‘ರಾಜಾವಾರ್ಡ್’ ವೈಶಿಷ್ಟ್ಯಯೆಂದರೆ ಕಾದಂಬರಿಯಲ್ಲಿ ಮೊದಲ ಬಾರಿಗೆ ಸ್ಮಶಾನ ವಾಸಿಯೊಬ್ಬನ ಸಂದರ್ಶನ ಮಾಡಿದ ಶ್ರೇಯಸ್ಸು ಲೇಖಕರಾದ ನಿಡಸಾಲೆ ಪುಟ್ಟಸ್ವಾಮಯ್ಯ ಅವರಿಗೆ ಬಹುತೇಕ ಸಲ್ಲಬೇಕು.ಈ ಕಾದಂಬರಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ರಾಜಾವಾರ್ಡ್
ಲೇಖಕರು : ನಿಡಸಾಲೆ ಪುಟ್ಟಸ್ವಾಮಯ್ಯ
ಪ್ರಕಾಶನ : ಗೀತಾಂಜಲಿ ಪ್ರಕಾಶನ
ಪ್ರಕಾರ : ಕಾದಂಬರಿ
ರಾಜಾವಾರ್ಡ್ ನ ಅಂತರಂಗದ ಅನಾವರಣ: ಶೀರ್ಷಿಕೆಯ ಹೆಸರಿನ ವಾರ್ಡ್ ಗೆ ನಿತ್ಯ ಎನ್ನುವಂತೆ ಹೋಗುತ್ತಿದ್ದ ಪೋಲಿಸ್ ರುದ್ರಪ್ಪ, ಅನಾಥರಿಗೆ ಎಂದು ಮೀಸಲಾಗಿದ್ದ ಅಲ್ಲಿಗೆ, ಅನಾಥರನ್ನು ಕರೆದುಕೊಂಡು ಹೋಗಿ, ಅವರ ಚಿಕಿತ್ಸೆಗೆ ನೆರವು ನೀಡುತ್ತಿದ್ದ, ಕಡೆಗೆ ತಾನೇ ಸೇರಿ ಮರಣಹೊಂದಿದ ದುರಂತ ಕಥನ.
ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡು, ಕಷ್ಟಪಟ್ಟು ಓದಿ, ಪೋಲಿಸ್ ಇಲಾಖೆಗೆ ಸೇರಿದ ರುದ್ರಪ್ಪ, ಅನಾಥೆ ಕಮಲಳನ್ನು ಮದುವೆಯಾಗಿ, ಉದ್ಯೋಗದಿಂದ ಬರುತ್ತಿದ್ದ ಸಂಬಳದ ಆಧಾರದ ಸಾಲ ಮಾಡಿ, ನಿವೇಶನ ಖರೀದಿಸಿ, ಮತ್ತೆ ಸಾಲಮಾಡಿ, ಮನೆ ಕಟ್ಟಿದ. ತಮ್ಮ ದಾಂಪತ್ಯದ ಫಲವಾಗಿ ಹುಟ್ಟಿದ ಮಗನನ್ನು ಚೆನ್ನಾಗಿ ಓದಿಸಿದ. ಅವನು ತನ್ನ ಸಾಮರ್ಥ್ಯದಿಂದ ಇನ್ ಫೋಸಿಸ್ ನಲ್ಲಿ, ಕೆಲಸ ಗಳಿಸಿಕೊಂಡ. ಅಲ್ಲಿ ಜೊತೆಗೆ ಕೆಲಸ ಮಾಡುವ ಅನಾಥ ಹೆಣ್ಣನ್ನು, ತನ್ನ ತಂದೆ ತಾಯಿಗಳ ಒಪ್ಪಿಗೆ ಪಡೆದು ಮದುವೆಯಾದ. ಮಗಳು ಹುಟ್ಟಿದಳು.ಸಂಸಾರ ಆನಂದ ಸಾಗರ ವಾಗಿತ್ತು.

ಅವನ ಉದ್ಯೋಗದಲ್ಲಿ ಬಡ್ತಿ ದೊರೆತು, ನ್ಯೂಯಾರ್ಕ್ ಗೆ ಹೋದಾಗ, ಇವರಿಗೆ ಅವರ ಅಗಲಿಕೆ ತಡೆದುಕೊಳ್ಳಲು ಕಷ್ಟವಾಯಿತು. ಆ ನೋವನ್ನು ಭರಿಸಲು ಸಾಧ್ಯವಾಗದೆ, ಕೊರಗಿ ಕೊರಗಿ ಹೆಂಡತಿ ತೀರಿಕೊಂಡಳು. ಆಗ ಆದ ಆಘಾತ ವನ್ನು ತಡೆದುಕೊಳ್ಳಲು ರುದ್ರಪ್ಪನಿಗೆ ತಡೆದುಕೊಳ್ಳಲು ಸಾಧ್ಯವಾಗದೆ, ಖಾಯಿಲೆ ಬೀಳುತ್ತಾನೆ.ಆಗ ಅವನ ನೆರವಿಗೆ ಬರುವವನು ಅವನ ಸಹೋದ್ಯೋಗಿ. ಇವನು ಉದ್ಯೋಗದಿಂದ ನಿವೃತ್ತನಾಗಲು ಎರಡು ತಿಂಗಳು ಇರುವಾಗಲೇ ರಜೆ ಹಾಕಿ,ಅವನೇ ಇವನ ಜಾಗವನ್ನು ತುಂಬಲು ಕೇಳಿಕೊಂಡು, ಅವನ ಸಹಾಯದಿಂದ ರಾಜಾ ವಾರ್ಡ್ ನ್ನು ಸೇರುತ್ತಾನೆ. ಗೆಳೆಯನಿಗೆ ಇದನ್ನು ನೋಡಿ ಸಹಿಸಲಾಗದೆ, ಅಮೇರಿಕಾದಲ್ಲಿ ಇರುವ ಅವರ ಮಗನಿಗೆ ಫೋನ್ ಮಾಡಿ ವಿಷಯ ತಿಳಿಸಿದರೆ, ಅವನು ತನಗೆ ಸಮಯವಿಲ್ಲ ಎಂದು, ಸತ್ತರೆ ನೀವೇ ಕಾರ್ಯ ಮುಗಿಸಿ, ಹಣಕಳಿಸುವೆ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ ಬಿಡುತ್ತಾನೆ.
ಕಡೆಗೆ ಇವನು ಮರಳಿ ಬಂದು ನೋಡುವಷ್ಟರಲ್ಲಿ, ಅವನು ಹೆಣವಾಗಿರುತ್ತಾನೆ. ಅವನ ಮನೆಗೆ ಹೋದಾಗ ಅಲ್ಲಿ ಅವನ ದಿನಚರಿಯಲ್ಲಿ, ತಾನು ಹೋದರೆ ಮನೆಯನ್ನು ಅನಾಥಾಶ್ರಮ ಮಾಡಬೇಕು ಎಂಬ ಅವನ ಅಪೇಕ್ಷೆಯಂತೆ ಇವನು ಈಡೇರಿಸುತ್ತಾನೆ. ಪತ್ರಿಕೆಯಲ್ಲಿ ಕೆಲಸ ಮಾಡುವ ಸಾಮ್ರಾಟ ಎಂಬ ಯುವಕ ಮತ್ತು ಜೊತೆಯ ಯುವತಿ ಅನಾಥರ ಕುರಿತು ತಮ್ಮ ಪತ್ರಿಕೆಯಲ್ಲಿ ವರದಿಮಾಡಲು, ರುದ್ರಪ್ಪನನ್ನು ಸಂದರ್ಶನ ಮಾಡಿ ವಿವರಗಳನ್ನು ಸಂಗ್ರಹಿಸಿ, ಆಸ್ಪತ್ರೆಗೆ ಹೋಗಿ ಅಲ್ಲಿ ಡಾಕ್ಟರ್ ಜೊತೆಗೆ, ಕೂಡ ಸಂದರ್ಶನ ಮಾಡಿ , ಅದಕ್ಕೆ ದುಡಿದು ಮಡಿದ ರುದ್ರಪ್ಪನ ಸಾಧನೆ ಕುರಿತು ಪತ್ರಿಕೆಯಲ್ಲಿ ವಿವರವಾದ ವರದಿ ಪ್ರಕಟಿಸುವ ಮೂಲಕ ಅವನ ಬದುಕಿನ ಸಾರ್ಥಕತೆಯನ್ನು ಸಾರುವುದರೊಂದಿಗೆ ಕಾದಂಬರಿ ಮುಗಿಯುತ್ತದೆ.

ಈ ಕಾದಂಬರಿಯ ವೈಶಿಷ್ಟ್ಯಗಳು:
೧: ಮೊದಲ ಬಾರಿಗೆ ಅನಾಥನೊಬ್ಬನ ಬದುಕನ್ನು ವಸ್ತುವನ್ನಾಗಿ ಮಾಡಿಕೊಂಡು ರಚನೆ ಮಾಡಿರುವುದು.
೨: ಓದಿ ವಿದ್ಯಾವಂತರಾದ ಮಕ್ಕಳು ವಿದೇಶಕ್ಕೆ ವಲಸೆ ಹೋಗುವ, ತಮ್ಮ ಅಭಿವೃದ್ಧಿಗೆ ಕಾರಣರಾದ ತಂದೆ ತಾಯಿಗಳನ್ನು, ದೇಶವನ್ನು, ನಿರ್ಲಕ್ಷ್ಯ ಮಾಡುವ ಯುವ ಜನಾಂಗದ ಪ್ರತೀಕವಾಗಿ ಇಲ್ಲಿನ ಕಥಾನಾಯಕನ ಮಗ ಬರುತ್ತಾನೆ .
೩: ಇಂತಹ ವಿಷಮ ಸಂನಿವೇಶದಲ್ಲಿ ತಂದೆ ತಾಯಿಗಳು ಎದುರಿಸಬೇಕಾಗಿ ಬರುವ ನೋವು, ಮತ್ತು ಅನಾಥ ಭಾವದ ಪ್ರತಿಮೆಗಳಾಗಿ ಇಲ್ಲಿನ ಕಥಾನಾಯಕ ನಾಯಕಿಯರು ಚಿತ್ರಿಸಲ್ಪಟ್ಟಿದ್ದಾರೆ.
೪: ಈ ಮೂಲಕ ಸಮಕಾಲೀನ ಭಾರತೀಯ ಸಮಾಜ ಎದುರಿಸುತ್ತಿರುವ ಕೌಟುಂಬಿಕ ಸಂಕಷ್ಟಕ್ಕೆ ಲೇಖಕರು ಧ್ವನಿ ಇತ್ತಿದ್ದಾರೆ.
ಇಲ್ಲಿ ಬರುವ ಸ್ಮಶಾನವಾಸಿ ವೆಂಕಟರಾಮುವಿನ ಚಿತ್ರ ,ನನ್ನ ಸಂಗಾತಿ ಗಿರಿಜಾ ಶಾಸ್ತ್ರಿ ,ಮೈಸೂರಿನ ಸ್ಮಶಾನ ವಾಸಿ ಶವಗಳನ್ನು ಹೂಳುವ ಹೆಂಗಸಿನ ಜೊತೆ ಸಂದರ್ಶನ ಮಾಡಿ ಪ್ರಕಟಿಸಿದ ನೆನಪು ಮರುಕಳಿಸುವಂತೆ ಮಾಡಿತು.
೫. ಕಾದಂಬರಿಯಲ್ಲಿ ಮೊದಲ ಬಾರಿಗೆ ಸ್ಮಶಾನ ವಾಸಿಯೊಬ್ಬನ ಸಂದರ್ಶನ ಮಾಡಿದ ಶ್ರೇಯಸ್ಸು ಇವರಿಗೆ ಬಹುತೇಕ ಸಲ್ಲಬೇಕು.
೬: ಪ್ರಜಾವಾಣಿಯಲ್ಲಿ ಬಂದ ವರದಿ ಈ ಕಾದಂಬರಿಯ ಮೂಲ ಎಂದು ಲೇಖಕರು ತಮ್ಮ ಮಾತಿನಲ್ಲಿ ದಾಖಲಿಸಿರುವುದು, ಅವರ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಸಾಬೀತು ಪಡಿಸುತ್ತದೆ.
೭: ಸಾಮಾನ್ಯವಾಗಿ ಸರ್ಕಾರದ ಸಂಸ್ಥೆಗಳ ಕಾರ್ಯ ನಿರ್ವಹಣೆ ಕೇಳಿ ಬರುವ ಟೀಕೆ ಸುಳ್ಳು ಎಂದು ಸ್ಥಾಪಿಸಲು ,ಈ ಸಂದರ್ಭದಲ್ಲಿ, ಅದರ ಎರಡು ಅಂಗ ಸಂಸ್ಥೆಗಳಾದ ಆಸ್ಪತ್ರೆ ಮತ್ತು ಪೊಲೀಸ್ ಠಾಣೆಗಳ ಜನಪರ ಕಾರ್ಯ ಮತ್ತು ಅವರ ಅನುಭೂತಿಯನ್ನು ಅದಕ್ಕೆ ಸಾಧಾರವಾಗಿ,ಅಲ್ಲಿನ ವೈದ್ಯರು,ದಾದಿಯರು ಹಾಗೂ ಪೊಲೀಸ್ ರ ಕಾರ್ಯಕ್ಷಮತೆಯನ್ನು ಚಿತ್ರಿಸಿದ್ದಾರೆ.
ಶೀರ್ಷಿಕೆ ರಾಜಾ ವಾರ್ಡ್ ಎಂದು ಇದ್ದರೂ ಅನಾಥರಿಗೆ ಮೀಸಲಾದ ವಾರ್ಡ್ ಆಗಿರುವುದು ವೈರುಧ್ಯವಾಗಿದೆ. ಇಂದು ಸ್ಥಿತಿವಂತರಾದ ಮಕ್ಕಳೇ ,ತಂದೆ ತಾಯಿಗಳನ್ನು ಆ ಅನಾಥ ವಾರ್ಡ್ ಗೆ ತಮ್ಮ ನಿರ್ಲಕ್ಷ್ಯದಿಂದ ತಳ್ಳುತ್ತಿದ್ದಾರೆ ಎನ್ನುವುದು, ಇಂದಿನ ಸಮಾಜದ ವೈಪರಿತ್ಯವಾಗಿದೆ, ಇದಕ್ಕೆ ಅಪವಾದಗಳು ಇದ್ದರೂ.ಅದರ ಕಡೆಗೆ ಗಮನ ಸೆಳೆಯುವುದು ಲೇಖಕರ ಆದ್ಯತೆಯಾಗಿದೆ. ಇದರಿಂದ ಇಂದಿನ ಅಂತಹ ಮಕ್ಕಳ ಕಣ್ತೆರದರೆ ಈ ಕೃತಿ ರಚನೆಯ ಸಾರ್ಥಕ.
ಒಂದರೆಡು ಲಿಪಿಸ್ಖಾಲಿತ್ಯಗಳನ್ನು ಹೊರತು ಪಡಿಸಿದರೆ ಕಾದಂಬರಿಯ ಮುದ್ರಣ ಅಚ್ಚುಕಟ್ಟಾಗಿ ಮೂಡಿಬಂದಿದೆ. ಕೇಳಿದ ಕೂಡಲೇ ತಮ್ಮ ಕಾದಂಬರಿಯನ್ನು ಕಳಿಸಿಕೊಟ್ಟ ಲೇಖಕರಿಗೆ ವಂದನೆ ಅಭಿನಂದನೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು
