“ಇವು ದೀಪದ ಆಂತರ್ಯ ಅನಾವರಣಗೊಳಿಸುವ ಆರು ಭಾವದ ಹನಿಗಳು. ದೀಪದ ಬದುಕು-ಭಾಷ್ಯಗಳ ಮಾಧುರ್ಯ ರಿಂಗಣಿಸುವ ಕಾವ್ಯದ ಮಾರ್ದನಿಗಳು. ಪ್ರತಿ ಹನಿಯಲ್ಲು ದೀಪದ ಸೌಂದರ್ಯವಿದೆ. ಬೆಳಕಿನ ಸೌಂದರ್ಯದ ಹಿಂದಿನ ಔದಾರ್ಯ, ಕೈಂಕರ್ಯಗಳ ದರ್ಶನವಿದೆ. ದೀಪದ ಆದರ್ಶ, ನಿದರ್ಶನಗಳ ನರ್ತನವಿದೆ. ದೀಪದಲ್ಲಿ ಜ್ಯೋತಿ, ಕಾಂತಿಗಳಷ್ಟೇ ಇಲ್ಲ. ಅರಿತಷ್ಟೂ, ಅರ್ಥೈಸಿದಷ್ಟೂ ಬದುಕಿಗೆ, ಬರಹಕೆ ಚಿರಂತನ ಸ್ಫೂರ್ತಿಯಿದೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
1. ಬಲಿದಾನ !
ಹಣತೆಗೆ ಬೆಳಕು ಕೊಟ್ಟು
ಬೆಂಕಿಕಡ್ಡಿ ಜೀವ ಬಿಟ್ಟಿತು.!
******
2. ನಂಟು !
ಕನ್ನಡಿಯ ಕಂಗಳಿಗೆ
ದೀಪವೇ ಬೆಳಕು.!
******
3. ಸಾರ್ಥ !
ಬತ್ತಿ ತೈಲ ಸೇರಿ
ಹಡೆದವು ಬೆಳಕು
ಕೃತಾರ್ಥ ಬದುಕು.!
*****
4. ಸಂಘರ್ಷ !
ಬೆಳಕನ್ನುಳಿಸಲು ಬತ್ತಿ-ತೈಲ
ಸತತ ಜೀವ ತೇಯುತ್ತಿದ್ದರೆ..
ಕತ್ತಲ ಸಂಸ್ಥಾಪಿಸಲು ಗಾಳಿ
ಸದಾ ಸಮಯ ಕಾಯುತ್ತಿತ್ತು.!
*******
5. ವಿನಂತಿ !
ದೀಪದ ಬುಡದಲ್ಲಿನ
ಕತ್ತಲು ಹುಡುಕುವ ಬದಲು
ದೀಪದ ಶಿರದಲ್ಲಿನ
ಬೆಳಕಿಗೆ ತಲೆಬಾಗು ಮೊದಲು.!
*******
6. ಮೂಲ
ಬತ್ತಿ ತೈಲಗಳ ತ್ಯಾಗ
ಬಲಿದಾನಗಳಿಂದಲೇ
ಬೆಳಕಿಗೆ ಬದುಕು.!
*****
7. ಜೋಕೆ !
ದೇಹ ಸುಡಲಿಕ್ಕೆ ಕಡ್ಡಿ
ಗೀರುವವರಿಗಿಂತಲೂ
ಜೀವಭಾವ ಉರಿಸಲಿಕ್ಕೆ
ಸದಾ ಬತ್ತಿ ಇಡುವವರು
ನಿತ್ಯ ಎಣ್ಣೆ ಸುರಿವವರು
ಗೆಳೆಯ ಕಂಗಳಿಗೆ ಅಪ್ಯಾಯ
ಬದುಕಿಗೆ ಬಲು ಅಪಾಯ.!
********
8. ಫಲಿತಾಂಶ !
ಎದೆಯಲಿ ತೈಲ ತುಂಬಿಕೊಂಡ
ಬತ್ತಿ ಬೆಳಗಿ ಬೆಳಕಾಯಿತು.!
ಶಿರದಿ ಸಿಡಿಮದ್ದು ತುಂಬಿಕೊಂಡ
ಬೆಂಕಿಕಡ್ಡಿ ಉರಿದು ಬೂದಿಯಾಯಿತು.!
*******
9. ದೀಪ !
ದೀಪವೆಂದರೆ
ಅರಿತವರಿಗೆ ಬೆಳಕಿನ ನುಡಿ
ಸಹಸ್ರ ಸಂವೇದನೆ ಭಾವದಾಂಗುಡಿ
ಅರಿಯದವರಿಗೆ ಬರೀ ಬೆಂಕಿ ಕಿಡಿ.!
- ಎ.ಎನ್.ರಮೇಶ್. ಗುಬ್ಬಿ
