ವೃದ್ಧಾಪ್ಯಕ್ಕೆ ಪೂರ್ವ ತಯಾರಿ ಬೇಕು

ಬಾಲ್ಯ, ತಾರುಣ್ಯ, ಪ್ರೌಢಾವಸ್ಥೆ ಈ ಮೂರೂ ಹಂತಗಳನ್ನೂ ಯಶಸ್ವಿಯಾಗಿಯೇ ಮುಗಿಸಿರುವವರಿಗೂ ವೃದ್ಧಾಪ್ಯ ಏಕೆ ಬೇಡದ ಬದುಕಾಗಿ ಬಿಡುತ್ತದೆ? ಏಕೆ ಹೀಗೆ? ಯಾಕೆ ವೃದ್ಧಾಪ್ಯ ಬೇಡ? ಈ ಪ್ರಶ್ನೆಗೆ ಮನಃಶಾಸ್ತ್ರ ಮೂರು ಆಯಾಮಗಳಲ್ಲಿ ಉತ್ತರವನ್ನು ಶೋಧಿಸುತ್ತದೆ. ಖ್ಯಾತ ಮನಃಶಾಸ್ತ್ರಜ್ಞೆ ಶಾಂತಾ ನಾಗರಾಜ್ ಅವರು ಅಪ್ಪನ ಕುರಿತಾದ ಭಾವನಾತ್ಮಕ ಕವಿತೆಯನ್ನು ತಪ್ಪದೆ ಓದಿ…

ಬಾಳಸಂಜೆಯಲಿ ಆತ್ಮಸಮ್ಮಾನ

ಬಯಸದೇ ಬರುವ ಬಾಲ್ಯ, ಬಯಸಿ ಬಯಸಿ ಸಂಭ್ರಮಿಸುವ ತಾರುಣ್ಯ, ಜಗತ್ತನ್ನೇ ಗದ್ದುಬಿಡುವ ಆತ್ಮವಿಶ್ವಾಸ ತೋರುವ ಪ್ರೌಢಾವಸ್ಥೆ, ಆದರೆ ಆದಷ್ಟೂ ಮುಂದೂಡಲು ಬಯಸುವ, ಒಪ್ಪಿಕೊಳ್ಳಲು ನಿರಾಕರಿಸುವ ವೃದ್ಧಾವಸ್ಥೆ. ಇದೇಕೆ ಹೀಗೆ? ಬಾಳಿನ ಮೂರೂ ಹಂತಗಳನ್ನೂ ಯಶಸ್ವಿಯಾಗಿಯೇ ಮುಗಿಸಿರುವವರಿಗೂ ವೃದ್ಧಾಪ್ಯ ಏಕೆ ಬೇಡದ ಬದುಕಾಗಿ ಬಿಡುತ್ತದೆ? ಅದರಲ್ಲೂ ಮಹಿಳೆಯರಿಗಂತೂ ಅತಿ ಮುಜುಗರದ ವಿಷಯ. ಸೂರ್ಯ ನಗುನಗುತ್ತಾ ತನ್ನ ದಿನಚರಿಯನ್ನು ಮುಗಿಸಿಯೇ ಬಿಡುತ್ತಾನೆ. ವಾರ, ತಿಂಗಳು ಮತ್ತು ವರ್ಷಗಳನ್ನು ನಿಷ್ಕರುಣೆಯಿಂದ ಉರುಳಿಸಿಯೇ ಬಿಡುತ್ತಾನೆ. ಇಲ್ಲಿ ಮಾನವ ಜೀವಿಗಳು ಉರುಳುತ್ತಿರುವ ವರ್ಷಗಳನ್ನು ಹಿಡಿದಿಡಲಾಗದೇ ಪರಿತಪಿಸುತ್ತವೆ. ವಯಸ್ಸು ಎಂಬತ್ತಾದರೂ ಕೂದಲಿಗೆ ಕಪ್ಪುಬಣ್ಣ ಹಚ್ಚುವ ಉಮೇದಿ, ಒಂದೆರಡು ಹಲ್ಲು ಉದುರಿತೇ? ತಕ್ಷಣ ಕೃತಕದಂತವನ್ನು ಸಹಜವೆನ್ನುವಂತೇ ಶಾಶ್ವತವಾಗಿರುವಂತೆ ಅಳವಡಿಸಿಕೊಳ್ಳುವ ಕಾತುರ! ಕಣ್ಣು ಮಂಜಾಗುತ್ತಿದೆಯೇ? ಕಾಂಟಾಕ್ಟ್ ಲೆನ್ಸ್ ಮೊರೆ ಹೋಗೋಣ. ಮಾರುಕಟ್ಟೆಯೂ ಏನೆಲ್ಲಾ ಸಾಹಸ ಮಾಡುತ್ತವೆ. ವೃದ್ಧಾಪ್ಯದ ತಲ್ಲಣಗಳನ್ನು ಶಮನ ಮಾಡಲು!

ಫೋಟೋ ಕೃಪೆ : google

ಏಕೆ ಹೀಗೆ? ಯಾಕೆ ವೃದ್ಧಾಪ್ಯ ಬೇಡ? ಈ ಪ್ರಶ್ನೆಗೆ ಮನಃಶಾಸ್ತ್ರ ಮೂರು ಆಯಾಮಗಳಲ್ಲಿ ಉತ್ತರವನ್ನು ಶೋಧಿಸುತ್ತದೆ. ಮೊದಲನೆಯದು ದೈಹಿಕ ಆಯಾಮ. ನಂತರ ಸಾಮಾಜಿಕ ಆಯಾಮ ಮತ್ತು ಕೊನೆಯದಾಗಿ ಇವೆರಡನ್ನೂ ಸಮತೋಲನ ಮಾಡಬೇಕಾದ ಮಾನಸಿಕ ಆಯಾಮ. ವಯಸ್ಸು ಕಳೆಯುತ್ತಿದ್ದಂತೆ ಕಣ್ಣಿಗೆ ಕಾಣುವ ಮತ್ತು ಬುದ್ಧಿಗೆ ಗೋಚರಿಸುವ ದೇಹದ ಅಂಗಗಳು ಸವಕಳಿಗೆ ಪಕ್ಕಾಗುತ್ತವೆ. ಕಣ್ಣುಮಂಜಾಗುತ್ತದೆ, ಹಲ್ಲುಗಳು ಅಲ್ಲಾಡತೊಡಗುತ್ತವೆ, ಚರ್ಮಸುಕ್ಕುಗಟ್ಟುತ್ತದೆ, ನಡಿಗೆ ನಿಧಾನವಾಗುತ್ತದೆ, ಹೆಚ್ಚುತಿಂದರೆ ಕರುಳು ಮುಷ್ಕರ ಹೂಡಿ ಅರಗಿಸಲಾರದೇ ಹೊಟ್ಟೆ ನೋವು ತರುತ್ತದೆ. ದೇಹ ಕುಗ್ಗುತ್ತದೆ. ಇವೆಲ್ಲವೂ ಚಿಂತೆಗೆ ಎಡೆಮಾಡಿಕೊಡುತ್ತದೆ. ಸಾಮಾಜಿಕ ಆಯಾಮದಲ್ಲಿ ಅರಿಯಬೇಕಾದರೆ ಸ್ವಲ್ಪ ನಮ್ಮ ಭಾಷೆಯನ್ನು ಗಮನಿಸಿ. ಸುತ್ತಲಿನ ಮಾತುಗಳಲ್ಲಿ ನಿಮ್ಮ ಕಿವಿಗೆ ಬಿದ್ದಿರುಂಥಾದ್ದು ಇವು – ಮುದುಕರು ತಮ್ಮಷ್ಟಕ್ಕೆ ತಾವಿರಬೇಕು, ಅದು ಬಿಟ್ಟು ಎಲ್ಲದಕ್ಕೂ ಬಾಯಿ ಹಾಕಿಕೊಂಡು ಬರುತ್ತಾರೆ, ಏ ಮುದುಕ ರಸ್ತೆಗೆ ಯಾಕೆ ಬಂದಿ ಮನೇಲಿರ್ಬಾರ್ದ? ಆ ಮುದುಕಿ ಹಂಗೇ ಅದಕ್ಕೆ ಸದಾ ಬಾಯಿಚಪಲ – ಈ ವಾಕ್ಯಗಳು ಮೇಲುನೋಟಕ್ಕೆ ಸಹಜವೆನಿಸಿದರೂ ಅದರಲ್ಲಿರುವ ತಿರಸ್ಕಾರ ಭಾವವನ್ನು ಗಮನಿಸಿ. ಕನ್ನಡದಲ್ಲಂತೂ ಮಗುವಿಗೆ ಮುದುಕರಿಗೆ ಅದು ಇದು ಎನ್ನುವ ನಂಪುಂಸಕ ಲಿಂಗವೇ ಬಳಕೆಯಾಗುವುದು. – ಮಗು ಎಲ್ಲರ ಮುಖ ನೋಡಿ ನಗುತ್ತದೆ – ಎಂದಾಗ ಮಗುವಿನ ಬಗ್ಗೆ ಮೋಹ ಆರ್ದ್ರ ಭಾವಗಳು ಹೇಳುವವರಿಗೂ ಕೇಳುವವರಿಗೂ ಮೂಡುತ್ತದೆ. – ಮುದುಕಿ ಎಲ್ಲಾ ಮಾತಿಗೂ ನಗತ್ತೆ ಅಷ್ಟೆ – ಎಂದಾಗ ಅಲ್ಲಿ ಅವಹೇಳನವೇ ಕಾಣುವುದು. ಇಲ್ಲೊಂದು ಸಣ್ಣ ಉದಾಹರಣೆಯಿದೆ. ನಮ್ಮ ಕೌನ್ಸಿಲಿಂಗ್ ಸೆಂಟರ್ ನಲ್ಲಿ ಒಬ್ಬ ಮಹಿಳೆ ಹೇಳಿದ್ದು. ಅವರಿಗೆ ೮೦ ವಯಸ್ಸು. ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಹೆಲ್ತ್ ಕೇರ್ ಸೆಂಟರ್ ಗೆ ಹೋಗಿದ್ದಾರೆ. ಅಲ್ಲಿ ಇವರ ವಿವರ ಕೇಳಿದ ರಿಸೆಪ್ಷನಿಸ್ಟ್ ‘ ಇದರ ಮೇಲೆ ಹೆಬ್ಬೆಟ್ಟು ಒತ್ತಿ ‘ ಎಂದರಂತೆ! ಯಾಕೆ ಎನ್ನುವ ಪ್ರಶ್ನೆಗೆ, ನೀವು ಅಕ್ಷರಸ್ಥರಲ್ಲವೇನೋ ಎಂದು ಕೊಂಡೆ ಅನ್ನುವ ಉತ್ತರ! ಡಾಕ್ಟರೇಟ್ ಮಾಡಿ ಒಂದು ಕಾಲೇಜಿನ ಪ್ರಾಂಶುಪಾಲರಾಗಿದ್ದವರನ್ನು ವಯಸ್ಸಾಗಿ ಮುಖ ಸುಕ್ಕುಗಟ್ಟಿದ ಕಾರಣಕ್ಕೆ ತನಗೆ ತೋಚಿದಂತೆ ಅಳೆದು ಆಡಿದ ಮಾತಿದು!

ಹೀಗೆ ದೇಹದ ಸಂಕಷ್ಟಗಳು ಮತ್ತು ಸಾಮಾಜಿಕ ಅಗೌರವದಿಂದ ಆಗುವ ಆಘಾತಗಳಿಂದ ಮೆದುಳೂ ಕುಸಿತಕ್ಕೆ ಒಳಗಾಗಬಹುದು. ಜೊತೆಗೆ ವಯಸ್ಸಿನ ಕಾರಣ ದೇಹದ ಮಂಡಿ, ಕಣ್ಣಿನ ನರ, ಚರ್ಮದ ಮಾಂಸಖಂಡಗಳು ಸವಕಳಿಗೆ ಒಳಗಾದಂತೆ ಮೆದುಳಿನ ಕೆಲ ಭಾಗಗಳೂ ಸವಕಳಿಗೆ ಒಳಗಾಗಬಹುದು. ಹಾಗಾದರೆ ಇದಕ್ಕೆ ಪರಿಹಾರವಿಲ್ಲವೇ? ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ಖಂಡಿತಾ ಇದೆ ಎನ್ನುತ್ತದೆ ಮನಃಶಾಸ್ತ್ರ. ಅದು ಸೂಚಿಸುವ ಕ್ರಮಗಳು ಹೀಗಿವೆ. ೫೦ ದಾಟುತ್ತಿದ್ದಂತೇ ಮಾನಸಿಕವಾಗಿ ವೃದ್ಧಾಪ್ಯಕ್ಕೆ ಸಿದ್ಧರಾಗಿ. ಮೊದಲು ದೇಹದ ಸಮಸ್ಯೆಗಳನ್ನು ಮನಸಾ ಒಪ್ಪಿಕೊಳ್ಳುವುದು. ವೈದ್ಯರ ಸಹಾಯದಿಂದ ಪರಿಹಾರವನ್ನು ಕಂಡುಕೊಳ್ಳಬೇಕೇ ವಿನಃ ಮಾರುಕಟ್ಟೆ ಜಾಹೀರು ಮಾಡುವ ಪ್ರಸಾಧನಗಳಿಂದಲ್ಲ. ಎರಡನೆಯದಾಗಿ ಸಮಾಜದ ಪ್ರಕ್ರಿಯೆಗೆ ಪ್ರತಿಕ್ರಯಿಸದೇ ಸೂಕ್ಷ್ಮವಲ್ಲದವರು ಆಡುವ ಮಾತಿಗೆ ನೋಯದಿರುವುದು. ಐವತ್ತುವಯಸ್ಸಿನವರೆಗೆ ವ್ಯಾಯಾಮಕ್ಕೆ ಗಮನವೀಯದವರೂ ದೇಹ ಸುದೃಢವಾಗಿಟ್ಟುಕೊಳ್ಳಲು ಅಲ್ಪಸ್ವಲ್ಪ ವ್ಯಾಯಾಮಕ್ಕೆ ಸಮಯ ಮೀಸಲಿರಿಸುವುದು. ಬಹಳ ಮುಖ್ಯವಾಗಿ ಮನಸ್ಸನ್ನು ಉದಾರವಾಗಿಯೂ ಸಕಾರಾತ್ಮಕವಾಗಿಯೂ ಮತ್ತು ಚೇತೋಹಾರಿಯಾಗಿಯೂ ಇಟ್ಟುಕೊಳ್ಳುವುದು. ಮನಃಶಾಸ್ತ್ರದಲ್ಲಿ ಒಂದು ಮಾತಿದೆ You have to use your body and mind; otherwise loose it ಅಂತ. ಐವತ್ತರ ಹರೆಯದಿಂದಲೇ ಓದುವಿಕೆಯನ್ನು ರೂಢಿಯಲ್ಲಿಟ್ಟು ಕೊಳ್ಳುವುದು ಅತ್ಯುತ್ತಮವೆಂದು ಸೈಕಾಲಜಿ ತಿಳಿಸುತ್ತದೆ. ಓದುವಿಕೆಯನ್ನು ಬಿಟ್ಟುಬಿಟ್ಟರೆ ವೃದ್ಧಾಪ್ಯದಲ್ಲಿ ಓದಲು ಏಕಾಗ್ರತೆ ಬರುವುದಿಲ್ಲ. ಮೂರನೇ ಪುಟ ಓದುವ ಹೊತ್ತಿಗೆ ಮೊದಲ ಪುಟದ ವಿಷಯ ಮರೆತೇ ಹೋಗುವ ಹಾಗಾಗಬಾರದೆಂದರೆ ಓದನ್ನು ರೂಢಿಯಲ್ಲಿಟ್ಟುಕೊಳ್ಳಬೇಕು. ಹೊಸ ಹೊಸ ಸಮಾನಮನಸ್ಕರ ಸ್ನೇಹ ಮಾಡಿಕೊಳ್ಳುವುದು ಮೆದುಳಿಗೆ ಚೇತೋಹಾರಿಯಾದ ಚಟುವಟಿಕೆ.

ಫೋಟೋ ಕೃಪೆ : google

ಲಂಡನ್ನಿನ ಒಂದು ವೃದ್ಧರ ಡೇಕೇರ್ ಸೆಂಟರ್ ನಲ್ಲಿ ನರದೌರ್ಬಲ್ಯಕ್ಕೊಳಗಾದ ಕೆಲವು ಮಹಿಳೆಯರಿಗೆ ಕಸೂತಿ, ಕ್ರೋಷಾ ನಿಟ್ಟಿಂಗ್ ಮುಂತಾದುವನ್ನು ಹೇಳಿಕೊಟ್ಟರಂತೆ. ಎರಡೇ ತಿಂಗಳಲ್ಲಿ ಅವರ ನರದೌರ್ಬಲ್ಯ ವಾಸಿಯಾಯಿತು ಎಂದು ಯೂಟ್ಯೂಬ್ ವರದಿ ಮಾಡಿದೆ. ಮನುಷ್ಯನ ಮೆದುಳಿಗೆ ಸಾಯುವವರೆಗೂ ಕಲಿಕೆ ಸಾಧ್ಯ ಎಂದು ಅಧ್ಯಯನ ತಿಳಿಸಿದೆ. ಕಲಿಯುವುದರಲ್ಲಿ ಆಸಕ್ತಿ ತೋರಿದಷ್ಟೂ ಮೆದುಳು ಸಹಕರಿಸುತ್ತದೆ ಎನ್ನುವುದನ್ನು ಮರೆಯಬಾರದು. ಹೊಸ ಸ್ಮಾರ್ಟ್ ಫೋನ್ ಬಳಕೆಯನ್ನು ಮೊಮ್ಮಕ್ಕಳಿಂದಲೂ ಕಲಿಯಲು ಹಿಂಜರಿಯಬಾರದು. ಪತ್ರಿಕೆಗಳಲ್ಲಿ ಪದಬಂಧ ಬಿಡಿಸುವುದೂ ಸಹ ಮೆದುಳಿನ ಆರೋಗ್ಯಕ್ಕೆ ಸಹಕಾರಿ. ಸಾಧಾರಣವಾಗಿ ಮುದುಕರ ಜೊತೆ ವಾಸಿಸುವ ಅವರ ಮನೆಯವರಲ್ಲೂ ವೃದ್ಧಾಪ್ಯದ ಬಗ್ಗೆ ಅನೇಕ ತಪ್ಪುಗ್ರಹಿಕೆಗಳಿರುತ್ತವೆ. – ಇವರಿಗೆ ನಿರೀಕ್ಷೆಗಳು ಜಾಸ್ತಿ. ಊಟ ಔಷಧಿ ಎಲ್ಲವನ್ನೂ ಸಮಯ ಸಮಯಕ್ಕೆ ಒದಗಿಸಿದರೂ ಸದಾ ಗೊಣಗುತ್ತಾರೆ, ತೃಪ್ತಿಯಿಲ್ಲ – ಹೀಗೇ. ವೃದ್ಧರ ಅಂತರಂಗ ತುಡಿತಗಳನ್ನು ಅರ್ಥಮಾಡಿಕೊಳ್ಳದ ಮುಂದಿನ ಪೀಳಿಗೆಯ ಮಾತುಗಳಿವು. ಊಟ ಔಷಧಿ ಎರಡೇ ಬದುಕಲ್ಲ. ಒಳ್ಳೆಯ ಸಂವಹನದೊಂದಿಗೆ ಉಪಯುಕ್ತವಾಗಿ ಮಾತಾಡುತ್ತಾ ಸಮಯಕಳೆಯುವುದೂ ಬದುಕಿನ ಭಾಗವೇ. ಈ ಬಗ್ಗೆ ಮನೆಯ ಇತರ ಸದಸ್ಯರು ನಿರ್ಭಾವ ತಾಳಿದಾಗ ವೃದ್ಧರಿಗೆ ಏಕಾಂಗಿತನದ ಬೇಗುದಿ ಬಡಿಯುತ್ತದೆ. ವೃದ್ಧರು ಅದರಲ್ಲೂ ಮಹಿಳೆಯರು ಸ್ಕ್ರೀನ್ ಅಡಿಕ್ಟ್ ಆಗುತ್ತಿರುವುದು ಈ ಕಾಲಮಾನದ ಆತಂಕಗಳಲ್ಲಿ ಒಂದು. ಹೊತ್ತು ಕಳೆಯಲು ಸದಾ ಟಿವಿ ಧಾರಾವಾಹಿಗಳಿಗೆ ಅಂಟಿಕೊಳ್ಳುವುದೂ ಸಹ ಮೆದುಳಿನ ನರಮಂಡಲಗಳಿಗೆ ಹಾನಿ ಎಂದು ಸಂಶೋಧನೆ ತಿಳಿಸಿದೆ.

ಒಳ್ಳೆಯ ಸುಖವಾದ ಬದುಕನ್ನು ದೊರಕಿಸಿಕೊಳ್ಳಲು ಮಾರ್ಗಗಳಿವೆ. ಹುಟ್ಟಿದ ಮೊದಲ ೨೫ ವರ್ಷಗಳನ್ನು ಕಲಿಕೆಯ ವರ್ಷಗಳನ್ನಾಗಿಸಿಕೊಂಡು, ಶಾಲೆಕಾಲೇಜುಗಳಲ್ಲೇ ಅಲ್ಲದೇ ಬದುಕಿನಲ್ಲೂ ಜೀವನ ಕೌಶಲ್ಯಗಳನ್ನು ಕಲಿಯುವ ಪ್ರಯತ್ನ ಮೊದಲ ಹಂತ. ೨೫-೫೦ ರವರೆಗೆ ಗಳಿಕೆಯ ಹಂತ. ವಿದ್ಯೆ, ಹಣ, ಸಂಬಂಧಗಳು, ಅನುಭವಗಳು ಈ ಎಲ್ಲವೂ ಮೆದುಳಿಗೆ ಗಳಿಕೆಯ ಬುತ್ತಿಯನ್ನು ಕಟ್ಟಿಕೊಡಬೇಕು. ೫೦-೭೫ ರವರೆಗೆ ಕೊಡುವ ಹಂತ. ಗಳಿಸಿದ ಹಣವನ್ನು ಮಕ್ಕಳ ವಿದ್ಯೆ ಮದುವೆ ಇತ್ಯಾದಿಗಳಿಗೆ, ಅನುಭವವನ್ನು ಉದ್ಯೋಗದಲ್ಲಿ, ಜ್ಞಾನವನ್ನು ಅಗತ್ಯವಿರುವವರಿಗೆ ಕೊಟ್ಟು ಹಗುರಾಗುವ ಹಂತವಿದು. ೭೫ ರಿಂದ ಕೊನೆಯವರೆಗೆ ಬಿಡುವ ಹಂತ. ಕಾಮಕ್ರೋಧಗಳು, ಮೋಹ ಮದಮತ್ಸರಗಳು, ದೇಹದ ಆಸೆಗಳಾದ ಉಡುವ ತೊಡುವ ತಿನ್ನುವ ಕೈಂಕರ್ಯಗಳನ್ನು ಕಡಿಮೆ ಮಾಡಿಕೊಳ್ಳುತ್ತಾ ಬದುಕು ಸರಳಗೊಳಿಸಿಕೊಂಡಷ್ಟೂ ಜೀವ ಹಗುರಾಗುತ್ತದೆ. ಮೋಹಗಳನ್ನು ಕಳಚಿದಾಗ ಶರೀರ ರೋಗವನ್ನು ಅನುಭವಿಸಲೂ ಸಿದ್ಧವಾಗಿಯೇ ಬಿಡುತ್ತದೆ. ಈಗಿನ ಕಾಲಮಾನದಲ್ಲಿ ಆರೋಗ್ಯ ಕೊಳ್ಳಬಹುದು, ಆದರೆ ಆಯುಷ್ಯ ಕೊಳ್ಳಲಾಗುವುದಿಲ್ಲ. ಹೀಗೆ ನಾಲ್ಕೂ ಹಂತಗಳನ್ನು ಅರ್ಥಪೂರ್ಣವಾಗಿ ಕಳೆದವರಿಗೆ ಸಾವೂ ಸುಖವೆನಿಸಬಹುದು. ಇಂದು ಬದುಕನ್ನು ಸಂಭ್ರಮಿಸೋಣ ನಾಳೆ ಸಾವನ್ನೂ ಸಂಭ್ರಮಿಸುವ ಮನಃಸ್ಥಿತಿ ಬೆಳೆಸಿಕೊಳ್ಳೋಣ.


  • ಡಾ. ಶಾಂತಾನಾಗರಾಜ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW