ಎಷ್ಟೇ ಹಣವಿರಲಿ ಆಸ್ತಿಯಿರಲಿ, ಹೋದ ಸಮಯ ಕಳೆದು ಪ್ರೀತಿ ಮತ್ತೆ ಸಿಗುವುದಿಲ್ಲ.. ಸಮಯಕ್ಕೆ ಸರಿಯಾಗಿ ನಿರ್ಧಾರಗಳು ಮುಖ್ಯ. ಗುರುಮೂರ್ತಿ ಅವರ ‘ವಿದೇಶ ಪಯಾಣ’ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಅದು ಸುಧಾಳ ಐವತ್ತನೇಯ ಹುಟ್ಟಿದ ಹಬ್ಬ. ಇಪ್ಪತ್ತಾರು ವರ್ಷಗಳ ನಂತರ ಗಂಡನ ಪಕ್ಕ ನಿಂತು ತನ್ನ ಹುಟ್ಟಿದ ಹಬ್ಬದ ಮೇಣದ ಬತ್ತಿಯನ್ನು ಹಚ್ಚುತ್ತಿದ್ದಾಳೆ. ದುಂಡಾದ ಕೇಕ್ ನ್ನು ಕೈಯಲ್ಲಿದ್ದ ಚಾಕುವಿನಿಂದ ತುಂಡು ಮಾಡಿ, ಆ ತುಂಡನ್ನು ಗಂಡನ ಬಾಯಲ್ಲಿರಿಸುತ್ತಿದ್ದಾಳೆ. ಸಂಭ್ರಮ ಸಡಗರ ಏನೊ ತೃಪ್ತಿ ಮನದಲ್ಲಿ.
ಆಗಿನ್ನು ಸುಧಾಳಿಗೆ ಇಪ್ಪತ್ನಾಲ್ಕು ವಸಂತಗಳು. ಮೊದಲ ನೋಟದಲ್ಲಿ ಸುಧಾಳನ್ನು ಮನಸಾರೆ ಮೆಚ್ಚಿದ ಸುರೇಶ್. ಅವನೊಡನೆ ಅಮೆರಿಕಾಗೆ ಹಾರಿ ಹೊಸ ಬದುಕಿನ ಕನಸು ಕಂಡಳು ಸುಧಾ. ವಿದೇಶಿ ಪ್ರಯಾಣದ ಬಗ್ಗೆ ತನ್ನ ಸ್ನೇಹಿತೆರೆಲ್ಲರಲ್ಲಿ ಖುಷಿಯಿಂದ ಹಂಚಿಕೊಂಡಳು.
ಮೆಚ್ಚಿದ ಮೂರೇ ದಿನಕ್ಕೆ ಮದುವೆ ನಡೆದು ಹೋಯಿತು. ಮದುವೆಯಾದ ಏಳೇ ದಿನಕ್ಕೆ ಅಮೆರಿಕಾಗೆ ಹಾರಿ ಹೋದ ಸುರೇಶ್. ವಿಂಡ್ಸರ್ ಮ್ಯಾನರ್ ನಲ್ಲಿ ಪ್ರಥಮ ರಾತ್ರಿ ಊಹಿಸದ ರೀತಿಯಲ್ಲಿ ಜರುಗಿತು. ಆ ಒಂದು ವಾರದಲ್ಲಿ ಗಂಡನ ಕೈಹಿಡಿದು ಬೆಂಗಳೂರು ಎಂಬ ಮಹಾನಗರಿಯಲ್ಲಿ ಓಡಾಟ. ಸೆಲ್ಫಿಗಳ ಸುರಿಮಳೆ. ವಾರದ ನಂತರ ಗಂಡ ಅಮೆರಿಕಾಗೆ ಹೊರಟು ನಿಂತ.
ಬೇಡವೆಂದರೂ ಕಣ್ಣಂಚಲಿ ಕಣ್ಣೀರು. ವಿಮಾನ ನಿಲ್ದಾಣದಲ್ಲಿ ಎಲ್ಲರೆದರು ಗಂಡ ಬಿಟ್ಟು ಹೋದ ಸಿಹಿ ಮುತ್ತುಗಳು. ಆ ಸಿಹಿ ಮುತ್ತಗಳ ಹೊತ್ತು ಮನೆ ಸೇರಿದ ಸುಧಾಳಿಗೆ, ಗಂಡ ಮಾಡುತ್ತಿದ್ದ ವಿಡಿಯೋ ಕಾಲ್ ಗಳಿಂದ,ಗಂಡನ ನೋಡಿದಾಗ ಪುಳುಕಿತಳಾಗುತ್ತಿದ್ದಳು. ಅತ್ತೆ ಮಾವರ ಒತ್ತಾಯಕ್ಕೆ ಮಣಿದು ವಿಸಾಕ್ಕೆ ಪ್ರಯತ್ನ ಮಾಡಲಿಲ್ಲ ಸುಧಾ. ತನ್ನ ವಿದೇಶಿ ಪಯಾಣದ ಕನಸನ್ನು ತನ್ನಲ್ಲಿಯೇ ಬಚ್ಚಿಟ್ಟು ಕೊಂಡಳು.
ಅತ್ತೆ ಮಾವರನ್ನು ನೋಡಿಕೊಂಡು ಸಂಸಾರವನ್ನು ನಡಿಸು ನಾನು ಆದಷ್ಟು ಬೇಗ ಹಿಂತಿರುಗುವೆ ಎಂಬ ಗಂಡನ ಭರವಸೆಯಲ್ಲಿ ನಂಬಿಕೆಯಿಟ್ಟು ಗಂಡನ ಎದಿರು ನೋಡಿದಳು ಸುಧಾ.
ಇಬ್ಬರ ಒಡನಾಟದ ಫಲವಾಗಿ ಮದುವೆಯಾದ ಒಂದು ತಿಂಗಳಿಗೆ ಗರ್ಭಿಣಿಯಾದಳು ಸುಧಾ. ಹೆಂಡತಿ ಗರ್ಭಿಣಿಯಾದ ಸುದ್ದಿ ಕೇಳಿದಾಗಹಿರಿಹಿರಿ ಹಿಗ್ಗಿದ ಸುರೇಶ್. ಗರ್ಭಿಣಿ ಹೆಂಡತಿಗೆ ಚಿನ್ನದ ನೆಕ್ಲಸ್ ನ್ನುಉಡುಗೊರೆಯಾಗಿ ಕಳಿಹಿಸಿಕೊಟ್ಟ.
ಗಂಡ ಕಳುಹಿಸಿಕೊಟ್ಟ ಉಡುಗೊರೆಯನ್ನು ತನ್ನ ಸೀಮಂತ ಕಾರ್ಯದಲ್ಲಿ ತೊಟ್ಟು ಸಂಭ್ರಮಿಸಿದಳು ಸುಧಾ. ಅತ್ತೆ ಮಾವರ ಬಯಕೆಯಂತೆ ಹೆಣ್ಣು ಮಗುವನ್ನು ಹೆತ್ತು ಅವರ ಕೈಗೆ ಕೊಟ್ಟಳು ಸುಧಾ. ಮಗಳ ನಾಮಕರಣಕ್ಕೆ ಬಂದ ಸುರೇಶ್. ಹೆಂಡತಿ ಮಗುವಿನ ಜೊತೆ ಶೃಂಗೇರಿಗೆ ಹೋಗಿ ತಾಯಿ ಶಾರದೆಯ ದರ್ಶನ ಪಡೆದು, ಬರುವಾಗ ಹೊರನಾಡಿನ ತಾಯಿ ಅನ್ನಪೂರ್ಣೆಶ್ವರಿಯ ದರ್ಶನ ಪಡೆದು ಬಂದರು.
ಹದಿನೈದು ದಿನಗಳು ಕಳೆದು ಹೋಗಿದ್ದೆ ತಿಳಿಯಲಿಲ್ಲ. ಅಮೆರಿಕಾಗೆ ಹೊರಟು ನಿಂತ ಸುರೇಶ್. ಈ ಬಾರಿ ಸುರೇಶನ ಅಮೆರಿಕಾಕ್ಕೆ ಕಳುಹಿಸಿ ಕೊಡಲು ಒಪ್ಪಲಿಲ್ಲ ಸುಧಾ. ಅಪ್ಪ ಅಮ್ಮರನ್ನು ಚೆನ್ನಾಗಿ ನೋಡಿಕೊ ಎಂದು ಅವಳ ತಲೆಯನ್ನು ಸವರಿ ಹಾರಿಹೋದ ಸುರೇಶ್.
ಗಂಡನ ನೆನಪುಗಳನ್ನು ಮಗಳನ್ನು ನೋಡಿ ಮರೆತಳು ಸುಧಾ.ಅತ್ತ ಮಾವ ಮಗಳು ಮೂವರಲ್ಲಿ ತನ್ನ ಬದಕನ್ನಿಟ್ಟು ಬದುಕಿದಳು ಸುಧಾ. ಅದು ಒಂದಲ್ಲ ಎರಡಲ್ಲ ಬರೊ ಬರಿ ಇಪ್ಪತ್ತಾರು ವರ್ಷಗಳು.
ಮಗಳು ಇಪ್ಪತೈದು ವಸಂತಗಳನ್ನು ಮುಗಿಸಿ ಇಪ್ಪತ್ತಾರಕ್ಕೆ ಕಾಲಿಡುವ ಮುನ್ನವೆ.ಅತ್ತೆ ಮಾವ ಇಬ್ಬರು ಇಹಲೋಕ ತ್ಯಜಿಸಿ,ಸುಧಾಳನ್ನು ಒಂಟಿಯಾಗಿ ಮಾಡಿ ಹೊರಟರು.
ಅವಳ ಐವತ್ತನೇಯ ವಯಸ್ಸಿಗೆ ಭಾರತಕ್ಕೆ ಕಾಲಿಟ್ಟ ಸುರೇಶ್. ಹೆಂಡತಿಯ ಐವತ್ತನೇಯ ಹುಟ್ಟಿದ ಹಬ್ಬವನ್ನು ಅದ್ದೂರಿಯಾಗಿ ಮಾಡಿ, ಹೆಂಡತಿ ಮಗಳೊಡನೆ ಅಮೆರಿಕಾಗೆ ಹೋಗಲು ಸಿದ್ದನಾದ ಸುರೇಶ್.
ನಾನು ಅಮೆರಿಕಾಗೆ ಬರುವುದಿಲ್ಲ. ನಾನಿಲ್ಲೆ ಮಗಳ ಜೊತೆ ಇಲ್ಲಿರುವೆ ಎಂದಳು ಸುಧಾ. ಇಲ್ಲ, ನೀನು ಬರಲೇ ಬೇಕು ನನ್ನ ಜೊತೆ ಅಲ್ಲಿ, ನೀ ಇರಲೇ ಬೇಕು ಎಂದ ಸುರೇಶ್. ಗಂಡನ ಜೊತೆ ಅಮೆರಿಕಾಗೆ ಹೋಗುವ ಆಸೆ ಹೊತ್ತು ಸುರೇಶ್ ನ ಕೈಹಿಡಿದ ಸುಧಾ, ಗಂಡನ ಅಣತಿಯಂತೆ ಅತ್ತೆ ಮಾವರನ್ನು ನೋಡಿಕೊಳ್ಳುವ ಹೊಣೆ ಹೊತ್ತು ಉಳಿದು ಬಿಟ್ಟಳು.
ಅತ್ತೆ ಮಾವರ ಮರಣದ ನಂತರ ಗಂಡನೀಗ ತನ್ನೊಡನೆ ಅಮೆರಿಕಾಗೆ ಕರೆದ್ಯೊಯಲು ಮುಂದಾಗಿದ್ದಾನೆ.
ಯೌವನವೆಲ್ಲವೂ ಕಳೆದು ಇಳಿ ವಯಸ್ಸಿಗೆ ಕಾಲಿಡುವ ಕಾಲದಲ್ಲಿ ಅಮೆರಿಕಾದ ವ್ಯಾಮೋಹತನಗೇಕೆ ಎಂದು ಹೋಗಲು ಮನಸ್ಸು ಮಾಡಲಿಲ್ಲ ಸುಧಾ. ತಾನು ತಪ್ಪು ಮಾಡಿರುವೆ, ತಾನೊಬ್ಬ ಸ್ವಾರ್ಥಿ ಎನಿಸಿತು ಸುರೇಶ್ ಗೆ. ತನ್ನ ಅಪ್ಪ ಅಮ್ಮರ ಆರೈಕೆಗಾಗಿ ಹೆಂಡತಿಯನ್ನು ಬಿಟ್ಟು ಇಪ್ಪತ್ತಾರು ವರ್ಷಗಳ ಕಾಲ ಅವಳನ್ನು ಒಂಟಿಯಾಗಿ ಮಾಡಿಬಿಟ್ಟೆ. ಹೆಂಡತಿಯ ಪ್ರೀತಿಯಿಂದ ಮಗಳ ಮಮಕಾರದಿಂದ ದೂರ ಉಳಿದು ಬಿಟ್ಟೆ. ಈ ಇಪ್ಪತ್ತಾರು ವರ್ಷಗಳಲ್ಲಿ ನಾನು ಎಷ್ಟು ಸಂಪಾದಿಸಿದರೇನು ಪ್ರಯೋಜನ.ನಾನೊಬ್ಬ ಹೆಂಡತಿಗೆ ಮಗಳಿಗೆ ನ್ಯಾಯ ಕೊಡದವನಾದೆ ಎಂದು ಪಶ್ಚಾತ್ತಾಪ ಪಟ್ಟ.
ಗಂಡನ ಮನಸ್ಸಿನ ಹೊಯ್ದಾಟವನ್ನು ಗಮನಿಸಿದ ಸುಧಾ. ಅವನ ತಲೆಗೂದಲನ್ನು ಸವುರುತ್ತಾ ನಾವು ಇಲ್ಲೆ ಇದ್ದು ಬಿಡೋಣ ,ನಮ್ಮೊಂದಿಗೆ ನೀವು ಇಲ್ಲೆ ಇದ್ದು ಬಿಡಿ ಎಂದಳು.
ಅವಳ ಮಾತಿಗೆ ಹೂಂ ಎಂದು ತಲೆಯಾಡಿಸಿದ.
ಅಂದು ತೆಗೆದು ಕೊಳ್ಳಬೇಕಾದ ಈ ನಿರ್ಧಾರ ತಡವಾದರು ಇಂದಾದರು ತೆಗೆದು ಕೊಂಡೆನಲ್ಲ ಎಂದು ಹೆಂಡತಿಯ ಕೆನ್ನೆ ಚಿವುಟಿದ. ಎಷ್ಟು ಸಂಪಾದನೆ ಮಾಡಿದರೇನು ಎಷ್ಟು ಕೊಟ್ಟರು ಹೆಂಡತಿ ಮಗಳ ಪ್ರೀತಿ ಸಿಗುವುದೇನು ಎಂದು ಅಮೆರಿಕಾಗೆ ಹೋಗದೆ ಇಬ್ಬರ ಜೊತೆ ಇದ್ದು ಬಿಟ್ಟ. ಅಮೆರಿಕಾಗೆ ಹೋಗದೆ ಗಂಡ ತಮ್ಮೊಡನೆ ಇದ್ದಾಗ ತಾನು ವಿದೇಶಕ್ಕೆ ಹೋದಷ್ಟೆ ಸಂಭ್ರಮಿಸಿದಳು ಸುಧಾ.
- ಗುರುಮೂರ್ತಿ
