನಾಗಿ ಬರೆಯುವಂತೆ ಚೂಪಾಗಿ ಮಸೆಯುವ ಆಸೆ. ಆವರು ಕೊಡರು ನಾವು ಬಿಡೆವು ಎನ್ನುವಂತಿರುತ್ತಿತ್ತು ನಮ್ಮ ಆಟ. ಯಾರಿಲ್ಲದಿರುವಾಗ ಈ ಕೆಲಸ ಖಾಯಂ ನಮ್ಮದು. ಆ ಕಾರಣದಿಂದಲೇ ಈ ಕೆಲಸ ನಡೆಯುವಾಗ ಯಾರಾದರೂ ಬರುವರೋ ಎಂದು ನೋಡಿಕೊಳ್ಳಲು ಒಬ್ಬ ಗೆಳೆಯನನ್ನು ಬಿಡುತ್ತಿದ್ದೆವು. ಯಾರಾದರೂ ಬಂದರೆ ಆತ ಸನ್ನೆ ಮಾಡಬೇಕು. ಸನ್ನೆ ಮಾಡಿದ್ದೇ ತಡ ಮಸೆಯಲು ಚೀಲದಿಂದ ಹೊರಗೆ ತೆಗಿದಿಟ್ಟ ಬಳಪದ ಕಲ್ಲುಗಳನ್ನು ಅವಸರದಲ್ಲಿ ಚೀಲದಲ್ಲಿ ಹಾಕಿಕೊಂಡು ಓಡಿ ಹೋಗುತ್ತಿದ್ದೆವು. ಓಡಿ ಹೋಗುವ ಭರದಲ್ಲಿ ಯಾರು ಬೀಳುತ್ತಿದ್ದೇವೋ, ಯಾರು ಬಿದ್ದು ಕಾಲು ಕೆತ್ತಿಸಿಕೊಳ್ಳುತ್ತಿದ್ದೆವೋ ಆ ದೇವರೆ ಬಲ್ಲ. ಒಟ್ಟಾರೆ ಆ ಮನೆಯವರಿಂದ ಹೊಡೆಸಿಕೊಳ್ಳುವದರಿಂದ ತಪ್ಪಿಸಿಕೊಳ್ಳವುದೆ ನಮ್ಮ ಏಕಮಾತ್ರ ಉದ್ದೇಶವಾಗಿರುತ್ತಿತ್ತು.

(ಫೋಟೋ ಕೃಪೆ :google ) ಸಾಂದರ್ಭಿಕ ಚಿತ್ರ

ಲಂಡನ್ ಹಳ್ಳದ ದಂಡೆಯ ಮೇಲಿನ ಹುಣಸೆ ಮರಗಳಲ್ಲಿನ ಆ ಹೊಸ ಚಿಗುರನ್ನು ತಿನ್ನುವುದು ಒಂದು ಖುಷಿಯಾದರೆ, ಆದರಲ್ಲಿನ ಹೂವನ್ನು ಹರಿದು ಅದನ್ನು ಕುಟ್ಟಿ ಅದಕ್ಕೆ ಮನೆಯಿಂದ ತಂದ ಸ್ವಲ್ಪ ಬೆಲ್ಲ, ಉಪ್ಪು ಸೇರಿಸಿ ಇನ್ನಷ್ಟು ಜಜ್ಜಿ ಅದನ್ನು ಒಂದು ಚಿಕ್ಕ ದಂಟಿಗೆ ಗುಂಡಾಗಿ ಅಂಟಿಸಿ ಲಾಲಿಪಾಪ್‍ನಂತೆ ದಂಟನ್ನು ತಿರುಗಿಸುತ್ತಾ ತಿನ್ನುವ ಆ ಮಜಾ ಇದೆಯಿಲಾ.್ಲ ಆಹಾ.. ನೆನೆಪಿಸಿಕೊಂಡರೆ ಈಗಲೂ ಬಾಯಲ್ಲಿ ನೀರು ಬರುತ್ತದೆ. ಅದನ್ನೂ ಮೀರಿಸುವಂತೆ, ಇನ್ನೂ ಒಂದು ದೊಡ್ಡ ಹುಣಸೆಯ ಬೃಹತ್ ಟೊಂಗೆಗಳು ಹಳ್ಳಕ್ಕೆ ಚಾಚಿಕೊಂಡಂತೆ ಇದ್ದರಿಂದ ಹುಣಸೆ ಕಾಯಿಯ ಬೋಟುಗಳನ್ನು ತಿನ್ನುತ್ತಾ ಟೊಂಗೆಯಿಂದ ಹಳ್ಳದ ನೀರಿಗೆ ಧುಮುಕುವ ಎಳೆತನದ ಆ ಆಟದ ಸೊಗಸು, ಆ ಉತ್ಸಾಹ ಯಾವ ಅಮೂಸ್‍ಮೆಂಟ್ ಪಾರ್ಕಿಗೆ ಹೋದರೆ ತಾನೇ ಸಿಕ್ಕಿತು.

ಲಂಡನ್ ಹಳ್ಳವು ನಮಗೆ ಆಪ್ಯಾಯಮಾನವಾಗಿರಲು ಇನ್ನೊಂದು ಬಹುದೊಡ್ಡ ಕಾರಣವೆಂದರೆ ಅಲ್ಲಿ ಸಿಗುವ ಭೋರಂಗಿಗಳು(ಬೋರಾಣಿಗಳು). ಚಾಕಲೇಟ್ ಬಣ್ಣದ ದೊಡ್ಡ ನಗಾರಿ ಭೋರಂಗಿ ಹಾಗೂ ಗಿಳಿ ಹಾಗೂ ಕಡುಹಸಿರು ಬಣ್ಣದ ಸೊಗಸಾದ ವೈಯ್ಯಾರದ ಚಿಕ್ಕ ಸಜ್ಜಿ ಭೋರಂಗಿ. ಹಳ್ಳದ ದಂಡೆಯ ವಿವಿಧ ಗಿಡ ಗಂಟೆಗಳ ಮೇಲೆ ಇರುತ್ತಿದ್ದ ಅವುಗಳನ್ನು ಹುಡುಕಿ ತರುವುದೆ ಒಂದು ಸಾಹಸದ ಕೆಲಸ. ಹಿಡಿಯಲು ಹೋದರೆ ಅವುಗಳು ಹಾರಿ ಹೋಗುತ್ತಿದ್ದರಿಂದ ನಾಜೂಕಾಗಿ ಕೈ ಹಾಕಿ ಅವು ಕೈಗೆ ಸಿಕ್ಕ ಕೂಡಲೆ ಈಗಾಗಲೇ ಮನೆಯಿಂದ ತಂದಂತಹ ದಾರವನ್ನು ಅವುಗಳ ಕೊರಳಿಗೆ ಕಟ್ಟಿ ಹಾರಿಸಲು ಶುರು ಮಾಡುತ್ತಿದ್ದೆವು. ಹಾಗೆಯೇ ಹಾರಿಸುತ್ತಾ ಯಾರ ಭೋರಂಗಿ ಬಹಳ ಹೊತ್ತು ಹಾರುತ್ತದೆಯೋ ಅವರು ಗೆದ್ದ ಹಾಗೆ. ಅಲ್ಲದೆ, ಅಂತವರಿಗೆ ಏನಾದರೂ ಕೊಡಬೇಕೆನ್ನುವ ಷರತ್ತು ಬೇರೆ. ಅವುಗಳನ್ನು ಊರಿಗೆ ತಂದ ನಂತರ ರಾತ್ರಿಯಾದÀರೆ ಅವುಗಳ ಕಣ್ಣು ಕಾಣುವದಿಲ್ಲ ಎಂಬ ನಂಬಿಕೆಯಿಂದ ಅವುಗಳನ್ನು ಕಡ್ಡಿಪೆಟ್ಟಿಗೆಯಲ್ಲಿ ಇಟ್ಟು ಜೀಲಿ ತಪ್ಪಲ ಹಾಗೂ ಜೋಳದ ಹಿಟ್ಟು ಹಾಕಿ ಅವುಗಳನ್ನು ಮುಚ್ಚಿಟ್ಟರೆ ರಾತ್ರಿಯೆಲ್ಲಾ ನಾಳೆ ಅವುಗಳನ್ನು ಮತ್ತೆ ಆಡಿಸುವ ಕನಸು ಹಾಗೂ ಎಲ್ಲರಿಗೂ ತೋರಿಸಿ ಖುಷಿ ಪಡುವ ಮಧುರ ಸ್ವಪ್ನಗಳು. ಕೆಲವೊಮ್ಮೆ ಅವು ಕಡ್ಡಿ ಪೆಟ್ಟಿಗೆಯಲ್ಲಿ ಮೊಟ್ಟೆ ಹಾಕಿದ್ದು, ಆ ಮೊಟ್ಟೆಗಳನ್ನು ಓಣಿಯಲೆಲ್ಲಾ ತೋರಿಸಿ ಸಂಭ್ರಮ ಪಟ್ಟ ಅದೆಷ್ಟೂ ರಸಮಯ ಘಟನೆಗಳಿಗೆ ಸಾಕ್ಷಿಯಾಗಲು ಕಾರಣವಾಗುತ್ತಿದ್ದುದೆ ಈ ಹಳ್ಳ.

ಲಂಡನ್ ಹಳ್ಳದ ದಂಡೆಯ ಮೇಲೆ ಹಾಗೂ ದಂಡೆಯ ಪಕ್ಕದ ಹೊಲಗಳಲ್ಲಿ ಇದ್ದ ತರ ತರಹದ ಬಾರೆಹಣ್ಣು(ಬೋರೆಹಣ್ಣು)ಗಳ ಮರಗಳದೆ ಮತ್ತೊಂದು ಪುರಾಣ. ಉತ್ತತ್ತಿ ಬಾರಿಹಣ್ಣು, ಹುಳಿ ಬಾರಿಹಣ್ಣು, ವಗರ ಬಾರಿಹಣ್ಣು, ಸಿಹಿ ಬಾರಿಹಣ್ಣು ಹೀಗೆ ವಿವಿಧ ಬಗೆಯ ಬಾರಿಹಣ್ಣುಗಳಿಂದ ಬಾರಿಹಣ್ಣಿನ ಕಾಲದಲ್ಲಿ ಮರಗಳಿಗೆ ಕಲ್ಲು ಎಸೆದೋ ಅಥವಾ ಮರವನ್ನೆ ಹತ್ತಿ ಹಣ್ಣುಗಳನ್ನು ಉದುರಿಸಿ ಕಿಸೆ ತುಂಬ ತುಂಬಿಕೊಂಡು ಬಂದು ಎದೆಯುಬ್ಬಿಸಿಕೊಂಡು ಬಾರಿ ಹಣ್ಣುಗಳನ್ನು ತೋರಿಸುವದೇ ಹೆಮ್ಮೆಯ ವಿಷಯ. ಕೆಲವೊಮ್ಮೆ ದಂಡೆಯ ಪಕ್ಕದ ಹೊಲದಲ್ಲಿ ಇದ್ದ ಉತ್ತತ್ತಿ ಬಾರಿಹಣ್ಣು ಹರಿದುಕೊಂಡು ಬರುತ್ತಿದ್ದೆವು. ಆದರೆ ಯಾವಾಗ ಈ ನಮ್ಮ ಸಾಹಸ ಪದೇ ಪದೇ ಮಾಡಲಿಕ್ಕೆ ಶುರು ಮಾಡಿದೆವೋ, ಆಗ ಎಲ್ಲಿ ತಮ್ಮ ಬೆಳೆಗಳನ್ನು ತುಳಿದು ಹಾಳು ಮಾಡುವರೆಂದು ಹೊಲದೊಳಗೆ ಯಾರು ಬರಬಾರದೆಂದು ಅದರ ಮಾಲಿಕರು ಮುಳ್ಳುಗಳ ಮಜಬೂತದ ಬೇಲಿ ಹಚ್ಚುತ್ತಿದ್ದರು. ಆದರೆ ಆ ಬೇಲಿಯನ್ನೂ ಹೇಗೋ ಸರಿಸಿ ಗಿಡ ಹತ್ತಿ ಬಾರಿಹಣ್ಣುಗಳನ್ನುತರುತ್ತಿದ್ದೆವು. ಆದರೆ, ಮಾಲಿಕರು ಬಂದು ಬೈಯಬಹುದೆಂಬ ಕಾರಣದಿಂದ ಯಾರಾದರೂ ಬಂದರೆ ಹೇಳಬೇಕೆಂದು ಒಂದಿಬ್ಬರು ಗೆಳೆಯರನ್ನು ಆ ಕೆಲಸಕ್ಕೆ ನೇಮಿಸಲಾಗುತ್ತಿತ್ತು. ಮರವನ್ನು ಹತ್ತಿದವರಿಗೆ ಹೆಚ್ಚು ಹಣ್ಣು, ಕಾಯುವವರಿಗೆ ಕಡಿಮೆ ಹಣ್ಣು ಕೊಡಬೇಕೆಂದು ಷರತ್ತು ಮಾಡಿಕೊಂಡೆ ಮರ ಏರಲಾಗುತ್ತಿತ್ತು.

(ಫೋಟೋ ಕೃಪೆ :google ) ಸಾಂದರ್ಭಿಕ ಚಿತ್ರ

ಹೀಗೆ ಒಮ್ಮೆ ಮರ ಹತ್ತಿ ಬಾರಿ ಹಣ್ಣುಗಳನ್ನು ಉದುರಿಸುತ್ತಿದ್ದಾಗ ಹೊಲದ ಮಾಲಿಕ ಬಂದ ಕಾರಣ ಕಾಯುತ್ತಿದ್ದ ಗೆಳೆಯರು “ಗಂಗಪ್ಜಜ್ಜ ಬಂದನಲೇ ಇಳಿಲ್ರೇ…ಇಲ್ಲಂದ್ರ ಎಲ್ಲಾರದೂ ಚರ್ಮ ಸುಲಿತಾನ.. ” ಎಂದು ಕೂಗು ಹಾಕಿ ಕೆಳಗಡೆ ಬಿದ್ದಿದ್ದ ಹಣ್ಣುಗಳನ್ನು ಲಗುಬಗೆಯಲ್ಲಿ ಆರಿಸಿ ಕಿಸೆಗೆ ತುಂಬಿಕೊಂಡು ಬೇಲಿ ಜಿಗಿದು ಹಾರಿ ಹೋಗುತ್ತಿದ್ದರು. ಮರ ಏರಿದ್ದ ಗೆಳೆಯರು ಅವರ ಚೀರಾಟಕ್ಕೆ ಗಾಬರಿಗೊಂಡು ಅವಸರದಲ್ಲಿ ಗಿಡದ ಟೊಂಗೆಯಿಂದ ಇಳಿಯುವಾಗ ಬಾರಿಗಿಡದ ವಂಕಿಯಂತೆ ಇರುವಂತಹ ಮುಳ್ಳುಗಳು ಕೈಗಳಿಗೆ ಚುಚ್ಚಿ ಅಲ್ಲಿಯೇ ಮುರಿದುಕೊಂಡ ಸ್ಥಿತಿಯಲ್ಲಿ ಇಳಿದು ಬರುವದೊಳಗೆ ದೊಡ್ಡ ರಾಮಾಯಣವೇ ಆಗುತ್ತಿತ್ತು. ಮುಳ್ಳು ಚುಚ್ಚಿ ಸಾಕಷ್ಟು ನೋವಾದರೂ ಹೊಲದ ಮಾಲಿಕನಿಂದ ತಪ್ಪಿಸಿಕೊಂಡು ಅವನಿಗೆ ಚಳ್ಳೆಹಣ್ಣು ತಿನ್ನಿಸಿ ಬಂದೆವಲ್ಲ ಎಂಬ ಖುಷಿಯಲ್ಲಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಹಮ್ಮಿನಲ್ಲಿ ಗೆಳೆಯರು ಹೋದ ದಿಕ್ಕಿನಲ್ಲಿಯೇ ಮರ ಏರಿದವರು ಪಲಾಯನ ಮಾಡಲಾಗುತ್ತಿತ್ತು.

ಲಂಡನ್ ಹಳ್ಳವು ವಿವಿಧ ಜಾತಿಯ ಹೂವುಗಳ ಆವಾಸ ಸ್ಥಾನವೂ ಆಗಿದ್ದರಿಂದ ಹಳ್ಳದ ಕಡೆ ಹೋದರೆ ನಮಗೆ ಬಗೆ ಬಗೆಯ ಬಣ್ಣದ ಕಾಡು ಹೂವುಗಳನ್ನು ತರುವುದು ಪರಿಪಾಠವಾಗಿತ್ತು. ಅದರಲ್ಲೂ ವಿಶೇಷವಾಗಿ ಅವರೆ ಹೂವು ಅತ್ತ ಹೋಗುವ ಎಂತಹ ದಾರಿಹೋಕರನ್ನು ಸೆಳೆಯುವಂತೆ ಅರಳುತ್ತಿದ್ದವು. ಎರಡು ದಂಡೆಯ ಮೇಲೂ ದಂಡಿಯಾಗಿ ಈ ಹೊನ್ನಾಂಬರಿ ಗಿಡಗಳು ದಟ್ಟವಾಗಿ ಬೆಳೆಯುತ್ತಿದ್ದರಿಂದ ಹಳದಿ ಬಣ್ಣದ ಹೂವು ಅರಳಿ ದಂಡೆಯ ಎರಡು ಬದಿಯೂ ಅರಿಷಿಣವನ್ನು ಹಚ್ಚಿಕೊಂಡ ನವ ವಧುವಿನಂತೆ ಕಾಣಿಸಿ ಮನಸಿಗೆ ಏನೋ ಒಂದು ತರಹ ಮುದವನ್ನು ನೀಡುವಂತಿತ್ತು. ಅಂತಹ ಹೂವುಗಳನ್ನು ಕಿತ್ತುಕೊಂಡು ಎಮ್ಮೆಯ ಕೊಂಬಿಗೋ, ಎತ್ತಿನ ಕೊಂಬಿಗೋ ಅಥವಾ ಮನೆಯ ತೊಲೆ ಬಾಗಿಲಿಗೋ ಕಟ್ಟಿ ಸಡಗರ ಪಡುವ ಆ ಪರಿಯೇ ಬಲು ಸೊಗಸು. ಇನ್ನೂ ದೀಪಾವಳಿ ಬಂತೆಂದರೆ ಇನ್ನಷ್ಟು ಆನಂದಕ್ಕೆ ಕಾರಣವಾಗುತಿತ್ತು. ಯಾಕೆಂದರೆ ಆ ಹಬ್ಬದಲ್ಲಿ ಊರಿನ ಪ್ರತಿ ಮನೆಗಳ ಕಟ್ಟೆಯ ಮೇಲೆ ಸಗಣಿಯಿಂದ ಮಾಡಿದ ಪಾಂಡವರ ಮೂರ್ತಿಗಳಿಗೆ ಚುಚ್ಚಲು ಅವರೆ ಹೂವು, ಉತ್ತರಾಣಿ ಕಡ್ಡಿ ಹಾಗೂ ವಿಭೂತಿ ಕಡ್ಡಿಗಳನ್ನು ತರಲು ಹಿಂದಿನ ದಿನವೇ ಲಂಡನ್ ಹಳ್ಳಕ್ಕೆ ಹೋಗಿ ಚೆನ್ನಾಗಿರುವ ತಾಜಾವೆನಿಸುವ ಅದೇ ಆಗ ಅರಳಿರುವ ಅವರೆ ಹೂವು ಹಾಗೂ ಉತ್ತರಾಣಿ ಹಾಗೂ ವಿಭೂತಿ ಕಡ್ಡಿಗಳನ್ನು ತಂದು ದೊಡ್ಡವರಿಂದ ಭೇಷ್ ಎನಿಸಿಕೊಳ್ಳಲು ಕಾರಣವಾಗುತ್ತಿದ್ದುದೆ ಈ ಹಳ್ಳ. ಅವರೆ ಹೂವಿನ ಆ ಚಂದ ಹಾಗೂ ಆ ವಿಶಿಷ್ಟ ಘಮ ಬಲ್ಲವನೇ ಬಲ್ಲ.

ಸ್ಪಟಿಕದಷ್ಟೆ ಸ್ವಚ್ಚವಾಗಿ ಹರಿಯುತ್ತಿದ್ದ ಲಂಡನ್ ಹಳ್ಳದ ನೀರಿನಲ್ಲಿ ತಳದಲ್ಲಿ ಏನೇ ಇದ್ದರೂ ಕಣ್ಣಿಗೆ ಸ್ಪಷ್ಟವಾಗಿ ಕಾಣುತ್ತಿದ್ದವು. ಚಿಕ್ಕ ಚಿಕ್ಕ ಮೀನುಗಳು, ಮೃದ್ವಂಗಿಗಳು, ವಿವಿಧ ಆಕಾರದ ಕಪ್ಪೆ ಚಿಪ್ಪುಗಳು, ತರ ತರಹದ ಆಕಾರದ ಚಿಕ್ಕ ಚಿಕ್ಕ ಕಲ್ಲುಗಳು ಹೀಗೆ ಅದು ನಮಗೆ ವೈವಿಧ್ಯಮಯ ವಸ್ತುಗಳ ಭಂಡಾರದ ರತ್ನಾಕರನಂತೆ ಭಾಸವಾಗುತ್ತಿತ್ತು. ಕಪ್ಪೆ ಚಿಪ್ಪುಗಳನ್ನು ತಂದು ಅವುಗಳಿಂದ ಬಗೆ ಬಗೆಯ ಅಲಂಕಾರಿಕ ವಸ್ತುಗಳನ್ನು ಮಾಡಲು ಪ್ರೇರಣೆ ದೊರೆಯುವಂತೆ ಮಾಡುತ್ತಿದ್ದವು.

(ಫೋಟೋ ಕೃಪೆ :google ) ಸಾಂದರ್ಭಿಕ ಚಿತ್ರ

ಈ ಹಳ್ಳದ ನೀರು ಎಷ್ಟು ರುಚಿ ಅಂತೀರಾ… ಹೊಕ್ಕೆ ಹೋಗುತ್ತಿದ್ದ ಎಷ್ಟೋ ರೈತರು, ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯರು ತಮ್ಮ ತತ್ರಾಣಿಯಲ್ಲಿ ಮನೆಯಿಂದ ನೀರು ತರದೆ ಇಲ್ಲಿಂದಲೇ ತುಂಬಿಕೊಂಡು ಹೋಗುತಿದ್ದದು ಈ ಹಳ್ಳದ ನೀರಿನ ರುಚಿಯ ಮಹಿಮೆಯಲ್ಲದೆ ಮತ್ತೇನಲ್ಲ.

ಲಂಡನ ಹಳ್ಳದ ದಂಡೆ ಮೇಲಿನ ಮರಗಳು ಜೇನಿನ ಆಗರವೇ ಆಗಿದ್ದವು. ವಿವಿಧ ಹೂವುಗಳು, ತಣ್ಣನೆ ವಾತಾವರಣದ ಕಾರಣವೇನೋ.. ಅಲ್ಲಿ ಜೇನುಗೂಡುಗಳು ಯಥೇಚ್ಚವಾಗಿ ಇರುತ್ತಿದ್ದವು. ಆಗಾಗ ದೊಡ್ಡವರು ಯಾರಾದರೂ ಬಂದರೆ ಜೇನನ್ನು ಬಿಡಿಸಿ ನಮಗೆ ಕೊಡುತ್ತಿದ್ದರಿಂದ ಅದರ ರುಚಿಗೆ ನಾವು ಸೋತು ಹೋಗಿದ್ದೇವು. ಆ ಕಾರಣದಿಂದಲೇ ದೊಡ್ಡವರಿಗೆ ಏಕೆ ಕಾಯಬೇಕು, ನಾವೇ ಏಕೆ ಸ್ವತಃ ಸಾಹಸ ಮಾಡಬಾರದೆಂದೆನಿಸಿ ಒಮ್ಮೆ ನಾನು ಹಾಗೂ ಮೂವರೂ ಗೆಳೆಯರ ಕೂಡಿ ಏನೇ ಆಗಲಿ ಜೇನು ಬಿಡಿಸಲೆಬೇಕೆಂದು ಹೋಗಿ ಅವರೆ ಗಿಡದಲ್ಲಿ ಇದ್ದಂತಹ ಜೇನನ್ನು ಬಿಡಿಸುವ ಪ್ರಯತ್ನ ಮಾಡಿದೆವು. ಜೇನುಗೂಡಿಗೆ ಕೈ ಹಾಕಿದ ಕೂಡಲೇ ಜೇನು ಹುಳುಗಳು ಮೇಲೆದ್ದವು. ಅಷ್ಟರಲ್ಲಿ ಸ್ನೇಹಿತನೊಬ್ಬನಿಗೆ ಹುಳುವೊಂದು ಕಚ್ಚಿದಾಗ “ ಲೇ.. ಜೇನ ಹುಳಾ ಎದ್ದುಲೇ.. ಬಿಡಂಗಿಲ್ಲಾ ಇವು ನಮ್ಮನ್ನ.. ಓಡ್ರಲೇ ಓಡ್ರಲೇ…” ಎಂದು ಆತ ಚೀರುತ್ತಾ ಓಡ ಹತ್ತಿದಾಗ ಅವನ ಚೀರುವಿಕೆಗೆ ಎದೆ ಒಡೆದಂತೆ ನಾವು ಕೂಡ ಎಲ್ಲರೂ ಜೇನು ಹಾಗೂ ಜೇನಿನ ಹುಟ್ಟನ್ನು ಅಲ್ಲಿಯೇ ಬಿಟ್ಟು ಹಿಂದೆ ಮುಂದೆ ನೋಡದೆ ಊರಿನವರಿಗೂ ಓಡಿ ಬಂದದು ಇನ್ನು ಮಾಸದ ನೆನಪು. ಮೊದ¯ ಪ್ರಯತ್ನದಲ್ಲೇ ಸೋತು “ಪ್ರಥಮ ಚುಂಬನಂ ದಂತ ಭಗ್ನಂ” ಎಂಂತಾಗಿತ್ತು. ಯಾವಾಗಲಾದರೂ ರಜೆಯಲ್ಲಿ ಊರಿಗೆ ಹೋದಾಗ ಗೆಳೆಯರು ಸೇರಿದರೆ ಆ ಘಟನೆ ನೆನಪಿಸಿಕೊಂಡು ಮನಸಾರೆ ನಕ್ಕ ಘಳಿಗೆಗಳು ಅವೆಷ್ಟೋ. ಯಾವಾಗ ಕಾಲೇಜಿಗೆ ಬಂದೆವೋ ಆ ವೇಳೆಯಲ್ಲಿ

ಗೆಳೆಯರೆಲ್ಲರೂ ಈ ಜೇನು ಬಿಡಿಸುವ ವಿಧಾನ ಕಂಡು ಹಿಡಿದು ಸೂಟಿ ಇದ್ದಾಗ ಹಳ್ಳಕ್ಕೆ ಹೋಗುವುದು, ಗಿಡ ಮರಗಳಲ್ಲಿ ಇದ್ದ ವಿವಿಧ ತರಹದ ಬೆಳ್ಳನೆ ಸಕ್ಕರೆಯಂತೆ ಇರುವ ಸಕ್ಕರೆ ಜೇನು, ಸ್ವಲ್ಪು ಕಂದು ಬಣ್ಣದಲ್ಲಿರುವಂತಹ ಬೆಲ್ಲದ ಜೇನು ಬಿಡಿಸಿ ನಾವೆಲ್ಲರೂ ಸಾಕಾಗುವಷ್ಟು ಅಲ್ಲಿಯೇ ತಿಂದು ಉಳಿದ ಜೇನನ್ನು ಮನೆಗೆ ತೆಗೆದುಕೊಂಡು ಬಂದು ಬೇರೆಯವರಿಗೆ ಕೊಡುವದು ಒಂದು ಕಾರ್ಯಕ್ರಮವೇ ಆಗಿ ಹೋಯಿತು.

(ಫೋಟೋ ಕೃಪೆ :google ) ಸಾಂದರ್ಭಿಕ ಚಿತ್ರ

ಚಿಕ್ಕವರಿದ್ದಾಗ ನಾವು ಬಯಸುವ ಬಳಪದ ಕಲ್ಲು, ವಿವಿಧ ರೀತಿಯ ಬೋರಂಗಿಗಳು, ತರ ತರಹದ ಕಾಡ ಕುಸುಮಗಳು, ವಿವಿಧ ಆಕಾರದ ಚಿಪ್ಪುಗಳು, ಮಧುರ ಜೇನು, ಬಾರಿಕಾಯಿ ಹಾಗೂ ಬಾಯಲ್ಲಿ ನೀರೂರಿಸುವ ಹುಣಸೆಕಾಯಿ ನೀಡುವ ಕಲ್ಪವೃಕ್ಷವಾಗಿದ್ದ ಲಂಡನ್À ಹಳ್ಳವನ್ನು ನೌಕರಿ ಸಿಕ್ಕ ಮೇಲೆ ಆ ಕೆಲಸದ ಒತ್ತಡದಲ್ಲಿ ನೋಡಲಿಕ್ಕೆ ಆಗಿರಲೇ ಇಲ್ಲ. ಆಗಾಗ ಸ್ನೇಹಿತರು ಹೇಳುತ್ತಿದ್ದದ್ದು ಎಲ್ಲಿದೆ ಮೊದಲಿನ ಲಂಡನ್ ಹಳ್ಳವೆಂದು. ಅದೆಲ್ಲ ಇತಿಹಾಸವೆಂದು ಹೇಳಿದಾಗ ಮನಸಲ್ಲಿ ಏನೋ ಒಂದು ರೀತಿಯ ಕಸಿವಿಸಿ ಆಯಿತು.

ಇತ್ತೀಚೆಗೆ ಬಹಳ ದಿನಗಳ ನಂತರ ಹಳ್ಳವನ್ನು ನೋಡಲೆಬೇಕೆಂಬ ಅದಮ್ಯ ಆಸೆಯಿಂದ ನೋಡಲು ಹೋದರೆ ಏನಿದೆ ಅಲ್ಲಿ. ಸ್ಪಟಿಕದಷ್ಟೆ ಶುಭ್ರವಾಗಿ ವಿಶಾಲವಾಗಿ ಹರಿಯುತ್ತಿದ್ದ ಹಳ್ಳವು ಇಂದು ತನ್ನ ಪಾತ್ರವನ್ನು ಕಿರಿದಾಗಿಸಿಕೊಂಡು ತೊರೆಯಂತೆ ಹರಿಯುತ್ತಿದೆ. ಹಳ್ಳ ಯಾವುದೋ..? ದಂಡೆ ಯಾವುದೋ..? ಎಂದು ಗುರ್ತಿಸದ ಮಟ್ಟಿಗೆ ಬದಲಾಗಿ ಹೋಗಿದೆ. ಹಳ್ಳದ ಪಾತ್ರ ಚಿಕ್ಕದಾಗಿ ಮುಳ್ಳು ಕೊಂಪೆಗಳು ಬೆಳೆದಿವೆ. ಎಂತಹ ವೈಭವದ ದಿನಗಳನ್ನು ಕಂಡಂತಹ ಹಳ್ಳವಿಂದು ಯಾವ ಸ್ಥಿತಿಗೆ ಬಂದಿದೆಯಲ್ಲ ಎಂದೆನಿಸಿ ಮನಸಿಗೆ ಬೇಸರ ಆಯಿತು. ವೈಭವದ ವಿಜಯನಗರ ಹೋಗಿ ಹಾಳು ಹಂಪಿ ಕಂಡಂತಹ ಕಂಡ ಕಹಿ ಅನುಭವವಾಯಿತು.


  • ಮಲ್ಲಿಕಾರ್ಜುನ ಶೆಲ್ಲಿಕೇರಿ –ಮಲ್ಲಿಕಾರ್ಜುನ ಶೆಲ್ಲಿಕೇರಿ, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮ. ಮೂಲತಃ 1998 ರ ಕೆ.ಎ.ಎಸ್. ಬ್ಯಾಚಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಹಾಗೂ ಲೆಕ್ಕಪತ್ರಗಳ ಇಲಾಖೆಯ ಹಿರಿಯ ಅಧಿಕಾರಿ. ಪ್ರಸ್ತುತ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಬಾಗಲಕೋಟೆಯಲ್ಲಿ ಸಿ.ಎ.ಓ. ಹುದ್ದೆಯಲ್ಲಿ ಕರ್ತವ್ಯ ನಿರ್ವಹಣೆ. ಇವರ ಹಲವಾರು ಕಥೆ, ಕವನ, ಲೇಖನ, ಹಾಸ್ಯಬರಹಗಳು ಮಯೂರ, ತುಷಾರ, ಕರ್ಮವೀರ, ವಿಜಯವಾಣಿ, ಸಮಾಜಮುಖಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿ ಕೇಂದ್ರದಿಂದಲೂ ಕಥೆಗಳು ಪ್ರಸಾರವಾಗಿವೆ.

    “ದೀಡೆಕರೆ ಜಮೀನು” ಮೊದಲ ಕಥಾಸಂಕಲನ. ಈ ಕಥಾಸಂಕಲನಕ್ಕೆ “ಸ್ವಾಭಿಮಾನಿ ಕರ್ನಾಟಕ ವೇದಿಕೆ” ಬೆಂಗಳೂರು ಇವರಿಂದ 2022 ರ ಅತ್ಯುತ್ತಮ ಕಥಾಸಂಕಲನ ಪುರಸ್ಕಾರ ಲಭಿಸಿದೆ.

 

 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW