ಲೇಖನ : ಕಾವ್ಯ ದೇವರಾಜ್
ಇಂದಿನ ಮಕ್ಕಳು ಬಹಳ ಚುರುಕು ಓದುವುದರಲ್ಲಿ, ಆಡುವುದರಲ್ಲಿ, ಕುಣಿಯುವುದರಲ್ಲಿ ಎಲ್ಲದರಲ್ಲೂ ಮುಂದು. ಮಕ್ಕಳ ಪೋಷಕರಂತೂ ಮಕ್ಕಳು ಶಾಲೆಯಿಂದ ಮನೆಗೆ ಬಂದ ಕೂಡಲೇ ಕೂರಲು ಬಿಡುವುದಿಲ್ಲ. ಬೇಗ ಬೇಗ ಬಟ್ಟೆ ಬದಲಿಸಿ ಕೈ, ಕಾಲು ತೊಳೆದು ಹಾಲು ಕುಡಿದು ಹಣ್ಣು- ಹಂಪಲು ಇಲ್ಲ. ಜಂಕ್ ಫುಡ್ ಕೊಟ್ಟು ಕರಾಟೆ ಕ್ಲಾಸ್, ಡ್ಯಾನ್ಸ್ ಕ್ಲಾಸ್ ಗೂ ಇಲ್ಲಾ ಇನ್ನಾವುದೋ ಕ್ಲಾಸ್ ಗೆ ಕರೆದುಕೊಂಡು ಹೋಗಬೇಕು. ಮತ್ತೆ ಕರೆದುಕೊಂಡು ಬಂದ ನಂತರ ಓದಿಸಿ ಊಟ ಮಾಡಿಸಿ ಮಲಗಿಸಿದರೆ ಆಯ್ತು ಪುನಃ ನಾಳೆನದು ಇದೇ ಕತೆ ವ್ಯತ್ಯಾಸವೇನಿಲ್ಲ. ಶಾಲಾ ರಜಾ ದಿನಗಳಲ್ಲಿ ಪೋಷಕರೊಂದಿಗೆ ಶಾಪಿಂಗ್, ಔಟಿಂಗ್ ಇಲ್ಲವೇ ಕಂಪ್ಯೂಟರ್, ಮೊಬೈಲ್, ಟ್ಯಾಬ್, ಟಿವಿಗಳಲ್ಲಿ ಮಕ್ಕಳು ಮುಳುಗಿ ಹೋಗಿರುತ್ತಾರೆ.
‘ನಮ್ಮ ಮಕ್ಕಳು ನಿಮಗೆ ಗೊತ್ತಲ್ಲ, ಸ್ವಲ್ಪನೂ ಬಿಡುವಿಲ್ಲ! ಅವರೇ ಕ್ಲಾಸ್ ಫಸ್ಟ್, ಡ್ಯಾನ್ಸ್ ಎಷ್ಟು ಚಂದ ಮಾಡ್ತಾರೆ ಗೊತ್ತಾ? ಕರಾಟೆಯನ್ನೂ ಅಷ್ಟೇ. ನನ್ನ ಮಗ ಗಿಟಾರ್ ಬಾರಿಸುತ್ತಿದ್ದರೆ, ಕಳೆದೆ ಹೋಗ್ತೀವಿ’ ಎಂದು ಹೇಳಿಕೊಳ್ಳುವುದೇ ಪೋಷಕರಿಗೆ ಒಂದು ಖುಷಿ. ಒಂದೆಡೆ ನೋಡುವುದಾದರೆ ಮಕ್ಕಳ ಪರ್ಫಾರ್ಮೆನ್ಸ್ ಪೋಷಕರಿಗೆ ಖುಷಿ ಕೊಟ್ಟಿದೆ. ಹಾಗಾಗಿ ಮಕ್ಕಳು ಸಹ ಅದರ ಲಾಭ ಪಡೆದು ತಮಗೆ ಬೇಕಾದ ಬೇಡಿಕೆಗಳನ್ನು ಮುಂದಿಡುತ್ತಾರೆ. ಅಪ್ಪ-ಅಮ್ಮನು ಮಕ್ಕಳು ಕೇಳಿದ್ದನ್ನೆಲ್ಲಾ ತಂದು ಕೊಟ್ಟು ತಮ್ಮ ಮಕ್ಕಳನ್ನು ಖುಷಿ ಪಡಿಸುತ್ತಾರೆ. ಒಟ್ಟಿನಲ್ಲಿ ಹೇಳ ಬೇಕೆಂದರೆ ಎಷ್ಟೋ ಜನ ನಾವು ನಮ್ಮ ಮಕ್ಕಳು ಫುಲ್ ‘ಮಾಡರ್ನ್’ ಅಂತ ಹೇಳಿಕೊಳ್ಳಲು ಬಯಸುವ ಪೋಷಕರೇ ಹೆಚ್ಚು.
ಇಂದಿನ ದಿನಗಳಲ್ಲಿ ಪೋಷಕರು ಸಾವಿರಾರು, ಲಕ್ಷಾಂತರ ಹಣ ವ್ಯಯಿಸಿ ಶಾಲೆಗೆ ಸೇರಿಸುತ್ತಾರೆ. ಹುಡುಕಿಕೊಂಡು ಕರೆದುಕೊಂಡು ಹೋಗಿ ವಿವಿಧ ರೀತಿಯ ಹವ್ಯಾಸಿ ತರಗತಿಗಳಿಗೆ ಸೇರಿಸುತ್ತಾರೆ. ಆದರೆ ಸಂಸ್ಕಾರ ಕೊಡುವುದನ್ನು ಮರೆಯುತ್ತಿದ್ದಾರೆ. ಪಾಶ್ಚಾತ್ಯರು ಇಂದು ನಮ್ಮಲ್ಲಿನ ಯೋಗ, ವೇದ, ಮಂತ್ರ, ಧ್ಯಾನಗಳನ್ನು ಕಲಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ನಮ್ಮವರು ಸಾರಸಗಟಾಗಿ ನಮ್ಮ ಸಂಸ್ಕಾರವನ್ನು ತಿರಸ್ಕರಿಸಿ ಪಾಶ್ಚಾತ್ಯರಂತೆ ವರ್ತಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಇಂದಿನ ಪೀಳಿಗೆಯಲ್ಲಿ ನಾವು ‘ಲಿವಿಂಗ್ ಟುಗೆದರ್’ ಗಳಂಥ ಸಂಸ್ಕೃತಿಯನ್ನು ನಮ್ಮ ದೇಶದಲ್ಲಿ ಆಲದ ಮರದಂತೆ ಬೆಳೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಇದು ನಮಗೆ ನಿಮಗೆ ಗೊತ್ತಿಲ್ಲದ ಸಂಗತಿ ಏನಲ್ಲ!. ಇಂತಹ ಪರಿಸ್ಥಿತಿ ಒಂದೆಡೆಯಾದರೆ ಇನ್ನೊಂದೆಡೆ ಮಕ್ಕಳ ತಂದೆ -ತಾಯಿ ಪ್ರೀತಿ ಇಲ್ಲದೇ ಬೆಳೆದ ಮಕ್ಕಳು ಬಾಂಧವ್ಯದ ಕೊರತೆಯಿಂದ ಬೆಳೆದು ದೊಡ್ಡವರಾದ ನಂತರ ತಂದೆ-ತಾಯಿಯರು ಕಷ್ಟದಲ್ಲಿದ್ದಾಗ ಅಥವಾ ಅವರಿಗೆ ಅನಾರೋಗ್ಯವಾದಾಗ ಸ್ಪಂದಿಸದೆ ಇರುವ ಮಕ್ಕಳನ್ನು ನೋಡುತ್ತಿರುವುದು ಮತ್ತು ವೃದ್ಧಾಶ್ರಮ ಅನಾಥಾಶ್ರಮಗಳು ತಲೆ ಎತ್ತಿ ನಿಲ್ಲುತ್ತಿರುವುದು.
ಹಿಂದಿನ ಕಾಲದಲ್ಲಿ ಅಂದರೆ ತುಂಬಾ ಹಿಂದೆ ಬೇಡ ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು, ಶಾಲೆ ಮುಗಿಸಿಕೊಂಡು ಬಂದ ಮಕ್ಕಳು ಆಡುತ್ತಿದ್ದರೂ, ಸಂಜೆ ಹೊತ್ತಿನಲ್ಲಿ ಅಜ್ಜ, ಅಜ್ಜಿ ರಾಮಾಯಣ ಭಗವದ್ಗೀತೆಯ ಸಾರವನ್ನು ಹೇಳುತ್ತಿದ್ದರು. ರಾತ್ರಿ ಮಲಗುವ ವೇಳೆ ಅಮ್ಮ ನೀತಿ ಕಥೆಯನ್ನು ಹೇಳುತ್ತಿದ್ದಳು. ಅಂದು ಶಾಲೆಯಲ್ಲಿ ಕಲಿಯುವ ವಿದ್ಯೆಯ ಜೊತೆಗೆ ಸಂಸ್ಕಾರ ಮುಖ್ಯವಾಗಿತ್ತು. ಮಕ್ಕಳು ಅಂದು ಕುಂಟೆಬಿಲ್ಲೆ, ಚಿನ್ನಿದಾಂಡು ಇಂತಹ ಆಟ ಆಡುತ್ತಿದ್ದರು. ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲ ವೆಂದರೆ ಮಕ್ಕಳು ಕೊರಗುತ್ತಿದ್ದರು. ಒಂದೇ ಮಾತಿನಲ್ಲೇ ಹೇಳಬೇಕೆಂದರೆ ಹದಿನೈದು-ಇಪ್ಪತ್ತು ವರ್ಷಗಳ ಹಿಂದೆ ಹುಟ್ಟಿದವರೇ ಪುಣ್ಯವಂತರು. ಆದರೆ ಇಂದಿನ ಮಕ್ಕಳಿಗೆ ಅಜ್ಜಿ- ತಾತನ ಬಳಿ ಮಾತನಾಡಲು ಸಮಯವಿಲ್ಲ. ಅವರು ಆಡುವ ಆಟಗಳಂತು ಭಯಂಕರ. ಇತ್ತೀಚೆಗೆ ಕೆಲ ತಿಂಗಳ ಹಿಂದೆ ಬಂದ ಬ್ಲೂವೇಲ್ ಹಾವಳಿಗೆ ಎಷ್ಟು ಹದಿಹರೆಯದ ಮಕ್ಕಳು ಪ್ರಾಣ ಕಳೆದುಕೊಂಡವು ಎಂದು ಎಲ್ಲರಿಗೂ ಗೊತ್ತು. ಅಂತಹ ಮಕ್ಕಳನ್ನು ನೋಡಿದಾಗ ಅನ್ನಿಸುವುದು ಅವರಿಗೆ ಮಾರ್ಗದರ್ಶನ ಕೊರತೆ ಮತ್ತುಸಂಸ್ಕಾರದಲ್ಲಿನ ಕೊರತೆ ಇರುವುದು, ಲಾಲನೆ ಪಾಲನೆಯಲ್ಲಿ ಪೋಷಕರು ಕೊಂಚ ಹೆಚ್ಚಿಗೆ ನಿಗಾ ವಹಿಸಿದ್ದರೂ ಮಕ್ಕಳನ್ನು ಕಳೆದುಕೊಳ್ಳುವ ಸಂಭವ ಬರುತ್ತಿರಲಿಲ್ಲ.
(ಮಕ್ಕಳಿಗೆ ರಾಮಾಯಣ ಮತ್ತು ಶ್ಲೋಕಗಳನ್ನುಹೇ ಶ್ರೀಮತಿ ಗಾಯತ್ರಿ ನರೇಂದ್ರನ್)
ಇದನ್ನು ಮನಗಂಡ ಶ್ರೀಮತಿ ಗಾಯತ್ರಿ ನರೇಂದ್ರನ್ ರವರು ಅವರ ಗುರುಗಳಾದ ಡಾ.ರಂಗನ್ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕಲಿತಿದ್ದ ವೇದ, ಉಪನಿಷತ್ತು, ರಾಮಾಯಣ ಮತ್ತು ಶ್ಲೋಕಗಳನ್ನು ಪುಟ್ಟ ಮಕ್ಕಳಿಂದ ದೊಡ್ಡವರವರೆಗೂ ಹೇಳಿ ಕೊಡಲು ಮುಂದಾದರು. ನಿಮಗೆ ಗೊತ್ತಿರದೇನಿದೇ ‘ನಮ್ಮ ಹಿತ್ತಲ ಗಿಡ ಮದ್ದಲ್ಲ’ ಎಂಬಂತೆ ಬೆರೆಳೆಣಿಕೆಯ ಮಕ್ಕಳಿಂದ ತರಗತಿ ಪ್ರಾರಂಭವಾದರೂ ನಿರುತ್ಸಾಹ ಗೊಳ್ಳದ ಗಾಯತ್ರಿ ಜಿಯವರು ಮುಂದುವರಿಸಿದರು. ಇದರ ಫಲವಾಗಿ ಇಂದು ಅವರಲ್ಲಿ ನೂರಾರು ಮಕ್ಕಳು ಶ್ರದ್ಧೆ ಮತ್ತು ಆಸಕ್ತಿಯಿಂದ ಕಲಿಯುತ್ತಿರುವುದು. ಹಾಗೂ ಮಕ್ಕಳಿಗೆ ಸುಲಭವಾಗಲೆಂದು ಮೂರರಿಂದ ಹತ್ತು ವರ್ಷದ ಮಕ್ಕಳನ್ನು ಒಂದು ಗುಂಪು ಹಾಗೂ ಹತ್ತು ವರ್ಷ ಮೇಲ್ಪಟ್ಟ ಮಕ್ಕಳು ಒಂದು ಗುಂಪು ಹಾಗೂ ಗೃಹಿಣಿ ಮತ್ತು ಪುರುಷರಿಗೆಂದು ತರಗತಿಗಳನ್ನು ವಿಂಗಡಿಸಲಾಗಿದೆ. ಇಲ್ಲಿ ಕಲಿಯುತ್ತಿರುವ ಪುಟ್ಟ ಮಕ್ಕಳಿಗಂತೂ ಈಗ ರಾಮ- ಲಕ್ಷ್ಮಣ, ಹನುಮನೇ ಹೀರೋ ಅವರು ಕಠಿಣ ಶ್ಲೋಕಗಳಲ್ಲಿ ಎಷ್ಟು ಸೊಗಸಾಗಿ ಹೇಳುತ್ತಾರೆಂದರೆ ನಾವು, ನೀವು ಬಾಯಿ ಮೇಲೆ ಬೆರಳು ಇಡಲೇಬೇಕು. ಇನ್ನು ರಾಮಾಯಣದ ಕಥೆ ಹೇಳಲು ಶುರು ಮಾಡಿದರೆ ಆ ಮಕ್ಕಳಿಗಾಗುವ ಆನಂದ ಹೇಳತೀರದು. ಈ ವಾರ ಮಾಡಿದ ಪಾಠವನ್ನು ಪ್ರತಿ ಮಕ್ಕಳು ಚಾಚೂ ತಪ್ಪದೆ ಮುಂದಿನ ತರಗತಿಯಲ್ಲಿ ಕಂಠ ಪಾಠ ಮಾಡಿ ಬಂದಿರುತ್ತಾರೆ.
ಇನ್ನೊಂದು ಮುಖ್ಯ ವಿಷಯವೆಂದರೆ ಈ ಮಕ್ಕಳನ್ನು ಯಾವ ಪೋಷಕರು ಒತ್ತಾಯದಿಂದ ಈ ತರಗತಿಗೆ ಕಳುಹಿಸುತ್ತಿಲ್ಲ. ಮಕ್ಕಳೇ ತುದಿಗಾಲಿನಲ್ಲಿ ಓಡಿ ಬರುತ್ತಾರೆ. ರಂಗನ್ ಅವರು ಸ್ಥಾಪಿಸಿರುವ ಶೃತಿ ರಾಮ ಚಾರಿಟಬಲ್ ಟ್ರಸ್ಟ್ ಉಚಿತ ವೇದ ಪಾಠ. ಸಂಸ್ಕೃತ ತರಗತಿ ತೆಗೆದು ಕೊಳ್ಳುವ ಸಲುವಾಗಿ ಗಾಯತ್ರಿ ಜಿಯವರು ಬೇರೆ ಸ್ಥಳಕ್ಕೆ ಹೋಗಬೇಕಾಗಿ ಬಂತು. ಆದರೂ ಇಲ್ಲಿ ತರಗತಿ ನಿಲ್ಲಿಸಲು ಇಚ್ಛೆ ಪಡದ ಗಾಯತ್ರಿ ಜಿಯವರು ಅವರ ಶಿಷ್ಯರಾದ ಮಾಧವಿ ಅವರಿಗೆ ಇಲ್ಲಿನ ತರಗತಿಗಳನ್ನು ಮುಂದುವರಿಸಲು ಹೇಳಿದರು.
(ಮಕ್ಕಳಿಗೆ ರಾಮಾಯಣ ಮತ್ತು ಶ್ಲೋಕಗಳನ್ನುಹೇಳಿಕೊಡುತ್ತಿರುವ ಶ್ರೀಮತಿ ಮಾಧವಿ ಬಂತುಪಲಿ)
ಶ್ರೀಮತಿ ಮಾಧವಿ ಬಂತುಪಲಿ ಅವರು ಅದೇ ಉತ್ಸಾಹದಿಂದ ತರಗತಿಗಳನ್ನು ತೆಗೆದು ಕೊಳ್ಳುತ್ತಿದ್ದಾರೆ. ಅವರು ಕಳೆದ ಒಂದೂವರೆ ವರ್ಷದಿಂದ ಮಕ್ಕಳಿಗೆ ಹೇಳಿ ಕೊಡುತ್ತಿದ್ದಾರೆ. ಅವರು ಮಕ್ಕಳೊಂದಿಗೆ ಬೆರೆತು ಕಲಿಸುವ ರೀತಿ ಮನೋಜ್ಞ. ಗಾಯತ್ರಿ ಅವರು ಹಾಗೂ ಮಾಧವಿ ಅವರು ಈ ಮಹತ್ತರ ಕಾರ್ಯಕ್ಕೆ ಹಾಗೂ ಇದಕ್ಕೆ ಕಾರಣ ಕರ್ತರಾದ ರಂಗನ್ ಸ್ವಾಮೀಜಿ ಅವರಿಗೂ ಹೃದಯಪೂರ್ವಕ ಧನ್ಯವಾದವನ್ನು ಈ ಮುಖಾಂತರ ಸಲ್ಲಿಸುತ್ತೇನೆ.
ಡಾ. ರಂಗನ್ ಸ್ವಾಮೀಜಿ ಅವರ ಕಿರು ಪರಿಚಯ:
ಡಾ. ರಂಗನ್ ಅವರು ವಿಶಿಷ್ಟ ಜ್ಞಾನವುಳ್ಳ ಸರಳ ವ್ಯಕ್ತಿ. ಬೆಂಗಳೂರಿನ SVYASA ದಲ್ಲಿ ಯೋಗಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಜೊತೆಗೆ ನಿರ್ವಹಣಾ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿಯನ್ನು, ಪುಣೆಯ ಸಿಂಬುಲಿಸಿಸ್ ಇನ್ಸ್ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (SIMS) ನಲ್ಲಿ ಮಾಡಿದ್ದಾರೆ. ಇವರು ವೇದ, ವೈದಿಕ, ಸಂಸ್ಕೃತ, ಉಪನಿಷತ್ತು ಮತ್ತು ಮಹಾಕಾವ್ಯಗಳಲ್ಲಿ ನಿಪುಣರು. ಈ ಹಾದಿಗೆ ದೇವ ಶ್ರೀರಾಮನೇ ಸ್ಫೂರ್ತಿ ಎಂದು ಇವರು ಹೇಳುತ್ತಾರೆ ಹಾಗೂ ಶ್ರೀರಾಮನನ್ನು ತನ್ನ ಸ್ನೇಹಿತ, ತತ್ವಜ್ಞಾನಿ ಮತ್ತು ಅವರೆ ಮಾರ್ಗದರ್ಶಿ ಎಂದು ಹೇಳುತ್ತಾರೆ. ಇವರ ತಂದೆ ಶ್ರೀ ಶ್ರೀ ಕೃಷ್ಣ ಪ್ರೇಮಿ ಸ್ವಾಮಿಗಳು.
ಸ್ವಾಮಿಗಳಾದ ಶ್ರೀ ರಂಗನಾಥ ಅಯ್ಯರ್, ಶ್ರೀಶಂಕರ, ಶ್ರೀರಾಮಾನುಜ, ಶ್ರೀ ಮಾಧವ, ಶ್ರೀ ರಮಾನಂದ, ಶ್ರೀ ರಾಮಕೃಷ್ಣ, ಸ್ವಾಮಿ ವಿವೇಕಾನಂದ, ಶ್ರೀ ರಮಣ ಮಹರ್ಷಿ, ಶ್ರೀ ಅರಬಿಂದೋ, ಡಾ.H.R ನಾಗೇಂದ್ರ, ಶ್ರೀ ಸತ್ಯನಾರಾಯಣ ಶಾಸ್ತ್ರಿ ಮತ್ತು ಶ್ರೀ ಸಮರ್ಥ ರಾಮದಾಸ್ ಇವರ ಗ್ರಂಥಗಳನ್ನು ತೀವ್ರವಾಗಿ ಅಭ್ಯಾಸ ಮಾಡಿದ್ದಾರೆ. ಇವರ ಮಾರ್ಗದರ್ಶನವನ್ನು ಎಡೆ-ಬಿಡದೆ ಹಿಂಬಾಲಿಸಿದ್ದಾರೆ. ಹಾಗೂ ಅದ್ವೈತ ವೇದಾಂತವನ್ನು ಸಾಂಪ್ರದಾಯಿಕವಾಗಿ ಶ್ರೀರಾಮಕೃಷ್ಣ ಶಾಸ್ತ್ರಿಯವರಿಂದ ಕಲಿತಿದ್ದಾರೆ. ನಂತರ ವಿಶಿಷ್ಟಾದ್ವೈತ ಮತ್ತು ದ್ವೈತವನ್ನು ಅವರು ಆಸಕ್ತಿಯಿಂದ ಪುಸ್ತಕ-ಪಠ್ಯಗಳ ಅಭ್ಯಾಸದಿಂದ ಕಲಿತಿದ್ದಾರೆ. ವ್ಯಾಕರಣ ಮತ್ತು ಸಾಹಿತ್ಯವನ್ನು ಶ್ರೀ ತಿರುಮಲಾಚಾರ್ ಶ್ರೀರಂಗಂ ಅವರಿಂದ ಕಲಿತಿದ್ದಾರೆ. ಭಕ್ತಿ ಶಾಸ್ತ್ರ ಅಂದರೆ ಭಾಗವತವನ್ನು ಶ್ರೀ ಶ್ರೀ ಕೃಷ್ಣ ಪ್ರೇಮಿ ಸ್ವಾಮಿಗಳು, ಶ್ರೀ ಬಾಲಕೃಷ್ಣ ಶಾಸ್ತ್ರಿ ಮತ್ತು ಶ್ರೀಹರಿ ಜಿ, ಶ್ರೀರಂಗಂ ಅವರಿಂದ ಕಲಿತಿದ್ದಾರೆ.
ರಂಗನ್ ಜಿ ಅವರು ಅದ್ಭುತ ಕವಿಯೂ ಹೌದು. ಅವರು ಹದಿಮೂರನೇ ವರ್ಷದಲ್ಲಿ ಏಳು ಸಾವಿರ ಕವಿತೆಗಳನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ. ತಮಿಳು ಮತ್ತು ಇಂಗ್ಲಿಷ್ ಪದ್ಯಗಳಿಗೆ ಸಂಯೋಜನೆಯನ್ನು ಮಾಡಿದ್ದಾರೆ. ವೇದ ಗ್ರಂಥಗಳನ್ನು ರಚಿಸಿದ್ದಾರೆ. ಶಂಕರ ಬ್ರಹ್ಮಸೂತ್ರ ಭಾಷ್ಯವನ್ನು ತಮಿಳಿಗೆ ತಮ್ಮ ಹದಿನೆಂಟನೇ ವಯಸ್ಸಿನಲ್ಲಿಯೇ ಅನುವಾದಿಸಿದ್ದಾರೆ. ಇದರ ವೈಶಿಷ್ಟ್ಯವೆಂದರೆ ಇದರ ‘ವ್ಯಾಖ್ಯಾನ ಮತ್ತು ಸಂಶ್ಲೇಷಣೆ ಋಗ್ವೇದ ಮತ್ತು ರಾಮಾಯಣ’ದ ಆಧಾರವಾಗಿದೆ. ಇದರ ಬೇರೆ ಅನುವಾದಕರು ವ್ಯಾಖ್ಯಾನಗಳನ್ನು ಉಪನಿಷತ್ತಿನ ಆಧಾರವಾಗಿ ಮಂಡಿಸಿದ್ದಾರೆ. ಇವರು ಸಾವಿರಾರು ಸಂಶೋಧನಾ ಲೇಖನಗಳನ್ನು ರಾಮಾಯಣ ಹಾಗು ಮಹಾಭಾರತ, ವೇದ, ವೇದಾಂತ ಮತ್ತು ಯೋಗ ಇವುಗಳ ಬಗ್ಗೆ ತಮ್ಮ 27ನೇ ವಯಸ್ಸಿನ ಮುಂಚೆಯೇ ಬರೆದಿದ್ದಾರೆ. ಜೊತೆಗೆ ಸಾಂಪ್ರದಾಯಿಕ ವೈದಿಕ ಶಿಕ್ಷಣವನ್ನು ಅಂತಾರಾಷ್ಟ್ರೀಯ ಯೋಗ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಹಾಗೂ ಇವರ ಲೇಖನಗಳು ಕೆಲವು ಧಾರ್ಮಿಕ ಮತ್ತು ಸಾಂಪ್ರದಾಯಿಕ ನಿಯತ ಕಲಿಕೆಯಲ್ಲಿ ಪ್ರಕಟವಾಗಿವೆ. (ಯೋಗ ಸುದಾ, ಭಾಗವತ-ಧರ್ಮ, ತತ್ವ ಲೋಕ, ಸ್ವದೇಶಿ ಮತ್ತು ಕೆಲವು )
ಇವರು ರಾಮಾಯಣವನ್ನು ಎಲ್ಲರಿಗೂ ಕಲಿಸುವ ಸಲುವಾಗಿ ‘ರಾಮ ಕುಟುಂಬಂ’ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ. ಅವರಿಗೆ ಎಂತಹ ನೆನಪಿನ ಶಕ್ತಿ ಎಂದರೆ ಅವರ ಹದಿನಾರನೇ ವಯಸ್ಸಿನಲ್ಲಿ ಎಂಟು ಪ್ರಮುಖ ಉಪನಿಷತ್ತು ಮತ್ತು ರಾಮಾಯಣದ ಶ್ಲೋಕಗಳನ್ನು ಸ್ಮರಿಸುತ್ತಿದ್ದರು. ಅವರು ರಾಮಾಯಣವನ್ನು ನಿರೂಪಿಸುವ ಶೈಲಿಗೆ ಸಾವಿರಾರು ಜನ ಮನಸೂರೆಗೊಂಡಿದ್ದಾರೆ. ಹಾಗಾಗಿ ತಿರುವಳ್ಳೂರ್ ಜಿಆರ್ ಸ್ವಾಮಿಗಳವರು ‘ರಾಮ ಕಥಾಮೃತ ವರ್ಷಿ’ ಎಂಬ ಬಿರುದನ್ನು ಇವರಿಗೆ ನೀಡಿದ್ದಾರೆ. ಹಾಗಾಗಿ ಡಾ.ರಂಗನ್ ಅವರವರ ಅಭಿಮಾನಿಗಳಲ್ಲಿ ವಿಜ್ಞಾನಿಗಳು, ಸಮಾಜಶಾಸ್ತ್ರಜ್ಞರು, ಮನೋವಿಜ್ಞಾನಿಗಳು, ಆಧ್ಯಾತ್ಮಿಕ ಲೋಕೋಪಕಾರಿಗಳು ಇದ್ದಾರೆ.
SVYASA ಅನುಸಂಧಾನದ ಸಂಸ್ಥಾನ ‘ಶ್ರುತಿ ರಾಮ ಚಾರಿಟಬಲ್ ಮತ್ತು ಎಜುಕೇಷನಲ್ ಟ್ರಸ್ಟ್’ ಹೊಸೂರು, ಬ್ರಹ್ಮಸಂದ್ರ. ಚೆನ್ನೈ ಮತ್ತು ಅಖಿಲ ಭಾರತ ಸಾಧು ಸಮಾಜ ನವದೆಹಲಿಯಲ್ಲಿ ಸಲಹೆಗಾರರೂ ಹೌದು.
ಜೊತೆಗೆ ಇವರು ಸ್ಥಾಪಿಸಿರುವ webolim (web of life makers) ಸಂಸ್ಥೆ, ಇಲ್ಲಿ ವೇದ ಮತ್ತು ದಿನ ನಿತ್ಯದಲ್ಲಿ ವೇದದ ಪ್ರಾಮುಖ್ಯತೆಯನ್ನು ಎಲ್ಲೆಡೆ ಸಾರುವುದು ಇಲ್ಲಿಯ ಮುಖ್ಯ ಉದ್ದೇಶ.
ಇವರು ವೈದಿಕ ಕಾರ್ಯಾಗಾರಗಳನ್ನು ಭಾರತದ ಬೇರೆ ಬೇರೆ ಸ್ಥಳಗಳಲ್ಲಿ ಮತ್ತು ವಿದೇಶದಲ್ಲಿ ನಡೆಸಿರುತ್ತಾರೆ. ಡಾ ರಂಗನ್ ಸ್ವಾಮೀಜಿ ಯವರು ವೇದಗಳ ಬಗ್ಗೆ ಉಪನ್ಯಾಸ, ವೇದಾಂತ ಮತ್ತು ಮಹಾಕಾವ್ಯಗಳ ಬಗೆಗಿನ ಸಮ್ಮೇಳನದಲ್ಲಿ ದೇಶ -ವಿದೇಶಗಳಲ್ಲೂ ಭಾಗವಹಿಸಿರುತ್ತಾರೆ. ಹಾಗೂ ರಂಗನ್ ಸ್ವಾಮೀಜಿ ಶಿಷ್ಯ ವೃಂದವು ಗುರುಗಳ ಮಾರ್ಗದರ್ಶನದಲ್ಲಿ ನೂರಾರು ರಾಮಾಯಣ ಕಾರ್ಯಾಗಾರಗಳನ್ನು ಭಾರತ ಮತ್ತು ವಿದೇಶದಲ್ಲಿ ತೆಗೆದುಕೊಂಡು ನಮ್ಮ ಸಂಸ್ಕೃತಿಗೆ ಕೊನೆ ಇಲ್ಲವೆಂದು ತೋರಿಸಿದ್ದಾರೆ. ಇಂದಿಗೂ ಅನೇಕ ಕಾರ್ಯಾಗಾರಗಳನ್ನು ದೇಶ ವಿದೇಶಗಳಲ್ಲಿ ನಡೆಸುತ್ತಿದ್ದಾರೆ.
ಇವರು ಸ್ಥಾಪಿಸಿರುವ ಶ್ರುತಿ ರಾಮ ಚಾರಿಟಬಲ್ ಟ್ರಸ್ಟ್ ಉಚಿತವಾಗಿ ಗಂಡು ಮಕ್ಕಳಿಗೆ ಶ್ರುತಿ ರಾಮ ಗುರುಕುಲ ವಸತಿ ಶಾಲೆ(residential) ಹಾಗೂ ಹೆಣ್ಣುಮಕ್ಕಳಿಗೆ ಸೀತಾಲಕ್ಷ್ಮಿ ಗುರುಕುಲ ಅಲ್ಲದ ವಸತಿ ಶಾಲೆ(non residential) ಇದ್ದು. ಇದರ ಪ್ರಮುಖ ಉದ್ದೇಶ ಮಕ್ಕಳಲ್ಲಿ ಭಾಗವತ, ಉಪನಿಷತ್ತು,ವೇದಾಂತ, ರಾಮಾಯಣ, ಭಗವದ್ಗೀತೆ ಅಧ್ಯಯನದ ಜತೆಗೆ ದೂರಶಿಕ್ಷಣದ (distance education) ಮುಖಾಂತರ ಶಾಲೆಗೆ ಹೋಗುವ ಮಕ್ಕಳ ಹಾಗೆ ಇತರ ವಿದ್ಯಾಭ್ಯಾಸ ವನ್ನು ಯಾವುದೇ ಒತ್ತಡವಿಲ್ಲದೆ ನಡೆಸುವುದು. (ಇದಕ್ಕೆಲ್ಲ ನುರಿತ ಶಿಕ್ಷಕ ವೃಂದವೂ ಕೂಡ ಇದೇ) ಇದರ ಜೊತೆಗೆ ಮಕ್ಕಳು ಶಾಸ್ತ್ರೀಯ ನೃತ್ಯ, ಸಂಗೀತ, ಯೋಗ, ತಬಲಾ, ವಯಲಿನ್, ಹಾರ್ಮೋನಿಯಂ, ಪಿಯಾನೊ ಹಾಗೂ ಆಟವೂ ಕೂಡ ಇರುತ್ತದೆ. ಹೆಣ್ಣುಮಕ್ಕಳಿಗೆ ಇದರ ಜೊತೆಗೆ ಅಡುಗೆ ಕಲಿಕೆ, ಬಟ್ಟೆ ಹೊಲಿಕೆ ಮುಂತಾದ ಅಭ್ಯಾಸಗಳು ಕೂಡ ಇದೆ. ಇಷ್ಟು ಅಭ್ಯಾಸ ಗಳಿದ್ದರು. ಮಕ್ಕಳಿಗೆ ಯಾವುದೇ ರೀತಿಯ ಕುಂಚ ಒತ್ತಡವೂ ಕೂಡ ಇಲ್ಲ! ಮಕ್ಕಳು ಇವನ್ನೆಲ್ಲಾ ಸರಾಗವಾಗಿ ಕಲಿಯುತ್ತಿದ್ದಾರೆ. ಉತ್ತರಪ್ರದೇಶದಲ್ಲಿರುವ ಫೈಜಾಬಾದ್ ನಲ್ಲಿ ಕೂಡ ಇವರ ಆಶ್ರಮವಿದ್ದು, ಅಲ್ಲಿಯೂ ಮಕ್ಕಳು ವೈದಿಕ ಮತ್ತು ರಾಮಯಣ ಶಿಕ್ಷಣವನ್ನು ಉಚಿತ ಊಟ ವಸತಿಯೊಂದಿಗೆ ಪಡೆಯುತ್ತಿದ್ದಾರೆ. ಇದನ್ನು ನಾವು ಒಂದೇ ಮಾತಿನಲ್ಲಿ ಆಧುನಿಕ ಪ್ರಪಂಚ ದಲ್ಲಿನ ಹಿಂದಿನ ಕಾಲದ ಇಂದಿನ ಗುರುಕುಲ ಎನ್ನಬಹುದು.
ಈ ಪಾಠಶಾಲೆಯ ಮುಖ್ಯ ಉದ್ದೇಶ ನಮ್ಮನ್ನು ಬಿಟ್ಟು ಹೋಗಿರುವ ನಮ್ಮ ಪುರಾತನ ಸಂಸ್ಕಾರಕ್ಕೆ ನಮ್ಮ ಮಕ್ಕಳಲ್ಲಿ ಜೀವ ತುಂಬಿಸಿ ನಮ್ಮ ಮಕ್ಕಳೆಂಬ ಸಸಿಯು ದೊಡ್ಡ ಆಲದ ಮರವಾಗಿ ಬೆಳೆಯುತ್ತಾ ಹೋದಂತೆ ಎಲ್ಲ ಕಡೆ ನಮ್ಮ ಮಕ್ಕಳ ಮುಖಾಂತರ ಸಂಸ್ಕಾರವನ್ನು ಬೆಳೆಸುವ ಉದ್ದೇಶವೂ ಆಗಿದೆ.
ಪ್ರೀತಿಯ ಓದುಗರೇ ಇಲ್ಲಿ ನನ್ನ ಸ್ವಂತ ಅನುಭವವನ್ನು ನಿಮ್ಮ ಬಳಿ ಹಂಚಿಕೊಳ್ಳುತ್ತಿದ್ದೇನೆ. ನನ್ನ ಮಕ್ಕಳು ಮತ್ತು ರಾಮಾಯಣ ತರಗತಿಗೆ ಹೋಗುತ್ತಿರುವ ಇತರ ಮಕ್ಕಳ ನಡವಳಿಕೆಯಲ್ಲಿ ರಾಮ-ಲಕ್ಷ್ಮಣರ ಪ್ರಭಾವ ಎಷ್ಟಿದೆ ಎಂದರೆ ಯಾರಾದರೂ ಸಹೋದರರು ಅಥವಾ ಸಹೋದರಿಯರು ಜಗಳವಾಡುತ್ತಿದ್ದರೆ. ಈ ಮಕ್ಕಳು ಆ ಮಕ್ಕಳಿಗೆ ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಈ ನಾಲ್ವ ಸಹೋದರರು ಹೇಗೆ ಜೊತೆಯಲ್ಲಿರುತ್ತಿದರು ಎಂದು ಹೇಳುತ್ತಾರೆ.ನಿಮಗೆ ತಮಾಷೆ ಎನಿಸಬಹುದು. ನಾವು ಟೀವಿ ನೋಡುವಾಗ ಯಾವುದೋ ಗಂಡ- ಹೆಂಡತಿ ಜಗಳವನ್ನು ನೋಡಿ ಏಳು ವರ್ಷದ ಹುಡುಗ ಹೇಳಿದ್ದು ತನ್ನ ಸಹೋದರಿಯೊಂದಿಗೆ ‘ರಾಮ ಅವನ ಹೆಂಡತಿ ಸೀತೆಯನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಾನೆ ಮತ್ತು ಸೀತೆ- ರಾಮ ಎಲ್ಲಿ ಹೋಗುತ್ತಾನೋ ಅಲ್ಲಿಗೆ ಅವನ ಜೊತೆಯೇ ಇದ್ದು, ಅವನ ಕಾಳಜಿ ವಹಿಸುತ್ತಾಳೆ. ಆದರೆ ಈ ಗಂಡ-ಹೆಂಡತಿ ಏಕೆ ಹೀಗೆ ಜಗಳ ಆಡುತ್ತಿದ್ದಾರೆ ಎಂದು ಏಳು ವರ್ಷದ ತನ್ನ ತಂಗಿಯೊಂದಿಗೆ ತನ್ನ ಅಭಿಪ್ರಾಯವನ್ನು ಹೇಳಿಕೊಳ್ಳುತ್ತಿದ್ದ. ಈ ಪುಟ್ಟ ಮಕ್ಕಳ ಸಂಭಾಷಣೆ ನನ್ನನ್ನು ದಂಗು ಬಡಿಸಿತು. ಇಲ್ಲಿ ಕಲಿಯುತ್ತಿರುವ ಮಕ್ಕಳು, ನಾವು ಮತ್ತು ನಮ್ಮ ಒಡಹುಟ್ಟಿದವರು ರಾಮ-ಲಕ್ಷ್ಮಣರಂತೆ. ಗಂಡ ಹೆಂಡತಿ ರಾಮ ಸೀತೆಯಂತೆ, ಕಷ್ಟದಲ್ಲಿದ್ದಾಗ ನಾವು ಸುಗ್ರೀವ ನಂತೆ, ಹನುಮನಂತೆ ಸಹಾಯ ಹಸ್ತ ಚಾಚಬೇಕು ಎಂದರು. ತಂದೆ ತಾಯಿ ಮತ್ತು ಹಿರಿಯರಿಗೆ ಗೌರವ ಕೊಡಬೇಕು. ನಮಗಿನ್ನ ಚಿಕ್ಕವರನ್ನು ಕಾಳಜಿಯಿಂದ ನೋಡಿಕೊಳ್ಳಬೇಕು. ಬೇರೆಯವರಿಗೆ ಕೆಟ್ಟದ್ದನ್ನು ಮಾಡಬಾರದು. ಕೆಟ್ಟದನ್ನು ಬಯಸುವುದು ರಾಕ್ಷಸ ಗುಣವೆಂದು ಆಗ ದೇವರು ಬಂದು ಅಂತಹವರನ್ನು ಶಿಕ್ಷಿಸುತ್ತಾರೆ. ನಾವು ಒಳ್ಳೆ ಮಾರ್ಗದಲ್ಲಿದ್ದಾಗ ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ದೇವರು ಶ್ರೀರಕ್ಷೆಯಾಗಿ ನಮ್ಮ ಜೊತೆ ಇರುತ್ತಾನೆ ಎಂಬ ನಂಬಿಕೆ ಇರಬೇಕು. ಸ್ನೇಹಿತರೇ ಇದಲ್ಲವೇ ಸಂಸ್ಕಾರ… ಇದಲ್ಲವೇ ನಮ್ಮತನ… ಇಂತಹ ಪುಣ್ಯ ನಾಡಿನಲ್ಲಿ ಹುಟ್ಟಿ ನಾವೇಕೆ ಪಾಶ್ಚಾತ್ಯದ ಮೋಹಕ್ಕೆ ಸಿಲುಕಿ ನಮ್ಮ ಸಂಸ್ಕಾರದಿಂದ ದೂರವಾಗಬೇಕು? ಸ್ನೇಹಿತರೇ ಮಕ್ಕಳಿಗೆ ಪಾಶ್ಚಾತ್ಯ ವಿದ್ಯೆಗಳನ್ನು ಕಲಿಸಿ. ಆದರೆ ನಮ್ಮ ಸಂಸ್ಕೃತಿಯಿಂದ ದೂರ ಮಾಡಬೇಡಿ. ನಾಳೆ ನಾವು ನೀವು ವಯಸ್ಸಾದ ಮೇಲೆ ನಮ್ಮ ಮಕ್ಕಳು ಅರಳಿ ಮರದಂತೆ ನಮಗೆ ಆಸರೆಯಾಗಬೇಕು ಹೊರತಾಗಿ ನಮ್ಮನ್ನು ವೃದ್ಧಾಶ್ರಮದ ಪಾಲು ಮಾಡಬಾರದಲ್ಲವೇ?..
ಡಾ.ರಂಗನ್ ಸ್ವಾಮೀಜಿಯವರ ಈ ಮಹತ್ತರ ಕಾರ್ಯಗಳು ಹೀಗೆ ಮುಂದುವರಿಯುತ್ತಿರಲಿ. ಶ್ರೀರಾಮನು ಇನ್ನು ಹೆಚ್ಚಿನ ಶಕ್ತಿಯನ್ನು ಅವರಿಗೆ ಕೊಡಲಿ ಎಂದು ದೇವ ಶ್ರೀರಾಮನನ್ನು ಕೇಳಿಕೊಳ್ಳುತ್ತೇನೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
http://ranganramakrishnan.blogspot.com
ಲೇಖನ : ಕಾವ್ಯ ದೇವರಾಜ್