ನಮ್ಮಲ್ಲಿ ಎಲ್ಲವೂ ಸರಿ ಇದ್ದರೆ, ಎಲ್ಲವೂ ಇದ್ದರೆ ಎಲ್ಲರೂ ನಮ್ಮವರೇ, ಎಲ್ಲರೂ ನಮಗಾಗಿ ನಿಲ್ಲುವವರೇ. ಅದೇ ನಮ್ಮಲ್ಲಿ ಏನೂ ಸರಿ ಇಲ್ಲದೆ, ಏನೂ ಇಲ್ಲದೆ ಹೋದರೆ ನಮ್ಮವರಾಗಿ ನಮಗಾಗಿ ಯಾರೂ ಇರಲ್ಲ. ಹಾಗಾಗಿ ನಿಮ್ಮ ಕೆಲಸದಲ್ಲಿ ಅಚಲವಾದ ನಂಬಿಕೆ, ಶ್ರದ್ದೆ ಇರಲಿ. ಚಂದನ್ ಅವರ ಮನಸ್ಸಿನ ಪಿಸುಮಾತಿನ ಮುಂದಿನ ಸಂಚಿಕೆಯನ್ನು ತಪ್ಪದೆ ಮುಂದೆ ಓದಿ…
ಪ್ರತಿ ಮನುಷ್ಯನ ಜೀವನದಲ್ಲಿ ಸುಖ ಅನ್ನೋದು ಕ್ಷಣಿಕ. ಅದು ಶಾಶ್ವತವಾಗಿ ಇರಲಾರದು. ಶಾಶ್ವತವಾಗಿ ಇರುತ್ತೆ ಅಂತ ಭರವಸೆ ಇಟ್ಟುಕೊಂಡು ಬದುಕಲೂ ಸಹ ಆಗದು. ಯಾವ ಕ್ಷಣ, ಯಾವ ದಿನ ಹೇಗೆ ಬದಲಾಗಿ ಬಿಡುತ್ತೋ ಅಂತ ಭಯದಿಂದಲೇ ಎಲ್ಲರೂ ಬದುಕುತ್ತಿರುತ್ತಾರೆ. ಆದರೆ, ಆ ಭಯ ಅನ್ನೋದು ಪ್ರಪಂಚಕ್ಕೆ ಕಾಣದ ಹಾಗೆ ನಟಿಸುತ್ತ ಬದುಕುವುದು ಬಹುಶಃ ಮನುಷ್ಯರು ಮಾತ್ರ ಅನ್ನಿಸುತ್ತದೆ.
ಈ ಬದುಕಿನ ನಾಟಕ ಅನ್ನೋದು ಎಲ್ಲರಿಗೂ ಒಂದೇ. ಇದ್ದವರು ಇಲ್ಲದವರು ಅಂತ ಯಾವುದೇ ವ್ಯತ್ಯಾಸವಿಲ್ಲದೆ ಎಲ್ಲರನ್ನೂ ನಟಿಸುವಂತೆ ಮಾಡುತ್ತದೆ. ಎಷ್ಟೇ ಇದ್ದರೂ, ಎಲ್ಲವೂ ಇದ್ದರೂ ಏನೋ ಒಂದು ಇಲ್ಲದ ಕೊರಗಿನಲ್ಲಿ ನೋವನ್ನು ಮನಸ್ಸಿನಲ್ಲಿ ಮರೆಮಾಚಿ ನಗುಮುಖವನ್ನು ಹೊತ್ತು ನಟಿಸುವಂತೆ ಮಾಡುವುದೇ ಜೀವನ.
ಜೀವನದಲ್ಲಿ ಗಳಿಸಿಕೊಂಡಿರುವುದನ್ನು ಅಥವಾ ಪಡೆದುಕೊಂಡಿರುವುದನ್ನು ಸುಲಭವಾಗಿ ಮರೆತು, ಕಳೆದುಕೊಂಡದ್ದನ್ನು ನೆನೆದು, ಹಂಬಲಿಸುತ್ತ ಬದುಕುವುದು ಎಲ್ಲರಲ್ಲಿಯೂ ಇದ್ದೇ ಇರುತ್ತೆ. ಅದೇ ರೀತಿ ನಮ್ಮ ಜೀವನದಲ್ಲಿ ಕಳೆದುಕೊಂಡದ್ದನ್ನು ಹೇಗಾದರೂ ಸರಿ, ಎಷ್ಟೇ ಕಷ್ಟವಾದರೂ ಸರಿ ಪಡೆಯಲೇಬೇಕು ಅಂತ ನಿರ್ಧರಿಸುವುದು ಸುಲಭ. ಆ ನಿರ್ಧಾರ ಅಚಲವಾಗಿದ್ದು, ಸಾಗುವ ದಾರಿ ಸನ್ಮಾರ್ಗದಲ್ಲಿದ್ದರೆ ಗೆಲುವು ಅನ್ನೋದು ಸಿಗುತ್ತೆ ಅಂತ ಹಿರಿಯರು ಹೇಳುತ್ತಲೇ ಬಂದಿದ್ದಾರೆ.
ಹಿರಿಯರು ಹೇಳಿದ ಕಾಲದಲ್ಲಿ ಇದ್ದಂತೆ ಈಗಿನ ಕಾಲದಲ್ಲಿ ಯಾವುದೂ ಇಲ್ಲ. ಬದಲಾದ ಪ್ರಪಂಚದಲ್ಲಿ ಎಲ್ಲವೂ ಬದಲಾಗಿದೆ. ನಾವು ನಡೆಯುವ ದಾರಿ ಸನ್ಮಾರ್ಗದಲ್ಲಿದ್ದ ಮಾತ್ರಕ್ಕೆ ಎಲ್ಲವೂ ನಮಗೆ ಅನುಕೂಲಕರವಾಗಿ ಇರುತ್ತೆ ಅಂತ ಇಂದಿನ ಕಾಲದಲ್ಲಿ ಎಂದಿಗೂ ನಂಬಲಾರೆವು. ಯಾಕೆಂದರೆ ಅಂದು ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತಿತ್ತು, ಇಂದು ಕಷ್ಟಕ್ಕೆ ತಕ್ಕ ಪ್ರತಿಫಲವೂ ಸಿಗಲ್ಲ. ಕಷ್ಟಪಟ್ಟು ಏನಾದರೂ ಸಾಧನೆ ಮಾಡಬೇಕೆಂದುಕೊಂಡವರಿಗೆ ಯಾವುದೇ ಸಹಕಾರವೂ ಸಿಗಲ್ಲ.
ಹಿಂದೆ ಪ್ರತಿಭೆಗೆ ಮೊದಲ ಅಧ್ಯತೆ ಇರುತ್ತಿತ್ತು. ಮೊದಲು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಇಂದು ಪ್ರೋತ್ಸಾಹ ಸಿಕ್ಕರೂ ಅದು ಕೈಯಲ್ಲಿ ಇರುವ ಕುರುಡು ಕಾಂಚಾಣದ ಲೆಕ್ಕಾಚಾರದ ಮೇಲೆಯೇ ಇರುತ್ತೆ. ಹಣದ ಹಿಂದೆ ಓಡುವ ಪ್ರಪಂಚದಲ್ಲಿದ್ದು ಹಣವಿಲ್ಲದೆ ಬರೀ ಕೈಯಲ್ಲಿ ಸಹಾಯ ಯಾಚಿಸಿದರೆ ಭಿಕ್ಷುಕರಂತೆ ಕೇವಲವಾಗಿ ನೋಡುವ ಕಾಲವಿದು. ಇಂದು ಯಾವುದೇ ಸಂಬಂಧ ನಮ್ಮ ಆರ್ಥಿಕತೆಯ ಮೇಲೆಯೇ ಅವಲಂಬಿತವಾಗಿರುತ್ತೆ. ನಮ್ಮಲ್ಲಿ ಎಲ್ಲವೂ ಸರಿ ಇದ್ದರೆ, ಎಲ್ಲವೂ ಇದ್ದರೆ ಎಲ್ಲರೂ ನಮ್ಮವರೇ, ಎಲ್ಲರೂ ನಮಗಾಗಿ ನಿಲ್ಲುವವರೇ. ಅದೇ ನಮ್ಮಲ್ಲಿ ಏನೂ ಸರಿ ಇಲ್ಲದೆ, ಏನೂ ಇಲ್ಲದೆ ಹೋದರೆ ನಮ್ಮವರಾಗಿ ನಮಗಾಗಿ ಯಾರೂ ಇರಲ್ಲ.
ಅನುಭವದ ಮಾತುಗಳು ಪ್ರತಿಯೊಬ್ಬರ ಜೀವನದಲ್ಲಿ ಅನುಭವಕ್ಕೆ ಬಂದಾಗಲೇ ಅರ್ಥಪೂರ್ಣವಾಗಿ ಅರ್ಥವಾಗಲು ಸಾಧ್ಯ. ಅದು ಒಂದಲ್ಲಾ ಒಂದು ದಿನ ಅರ್ಥವಾಗುವ ಹಾಗೆ ತಿರುವುಗಳನ್ನು ನೀಡುವುದೇ ಬದುಕಿನ ಗುರಿಯಾಗಿರುತ್ತೆ. ಬದುಕಿನ ಹಾದಿಯಲಿ ನಾವಿಡುವ ಒಂದೊಂದು ಹೆಜ್ಜೆಯೂ ನಿಗೂಢ. ಪ್ರತಿಯೊಂದು ಹೆಜ್ಜೆಯೂ ತನ್ನದೇ ಆದಂತಹ ಹೆಜ್ಜೆ ಗುರುತುಗಳನ್ನು ಅನುಭವಗಳಂತೆ ಮೂಡಿಸಿರುತ್ತೆ. ಅದು ಅರ್ಥವಾಗುವವರೆಗೆ ಎಷ್ಟೇ ಕಷ್ಟ – ನಷ್ಟಗಳು, ನೋವು – ದುಃಖಗಳು ಎದುರಾದರೂ ಮೌನವಾಗಿ ಅನುಭವಿಸುತ್ತ ಕಾಯಬೇಕಷ್ಟೆ….
ಹಿಂದಿನ ಸಂಚಿಕೆಗಳು :
- ಮನಸ್ಸಿನ ಪಿಸುಮಾತು – (ಭಾಗ-೧)
- ಮನಸ್ಸಿನ ಪಿಸುಮಾತು – (ಭಾಗ-೨)
- ಮನಸ್ಸಿನ ಪಿಸುಮಾತು – (ಭಾಗ-೩)
- ಮನಸ್ಸಿನ ಪಿಸುಮಾತು – (ಭಾಗ-೪)
- ಮನಸ್ಸಿನ ಪಿಸುಮಾತು – (ಭಾಗ-೫)
- ಮನಸ್ಸಿನ ಪಿಸುಮಾತು – (ಭಾಗ-೬)
- ಮನಸ್ಸಿನ ಪಿಸುಮಾತು – (ಭಾಗ-೭)
- ಮನಸ್ಸಿನ ಪಿಸುಮಾತು – (ಭಾಗ-೮)
- ಮನಸ್ಸಿನ ಪಿಸುಮಾತು – (ಭಾಗ-೯)
- ಚಂದನ್
