ಕುಳಿತಲ್ಲಿ ನಿಂತಲ್ಲಿ ಅಡುಗೆಮನೆಯಲ್ಲಿ ಮೀಹದಲಿ ವಿಶ್ರಾಂತಿಯಲಿ ನೀ ಸದಾ ಎನ್ನ ಜೊತೆಗಾತಿ…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರು ವಿಶ್ವ ಆಕಾಶವಾಣಿ ದಿನಕ್ಕಾಗಿ ಬರೆದ ವಿಶೇಷ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಎಲ್ಲಿದ್ದರೂ ನನ್ನ ಹಸ್ತದಲಿ
ಶೋಭಿಸುತ ಬೆಂಬಿಡದೆ
ನುಡಿಯುತ್ತಾ ಒಡನಿರುವ
ಗೆಳತಿ
ನನ್ನ ಅರಿವಿನ ಪ್ರಣತಿ
ಆಕಾಶವಾಣಿ ನೀ
ಮಧುರ ನುಡಿ ಸಿಂಚಿನಿ
ವಾಯುವಿಹಾರಿ
ಜಗದ ಸಂಚಾರಿ ನೀ
ನಡೆವ ಹಾದಿಯಲೂ
ಎಡೆಬಿಡದ ಸಂಗಾತಿ
ನೀನೊಡನಿದ್ದರೆ ಹಿತವು
ದಿನದಿನದ ಸಂಗತಿ
ಕುಳಿತಲ್ಲಿ ನಿಂತಲ್ಲಿ
ಅಡುಗೆಮನೆಯಲ್ಲಿ ಮೀಹದಲಿ
ವಿಶ್ರಾಂತಿಯಲಿ ನೀ
ಸದಾ ಎನ್ನ ಜೊತೆಗಾತಿ
ರವಿಕಿರಣ ಇಳೆಯ
ಸ್ಪರ್ಶಿಸುವ ಮುನ್ನ,
ಹಕ್ಕಿಗೊರಳಲಿ ಸುಪ್ರಭಾತ ಹೊಮ್ಮುವ ಮುನ್ನ
ದನಗಳಂಬಾ ಕರೆಯು
ಕಿವಿದೆರೆಗೆ ಬೀಳುವ ಮುನ್ನ
ಎಬ್ಬಿಸುವೆ ನೀ ಭಕ್ತಿಸಂಗೀತ
ವಾರಿಯಲಿ ಮೀಯಿಸುತಲೆಮ್ಮ
ಕ್ಷಣಕ್ಷಣದ ಅರಿವು
ಸುವಿಚಾರ ಭಂಡಾರ,
ಸದಭಿರುಚಿಗಳ ಸಂಗಮ
ಜ್ಞಾನ ಧಾರಾ
ಸಂಗೀತ ಸಾಹಿತ್ಯ ಆಡುಂಬೊಲ
ವಿಜ್ಞಾನ ವಿಸ್ಮಯ ಇತಿಹಾಸ,ಪುರಾಣ
ಧರ್ಮದಾ ಮಂಥನ
ಸದಭಿರುಚಿಯ ಚಿಂತನ
ನೀನೆನಗೆ ಸಖಿ ಸುಳ್ಳಲ್ಲ ಚಿರಂತನ
ಏಕಾಂತಕೆ ಸಂಗಾತಿ
ಸಂಸ್ಕೃತಿಯ ವಾಹಿನಿ
ವಿದ್ಯಮಾನಗಳ ವಾಸ್ತವವ
ತೆರೆದಿಡುವ ಜ್ಞಾನಿ
ಪುಸ್ತಕದರಿವು ಮಸ್ತಕಕೆ
ನಿತ್ಯ ರಂಜನೆ ಹೃದಯಕೆ
ಮಾರ್ಗದರ್ಶಿ ನೀ
ಸ್ವಾವಲಂಬಿ ಬಾಳಿಗೆ
ಗುರು ತಂದೆ ತಾಯಿ
ಸತ್ಪಥದ ದೀವಿಗೆ
ಶಾಲೆಯನ್ನೂ ಮೀರಿದ
ಅರಿವಿನಾ ಸುಧೆ ನೀನು
ಏನುಂಟು ಏನಿಲ್ಲ ನಿನ್ನಲ್ಲಿ
ನೀ ನನ್ನ ಬಾಳ ಕಾಮಧೇನು
ನಿನ್ನ ಸದಭಿರುಚಿ ಕಾಣುವುದು
ಸಮಾಜದ ಸ್ವಾಸ್ಥ್ಯವ
ಬೆಳೆಯುತಿರು ದಾಂಗುಡಿಯಿಡುತ ನೀ ತರತಮವಿಲ್ಲದೆ ಇದು
ಎಲ್ಲರನ್ನು ಒಳಗೊಳ್ಳುವ ವಾಸ್ತವ….
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
