ಹಾಸ್ಯನಟ ದಿವಂಗತ ದಿನೇಶ್ ಪುತ್ರನ ಟ್ರಾಜಡಿ ಲೈಫ್…

ಹಿರಿಯ ಕಲಾವಿದ ದಿನೇಶ್ ಅವರಂತೆ ಕನ್ನಡ ಚಿತ್ರರಂಗದಲ್ಲಿ ನೆಲೆಗೊಳ್ಳುವ ಎಲ್ಲ ಲಕ್ಷಣಗಳು ಜ್ಯೂನಿಯರ್ ದಿನೇಶ್ ಗಿರಿಯವರಲ್ಲಿತ್ತು,  ಆದರೆ ವಿಧಿಯಾಟವೇ ಬೇರೆಯಾಗಿತ್ತು, ಜ್ಯೂನಿಯರ್ ದಿನೇಶ್ ಗಿರಿ ಹೊರಟೆ ಬಿಟ್ಟ. ತನ್ನ ಹಣೆಬರಹವನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಗಿರಿ ಅವರಿಗೆ. ಅವರ ಬದುಕಿನ ಸತ್ಯವನ್ನು ಹತ್ತಿರದಿಂದ ಕಂಡ ಖ್ಯಾತ ಸಿನಿ ಪತ್ರಕರ್ತರಾದ ಗಣೇಶ ಕಾಸರಗೋಡು ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಹಿರಿಯ ಕಲಾವಿದರು ಒಬ್ಬೊಬ್ಬರಾಗಿಯೇ ಮರೆಯಾಗುತ್ತಿರುವಂತೆಯೇ ಅವರ ಕುಟುಂಬ ವರ್ಗದವರೂ ‘ಮರೆ’ಯಾಗುತ್ತಿದ್ದಾರೆ! ಎಲ್ಲಿದ್ದಾರೆ? ಹೇಗಿದ್ದಾರೆ? ಎನ್ನುವ ಪ್ರಶ್ನೆಯೊಂದಿಗೆ ಹಿರಿಯ ಹಾಸ್ಯನಟ ದಿವಂಗತ ದಿನೇಶ್ ಅವರ ಕುಟುಂಬಕ್ಕೆ ದುರ್ಬೀನು ಹಾಕಿ ಹುಡುಕಿದಾಗ ಸಿಕ್ಕವರೇ ಈ ಗಿರಿ ದಿನೇಶ್. ಅವರೊಂದಿಗಿನ ಮಾತುಕತೆಯ ವಿವರ ಇಲ್ಲಿದೆ :

‘1989ರಲ್ಲಿ ಅಪ್ಪ ತೀರಿಕೊಂಡಾಗ ನನ್ಗೆ ಹದಿಮೂರು ವರ್ಷ ವಯಸ್ಸು. ಕಷ್ಟವೆಂದರೇನೆಂದೇ ಗೊತ್ತಿರಲಿಲ್ಲ. ಅಪ್ಪ ನಮ್ಗೆ ಏನೇನೂ ಕಮ್ಮಿಯಾಗದಂತೆ ಬೆಳೆಸಿದರು. ಸ್ವಂತ ಸಂಪಾದನೆಯಿಂದಲೇ ಎರಡು ಮನೆ ಕಟ್ಟಿಸಿದರು. ಒಂದು ರಾಜಾಜಿನಗರದಲ್ಲಿತ್ತು. ಮತ್ತೊಂದು ಮತ್ತೀಕೆರೆಯಲ್ಲಿತ್ತು. ಮತ್ತೀಕೆರೆಯ ಮನೆಯಲ್ಲಿ ನಾವಿದ್ದೆವು. ರಾಜಾಜಿನಗರದ ಮನೆಯಲ್ಲಿ ಅಜ್ಜಿ ವಾಸವಾಗಿದ್ದರು. ನಾವು ಒಟ್ಟು ನಾಲ್ಕು ಮಂದಿ ಮಕ್ಕಳು. ನಾನೇ ಚಿಕ್ಕವ…

‘ಕುಟುಂಬಕ್ಕೆ ಆಧಾರವಾಗಿದ್ದ ಅಪ್ಪ ಸತ್ತಾಗ ನಿಜಕ್ಕೂ ಆಘಾತವಾಗಿತ್ತು. ಅಮ್ಮ ಹೇಗೋ ನಮ್ಮನ್ನೆಲ್ಲಾ ಬೆಳೆಸಿದಳು. ಅಪ್ಪ ಸತ್ತಾಗ ಉದ್ಯಮದ ಮಂದಿ ದೂರವೇ ಉಳಿದರು. ಪೇಮೆಂಟ್ ಕೊಡಬೇಕಾದವರು ಕೈಯಾಡಿಸಿದರು. ತುಂಬಾ ಜನ ನಿರ್ಮಾಪಕರು ಮೋಸ ಮಾಡಿದರು. ಬದುಕು ಕಷ್ಟವಾಯಿತು. ಹೀಗಾಗಿ ಮತ್ತೀಕೆರೆಯ ಮನೆಯನ್ನು ಮಾರಬೇಕಾಯಿತು. ಕೈಗೆ ಬಂದ ದುಡ್ಡು ಕೇವಲ 13 ಲಕ್ಷ. ಈಗ ಅದರ ಬೆಲೆ ಎರಡು ಕೋಟಿ ಮೀರುತ್ತದೆ! ಇದು ಉದ್ಯಮದ ಮಂದಿಯ ಅನಾದರಣೆಗೆ ಸಿಕ್ಕ ಉಡುಗೊರೆ…

‘ಆ ನಂತರ ನಾನು ದುಡಿಯಲು ನಿರ್ಧರಿಸಿದೆ. ಅಮ್ಮ ನನ್ನನ್ನು ಕರೆದುಕೊಂಡು ಸ್ಟುಡಿಯೋದಿಂದ ಸ್ಟುಡಿಯೋಕ್ಕೆ ಅಲೆದಾಡಿದರು. ಅಂಥಾ ದೊಡ್ಡ ಕಲಾವಿದನ ಮಗನಿಗೆ ಏನಾದ್ರೂ ಕೆಲಸ ಕೊಡಿಸಿ ಎಂದು ದುಂಬಾಲು ಬಿದ್ದರು. ಆದರೆ ಉದ್ಯಮದ ಮಂದಿಯ ಹೃದಯ ಕಲ್ಲಾಗಿತ್ತು. ಯಾರೂ ನಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಅವರ ನಿರಾಸಕ್ತಿಯಿಂದಾಗಿ ನನ್ಗೆ ಚಿತ್ರರಂಗದ ಬಗ್ಗೆಯೇ ವಾಕರಿಕೆ ಬರುವಂತಾಯ್ತು. ನನ್ನ 14ನೇ ವಯಸ್ಸಿನಲ್ಲಿ ನಾನು ಬಾಲನಟನಾಗಿ ನಟಿಸಿದ್ದೆ. ಹಿರಿಯ ನಿರ್ದೇಶಕರಾದ ಸಿದ್ಧಲಿಂಗಯ್ಯನವರು ಕರೆದು ಶಶಿಕುಮಾರ್ ಅಭಿನಯದ ‘ಬಾರೇ ನನ್ನ ಮುದ್ದಿನ ರಾಣಿ’ ಚಿತ್ರದಲ್ಲಿ ಪುಟ್ಟದೊಂದು ಪಾತ್ರ ಕೊಟ್ಟು ಸಹಕರಿಸಿದ್ದರು. ನಂತರ ದೊಡ್ಡವನಾದ ಮೇಲೆ ಮಿಮಿಕ್ರಿ ದಯಾನಂದ್ ಅವರ ಜತೆ ಕೆಲವೊಂದು ಪ್ರೋಗ್ರಾಮ್’ಗಳಲ್ಲಿ ಮಿಮಿಕ್ರಿ ಮಾಡಿದ್ದೂ ಇದೆ! ಮುಂದೆ ಏನು ಮಾಡಬೇಕೆಂದು ತೋಚದೇ ಮಿನರಲ್ ವಾಟರ್ ಏಜೆನ್ಸಿ ಪಡೆದುಕೊಂಡೆ. ಈ ನಡುವೆಯೇ ವಿಜಯ್ ಗುಜ್ಜಾರ್ ನಿರ್ದೇಶನದ ‘ಮಾರಿ ಕಣಿವೆ ರಹಸ್ಯ’ ಎಂಬ ಧಾರಾವಾಹಿಯಲ್ಲೂ ನಟಿಸಿದೆ. ಆದರೆ ಅಭಿನಯ ಭಾಗ್ಯ ನನಗೆ ಒಲಿದು ಬರಲಿಲ್ಲ. ಯಾರೂ ತಾವಾಗಿಯೇ ಕರೆದು ಅವಕಾಶ ಕೊಡಲಿಲ್ಲ. ನಾನು ಯಾರಲ್ಲೂ ಅವಕಾಶ ಕೇಳಿ ಪಡೆಯಲಿಲ್ಲ.

‘ಇದೊಂದು ಯೋಗಾಯೋಗ. ದರ್ಶನ್ ಅವರು ಕರೆದು ಅವಕಾಶ ಕೊಡದಿದ್ದರೆ ‘ನವಗ್ರಹ’ ಚಿತ್ರದಲ್ಲಿ ನಟಿಸುವುದೂ ಸಾಧ್ಯವಾಗುತ್ತಿರಲಿಲ್ಲ. ದಿನಕರ್ ಅವರ ಸ್ನೇಹ ದೊಡ್ಡದು. ನಾವು ಒಂಭತ್ತು ಮಂದಿಗೆ ಈಕ್ವಲ್ ಪಾತ್ರ. ತರುಣ್ ಸುಧೀರ್, ನಾಗೇಂದ್ರ ಅರಸ್, ಸೃಜನ್ ಲೋಕೇಶ್, ದರ್ಶನ ತೂಗುದೀಪ, ವಿನೋದ್ ಪ್ರಭಾಕರ್…ಎಲ್ಲರೂ ಪರಸ್ಪರ ಸೋದರ ಭಾವದಿಂದಲೇ ಕೆಲಸ ಮಾಡಿದ್ದೇವೆ. ಯಾರೂ ಹೆಚ್ಚಲ್ಲ, ಯಾರೂ ಕಮ್ಮಿಯಲ್ಲ. ಇದು ನನ್ನ ಸೌಭಾಗ್ಯ. ಈಗಾಗಲೇ ನಾಲ್ಕಾರು ಆಫರ್’ಗಳು ಬಂದಿವೆ. ಮುಂದೆ ಚಿತ್ರರಂಗದಲ್ಲೇ ಮುಂದುವರಿಯಬೇಕೆಂದು ನಿರ್ಧರಿಸಿದ್ದೇನೆ. ಅಪ್ಪನ ಆಶೀರ್ವಾದ, ಕನ್ನಡ ಜನತೆಯ ಪ್ರೋತ್ಸಾಹವೊಂದಿದ್ದರೆ ನಾನು ನಮ್ಮಪ್ಪನ ಜಾಗವನ್ನು ಸಮರ್ಥವಾಗಿ ತುಂಬಬಲ್ಲೆ…’
– ಎಂದು ಹೇಳುತ್ತಾ ಅಪ್ಪ ದಿನೇಶ್ ಅವರಂತೆ ‘ಎಂಥಾದ್ದು ಮಾರಾಯ? ಕುಡ್ಲದಿಂದ ಯಾವಾಗ ಬಂದ್ರಿ? ಅಲ್ಲಿ ಸಮುದ್ರದಲ್ಲಿ ರಾಶಿ ರಾಶಿ ಮೀನುಂಟಲ್ವಾ? ಇನ್ನೊಮ್ಮೆ ಬರುವಾಗ ಸಿಪಿಸಿ
ಬಸ್’ನಲ್ಲಿ ಬಂಗುಡೆ ತನ್ನಿ ಮಾರ್ರೆ, ನಮ್ಮ ಮಿತ್ರರಿಗೆ ಬೇಕಾಗಬಹುದು…’ ಎಂದು ಹೇಳುತ್ತಾ ಹೊರಟೆ ಬಿಟ್ಟನಲ್ಲ ಜ್ಯೂನಿಯರ್ ದಿನೇಶ್ ಗಿರಿ…?

ಹಾಗೆ ಹೊರಟವನು ಮತ್ತೆ ನನಗೆ ಸಿಗಲಿಲ್ಲ. ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದ. ಆದರೆ ತನ್ನ ಹಣೆಬರಹವನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಪೂರ್ ಚಾಪ್, ಸದ್ದಿಲ್ಲದೇ ಹೊರಟು ಹೋದ…ಓಂ ಶಾಂತಿ….


  • ಗಣೇಶ ಕಾಸರಗೋಡು – ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW