ಶಕ್ತಿಗೆ ಮಾತ್ರ ದೇಹ ದಾರ್ಡ್ಯತೆ, ಯುಕ್ತಿಗಲ್ಲ..

‘ಸುರಸಾ’ ರಾಕ್ಷಸಿ ದುತ್ತೆಂದು ಹನುಮಂತನ ಮುಂದೆ ಪ್ರತ್ಯಕ್ಷಳಾಗುತ್ತಾಳೆ.ರಾಕ್ಷಸಿ ಹನುಮಂತನನ್ನು ತಿನ್ನಬೇಕು ಎಂದಾಗ ಹನುಮಂತ ಏನು ಮಾಡುತ್ತಾನೆ ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೆ ಸ್ಫೂರ್ತಿ ನೀಡುವ ಲೇಖನವನ್ನು ತಪ್ಪದೆ ಮುಂದೆ ಓದಿ…

ಸೀತೆಯ ಪತ್ತೆ ಹಚ್ಚಲು ಲಂಕೇಗೆ ತೆರಳಬೇಕಾದ ಜವಾಬ್ದಾರಿ ಹನುಮಂತನ ಮೇಲೆ ಇತ್ತು. ಸಾಗರೋಲಂಘನ ಮಾಡಬೇಕಾದ ಸಮಯ. ಒಂದೇ ನೆಗೆತಕ್ಕೆ ಹನುಮ ಸಮುದ್ರ ದಡದಿಂದ ನೆಗೆದ. ಸಾಗರದ ಮೇಲೆ ಅರ್ಧದ ದೂರ ಕ್ರಮಿಸಿರಬಹುದು ‘ಸುರಸಾ’ ರಾಕ್ಷಸಿ ದುತ್ತೆಂದು ಸಾಗರದಾಳದಿಂದ ಮೇಲೇದ್ದು ಆಕಾಶದೆತ್ತರದ ಹನುಮನ ಮುಂದೆ ಬಾಯಿ ತೆಗೆದು ಅಡ್ಡ ನಿಂತು ಬಿಟ್ಟಳು. ಹನುಮನಿಗೆ ತನಗೆ ವಹಿಸಿದ ಕೆಲಸದ ಕಡೆ ಮಾತ್ರ ಗಮನವಿತ್ತು. ಸುರಸಾ ಅಡ್ಡಲಾಗಿ ನಿಂತ ಕಾರಣ ಇರಿಸು ಮುರುಸಾಯಿತು. ಅವಳನ್ನು ಕೇಳಿದ..

ಫೋಟೋ ಕೃಪೆ :google

ಹನುಮಂತ : ಯಾರು ನೀನು? ನಿನಗೇನು ಬೇಕು? ದಯಮಾಡಿ ದಾರಿ ಬಿಡು. ನಾನು ಮಹತ್ತರವಾದ ಕೆಲಸಕ್ಕೆ ಹೊರಟಿರುವೆ.

ಸುರಸಾ: ನಾನು ನಿನ್ನನ್ನು ತಿನ್ನಬೇಕು.

ಹನುಮಂತ : ನೋಡು ನಾನು ಹೊರಟ ಕೆಲಸ ತುಂಬಾ ಮಹತ್ವದ್ದು. ನನಗೆ ಸಮಯವಿಲ್ಲ. ದಯಮಾಡಿ ನನಗೆ ದಾರಿ ಬಿಡು.

ಸುರಸಾ: ಇಲ್ಲಾ ನಿನ್ನನ್ನು ನನ್ನ ಬಾಯೊಳಗೆ ಹಾಕಿಕೊಳ್ಳಲೇಬೇಕು. ನನ್ನ ಬಾಯೊಳಗೆ ಪ್ರವೇಶವಿಲ್ಲದೆ ನಿನಗೆ ಬೇರೆ ವಿಧಿಯಿಲ್ಲ.

ಹನುಮಂತ: ದಯಮಾಡಿ ಕ್ಷಮಿಸು. ನಾನು ಈ ಕೆಲಸ ಮುಗಿಸಿ ಬಂದಮೇಲೆ ಧಾರಾಳವಾಗಿ ನನ್ನನ್ನು ನೀನು ತಿನ್ನು. ಈಗ ಬಿಟ್ಟು ಬಿಡು.

ಸುರಸಾ: ಇಲ್ಲಾ ನಿನ್ನ ಬಿಡಲಾರೆ. ನೀನು ಹೋಗುವುದಾದರೆ ನನ್ನ ಬಾಯೊಳಗೆ ಹಾಯ್ದು ಹೋಗಬಹುದು ಎನ್ನುತ್ತಾಳೆ.

ಹನುಮಂತ: ನನ್ನ ಶ್ರೀರಾಮ ನನಗೆ ವಹಿಸಿಕೊಟ್ಟ ಕೆಲಸ ಮಾಡಿ ಮುಗಿಸುವವರೆಗೆ ನಾನು ಆಹಾರವಾಗಲಾರೆ. ದಯವಿಟ್ಟು ಬಿಡು.

ಸುರಸಾ: ನಿನ್ನನ್ನು ಬಿಡಲಾರೆ. ಅದು ಹೇಗೆ ಹೋಗುವೆ ನೋಡಿಯೇ ಬಿಡುವೆ.

 

ಸುರಸಾ ತನ್ನ ಬಾಯಿಯನ್ನು ಎರಡು ಯೋಜನೆಯಷ್ಟು ಅಗಲಿಸಿ ದೊಡ್ಡದಾಗಿ ತೆಗೆಯುತ್ತಾಳೆ. ( ವಿಷ್ಣುಪುರಾಣದ ಪ್ರಕಾರ ಒಂದು ಯೋಜನಾ = ಅಂದಾಜು 13 to 14.5 ಕಿ. ಮಿ ) ಹನುಮಂತ ಕ್ಷಣಾರ್ಧದಲ್ಲಿ ನಾಲ್ಕು ಯೋಜನೆಯಷ್ಟು ಬೆಳೆದು ನಿಲ್ಲುತ್ತಾನೆ.

ಆಗ ಸುರಸಾ ತನ್ನ ಬಾಯಿಯನ್ನು 8 ಯೋಜನೆಯಷ್ಟು ಅಗಲಿಸುತ್ತಾಳೆ. ಹನುಮನು 16 ಯೋಜನೆಯಷ್ಟು ಬೆಳೆದು ನಿಲ್ಲುತ್ತಾನೆ.

ಸುರಸಾ 32 ಯೋಜನೆಯಷ್ಟು ಬಾಯಿಯನ್ನು ಅಗಲಿಸುತ್ತಾಳೆ. ಹನುಮನು 64 ಯೋಜನೆಗಳಷ್ಟು ದೈತ್ಯಕಾರವಾಗಿ ಬೆಳೆದು ನಿಲ್ಲುತ್ತಾನೆ.

ಸುರಸಾ 100 ಯೋಜನೆಯಷ್ಟು ಬಾಯನ್ನು ಅಗಲಿಸುತ್ತಾಳೆ. ಹನುಮನಿಗೆ ಯಾಕೋ ಇದು ಸರಿ ಎನಿಸದು. ಆಟ ಬದಲಿಸಬೇಕು ಎಂದುಕೊಂಡು ಕ್ಷಣ ಮಾತ್ರದಲ್ಲಿ 64 ಯೋಜನೆಯಷ್ಟಿದ್ದವನು ಕೈ ಹೆಬ್ಬೆರಳ ಗಾತ್ರದಷ್ಟು ತನ್ನ ದೇಹವನ್ನು ಚಿಕ್ಕದಾಗಿಸಿ ಸುರಸಾಳ 100 ಯೋಜನೆಯ ಅಗಲದ ಬಾಯೊಳಗೆ ಕ್ಷಣಾರ್ಧದಲ್ಲಿ ಪ್ರವೇಶಿಸಿ ಅವಳು ಬಾಯಿಯನ್ನು ಮುಚ್ಚುವುದರೊಳಗೆ ಹೊರ ಬಂದು ಬಿಡುತ್ತಾನೆ.

ಹನುಮ : ನೋಡು ನಿನ್ನಾಸೆಯಂತೆಯೇ ನಾನು ನಿನ್ನ ಬಾಯೊಳಗೆ ಪ್ರವೇಶಿಸಿ ಬಂದೆ. ಈಗ ಇಬ್ಬರ ಆಸೆ ಫಲಿಸಿತು. ಈಗ ನನ್ನನ್ನು ಹೊರಡಲು ಅಪ್ಪಣೆ ಕೊಡು ಎನ್ನುತ್ತಾನೆ.

ಸುರಸಾ: ( ರಾಕ್ಷಸಿ ರೂಪದಿಂದ ದೇವತೆಯ ನಿಜ ರೂಪ ತಾಳಿ) ಹನುಮ ನಿನ್ನ ಕರ್ತವ್ಯ ನಿಷ್ಠೆ ಮತ್ತು ನಿನ್ನ ಸಾಮರ್ಥ್ಯವನ್ನು ಪರೀಕ್ಷಿಸಲು ನನಗೆ ಆಜ್ಞೆ ಇತ್ತು. ಈ ಪರೀಕ್ಷೆಯಲ್ಲಿ ನೀನು ಗೆದ್ದೆ. ನೀನು ಹೊರಟ ಕೆಲಸ ನೆರವೇರಲಿ. ಶುಭವಾಗಲಿ ಮಗು. (ಎಂದು ಆಶೀರ್ವದಿಸಿ ಮಾಯವಾಗುತ್ತಾಳೆ.)

ತಾತ್ಪರ್ಯ :  ಹನುಮಂತನ ಈ ಚಾಣಾಕ್ಷ್ಯತನದಿಂದ ಕಲಿಯಬೇಕಾದದ್ದು ಇಷ್ಟೇ ಇನ್ನೊಬ್ಬರಿಗೆ ಶಕ್ತಿಯನ್ನು ಪ್ರದರ್ಶಿಸುವುದಾದರೆ ಮಾತ್ರ ನಾವು ದೊಡ್ಡವರಾಗಬೇಕು. ನಮ್ಮ ಮಾಂಸ ಖಂಡಗಳ ದೇಹದಾರ್ಡ್ಯತೆ ತೋರಿಸಬೇಕು. ಯುಕ್ತಿಯನ್ನು ಪ್ರದರ್ಶಿಸಿಲು ದೇಹದ ದಾರ್ಡ್ಯತೆ ಬೇಕೇ ಆಗಿಲ್ಲ. ಚಿಕ್ಕವರಾಗಿಯೇ ಇದ್ದುಕೊಂಡು ಎಲ್ಲವನ್ನು ನಿಭಾಯಿಸಬಹುದು.

ಸತ್ಯ ಅಲ್ವಾ..

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ  

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading