ಆನಂದಪುರಂನಲ್ಲಿ ‘ಆಗ್ರಾ ಪೇಠಾ’

ವಿಶ್ವವಿಖ್ಯಾತ ತಾಜ್ ಮಹಲ್ ನೋಡಲು ಬರುವವರಿಗಾಗಿ ಪೇಠಾ ಮಿಠಾಯಿ ವಿಶೇಷ. ಆಗ್ರಾದಲ್ಲಿ ದೊಡ್ಡ ಪ್ರಮಾಣದಲ್ಲಿ ಪೇಠಾ ತಯಾರಾಗುತ್ತೆ. ಅದೇ ಪೇಠಾ ಸಿಹಿಯನ್ನು ಮಲೆನಾಡಿನ ಅರುಣ್ ಪ್ರಸಾದ್ ಅವರ ಮಗ ಬೂದುಗುಂಬಳ ಹಾಗೂ ಸಕ್ಕರೆ ಸೇರಿಸಿ ಮಾಡಿದ್ದಾರೆ, ಮುಂದೆ ಓದಿ…

1973-74 ರಲ್ಲಿ ನಮ್ಮ ಊರಿನ ಜಗದೀಶಣ್ಣ (ಈಗ ಆನಂದಪುರ೦ನ ಬಸ್ ನಿಲ್ದಾಣದ ಎದುರು ಭಾರತ್ ಕೆಫೆ ಹೋಟೆಲ್ ಮಾಲೀಕರು) ದೈಹಿಕ ಶಿಕ್ಷಕರಾಗಿದ್ದ ಶಿಸ್ತಿನ ಸಿಪಾಯಿ ಎಸ್. ಆರ್. ಕೃಷ್ಣಪ್ಪರ ಶಿಷ್ಯರಾಗಿದ್ದರು, ಅವರು ಬೆಂಗಳೂರಿನ ಸೇವಾದಳದ ರಾಮರಾವ್ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಶರಣಾಗತರಾಗಿದ್ದ ಚಂಬಲ್ ಕಣಿವೆ ಡಕಾಯಿತರ ಪುನರ್ವಸತಿಗಾಗಿ ಪ್ರಾರಂಭಿಸಿದ್ದ ಗಾಂಧೀ ಆಶ್ರಮದಲ್ಲಿ ಸೇವೆ ಮಾಡಲು ಜಗದೀಶರನ್ನು ಕಳಿಸಿದ್ದರು.

ಅವರು ರಜೆಗೆ ಊರಿಗೆ ಬಂದಾಗ ಈ ತಿಂಡಿ ತಂದು ನಮ್ಮ ತಾಯಿಗೆ ನೀಡಿದ್ದು, ನನಗೆ ನೆನಪಿದೆ. ಅವತ್ತು ನನ್ನ ತಾಯಿಯ ಗೆಳತಿಯರಾದ ಬೀಬಕ್ಕ, ಗುಲಾಬಿ, ಕ್ರಿಸ್ತಿನಕ್ಕ ಮತ್ತು ಅವರ ಮಗಳು ರೀತಕ್ಕ ಎಲ್ಲಾ ಸೇರಿಕೊಂಡು ಕವಡೆ ಮಣೆ ಆಡುತ್ತಿದ್ದರು. ಎಲ್ಲರೂ ಅದೇ ಮೊದಲ ಬಾರಿ ಈರೀತಿಯ ಸಿಹಿ ತಿಂಡಿ ನೋಡಿದ್ದು ಮತ್ತು ತಿಂದಿದ್ದು.

ಜಗದೀಶಣ್ಣ ಒಂದು ಪ್ರಶ್ನೆ ಕೇಳಿದರು ಇದು ಯಾವುದರಲ್ಲಿ ಮಾಡಿದ್ದು ಹೇಳಿ? ಅಂತ ಅವರ್ಯಾರಿಗೂ ಉತ್ತರ ಹೊಳೆಯಲೇ ಇಲ್ಲ ಆಗ ನನಗೆ 8 ರಿಂದ 9 ವರ್ಷ ಇರಬಹುದು ನಾನು ನಿಖರವಾಗಿ ಬೂದುಗುಂಬಳ ಅಂದಿದ್ದೆ ಅದು ಸರಿ ಉತ್ತರವೂ ಆಗಿತ್ತು ಇದು ಎಲ್ಲರಿಗೂ ಆಶ್ವಯ೯ ಮತ್ತು ನನ್ನ ತಾಯಿಗೆ ಹೆಮ್ಮೆಯ ಘಟನೆ ಆಗಿತ್ತು. ಅನೇಕ ಬಾರಿ ಆಗ್ರಾ ಹೋದವನು ಈ ಪೇಠಾ ತಿಂದಿದ್ದೆ ಮತ್ತು ಮನೆಗೆ ತಂದಿದ್ದೆ.

ಮೊನ್ನೆ ಶಿವಮೊಗ್ಗದಿಂದ ಹಲದೀರಾಮ್ ಅವರ ಪೇಠಾ ತಂದಿದ್ದೆ. ಅದು ನನ್ನ ಮಗನಿಗೆ ಮನೆಯಲ್ಲೇ ಪೇಠಾ ತಯಾರಿಸಲು ಪ್ರೇರಣೆ ಆಯಿತು. ನನ್ನ ಮಗ ನನ್ನ ರೀತಿಯೇ ಅನೇಕ ಹೊಸ ರುಚಿಯ ಅಡಿಗೆ ಮಾಡುವ ಜೋಷ್ ಇರುವವ ಆದ್ದರಿಂದ ಇವತ್ತು ಅವನು ತಯಾರಿಸಿದ ಪೇಠಾ ನನಗೆ ಮತ್ತು ನನ್ನ ಆಸ್ಥಾನದವರಿಗೆ ಬಾಯಿ ಸಿಹಿ ಮಾಡಿದೆ.

ಶೇಕಡಾ 90 ಪೇಠಾ ಸರಿಯಾಗಿ ಮಾಡಿದ್ದಾನೆ. ಇನ್ನೊಮ್ಮೆ ಮಾಡುವಾಗ ಪೇಠಾದ ಬಣ್ಣ ಆಕೃತಿ ಅವನಿಗೆ ಹೆಚ್ಚಿನ ನಿಖರತೆಯನ್ನು ತರುತ್ತದೆ. ಉರ್ದು ಮತ್ತು ಹಿಂದಿ ಭಾಷೆಯವರು ಬೂದುಗುಂಬಳಕ್ಕೆ ಪೇಠಾ ಎನ್ನುತ್ತಾರೆ. ಆದ್ದರಿಂದ ಈ ಬೂದುಗುಂಬಳ ಮತ್ತು ಸಕ್ಕರೆಯಲ್ಲಿ ತಯಾರಿಸುವ ಈ ಮಿಠಾಯಿಗೆ ಪೇಠಾ ಅಂತನೇ ಹೆಸರಾಗಿದೆ. ವಿಶ್ವ ವಿಖ್ಯಾತ ತಾಜ್ ಮಹಲ್ ಊರಾದ ಆಗ್ರಾದಲ್ಲಿ ಈ ಪೇಠಾ ಮಾರುಕಟ್ಟೆ ಕಂಡುಕೊಂಡಿದ್ದರಿಂದ ‘ಆಗ್ರಾ ಪೇಠಾ’ ಎಂದೇ ಪ್ರಸಿದ್ದಿ ಪಡೆದಿದೆ.


  • ಅರುಣ್ ಪ್ರಸಾದ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading