ಧೃವನಿಗೆ ತನಗೆ ಹೀಗಾಗಿದೆ ಎಂಬ ನೋವಿಗಿಂತ ಫೈಲ್ ಕಳೆದು ಹೋಯ್ತು ಅಂತ ತುಂಬಾ ನೊಂದಿದ. ನರ್ಸಿನ ಫೋನ್ ತಗೆದುಕೊಂಡು ಶುಭಂನಿಗೆ ಕರೆ ಮಾಡಿದ. ಶುಭಂ ರವಿಗೆ ಕರೆ ಮಾಡಿ ಪಚ್ಚುವಿಗೆ ಬೇಗ ಬರಲು ಹೇಳಿದ. ಸ್ವಲ್ಪ ಹೊತ್ತಿನ ನಂತರ ಶುಭಂ ಹಾಗೂ ಪಲ್ಲವಿ ಬಂದರು. ಮುಂದೇನಾಯಿತು ವಿಕಾಸ್. ಫ್. ಮಡಿವಾಳರ ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಪಚ್ಚು ಅಂದು ಬೆಳಗ್ಗೆ ಮನೆಯ ಸೋಫಾದ ಮೇಲೆ ಚಿಂತಿಸುತ್ತ ಕೂತಿದ್ದ. ನಿನ್ನೆಯಷ್ಟೇ ಆತ ತನ್ನ ಮಡದಿ ಸಂಜನಾಳ ಜೊತೆ ಜೋಗ ಜಲಪಾತ ಟ್ರಿಪ್ ಗೆ ಹೋಗಿ ಬಂದಿದ್ದ. ಜೋಗ ಮತ್ತು ಬಂಗಾರ ಕುಸುಮದ ಸುಮಧುರವಾದ ಕ್ಷಣಗಳನ್ನು ಅನುಭವಿಸಿದರೂ ಆತನ ಮುಖದಲ್ಲಿ ಸಂತೋಷದ ಕಳೆ ಇರಲಿಲ್ಲ. ನಿನ್ನೆ ರಾತ್ರಿ ತುಂಬಾ ಸುಸ್ತಾಗಿ ಬೇಗ ಮಲಗಿದ್ದ ಕಾರಣ ಧೃವ ಕಳಿಸಿದ ಕೋಡ್ ಮೆಸೇಜನ್ನು ನೋಡೋಕೆ ಆಗಲಿಲ್ಲ. ಬೆಳಗ್ಗೆ ಕಾಲ್ ಮಾಡಿದರೆ ಸ್ವಿಚ್ ಆಫ್ ಅಂತ ಬರ್ತಾ ಇತ್ತು. ಧೃವ ಹಾಗೆಲ್ಲ ಫೋನನ್ನು ಸ್ವಿಚ್ ಆಫ್ ಮಾಡುವವನಲ್ಲ, ಸ್ವಿಚ್ ಆಫ್ ಆಗಿದೆ ಅಂದರೆ ಏನೊ ಪ್ರಾಬ್ಲಮ್ ಆಗಿರಬೇಕು. ನಿನ್ನೆ ರಾತ್ರಿ ನೆ ಅವನ ಮೆಸೇಜ್ ನೋಡಿದಿದ್ರೆ ಏನಾದ್ರು ಮಾಡಬಹುದಾಗಿತ್ತು. ಅಂತ ಶಪಿಸುತ್ತ ಆಫೀಸಿಗೆ ಹೋದ. ಇನ್ನೇನು ಆಫೀಸಿನ ಮೆಟ್ಟಿಲು ಹತ್ತಬೇಕು ಎನ್ನುವಷ್ಟರಲ್ಲಿ ರವಿ ಓಡಿ ಬಂದ. “ಅಣ್ಣಾವ್ರ ಅಣ್ಣಾವ್ರ ಧೃವಣ್ಣನ್ನ ಸಾಯಿ ಹೊಡೆದಾರಂತ” ಅಂತ ಕಿರುಚಿದ. ಪಚ್ಚುವಿಗೆ ಆಘಾತವಾಯ್ತು.
“ಏನೂ ಹೇಳ್ತ ಇದಿಯಾ, ಸರಿಯಾಗಿ ಹೇಳು ” ಎಂದು ಬೈದ.
“ಹುಬ್ಬಳ್ಳಿಯಿಂದ ಶುಭಂ ಫೋನ್ ಮಾಡಿದ್ದ. ಧೃವವಣ್ಣನಿಗೆ ಆಕ್ಸಿಡೆಂಟ್ ಆಗಿದೆಯಂತೆ. ಕಿಮ್ಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದಾರಂತೆ. ನೀವು ಕುಡ್ಲೆ ಹೋಗ್ಬೇಕಂತೆ” ರವಿ ಉತ್ತರಿಸಿದ.
“ಏನೂ ಧೃವನಿಗೆ ಆಕ್ಸಿಡೆಂಟ್ ಆಗಿದಿಯಾ? ಸರಿ ನಾನು ಹುಬ್ಬಳ್ಳಿಗೆ ಹೋಗ್ತೇನಿ. ನೀನು ಸಂಜನಾಗೆ ನಾನು ಹುಬ್ಬಳ್ಳಿಗೆ ಹೋಗಿದೆನಿ ಅಂತ ತಿಳಿಸು. ಸುದೀಪನಿಗೆ ಬರೋಕೆ ಹೇಳು ” ಎನ್ನುತ್ತಾ ತನ್ನ ಬೊಲೆರೊ ಜೀಪು ಹತ್ತಿ ಹುಬ್ಬಳ್ಳಿ ಕಡೆ ಹೊರಟ.
***
ಧೃವ ಆ ರಾತ್ರಿ ಮಲ್ಲಪ್ಪಗೌಡರನ್ನ ಭೇಟಿ ಮಾಡಿ ಫೈಲನ್ನ ತಗೆದುಕೊಂಡು ಹುಬ್ಬಳ್ಳಿಗೆ ಬಂದ. ಹುಬ್ಬಳ್ಳಿಯ ಅಯೋಧ್ಯಾ ಹೋಟೆಲಿನಲ್ಲಿ ತನ್ನ ಮಿತ್ರ ಶುಭಂ ಹಾಗೂ ಅವನ ಪತ್ನಿ ಪಲ್ಲವಿಯ ಜೊತೆ ಊಟ ಮಾಡಿ, ಹಾನಗೇರಿಯ ಕಡೆ ಹೊರಟ. ಹುಬ್ಬಳ್ಳಿ ದಾಟಿ ಬಂಕಾಪುರ ಚೌಕಿನಿಂದ ನಾಲ್ಕೈದು ಕಿಲೋಮೀಟರ್ ಹೋಗುತ್ತಿದ್ದಂತೆ ಬೈಕಿನ ಪೆಟ್ರೋಲ್ ಖಾಲಿಯಾಯಿತು. NH-4 ಹೈವೇಯಲ್ಲಿ ಬೈಕು ಕೈ ಕೊಟ್ಟಿದ್ದರಿಂದ ದಾರಿಯ ಬದಿ ನಿಲ್ಲಿಸಿ ಪೆಟ್ರೋಲ್ ತರಲು ಮತ್ತೆ ಹುಬ್ಬಳಿಯ ದಿಕ್ಕಿಗೆ ನಡೆದ.
ರಾತ್ರಿ 1.15 ಆಗಿತ್ತು. ವಾಹನಗಳ ಓಡಾಟ ಕಡಿಮೆಯಿತ್ತು. ಮುಂದೆ ಹೋಗುತ್ತಿರುವಾಗ ನೂರಾನಿ ಫಂಕ್ಷನ್ ಹಾಲ್ ಕಂಡಿತು. ಇದೆ ಸ್ಥಳದಲ್ಲಿ ಅಲ್ಲವೆ. ಹಿಂದೂ ಸಂಘಟನೆಯ ಸಂಚಾಲಕನಾದ ಶಿವು ಜಾಡರ್ ನನ್ನು ಹತ್ಯೆ ಮಾಡಿದ್ದು. ಬಾಗಲಕೋಟೆಯ ಸಂಚಾಲಕನಾದ ಶಿವು ಗೋ ಸಂರಕ್ಷಣೆ ಸಲುವಾಗಿ ಹುಬ್ಬಳಿಗೆ ಬಂದಿದ್ದ. ಹುಬ್ಬಳ್ಳಿಯಿಂದ ತಮಿಳುನಾಡಿಗೆ ಅಕ್ರಮವಾಗಿ ಗೋವುಗಳ ಕಳ್ಳಸಾಗಾಣಿಕೆಯಾಗುತ್ತಿದೆ ಎಂಬ ಮಾಹಿತಿ ಆತನಿಗೆ ಸಿಕ್ಕಿತ್ತು. ರಾತ್ರಿ ಇದರ ಬಗ್ಗೆ ತನಿಖೆ ಮಾಡುವಾಗ ಕಳ್ಳು ಸಾಗಾಣಿಕೆ ಮಾಡುವವರ ಕೈಗೆ ಒಬ್ಬಂಟಿಯಾಗಿ ಸಿಕ್ಕಿಬಿದ್ದಿದ್ದ. ಆತನನ್ನು ಹತ್ಯೆ ಮಾಡಿ ಫಂಕ್ಷನ್ ಹಾಲಿನ ಮುಂದುಗಡೆ ಬಿಸಾಡಿದ್ದರು. ಈಗ ಆ ಹಾಲ್ ಬಂದಾಗಿದೆ.
ಫೋಟೋ ಕೃಪೆ : google
ಮಳೆ ತುಂಬಾ ಬರ್ತಾ ಇತ್ತು. ಸ್ವಲ್ಪ ಹೊತ್ತು ಅಲ್ಲಿ ನಿಲ್ಲೋನವೆಂದುಕೊಂಡು ದೃವ ಫಂಕ್ಷನ್ ಹಾಲ್ ಕಡೆ ಹೊರಟ. ಆರೇಳು ಹೆಜ್ಜೆಯನ್ನು ಇಟ್ಟಿರಲಿಲ್ಲ. ಯಾವುದೊ ದಿಕ್ಕಿನಿಂದ ಬಂದ ಗಾಡಿಯೊಂದು ದೃವನನ್ನು ಜೋರಾಗಿ ಗುದ್ದಿತು. ಗುದ್ದಿದ ಹೊಡೆತಕ್ಕೆ ದೃವ ದಾರಿಯ ಬದಿಯಲ್ಲಿದ್ದ ಗಿಡಗಂಟೆಗಳ ಬೇಲಿಯಲ್ಲಿ ಬಿದ್ದ. ತಲೆಗೆ ಪೆಟ್ಟಾಗಿ ಮೂರ್ಛೆಹೋದ.
ಧೃವನಿಗೆ ಎಚ್ಚರವಾದಗ ಆತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿದ್ದ. ಕೈಗೆ ಇಂಜೆಕ್ಷನ್ ಕೊಡುತ್ತಿದ್ದ ನರ್ಸ್ ಆತನಿಗೆ ಯಮಧರ್ಮನ ಮೂರನೆ ಮೊಮ್ಮಗಳ ಹಾಗೆ ಕಂಡಳು. ಅವಳನ್ನು ನೋಡಿ ಗಾಬರಿಯಾದ ದೃವ
“ಯಾರು ನೀವು. ನಾನೆಲ್ಲಿಯಿದ್ದೇನೆ?” ಅಂತ ಕೇಳಿದ.
“ಗಾಬರಿಯಾಗಬೇಡಿ, ರಾತ್ರಿ ನೀವು ಬಂಕಾಪುರ ಚೌಕ್ ಹತ್ರ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ರಿ. ಗಸ್ತು ತಿರುಗುತ್ತಿದ್ದ ಪೊಲೀಸರು ನಿಮ್ಮನ್ನ ನೋಡಿ ಇಲ್ಲಿಗೆ ಕರ್ಕೊಂಡು ಬಂದ್ರು. ಜಾಸ್ತಿ ಏನೂ ಪೆಟ್ಟು ಆಗಿಲ್ಲ. ತಲೆಗೆ ಕಾಲಿಗೆ ಗಾಯವಾಗಿದೆ ಅಷ್ಟೆ ” ಅಂತ ನರ್ಸ್ ಹೇಳಿದ್ಲು.
“ನನ್ ಫೋನ್ ಎಲ್ಲಿದೆ. ಆ ಫೈಲ್ ಎಲ್ಲಿ ಹೋಯ್ತು ” ಧೃವ ಹುಡುಕತೊಡಗಿದ.
“ಸಾರೀ ಸರ್, ಪೊಲೀಸರು ನಮಗೆ ಏನು ಕೊಟ್ಟಿಲ್ಲ.”
“ಅಯ್ಯೊ ಹಾಗಿದ್ರೆ ಆ ಫೈಲ್ ಕಳೆದು ಹೋಯ್ತಾ”
ಧೃವನಿಗೆ ತನಗೆ ಹೀಗಾಗಿದೆ ಎಂಬ ನೋವಿಗಿಂತ ಫೈಲ್ ಕಳೆದು ಹೋಯ್ತು ಅಂತ ತುಂಬಾ ನೊಂದಿದ. ನರ್ಸಿನ ಫೋನ್ ತಗೆದುಕೊಂಡು ಶುಭಂನಿಗೆ ಕರೆ ಮಾಡಿದ. ಶುಭಂ ರವಿಗೆ ಕರೆ ಮಾಡಿ ಪಚ್ಚುವಿಗೆ ಬೇಗ ಬರಲು ಹೇಳಿದ. ಸ್ವಲ್ಪ ಹೊತ್ತಿನ ನಂತರ ಶುಭಂ ಹಾಗೂ ಪಲ್ಲವಿ ಬಂದರು. ಪಚ್ಚು ಬರಲು ಮದ್ಯಾಹ್ನವಾಯ್ತು. ಬಂದಕೂಡಲೇ ಪಚ್ಚು ದೃವನ ಸ್ಥಿತಿ ನೋಡಿ ಬಯ್ಯತೊಡಗಿದ.
“ದಾರಿಲಿ ಹೋಗೊವಾಗ ನೋಡ್ಕೊಂಡು ಹೋಗೊಕೆ ಆಗಲ್ವಾ. ನೋಡು ನಿನ್ನ ಪರಿಸ್ಥಿತಿನ ” ಪಚ್ಚು ಧೃವನಿಗೆ ಬೈದ.
“ಇಲ್ಲ ಪಚ್ಚು ಇದು ತಪ್ಪಾಗಿ ಆದದಲ್ಲ. ಬೇಕಂತಾ ನನ್ನ ಮೇಲೆ ಗಾಡಿ ಗುದ್ದಿದಾರೆ.” ಧೃವ ಹೇಳಿದ.
“ಅವರ್ಯಾಕೆ ನಿನ್ನ ಕೊಲ್ಲಬೇಕು?” ಪಚ್ಚು ಕೇಳಿದ.
ಧೃವ ಶುಭಂನಿಗೆ ಸನ್ನೆ ಮಾಡಿದ. ಶುಭಂ “ಏನಾದ್ರು ಬೇಕಾದ್ರೆ ಕೂಗು ನಾವು ಹೊರಗಡೆ ಇರ್ತೇವಿ ” ಅಂತ ಹೇಳಿ ಪಲ್ಲವಿನ ಕರ್ಕೊಂಡು ಹೊರಗೆ ಹೋದ. ಧೃವ ಪಚ್ಚುವಿಗೆ ಮಲ್ಲಪ್ಪ ಗೌಡರ ಜೊತೆ ಆದ ಮಾತುಕತೆಯನ್ನ ವಿವರಿಸುತ್ತಾ,
ಫೋಟೋ ಕೃಪೆ : google
“ರೋಡಲ್ಲಿ ವಾಹನಗಳ ಓಡಾಟ ಕಡಿಮೆಯಿತ್ತು. ನನ್ನ ಗುದ್ದಿದ ಗಾಡಿ ರೋಡ್ ಮಧ್ಯೆ ಆರಾಮಾಗಿ ಹೋಗ ಬಹುದಿತ್ತು. ಆದರೆ ಅದು ರೋಡ ಬದಿ ನಡೆಯುತ್ತಿದ್ದ ನನ್ನ ಮೇಲೆ ಹಾರ್ನ್ ಕೂಡ ಹೊಡೆಯದೆ ಬಂದು ಗುದ್ದಿದೆ. ಇದು ಉದ್ದೇಶ ಪೂರ್ವಕವಾಗಿ ಮಾಡಿದ ಕೆಲಸ ಅಂತ ನನಗನಿಸುತ್ತೆ ” ಧೃವ ಹೇಳಿದ.
“ಆ ಗಾಡಿ ನಾ ನೀನು ನೋಡಿದೀಯಾ? ನಿನ್ನ ಫೋನ್ ಎಲ್ಲಿದೆ?”
“ನೀಲಿ ಬಣ್ಣದ ಟಾಟಾ ಎಸಿ ಗಾಡಿ. ಗಾಡಿ ಮುಂದೆ ಅಂಬಾರಿ ಅಂತ ರೇಡಿಯಂ ಅಂಟಿಸಿದ್ದಾರೆ. ಇನ್ಸ್ಪೆಕ್ಟರ್ ಮುರುಳಿ ಬಂದು ವಿಚಾರಿಸಿದ್ರು. ನಾನೆಲ್ಲ ಹೇಳಿದೆನಿ. ಅವ್ರು ನಾನು ಬಿದ್ದ ಜಾಗಕ್ಕೆ ಹೋಗಿ ಅಕ್ಕ ಪಕ್ಕ ಹುಡುಕಿದ್ರಂತೆ ಆದ್ರೆ ಫೋನ್ ಫೈಲ್ ಏನೂ ಸಿಗಲಿಲ್ಲವಂತೆ. ನನಗೆ ಗುದ್ದಿದವರೆ ಅದನ್ನ ತಗೊಂಡು ಹೋಗಿರ್ಬೇಕು. ಅದೆ ಕ್ಷಣಕ್ಕೆ ಗಸ್ತು ತಿರುಗುತ್ತಾ ಪೊಲೀಸ್ ಬಂದಿದ್ದಾರೆ. ಅವರನ್ನ ನೋಡಿ ಪರಾರಿಯಾಗಿರಬೇಕು.”
“ಸರಿ ನಾನು dysp ಹರಿಶ್ಚಂದ್ರ ಜೊತೆ ಮಾತಾಡಿ ಆ ಗಾಡಿಯನ್ನ ಹುಡುಕಿಸ್ತೇನಿ. ನೀನೆನು ಮಾಡಬೇಕು ಅಂದುಕೊಂಡಿದಿಯಾ?” ಪಚ್ಚು ಕೇಳಿದ.
“ಮೊದ್ಲು ನನ್ನ ಫೋನ್ ಟ್ರ್ಯಾಕ್ ಮಾಡಿಸು. ಹಂಗೆ ನನ್ನ ಹಳೆ ನಂಬರಿನ ಡೂಪ್ಲಿಕೇಟ್ ಸಿಮ್ ತಂದುಕೊಡು ಆ ಫೈಲ್ ಇದ್ದಿದ್ರೆ ಏನಾದ್ರು ಮಾಡಬಹುದಾಗಿತ್ತು ” ದೃವ ಹೇಳಿದ.
“ಮಲ್ಲಪ್ಪ ಗೌಡರಿಗೆ ಈ ವಿಷಯ ಗೊತ್ತ ” ಪಚ್ಚು ಕೇಳಿದ.
“ಇಲ್ಲ ನಾನೇನು ಹೇಳಿಲ್ಲ. ಸುಮ್ನೆ ಗಾಬರಿಯಾಗ್ತಾರೆ ” ದೃವ ಹೇಳಿದ.
“ನಂಗೆ ನಂಬೋಕೆ ಆಗ್ತಾ ಇಲ್ಲ. ಕರಬಸ್ಸಪ್ಪನವರು ಕೊಲೆ ಮಾಡಿದ್ದಾರೆ ಅಂದ್ರೆ ” ಪಚ್ಚು ಹೇಳಿದ.
“ಹಾ ನೆನಪಿಗೆ ಬಂತು ದುಂಡಶಿ ” ಧೃವ ಚಂಗನೆ ಎದ್ದು ಕುಳಿತ.
“ಏನದು ದುಂಡಶಿ ” ಪಚ್ಚು ಕೇಳಿದ.
“ಆ ಫೈಲಿನಲ್ಲಿ ದುಂಡಶಿ ಊರಿನ ಉಲ್ಲೇಖವಿದೆ. ನಿನ್ನೆ ರಾತ್ರಿ ಮಲ್ಲಪ್ಪ ಗೌಡರು ಫೈಲ್ ಕೊಟ್ಟಾಗ ನೋಡಿದ ನೆನಪು. ನಾವು ದುಂದಶಿಗೆ ಹೋದರೆ ಏನಾದ್ರು ಮಾಹಿತಿ ಸಿಗಬಹುದು”
ಧೃವನಿಗೆ ಒಳಗೊಳಗೆ ಖುಷಿಯಾಗಿತ್ತು. ಕೈ ತಪ್ಪಿದ್ದ ಕೇಸು ಮತ್ತೆ ಸಿಕ್ಕಿತು ಅಂತ ಒಳಗೊಳಗೆ ಹಿಗ್ಗಿದ. ಆದರ್ಶ ಗೌಡನ ಸಾವು ತಿಳಿಬೇಕು ಅಂದ್ರೆ ದುಂದಶಿಗೆ ಹೋಗಬೇಕು ಅಂತ ಪಚ್ಚುವಿಗೆ ಹೇಳಿದ
ಹಿಂದಿನ ಸಂಚಿಕೆಗಳು :
- ವಿಕಾಸ್. ಫ್. ಮಡಿವಾಳರ