ಮನುಷ್ಯನಲ್ಲಿ ನೂರಾರು ಆಸೆಗಳು, ನೂರಾರು ಕನಸುಗಳು ಬದುಕಿಗೆ ಹೊಸ ಹುರುಪುನ್ನು ತುಂಬುತ್ತದೆ. ಆಸೆಯ ಕುರಿತು ಮಂಜು ಹೆಗಡೆ ಅವರು ಬರೆದ ಸುಂದರ ಕವನವನೊಮ್ಮೆ ಓದಿ…
ಎಷ್ಟೋ ದಿನಗಳಿಂದ
ಕಾಡುವ ಮುಂಗುರುಳುಗಳನೆಲ್ಲ
ಬಾಚಿ ಜಡೆಯಲೇ ಬಂಧಿಸಿ
ಮಲ್ಲಿಗೆಯ ಮುಡಿಸುವಾಸೆ
ಬೆಸೆಯುವ ತೋರು ಬೆರಳ
ಹಿಡಿದು, ಅಂಗೈ ತುಂಬಾ
ಮೆಹಂದಿಯ ಚಿತ್ತಾರ ಬರೆದು
ಕೆಂಪಾದ ಕೈ ಕಂಡಾಗ
ಕೆನ್ನೆಯೂ ಕೆಂಪಾಗುವುದ
ನೋಡುವಾಸೆ
ಸೀರೆಯ ಸೆರಗು ಸೋಕಿದಾಗ
ಪಟ್ಟಗೆ ಸೆರಗು ಮಾಡಿ,
ನೆರಿಗೆಗಳ ಪಟ್ಟಿ ಸಿಕ್ಕಿಸಿ
ಮುದ್ದಾಗಿ ಕಾಣುವ ಸೊಬಗ
ಕಣ್ತುಂಬಿ ಕೊಳ್ಳುವಾಸೆ
ಕಾಲ್ಗೆಜ್ಜೆಯ ಗೆಜ್ಜೆ ಕಳೆದಂತೆ
ಹೊಸದೊಂದು ಗೆಜ್ಜೆ ಹಾಕಿ
ಹಲ್ಲಿನಲಿ ಕಚ್ಚಿ ಕಾಲಿಗೆ ಬಂಧಿಸಿ
ಹೆಜ್ಜೆ ಹೆಜ್ಜೆಗಿನ ಸದ್ದಿನಲಿ
ಮೌನವಾಗಿ ಕಳೆವಾಸೆ
ಬಿಸಿಯುಸಿರು ಸೋಕುವಾಗೆಲ್ಲ
ಉಸಿರನೇ ಸೇವಿಸಿ
ಎದೆಯ ಗೂಡಲಿ ಶೇಖರಿಸಿ
ಲಯ ತಪ್ಪಿದ ಎದೆ ಬಡಿತದಲೂ
ನಿನ್ನಲ್ಲಿಯೇ ಬೆರೆವಾಸೆ
- ಮಂಜು ಹೆಗಡೆ