‘ಎಷ್ಟೆಷ್ಟು ಹಂಬಲಿಸಿದೆ ನಿನ ನೋಡಲು ಇಷ್ಟಿಷ್ಟೂ ಕಾಣದಾದೆ ಬರಿ ಕತ್ತಲು’…ಶಿವದೇವಿ ಅವನೀಶಚಂದ್ರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಓದಿ…
ಒಲವೇ ನಿನಗಾವ ಬಣ್ಣ
ಬಲವೇ ನೀನಾಗಿ ಇರಲು
ಹೇಳು ನಿನಗಾವ ರೂಪ..
ಬೆಳಗಿರುವೆ ಎದೆಯ ದೀಪ…
ಎಷ್ಟೆಷ್ಟು ಹಂಬಲಿಸಿದೆ
ನಿನ ನೋಡಲು
ಇಷ್ಟಿಷ್ಟೂ ಕಾಣದಾದೆ
ಬರಿ ಕತ್ತಲು
ಒಳಗಣ್ಣ ತೆರೆದು ನೀ
ಎದೆ ತುಂಬಿಕೋ
ಬಚ್ಚಿಟ್ಟು ಧ್ಯಾನಿಸುವೆ
ಬಗೆ ನಂಬಿಕೋ
ಮುಚ್ಚಿರುವ ಕಂಗಳಲಿ
ನಿನ್ನದೇ ಭಾವ
ಆಲಿಸುವ ಕಿವಿಗಳಿಗೆ
ನಿನ್ನ ಧ್ವನಿ ಜೀವ
ಬಿದಿರ ರಂಧ್ರದಲಿ ನಿನ್ನುಸಿರಿನೊಲವು
ಹರಿಸುವುದು ಅರ್ಥವಾಗದ ಕಸುವು
ನೀನೇ ಬೇಕೆನ್ನುವ ಅನಿವಾರ್ಯ ಹಸಿವು
ನೀ ಬರಲು ನನ್ನೆದೆಗೆ ಅದುವೆ ನನ ಬಾಳ ಗೆಲುವು
ಉದ್ಧರಿಸಲು ನನ್ನನ್ನು ಕಾಂತವಾಗಿ
ಏಕಾಕಿಯಾಗಿ ಮುನ್ನಡೆಸು
ಶಕ್ತಿಯಾಗಿ
ಉಸಿರ ಕಣಕಣದಲ್ಲಿ ನಿನ್ನ ಹೆಸರು ಭುಕ್ತಿಯಾಗಿ
ವಿಸ್ಮೃತಿಯ ಸುಖದಲ್ಲಿ
ಜೀಕಿಬಿಡು ತನುವ ಮುಕ್ತವಾಗಿ
ಒಲವೇ ನೀನಿರಲು ಹೀಗೆ
ನನ್ನ ಶುಕ್ತಿಯಾಗಿ
ಓಂಕಾರದಲಿ ಮಂಗಳವೆ ಧಾರೆಯಾಗಿ
ನಿನ್ನ ಜೇನ್ನುಡಿಯ ಸವಿಯ ಚಪ್ಪರಿಕೆಯಾಗಿ
ನಿಲುಗಡೆಗೆ ಸರಿಯುವೆ ನಿನ್ನ
ಮಂಗಳ ಸಖ್ಯಕಾಗಿ!
- ಶಿವದೇವಿ ಅವನೀಶಚಂದ್ರ
