“ಟೈಟಾನಿಕ್” ಹಡಗಿನ ಸುತ್ತ

ಟೈಟಾನಿಕ್ ಹಡಗು ಮುಳುಗಿ ಇಂದಿಗೆ ಸರಿ ಸುಮಾರು 112 ವರ್ಷಗಳೇ ಗತಿಸಿವೆ. ಅದರ ಇತಿಹಾಸದ ಕುರಿತು ಒಂದು ಇಣುಕು ನೋಟವನ್ನು  ಸರ್ವಮಂಗಳ ಜಯರಾಂ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

“ಟೈಟಾನಿಕ್ ” ಎಂದಾಕ್ಷಣ ಹತ್ತಾರು ವರ್ಷಗಳ ಹಿಂದೆ ಹಾಲಿವುಡ್ ನಲ್ಲಿ ತೆರೆಕಂಡ “ಟೈಟಾನಿಕ್ “ಸಿನಿಮಾದ ನವಿರು ಪ್ರೇಮ ಕಥೆಯೊಂದು ಕಣ್ಮುಂದೆ ನುಸುಳಿ ಮರೆಯಾಗುತ್ತದೆ. ಪ್ರೇಮ ಕಥೆಯು ದುರಂತ ಅಂತ್ಯದಲ್ಲಿ ಕೊನೆಗೊಳ್ಳುತ್ತದೆ. ಹೌದು ಟೈಟಾನಿಕ್ ಹಡಗು ಮುಳುಗಿ ಇಂದಿಗೆ ಸರಿಸುಮಾರು 112 ವರ್ಷಗಳೇ ಗತಿಸಿವೆ. 1912 ಏಪ್ರಿಲ್ 14 ರಂದು ನಡೆದ ಈ ಭೀಕರ ದುರಂತ ಇಂದಿಗೂ ದಂತ ಕಥೆಯಾಗಿ ಜನಮಾನಸದಲ್ಲಿ ಉಳಿದುಕೊಂಡಿದೆ.

ಬನ್ನಿ ಅದರ ಇತಿಹಾಸವನ್ನೊಮ್ಮೆ ತಿಳಿಯೋಣ. 1912 ಏಪ್ರಿಲ್ 10 ರಂದು ಟೈಟಾನಿಕ್ ಎಂಬ ಹೆಸರಿನ ವೈಭವೋಪೇತ ಬೃಹತ್ ಹಡಗೊಂದು ಬ್ರಿಟನ್ನಿನ ಸೌತ್ ಆಂಪ್ಟನ್ ಬಂದರಿನಿಂದ ನ್ಯೂಯಾರ್ಕ್ ಶಹರಕ್ಕೆ ಹೊರಟಿತು. ಗಾತ್ರದಲ್ಲಿ, ವೈಭವದಲ್ಲಿ ಈ ಹಡಗಿಗೆ ಸರಿಸಾಟಿಯಾದ ಯಾವ ಹಡಗೂ ಇರಲಿಲ್ಲ. ಅಂತೆಯೇ ಈ ಹಡಗನ್ನು ” ಅನ್ ಸಿಂಕಬಲ್ ಟೈಟಾನಿಕ್ ” ಎಂದೇ ಹೆಸರಿಸಲಾಗುತ್ತಿತ್ತು. ಅಂದರೆ ಯಾವ ಸನ್ನಿವೇಶದಲ್ಲೂ, ಯಾವ ಕಾರಣಕ್ಕೂ ಮುಳುಗದ ಹಡಗು ಎಂದರ್ಥ. ಆದರೆ ವಿಧಿಯಾಟವನ್ನು ಮೀರುವವರು ಯಾರು. ಇಂಥ ಸುರಕ್ಷಿತ ಹಡಗು ಬಂದರಿನಿಂದ ಹೊರಟ ನಾಲ್ಕೇ ದಿನಗಳಲ್ಲಿ ಕೆನಡಾ ದೇಶದ ನ್ಯೂಫೌಂಡ್ ಲ್ಯಾಂಡ್ ಎಂಬ ತೀರದಿಂದ 380 ಮೈಲು ದೂರದಲ್ಲಿ ಬೃಹದಾಕಾರದ ನೀರ್ಗಲ್ಲು ಶಿಲೆಗೆ ಬಡಿದು ಸಾಗರದ ತಳ ಸೇರಿತು. ನೀರು ಹೆಪ್ಪುಗಟ್ಟುವಂತ ಭಯಂಕರ ಚಳಿಯಲ್ಲಿ ಹನ್ನೆರಡು ಸಾವಿರದ ಐದುನೂರು ಅಡಿಗಳಷ್ಟು ಆಳಕ್ಕಿಳಿದು ಹಡಗು ಕಣ್ಮರೆಯಾಯಿತು. ಅಂದಾಜು 1490 ಮಂದಿ ಸತ್ತಿರಬಹುದು. ಹೆಚ್ಚಿನವರ ಶವಗಳೂ ದೊರೆಯದೇ ಹೋದವು.

ಈ ದುರಂತ ನಡೆಯುವಾಗ ಬೇರೆ ಯಾವ ಹಡಗುಗಳೂ ಆ ಪ್ರದೇಶದಲ್ಲಿರಲಿಲ್ಲವೇ.. ಅವು ಇದರ ಸಹಾಯಾರ್ಥ ತುರ್ತು ಸಂದೇಶಗಳಿಗೆ ಸ್ಪಂದಿಸಲಿಲ್ಲವೇ… ಎಂಬ ಪ್ರಶ್ನೆಗಳು ಮೂಡುತ್ತವೆ. ಇದ್ದವು. ಒಂದಲ್ಲ ಎರಡಲ್ಲ ಮೂರು ಹಡಗುಗಳಿದ್ದವು. ತೀರಾ ಹತ್ತಿರ ದಲ್ಲಿ ಕೇವಲ ಏಳು ಕಿ. ಮೀ. ದೂರದಲ್ಲಿ ಒಂದು ಮತ್ತು 14 ಕಿ.ಮೀ ದೂರದಲ್ಲಿ ಒಂದು ಮತ್ತು 60 ಕಿ. ಮೀ. ದೂರದಲ್ಲಿ ಒಂದು ಹಡಗು ಚಲಿಸುತ್ತಿತ್ತು. ಈ ಹಡಗಿನ ಹೆಸರು ಕಾರ್ಪಾತಿಯಾ. ಟೈಟಾನಿಕ್ ನಿಂದ ಬಂದ ಸಂಕಟದ ಸಂದೇಶಗಳನ್ನು ಕಂಡ ಕೂಡಲೇ ಕಾರ್ಯ ಪ್ರವೃತ್ತನಾದ ಕ್ಯಾಪ್ಟನ್ ಅವರ ರಕ್ಷಣೆಗೆ ಧಾವಿಸಿ ಬಂದ ಹಡಗು ಸಾಧ್ಯವಾದಷ್ಟು ವೇಗದಿಂದ ಬಂದು ಸುಮಾರು 705 ಮಂದಿಯನ್ನು ರಕ್ಷಿಸಿತು. ಕಾರ್ಪಾಥಿಯಾದ ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ ಯನ್ನು ಘಟನೆ ನಡೆದ 108 ವರ್ಷಗಳ ನಂತರವೂ ಜಗತ್ತು ಕೃತಜ್ಞತೆ ಯಿಂದ ನೆನಪಿಸಿಕೊಳ್ಳುತ್ತಿದೆ.

ಸಮೀಪವೇ ಇದ್ದ ಮೊದಲ ಹಾಗೂ ಎರಡನೆಯ ಹಡಗುಗಳು ಕಂಡೂ ಕಾಣದಂತೆ ನಿರ್ಲಕ್ಷಿಸಿ ಅಲ್ಲಿಂದ ದೂರ ಹೊರಟು ಹೋದವು. ಆದರೆ ದೂರದಲ್ಲೆಲ್ಲೋ ಇದ್ದ ಹಡಗೊಂದು ಧಾವಿಸಿ ಬಂದು ಸಹಾಯ ಹಸ್ತ ಚಾಚುತ್ತದೆ.

ಕರ್ತವ್ಯಗಳಿಂದ ನುಣುಚಿಕೊಳ್ಳಲು ಸಾವಿರ ಅಡೆತಡೆಗಳನ್ನು ಮುಂದೊಡ್ಡಬಹುದು. ಆದರೆ ಅಂತಹ ಸಾವಿರಾರು ಅಡೆತಡೆಗಳನ್ನು ದಾಟಿಯೂ ಕರ್ತವ್ಯ ನಿರ್ವಹಿಸುವವರನ್ನು ಆ ಭಗವಂತ ಖಂಡಿತ ಮೆಚ್ಚುತ್ತಾನೆ ಎಂಬ ಸಂದೇಶ ನೆನಪಾಗುತ್ತದೆ.


  •  ಸರ್ವಮಂಗಳ ಜಯರಾಂ – ಶಿಕ್ಷಕಿ, ಗೌರಿಬಿದನೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading