ನನ್ನಮ್ಮನ ಮೊಮ್ಮಗನಿಗೆ ಪುಳಿಯೊಗರೆ ಗೊಜ್ಜಲ್ಲಿ ಅವಲಕ್ಕಿ ಬಾತ್ ಮಾಡಿ ಕೊಟ್ಟರೆ ಬಾಯಿ ಚಪ್ಪರಿಸಿ ತಿನ್ನುತ್ತಿದ್ದ. ಮುತ್ತಪ್ಪ ರೈ ಮನೆಯಲ್ಲಿ ಅಕ್ಕ ಮಾಡಿದ್ದ ಅಕ್ಕಿರೊಟ್ಟಿ ಫೇಮಸ್ ಆಗಿತ್ತು ಎಂದು ಲೇಖಕ ಅಶೋಕ ಕುಮಾರ್ ವೈ ಜಿ ಅವರು ತಮ್ಮ ಹಳೆಯ ನೆನಪಿನ ಬುತ್ತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ,ತಪ್ಪದೆ ಓದಿ…
*********
ಮಗ ಅವಲಕ್ಕಿ ಬಾತೂ ಉಪ್ಪಿಟ್ಟು ಅಷ್ಟಾಗಿ ಇಷ್ಟ ಪಡುವುದಿಲ್ಲ ಎಂಬುದನ್ನು ಅರಿತು ಅವನಿಷ್ಟದ ಪುಳಿಯೊಗರೆಗೆ ಉಪಯೋಗಿಸುವ ಗೊಜ್ಜು ಬಳಸಿ ತಯಾರಿಸಿದ ಅವಲಕ್ಕಿ ಬಾತೂ ಸ್ವಲ್ಪ ಹೆಚ್ಚೇ ಎನಿಸುವಷ್ಟು ಕಡಲೆಕಾಯಿ ಬೀಜ, ಎರಡು ದಪ್ಪ ಈರುಳ್ಳಿ , ಸಾಸಿವೆ ಜೀರಿಗೆ ಬೆಳೆಯೋಳ ನೆನಪಿಸಿಕೊಂಡು ಮಾಡಿದೆ.
ಚಪ್ಪರಿಸಿಕೊಂಡು ತಿಂದ ಮಗನ ನೋಡಿ ನಕ್ಕೆ. ಅವರಮ್ಮನ ಹತ್ತಿರ ಹಠಕ್ಕೆ ಬೀಳುವಂತೆ ನನ್ನ ಬಳಿ ಆಗುವುದಿಲ್ಲ ಯಾಕೆಂದರೆ ಸ್ಮೂತ್ ಹ್ಯಾಂಡಲಿಂಗ್ ನಂದು….. ಅವನ ಅಭಿಪ್ರಾಯಕ್ಕೆ ಮನ್ನಣೆ ಕೊಡುತ್ತೇನೆ. ಗಿಬ್ರಾನ್ ಕಾವ್ಯದಂತೆ! ಅವನು ಮಗುವಿನಿಂದಲೂ ನನ್ನ ಬಹುತೇಕ ಗೆಳೆಯ ಗೆಳತಿಯರಿಗೆ ಪರಿಚಯ.
ಅವನು ಒಂಬತ್ತು ವರ್ಷದವನಿದ್ದಾಗ ಅಕ್ಕ ರೇಖಾ ಮುತ್ತಪ್ಪ ರೈ ಮನೆಗೆ ಕರೆಸಿಕೊಂಡು ಅಕ್ಕಿರೊಟ್ಟಿ ಮಾಡಿ ಉಣಬಡಿಸಿ ಆನಂದ ಪಡುತ್ತಿದ್ದರು. ಅವರ ಮಕ್ಕಳು ವಿದೇಶದಲ್ಲಿದ್ದಾಗ ಈ ಮಗುವನ್ನು ಲಾಲಿಸುತ್ತಿದ್ದರು. ಚಾಕಲೇಟ್ ಬಿಟ್ಟು ಮತ್ತೇನನ್ನೂ ಪಡೆಯಬಾರದೆಂದು ಪ್ರಾಮಿಸ್ ಮಾಡಿಸಿಕೊಂಡಿದ್ದೆ. ರೇಖಾ ಅಕ್ಕ ನನ್ನ ಅಮ್ಮನ ಸ್ಟೂಡೆಂಟ್ ಕೊಡಗಿನ ಹೊದ್ದೂರು ಪೊದ್ದುವಿನಲ್ಲಿ ಅವರದು ಅಕ್ಕಪಕ್ಕದ ತೋಟದ ಮನೆ.
ಐದನೆಯ ತರಗತಿಯಲ್ಲಿ ಓದುತ್ತಿದ್ದಾಗ ಕನ್ನಡ ಪಂಡಿತರಾಗಿದ್ದ ಗೌರಿ ಟೀಚರ್ ಸಿದ್ದಲಿಂಗಯ್ಯನವರ ಪದ್ಯ ಮಾಡುತ್ತಿದ್ದಾಗಲೇ ಕವಿ ಕಾವ್ಯ ಪರಿಚಯ ಹೇಳಿ ಆ ಕಾವ್ಯ ಪಂಡಿತರನ್ನು ಅಚ್ಚರಿ ಗೊಳಿಸಿದ್ದ. ಅವನಿಗೆ ಪಠ್ಯಪುಸ್ತಕದಲ್ಲಿನ ಕವಿತೆಗಳ ಕವಿಗಳನೇಕರನ್ನು ನೇರವಾಗಿ ಪರಿಚಯಿಸಿದ್ದರ ಪರಿಣಾಮವದು. ನನ್ನಂತೆ ಅವನು ರಾಜ್ ಕುಮಾರ್ ಮತ್ತು ಕಿ ರೂಂ ನಾಗರಾಜರ ಅಭಿಮಾನಿ . ಹತ್ತು ರೂಪಾಯಿ ನೋಟಿನ ಮೇಲೆ ಕಿರಂ ಸಹಿ ಪಡೆದು ಈಗಲೂ ಇಟ್ಟು ಕೊಂಡಿದ್ದಾನೆ.
ಆಯಾ ಶಾಲೆಯವರು ಇದನ್ನು ಮಾಡಬಹುದೆಂಬ ಅಭಿಪ್ರಾಯ ನನ್ನದು. ಕವಿಯನ್ನೇ ಶಾಲೆಗೆ ಕರೆಸಿ ಅವರಿಂದಲೇ ಅವರು ಬರೆದು ಪಠ್ಯಪುಸ್ತಕದಲ್ಲಿ ಪ್ರಕಟಗೊಂಡಿರುವ ಪದ್ಯವನ್ನು ಓದಿಸಿ ಅರ್ಥೈಸುವುದು ಒಂದು ವಾಚನ ಕ್ರಮ ಎಂದು ಉದ್ಗರಿಸಿದ ಗುರು ಕಿ ರಂ ಮಾತು ಧ್ವನಿಸುತ್ತಲೇ ಇದೆ…
- ಅಶೋಕ ಕುಮಾರ್ ವೈ ಜಿ (ಪತ್ರಕರ್ತರು, ಕವಿಗಳು, ಲೇಖಕರು)
